Cristiano Ronaldo: ಅಲ್-ನಸರ್ ಕ್ಲಬ್ ತೊರೆಯಲು ಮುಂದಾದ ಕ್ರಿಸ್ಟಿಯಾನೊ ರೊನಾಲ್ಡೋ
ಇತ್ತೀಚೆಗೆ ಫಿಫಾ ಅಧ್ಯಕ್ಷ ಜಿಯಾನ್ನಿ ಇನ್‌ಫ್ಯಾಂಟಿನೋ ಅವರು "ರೊನಾಲ್ಡೋ ಕೆಲವು ಕ್ಲಬ್‌ಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಅವರು ಕ್ಲಬ್ ವಿಶ್ವಕಪ್‌ನಲ್ಲಿ ಕಾಣಿಸಿಕೊಳ್ಳಬಹುದು," ಎಂದು ಹೇಳಿದ್ದರು. ಸದ್ಯ ರೊನಾಲ್ಡೊ ನಡೆ ನೋಡುವಾಗ ಅವರು ಹೊಸ ಕ್ಲಬ್ ಪರ ಆಡುವ ಸಾಧ್ಯತೆ ಅಧಿಕವಾಗಿದೆ.


ರಿಯಾದ್: ಪೋರ್ಚುಗಲ್ ದಿಗ್ಗಜ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೋ (Cristiano Ronaldo)ಅವರು ಸೌದಿ ಅರೇಬಿಯಾದ ಅಲ್ ನಸರ್ ಕ್ಲಬ್‌ಗೆ ವಿದಾಯ ನೀಡುವ ಸೂಚನೆ ನೀಡಿದ್ದಾರೆ. ಸೌದಿ ಪ್ರೊ ಲೀಗ್ ಮುಕ್ತಾಯವಾದ ಕೆಲವೇ ಗಂಟೆಗಳ ನಂತರ, "ಈ ಅಧ್ಯಾಯ ಮುಗಿದಿದೆ. ಕಥೆ? ಇನ್ನೂ ಬರೆಯಲಾಗುತ್ತಿದೆ. ಎಲ್ಲರಿಗೂ ಕೃತಜ್ಞತೆ"ಎಂಬ ಶೀರ್ಷಿಕೆಯೊಂದಿಗಿನ ಫೋಟೋವನ್ನು ರೊನಾಲ್ಡೋ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಹೀಗಾಗಿ ಅವರು ಅಲ್ ನಸರ್ ತಂಡ ತೊರೆಯುವುದು ಖಚಿತ ಎನ್ನಲಾಗಿದೆ.
ರೊನಾಲ್ಡೊ, ಕ್ಲಬ್ ಮಟ್ಟದ ವೃತ್ತಿ ಜೀವನದಲ್ಲಿ ದಾಖಲೆಯ 800ನೇ ಗೋಲು ಗಳಿಸಿದರಾದರೂ, ತಾವು ಪ್ರತಿನಿಧಿಸಿದ ಅಲ್-ನಸರ್ ತಂಡವು 2-3 ಗೋಲುಗಳ ಅಂತರದಿಂದ ಪರಾಭವಗೊಳ್ಳುವುದನ್ನು ತಡೆಯಲು ಐದು ಬಾರಿಯ ಬ್ಯಾಲನ್ ಡಿ'ಓರ್ ಪ್ರಶಸ್ತಿ ವಿಜೇತರಾದ ಅವರಿಂದ ಸಾಧ್ಯವಾಗಲಿಲ್ಲ. ಹೀಗಾಗಿ, ಏಶ್ಯನ್ ಚಾಂಪಿಯನ್ಸ್ ಲೀಗ್ ನ ಎಲೈಟ್ ಹಂತಕ್ಕೆ ಅರ್ಹತೆ ಗಿಟ್ಟಿಸುವ ಅಲ್-ನಸರ್ ತಂಡದ ಕನಸು ಕಮರಿ ಹೋಯಿತು.
ಇತ್ತೀಚೆಗೆ ಫಿಫಾ ಅಧ್ಯಕ್ಷ ಜಿಯಾನ್ನಿ ಇನ್‌ಫ್ಯಾಂಟಿನೋ ಅವರು "ರೊನಾಲ್ಡೋ ಕೆಲವು ಕ್ಲಬ್‌ಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಅವರು ಕ್ಲಬ್ ವಿಶ್ವಕಪ್‌ನಲ್ಲಿ ಕಾಣಿಸಿಕೊಳ್ಳಬಹುದು," ಎಂದು ಹೇಳಿದ್ದರು. ಸದ್ಯ ರೊನಾಲ್ಡೊ ನಡೆ ನೋಡುವಾಗ ಅವರು ಹೊಸ ಕ್ಲಬ್ ಪರ ಆಡುವ ಸಾಧ್ಯತೆ ಅಧಿಕವಾಗಿದೆ.
2022 ರಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ನಿಂದ ಅಲ್ ನಸರ್‌ಗೆ ಬಂದಿದ್ದ ಕ್ರಿಸ್ಟಿಯಾನೊ ರೊನಾಲ್ಡೋ ಅವರ ಒಪ್ಪಂದ ಈ ಬೇಸಿಗೆ ಮುಕ್ತಾಯಗೊಳ್ಳಲಿದೆ. ಈ ನಡುವೆ ಜೂನ್ 1ರಿಂದ 10ರವರೆಗೆ ಫಿಫಾ ಕ್ಲಬ್ ವಿಶ್ವಕಪ್‌ಗಾಗಿ 32 ಕ್ಲಬ್‌ಗಳಿಗೆ ವಿಶೇಷ ಟ್ರಾನ್ಸ್‌ಪರ್ ವಿಂಡೋ ತೆರೆಯಲಾಗುತ್ತದೆ.