Sunday, 23rd June 2024

ಹತ್ತರ ಬೆನ್ನು ಹತ್ತಿದ ಕೈ-ಕಮಲ

ಮೂರ್ತಿಪೂಜೆ

ಹದಿನಾಲ್ಕು ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮತದಾನದ ನಂತರ ಕೈ ಮತ್ತು ಕಮಲ ಪಾಳಯಗಳಲ್ಲಿ ಆತ್ಮವಿಶ್ವಾಸ ಕಾಣಿಸಿಕೊಂಡಿದೆ.
ಕನಿಷ್ಠ ಹತ್ತು ಕ್ಷೇತ್ರಗಳಲ್ಲಿ ತಾವು ಗೆಲ್ಲುತ್ತೇವೆ ಎಂಬುದು ಈ ಪಾಳಯಗಳ ನಂಬಿಕೆ. ಅಂದ ಹಾಗೆ, ಚುನಾವಣೆ ನಡೆದ ಕ್ಷೇತ್ರಗಳಲ್ಲಿ ಹೂಡಿಕೆಯಾದ ಬಂಡವಾಳದ ಪ್ರಮಾಣ ಹಿಂದೆಂದಿಗಿಂತ ಹೆಚ್ಚಾದರೂ ಬಿಜೆಪಿ ಮೈತ್ರಿಕೂಟಕ್ಕೆ ಮೋದಿ ಅಲೆ, ಕಾಂಗ್ರೆಸ್ ಪಾಳಯಕ್ಕೆ ಗ್ಯಾರಂಟಿ ಅಲೆ ಪ್ಲಸ್ ಆಗಲಿದೆ
ಎಂಬ ವಿಶ್ವಾಸವಿದೆ.

ಬಿಜೆಪಿ ಪಾಳಯದ ಪ್ರಕಾರ, ಮತದಾನ ನಡೆದ ಹದಿನಾಲ್ಕು ಕ್ಷೇತ್ರಗಳ ಪೈಕಿ ಎಂಟು ಕ್ಷೇತ್ರಗಳಲ್ಲಿ ತಮಗೆ ಮತ್ತು ಎರಡು ಕ್ಷೇತ್ರಗಳಲ್ಲಿ ಜಾತ್ಯತೀತ ಜನತಾದಳಕ್ಕೆ ಗೆಲುವು ಸಿಗುವುದು ಪಕ್ಕಾ. ಈ ಪೈಕಿ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಶೋಭಾ ಕರಂದ್ಲಾಜೆ, ಸೆಂಟ್ರಲ್‌ನಲ್ಲಿ ಪಿ.ಸಿ.ಮೋಹನ್, ತುಮಕೂರಿನಲ್ಲಿ ವಿ.ಸೋಮಣ್ಣ, ಮೈಸೂರಿನಲ್ಲಿ ಯದುವೀರ ಒಡೆಯರ್ ಅವರು ಗೆಲ್ಲುವುದು ನಿಶ್ಚಿತ. ಇದೇ ರೀತಿ ಚಾಮರಾಜನಗರದಲ್ಲಿ ಬಾಲರಾಜ್, ಉಡುಪಿ-ಚಿಕ್ಕಮಗಳೂರಿನಲ್ಲಿ ಕೋಟ ಶ್ರೀನಿವಾಸ ಪೂಜಾರಿ, ಚಿಕ್ಕಬಳ್ಳಾಪುರದಲ್ಲಿ ಸುಧಾಕರ್ ಗೆಲ್ಲುವುದು ಗ್ಯಾರಂಟಿ.

ಇನ್ನು ಮಂಡ್ಯದಲ್ಲಿ ಜಾತ್ಯತೀತ ಜನತಾದಳದ ಎಚ್.ಡಿ.ಕುಮಾರಸ್ವಾಮಿ, ಕೋಲಾರದಲ್ಲಿ ಮಲ್ಲೇಶ್ ಬಾಬು ಗೆಲ್ಲುವುದು ಖಚಿತ. ಆದರೆ ಸಚಿವ ರಾಮಲಿಂಗಾರೆಡ್ಡಿ ಅವರ ಪುತ್ರಿ ಸೌಮ್ಯಾ ರೆಡ್ಡಿ ಸ್ಪರ್ಧಿಸಿರುವ ಬೆಂಗಳೂರು ದಕ್ಷಿಣ ಕ್ಷೇತ್ರ ಮತ್ತು ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಬಿಜೆಪಿಗೆ ಫಿಫ್ಟಿ-ಫಿಫ್ಟಿ ಚಾನ್ಸು ಇದೆ ಎಂಬುದು ಕಮಲ ಪಾಳಯದ ಲೆಕ್ಕಾಚಾರ. ಇದೇ ರೀತಿ ಕೈ ಪಾಳಯದ ಒಳಹೊಕ್ಕರೆ ಅಲ್ಲೂ ಬಂಪರ್ ಗೆಲುವಿನ ವಿಶ್ವಾಸ ಕಾಣುತ್ತದೆ. ಅದರ ಪ್ರಕಾರ, ಚಾಮರಾಜನಗರದಲ್ಲಿ ಸಚಿವ ಡಾ.ಮಹದೇವಪ್ಪ ಅವರ ಪುತ್ರ ಸುನೀಲ್ ಬೋಸ್ ಗೆಲ್ಲಲಿದ್ದರೆ, ಚಿತ್ರದುರ್ಗದಲ್ಲಿ ಬಿ.ಎನ್.ಚಂದ್ರಪ್ಪ, ಹಾಸನ ದಲ್ಲಿ ಶ್ರೇಯಸ್ ಪಟೇಲ್ ಗೆಲ್ಲುವುದು ಖಚಿತ.

ಚಿಕ್ಕಬಳ್ಳಾಪುರದಲ್ಲಿ ರಕ್ಷಾ ರಾಮಯ್ಯ, ಉಡುಪಿ-ಚಿಕ್ಕಮಗಳೂರಿನಲ್ಲಿ ಜಯಪ್ರಕಾಶ್ ಹೆಗ್ಡೆ, ಕೋಲಾರದಲ್ಲಿ ಗೌತಮ್ ಕುಮಾರ್ ಗೆಲ್ಲುವುದು ನಿಶ್ಚಿತ ವಾಗಿದ್ದು, ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಸೌಮ್ಯಾ ರೆಡ್ಡಿ, ಮಂಡ್ಯದಲ್ಲಿ ಸ್ಟಾರ್ ಚಂದ್ರು, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿ.ಕೆ.ಸುರೇಶ್ ಮತ್ತು ದಕ್ಷಿಣ ಕನ್ನಡದಲ್ಲಿ ಪದ್ಮರಾಜ್ ಗೆಲ್ಲುವುದು ನಿಕ್ಕಿ ಎಂಬುದು ಕೈ ಪಾಳಯದ ನಂಬಿಕೆ. ಹೀಗೆ ಉಭಯ ಪಾಳಯಗಳಲ್ಲಿ ಆತ್ಮವಿಶ್ವಾಸದ ಕಾವು ಹೆಚ್ಚಿದ್ದರೂ ಮತದಾನ ನಡೆದ ಬಹುತೇಕ ಕ್ಷೇತ್ರಗಳಲ್ಲಿ ಫಿಫ್ಟಿ-ಫಿಫ್ಟಿ ಪೊಸಿಷನ್ನಿನ ಕ್ಷೇತ್ರಗಳೇ ಹೆಚ್ಚು.

ಕರ್ನಾಟಕಕ್ಕೆ ದಲಿತ ಸಿಎಂ?: ಇನ್ನು ಲೋಕಸಭಾ ಚುನಾವಣೆಯ ಕಾವು ಮುಂದುವರಿದಿರುವಾಗಲೇ ಬಿಜೆಪಿ ಪಾಳಯದಿಂದ ಕುತೂಹಲಕಾರಿ ಸುದ್ದಿಯೊಂದು ಕೇಳಿ ಬರುತ್ತಿದೆ. ಅದರ ಪ್ರಕಾರ, ಚುನಾವಣೆಯ ನಂತರ ದಿಲ್ಲಿ ಗದ್ದುಗೆಯ ಮೇಲೆ ಮೋದಿ ನೇತೃತ್ವದ ಬಿಜೆಪಿ ಕೂರಲಿದ್ದು, ಅದರ ಬೆನ್ನಲ್ಲೇ ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರಕಾರ ಅಲುಗಾಡಲಿದೆ. ಹೀಗೆ ಸರಕಾರವನ್ನು ಅಲುಗಾಡಿಸಲು ರಾಜ್ಯ ಕಾಂಗ್ರೆಸ್‌ನ ಐವತ್ತಕ್ಕೂ ಹೆಚ್ಚು ಶಾಸಕರು ತಯಾರಾಗಿದ್ದು, ಈ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ. ಬಿಜೆಪಿ ಮೂಲಗಳ ಪ್ರಕಾರ, ಇದುವರೆಗೆ ಅಸಾಧ್ಯ ಎಂದುಕೊಂಡಿರುವ ಬೆಳವಣಿಗೆ ಪವಾಡ ಸದೃಶರೂಪದಲ್ಲಿ ಜರುಗಲಿದ್ದು ಆ ಮೂಲಕ ಕರ್ನಾಟಕದಲ್ಲಿ ಬಿಜೆಪಿ ಮೈತ್ರಿಕೂಟ ಸರಕಾರ ಅಸ್ತಿತ್ವಕ್ಕೆ ಬರಲಿದೆ. ಈ ಸರಕಾರದ ಚುಕ್ಕಾಣಿ ಯನ್ನು ದಲಿತ ನಾಯಕರೊಬ್ಬರು ಹಿಡಿಯಲಿದ್ದಾರೆ.

ಅರ್ಥಾತ್, ಕರ್ನಾಟಕ ಮೊಟ್ಟ ನೊದಲ ದಲಿತ ಮುಖ್ಯಮಂತ್ರಿಯನ್ನು ನೋಡಲಿದ್ದು ಆ ಮೂಲಕ ಯಾವ ಕೆಲಸ ಕಾಂಗ್ರೆಸ್‌ನಿಂದ ಸಾಧ್ಯವಾಗಿಲ್ಲವೋ ಅದನ್ನು ಬಿಜೆಪಿ ಮಾಡಿ ತೋರಿಸಲಿದೆ. ಅಂದ ಹಾಗೆ, ಈಗಾಗಲೇ ಜೆಡಿಎಸ್ ಜತೆಗಿನ ಮೈತ್ರಿಯಿಂದ ಹಳೆ ಮೈಸೂರು ಭಾಗದಲ್ಲಿ ಪಕ್ಷದ ಒಕ್ಕಲಿಗ ವೋಟ್
ಬ್ಯಾಂಕು ಬಲಿಷ್ಠವಾಗಿದೆ. ಇದೇ ಕಾಲಕ್ಕೆ ದಲಿತರೊಬ್ಬರನ್ನು ಮುಖ್ಯಮಂತ್ರಿ ಹುದ್ದೆಗೆ ತಂದರೆ ದಲಿತ ಮತಬ್ಯಾಂಕಿನ ಮೇಜರ್ ಶೇರು ಬಿಜೆಪಿಗೆ ದಕ್ಕುತ್ತದೆ ಎಂಬುದು ವರಿಷ್ಠರ ಲೆಕ್ಕಾಚಾರ. ಅಂದ ಹಾಗೆ, ಇದು ಎಷ್ಟರ ಮಟ್ಟಿಗೆ ಸಾಧ್ಯವಾಗಲಿದೆ ಎಂಬುದನ್ನು ಕಾದು ನೋಡಬೇಕಿದೆಯಾದರೂ ಕರ್ನಾಟಕದ ರಾಜಕಾರಣದಲ್ಲಿ ಘಟಸ್ಪೋಟ ಸಂಭವಿಸುವ ಸಾಧ್ಯತೆಗಳು ಇಲ್ಲದಿಲ್ಲ.

ಕೈ ಪಾಳಯದ ಲೇಟೆಸ್ಟು ನಂಬಿಕೆ: ಇನ್ನು ಕಾಂಗ್ರೆಸ್ ಪಾಳಯದ ಲೇಟೆಸ್ಟು ನಂಬಿಕೆಯ ಪ್ರಕಾರ, ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸ್ವಯಂ ಬಲದ ಮೇಲೆ ಅಧಿಕಾರಕ್ಕೆ ಬರುವುದಿಲ್ಲ. ಹೀಗಾಗಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರಕ್ಕೆ ಯಾವ ಅಪಾಯವೂ ಇಲ್ಲ. ಕಳೆದ ಲೋಕಸಭಾ
ಚುನಾವಣೆಯಲ್ಲಿ ಬಿಜೆಪಿಗೆ ಸಿಂಹಪಾಲು ನೀಡಿದ್ದ ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ, ರಾಜಸ್ತಾನ, ಮಹಾರಾಷ್ಟ್ರ, ಕರ್ನಾಟಕ ರಾಜ್ಯಗಳಲ್ಲಿ ಈ ಸಲ ಕಮಲದ ಗಳಿಕೆ ಕುಗ್ಗಲಿದೆ. ಆ ಮೂಲಕ ೨೨೦ರಿಂದ ೨೪೦ ಸೀಟು ಪಡೆಯುವಷ್ಟರಲ್ಲಿ ಅದು ಸುಸ್ತಾಗಲಿದೆ. ಇಂಥ ಪರಿಸ್ಥಿತಿಯಲ್ಲಿ ಅದು ಸ್ವಯಂ ಬಲದ ಮೇಲೆ ಅಧಿಕಾರಕ್ಕೆ ಬರುವುದು ಕಷ್ಟ. ಒಂದು ವೇಳೆ ಮಿತ್ರಪಕ್ಷಗಳ ಬಲದೊಂದಿಗೆ ಅಧಿಕಾರ ಹಿಡಿದರೂ ಮೋದಿ ಅವರು ದೀರ್ಘಕಾಲ ಪ್ರಧಾನಿ ಯಾಗಿರುವುದಿಲ್ಲ.

ಹಾಗಾದಾಗ ಪ್ರಧಾನಿ ಹುದ್ದೆಗೇರಲು ಬಿಜೆಪಿಯ ಮತ್ತೊಬ್ಬ ಪವರ್ ಫುಲ್ ನಾಯಕ ಅಣಿಯಾಗಲಿದ್ದು, ಇದಕ್ಕೆ ಪೂರಕವಾಗಿ ಮಿತ್ರಪಕ್ಷಗಳ ಹಲವರ ಬೆಂಬಲ ಪಡೆಯಲು ಅದಾಗಲೇ ಅವರು ಅಣಿಯಾಗಿದ್ದಾರೆ ಎಂಬುದು ಕೈ ಪಾಳಯಕ್ಕಿರುವ ವರ್ತಮಾನ.

ಹೀಗೆ ಬಿಜೆಪಿಯ ಪರಿಸ್ಥಿತಿಯೇ ಡೋಲಾಯಮಾನವಾದರೆ ಅದು ಸಿದ್ದರಾಮಯ್ಯ ಸರಕಾರವನ್ನು ಅಲುಗಾಡಿಸುವುದು ಅಸಾಧ್ಯ ಎಂಬುದು ಕಾಂಗ್ರೆಸ್ ಪಾಳಯದ ನಂಬಿಕೆ. ಈ ಮಧ್ಯೆ ಕರ್ನಾಟಕದ ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಹನ್ನೆರಡರಿಂದ ಹದಿನೈದು ಸೀಟುಗಳನ್ನು ಗೆದ್ದರೆ ಪಕ್ಷ ಬಿಡಲು ಸಜ್ಜಾಗಿರುವ ಕಾಂಗ್ರೆಸ್ಸಿನ ಬಹುತೇಕ ಶಾಸಕರು ಹೆದರುತ್ತಾರೆ. ಆ ದೃಷ್ಟಿಯಿಂದಲೂ ರಾಜ್ಯ ಸರಕಾರಕ್ಕೆ ಅಪಾಯವಿಲ್ಲ ಎಂಬುದು ಅದರ ವಿಶ್ವಾಸ.

ಈಶ್ವರಪ್ಪ ಬೆನ್ನಿಗೆ ಡೆಡ್ಲಿ ಬ್ರಿಗೇಡ್: ಈ ಮಧ್ಯೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಣಕ್ಕೆ ಇಳಿದಿರುವ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಒಂದು ಲೆವೆಲ್ಲಿನ ಹವಾ ಎಬ್ಬಿಸಿದ್ದಾರೆ. ಯಡಿಯೂರಪ್ಪ ಪುತ್ರ ರಾಘವೇಂದ್ರ ಅವರನ್ನು ಸೋಲಿಸುವ ಗುರಿಯೊಂದಿಗೆ ಸ್ಪರ್ಧಿಸಿರುವ ಈಶ್ವರಪ್ಪ ಅವರ ಬಗ್ಗೆ, ಶುರುವಿನ ದಿನಗಳಲ್ಲಿದ್ದ ಭಾವನೆ ಕರಗತೊಡಗಿದೆ. ಶುರುವಿನಲ್ಲಿ ಈಶ್ವರಪ್ಪ ಅವರ ಸ್ಪರ್ಧೆಯ ಬಗ್ಗೆ ಮಾತನಾಡಿದರೆ, ‘ಯೇ, ಅವ್ರಿಗೆ ಇಪ್ಪತ್ತರಿಂದ
ಮೂವತ್ತು ಸಾವಿರ ವೋಟು ಬಂದ್ರೆ ಜಾಸ್ತಿ’ ಅಂತ ಕಾಂಗ್ರೆಸ್ ಮತ್ತು ಬಿಜೆಪಿ ಮೈತ್ರಿಕೂಟದ ನಾಯಕರು ಹೇಳುತ್ತಿದ್ದರು.

ಅಷ್ಟೇ ಅಲ್ಲ, ಜಾತಿವಾರು ಮತಗಳ ಲೆಕ್ಕಾಚಾರವನ್ನು ಮುಂದಿಟ್ಟು, ‘ಇದರಲ್ಲಿ ಯಾವ ಜಾತಿಗಳು ಈಶ್ವರಪ್ಪ ಅವರ ಪರವಾಗಿವೆ ಹೇಳ್ರೀ’ ಎನ್ನುತ್ತಿದ್ದರು.
ಆದರೆ ದಿನ ಕಳೆದಂತೆ ಈಶ್ವರಪ್ಪ ಅವರು ಜಾತಿಗಿಂತ ಧರ್ಮಾಧಾರಿತ ಮತಬ್ಯಾಂಕಿನ ಮೇಲೆ ಕಣ್ಣಿಟ್ಟಿರುವುದು ಸ್ಪಷ್ಟವಾಗಿದೆ. ಅವರ ಆಪ್ತರ ಪ್ರಕಾರ, ಈಶ್ವರಪ್ಪ ಅವರ ಪರ ಹೋರಾಡಲು ಹಲವು ತುಕಡಿಗಳಿದ್ದು ಇದರಲ್ಲಿ ಮೂವತ್ತು ಸಾವಿರಕ್ಕೂ ಅಧಿಕ ಯೋಧರಿದ್ದಾರೆ. ಈ ಪೈಕಿ ಮಾರಿಕಾಂಬಾ
ಮೈಕ್ರೋ ಫೈನಾನ್ಸ್‌ನ ಹತ್ತು ಸಾವಿರಕ್ಕೂ ಹೆಚ್ಚು ಮಂದಿ, ಓಂ ಶಕ್ತಿ ತುಕಡಿಯ ಹದಿನೆಂಟು ಸಾವಿರದಷ್ಟು ಮಂದಿ ಫೀಲ್ಡಿಗಿಳಿದಿದ್ದಾರೆ.

ಶಿವಮೊಗ್ಗ, ಶಿವಮೊಗ್ಗ ಗ್ರಾಮಾಂತರ ಮತ್ತು ಭದ್ರಾವತಿ ಕ್ಷೇತ್ರಗಳಲ್ಲಿ ಮಾರಿಕಾಂಬಾ ಹಾಗೂ ಓಂ ಶಕ್ತಿ ತುಕಡಿಗಳ ಎಫೆಕ್ಟು ಜಾಸ್ತಿ. ಅಂದ ಹಾಗೆ, ಪ್ರತಿ ವರ್ಷ ಈಶ್ವರಪ್ಪ ಅವರು ನೂರಿಪ್ಪತ್ತು ಬಸ್ಸುಗಳಲ್ಲಿ ಜನರನ್ನು ಓಂ ಶಕ್ತಿ ಕ್ಷೇತ್ರಕ್ಕೆ ಕಳಿಸುತ್ತಾರೆ. ಈಗ ಇದೇ ಜನ ಓಂ ಶಕ್ತಿ ತುಕಡಿಯಾಗಿ ಪರಿವರ್ತನೆ ಯಾಗಿದ್ದು ಚುನಾವಣೆಯಲ್ಲಿ ಡೆಡ್ಲಿ ಹೋರಾಟ ನಡೆಸುತ್ತಿದ್ದಾರೆ. ಇದೇ ರೀತಿ ಒಕ್ಕಲಿಗ ನಾಯಕರಾದ ಸಿ.ಟಿ.ರವಿ, ಪ್ರತಾಪ್ ಸಿಂಹ, ನಳೀನ್ ಕುಮಾರ್ ಕಟೀಲ್ ಅವರಿಗೆ ಬಿಜೆಪಿಯಿಂದ ಅನ್ಯಾಯವಾಗಿದ್ದು ಇದರಿಂದ ಕೆರಳಿರುವ ಭದ್ರಾವತಿ, ತೀರ್ಥಹಳ್ಳಿ ಭಾಗದ ಬಹುತೇಕ ಒಕ್ಕಲಿಗರು ಈಶ್ವರಪ್ಪ ಬೆನ್ನಿಗೆ ನಿಲ್ಲಲಿದ್ದಾರೆ.

ಇನ್ನು ಈಡಿಗರು ತಮ್ಮ ಜತೆಗಿದ್ದಾರೆ ಅಂತ ಕಾಂಗ್ರೆಸ್ಸಿನ ಗೀತಾ ಶಿವರಾಜ್‌ಕುಮಾರ್ ಮತ್ತವರ ಸಹೋದರ ಮಧು ಬಂಗಾರಪ್ಪ ಭಾವಿಸಿದ್ದರೂ, ಲಿಂಗಾಯತರು ತಮ್ಮ ಜತೆಗಿ ದ್ದಾರೆ ಅಂತ ರಾಘವೇಂದ್ರ ಭಾವಿಸಿದ್ದರೂ ಈ ವೋಟ್ ಬ್ಯಾಂಕಿನ ಮೇಜರ್ ಶೇರು ಈಶ್ವರಪ್ಪ ಅವರಿಗೆ ದಕ್ಕಲಿದೆ.
ಈ ಮಧ್ಯೆ ಬೈಂದೂರು, ಸೊರಬ, ಸಾಗರ ವಿಧಾನಸಭಾ ಕ್ಷೇತ್ರಗಳಲ್ಲಿ ಪರಿಸ್ಥಿತಿ ದಿನದಿಂದ ದಿನಕ್ಕೆ ಸುಧಾರಿಸುತ್ತಿದ್ದು, ಮ್ಯಾಚ್ ಫಿನಿಷರ್ಸ್ ಖ್ಯಾತಿಯ ಐನೂರು ಜನರ ತಂಡ ಒಂದೆರಡು ದಿನಗಳಲ್ಲಿ ಚಿಕ್ಕಮಗಳೂರಿನಿಂದ ಕ್ಷೇತ್ರಕ್ಕೆ ಬಂದಿಳಿಯಲಿದೆ.

ಉಳಿದಂತೆ ದಶಕಗಳ ಕಾಲದಿಂದ ಜಿಲ್ಲೆಯಲ್ಲಿ ಈಶ್ವರಪ್ಪ ಕಟ್ಟಿದ ಹಿಂದುತ್ವದ ಕೋಟೆ ನಿರ್ಣಾಯಕ ಘಟ್ಟದಲ್ಲಿ ಅವರ ಜತೆ ನಿಲ್ಲುತ್ತದೆ. ಹೀಗಾಗಿ ಈಶ್ವರಪ್ಪ ಗೆದ್ದರೆ ಅಚ್ಚರಿ ಪಡಬೇಕಾಗಿಲ್ಲ ಅಂತ ಅವರ ಆಪ್ತರು ಹೇಳುತ್ತಾರೆ. ಇದು ಎಷ್ಟರ ಮಟ್ಟಿಗೆ ನಿಜವಾಗುತ್ತದೆ ಎಂಬುದು ಕಾಲಕ್ಕೆ ಬಿಟ್ಟ
ವಿಚಾರ. ಆದರೆ ಕಾಂಗ್ರೆಸ್ ಮತ್ತು ಬಿಜೆಪಿಯಂತೆ ಜಾತಿ ಮತಬ್ಯಾಂಕಿನ ಗೊಡವೆಯಿಲ್ಲದೆ ಹೋರಾಡುತ್ತಿರುವ ಈಶ್ವರಪ್ಪ ಅವರ ಕಾನಿಡೆನ್ಸು ಮಾತ್ರ ನಿಜಕ್ಕೂ ದೊಡ್ಡದು.

ಕದಂಬರ ಸೈನ್ಯ ಕಾಗೇರಿಗೆ ಸಹಕರಿಸುತ್ತಿಲ್ಲ: ಈ ಮಧ್ಯೆ ಟೆರರ್ ಹಿಂದೂವಾದಿ ನಾಯಕ ಅನಂತಕುಮಾರ್ ಹೆಗಡೆ ಅವರಿಗೆ ಉತ್ತರ ಕನ್ನಡದ ಬಿಜೆಪಿ ಟಿಕೆಟ್ ತಪ್ಪಿತಲ್ಲ? ಇದರಿಂದಾಗಿ ಜಿಲ್ಲೆಯಲ್ಲಿ ಪ್ರಬಲವಾಗಿರುವ ಕದಂಬ ಸಾಮ್ರಾಜ್ಯ ಅಸಮಾಧಾನಗೊಂಡಿದೆಯಂತೆ. ಅಂದ ಹಾಗೆ, ಅನಂತಕುಮಾರ್ ಹೆಗಡೆ ಅವರು ಸ್ಪರ್ಧಿಸಿದಾಗಲೆಲ್ಲ ಜಿಲ್ಲೆಯಲ್ಲಿ ಪವರ್ ಫುಲ್ ಆಗಿರುವ ಕದಂಬ ಸ್ವಸಹಾಯ ಸಂಘದ ಸದಸ್ಯರು ಫೀಲ್ಡಿಗಿಳಿಯುತ್ತಿದ್ದರು. ಹೀಗೆ ಫೀಲ್ಡಿಗಿಳಿದವರು ಕ್ಷೇತ್ರದಾದ್ಯಂತ ಹರಡಿಕೊಳ್ಳುತ್ತಿದ್ದುದರಿಂದ ಅನಂತ ಕುಮಾರ್ ಹೆಗಡೆ ಅವರ ಗೆಲುವಿಗೆ ಅಗತ್ಯವಾದ ವಾತಾವರಣ ಬಹುಬೇಗ ಸೃಷ್ಟಿಯಾಗುತ್ತಿತ್ತು. ಆದರೆ ಈ ಸಲ ಕದಂಬರ ಸೈನ್ಯ ಬಿಜೆಪಿ ಅಭ್ಯರ್ಥಿ, ಮಾಜಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಪರವಾಗಿ ರಣಾಂಗಣಕ್ಕೆ ನುಗ್ಗಿಲ್ಲ ಎಂಬುದು ಸದ್ಯದ ಮಾಹಿತಿ.

ಹೀಗೆ ಕದಂಬ ಸಾಮ್ರಾಜ್ಯದ ಬೆಂಬಲವಿಲ್ಲದೆ ಹೋರಾಡುತ್ತಿರುವ ಕಾಗೇರಿ ಅವರಿಗೆ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಟಫ್ ಫೈಟು ಕೊಡುತ್ತಿರುವುದು ನಿಜ. ಹೀಗಾಗಿ ಗೆಲುವಿಗಾಗಿ ಹರಸಾಹಸ ಮಾಡುತ್ತಿರುವ ಕಾಗೇರಿ ಅವರಿಗೆ ಗೆಲುವು ದಕ್ಕಿಸಿಕೊಡಲು ಯಡಿಯೂರಪ್ಪ ಮತ್ತು ಮಾಜಿ ಸಚಿವ ವಿ.ಸುನೀಲ್ ಕುಮಾರ್ ಗರಿಷ್ಠ ಬೆಂಬಲ ನೀಡುತ್ತಿದ್ದಾರೆ. ಪರಿಣಾಮ? ಕದಂಬ ಸಾಮ್ರಾಜ್ಯದ ಅಸಹಕಾರದ ನಡುವೆಯೂ ಕಾಗೇರಿ ಅಲ್ಪ ಅಂತರದ ಗೆಲುವು ಸಾಧಿಸುತ್ತಾರೆ ಎಂಬುದು ಕಮಲ ಪಾಳಯದ ಲೆಕ್ಕಾಚಾರ.

Leave a Reply

Your email address will not be published. Required fields are marked *

error: Content is protected !!