Saturday, 7th September 2024

ಕೈ- ದಳ ಜಗಳ; ಬಿಜೆಪಿಗೆ ವರದಾನ

ಅಶ್ವತ್ಥಕಟ್ಟೆ

ರಂಜಿತ್ ಎಚ್.ಅಶ್ವತ್ಥ

ranjith.hoskere@gmail.com

ಬಿಜೆಪಿಗೆ ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ಸು ಸಿಗದೇ ಇದ್ದ ಪಕ್ಷದಲ್ಲಿ ಜೆಡಿಎಸ್ ಅನ್ನು ಯಾವ ರೀತಿ ‘ಹ್ಯಾಂಡಲ್’ ಮಾಡಬೇಕು ಎನ್ನುವುದು
ಬಿಜೆಪಿಗರಿಗೆ ಗೊತ್ತಿದೆ. ಆದ್ದರಿಂದಲೇ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್‌ನ ಹೋರಾಟಕ್ಕೆ ದೊಡ್ಡ ಪ್ರಮಾಣದಲ್ಲಿ ಪ್ರತಿರೋಧ ತೋರುತ್ತಿಲ್ಲ.

ರಾಜ್ಯದಲ್ಲಿ ಇನ್ನೊಂದು ವರ್ಷದಲ್ಲಿ ವಿಧಾನ ಸಭಾ ಚುನಾವಣೆಗಳು ಎದುರಾಗಲಿವೆ. ಈ ಹಂತದಲ್ಲಿ ಯಾರು ಯಾರೊಂದಿಗೆ ಹೋಗು ತ್ತಾರೆ. ಎಲ್ಲೆಲ್ಲಿ ಹೊಂದಾಣಿಕೆಯಾಗುತ್ತದೆ ಎನ್ನುವ ಮಾತುಕತೆಗಳು ಆರಂಭವಾಗಿದೆ.

ಜೆಡಿಎಸ್ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಆಡಳಿತಾರೂಢ ಬಿಜೆಪಿಯನ್ನು ಟಾರ್ಗೆಟ್ ಮಾಡುವುದಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ ಅನ್ನೇ ಗುರಿಯಾಗಿಸಿಕೊಂಡಿರುವುದರಿಂದ ಸದ್ಯ ರಾಜ್ಯ ರಾಜಕೀಯದಲ್ಲಿ ‘ಆಡಳಿತ ಹಾಗೂ ಪ್ರತಿಪಕ್ಷದ’ ನಡುವಿನ ಕಾಳಗಕ್ಕಿಂತ, ಪ್ರತಿಪಕ್ಷ ಹಾಗೂ ಪ್ರತಿಪಕ್ಷ (ಕಾಂಗ್ರೆಸ್ -ಜೆಡಿಎಸ್) ನಡುವಿನ ಕಾಳಗ ಜೋರಾಗಿಯೇ ನಡೆಯುತ್ತಿದೆ. ಕಾಂಗ್ರೆಸ್-ಜೆಡಿಎಸ್ ನಡುವಿನ ಜಗಳ ಮಾತ್ರ ನೇರವಾಗಿ ಬಿಜೆಪಿಗೆ ಲಾಭವಾಗುತ್ತಿರುವುದರಲ್ಲಿ ಅನುಮಾನವಿಲ್ಲ.

ಕಳೆದ ಆರೇಳು ತಿಂಗಳಿನಿಂದ ಜೆಡಿಎಸ್ ಪ್ರತಿ ಹಂತದಲ್ಲಿಯೂ ನೇರ ಅಥವಾ ಪರೋಕ್ಷವಾಗಿ ಬಿಜೆಪಿ ಪರವಾಗಿಯೇ ಬ್ಯಾಟ್ ಬೀಸುತ್ತಿದೆ. ಅದರಲ್ಲಿಯೂ ಕಳೆದ ವಾರ ಬಜೆಟ್ ಅಧಿವೇಶನದಲ್ಲಿ ಜೆಡಿಎಸ್‌ನ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಾಡಿದ ಸುದೀರ್ಘ ಐದು ತಾಸಿನ ಭಾಷಣದಲ್ಲಿ, ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ ಬಜೆಟ್‌ಗೆ ಸಂಬಂಧಿಸಿದಂತೆ ಚರ್ಚಿಸಿದ್ದಕ್ಕಿಂತ ಹೆಚ್ಚಾಗಿ, ಸಿದ್ದರಾಮಯ್ಯ ಅವರ ಸರಕಾರದ ಅವಧಿಯಲ್ಲಿನ ನ್ಯೂನತೆಯ ಬಗ್ಗೆ ಮಾತನಾಡುವುದರಲ್ಲಿಯೇ ಕಳೆದರು.

ತಮ್ಮ ಇಡೀ ಭಾಷಣದಲ್ಲಿ ಕಾಂಗ್ರೆಸ್ ಸರಕಾರವನ್ನು ಟೀಕಿಸುವುದರಲ್ಲಿಯೇ ಕಳೆದರು. ಇನ್ನು ಸಿದ್ದರಾಮಯ್ಯ ಅವರು ಸರಕಾರದ ಬಜೆಟ್ ಬಗ್ಗೆ ಮಾಡಿದ್ದ ಟೀಕೆಗಳಿಗೆಲ್ಲ ಬಸವರಾಜ ಬೊಮ್ಮಾಯಿ ಅವರು ಉತ್ತರಿಸುವ ಮೊದಲೇ ಕುಮಾರಸ್ವಾಮಿ ಅವರು ಸರಕಾರದ ಪರವಾಗಿ ಬ್ಯಾಟ್ ಬೀಸಿದ್ದರು. ಇದೆಲ್ಲ ಒಂದು ಭಾಗವಾದರೆ, ಬಜೆಟ್ ಮೇಲಿನ ಚರ್ಚೆಯ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸುವ ಮೂಲಕ ತಮ್ಮ ಮುಂದಿನ ಟಾರ್ಗೆಟ್ ಯಾರು ಎನ್ನುವ ಸಂದೇಶವನ್ನು ರವಾನಿಸಿದರು.

ಹಾಗೇ ನೋಡಿದರೆ ಕುಮಾರಸ್ವಾಮಿ ಅವರಾಗಲೀ, ದೇವೇಗೌಡರಾಗಲಿ ಬಿಜೆಪಿ ಪರವಾಗಿ ಬ್ಯಾಟ್ ಬೀಸುತ್ತಿಲ್ಲ. ಬದಲಿಗೆ ಕಾಂಗ್ರೆಸ್, ಜೆಡಿಎಸ್‌ನ ಭದ್ರ ಕೋಟೆಯೊಳಗೆ ಪ್ರವೇಶಿಸದಂತೆ ಬೇಲಿ ಹಾಕುವ ಕಾರಣಕ್ಕಾಗಿ ಈ ರೀತಿಯ ವಾಗ್ದಾಳಿಗಳು ಹೆಚ್ಚಾಗಿವೆ. ಅದರಲ್ಲಿಯೂ ಕುಮಾರಸ್ವಾಮಿ ಅವರ ಕರ್ಮ ಭೂಮಿಯಾಗಿರುವ ರಾಮನಗರ, ಚನ್ನಪಟ್ಟಣ್ಣ ಸೇರಿದಂತೆ ಹಳೇ ಮೈಸೂರು ಭಾಗದ ಕ್ಷೇತ್ರಗಳ ಮೇಲೆ ಡಿ.ಕೆ. ಸಹೋದರರು ಕಣ್ಣಿಟ್ಟಿದ್ದಾರೆ.

ಈಗಾಗಲೇ ಜೆಡಿಎಸ್ ಭದ್ರಕೋಟೆಯಂತಿದ್ದ ಹಲವು ಕ್ಷೇತ್ರಗಳನ್ನುಕಳೆದುಕೊಂಡಿರುವುದರಿಂದ ಈ ‘ಕೋರ್ ಕ್ಷೇತ್ರಗಳನ್ನು’ ಕಳೆದು ಕೊಳ್ಳುವ ಸ್ಥಿತಿಯಲ್ಲಿ ಜೆಡಿಎಸ್ ಇಲ್ಲ. ಆದ್ದರಿಂದಲೇ, ಕುಮಾರಸ್ವಾಮಿ ಮಾತೆತ್ತಿದರೆ ಕಾಂಗ್ರೆಸ್ ಹಾಗೂ ಡಿಕೆ ಶಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಇನ್ನು ಕಾಂಗ್ರೆಸ್ ಸಹ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್‌ನ ಕೆಲ ಕ್ಷೇತ್ರಗಳನ್ನು ಮುಂದಿನ ವಿಧಾನಸಭಾ ಚುನಾ ವಣೆಯಲ್ಲಿ ತನ್ನ ತೆಕ್ಕೆಗೆ ತಗೆದುಕೊಳ್ಳಬೇಕು ಎಂದು ನಿರ್ಧರಿಸಿದ್ದು, ಇದಕ್ಕಾಗಿ ಬಿಜೆಪಿಗಿಂತ ಹೆಚ್ಚಾಗಿ ಜೆಡಿಎಸ್‌ನ ಬಲವನ್ನು ಆ ಕ್ಷೇತ್ರ ಗಳಲ್ಲಿ ಮುರಿಯಬೇಕಿದೆ.

ಆದ್ದರಿಂದ ಬಿಜೆಪಿಗಿಂತ ಜೆಡಿಎಸ್ ಅನ್ನೇ ಟಾರ್ಗೆಟ್ ಮಾಡಲಾಗುತ್ತಿದೆ. ಡಿಕೆ ಸಹೋದರರು ಹಾಗೂ ಕುಮಾರಸ್ವಾಮಿ ಅವರ ವೈಯಕ್ತಿಕ
ಪ್ರತಿಷ್ಠೆಗೆ ಬಿದ್ದು ಈ ರೀತಿ ಕಿತ್ತಾಡಿಕೊಳ್ಳುತ್ತಿರುವುದು ಸ್ಪಷ್ಟ. ಈ ಮೊದಲೇ ಹೇಳಿದಂತೆ ಜೆಡಿಎಸ್‌ಗೆ ಬೇಕಿರುವುದು ಹಳೇ ಮೈಸೂರು ಭಾಗ ದಲ್ಲಿ ಬರುವ ೩೫ರಿಂದ ೪೫ ಕ್ಷೇತ್ರಗಳ ಆಧಿಪತ್ಯ ಮಾತ್ರ. ಈಗಿರುವ ೩೭ ಸಂಖ್ಯಾ ಬಲಕ್ಕೆ ಇನ್ನೈದು ಕ್ಷೇತ್ರಗಳನ್ನು ಸೇರಿಸಿದರೂ ಕರ್ನಾಟಕದಲ್ಲಿ ಕಿಂಗ್ ಮೇಕರ್ ಆಗಬಹುದು ಎನ್ನುವ ಸ್ಪಷ್ಟ ಕಲ್ಪನೆಯಿದೆ.

ಆದರೆ ಈಗಿರುವ ಕ್ಷೇತ್ರಗಳನ್ನು ಉಳಿಸಿಕೊಳ್ಳುವ ಜತೆ ಇನ್ನೈದು ಕ್ಷೇತ್ರಗಳನ್ನು ಗೆಲ್ಲಬೇಕು ಎಂದರೆ ಅದು ಹಳೇ ಮೈಸೂರು ಭಾಗದಲ್ಲಿ
ಮಾತ್ರ ಸಾಧ್ಯ. ಅದನ್ನು ಹೊರತು ಮಧ್ಯ ಕರ್ನಾಟಕ, ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಸಂಘಟನೆ ಇಲ್ಲದೇ ಇರುವುದರಿಂದ ಅಲ್ಲಿ ಗೆಲವು ಸಾಧ್ಯವೇ ಇಲ್ಲ ಎನ್ನುವ ಸ್ಥಿತಿಯಿದೆ. ಆದ್ದರಿಂದಲೇ ಬಿಜೆಪಿಯ ‘ಬಿ’ ಟೀಂ ಎನಿಸಿಕೊಂಡರು ಪರವಾಗಿಲ್ಲ, ಆಡಳಿತ ಪಕ್ಷವನ್ನು ತೆಗಳುವುದಕ್ಕಿಂತ ತಮ್ಮ ನಿಜವಾದ ವೈರಿಯ ವಿರುದ್ಧವೇ ಶ್ರಮದಾನ ಮಾಡಲು ಜೆಡಿಎಸ್ ಮುಂದಾಗಿದೆ.

ರಾಜಕೀಯದಲ್ಲಿರುವ ‘ಶತ್ರುವಿನ ಶತ್ರು.. ಮಿತ್ರ’ ಎನ್ನುವ ಮಾತನ್ನು ಚಾಚು ತಪ್ಪದೇ ಬಿಜೆಪಿ ಹಾಗೂ ಜೆಡಿಎಸ್ ಪಾಲಿಸುತ್ತಿದೆ ಎನ್ನುವು ದರಲ್ಲಿ ಎರಡನೇ ಮಾತಿಲ್ಲ. ಆದರೆ ಜೆಡಿಎಸ್‌ನ ಈ ಮನಸ್ಥಿತಿ ಕಾಂಗ್ರೆಸ್‌ಗೆ ನಷ್ಟವೇ ಹೆಚ್ಚಾಗುತ್ತಿದೆ. ಒಂದೆಡೆ ಆಡಳಿತರೂಢ ಬಿಜೆಪಿ ಯನ್ನು ಸಹಜವಾಗಿಯೇ ಎದುರಿಸಬೇಕು. ಇನ್ನೊಂದೆಡೆ ಪ್ರತಿಪಕ್ಷದಲ್ಲಿರುವ ಜೆಡಿಎಸ್ ಮಾಡುತ್ತಿರುವ ಸಾಲು ಸಾಲು ಆರೋಪಗಳಿಗೂ ಉತ್ತರಿಸಬೇಕಾಗಿದೆ. ಸಾಲು ಸಾಲು ಚುನಾವಣೆಗಳಿಂದ ಕಂಗೆಟ್ಟಿರುವ ಕಾಂಗ್ರೆಸ್‌ಗೆ ಕರ್ನಾಟಕ ಭರವಸೆಯ ರಾಜ್ಯ. ಆದರೆ ಇಲ್ಲಿ ರಾಷ್ಟ್ರೀಯ ಪಕ್ಷ ಹಾಗೂ ಪ್ರಾದೇಶಿಕ ಪಕ್ಷಗಳೆರೆಡು ಸೇರಿ ತನ್ನನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದೆ.

ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡು ಹೋರಾಡುತ್ತಿದ್ದಂತೆ, ಆಗ ಕಾಂಗ್ರೆಸ್ ಲಾಭವಾಗುವ ಸಾಧ್ಯತೆಯಿತ್ತು. ಆದರೆ ಎರಡೂ ಪಕ್ಷದ ನಾಯಕರು ‘ಸ್ವತಂತ್ರವಾಗಿ ಚುನಾವಣೆಗೆ ಸ್ಪರ್ಧಿಸುವ’ ಮಾತನ್ನು ಆಡುತ್ತಿರುವುದು ಕಾಂಗ್ರೆಸ್‌ಗೆ ನುಂಗಲಾರದ ತುತ್ತಾಗಿದೆ. ಇನ್ನು ಬಿಜೆಪಿ ಮಾತ್ರ ‘ಇಬ್ಬರ ಜಗಳ-ಮೂರನೇಯವನಿಗೆ ಲಾಭ’ ಎನ್ನುವ ಮನಸ್ಥಿತಿಯಲ್ಲಿದೆ. ಜೆಡಿಎಸ್-ಕಾಂಗ್ರೆಸ್ ಹಳೇ ಮೈಸೂ ಭಾಗದ ಕ್ಷೇತ್ರಗಳಿಗೆ ಈ ರೀತಿ ಕಿತ್ತಾಡುತ್ತಿದ್ದಂತೆ ಇತ್ತ ಬಿಜೆಪಿ ಆ ಭಾಗದ ಕ್ಷೇತ್ರಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೇ, ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ, ಕರಾವಳಿ ಭಾಗದಲ್ಲಿರುವ ಕಾಂಗ್ರೆಸ್ ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದೆ.

ಹಳೇ ಮೈಸೂರು ಭಾಗದಲ್ಲಿ ಸಂಘಟನೆಯಲ್ಲಿ ಹೇಳಿಕೊಳ್ಳುವಷ್ಟು ಬಿಜೆಪಿ ಶಕ್ತವಾಗಿಲ್ಲ. ಈ ಬಗ್ಗೆ ಬಿಜೆಪಿ ನಾಯಕರಿಗೂ ತಿಳಿದಿದೆ.
ಆದ್ದರಿಂದಲೇ ಜೆಡಿಎಸ್ ಅನ್ನು ಮುಂದೆ ಬಿಟ್ಟು ಹಿಂದೆ ಆಟ ನೋಡುವ ಕಾರ್ಯವನ್ನು ಬಿಜೆಪಿ ನೋಡುತ್ತಿದೆ. ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್-ಕಾಂಗ್ರೆಸ್ ನಡುವಿನ ರಾಜಕೀಯದಿಂದ ಕಾಂಗ್ರೆಸ್‌ಗೆ ಐದಾರು ಸೀಟುಗಳು ನಷ್ಟವಾದರೂ ಅದು ಈ ಹಂತದಲ್ಲಿ ಬಿಜೆಪಿಗೆ ಬಹುದೊಡ್ಡ ಲಾಭ.

ಒಂದು ವೇಳೆ ಬಿಜೆಪಿಗೆ ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ಸು ಸಿಗದೇ ಇದ್ದ ಪಕ್ಷದಲ್ಲಿ ಜೆಡಿಎಸ್ ಅನ್ನು ಯಾವ ರೀತಿ ‘ಹ್ಯಾಂಡಲ್’ ಮಾಡ ಬೇಕು ಎನ್ನುವುದು ಬಿಜೆಪಿಗರಿಗೆ ಗೊತ್ತಿದೆ. ಆದ್ದರಿಂದಲೇ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್‌ನ ಹೋರಾಟಕ್ಕೆ ದೊಡ್ಡ ಪ್ರಮಾಣದಲ್ಲಿ ಪ್ರತಿರೋಧ ತೋರುತ್ತಿಲ್ಲ. ಇನ್ನೊಂದು ಲೆಕ್ಕಚಾರದ ಪ್ರಕಾರ, ಚುನಾವಣೆ ವೇಳೆಗೆ ಕಾಂಗ್ರೆಸ್-ಜೆಡಿಎಸ್ ನಡುವಿನ ಕಿತ್ತಾಟದಿಂದ ಹಳೇ ಮೈಸೂರು ಭಾಗದಲ್ಲಿ ಬಿಜೆಪಿಗೆ ಉಸಿರಾಡುವ ಪರಿಸ್ಥಿತಿ ನಿರ್ಮಾಣವಾದರೂ ಅಚ್ಚರಿಯಿಲ್ಲ.

ಇನ್ನು ಹಳೇ ಮೈಸೂರು ಭಾಗದಲ್ಲಿ ಅದರಲ್ಲಿಯೂ ರಾಮನಗರ ಜಿಲ್ಲೆಯ ಭಾಗದಲ್ಲಿ ಕಾಂಗ್ರೆಸ್‌ನಿಂದ ಕೈಬಿಟ್ಟು ಹೋಗಿರುವ ಮತಗಳನ್ನು ಹಿಂಪಡೆಯಲು ಹಾಗೂ ಕುಮಾರಸ್ವಾಮಿ ಅವರನ್ನು ಕಟ್ಟಿ ಹಾಕುವ ಕಾರಣಕ್ಕಾಗಿ ಮೇಕೆದಾಟು ಯೋಜನೆಗೆ ಆಗ್ರಹಿಸಿ ಪಾದಯಾತ್ರೆ ಯನ್ನು ಕೈಗೊಂಡಿತ್ತು. ಈ ಪಾದಯಾತ್ರೆಯ ಮೂಲಕ ಹಳೇ ಮೈಸೂರು ಭಾಗದಲ್ಲಿ ಮತಗಳನ್ನು ತನ್ನ ತೆಕ್ಕೆಗೆ ಪಡೆಯುವುದಕ್ಕೆ ಯಶಸ್ವಿಯಾಗುತ್ತಿದ್ದಂತೆ, ತಮ್ಮ ಪಕ್ಷದಿಂದ ಕೈತಪ್ಪುಬಹುದಾದ ಮತಗಳನ್ನು ವಾಪಸು ಪಡೆಯಲು ಜೆಡಿಎಸ್ ಹರಸಾಹಸ ಪಡೆಯುತ್ತಿದೆ.

ಈ ಕಾರಣಕ್ಕಾಗಿಯೇ ಕಳೆದೊಂದು ವಾರದಿಂದ ಜೆಡಿಎಸ್‌ನ ಎಚ್.ಡಿ.ಕುಮಾರಸ್ವಾಮಿ ಹಾಗೂ ಡಿ.ಕೆ. ಸಹೋದರರ ವಿರುದ್ಧ ವಾಕ್ಸಮರ ಇನ್ನಷ್ಟು ಹೆಚ್ಚಾಗುವುದು ಮಾತ್ರವಲ್ಲದೇ, ಈಗಲ್‌ಟನ್ ವಿಷಯವನ್ನು ಪ್ರಸ್ತಾಪಿಸಿ ಡಿಕೆಶಿ ಅವರನ್ನು ಇಕ್ಕಟ್ಟಿಗೆ ಸಿಲುಕಿಸುವ ಕೆಲಸಕ್ಕೆ ಎಚ್‌ಡಿಕೆ ಕೈಹಾಕಿದ್ದಾರೆ. ಈ ರೀತಿ ಪ್ರತಿ ಹಂತದಲ್ಲಿಯೂ ಕಾಂಗ್ರೆಸ್ ಅನ್ನು ಹೆಣೆಯಬೇಕು ಎನ್ನುವ ಏಕೈಕ ಕಾರಣಕ್ಕೆ ಬಿಜೆಪಿಯನ್ನು
ಬೆಂಬಲಿಸುತ್ತಿರುವ ಜೆಡಿಎಸ್ ಸದನದಲ್ಲಿ ಪ್ರತಿಪಕ್ಷವಾಗಿದ್ದರೂ ಸರಕಾರದ ಪರವಾಗಿಯೇ ಬ್ಯಾಟ್ ಮಾಡುತ್ತಿದ್ದಾರೆ.

ಬಿಜೆಪಿ ಸರಕಾರದ ವಿರುದ್ಧ ಕಾಂಗ್ರೆಸ್ ಶಾಸಕರು ಮಾತನಾಡಿದರೆ, ಬಿಜೆಪಿಗರು ಪ್ರತಿಕ್ರಿಯಿಸುವ ಮೊದಲೇ ಜೆಡಿಎಸ್‌ನ ಕೆಲ ಶಾಸಕ ರಾದರೂ,‘ಕಾಂಗ್ರೆಸ್ ಸರಕಾರ ಇದ್ದಾಗ ಏನಾಗಿತ್ತು?’ ಎನ್ನುವ ಪಶ್ನೆಯನ್ನು ಕೇಳುವುದು ಸಾಮಾನ್ಯವಾಗಿದೆ. ಇನ್ನು ಮಾಜಿ ಮುಖ್ಯ ಮಂತ್ರಿಕುಮಾರಸ್ವಾಮಿ ಅವರು ತಮ್ಮ ಟೀಕಾಶ್ವವನ್ನು ಬಿಜೆಪಿ ಹೂಡುವುದಕ್ಕಿಂತ ಹೆಚ್ಚಾಗಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರನ್ನು ಟೀಕಿಸುವುದರಲ್ಲಿಯೇ ಕಳೆಯುತ್ತಿದ್ದಾರೆ. ಈ ರೀತಿ ಪ್ರತಿಪಕ್ಷಗಳೇ ಒಬ್ಬರ ಮೇಲೊಬ್ಬರು ಸವಾರಿ ಮಾಡಿಕೊಳ್ಳುತ್ತಿರುವು ದರಿಂದ ಆಡಳಿತ ಪಕ್ಷ ಬಿಜೆಪಿ ಈ ರೀತಿ ಸವಾರಿ ಮಾಡಿಕೊಳ್ಳುತ್ತಿರುವುದರಿಂದ ಬಿಜೆಪಿಗೆ ತಮ್ಮ ದಾರಿ ಸುಲಭವಾಗಿದೆ.

error: Content is protected !!