Saturday, 7th September 2024

ಸೊಪ್ಪು ತಿಂದು ಬಂದ ಹಸುವಿನ ಹಾಲು ರುಚಿ !

ಶಶಾಂಕಣ

shashidhara.halady@gmail.com

ಸೊಪ್ಪಿನ ಅಣೆ ಮತ್ತು ಹರನಗುಡ್ಡ – ಈ ಎರಡು ತಾಣಗಳು ನಮ್ಮ ಹಳ್ಳಿಯ ಜನರ ಮೇಲೆ, ಅವರ ದಿನಚರಿಯ ಮೇಲೆ ಬೀರಿದ ಪರಿಣಾಮವನ್ನು ಸುಲಭದಲ್ಲಿ ಲೆಕ್ಕ ಹಾಕಲು ಸಾಧ್ಯವಿಲ್ಲ. ಈ ಎರಡೂ ಜಾಗಗಳು, ಅವುಗಳ ಸುತ್ತಲಿನ ಕಾಡು ಪ್ರದೇಶವು ಜನರಿಗೆ ನೀಡಿದ ಸೊಪ್ಪು, ಸೌದೆ, ಕರಡ, ಹುಲ್ಲು, ದನ ಮೇಯಿಸಲು ಜಾಗ ಇವೆಲ್ಲವನ್ನೂ ಹಣದ ಲೆಕ್ಕದಲ್ಲಿ ಕೂಡಿದರೆ, ಅದೆಷ್ಟು ಮೌಲ್ಯವಾಗಬಹುದೋ ತಿಳಿಯದು. ಕೃಷಿಯೇ ಪ್ರಧಾನವಾಗಿದ್ದ ದಿನಗಳಲ್ಲಿ ನಮ್ಮ ಹಳ್ಳಿಯ ಜನರು ಇಂತಹ ಜಾಗಗಳ ಮೇಲೆ ಬಹಳವಾಗಿ ಅವಲಂಬಿತವಾಗಿದ್ದಂತೂ ಸತ್ಯ.

ಹಾಗೆ ನೋಡಿದರೆ, ನಮ್ಮ ಮನೆ ಎದುರು ಎಲ್ ಆಕಾರಲ್ಲಿ ಹರಡಿದ್ದ ಎರಡು ಕಿ.ಮೀ. ಉದ್ದದ ಗದ್ದೆ ಬೈಲಿಗೆ ಹೋಲಿಸಿದರೆ, ಹರನ ಗುಡ್ಡ ಮತ್ತು ಸೊಪ್ಪಿನ ಅಣೆಗಳಂತಹ ಜಾಗಗಳು, ಗುಡ್ಡಗಾಡು ಪ್ರದೇಶ ಎನಿಸಿದ್ದು, ತೀರಾ ಕಡಿಮೆ ಮೌಲ್ಯದವು. ಆದರೆ, ಆ ಗುಡ್ಡಗಾಡು ಪ್ರದೇಶಗಳು ನೀಡುತ್ತಿದ್ದ ಬೆಂಬಲ ದಿಂದಾಗಿಯೇ, ನಮ್ಮ ಮನೆ ಎದುರಿನ ಗದ್ದೆಯಲ್ಲಿ ಸಾಕಷ್ಟು ಬತ್ತ ಬೆಳೆಯುತ್ತಿತ್ತು, ಅದನ್ನು ನಾವು ಊಟ ಮಾಡುತ್ತಿದ್ದೆವು! ಈ ಗುಡ್ಡಗಾಡು ಪ್ರದೇಶದಲ್ಲಿ ದೊರೆಯುವ ಸೊಪ್ಪು, ಸೌದೆಗಳೇ ಗೊಬ್ಬರ ತಯಾರಿಸಲು, ಅಡುಗೆ ಮಾಡಲು ಅಗತ್ಯ ಮೂಲವಸ್ತುಗಳು.

ಬೆಳಗ್ಗೆ ಎದ್ದ ಕೂಡಲೇ, ನಮ್ಮ ಹಳ್ಳಿಯವರು ಮೊದಲು ಆರಂಭಿಸುತ್ತಿದ್ದ ಕೆಲಸವೆಂದರೆ, ಸೊಪ್ಪು ತರುವುದು! ಈಗ ನೆನಪಿಸಿ ಕೊಂಡರೆ ಅಚ್ಚರಿ ಎನಿಸುತ್ತದೆ – ಯಾವುದೇ ಆಲಸ್ಯ, ಸೋಮಾರಿತನ, ಬೇಸರ ತೋರದೇ, ಪ್ರತಿನಿತ್ಯ ಎರಡು ಹುರಿಹಗ್ಗ ಮತ್ತು ಒಂದು ಕತ್ತಿ ಹಿಡಿದು, ಮನೆಯಿಂದ ಒಬ್ಬರಾದರೂ ಸೊಪ್ಪು ತರಲು ಹೊರಡುತ್ತಿದ್ದರು. ಅದು ಸುಮಾರು ಒಂದರಿಂದ
ಒಂದೂವರೆ ಗಂಟೆಯ ಕೆಲಸ. ಹರನಗುಡ್ಡೆಗೋ, ಸೊಪ್ಪಿನ ಅಣೆಗೋ, ದೇವಸ್ಥಾನದ ಗುಡ್ಡೆಗೋ ಹೋಗಿ, ಅಲ್ಲಿನ ಪೊದೆ ಗಳಿಂದ ಒಂದೊಂದೇ ಎಂಕಲು, ಗೊಂಚಲು ಸೊಪ್ಪು ಕೊಯ್ದು, ಅದನ್ನು ಎರಡು ಹಗ್ಗಗಳಿಂದ ಕಟ್ಟು ಮಾಡು, ತಲೆಯ
ಮೇಲೆ ಹೊತ್ತು ಮನೆಗೆ ತರುವ ಪರಿಪಾಠ. ಆ ಸೊಪ್ಪಿನ ಹೊರೆಯನ್ನು ತಲೆಯ ಮೇಲೆ ಇಟ್ಟುಕೊಳ್ಳುವುದು ಸಹ ಒಂದು ಲಲೆ. ಮನೆಗೆ ತಂದ ಸೊಪ್ಪನ್ನು, ಗಂಟಿ ಕಟ್ಟುವ ಹಟ್ಟಿಯಲ್ಲಿ ಹರಡುತ್ತಿದ್ದರು.

ನಮ್ಮ ಮನೆಯಲ್ಲಿ ಸಾಮಾನ್ಯವಾಗಿ ಆರರಿಂದ ಎಂಟು ‘ಬಾಲ್’ ಗಂಟಿ ಇರುತ್ತಿದ್ದವು; ಜತೆಗೆ ಎರಡು ಕೋಣಗಳು. ಅವು ವಾಸಿಸುವ ಹಟ್ಟಿಯ ತುಂಬಾ ಪ್ರತಿ ದಿನ ಸೊಪ್ಪನ್ನು ಹರಡಲೇಬೇಕು. ಬೇಸಗೆಯ ತಿಂಗಳುಗಳಲಗಲ್ಲಿ, ಹಾಡಿಗುಡ್ಡಗಳಲ್ಲಿ
ಸೊಪ್ಪು ಸಿಗದೇ ಇದ್ದಾಗ, ಒಣಗಿದ ದರಲೆಯನ್ನು ಹರಡುವ ಕ್ರಮ. ಆಗ ತಾನೇ ಕುಯ್ದು ತಂದ ಸೊಪ್ಪನ್ನು ಹರಡಿದರೆ, ಹಸು ಕರುಗಳಿಗೆ ಬಹಳ ಖುಷಿ; ಸಂತಸದಿಂದ ಅದರ ಮೇಲೆ ಮಲಗಿ, ಆಸ್ವಾದಿಸುತ್ತಿದ್ದವು. ದಿನವಿಡೀ ಆ ಸೊಪ್ಪಿನ ಮೇಲೆ ಕಳೆಯುವ ಅವು, ಅದನ್ನು ಒಂದು ಪದರ ಗೊಬ್ಬರವನ್ನಾಗಿ ಪರಿವರ್ತಿಸುತ್ತಿದ್ದವು. ಇದೇ ರೀತಿ ಪ್ರತಿದಿನ ಸೊಪ್ಪನ್ನು ಹರಡಿ, ಹರಡಿ, ಎರಡ ರಿಂದ ಮೂರು ವಾರಗಳಲ್ಲಿ ಹಟ್ಟಿಯ ನೆಲವೇ ನಾಲ್ಕು ಅಡಿ ಎತ್ತರವಾಗುತ್ತದೆ!

ಅದಷ್ಟೂ ಒಳ್ಳೆಯ ಸೊಪ್ಪಿನ ಗೊಬ್ಬರ. ‘ಗೊಬ್ಬರ ತೆಗೆಯುವ’ ಕೆಲಸಕ್ಕೆ ಒಂದು ದಿನ ನಿಗದಿ ಮಾಡಿ, ನಾಲ್ಕಾರು ಜನ ಆ
ಗೊಬ್ಬರವನ್ನು ಕಣ್‌ಹೆಡಿಗೆಯಲ್ಲಿ ತುಂಬಿ, ಗದ್ದೆಗೆ ಸಾಗಿಸುವುದು ಒಂದು ದೊಡ್ಡ ಕೆಲಸ. ಹಸಿರು ಎಲೆಗಳ ಆ ಗೊಬ್ಬರವನ್ನು ಗದ್ದೆಯ ಒಂದು ಮೂಲೆಯಲ್ಲಿ ರಾಶಿಮಾಡಿ, ನಾಟಿ ಮಾಡುವಾಗ ಬಳಸುತ್ತಿದ್ದರು. ಆ ಗೊಬ್ಬರವನ್ನು ಹೀರಿ ಬೆಳೆದ ಅಕ್ಕಿಯನ್ನೇ ತಾನೆ ನಾವು ತಿನ್ನುವುದು! ಸೊಪ್ಪಿನ ಅಣೆ ಪ್ರದೇಶದ ಗಿಡ ಮರಗಳಲ್ಲಿ ಬೆಳೆದ ಸೊಪ್ಪು, ಈ ರೀತಿ ನಮ್ಮ ಜಠರ ಸೇರುವ ಪ್ರಕ್ರಿಯೆಯು ಒಂದು ಪುಟ್ಟ ವಿಸ್ಮಯವಲ್ಲವೆ!

ಸೊಪ್ಪಿನ ಅಣೆಗೆ ನಮ್ಮ ಮನೆಯಿಂದ ಸುಮಾರು ಒಂದೂವರೆ ಕಿ.ಮೀ. ದೂರ. ಅಣೆ ಎಂದರೆ ಪುಟ್ಟ ಬೆಟ್ಟ ಎಂದರ್ಥ; ಆ ಅಣೆಯ ತುಂಬಾ ನಾನಾ ಪ್ರಭೇದದ ದೊಡ್ಡ ಸಣ್ಣ ಮರಗಳಿದ್ದವು; ಅವು ಸಾಕಷ್ಟು ದಟ್ಟವಾಗಿಯೂ ಬೆಳೆದಿದ್ದವು. ಅದೆಷ್ಟೋ
ವರ್ಷಗಳಿಂದ ಆ ಮರಗಳನ್ನು ಕಡಿದಿರಲಿಲ್ಲ; ಕಡಿಯುವಂತೆಯೂ ಇರಲಿಲ್ಲ. ಅದು ಸರಕಾರದ ಆಸ್ತಿ; ಆದರೆ, ನಮ್ಮ ಹಳ್ಳಿಯ ರೈತರು ಅಲ್ಲಿಂದ ಸೊಪ್ಪನ್ನು ಕುಯ್ದು ತರುವ ಅವಕಾಶವಿತ್ತು.

ಸೊಪ್ಪಿನ ಅಣೆಯ ದಟ್ಟ ಮರಗಳ ಅಡಿ ನಡೆಯುವ ಅನುಭವವೇ ವಿಶಿಷ್ಟ, ಆಪ್ತ. ಆ ಅಣೆಯ ತುದಿಯಲಿ ಹತ್ತಾರು ಮುರಕಲ್ಲು ಗಳು ಆನೆಗಳಂತೆ ಬಿದ್ದಿದ್ದವು. ದೊಡ್ಡಗಾತ್ರದ ಆ ಮುರಕಲ್ಲಿನ ಸುತ್ತಲೂ, ಬೋಗಿ ಮೊದಲಾದ ಮರಗಳು ಬೃಹದಾಕಾರವಾಗಿ ಬೆಳೆದಿದ್ದು, ಹಗಲಿನಲ್ಲೂ ನಸುಗತ್ತಲೆಯ ಪ್ರದೇಶ ಎನಿಸಿತ್ತು. ಮುರಕಲ್ಲುಗಳು ಹರಡಿದ್ದ ರೀತಿ ಹೇಗಿತ್ತೆಂದರೆ, ಅವುಗಳ ನಡುವೆ ಸಣ್ಣ ಗುಹೆಯಂತಹ ರಚನೆ ನಿರ್ಮಾಣವಾಗಿತ್ತು. ಅಲ್ಲಿ ಬಹು ಹಿಂದೆ ಹುಲಿಗಳು ವಾಸವಾಗಿದ್ದವಂತೆ ಮತ್ತು ಅಲ್ಲಿಗೆ ಮೇಯಲು
ಹೋಗಿದ್ದ ಹಸುಗಳನ್ನು ಹಿಡಿಯುತ್ತಿದ್ದವಂತೆ.

ಆದರೆ ನಾವು ಕಂಡಂತೆ ಅಲ್ಲಿ ಹುಲಿಗಳಿರಲಿಲ್ಲ, ಅವು ಬಹು ಹಿಂದೆಯೇ ನಮ್ಮೂರಿನಿಂದ ನಾಮಾವಶೇಷವಾಗಿದ್ದವು. ಆದ್ದರಿಂದ ಸೊಪ್ಪಿನ ಅಣೆಯ ಮರಗಳ ನೆರಳಿನಲ್ಲಿ, ಅದರ ತುದಿಯ ಮುರಕಲ್ಲಿನ ರಚನೆಯ ಸುತ್ತ ಮುತ್ತ ಓಡಾಡುವುದೆಂದರೆ ನಮಗೆ ಭಯವಿರಲಿಲ್ಲ; ಬದಲಿಗೆ ಅದೊಂದು ಖುಷಿಯ ಆಪ್ತ ಅನುಭವ. ಸೊಪ್ಪಿನ ಅಣೆಯು ಸಾಕಷ್ಟು ಎತ್ತರವಿದ್ದುದರಿಂದ, ಅದರ ತುದಿಯಲ್ಲಿ ನಿಂತರೆ ಸುಂದರ ಭೂದೃಶ್ಯವನ್ನು ನೋಡಬಹುದು.

ಅದರಲ್ಲೂ ಮುಖ್ಯವಾಗಿ, ನಮ ಹಳ್ಳಿಯಿಂದ ಸುಮಾರು ೨೦ ಕಿ.ಮೀ. ದೂರದಲ್ಲಿದ್ದ ಆಗುಂಬೆ- ಸೋಮೇಶ್ವರ ಸನಿಹದ ಸಹ್ಯಾದ್ರಿ ಶ್ರೇಣಿಯು ಅಲ್ಲಿಂದ ನಯನಮನೋಹರವಾಗಿ ಕಾಣಿಸುತ್ತಿತ್ತು. ಉದ್ದಕ್ಕೂ ಸಾಗಿ ಹೋಗಿದ್ದ ಪಶ್ಚಿಮಘಟ್ಟಗಳ
ಗೋಡೆಯಂತಹ ಆ ರಚನೆಯು ದಕ್ಷಿಣ ತುದಿಯಲ್ಲಿ ಅಜಿಕುಂಜ ಮೇಲೇರಿತ್ತು, ಉತ್ತರ ತುದಿಯಲ್ಲಿ ಕೊಡಚಾದ್ರಿಯ ಶಿಖರ. ನಡುವೆ ಆ ಪರ್ವತ ಶ್ರೇಣಿಯುದ್ದಕ್ಕೂ ಅಲ್ಲಲ್ಲಿ ಧುಮುಕುವ ಜಲಪಾತಗಳ ನೋಟ! ಅದೆಷ್ಟು ಸುಂದರ!

ಅಲ್ಲಿಂದ ಸ್ಪಷ್ಟವಾಗಿ ಕಾಣಿಸುತ್ತಿದ್ದ ಆ ಮಲೆಗಳ ಸಾಲು, ನಡುನಡುವೆ ನೆಗೆವ ಬಿಳಿಯ ಜಲಧಾರೆ ಎಲ್ಲವೂ ಈಗ ಕಣ್ಣಿಗೆ ಕಟ್ಟಿದಂತಿದೆ. ಈಗ ಇಂತಹ ಸುಂದರ ಓಟ ಪೂರ್ತಿಯಾಗಿ ಕಾಣಿಸುವುದು ತುಸು ದುರ್ಲಭ; ಘಟ್ಟಗಳೂ ಅಲ್ಲೇ ಇವೆ, ಸೊಪ್ಪಿನ
ಅಣೆಯೂ ಅಲ್ಲೇ ಇದೆ, ಆದರೆ ಇಂದಿನ ವಾತಾವರಣದಲ್ಲಿ ಕಲ್ಮಶ, ದೂಳು ತುಂಬಿದೆ; ಆದ್ದರಿಂದ ಅಲ್ಲಿನ ಘಟ್ಟಶ್ರೇಣಿಯ ಮಸುಕು ನೋಟ ಮಾತ್ರ ಕಾಣಸಿಗುತ್ತದೆ.

ಸೊಪ್ಪಿನ ಅಣೆ ಸುತ್ತ ಮುತ್ತಲಿನ ಹಲವು ಗುಡ್ಡಪ್ರದೇಶದಿಂದ ಸೊಪ್ಪು ಕೊಯ್ದು ತರುವುದು ನಮ್ಮ ಹಳ್ಳಿಯ ಜನರ ದಿನನಿತ್ಯದ ಮೊದಲ ಕಾಯಕವಾಗಿತ್ತು ಎಂದೆನಲ್ಲ – ಈ ರೀತಿ ಸೊಪ್ಪು ಕೊಯ್ದು ಕೊಯ್ದು, ಸೊಪ್ಪಿನ ಅಣೆಯ ಎದುರಿದ್ದ ಒಂದು ಗುಡ್ಡವು ಪೂರ್ತಿ ಬೋಳಾಗಿತ್ತು. ಆದ್ದರಿಂದ ಅದನ್ನು ‘ಬೋಳುಗುಡ್ಡ’ ಎಂದೇ ಕರೆಯುವ ವಾಡಿಕೆ. ಇವೆಲ್ಲವೂ ಸರಕಾರದ ಒಡೆತನದ ಜಾಗ; ಆದ್ದರಿಂದ, ಕಳೆದ ಒಂದೆರಡು ದಶಕಗಳಲ್ಲಿ ಬೋಳುಗುಡ್ಡದ ಕೆಲವು ಭಾಗಗಳಲ್ಲಿ ಕೆಲವರು ಗುಡಿಸಲು, ಪುಟ್ಟ ಮನೆ
ಕಟ್ಟಿಕೊಂಡಿದ್ದಾರೆ; ದರಖಾಸ್ತು ಒಡೆತನಕ್ಕಾಗಿ ಅರ್ಜಿಸಲ್ಲಿಸಿದ್ದಾರೆ.

ಆದರೆ, ಸೊಪ್ಪಿನ ಅಣೆಯಲ್ಲಿ ತುಂಬಿದ್ದ ಕಾಡು ಈಗಲೂ ಸಾಕಷ್ಟು ಉಳಿದಿದೆ, ಹಸಿರಿನ ಕ್ಯಾನೊಪಿ ಅಲ್ಲಲ್ಲಿ ಜೀವ ಹಿಡಿದು ನಿಂತಿದೆ. ಈಗ ಜನರು ಗಂಟಿ ಕಟ್ಟು ಹಟ್ಟಿಗೆ ಸೊಪ್ಪು ಹರಡುವ ಪರಿಪಾಠವನ್ನು ಕೈಬಿಟ್ಟಿರುವುದರಿಂದಾಗಿ, ಅಷ್ಟರ ಮಟ್ಟಿಗೆ ಗಿಡ ಮರಗಳು ಬಚಾವಾಗಿವೆ. ಸೊಪ್ಪಿನ ಅಣೆ ಇದ್ದದ್ದು ನಮ್ಮ ಮನೆಯ ಪಶ್ಚಿಮ ದಿಕ್ಕಿನಲ್ಲಿ. ಅಲ್ಲಿಗೆ ಹೋಗಲು ಗುಡ್ಡದಲ್ಲೇ ಸಾಗುವ
ದಾರಿಯಿತು. ಇದಕ್ಕೆ ವಿರುದ್ಧ ದಿಕ್ಕಿನಲ್ಲಿ, ಅಂದರೆ ನಮ್ಮ ಮನೆಯಿಂದ ಪೂರ್ವ ದಿಕ್ಕಿನಲ್ಲಿ ಹರನಗುಡ್ಡೆಯಿದೆ.

ಮೊದಲು ಅರ್ಧ ಕಿ.ಮೀ. ದೂರವನ್ನು ಗದ್ದೆ ಬೈಲಿನ ನಡುವೆ ನಡೆದು, ಒಂದು ತೋಡು ದಾಟಿ, ಹರನಗುಡ್ಡೆಗೆ ಸಾಗಬೇಕು. ಗದ್ದೆ
ಬೈಲು ದಾಟಿದ ತಕ್ಷಣ, ಹಾಡಿ, ಗುಡ್ಡದ ಏರು ದಾರಿ. ಅದನ್ನು ಹತ್ತಿ ಹೋಗಲು, ಸುಮಾರು ನಾನೂರು ವರ್ಷಗಳ ಹಿಂದೆ ಒಬ್ಬ ಮಹಿಳೆ ಕಟ್ಟಿಸಿದ ಮುರಕಲ್ಲಿನ ಮೆಟ್ಟಿಲುಗಳಿವೆ! ಹಾಡಿಯ ನಡುವೆ ಏರಿಕೊಂಡು ಸಾಗಿದ್ದ ಆ 120 ಮೆಟ್ಟಿಲುಗಳನ್ನು ಏರುತ್ತಾ ಹೋದಂತೆ, ಹಾಡಿ ದಟ್ಟವಾಗುತ್ತಾ ಸಾಗುತ್ತದೆ; ಬೋಗಿ, ದೂಪ ಮೊದಲಾದ ಪರಿಚಿತ ಮರಗಳ ಜತೆ ಹಲವು ಅಪರೂಪದ ಮರಗಳೂ ಅಲ್ಲಿ ಒತ್ತೊತ್ತಾಗಿ ಬೆಳೆದಿವೆ. ಅಲ್ಲಿನ ನಡುವಿನ ಒಂದೊಂದು ಭಾಗ ಹಗಲಿನಲ್ಲೂ ನಸುಗತ್ತಲಿನ ಛಾಯೆ ಹೊಂದಿದೆ. ಈ ಹರನ ಗುಡ್ಡ ಸಹ ಸರಕಾರದ ಒಡೆತನದಲ್ಲಿದ್ದುದರಿಂದ, ಸೊಪ್ಪು ಕೊಯ್ಯಲು, ಮಿತ ಪ್ರಮಾಣದ ಸೌದೆ ತರಲು ಅವಕಾಶವಿತ್ತು.

ನಮ್ಮ ಹಳ್ಳಿಯ ಬಹುಪಾಲು ಜನರು ಇಲ್ಲಿಂದ ಸೊಪ್ಪು, ಸೌದೆಯನ್ನು ತಲೆಯ ಮೇಲೆ ಹೊತ್ತು ತಂದವರೇ. ಆದರೆ, ಈಗ
ಬಾಚುಹಟ್ಟಿ ಮತ್ತು ಗ್ಯಾಸ್ ಒಲೆ ಬಂದಿರುವುದರಿಂದ, ಅಷ್ಟರ ಮಟ್ಟಿಗೆ ಇಲ್ಲಿಂದ ಸೊಪ್ಪು, ಸೌದೆ ಸಂಗ್ರಹ ಕಡಿಮೆಯಾಗಿದೆ.
ಹರನಗುಡ್ಡೆ ಏರುವ ಮೆಟ್ಟಿಲುಗಳ ಸುತ್ತಲೂ ದಟ್ಟವಾದ ಹಾಡಿಯಿದ್ದರೆ, ಅಲ್ಲಿಂದ ಕೆಲವೇ ನೂರು ಹೆಜ್ಜೆ ನಡೆದರೆ, ಒಮ್ಮೆಗೇ
ಬೆಳಾರವಾಗುತ್ತದೆ, ಸೂರ್ಯನ ದರ್ಶನವಾಗುತ್ತದೆ; ಒಂದೆರಡು ಕಿ.ಮೀ. ತನಕ ಹಬ್ಬಿದ ಬ್ಯಾಣ ಎದುರಾಗುತ್ತದೆ. ಮಳೆ ಬಿದ್ದು ಒಂದೆರಡು ವಾರ ಕಳೆದ, ಆ ಪ್ರದೇಶಕ್ಕೆ ಬಂದರೆ, ಕಣ್ಣು ಹಾಯುವ ತನಕ ಹಸಿರು ಹುಲ್ಲು ಬೆಳೆದ ವಿಶಾಲ ಪ್ರದೇಶದ ಸುಂದರ ನೋಟ. ಅಲ್ಲೆಲ್ಲಾ ಬೆಳೆದಿದ್ದ ಹಸಿರು ಹುಲ್ಲನ್ನು ಹಸು ಕರುಗಳು ಸಂತಸದಿಂದ ತಿನ್ನುವ ನೋಟವೇ ಅನನ್ಯ. ಈ ಹಸಿರು ಬೆಳೆದ ಬಯಲು, ಹರನಗುಡ್ಡದ ವಿಶೇಷ.

ಆ ವಿಶಾಲ ಪ್ರದೇಶದಲ್ಲಿ ಅಲ್ಲಲ್ಲಿ ಒಂದೊಂದು ಮರಗಳು, ಪೊದೆಗಳಿದ್ದರೂ, ಬಹುಭಾಗದಲ್ಲೆಲ್ಲಾ ಹಸಿರಿನ ಹಚ್ಚಡದ ಹೊದಿಕೆ.
ಈ ಹುಲ್ಲುಗಾವಲಿನ ಹುಲ್ಲನ್ನು ಹಸುಕರುಗಳು ಸಾಕಷ್ಟು ಮೇಯುತ್ತವೆ. ಆದರೂ ಹುಲ್ಲು ಪೂರ್ತಿ ಖಾಲಿಯಾಗದು. ನವೆಂಬರ್ ಬಂದರೆ ಈ ಹುಲ್ಲು ‘ಕರಡ’ವಾಗಿ ಬದಲಾಗುತ್ತದೆ. ಒಂದರಿಂದ ಎರಡು ಅಡಿ ಎತ್ತರ ಬೆಳೆಯುವ, ಹೊಳೆವ ಬೂದಿ ಬಣ್ಣದ
ಕರಡವು ಗಾಳಿಗೆ ತೊನೆದಾಡುವ ನೋಟವು ಮೋಹಕ.

ಕರಡವನ್ನು ಕತ್ತರಿಸಿ, ಹೊರೆ ಮಾಡಿ ಮನೆಗೆ ಸಾಗಿಸುವುದು ಚಳಿಗಾಲದಲ್ಲಿ ನೋಡಬಹುದಾದ ಒಂದು ಚಟುವಟಿಕೆ. ಉದ್ದ
ಗಾತ್ರದ ಕರಡವನ್ನು ಒಣಗಿಸಿಟ್ಟು, ಮನೆಯ ಮಾಡಿಗೆ ಹೊದಿಸುವ ಪರಿಪಾಠ ಹಿಂದೆ ಇತ್ತು; ಒಣಗಿಸಿ, ಹಸುಗಳಿಗೆ ಆಹಾರ ವಾಗಿ ನೀಡುವ ಪದ್ಧತಿಯೂ ಇತ್ತು. ಹಂಚಿನ ಮಾಡು, ಆರ್‌ಸಿಸಿ ಛಾವಣಿ ಬಂದ ನಂತರ, ಕರಡವನ್ನು ಮನೆಗೆ ಹೊದಿಸುವ ಪದ್ಧತಿ ನಿಂತುಹೋಗಿದೆ.

ಅತ್ತ ನಾಟಿ ಹಸುಗಳು ಕಡಿಮೆಯಾಗಿ, ವಿದೇಶಿತಳಿಯ ಹಸುಗಳನ್ನು ಸಾಕಲು ಆರಂಭಿಸಿದ ನಂತರ, ಅವುಗಳಿಗೆ ಅಂಗಡಿ ಯಿಂದ ತರುವ ‘ಕ್ಯಾಟಲ್ ಫುಡ್’ ತೀರಾ ಅಗತ್ಯ ಎನಿಸಿದ್ದರಿಂದಾಗ, ಹಸುಗಳಿಗೆ ಕರಡ ತಿನ್ನಿಸುವ ಅಭ್ಯಾಸವೂ ನಮ್ಮೂರಿ ನಿಂದ ಮರೆಯಾಗಿದೆ. ಸೊಪ್ಪಿನ ಅಣೆಗೆ ಪ್ರತಿದಿನ ಮೇಯಲು ಹೋಗುತ್ತಿದ್ದ ಅಂದಿನ ನಾಟಿಹಸುಗಳ ಹಾಲಿನದ್ದೇ
ಒಂದು ವಿಶೇಷವಿದೆ. ಮಲೆನಾಡು ಗಿಡ್ಡ ಹಸುಗಳು ಹಾಲು ಕೊಡುವುದು ತೀರಾ ಸ್ವಲ್ಪ. ಆದರೆ, ಆ ಹಾಲು ಬಹು ರುಚಿ. ಅವು ಹರನಗುಡ್ಡದಂತಹ ಜಾಗದಲ್ಲಿ ಹಸಿರು ಹುಲ್ಲು, ವಿವಿಧ ಗಿಡಗಳ ಚಿಗುರುಗಳನ್ನು ತಿಂದ ನಂತರ, ಆ ಆಹಾರದ ಸತ್ವವು ಅವು ನೀಡುವ ಹಾಲಿನಲ್ಲಿ ಬೆರೆತಿರಲೇಬೇಕು. ಆದ್ದರಿಂದ ಸಿಹಿಸಿಹಿಯಾಗಿ, ರುಚಿರುಚಿಯಾಗಿ ಇರುತ್ತಿತ್ತು.

ಅಕಸ್ಮಾತ್ ಹಸುವು ಕಾಸಾನು ಕುಡಿ ತಿಂದು ಬಂದರೆ, ಆ ದಿನ ಸಂಜೆ ಕರೆಯುವ ಹಾಲಿನ ರುಚಿ ಸ್ಪಷ್ಟವಾಗಿ ಕಹಿ ಕಹಿ ಯಾಗಿರುತ್ತಿತ್ತು! ಮಲೆನಾಡು ಗಿಡ್ಡ ತಳಿಯ ಹಸುಗಳು ನೀಡುವ ಹಾಲಿನ ರುಚಿ, ಇಂದಿನ ವಿದೇಶಿ ಮೂಲದ ತಳಿಯ ಹಸುಗಳು ನೀಡುವ ಹಾಲಿನಲ್ಲಿಲ್ಲ; ಜತೆಗೆ, ಇಂದಿನ ಹಸುಗಳು ತಿನ್ನುವ ‘ಕ್ಯಾಟಲ್ ಫುಡ್’ನಲ್ಲಿ ಏನೇನು ಬೆರೆಸಿರುತ್ತಾರೋ, ಯಾರಿಗೆ ಗೊತ್ತು? ಆ ಫುಡ್‌ನ ರುಚಿಯು ಅದನ್ನು ತಿನ್ನುವ ಹಸುವಿನ ಹಾಲಿನಲ್ಲೂ ಬಂದೇ ಬರುತ್ತದೆ!

ಈ ಒಂದು ಜೀವನ ಪದ್ಧತಿ, ಕೃಷಿ ಪರಿಪಾಠವನ್ನು ಈಗೇಕೆ ನೆನಪಿಸಿಕೊಂಡೆನೆಂದರೆ, ಇಂದು ಈ ರೀತಿಯ ಜೀವನ ಪದ್ಧತಿ ನಮ್ಮ ಹಳ್ಳಿಯಲ್ಲಿ ಹೆಚ್ಚು ಕಡಿಮೆ ಮರೆತೇಹೋಗಿದೆ. ಸ್ಥಳೀಯ ತಳಿ ಎನಿಸಿರುವ, ರೋಗರುಜಿನುಗಳಿಗೆ ಪ್ರತಿರೋಧ ಶಕ್ತಿ ಹೊಂದಿದ್ದ ಮಲೆನಾಡು ಗಿಡ್ಡ ಹಸುಗಳು ವಿರಳವಾಗಿವೆ; ಬೆಳಗ್ಗೆ ಮತ್ತು ಸಂಜೆ ಸಮಯಕ್ಕೆ ಸರಿಯಾಗಿ ಪ್ಯಾಕೆಟ್‌ನಲ್ಲಿ ಸರಬರಾಜಾಗುವ ಹಾಲು ಕುಡಿಯುವುದು ಇಂದು ಸಾರ್ವತ್ರಿಕ ಎನಿಸಿದೆ.

ಹರನಗುಡ್ಡ, ಸೊಪ್ಪಿನ ಅಣೆಗಳಂತಹ ಪ್ರಾಕೃತಿಕ ತಾಣಗಳು, ಸಾವಿರಾರು ವರ್ಷಗಳಿಂದ ಹೊಂದಿದ್ದ ತಮ್ಮ ಸ್ವರೂಪವನ್ನು, ಕಳೆದ ಒಂದೆರಡು ದಶಕಗಳಲ್ಲಿ ಬದಲಿಸಿಕೊಂಡಿವೆ; ಮರಗಳ ದಟ್ಟಣೆಯೂ ಕಡಿಮೆಯಾಗಿದೆ. ಜತೆಗೆ ಇಂತಹ  ಜಾಗಗಳೆ ಲ್ಲವೂ ಇಂದಿನ ಆಧುನಿಕ ಮಾನವನ ಅಗತ್ಯ ಸೌಕರ್ಯಗಳಿಗೆ (ರಸ್ತೆ, ಸೈಟ್ ಇತ್ಯಾದಿ) ಈಡಾಗಲು ಕಾಯುತ್ತಿರುವಂತೆ ಅನಿಸುತ್ತಿದೆ.

error: Content is protected !!