Friday, 18th October 2024

ಜಾತಿ ಹೆಸರಲ್ಲಿ ರಾಜಕಾರಣ ಅದೆಂಥ ಜಾತ್ಯತೀತತೆ

ವರ್ತಮಾನ

maapala@gmail.com

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಪದೇ ಪದೆ ರಾಜ್ಯಕ್ಕೆ ಬರುತ್ತಿರುವುದರಿಂದ ಮುಂಬರುವ ವಿಧಾನಸಭೆ ಚುನಾವಣೆ
ಯಲ್ಲಿ ಆಡಳಿತಾರೂಢ ಬಿಜೆಪಿಗೆ ಎಷ್ಟು ಲಾಭವಾಗುತ್ತದೋ ಗೊತ್ತಿಲ್ಲ. ಆದರೆ, ಇದರಿಂದ ಪ್ರತಿಪಕ್ಷಗಳಂತೂ ಹತಾಶೆಗೆ ಒಳಗಾದಂತೆ ಕಾಣುತ್ತಿದೆ. ಕಳೆದ ಕೆಲವು ದಿನಗಳಿಂದ ಪ್ರತಿಪಕ್ಷಗಳ ಪ್ರಮುಖ ನಾಯಕರು ನೀಡುತ್ತಿರುವ ವಿವಾದಾತ್ಮಕ ಹೇಳಿಕೆಗಳೇ ಇದಕ್ಕೆ ಸಾಕ್ಷಿ.

ಪ್ರಧಾನಿ ರಾಜ್ಯಕ್ಕೆ 100 ಬಾರಿ ಬಂದರೂ ಬಿಜೆಪಿ ಗೆಲ್ಲುವುದಿಲ್ಲ ಎಂದು ಹೇಳಿದರೂ ಒಳಗೊಳಗೇ ಭೀತಿ ಮೂಡಿರುವುದಂತೂ ಸತ್ಯ. ಹಾಗಾಗಿ ಜಾತಿ, ಹಿಂದುತ್ವದ ಹೆಸರಿನಲ್ಲಿ ಸಮಾಜ ಒಡೆಯು ವಂತಹ ಹೇಳಿಕೆಗಳು ಅವರ ಬಾಯಿಯಿಂದ ಹೇಳಿಕೆಗಳು ಬರಲಾರಂಭಿಸಿವೆ. ಇದರಿಂದಾಗಿ ಮುಂಬರುವ ವಿಧಾನಸಭೆ ಚುನಾವಣೆ ಹಿಂದೆಂದಿಗಿಂತಲೂ ಭಾರೀ ಜಿದ್ದಾಜಿದ್ದಿಯಿಂದ ನಡೆಯುವ ಎಲ್ಲಾ ಲಕ್ಷಣಗಳು ಕಾಣಿಸಿಕೊಳ್ಳಲಾರಂಭಿಸಿವೆ. ಹೇಗಾದರೂ ಮಾಡಿ ಬಿಜೆಪಿಯನ್ನು ಅಧಿಕಾರ ದಿಂದ ಕೆಳಗಿಳಿಸಬೇಕು ಎಂದು ಹರಸಾಹಸ ಆರಂಭಿಸಿರುವ ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಬೀಜ ಬಿತ್ತಿದ್ದಾರೆ.

ಕುಮಾರಸ್ವಾಮಿ ಜಾತಿ ಹೆಸರಿನಲ್ಲಿ ಬಿಜೆಪಿಯನ್ನು ಒಡೆಯುವ ಪ್ರಯತ್ನ ಮಾಡಿದರೆ, ಸಿದ್ದರಾ ಮಯ್ಯ ತಮ್ಮ ಹಳೆಯ ಹಿಂದುತ್ವದ ವಿರುದ್ಧ ಹೇಳಿಕೆ ನೀಡುವ ಮೂಲಕ ಬಿಜೆಪಿಗೆ ಸೆಡ್ಡು ಹೊಡೆ ಯುವ ಪ್ರಯತ್ನ ಆರಂಭಿಸಿದ್ದಾರೆ. ವಿಶೇಷವೆಂದರೆ ಕುಮಾರಸ್ವಾಮಿ ಅವರ ಪಕ್ಷ ತನ್ನ ಹೆಸರಿನಲ್ಲಿ ಜಾತ್ಯತೀತ ಎಂಬ ಹೆಸರಿನಲ್ಲಿ ಜಾತಿ ಪ್ರಸ್ತಾಪ ಮಾಡಿದರೆ, ಕಾಂಗ್ರೆಸ್ ಜಾತ್ಯತೀತತೆಯ ಹೆಸರಿನಲ್ಲೇ ಧರ್ಮದ ಆಧಾರದ ಮೇಲೆ ರಾಜಕಾರಣ ಮಾಡುತ್ತಿದೆ.

ಕುಮಾರಸ್ವಾಮಿ ಅವರ ವಿಚಾರವನ್ನೇ ತೆಗೆದುಕೊಳ್ಳೋಣ. ಆರಂಭದಲ್ಲಿ ಬಿಜೆಪಿ ಅಽಕಾರಕ್ಕೆ ಬಂದರೆ ಬ್ರಾಹ್ಮಣರನ್ನು ಮುಖ್ಯಮಂತ್ರಿ ಮಾಡುತ್ತಾರೆ ಎಂದು ಹೇಳಿದರು. ತಕ್ಷಣವೇ ಎಚ್ಚೆತ್ತು ಗಾಂಧೀಜಿಯನ್ನು ಕೊಂದ, ಶೃಂಗೇರಿ ಮಠದ ಮೇಲೆ ದಾಳಿ ಮಾಡಿದ ಪೇಶ್ವೆ ಬ್ರಾಹ್ಮಣ ವರ್ಗಕ್ಕೆ ಸೇರಿದ ಪ್ರಲ್ಹಾದ ಜೋಶಿ ಅವರನ್ನು ಮುಖ್ಯಮಂತ್ರಿ ಮಾಡುತ್ತಾರೆ ಎನ್ನುವ ಮೂಲಕ ತಾವೇ ಸೃಷ್ಟಿಸಲು ಮುಂದಾಗಿದ್ದ ವಿವಾದವನ್ನು ತಣ್ಣಗೆ ಮಾಡುವ ನೆಪದಲ್ಲಿ ಬ್ರಾಹ್ಮಣ ಸಮುದಾಯದ ಮಧ್ಯೆಯೇ ಅಂತರ ಸೃಷ್ಟಿಸುವ ಪ್ರಯತ್ನ ಮಾಡಿದರು. ಈ ವಿಚಾರದಲ್ಲಿ ಅವರು ಏನೇ ಸ್ಪಷ್ಟನೆ ನೀಡಬಹುದು, ತಮ್ಮ ಹೇಳಿಕೆಯನ್ನು ಯಾವ ರೀತಿ ಬೇಕಾದರೂ ಸಮರ್ಥಿಸಿಕೊಳ್ಳಬಹುದು.

ಆದರೆ, ಅವರ ಹೇಳಿಕೆ ಹಿಂದೆ ಬ್ರಾಹ್ಮಣ ಸಮುದಾಯವನ್ನು ಒಡೆಯುವ ಪ್ರಯತ್ನ, ಬ್ರಾಹ್ಮಣರ ಒಂದು ವರ್ಗವನ್ನು ಹಿಯಾಳಿಸುವ ಪ್ರಯತ್ನ ಇರುವುದು ಸ್ಪಷ್ಟ. ಅಷ್ಟೇ ಅಲ್ಲ, ಬ್ರಾಹ್ಮಣರನ್ನು ಮುಖ್ಯಮಂತ್ರಿ ಮಾಡುತ್ತಾರೆ ಎಂದರೆ ಇತರೆ ಸಮುದಾಯದವರು ಬಿಜೆಪಿಯಿಂದ ದೂರ ಸರಿಯ ಬಹುದು ಎಂಬ ದೂರದ ಆಲೋಚನೆಯೂ ಇಲ್ಲದಿಲ್ಲ. ಅದೇ ಕುಮಾರಸ್ವಾಮಿ ಅವರು ಬ್ರಾಹ್ಮಣರ ಬದಲಾಗಿ ಇನ್ನೊಂದು ಸಮುದಾಯದ ಬಗ್ಗೆ ಈ ರೀತಿಯ ಅವಹೇಳನ ಮಾಡಿದ್ದಿದ್ದರೆ ಆಗ ಪರಿಸ್ಥಿತಿ ಏನಾಗಿರುತ್ತಿತ್ತು? ಹೌದು ಪೇಶ್ವೆ ಬ್ರಾಹ್ಮಣರ ಪೈಕಿ ಕೆಲವರು ಇಂತಹ ಕೃತ್ಯಗಳನ್ನು ಎಸಗಿರ ಬಹುದು. ಹಾಗೆಂದು ದೇಶಕ್ಕೆ ಅತ್ಯುತ್ತಮ ಸೇವೆ ಮತ್ತು ಕೊಡುಗೆ ನೀಡಿದ ಪೇಶ್ವೆ ಬ್ರಾಹ್ಮಣರು ಇಲ್ಲವೇ? ಕೆಲವು ಮುಸ್ಲಿಮರು ಭಯೋತ್ಪಾದಕ ಕೃತ್ಯಗಳನ್ನು ನಡೆಸುತ್ತಾರೆ, ಅವರನ್ನು ಬೆಂಬಲಿಸುತ್ತಾರೆ ಎಂದರೆ ಅದಕ್ಕೆ ಎಲ್ಲರನ್ನೂ ಹೊಣೆ ಮಾಡಲು ಸಾಧ್ಯವೇ? ದೇಶಕ್ಕಾಗಿ ತಮ್ಮ ಪ್ರಾಣ ತ್ಯಾಗ ಮಾಡಿದ, ಭಯೋತ್ಪಾದನೆ ವಿರುದ್ಧ ಹೋರಾಡಿ ಪ್ರಾಣ ತೆತ್ತ ಅದೆಷ್ಟು ಮುಸ್ಲಿಮರು ಈ ದೇಶದಲ್ಲಿ ಇಲ್ಲ.

ಅವರ ದೇಶಪ್ರೇಮ ಪ್ರಶ್ನಿಸಲು ಸಾಧ್ಯವೇ? ಹೋಗಲಿ, ಒಕ್ಕಲಿಗರಲ್ಲೂ ದಾಸ ಒಕ್ಕಲಿಗ, ರೆಡ್ಡಿ ಒಕ್ಕಲಿಗ, ಬೆರಳೊಕ್ಕಲಿಗ… ಹೀಗೆ ನಾನಾ ಪಂಗಡ ಗಳಿವೆ. ಒಂದು ಪಂಗಡಕ್ಕೆ ಮುಖ್ಯಮಂತ್ರಿ ಸ್ಥಾನ ಸಿಗುತ್ತದೆ ಎಂದು ಇತರೆ ಪಂಗಡಗಳಲ್ಲಿ ಅಸಮಾಧಾನ ಮೂಡಿಸುವ ಪ್ರಯತ್ನ ಮಾಡಿದರೆ ಯಾವುದೇ ಕಾರಣಕ್ಕೂ ಅದನ್ನು ಒಪ್ಪಲು ಸಾಧ್ಯವಿಲ್ಲ. ಅದೇ ರೀತಿ ಎಲ್ಲಾ ಜಾತಿಗಳಲ್ಲೂ ಒಳಪಂಗಡಗಳಿವೆ. ಆದರೆ, ಕುಮಾರಸ್ವಾಮಿ ಅವರಿಗೆ
ಕೇವಲ ಬ್ರಾಹ್ಮಣ ಸಮುದಾಯದ ಒಳಪಂಗಡ ಮಾತ್ರ ಕಾಣಿಸಿರುವುದನ್ನು ಗಮನಿಸಿದಾಗ ಅವರೆಷ್ಟು ಹತಾಶೆಗೆ ಒಳಗಾಗಿದ್ದಾರೆ ಎಂಬುದು ಗೊತ್ತಾಗುತ್ತದೆ.

ಏಕೆಂದರೆ, ಬಿಜೆಪಿ ಬ್ರಾಹ್ಮಣರನ್ನು ಮುಖ್ಯಮಂತ್ರಿ ಮಾಡುತ್ತದೆ ಎಂದು ಸ್ಪಷ್ಟವಾದರೆ ಇತರೆ ಸಮುದಾಯದವರು ಬಿಜೆಪಿಯಿಂದ ದೂರ ಸರಿಯ ಬಹುದು ಎಂಬ ಯೋಚನೆ ಬಾರದೇ ಇರುವಷ್ಟು ಮುಗ್ಧರೇನೂ ಅವರಲ್ಲ. ಇಲ್ಲಿ ಪ್ರಲ್ಹಾದ ಜೋಶಿ ಮತ್ತು ಅವರ ಜಾತಿ ಒಂದು ನೆಪ ಆಗಿತ್ತು ಅಷ್ಟೆ. ಕುಮಾರಸ್ವಾಮಿ ಮತ್ತು ಅವರ ಕುಟುಂಬದವರು ಬ್ರಾಹ್ಮಣ ಸಮುದಾಯದ ಬಗ್ಗೆ ಗೌರವ ಹೊಂದಿದವರು ಎಂಬುದರಲ್ಲಿ ಎರಡು ಮಾತಿಲ್ಲ. ಬ್ರಾಹ್ಮಣರ ಸಂಘಕ್ಕೆ ನಿವೇಶನ ಸಿಕ್ಕಿದ್ದು, ಹಲವು ದಶಕಗಳ ಬೇಡಿಕೆಯಾಗಿದ್ದ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಸ್ಥಾಪನೆ ಆಗಿದ್ದು ಇದೇ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ.

ದೇವೇಗೌಡರ ಮಾನಸ ಪುತ್ರ ಎಂದು ಕರೆಸಿಕೊಳ್ಳುತ್ತಿದ್ದ ವೈ.ಎಸ್.ವಿ.ದತ್ತ ಬ್ರಾಹ್ಮಣರಾಗಿದ್ದರು. ದೇವರು, ಪೂಜೆಗಳಲ್ಲಿ ಹೆತ್ತು ನಂಬಿಕೆ ಹೊಂದಿದ್ದ ಕುಟುಂಬ ಸದಸ್ಯರು ಬ್ರಾಹ್ಮಣರಿಗೂ ಗೌರವ ಕೊಡುತ್ತಿದ್ದರು. ಆದರೆ, ಏಕಾಏಕಿ ಅವರು ಪೇಶ್ವೆ ಹೆಸರಿನಲ್ಲಿ ಬ್ರಾಹ್ಮಣ ಸಮುದಾಯವನ್ನು ಒಡೆದು,
ಪೇಶ್ವೆ ಪಂಗಡವನ್ನು ಅವಹೇಳನ ಮಾಡುತ್ತಾರೆ ಎಂದರೆ ಅದಕ್ಕೆ ಹತಾಶೆಯಲ್ಲದೆ ಬೇರೇನೂ ಕಾರಣವಲ್ಲ ಎಂಬುದು ಸ್ಪಷ್ಟ. ಆದರೆ, ಜಾತ್ಯತೀತ ಎಂಬ ಜನತಾದಳದಲ್ಲಿ ಇದ್ದು ಮುಖ್ಯಮಂತ್ರಿಯಾಗಿ, ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕುಮಾರಸ್ವಾಮಿ ಅವರಿಂದ ಜಾತಿಯ ಹೆಸರಿನಲ್ಲಿ ನಿಂದನೆ ಯನ್ನು ರಾಜ್ಯದ ಜನ ನಿರೀಕ್ಷಿಸಿರಲೂ ಇಲ್ಲ.

ಈ ವಿಚಾರದಲ್ಲಿ ಬಿಜೆಪಿ ಕೂಡ ಕುಮಾರಸ್ವಾಮಿ ವಿರುದ್ಧ ಗಟ್ಟಿಯಾಗಿ ನಿಲ್ಲಲಿಲ್ಲ. ಪಕ್ಷದ ಬೆರಳೆಣಿಕೆಯ ಮುಖಂಡರನ್ನು ಹೊರತುಪಡಿಸಿದರೆ ಬೇರೆ ಯಾರೂ ಪ್ರಲ್ಹಾದ ಜೋಶಿ ವಿರುದ್ಧ ಕುಮಾರಸ್ವಾಮಿ ಮಾಡಿದ ಆರೋಪವನ್ನು ಕಠಿಣ ಮಾತುಗಳಲ್ಲಿ ಖಂಡಿಸಲಿಲ್ಲ. ಅಷ್ಟೇ ಏಕೆ, ಪ್ರತಿಪಕ್ಷಗಳು ಕೆಮ್ಮಿದರೂ ಅದರಲ್ಲಿ ಲೋಪ ಕಂಡುಹಿಡಿದು ವಾಚಾಮಗೋಚರವಾಗಿ ಟೀಕೆ ಮಾಡುವ ಬಿಜೆಪಿಯ ಸಾಮಾಜಿಕ ಜಾಲತಾಣವೂ ಈ ವಿಚಾರದಲ್ಲಿ
ಮೌನಕ್ಕೆ ಶರಣಾಗಿದೆ. ಅದೇ ಪ್ರತಿಪಕ್ಷಗಳು ಬ್ರಾಹ್ಮಣರ ಬದಲಾಗಿ ಬೇರೆ ಸಮುದಾಯದ ಬಗ್ಗೆ ಮಾತನಾಡಿದ್ದರೆ ಆಗ ಬಿಜೆಪಿ ನಾಯಕರ ಪ್ರತಿಕ್ರಿಯೆ ಏನಿರುತ್ತಿತ್ತು ಎಂಬುದನ್ನು ಊಹಿಸಲೂ ಸಾಧ್ಯವಿರಲಿಲ್ಲ.

ಪ್ರಲ್ಹಾದ ಜೋಶಿ ಅವರ ಬಗ್ಗೆ ಇರುವ ಅಸಮಾಧಾನವೋ, ಬ್ರಾಹ್ಮಣರ ಬಗ್ಗೆ ಇರುವ ನಿರ್ಲಕ್ಷ್ಯವೋ, ಒಟ್ಟಿನಲ್ಲಿ ಈ ಪ್ರಕರಣದಲ್ಲಿ ಬಿಜೆಪಿಯ ನಡೆ ಮತ್ತು ಕುಮಾರಸ್ವಾಮಿ ಅವರ ಹೇಳಿಕೆ ಆ ಸಮುದಾಯದ ಅಸಮಾಧಾನಕ್ಕೆ ಕಾರಣವಾಗಿರುವುದಂತೂ ಸತ್ಯ. ಇನ್ನು ಸಿದ್ದರಾಮಯ್ಯ ವಿಚಾರಕ್ಕೆ ಬಂದರೆ, ಹಿಂದುತ್ವದ ಬಗ್ಗೆ ಅವರ ಟೀಕೆ, ಆರೋಪಗಳು ಹೊಸದೇನೂ ಅಲ್ಲ. ಅವಕಾಶ ಸಿಕ್ಕಿದಾಗಲೆಲ್ಲಾ ಹಿಂದುತ್ವದ ಕುರಿತಾಗಿ ಮಾತನಾಡುವುದು ಅವರಿಗೆ ಒಂದು ರೀತಿಯಲ್ಲಿ ಹವ್ಯಾಸವೇ ಆಗಿದೆ.

ಆದರೆ, ಇತ್ತೀಚೆಗೆ ಸಾಫ್ಟ್ ಹಿಂದುತ್ವದ ಮೊರೆ ಹೋಗಲು ಕಾಂಗ್ರೆಸ್ ನಿರ್ಧರಿಸಿದ ಮೇಲೆ ಅಂತಹ ಹೇಳಿಕೆಗಳು ಕೊಂಚ ಕಡಿಮೆಯಾಗಿದ್ದವು. ಆದರೆ, ಕಳೆದ ತಿಂಗಳು ಸಿದ್ದರಾಮಯ್ಯ ಮತ್ತೆ ತಮ್ಮ ಹೇಳಿಕೆ ಆರಂಭಿಸಿದ್ದರು. ನಾನು ಹಿಂದೂ. ಆದರೆ ಹಿಂದುತ್ವವನ್ನು ವಿರೋಧಿಸುತ್ತೇನೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವುದನ್ನು ವಿರೋಧಿಸುವುದಿಲ್ಲ. ಆದರೆ, ಅದನ್ನು ರಾಜಕೀಯ ಲಾಭಕ್ಕಾಗಿ ಬಳಸುವುದನ್ನುಎಂದು ಹೇಳಿದ್ದರು. ಎರಡು ದಿನಗಳ ಹಿಂದೆ ಇನ್ನೂ ಮುಂದೆ ಹೋಗಿ ನಾನು ಮನುವಾದ ಮತ್ತು ಹಿಂದುತ್ವವನ್ನು ವಿರೋಧಿಸುತ್ತೇನೆ. ಯಾವುದೇ ಧರ್ಮವು ಕೊಲೆ ಮತ್ತು
ಹಿಂಸೆಯನ್ನು ಬೆಂಬಲಿಸುವುದಿಲ್ಲ. ಆದರೆ, ಹಿಂದುತ್ವ ಮತ್ತು ಮನುವಾದವು ಕೊಲೆ, ಹಿಂಸೆ ಮತ್ತು ತಾರತಮ್ಯವನ್ನು ಬೆಂಬಲಿಸುತ್ತದೆ ಎಂದು ವ್ಯಾಖ್ಯಾ ನಿಸಿದ್ದರು.

ಆದರೆ, ಸಿದ್ದರಾಮಯ್ಯ ಅವರ ಈ ಹೇಳಿಕೆಯನ್ನು ಹಿಂದುತ್ವದ ಪ್ರತಿಪಾದಕರೆಂದೇ ಹೇಳಿಕೊಳ್ಳುತ್ತಿರುವ ಬಿಜೆಪಿಯವರು ಗಂಭೀರವಾಗಿ ಪರಿಗಣಿ ಸಲೇ ಇಲ್ಲ. ಏಕೆಂದರೆ, ಅವರಿಂದ ಇಂಥ ಮತ್ತಷ್ಟು ಹೇಳಿಕೆಗಳು ಹೊರಬಂದರೆ ಅದರಿಂದ ಬಿಜೆಪಿಗೆ ಲಾಭವಾಗುತ್ತದೆ ಎಂಬುದು ನಾಯಕರಿಗೆ ಗೊತ್ತಿದೆ. ಹೀಗಾಗಿ ಹಿಂದೂ ಅಥವಾ ಹಿಂದುತ್ವಕ್ಕಿಂತ ಕಾಂಗ್ರೆಸ್‌ನಂತೆ ಬಿಜೆಪಿಗೂ ಮತಬ್ಯಾಂಕೇ ಮುಖ್ಯ ಎಂಬುದು ಮತ್ತೊಮ್ಮೆ ಜಾಹೀರಾಗಿದೆ.

ಚುನಾವಣೆ ವೇಳೆ ರಾಜಕೀಯ ಪಕ್ಷಗಳು, ನಾಯಕರ ಮಧ್ಯೆ ವಾಕ್ಸಮರ, ಆರೋಪ-ಪ್ರತ್ಯಾರೋಪ, ಟೀಕೆಗಳು ಸಹಜ. ಇದು ಇರಬೇಕು ಕೂಡ. ಹಾಗೆಂದು ತಮ್ಮ ರಾಜಕೀಯ ಲಾಭಕ್ಕಾಗಿ ಒಂದು ಸಮುದಾಯ ಅಥವಾ ಒಂದು ಧರ್ಮಕ್ಕೆ ನೋವು ನೀಡುವ, ಅವರನ್ನು ಅವಮಾನಗೊಳಿಸುವ ಕೆಲಸ ಸರಿಯಲ್ಲ. ಆದರೂ ಅದು ಹೆಚ್ಚಾಗುತ್ತಿರುವುದು ರಾಜಕಾರಣ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿ ನಿಂತಿದೆ.

ಲಾಸ್ಟ್ ಸಿಪ್: ಹಿಂದೆಲ್ಲ ಜಾತ್ಯತೀತ ಎಂದರೆ ಜಾತಿಗೆ ಅತೀತನಾಗಿದ್ದವನು ಎಂದರ್ಥವಾಗಿತ್ತು. ಈಗ ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಅತಿಯಾಗಿ ಟೀಕಿಸುವವನೇ ಜಾತ್ಯತೀತ ಎಂಬಂತಾಗಿದೆ.