Saturday, 7th September 2024

ತಾರತಮ್ಯ, ಬ್ರಾಹಣ್ಯ ಇವು ನಿರೂಪಣೆಯೇ ?ಇತಿಹಾಸವೋ ?

ಶಿಶಿರ ಕಾಲ

shishirh@gmail.com

ಇವರು ನನಗಂತೂ ಅಮೆರಿಕಾದಲ್ಲಿ ಹೋದಲ್ಲ ಸಿಗುತ್ತಿರುತ್ತಾರೆ. ವಾಲ್ಮಾರ್ಟ್, ಕೊಷ್ಟ್ಕೊ ಮೊದಲಾದ ದೊಡ್ಡ ಅಂಗಡಿಗಳಲ್ಲಿ, ಮಾಲ್, ಸಿನೆಮಾ ಹಾಲ್‌ಗಳಲ್ಲಿ, ಪ್ರೇಕ್ಷಣೀಯ ಸ್ಥಳಗಳಲ್ಲಿ, ಟ್ರೆಕಿಂಗ್, ಕ್ಯಾಂಪಿಂಗ್ ಗೆ ಹೋದಾಗ, ರೈಲಿನ ಪಕ್ಕದ ಸೀಟಿನಲ್ಲಿ ಹೀಗೆ. ಚರ್ಮದ ಬಣ್ಣದಿಂದ ದಕ್ಷಿಣ ಏಷ್ಯಾದನೆಂದು ಕಂಡರೆ, ಕೈಯಲ್ಲಿರುವ ಕಾಶೀದಾರ, ರುದ್ರಾಕ್ಷಿ ನೋಡಿದಾಗ ತಕ್ಷಣ ಹಿಂದೂ ಎಂದು ಇವರಿಗೆ ತಿಳಿದುಬಿಡುತ್ತದೆ.

ನೀವು ಭಾರತದವರೇ? ಭಾರತವೆಂದರೆ, ಭಾರತೀಯರೆಂದರೆ ನನಗೆ ಬಹಳ ಅಚ್ಚುಮೆಚ್ಚು ಎಂಬಿತ್ಯಾದಿ ಬೊಗಳೆಯಿಂದ ಶುರುವಾಗುತ್ತದೆ. ಇವರಿಗೆ ಭಾರತ ಬೇರೆಯದೇ ಕಾರಣಕ್ಕೆ ಇಷ್ಟ. ಏಕೆಂದರೆ ಮತಾಂತರಕ್ಕೆ ಅನಾದಿ ಕಾಲದಿಂದ ಭಾರತ ಹೇಳಿ ಮಾಡಿಸಿದ ದೇಶ, ಇಂದಿಗೂ ಕೂಡ. ತೀರಾ ಆಪ್ತರಂತೆ ಹತ್ತಿರ ಬಂದು, ಮಾತನಾಡಿ ಎರಡನೇ ವಾಕ್ಯದಲ್ಲಿಯೇ ನೀವು ದೇವರನ್ನು ನಂಬುತ್ತೀರಾ?’ ಎಂದು ಕೇಳಿದರೆ ಇವರು ಅವರೇ.

ಸಾಮಾನ್ಯವಾಗಿ ಇಂಥವರನ್ನು ಕಂಡರೆ ಮೊದಲ ವಾಕ್ಯದಲ್ಲಿಯೇ ಸಿಟ್ಟು, ಅಸಹನೆ ವ್ಯಕ್ತಪಡಿಸಿ ಆಚೆ ಕಳಿಸಿಬಿಡುವುದು ಅಭ್ಯಾಸ. ಮೊನ್ನೆ ಇಂಥದ್ದೇ ಮತಾಂತರಿ ಏರ್‌ಪೋರ್ಟ್ ಲಾಂಜ್‌ನಲ್ಲಿ ಕೂತಿದ್ದಾಗ ಸಿಕ್ಕಿದ್ದ. ನನ್ನ ಮುಂದಿನ ಪ್ರಯಾಣಕ್ಕೆ ಬೇಕಷ್ಟು ಸಮಯವಿತ್ತು. ಆಸಾಮಿ ಪ್ರಯೋರಿಟಿ ಲಾಂಜ್‌ಗೆ ಬಂದಿದ್ದಾನೆ ಎಂದರೆ ಯಾವುದೋ ದೊಡ್ಡ ಕುಳವೇ ಇರಬೇಕೆನ್ನಿಸಿತು. ಹಾಗಾಗಿ ಇವನ ಟೆಕ್ನಿಕ್ ಏನೆಂದು ತಿಳಿಯಲು ಮಾತಿಗುತ್ತರಿಸಲು ಶುರುಮಾಡಿದೆ.

ಮಾತು ಎಂದರೆ ಕೇವಲ ಕೇಳುವುದಷ್ಟೇ, ಯಾವುದೇ ಕಾರಣಕ್ಕೆ ವಾದಕ್ಕೆ ಇಳಿಯಲೇಬಾರದು ಎಂದು ನಿರ್ಧರಿಸಿಕೊಂಡಿದ್ದೆ. ಆತ ಮಾತನಾಡುತ್ತಲೇ ಹೋದ. ಮೊದಲ ಹದಿನೈದು ನಿಮಿಷ ಭಾರತ ಮತ್ತು ಭಾರತೀಯರ ಬಗ್ಗೆ ಹೊಗಳಿಕೆಯ ಕೇಳಿಸಿ ಕೊಂಡದ್ದಾಯ್ತು. ಇವು ನನ್ನಲ್ಲಿ ಆತನೆಡೆಗೆ ಒಂದಿಷ್ಟು ಖುಷಿಯನ್ನು ಹುಟ್ಟಿಸಿತ್ತು. ಕ್ರಮೇಣ ಭಾರತದಲ್ಲಿರುವ ಜಾತಿ ಆಚರಣೆಯ ಬಗ್ಗೆ ಮಾತು ಹೊರಳಿತು. ನನ್ನ ಜಾತಿ ಕೇಳಿದ.

ನೀನು ಆ ಜಾತಿಯಿಂದ ಬಂದದ್ದರಿಂದಲೇ ನಿನಗೆ ಅಮೆರಿಕಾಕ್ಕೆ ಬರಲು ಸಾಧ್ಯವಾಯಿತು ಎಂದ. ಉತ್ತರ ಕೊಟ್ಟರೆ ವಾದಕ್ಕೆ
ಹೋಗಬಹುದು ಎಂದು ವಿಚಾರ ಮಾಡುವವನಂತೆ ಗೋಣು ಅಡಿಸಿದೆ. ಈ ಜಾತಿಪದ್ಧತಿಯನ್ನು ಒಪ್ಪುತ್ತೀಯಾ ಎಂದು
ಕೇಳಿದ. ನಿನಗೆ ಎಲ್ಲರೂ ಒಂದೇ ಎನ್ನುವ ದೇವರು ಇಷ್ಟವಾಗುವುದಿಲ್ಲವಾ ಎನ್ನುವ ಪ್ರಶ್ನೆ ಬಂತು. ಹತ್ತಿಪ್ಪತ್ತು ತರ್ಕಬದ್ಧ ಪ್ರಶ್ನೆಗಳು. ಕುತೂಹಲಕ್ಕೆ ಮಾತು ಶುರುವಿಟ್ಟುಕೊಂಡ ನನ್ನನ್ನೇ ಒಪ್ಪಿಸಿಬಿಡಬಹುದೇ ಎಂದು ಒಂದು ಕ್ಷಣ ದಿಗಿಲಾಗುವಷ್ಟು ಕರಾರುವಾಕ್ಕು.

ನಮ್ಮಿಬ್ಬರ ಮಾತನ್ನು ಎದುರಿಗೆ ಕೂತಿದ್ದ ನಾಲ್ಕಾರು ಬಿಳಿಯ ಅಮೆರಿಕನ್ನರು ಕೇಳಿಸಿಕೊಳ್ಳುತ್ತಿದ್ದರು. ಆತ ಜಾತಿಯ ಇತಿಹಾಸದ ಬಗ್ಗೆ ಎತ್ತಿದ ಪ್ರಶ್ನೆ ಅದೇಕೋ ಅವರಲ್ಲಿಯೂ ಇದೆಯೆಂದೆನಿಸಿತು. ಹಾಗಾಗಿಯೇ ಆತನಿಗೆ ಮತ್ತು ಪರೋಕ್ಷವಾಗಿ ಉಳಿದವರಿಗೆ ನಮ್ಮಲ್ಲಿನ ಜಾತಿಯ ಇತಿಹಾಸ ವಿವರಿಸಲೇಬೇಕಾಯಿತು. ಮತಾಂತರದ ಪ್ರಕ್ರಿಯೆಯಲ್ಲಿ ಜಾತಿ ತಾರತಮ್ಯ ಬಹಳ ಸೂಕ್ಷ್ಮವಾಗಿ ಬಳಸುವ ಮೊದಲ ಮತ್ತು ಏಕೈಕ ವಿಚಾರ.

ಹೆಚ್ಚಿನವರು ಎಡವುವುದು ಮತಾಂತರಿಗಳ ಇಂತಹ ಪ್ರಶ್ನೆಗಳಿಂದ. ತಾರತಮ್ಯ ಎನ್ನುವುದು ಮನುಷ್ಯ ಸಮಾಜದ ಒಂದು
ಸಹಜತೆ. ತಾರತಮ್ಯ, ಮೇಲು ಕೆಳಗೆನ್ನುವ ಭಾವ ಇಲ್ಲದ ಕ್ಷೇತ್ರವೇ ಇಲ್ಲ. ಆ ಕಾರಣಕ್ಕೆ ಇನ್ನೊಬ್ಬರು ನಮ್ಮನ್ನು ಕೀಳಾಗಿ
ಕಾಣುವ ಅನುಭವ ಎಲ್ಲರಿಗೂ ಆಗೀಗ, ನಿರಂತರ ಆಗುತ್ತಲೇ ಇರುತ್ತದೆ. ಅದು ಉದ್ಯೋಗದಲ್ಲಿರಬಹುದು ಅಥವಾ ಯಾವುದೇ ಸಾಮಾಜಿಕ ಸ್ಥಾನಮಾನದಲ್ಲಿರಬಹುದು. ಹಾಗಾಗಿ ಜಾತಿ ತಾರತಮ್ಯ ಎನ್ನುವ ಅತ್ಯಂತ ಕೀಳಾದ ವಿಚಾರವನ್ನು ಹೊಂದಿ ರುವ ಏಕೈಕ ಧರ್ಮ, ದೇಶ ನಿಮ್ಮದು ಎಂದು ಆರೋಪಿಸಿದರೆ ಅದನ್ನು ಎದುರಿಸುವುದು ಸುಲಭವಲ್ಲ.

ಜಾತಿ ಎಂದರೆ ಅನಿಷ್ಟ, ಶೋಷಣೆ ಎಂದೇ ಬ್ರಿಟಿಷರು ಬರೆದಿಟ್ಟ ಇತಿಹಾಸವಷ್ಟೇ ಗೊತ್ತಿದ್ದರೆ ಸಾಕಾಗುವುದಿಲ್ಲ. ಅದಕ್ಕೆ ಪೂರ್ಣ
ಭವ್ಯ ಭಾರತ ಇತಿಹಾಸದ ಕಲ್ಪನೆಯಿರಬೇಕು. ನಮ್ಮ ನಿಮ್ಮೆಲ್ಲರ ಎದುರಿಗಿರುವ ಕೆಲವು ಸುಲಭದ ಉದಾಹರಣೆಗಳನ್ನೇ ತೆಗೆದುಕೊಳ್ಳೋಣ. ಮಹಾಭಾರತದ ಶಂತನು- ಚಕ್ರವರ್ತಿ. ಆತ ಮದುವೆ ಆದದ್ದು ಮೀನುಗಾರನ ಮಗಳು ಸತ್ಯವತಿಯನ್ನು. ಸತ್ಯವತಿಯ ಮಗ ರಾಜನಾದದ್ದು, ಭೀಷ್ಮರು ಮದುವೆಯಾಗದೇ ಉಳಿದದ್ದು. ಇಲ್ಲಿ ಸತ್ಯವತಿಯ ಮಗ ಒಂದೊಮ್ಮೆ ರಾಜ ನಾಗದಿದ್ದಲ್ಲಿ ಆತ ಮೀನುಗಾರರ ಜಾತಿಯವನೆಂದೇ ಗುರುತಾಗುತ್ತಿತ್ತು.

ಆದರೆ ಆತ ರಾಜನಾದ, ಕ್ಷತ್ರಿಯನಾದ. ಅಲ್ಲಿ ಜಾತಿಯ ಪ್ರಶ್ನೆಯೇ ಏಳಲಿಲ್ಲ. ಇನ್ನು ವಿದುರ. ಕೆಲಸದವಳ ಮಗ. ಆತ ಹಸ್ತಿನಾಪುರದ ಪ್ರಧಾನ ಮಂತ್ರಿಯ ಹುದ್ದೆಯನ್ನು ಆ ಕಾಲದಲ್ಲಿ ಅಲಂಕರಿಸಿದ್ದ. ವಿದುರನೀತಿ ಇಂದಿಗೂ ಪ್ರಸ್ತುತ. ಆತ ತತ್ವಜ್ಞಾನಿಯಾಗಿದ್ದ, ಮಹಾ ಬುದ್ಧಿವಂತನಿದ್ದ. ಆತನನ್ನು ಮಹಾ ಮಂತ್ರಿಯನ್ನಾಗಿಸುವಾಗ ಆತನ ಜಾತಿ ಮೂಲದ ಪ್ರಶ್ನೆಯೇಳುವ ಯಾವುದೇ ಘಟನೆ ಮಹಾಭಾರತದಲ್ಲಿಲ್ಲವಲ್ಲ. ಕ್ಷತ್ರಿಯನಾದ ಭೀಮ ಕಾಡಿನಲ್ಲಿದ್ದ ಹಿಡಿಂಬೆಯನ್ನು ಮದುವೆ ಯಾಗಿದ್ದ.

ಕೃಷ್ಣ ಗೊಲ್ಲರ ಜಾತಿಯವನು. ಆತ ನಾಲ್ಕೂ ವರ್ಣದಲ್ಲಿ ಬದುಕಿದವನು. ನಂತರದಲ್ಲಿ ೧೨-೧೪ನೇ ಶತಮಾನದಲ್ಲಿ ಆಳಿದ
ಯಾದವರು ಕ್ಷತ್ರಿಯರು. ಇದೆಲ್ಲವನ್ನು ಮಹಾಭಾರತವಾಗಿ ಬರೆದದ್ದು ವ್ಯಾಸರು. ಅವರದು ಮೀನುಗಾರ ಜಾತಿ. ಮಹಾ
ಭಾರತ ಇತಿಹಾಸವೋ, ಕಥೆಯೋ, ಅಂಥzಂದು ಮಹಾಕಾವ್ಯ ಬರೆಯುವಷ್ಟು ಶಿಕ್ಷಣ ಮೀನುಗಾರ ವ್ಯಾಸರಿಗೆ ಲಭ್ಯವಾಗುವ ವ್ಯವಸ್ಥೆ ಅಂದು ಇತ್ತೆಂದಾಯಿತಲ್ಲ !

ಇನ್ನು ವಾಲ್ಮೀಕಿ. ಡಕಾಯಿತ. ಅಂಥವನು ಪರಿವರ್ತನೆಗೊಂಡು ರಾಮನಂತಹ ರಾಮನ ಆಸ್ಥಾನದಲ್ಲಿ ವಿಶೇಷ ಸ್ಥಾನ
ಪಡೆಯುವುದು ಎಂದರೆ? ಚಕ್ರವರ್ತಿಯ ಮಕ್ಕಳು (ಲವ- ಕುಶ) ಶಿಕ್ಷಣಕ್ಕೆ ಮಾಜಿ ಡಕಾಯಿತನ ಆಶ್ರಮಕ್ಕೆ ಬರುವುದು
ಎಂದರೆ? ಚಕ್ರವರ್ತಿ ಅಂಥವನಿಗೂ ಸ್ಥಾನ ಕೊಡುವ ಸಮಾಜ ಅಂದು ಇತ್ತೆಂದಾಯಿತಲ್ಲ. ರಾಮಾಯಣದ ರಚನೆಯಾಗಿದ್ದು
ಕ್ರಿ.ಪೂ. ೮೦೦ ಎನ್ನುವುದೇ ಸರಿಯೆಂದುಕೊಂಡರೆ ಇದು ಅಂ ದಿನ, 2800 ವರ್ಷದ ಹಿಂದಿನ ಸಮಾಜದ ಸ್ಥಿತಿ ಎಂದಾಯಿತು.

ವೇದಕಾಲದ, ಅಥವಾ ನಂತರದ ಯಾವುದೇ ಒಂದು ಕೃತಿಯನ್ನು ತೆಗೆದುಕೊಳ್ಳಿ. ಅವೆಲ್ಲವನ್ನು ಬರೆದವರು ನಾನಾ ಜಾತಿ
ಯ ಹಿನ್ನೆಲೆಯವರು. ಅವರಲ್ಲಿ ಒಬ್ಬನೇ ಒಬ್ಬ ತನ್ನ ಜಾತಿಯ ಮೇಲಿನ ಶೋಷಣೆಯನ್ನು ಬರೆದಿಲ್ಲವೆಂದರೆ ಏನೆಂದುಕೊಳ್ಳ
ಬೇಕು? ಅದು ತಾರತಮ್ಯ ಇರಲಿಲ್ಲವೆಂದೇ ಅರ್ಥವಲ್ಲವೇ? ವೇದಕಾಲ ಬಿಟ್ಟು ಸ್ವಲ್ಪ ಇತ್ತಕಡೆಯ ಇತಿಹಾಸ ನೋಡೋಣ. ಕ್ರಿ.ಪೂ. ೩೪೩ರಲ್ಲಿ ಆಳಿದ ನಂದ ರಾಜಕುಲವನ್ನು ಸಂಸ್ಥಾಪಿಸಿದ್ದು ಮಹಾಪದ್ಮಾನಂದ. ನಂದರದು ಸಣ್ಣಪುಟ್ಟ ರಾಜಮನೆತನ ವಾಗಿರಲಿಲ್ಲ.

ಅವರ ಸೈನ್ಯದಲ್ಲಿ ಇದ್ದ ಆನೆಗಳ ಸಂಖ್ಯೆಯೇ ೩೦೦೦. ಬಾಕಿ ನೀವೇ ಅಂದಾಜಿಸಿಕೊಳ್ಳಿ. ಮಹಾಪದ್ಮಾನಂದ ಒಬ್ಬ ಕ್ಷೌರಿಕ ಜಾತಿಯವನು. ನಂತರ ಬ್ರಾಹ್ಮಣ ಚಾಣಕ್ಯನ ಜೊತೆ ಸೇರಿ ನಂದರನ್ನು ಕೊನೆಗಾಣಿಸಿ ಮೌರ್ಯ ಸಾಮ್ರಾಜ್ಯ ಸ್ಥಾಪಿಸಿದ ಚಂದ್ರಗುಪ್ತ ಶೂದ್ರ. ಮೌರ್ಯರು ಉತ್ತುಂಗದಲ್ಲಿzಗ ಅರ್ಧ ಅಫ್ಘಾನಿಸ್ತಾನ, ಪೂರ್ಣ ಪಾಕಿಸ್ತಾನದಿಂದ ದಕ್ಷಿಣದ ಮಹಾರಾಷ್ಟ್ರದವರೆಗೆ, ದಕ್ಷಿಣ ಪಾಕಿಸ್ತಾನದಿಂದ ಇಂದಿನ ಮಣಿಪುರದ ವರೆಗೆ, ಪೂರ್ಣ ಬಾಂಗ್ಲಾದೇಶ ಇಷ್ಟು ವಿಸ್ತಾರ ಅಖಂಡ ಭಾರತವನ್ನು ೧೩೮ ವರ್ಷ ಆಳಿದ್ದು.

ಕ್ಷಾತ್ರರಾಗಿ ಆಳಿದ ಈ ರಾಜರುಗಳು ನಾವಂದುಕೊಂಡ ಜಾತಿಪದ್ಧತಿಯ ಪ್ರಕಾರ ಶೂದ್ರರು. ಇಲ್ಲಿ ಶೂದ್ರರೆಂದರೆ ಕೆಳಗಿ ನವರು, ಕ್ಷತ್ರಿಯರು ಮೇಲಿನವರು ಎನ್ನುವ ಯಾವೊಂದು ವಿಚಾರವೂ ನಮಗೆ ಹೇಳುವ ಇತಿಹಾಸದ ಸಿಗುವುದಿಲ್ಲ. ನಂತರ ಬಂದವರು ಗುಪ್ತರು. ಅವರ ವೃತ್ತಿ ಕುದುರೆ ವ್ಯಾಪಾರ, ವೈಶ್ಯರು. ಒಟ್ಟಾರೆ ಈಗ ಇಷ್ಟು ಐತಿಹಾಸಿಕ ಸಮಯದಲ್ಲಿ ಶೇ. ೯೨ರಷ್ಟು ಕಾಲ ಈ ದೇಶದ ಬಹುತೇಕವನ್ನು ಆಳಿದ್ದು ಇಂದು ಕರೆಯುವ ದಲಿತರು ಮತ್ತು ಹಿಂದುಳಿದ ವರ್ಗದವರು. ಹೀಗಿರುವಾಗ ಜಾತಿಯನ್ನು ಬಳಸಿ ಶೋಷಿಸುವುದು ಎಲ್ಲಿಂದ ಬಂತು? ಹೇಗೆ ಸಾಧ್ಯ? ಈ ಕಾಲವನ್ನು ಲೋಹಯುಗವೆಂದು ಆಧುನಿಕ ಇತಿಹಾಸ ವರ್ಗೀಕರಿಸುತ್ತದೆ.

ಮಧ್ಯಕಾಲೀನ ಯುಗವನ್ನೇ ತೆಗೆದುಕೊಳ್ಳೋಣ. ಕ್ರಿ.ಶ. ೧೧೦೦ರಿಂದ ಸುಮಾರು ೬೫೦ ವರ್ಷ ಆಳಿದ್ದು ಮುಸ್ಲಿಮರು.
ನಂತರ ಬಂದವರು ಮರಾಠರು. ಬಾಜಿ ರಾವ್ ಪೇಶ್ವೆ ಜಾತಿಯಲ್ಲಿ ಬ್ರಾಹ್ಮಣ. ಆತ ದನ ಕಾಯುವ ಜಾತಿಗೆ ಸೇರಿದ
ಪಿಲಾಜಿ ರಾವ್ ಗಾಯಕ್‌ವಾಡ್ ಅನ್ನು ಗುಜರಾತಿನ ರಾಜನನ್ನಾಗಿ ಮಾಡಿದ್ದ. ಇದೊಂದೇ ಅಲ್ಲ, ಅತ್ತ ಮಾಳ್ವಾ (ಇಂದೋರ್)
ನ ರಾಜನನ್ನಾಗಿ ಬಾಜಿ ರಾವ್ ಆಯ್ಕೆ ಮಾಡಿದ್ದು ಹೋಳ್ಕರ್ ಅನ್ನು. ಆತ ಕುರಿ ಕಾಯುವ ಜಾತಿಯವನು.

ಅಹಲ್ಯ ಬಾಯಿ ಹೋಳ್ಕರ್ ಬಗ್ಗೆ ಕೇಳಿಯೇ ಇರುತ್ತೀರಿ. ಆಕೆ ಅದೆಷ್ಟೋ ದೇವಸ್ಥಾನಗಳನ್ನು, ಗುರುಕುಲಗಳನ್ನು ಕಟ್ಟಿ ನಿಲ್ಲಿಸಿದವಳು. ಇನ್ನು ೧೪ನೇ ಶತಮಾನದಲ್ಲಿ ಬದುಕಿದ್ದ ಮೀರಾ ಬಾಯಿ ರಾಥೋಡ್ ರಜಪೂತ ರಾಜವಂಶದವಳು. ಅವಳು ವರಿಸಿದ್ದು ಮೇವಾರದ ಭೋಜರಾಜನನ್ನು. ಕ್ಷತ್ರಿಯಳಾದ ಆಕೆಯನ್ನು ಸಂತ. ಆಕೆಯ ಗುರು ಸಂತ ರವಿದಾಸರು ಬ್ರಾಹ್ಮಣರು.
ಹೀಗೆ ಅಂದಿನ ಸಾಮಾಜಿಕ ಸ್ಥಿತಿಯನ್ನು ನಾವು ಈ ಕೆಲವು ಇತಿಹಾಸದಿಂದ ಗ್ರಹಿಸಬಹುದು.

ಇದು ರಾಜ ರಾಣಿಯರ, ಹೆಸರುವಾಸಿಯಾದ ಕೆಲವರ ಜಾತಿಯ ಇತಿಹಾಸವಲ್ಲ. ಇದಕ್ಕೆ ಸಮಾನಂತರವಾಗಿ ಪ್ರತಿಯೊಂದು ಆಳ್ವಿಕೆಯಲ್ಲೂ ಇಂತಹ ಅದೆಷ್ಟೋ ಉದಾಹರಣೆಗಳನ್ನು ನೋಡಬಹುದು. ಜಾತಿ, ಸಮಾಜದಲ್ಲಿ ಒಂದೊಮ್ಮೆ ಅನಿಷ್ಟ ತಾರತಮ್ಯವಿದ್ದಿದ್ದರೆ ಈ ಯಾವುದೇ ಘಟನೆ ನಡೆಯುತ್ತಲೇ ಇರಲಿಲ್ಲ. ಈ ಯಾವೊಂದು ಇತಿಹಾಸದಲ್ಲಿ ಎಲ್ಲಿಯೂ ಜಾತಿ ತಾರತಮ್ಯ ಏಕೆ ಕಾಣುವುದಿಲ್ಲ? ಏಕೆಂದರೆ ಇರಲಿಲ್ಲ. ಅದೊಂದೇ ಕಾರಣವಾಗಲು ಸಾಧ್ಯ. ನಾಲ್ಕು ವರ್ಣವನ್ನು ಬ್ರಹ್ಮನ ತಲೆ, ಪಾದ, ತೊಡೆ ಮತ್ತು ವಕ್ಷ ಸ್ಥಳಕ್ಕೆ ಹೋಲಿಸುವ ಉಲ್ಲೇಖವಿದೆ. ಆದರೆ ಆ ಉಲ್ಲೇಖದಲ್ಲಿಯೂ ಕಾಲು ತಲೆಗಿಂತ ಶ್ರೇಷ್ಠ ಎನ್ನುವ ವಿಚಾರ ಇರುವುದಿಲ್ಲ. ಬದಲಿಗೆ ಅವರವರ ಜೀವನದ ಹಾದಿಯ ಆಯ್ಕೆಯ ಮೇಲೆ ಆಯಾ ಅಂಗಕ್ಕೆ ಅವರ ವೃತ್ತಿಯ,
ಅಥವಾ ಬದುಕಿನ ಹೋಲಿಕೆ ಮಾಡಲಾಗಿದೆ.

ಇದೆಲ್ಲದರ ಅರ್ಥ ಭಾರತದ ಬ್ರಿಟಿಷ್ ಪೂರ್ವ ಇತಿಹಾಸದಲ್ಲಿ ವರ್ಣ, ಜಾತಿಯನ್ನು ಮೇಲೆ ಕೆಳಗೆ ಎನ್ನುವುದಕ್ಕಿಂತ ಎಲ್ಲವನ್ನು
ಅಕ್ಕಪಕ್ಕದಲ್ಲಿ ಒಂದೇ ಹಂತದಲ್ಲಿಟ್ಟು ನೋಡುವುದಿತ್ತು. ಅಲ್ಲದೇ ಕೆಲವೇ ದಿನಗಳಲ್ಲಿ ಒಬ್ಬ ಒಂದು ಜಾತಿಯಿಂದ ಇನ್ನೊಂದು
ಜಾತಿಗೆ (ವರ್ಣಕ್ಕೆ- ವೃತ್ತಿಗೆ) ತನ್ನಿಚ್ಛೆಯಂತೆ ಬದಲಿಸಿಕೊಳ್ಳಬಹುದಿತ್ತು. ಸಾಧ್ಯತೆಗಿಂತ ಅದಕ್ಕೆ ಬೇಕಾದ ಎಲ್ಲ ಅವಕಾಶ ಗಳನ್ನು ಅಂದಿನ ಸಮಾಜವೇ ಕೊಡುತ್ತಿತ್ತು. ಇದು ಬಹಳ ಮುಖ್ಯವಾಗಿ ಗ್ರಹಿಸಬೇಕಾದ ವಿಚಾರ.

ಇಲ್ಲಿ ನಾನು ಚಿಕ್ಕದಾಗಿ ವಿವರಿಸಿದ ಕಾಲಮಾನವನ್ನು ಗ್ರಹಿಸಿ. ಮಹಾಭಾರತ ರಚನೆಯಾದಾಗಿನಿಂದ ಬ್ರಿಟಿಷರ ಆಡಳಿತದವರೆಗೆ ಈ ಜಾತಿ, ತಾರತಮ್ಯ ನಮಗೆ ಹೇಳಿದಂತೆ ಇರಲಿಲ್ಲ. ೩೦೦೦ ವರ್ಷದ ಇತಿಹಾಸ ಕಣ್ಣ ಮುಂದೆಯೇ ಇದೆ, ಅದರಲ್ಲಿ ಯಾವುದೇ ಸಾಧ್ಯತೆಯೂ ಇಲ್ಲ, ದಾಖಲೆ ಸಿಕ್ಕಿಲ್ಲ, ಸಿಗುವುದೂ ಇಲ್ಲ. ಹಾಗಂತ ತಾರತಮ್ಯವೇ ಆಗಿಲ್ಲ, ಎಲ್ಲ ಬೊಗಳೆ, ನಮ್ಮಲ್ಲಿ ಸತಿಯಂತಹ ಅನಿಷ್ಟ ಪದ್ಧತಿ ಇರಲಿಲ್ಲ ಎಂದು ಹೇಳಿ ಆ ಇತಿಹಾಸವೇ ಸುಳ್ಳು ಎನ್ನುತ್ತಿಲ್ಲ. ನಮ್ಮಲ್ಲಿ ಬಾಲ್ಯ ವಿವಾಹ, ಸತಿ ಪದ್ಧತಿ ಎಲ್ಲವೂ ಒಂದಿಷ್ಟು ಇತ್ತು. ಆದರೆ ಯಾವಾಗ ಮತ್ತು ಯಾಕಾಗಿ? ವೇದ, ಇತಿಹಾಸ, ಪುರಾಣಗಳಲ್ಲಿ ಒಂದು ಕಡೆಯೂ ಬಾಲ್ಯ ವಿವಾಹದ ಉಲ್ಲೇಖವಿಲ್ಲ.

ಹೆಣ್ಣಿಗೆ ಹದಿನಾರು ದಾಟಿದ ಮೇಲೆಯೇ ಮದುವೆ ಎನ್ನುವ ಪದ್ಧತಿಯಿತ್ತು. ಸುಶೃತ ಸಂಹಿತೆಯಲ್ಲಿ ಮದುವೆಯಾಗಲು ಹೆಣ್ಣಿಗೆ ಹದಿನಾರು, ಮತ್ತು ಗಂಡಿಗೆ ಇಪ್ಪತ್ತೈದು ವರ್ಷ ಕಳೆದಿರಬೇಕು ಎಂದಿದೆ. ಸ್ವಯಂವರ ಎನ್ನುವುದು ಉದ್ದಕ್ಕೂ ಇದ್ದ ಸಾಮಾನ್ಯ ರೂಢಿ. ಎಂದರೆ ಹೆಣ್ಣಿಗೆ ಆಯ್ಕೆ, ಗಂಡಿಗಲ್ಲ. ಬಾಲ್ಯ ವಿವಾಹ ರೂಢಿಗೆ ಬಂದದ್ದು ಮೊಘಲರ ಕಾಲದಲ್ಲಿ. ಅಂತೆಯೇ ವಿಧವೆಯರು
ಅಗ್ನಿಗೆ ಹಾರಿ ಆತ್ಮಾಹುತಿ ಮಾಡಿಕೊಳ್ಳುವ ಪದ್ಧತಿ ಕೂಡ. ಏಕೆಂದರೆ ಹೆಣ್ಣಿನ ಮೇಲೆ ಮೊಘಲರಿಂದ ಆ ಪ್ರಮಾಣದ ಶೋಷಣೆ ಅತ್ಯಾಚಾರಗಳು ಅಂದು ನಡೆಯುತ್ತಿದ್ದವು. ಈ ರೂಢಿ ನಂತರದಲ್ಲಿ ಕೆಲವು ಪ್ರತ್ಯೇಕ ಪ್ರದೇಶಗಳಲ್ಲಿ ನಡೆದುಕೊಂಡು ಬಂತು, ಅದು ಸುಳ್ಳಲ್ಲ. ಅದಕ್ಕೆ ಕಾರಣ ಜಾತಿ, ಹೆಣ್ಣು ಗಂಡು ಎಂಬ ತಾರತಮ್ಯದ ಬದಲಿಗೆ ಅಂದಿನ ಸಾಮಾಜಿಕ ಅನಿವಾರ್ಯತೆ ಹಾಗಿತ್ತು.

ಇದನ್ನೇ ಬ್ರಿಟಿಷರು ಭಾರತ ಹೀಗಿದೆ ಎಂದು ಹೊರ ಜಗತ್ತಿಗೆ ಹೇಳಲು ಬಳಸಿಕೊಂಡದ್ದು. ಯುರೋಪಿಯನ್ನರ ಜೊತೆ ಬಂದ ಮತಾಂತರಿಗಳು, ಮಿಷನರಿಗಳು ಇದೇ ಕೆಲವು ಉದಾಹರಣೆಗಳನ್ನು ಬಳಸಿಕೊಂಡು ನಿಮ್ಮ ಧರ್ಮ ಈ ಪದ್ಧತಿಗಳಿಂದಾಗಿ, ಜಾತಿ ಯಿಂದಾಗಿ ಸರಿಯಿಲ್ಲವೆನ್ನುವ ನಿರೂಪಣೆ ಹುಟ್ಟುಹಾಕಿದ್ದು. ಬ್ರಿಟಿಷರು ಸತಿ ಪದ್ಧತಿಯ ವಿರುದ್ಧ ಮಾತೆತ್ತಿದವರನ್ನು ಹೀರೋ ಮಾಡಿದ್ದಕ್ಕೂ ಈ ಅನ್ಯ ಕಾರಣವಿದೆ.

ಈ ತಾರತಮ್ಯದ ಸಾಧ್ಯತೆಯನ್ನು ಮೊದಲು ಗ್ರಹಿಸಿದ್ದು ಬ್ರಿಟಿಷರು. ಬ್ರಿಟಿಷರು ರಾಜಕೀಯವಾಗಿ ಅತ್ಯಂತ ಚಾಣಾಕ್ಷರು. ಅವರು ಭಾರತದ ಸಮಾಜವನ್ನು ಅಭ್ಯಾಸ ಮಾಡಿ ಒಡೆಯುವ ಎಲ್ಲ ಸಾಧ್ಯತೆಗಳನ್ನು ಪ್ರಯೋಗಿಸಿದವರು. ಅವರು ಈ ಜಾತಿ, ವರ್ಣ ವಿಚಾರದಲ್ಲಿ ಮೇಲೆ, ಕೆಳಗೆ ಎಂದು ಭಾವನೆ ತರಲು ಮೊದಲು ಒಂದಿಷ್ಟು ಜಾತಿಗೆ ವಿಶೇಷ ಸ್ಥಾನ ಮಾನವನ್ನು ಕೊಟ್ಟರು. ಲೂಟಿಕೋರ ಬ್ರಿಟಿಷರ ದಬ್ಬಾಳಿಕೆಯಲ್ಲಿ ಪ್ರತಿಯೊಬ್ಬ ಭಾರತೀಯನ ಸ್ಥಿತಿ ಹೇಗಿತ್ತೆಂದರೆ ಅವರ ಯಾವೊಂದು ಒಲವೂ ಬದುಕಿಕೊಳ್ಳಲು ಅವಕಾಶ ಕಲ್ಪಿಸು ತ್ತಿತ್ತು. ಸಮಾಜದಲ್ಲಿ ಕೆಲವೇ ವರ್ಗದವರು ಸವಲತ್ತು ಪಡೆಯುತ್ತಿದ್ದಂತೆ ಮೊದಲೇ ಅಸಾಧ್ಯ ದೌರ್ಜನ್ಯದ ಅಸಹನೀಯ ಸಮಾಜದಲ್ಲಿ ಸಹಜವಾಗಿ ಒಡಕು, ಬೇಧಭಾವ ಹುಟ್ಟಿಕೊಂಡಿತು.

ದಾರಿದ್ರ್ಯ ಅದನ್ನು ಇನ್ನಷ್ಟು ಘೋರವಾಗಿಸಿತು. ಇದೆಲ್ಲ ಹುಟ್ಟಿದ್ದು, ಬೆಳೆದದ್ದು ಬ್ರಿಟಿಷರ ರಾಜಕೀಯದಿಂದ, ನಮ್ಮವರ ಅನಿವಾರ್ಯ ಪರಿಸ್ಥಿತಿಯಿಂದ. ಇದೆಲ್ಲವನ್ನು ಅಂದಾಜಿಸಬೇಕೆಂದರೆ ಅಂದು ಬ್ರಿಟಿಷರು ನಿರ್ಮಿಸಿದ್ದ ಅಸಾಧ್ಯ ಬದುಕಿನ ಸ್ಥಿತಿಯನ್ನು ಕಲ್ಪಿಸಿಕೊಳ್ಳಬೇಕು. ಇದೆಲ್ಲ ಬಿಟ್ಟು ಸ್ಥಳೀಯ ಮನುಷ್ಯ ಸಹಜ ಮೇಲು ಕೆಳಗೆನ್ನುವ, ಸೀನಿಯರ್ ಜೂನಿಯರ್ ಎನ್ನುವ, ಅಬಲ ಸಬಲವೆನ್ನುವ ಭಾವನೆ ಸಮಾಜದಲ್ಲಿ ಖಂಡಿತ ಮತ್ತು ನಿರಂತರ ಇತ್ತು. ಅದು ಜಗತ್ತಿನೆಡೆಯೂ ಇತ್ತು ಮತ್ತು ಇದೆ.

ಆದರೆ ಭಾರತದಲ್ಲಿ ಅದರ ಪ್ರಮಾಣ ಇಂದು ಎದುರಿಗಿರುವ ಇತಿಹಾಸ ಹೇಳುವಷ್ಟು ಇರಲಿಲ್ಲ. ಅದು ಆಯಾ ಕ್ಷೇತ್ರದಲ್ಲಿ
ಇದ್ದ ಸಹಜ ಪೈಪೋಟಿ, ಸ್ಪರ್ಧೆಯ ಅಂತರ. ಅದು ಯಾವುದೂ ಒಟ್ಟಿಗೆ ಸೇರಿ ಒಂದು ಜಾತಿಯವರು ಇನ್ನೊಂದು ಜಾತಿಯನ್ನು
ಸಾಮಾಜಿಕವಾಗಿ ಶೋಷಿಸುವ ಮಟ್ಟಿಗೆ ಎಂದಿಗೂ ಬದಲಾಗಿರಲಿಲ್ಲ.

ಬ್ರಿಟಿಷ್ ಆಫೀಸರ್ ನಿಕೊಲಸ್ ಡರ್ಕ್ ಬರೆದಿರುವ Cast of Mind, Colonialism and the making of Modern India’ ಪುಸ್ತಕದಲ್ಲಿ ಹೇಗೆ ಬ್ರಿಟೀಷರು ಭಾರತೀಯ ವ್ಯವಸ್ಥೆಯಲ್ಲಿ ಜಾತಿ ತಾರತಮ್ಯವನ್ನು ತಂದಿಟ್ಟು ಇಡೀ ದೇಶವನ್ನೇ ಆಳಿದರು ಎನ್ನುವುದು ದಾಖಲಾಗಿದೆ. ಅದನ್ನು ಓದಿದರೆ ಈ ಇಡೀ ಬ್ರಿಟಿಷ್ ಮತ್ತು ಮಿಷನರಿಗಳ ನಿರೂಪಣೆಯ ವಾಸ್ತವ ವಿವರವಾಗಿ ತಿಳಿಯುತ್ತದೆ. ಆಶ್ಚರ್ಯವೆಂದರೆ ಈ ನಿರೂಪಣೆ ಬ್ರಿಟಿಷರು ಬಿಟ್ಟು ಹೋದ ಮುಕ್ಕಾಲು ಶತಮಾನದ ನಂತರವೂ ನಾವು ಬದುಕಿಸಿಟ್ಟುಕೊಂಡಿದ್ದೇವೆ.

ಅದನ್ನು ಮತಾಂತರಕ್ಕೆ ಅಥವಾ ಸಮಾಜವನ್ನು ಒಡೆಯಲು ಇಂದಿಗೂ ಬಳಸಿಕೊಳ್ಳಲಾಗುತ್ತಿದೆ. ಅವರು ಇವರನ್ನು
ಶೋಷಿಸಿದರು, ಈಗ ನೀವು ಬಡಿದೆದ್ದು ಅವರ ವಿರುದ್ಧ ಹೋಗಬೇಕೆಂಬ ಸಮಾಜ ಒಡೆಯುವ ನಿರೂಪಣೆ. ನಟ ಚೇತನ್ ನಂತವರು ತಾರತಮ್ಯ, ಬ್ರಾಹ್ಮಣ್ಯ ಎಂದು ಹಿಂಸೆ’ ಕೊಡುವಷ್ಟು ಬಡಬಡಾಯಿಸುತ್ತಾರೆ, ಆತನಿಗೂ ಹಿಂಬಾಲಕರಿದ್ದಾರೆ ಎಂದರೆ ಈ ನಿರೂಪಣೆ ಅದ್ಯಾವ ಮಟ್ಟಿಗೆ ನಮ್ಮಲ್ಲಿ ಇನ್ನೂ ಬದುಕಿದೆ ಎನ್ನುವುದು ತಿಳಿಯುತ್ತದೆ.

error: Content is protected !!