Friday, 18th October 2024

ತನ್ನ ವಿರುದ್ದವೇ ಅಸ್ತ್ರ ಒದಗಿಸುತ್ತಿದೆ ಕಾಂಗ್ರೆಸ್ !

ವರ್ತಮಾನ

maapala@gmail.com

ಕರ್ನಾಟಕ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯದಲ್ಲಿ ಅಧಿಕಾರಕ್ಕೇರುವ ಕನಸು ಕಾಣುತ್ತ, ಆ ನಿಟ್ಟಿನಲ್ಲಿ ಮುನ್ನುಗ್ಗುತ್ತಿರುವ ಕಾಂಗ್ರೆಸ್ ನ ವೇಗ ಅತಿಯಾಯಿತೇನೋ ಎನಿಸುತ್ತಿದೆ. ಅತಿ ವೇಗ ಅಪಘಾತಕ್ಕೆ ಕಾರಣ ಎನ್ನುವಂತೆ ಕಾಂಗ್ರೆಸ್ ನಾಯಕರು ಅತಿಯಾದ ಉತ್ಸಾಹದೊಂದಿಗೆ ಆಡಳಿತ ಪಕ್ಷ ಮತ್ತು ಅವರ ಆಡಳಿತ ವೈಖರಿಯನ್ನು ಟೀಕಿಸುವ ಭರದಲ್ಲಿ ತಮ್ಮ ಪಕ್ಷದ ವಿರುದ್ಧ ತಾವೇ ಹೊಸ ಹೊಸ ಅಸ್ತ್ರಗಳನ್ನು ಆಡಳಿತಾರೂಢ ಬಿಜೆಪಿಗೆ ನೀಡುತ್ತಿದ್ದಾರೆ.

ಅದಿಲ್ಲವೆಂದಾದರೆ ತಮ್ಮ ಅಲ್ಪ ಸಂಖ್ಯಾತರ, ಅದರಲ್ಲೂ ಮುಸ್ಲಿಮರ ವೋಟ್ ಬ್ಯಾಂಕ್ ಗಟ್ಟಿಗೊಳಿಸಿಕೊಳ್ಳಲು ಬಹು ಸಂಖ್ಯಾತ ಹಿಂದೂಗಳು ಅಥವಾ ಹಿಂದುತ್ವದ ವಿರುದ್ಧ ಟೀಕೆಗಳನ್ನು ಮಾಡುತ್ತ ಆ ಸಮುದಾಯ ದವರ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆ ಮೂಲಕ ರಾಜ್ಯದಲ್ಲಿ ಪ್ರಸ್ತುತ ಹಿಂದುತ್ವದ ಆಧಾರವನ್ನೇ ಪ್ರಮುಖವಾಗಿಟ್ಟು ಕೊಂಡು ಮತ್ತೆ ಅಧಿಕಾರಕ್ಕೇರಲು ಪ್ರಯತ್ನಿಸುತ್ತಿರುವ ಬಿಜೆಪಿಗೆ ತನ್ನ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಅವಕಾಶ ಮಾಡಿ ಕೊಡುತ್ತಿದ್ದಾರೆ.

ಇದುವರೆಗೆ ಮತೀಯ ವಿಚಾರಗಳು ಬಂದಾಗ ಮೃದು ಹಿಂದುತ್ವದ ನೀತಿ ಅನುಸರಿಸುತ್ತಿದ್ದ, ಯಾರಾದರೂ ಮತೀಯ ಭಾವನೆ ಗಳಿಗೆ ಧಕ್ಕೆ ತರುವಂತಹ ಹೇಳಿಕೆಗಳನ್ನು ನೀಡಿದಾಗ ಪಕ್ಷಕ್ಕೆ ಹೆಚ್ಚು ಡ್ಯಾಮೇಜ್ ಆಗದಂತೆ ತೇಪೆ ಹಚ್ಚುವ ಕೆಲಸ ಮಾಡುತ್ತಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೇ ಇದೀಗ ಅಂತ ಹೇಳಿಕೆ ನೀಡಿರುವುದು ಪುಟಿದೇಳುತ್ತಿದ್ದ ಪಕ್ಷವನ್ನು ಮತ್ತೆ ಕೆಳಕ್ಕೆ ತಳ್ಳುವ ಪ್ರಯತ್ನಕ್ಕೆ ಶಕ್ತಿ ಕೊಟ್ಟಂತೆ ಮಾಡಿದೆ. ಸರಕಾರವನ್ನು ಟೀಕಿಸುವ ಭರದಲ್ಲಿ ಮಂಗಳೂರು ಕುಕ್ಕರ್ ಬಾಂಬ್ ಸ್ಫೋದ ಆರೋಪಿ, ಶಂಕಿತ ಉಗ್ರ ಮೊಹಮ್ಮದ್ ಶಾರೀಕ್ ಉಗ್ರನೇ ಅಲ್ಲ ಎಂಬಂತೆ ನೀಡಿದ ಅವರ ಹೇಳಿಕೆ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ.

ಒಂದು ಪಕ್ಷದ ಸಾಮಾನ್ಯ ಕಾರ್ಯಕರ್ತರು ಅಥವಾ ಮುಖಂಡರು ಅಂತಹ ಹೇಳಿಕೆ ನೀಡಿದಾಗ ಅದಕ್ಕೆ ಅಷ್ಟೊಂದು ಬಲ ಇರುವುದಿಲ್ಲ. ಹಿರಿಯ ನಾಯಕರು ಅಥವಾ ಪಕ್ಷದ ಅಧ್ಯಕ್ಷರು ಆ ಬಗ್ಗೆ ಮೌನವಾಗಿದ್ದರೆ ಅಥವಾ ಆ ಹೇಳಿಕೆಯನ್ನು ಖಂಡಿಸಿದರೆ ಅಲ್ಲಿಗೆ ಅದು ಬಹುತೇಕ ಮುಕ್ತಾಯ ಕಾಣುತ್ತದೆ. ಆದರೆ, ಪಕ್ಷದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಅದರಲ್ಲೂ ಪ್ರದೇಶ ಕಾಂಗ್ರೆಸ್‌ನ ಅಧ್ಯಕ್ಷರಾಗಿದ್ದವರು ಅಂತಹ ಹೇಳಿಕೆಗಳನ್ನು ನೀಡಿದರೆ ಅದು ಪಕ್ಷದ ಅಭಿಪ್ರಾಯದಂತೆ ಭಾಸವಾಗುತ್ತದೆ.

ಕೇವಲ ಬಿಜೆಪಿ ಮಾತ್ರವಲ್ಲ, ಜನರೂ ಪಕ್ಷವನ್ನು ಅನುಮಾನದಿಂದ ಪ್ರಶ್ನಿಸುವಂತಾಗುತ್ತದೆ. ಡಿ.ಕೆ.ಶಿವಕುಮಾರ್ ಪ್ರಕರಣದಲ್ಲಿ ಆಗಿದ್ದೂ ಇದೇ. ಸರಕಾರದ ವಿರುದ್ಧ ಇರುವ ಮತದಾರರ ಪಟ್ಟಿ ಅಕ್ರಮ, 40 ಪರ್ಸೆಂಟ್ ಕಮಿಷನ್ ಪ್ರಕರಣ ಮುಂತಾದ ಹಗರಣಗಳಿಂದ ಜನ ಗಮನ ಬೇರೆಡೆ ಸೆಳೆಯಲು ಮಂಗಳೂರು ಕುಕ್ಕರ್ ಬಾಂಬ್ ಸ್ಫೋ ಪ್ರಕರಣವನ್ನು ಆಡಳಿತಾರೂಢ ಬಿಜೆಪಿ ವೈಭವೀಕರಿಸುತ್ತಿದೆ ಎಂದಷ್ಟೇ ಅವರು ಹೇಳಿದ್ದರೆ ಪ್ರಕರಣ ಇಷ್ಟೊಂದು ಗಂಭೀರವಾಗುತ್ತಿರಲಿಲ್ಲ.

ಆದರೆ, ಅವರು ಕುಕ್ಕರ್ ಬಾಂಬ್ ಸ್ಫೋವನ್ನು ಕುಕ್ಕರ್ ಸೋಟ ಎಂದಷ್ಟೇ ಪರಿಗಣಿಸಿ ಹೇಳಿಕೆ ನೀಡಿದ್ದಾರೆ. ಕೆಲ ದಿನಗಳ ಹಿಂದೆ ಮಂಗಳೂರಿನಲ್ಲಿ ಕುಕ್ಕರ್ ಸ್ಫೋ ಎಂದು ಹೇಳಲಾದ ಘಟನೆಯಲ್ಲಿ ತನಿಖೆಗೆ ಮೊದಲೇ, ಶಾರೀಕ್‌ನನ್ನು ಉಗ್ರನೆಂದು ಕರೆಯಲಾಯಿತು. ಆದರೆ, ಆತ ಉಗ್ರನೆಂದು ತನಿಖೆ ಮಾಡಿದವರು ಯಾರು ಎಂದು ಪ್ರಶ್ನಿಸಿದ್ದಾರೆ. ಕುಕ್ಕರ್ ಬಾಂಬ್ ಸ್ಫೋಟ ವನ್ನು ‘ಭಯೋತ್ಪಾದನಾ ಕೃತ್ಯ’ ಎಂದು ಘೋಷಿಸಿದ ಪೊಲೀಸರ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಶಂಕಿತ ಉಗ್ರ ಶಾರೀಕ್‌ನನ್ನು ಉಗ್ರ ಎನ್ನಲು ಇದೇನು ಪುಲ್ವಾಮಾ, ಮುಂಬೈನಲ್ಲಿ ನಡೆದಂತಹ ಕೃತ್ಯವೇ ಎಂದೂ ಪ್ರಶ್ನಿಸಿ ಕೃತ್ಯವನ್ನು
ಸಮರ್ಥಿಸಿಕೊಳ್ಳುವ ಧಾಟಿಯಲ್ಲಿ ಮಾತನಾಡಿದ್ದಾರೆ.

ಕರ್ನಾಟಕ ಪ್ರದೇಶ್ ಕಾಂಗ್ರೆಸ್ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ನೀಡಿದ ಹೇಳಿಕೆಗೆ ಇದೀಗ ಆ ಪಕ್ಷದ ಇತರೆ ನಾಯಕರು ಬೆಂಬಲವಾಗಿ ನಿಂತಿದ್ದು, ಅವರನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಶಾರೀಕ್ ಇದೊಂದೇ ಕೃತ್ಯ ಎಸಗಿದ್ದರೆ ಯಾರೋ ಆತನ ಬ್ರೈನ್‌ವಾಶ್ ಮಾಡಿ, ಈ ಕೆಲಸ ಮಾಡಿಸಿರಬಹುದು ಎಂದು ಹೇಳಬಹುದಿತ್ತು. ಆದರೆ, ಪರಿಸ್ಥಿತಿ ಹಾಗಿಲ್ಲ. ಆತನೊಬ್ಬ ಶಂಕಿ ಉಗ್ರ ಎನ್ನಲು ಆತನ ಹಿನ್ನೆಲೆ, ಕೃತ್ಯ ಎಸಗುವ ವೇಳೆ ಆತ ತಾನೊಬ್ಬ ಹಿಂದೂ ಎಂಬಂತೆ ಕಾಣಿಸಿಕೊಳ್ಳಲು ಯತ್ನಿಸಿದ್ದು, ಸೋಟಕಗಳನ್ನು ಸಂಗ್ರಹಿಸಿಟ್ಟಿರುವುದು ಮುಂತಾದ ಸಾಕ್ಷ್ಯಗಳಿವೆ.

ಭಯೋತ್ಪಾದಕ ಕೃತ್ಯ ಎಸಗಲು ಪ್ರಯತ್ನಿಸಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದ ಆರೋಪಿಗಳ ಜತೆ ಆತನ ಒಡನಾಟ ಇದ್ದುದು ಸಾಬೀತಾಗಿದೆ. ಇಷ್ಟೆಲ್ಲಾ ಇದ್ದರೂ ಶಾರೀಕ್‌ನನ್ನು ಉಗ್ರ ಎಂದು ಹೇಗೆ ಹೇಳಿದರು ಎಂದು ಪ್ರಶ್ನಿಸುವ ಮೂಲಕ ಆತನ ಪರ ವಕಾಲತು ವಹಿಸುವಂತೆ ಮಾತನಾಡಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಿ ಅವರು ಆಡಿರುವ ಮಾತು, ಮತ್ತೆ ಅದನ್ನು ಸಮರ್ಥಿಸಿ ಕೊಂಡಿರುವುದನ್ನು ಗಮನಿಸಿದಾಗ ಇದು ಭಯೋತ್ಪಾದನೆ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್‌ನ ನಿಲುವಾಗಿದೆ ಎಂದು ಹೇಳುವುದು ತಪ್ಪಲ್ಲ.

ಇದೀಗ ಬಿಜೆಪಿ ಮಾಡುತ್ತಿರುವುದೂ ಅದೇ ಕೆಲಸ. ಕಾಂಗ್ರೆಸ್ ಪಕ್ಷವು ಭಯೋತ್ಪಾದಕರ ಪರವಾದಿ ನಿಲುವು ಹೊಂದಿದೆ
ಎಂದು ಬಿಜೆಪಿ ನಾಯಕರು ಬೊಬ್ಬೆ ಹೊಡೆಯುತ್ತಿದ್ದಾರೆ. ಅಲ್ಲಿಗೆ ಈ ವರ್ಷಾರಂಭದಲ್ಲಿ ಹಿಜಾಬ್ ವಿವಾದ ಆರಂಭವಾದ ಬಳಿಕ ನಡೆದ ಧರ್ಮ ದಂಗಲ್‌ನಲ್ಲಿ ಯಾರ ಪರವೂ ನಿಲ್ಲದೆ, ಎರಡೂ ಕಡೆಯವರನ್ನು ಸಮರ್ಥವಾಗಿ ನಡೆಸಿಕೊಂಡು ಹೋಗಿದ್ದ ಡಿ.ಕೆ.ಶಿವಕುಮಾರ್ ಅವರ ಇಷ್ಟು ದಿನಗಳ ಪ್ರಯತ್ನ ನೀರಿನಲ್ಲಿ ಹೋಮ ಮಾಡಿದಂತಾಗಿದೆ.

ಕಾಂಗ್ರೆಸ್ ಮುಸ್ಲಿಮರ ಪರ ಎಂದಿದ್ದದ್ದು ಈಗ ಭಯೋತ್ಪಾದಕರ ಪರ ಎಂಬ ಟೀಕೆ ಎದುರಿಸುವಂತಾಗಿದೆ. ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಇಂತಹ ಸ್ಥಿತಿ ಎದುರಾಗುವುದು ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿರುವ ಪಕ್ಷದ ಪಾಲಿಗೆ ಉತ್ತಮ ಬೆಳವಣಿಗೆಯಂತೂ ಅಲ್ಲವೇ ಅಲ್ಲ. ಸಾಮಾನ್ಯವಾಗಿ ಪ್ರತಿಪಕ್ಷದಲ್ಲಿರುವವರಿಗೆ ಸರಕಾರ ನಡೆಸುತ್ತಿರುವವರ ವಿರುದ್ಧ ಆಡಳಿತ ವಿರೋಧಿ ಅಲೆ ಸೃಷ್ಟಿಸಲು ಸಾಕಷ್ಟು ಸರಕುಗಳಿರುತ್ತವೆ. ಅದೇ ರೀತಿ ಆಡಳಿತಾರೂಢ ಬಿಜೆಪಿ ವಿರುದ್ಧ ಕಾಂಗ್ರೆಸ್ ಅಂತಹ ಒಂದು ದೊಡ್ಡ ಪಟ್ಟಿಯನ್ನೇ ಹೊಂದಿತ್ತು. ಅದನ್ನು ಪಟ್ಟಾಗಿ ಹಿಡಿದು ಸಾಧಿಸುವ ಬದಲು ಧಾರ್ಮಿಕ ಭಾವನೆಗಳನ್ನು ಕೆರಳಿಸುವ, ಯಾವುದೋ ಒಂದು ಸಮುದಾಯದವರನ್ನು ಓಲೈಸುವಂತ ಹೇಳಿಕೆಗಳು ಅಗತ್ಯವಿರಲಿಲ್ಲ.

ಆದರೆ, ಅತಿಯಾದ ಉತ್ಸಾಹ ಡಿ.ಕೆ.ಶಿವಕುಮಾರ್ ಅವರಿಂದ ಅಂತಹ ತಪ್ಪು ನಡೆಯುವಂತೆ ನೋಡಿಕೊಂಡಿದೆ. ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ವಿರುದ್ಧ ಪ್ರಬಲ ಅಸ್ತ್ರಗಳಿಲ್ಲದೆ, ಆಡಳಿತ ವಿರೋಧಿ ಅಲೆಯಿಂದ ಹೊರಬರಲು ಪ್ರಯತ್ನಿಸುತ್ತಿದ್ದ ಬಿಜೆಪಿಗೆ ಇಂತಹ ತಪ್ಪೇ ಬೇಕಾಗಿತ್ತು. ಇದೀಗ ಡಿ.ಕೆ.ಶಿವಕುಮಾರ್ ಹೇಳಿಕೆ ಮುಂದಿಟ್ಟುಕೊಂಡು ಸ್ವಾತಂತ್ರ್ಯಾನಂತರ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ನಡೆದುಕೊಂಡ ರೀತಿ, ಭಯೋತ್ಪಾದಕರ ಪರ ಮೃದು ಧೋರಣೆ ತಳೆದಿರುವುದು, ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿರುವುದು ಮುಂತಾದ ಅಂಶಗಳನ್ನು ಇಟ್ಟುಕೊಂಡು ಭಯೋತ್ಪಾದಕರಿಗಾಗಿ ಕಾಂಗ್ರೆಸ್ ಈ ದೇಶವನ್ನು ಒತ್ತೆ ಇಡಲು ಸಿದ್ಧವಿದೆ ಎಂದು ಹೇಳುತ್ತಿದೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಉಗ್ರರ ಟೆಕ್ ಪಾರ್ಕನ್ನೇ ನಿರ್ಮಿಸಲಿದೆ ಎನ್ನುವ ಮೂಲಕ ಹಿಂದೂಗಳ ಮತಗಳನ್ನು ಕ್ರೋಢೀಕರಿಸಲು ಪ್ರಯತ್ನಿಸುತ್ತಿದೆ. ಸಾಮಾಜಿಕ ಜಾಲತಾಣದಲ್ಲಂತೂ ಕಾಂಗ್ರೆಸ್ ವಿರುದ್ಧ ಆರೋಪಗಳ ಸುರಿಮಳೆಗೈಯ್ಯು ತ್ತಿದೆ. ಕುಕ್ಕರ್ ಬಾಂಬ್ ಸೋಟ ಮತ್ತು ಆ ವಿಚಾರದಲ್ಲಿ ನಂತರ ನಡೆದ ಬೆಳವಣಿಗೆಗಳಿಂದ ಅದೆಷ್ಟರ ಮಟ್ಟಿಗೆ ಸರಕಾರದ
ವಿರುದ್ಧ ಇದ್ದ ಮತದಾರರ ಪಟ್ಟಿ ಅಕ್ರಮ, 40 ಪರ್ಸೆಂಟ್ ಕಮಿಷನ್ ಹಗರಣ ಮುಂತಾದ ಆರೋಪಗಳ ಗಂಭೀರತೆ
ಎಷ್ಟರ ಮಟ್ಟಿಗೆ ಕಡಿಮೆಯಾಗಿತ್ತೋ ಗೊತ್ತಿಲ್ಲ. ಆ ಪ್ರಕರಣ ಬಳಸಿಕೊಂಡು ಬಿಜೆಪಿ ತನ್ನ ವಿರುದ್ಧದ ಆರೋಪಗಳನ್ನು
ಭಾವನಾತ್ಮಕ ವಿಚಾರದ ಮೂಲಕ ಮರೆಮಾಚಲು ಪ್ರಯತ್ನಿಸಿದ್ದು ನಿಜವೇ, ಸುಳ್ಳೇ ಎಂಬುದು ತಿಳಿದಿಲ್ಲ.

ಆದರೆ, ಆ ಎರಡೂ ಪ್ರಕರಣಗಳಿಂದ ಆದ ಆಘಾತದಿಂದ ಹೊರಬರಲು ಬಿಜೆಪಿಗೆ ಡಿ.ಕೆ.ಶಿವಕುಮಾರ್ ಹೇಳಿಕೆಯಿಂದ
ಒಂದಷ್ಟು ಶಕ್ತಿ ಸಿಕ್ಕಿರುವುದಂತೂ ಖಚಿತ. ಹಿಂದೂ ಮತಗಳನ್ನು ಕ್ರೋಢೀಕರಿಸಲು ಸೂಕ್ತ ವಿಚಾರವೊಂದು ಇದರಿಂದ
ಸಿಕ್ಕಿದಂತಾಗಿದೆ. ಬೆಳಗಾವಿ ಅಧಿವೇಶನದ ಬಳಿಕ ಎಲ್ಲಾ ಪಕ್ಷಗಳು ಮುಂಬರುವ ವಿಧಾನಸಭೆ ಚುನಾವಣೆಗೆ ಪೂರ್ಣ
ಪ್ರಮಾಣದಲ್ಲಿ ಸಿದ್ಧವಾಗುತ್ತವೆ. ಕಾಂಗ್ರೆಸ್ ಸರಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ಹೆಚ್ಚು ಮಾಡಲು ಪ್ರಯತ್ನಿಸಿದರೆ, ಅದೇ ಕಾಂಗ್ರೆಸ್ ನಾಯಕರು ಈ ಹಿಂದೆ ನೀಡಿದ್ದ ಹಿಂದೂಗಳು ಮತ್ತು ಹಿಂದುತ್ವದ ವಿರುದ್ಧ ನೀಡಿರುವ ಹೇಳಿಕೆಗಳ ಜತೆಗೆ ಶಂಕಿತ ಉಗ್ರನ ಪರ ಡಿ.ಕೆ.ಶಿವಕುಮಾರ್ ನೀಡಿದ ಹೇಳಿಕೆಗಳು ಬಿಜೆಪಿ ಪಾಲಿಗೆ ಚುನಾವಣೆಯ ಪ್ರಮುಖ ಅಸ್ತ್ರವಾಗುವು ದಂತೂ ಸಹಜ.

ಲಾಸ್ಟ್ ಸಿಪ್: ಎಲುಬಿಲ್ಲದ ನಾಲಿಗೆ ಹೇಗೆ ಬೇಕಾದರೂ ಹೊರಳಬಹುದು. ಆದರೆ, ಅದನ್ನು ನಿಯಂತ್ರಿಸುವ ಮೆದುಳು ಸ್ಥಿಮಿತದಲ್ಲಿರಬೇಕು ಅಷ್ಟೆ.