ವಿದ್ಯಮಾನ
ವಿನಾಯಕ ವೆಂ. ಭಟ್ಟ, ಅಂಬ್ಲಿಹೊಂಡ
೧೯ ನವೆಂಬರ್ ೨೦೨೩ ರಂದು ಒಂದು ಲಕ್ಷ ಮೂವತ್ತು ಸಾವಿರಕ್ಕೂ ಹೆಚ್ಚು ಪ್ರೇಕ್ಷಕರು ಕುಳಿತುಕೊಳ್ಳುವ ಸಾಮರ್ಥ್ಯ ಹೊಂದಿರುವ ವಿಶ್ವದ ಅತಿ ದೊಡ್ಡ ಕ್ರೀಡಾಂಗಣವಾದ ಗುಜರಾತ್ನ ನರೇಂದ್ರಮೋದಿ ಸ್ಟೇಡಿಯಂ ಕಿಕ್ಕಿರಿದು ತುಂಬಿತ್ತು, ಈ ಬಾರಿ ಭಾರತ ಕ್ರಿಕೆಟ್ ತಂಡದ ವಿಶ್ವಕಪ್ ಗೆದ್ದೇ ಗೆಲ್ಲುತ್ತದೆ ಎನ್ನುವ ದೃಢವಿಶ್ವಾಸ ದೇಶದ ನೂರಾ ನಲವತ್ತು ಕೋಟಿ ಜನರಿಗೂ ಇತ್ತು.
ಕಾರಣ, ಇಡೀ ಟೂರ್ನಿಯಲ್ಲಿ ತಂಡ ಹಾಗೆ ಆಡಿಕೊಂಡು ಬಂದಿತ್ತು. ಅನೇಕ ಗಣ್ಯರ ಜತೆಗೆ ಭಾರತ ಮತ್ತು ಆಸ್ಟ್ರೇಲಿಯಾದ ಪ್ರಧಾನಮಂತ್ರಿಗಳು ಮೈದಾನದಲ್ಲಿ ಸ್ವತಃ ಉಪಸ್ಥಿತರಿದ್ದರು. ಭಾರತವು ತವರು ನೆಲದಲ್ಲಿ ಫೈನಲ್ ತಲುಪಲು ಟೂರ್ನಿಯಿಡೀ ಅಭೂತಪೂರ್ವವಾಗಿ ಆಡಿ ೧೦ ಪಂದ್ಯ ಗಳನ್ನು ಸತತವಾಗಿ ಗೆದ್ದು ಅಜೇಯ ಎನಿಸಿಕೊಂಡಿತ್ತು ಮತ್ತು ತಂಡದ ಎಲ್ಲ ವಿಭಾಗಗಳೂ ಸಮನ್ವಯತೆಯಿಂದ ಅದ್ಭುತವಾದ ಪ್ರದರ್ಶನ ನೀಡುತ್ತಾ
ಬಂದಿತ್ತು.
ಆದರೆ, ದುರದೃಷ್ಟವಶಾತ್ ಆ ಒಂದು ದಿನ ಮಾತ್ರ ಭಾರತದ್ದಾಗಿರಲಿಲ್ಲ. ಆಸ್ಟ್ರೇಲಿಯನ್ ತಂಡವು ಆರು ವಿಕೆಟ್ಗಳಿಂದ ನಿರ್ಣಾಯಕವಾಗಿ ನಮ್ಮದೇ
ನೆಲದಲ್ಲಿ ನಮ್ಮನ್ನು ಸೊಲಿಸಿಬಿಟ್ಟಿತ್ತು. ಬಲಿಷ್ಟ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡು ಮತ್ತೊಮ್ಮೆ ವಿಶ್ವ ಕಪ್ ಗೆಲ್ಲುವ ತಂಡದ ಆಸೆ ಭಗ್ನಗೊಂಡು ಆಟಗಾರರು ನೋವಿನ ಮಡುವಿನಲ್ಲಿ ಮುಳುಗಿದ್ದರು. ಅಂದು ಡ್ರೆಸ್ಸಿಂಗ್ ರೂಮಿಗೆ ಹೋಗಿ ತಂಡದ ಪ್ರತಿಯೊಬ್ಬ ಆಟಗಾರನ ಹೆಸರು ಹೇಳಿ ಭಾರತದ ಪ್ರಧಾನಮಂತ್ರಿಗಳು ಸಂತೈಸಿದ್ದರು. ಈ ವಿಶ್ವಕಪ್ ಮೂಲಕ ನಿಮ್ಮ ಪ್ರತಿಭೆ ಮತ್ತು ಸಂಕಲ್ಪ ದೇಶದ ಗಮನ ಸೆಳೆದಿದೆ.
ನೀವು ಉತ್ಸಾಹದಿಂದ ಆಡಿದ್ದೀರಿ ಮತ್ತು ರಾಷ್ಟ್ರಕ್ಕೆ ಅಪಾರ ಹೆಮ್ಮೆ ತಂದಿದ್ದೀರಿ. ಕಪ್ ಗೆಲ್ಲದಿದ್ದರೂ ನೀವು ಶತಕೋಟಿ ಭಾರತೀಯರ ಹೃದಯ
ಗೆದ್ದಿದ್ದೀರಿ. ನಾವು ಎಂದೂ ನಿಮ್ಮೊಂದಿಗೆ ಇರುತ್ತೇವೆ ಎಂದು ಮೋದಿಯವರು ದೇಶವಾಸಿಗಳ ಪರವಾಗಿ ತಂಡವನ್ನು ಸಂತೈಸಿದ್ದರು. ಆಟವೆಂದರೆ ಸೋಲು ಗೆಲುವು ಇದ್ದಿದ್ದೇ, ಮನಸ್ಸನ್ನು ಚಿಕ್ಕದು ಮಾಡಿಕೊಳ್ಳಬೇಡಿ ಎನ್ನುತ್ತಾ ದೆಹಲಿಯ ತಮ್ಮ ನಿವಾಸಕ್ಕೆ ತಂಡವನ್ನು ಆಹ್ವಾನಿಸಿ ಅವರು ಹೊರಟಿದ್ದು ಇನ್ನೂ ಕಣ್ಣ ಮುಂದಿದೆ. ಅಂತೂ, ಆ ಸೋಲಿನ ನಂತರ ಇಡೀ ದೇಶ ತಿಂಗಳುಗಟ್ಟಲೇ ಮಂಕಾಗಿ ಬಿಟ್ಟಿತ್ತು.
ಹತಾಶ ಭಾವ ಇಡೀ ಭಾರತವನ್ನು ಆವರಿಸಿಬಿಟ್ಟಿತ್ತು. ತಂಡದ ನಾಯಕ ರೋಹಿತ ಶರ್ಮ ಅವರನ್ನೂ ಸೇರಿ ಕೆಲವು ಆಟಗಾರರು ಖಿನ್ನತೆಗೊಳಗಾಗಿ ಮನೆ ಸೇರಿಬಿಟ್ಟಿದ್ದರು. ಸಾಮಾನ್ಯವಾಗಿ ಕ್ರಿಕೆಟ್ನಲ್ಲಿ ದಕ್ಷಿಣ ಆಫ್ರಿಕಾವನ್ನು ‘ಚೋಕರ್ಸ್’ ಎಂದು ಕರೆಯಲಾಗುತ್ತದೆ, ಆದರೆ ಕಳೆದ ೧೦ ವರ್ಷಗಳ ದಾಖಲೆ ಗಳನ್ನು ನೋಡುವಾಗ ಭಾರತ ತಂಡ ಕೂಡ ಇಂತಹುದೇ ಪರಿಸ್ಥಿತಿಯಲ್ಲಿದೆ ಎನ್ನುವುದು ಅರ್ಥವಾಗುತ್ತದೆ. ೨೦೧೪ ರ ಟಿ೨೦ ವಿಶ್ವಕಪ್ ಫೈನಲ್,
೨೦೧೫ರ ಏಕದಿನ ವಿಶ್ವಕಪ್ ಸೆಮಿ ಫೈನಲ್, ೨೦೧೬ ಟಿ೨೦ ವಿಶ್ವಕಪ್ ಸೆಮಿ ಫೈನಲ್, ೨೦೧೭ ಚಾಂಪಿಯ ಟ್ರೋಫಿ ಫೈನಲ್, ೨೦೧೯ ವಿಶ್ವಕಪ್ ಸೆಮಿ ಫೈನಲ್, USಇ ಫೈನಲ್ ೨೦೨೧ ಮತ್ತು ೨೦೨೩, ಮತ್ತು ೨೦೨೨ ಟಿ೨೦ ವಿಶ್ವ ಸೆಮಿ ಫೈನಲ್ ಈ ಪ್ರತಿಯೊಂದು ಟೂರ್ನಿಯಲ್ಲೂ ಭಾರತ ತಂಡ ಪ್ರಶಸ್ತಿಗೆ ಅತ್ಯಂತ ಹತ್ತಿರ ಹೋಗಿ ಬರಿಗೈನಲ್ಲಿ ವಾಪಸ್ ಬಂದಿತ್ತು.
ಭಾರತ ತಂಡ, ನಿರ್ಣಾಯಕ ಹಂತದಲ್ಲಿ ಒತ್ತಡಗಳನ್ನು ನಿಭಾಯಿಸುವಲ್ಲಿ ವೈಫಲ್ಯ ಅನುಭವಿಸುತ್ತಿದೆ ಎಂದು ಆಗ ವಿಶ್ಲೇಷಿಸಲಾಗಿತ್ತು. ಜೂನ್ ೨೫, ೧೯೮೩ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಮರೆಯಲಾಗದ ಐತಿಹಾಸಿಕ ದಿನ. ಏಕೆಂದರೆ, ಅದು ಕಪಿಲ್ ದೇವ್ ನಾಯಕತ್ವದ ಭಾರತ ಕ್ರಿಕೆಟ್ ತಂಡ ತಮ್ಮ ಮೊದಲ ಏಕ ದಿನ ವಿಶ್ವಕಪ್ ಟ್ರೋಫಿ ಗೆದ್ದ ಅವಿಸ್ಮರಣೀಯ ದಿನವಾಗಿದೆ. ಭಾರತ ತಂಡವು ೧೯೮೩ರಲ್ಲಿ ಚೊಚ್ಚಲ ವಿಶ್ವಕಪ್ ಗೆಲುವಿನೊಂದಿಗೆ ಕ್ರಿಕೆಟ್ ಜಗತ್ತನ್ನೇ ಅಚ್ಚರಿ ಗೊಳಿಸಿದ್ದ ದಿನಕ್ಕೆ ಇದೀಗ ೪೧ವರ್ಷಗಳು ಸಂದಿವೆ. ಈ ಸಂದರ್ಭದಲ್ಲಿ ಭಾರತೀಯರ ಸೋಲಿನ ಹಳೆಯ ನೋವುಗಳನ್ನೆಲ್ಲ ಮರೆಯುವಂತೆ ಮತ್ತು ೧೯೮೩ರ ವಿಶ್ವ ವಿಜಯವನ್ನು ಪುನಃ ಸ್ಮರಣೆಮಾಡುವಂತೆ ಮಾಡಿದ್ದು, ಬಾರ್ಬಡೋಸ್ನ ಕೆನ್ಸಿಂಗ್ಟನ್ ಓವಲ್ನಲ್ಲಿ ನಡೆದ ಟಿ೨೦ ವಿಶ್ವಕಪ್ ೨೦೨೪ ರ ಅಂತಿಮ ಪಂದ್ಯದಲ್ಲಿ ಭಾರತದ ಅವಿಸ್ಮರಣೀಯ ಗೆಲುವು.
ಪಾಕಿಸ್ತಾನ, ಆಸ್ಟ್ರೇಲಿಯಾ, ಇಂಗ್ಲೆಂಡ್ ದೇಶಗಳ ತಂಡಗಳ ಕುರಿತ ಹಳೆಯ ಸೇಡನ್ನೆಲ್ಲ ತೀರಿಸಿ ಅಂತಿಮ ಹಂತಕ್ಕೆ ತಲುಪಿದ್ದ ಭಾರತ ತಂಡ, ಕೇವಲ ೭ ರನ್ಗಳಿಂದ ಅಂದು ದಕ್ಷಿಣ ಆಫ್ರಿಕಾವನ್ನು ರೋಚಕವಾಗಿ ಸೋಲಿಸಿ ಭಾರತ ಪ್ರತಿಷ್ಠಿತ ಐಸಿಸಿ ಪ್ರಶಸ್ತಿಯೊಂದನ್ನು ಮುಡಿಗೇರಿಸಿಕೊಂಡಿತು. ಈ
ಗೆಲುವಿನಿಂದ ಕ್ರಿಕೆಟ್ ಹುಚ್ಚು ಭಾರತಾದ್ಯಂತ ಮತ್ತೊಮ್ಮೆ ಆವರಿಸಿಬಿಟ್ಟಿತು. ಸಂಭ್ರಮಾಚರಣೆಗಳು ದೇಶದ ಮೂಲೆ ಮೂಲೆಗಳಲ್ಲಿ ನಡೆದವು. ಜಗತ್ತಿ ನಾದ್ಯಂತ ನಗರ ಕೇಂದ್ರಗಳಲ್ಲಿ ನೆರೆದಿದ್ದ ಅಭಿಮಾನಿಗಳ ‘ಇಂಡಿಯಾ, ಇಂಡಿಯಾ’ ಎಂಬ ಘೋಷಣೆಗಳು ಆಕಾಶವನ್ನು ಮುಟ್ಟುವಂತಿತ್ತು.
ವಿಜೇತ ತಂಡ ಭಾರತಕ್ಕೆ ಮರಳಿದಾಗ ಅಭೂತಪೂರ್ವ ಸ್ವಾಗತವನ್ನು ನೀಡಿ ವಾರದ ನಂತರ ವಿಜಯವನ್ನು ಮತ್ತೊಮ್ಮೆ ಸಂಭ್ರಮಿಸಲಾಯಿತು.
ದೇಶದ ನಾಲ್ಕೂ ದಿಕ್ಕುಗಳ ಜನ ಸಮಾನ ಭಾವುಕರಾಗಿ ತಮಗೇ ಅರಿವಿಲ್ಲದೇ ಕ್ರಿಕೆಟ್ ಎಂಬ ಸಂವೇದನೆಯ ಸೆಲೆಯಿಂದ ದೇಶವನ್ನೇ ಒಂದಾಗಿ ಬಿಗಿದುಬಿಟ್ಟಿದ್ದರು. ಭಾರತದಲ್ಲಿ ಕ್ರಿಕೆಟ್ ಎನ್ನುವುದು ಎಲ್ಲರನ್ನೂ ಒಂದಾಗಿಸುವ ಒಂದು ಧರ್ಮ ಎನ್ನುವ ಮಾತಿದೆ. ರಾಜಕೀಯ, ಧರ್ಮ, ಜಾತಿ- ಪಂಥ, ಹಿಂದುಳಿದವರು, ಮುಂದುವರೆದವರು ಎನ್ನುವ ವಿವಿಧ ವೈರುಧ್ಯಗಳಿಂದ ವಿಘಟನೆಯಾದಂತೆ ಆಗಾಗ ಭಾಸವಾಗುವ ಭಾರತವನ್ನು ಒಂದಾಗಿ ಬೆಸೆಯುವ ಶಕ್ತಿ ಇದ್ದರೆ ಅದು ಕ್ರಿಕೆಟ್ಗೆ ಮಾತ್ರ ಎನ್ನುವುದು ಮತ್ತೊಮ್ಮೆ ಸಾಬೀತಾಯಿತು.
ಟೂರ್ನಿಯ ಅಂತಿಮ ಹಂತವನ್ನು ತಲುಪಲು ಭಾರತ ಮತ್ತು ದಕ್ಷಿಣ ಆಫ್ರಿಕಾ ಎರಡೂ ತಂಡಗಳ ಪರಿಶ್ರಮ ಅಪರಿಮಿತವಾಗಿತ್ತು. ಅಜೇಯವಾಗಿ ಸಾಗಿಬಂದ ಎರಡು ಬಲಿಷ್ಟ ತಂಡಗಳು ಪ್ರಶಸ್ತಿಗಾಗಿ ಬಾರ್ಬಡೋಸ್ನಲ್ಲಿ ಅಂದು ಸೆಣಸುತ್ತಿದ್ದವು. ಟಾಸ್ ಗೆದ್ದು ಬ್ಯಾಟಿಂಗ ಆಯ್ಕೆ ಮಾಡಿಕೊಂಡ ಭಾರತ ತಂಡ ಆರಂಭಿಕ ಕುಸಿತದಿಂದ ಕಂಗೆಡದೇ ಇಪ್ಪತ್ತನೇ ಓವರ್ ಅಂತ್ಯದಲ್ಲಿ ಗೌರವಪೂರ್ಣವಾದ ಮೊತ್ತವನ್ನೇನೋ ಸೇರಿಸಿತ್ತು. ಆದರೆ, ದಕ್ಷಿಣ ಆಫ್ರಿಕಾ ಪ್ರಾರಂಭಿಕವಾಗಿ ಸ್ವಲ್ಪ ಎಡವಿದರೂ, ಕ್ಲಾಸೆನ್ ಬಂದ ಮೇಲೆ ಅವರ ವಿಜಯ ಹಸಿಗೋಡೆಯ ಮೇಲಿನ ಬರಹದಷ್ಟು ನಿಚ್ಚಳವಾಗಿಬಿಟ್ಟಿತ್ತು.
ಸ್ಪಿನ್, ವೇಗ ಯಾವುದೇ ರೀತಿಯ ಬೌಲಿಂಗ್ ‘ಕ್ಲಾಸೆನ್’ ಅವರನ್ನು ಬಾಧಿಸುತ್ತಿರಲಿಲ್ಲ. ಯಾವುದೇ ಚಂಡನ್ನು ಲೀಲಾಜಾಲವಾಗಿ ಬೌಂಡರಿ ಗೆರೆ
ದಾಟಿಸುತ್ತಿದ್ದ ಅವನ ಅಂದಿನ ಆಟ, ಎದುರಿಗಿರುವವನ ನೈತಿಕ ಸ್ಥೈರ್ಯವನ್ನೇ ಅಲುಗಾಡಿಸುವಂತಿತ್ತು. ಅಕ್ಷರ್ ಪಟೇಲ್ ಅವರ ನಿಧಾನ ಗತಿಯ ಚಂಡುಗಳನ್ನೂ ಬೌಂಡರಿ ಗೆರೆ ದಾಟಿಸಿ ೬ರನ್ ಪಡೆಯುತ್ತಿದ್ದ ‘ಕ್ಲಾಸೆನ್’ ಒವರ್ ಒಂದರ ೨೨ ರನ್ ಬಾಚಿಕೊಂಡಾಗ ನಮ್ಮ ದೇಶದ ಅನೇಕ ಮನೆಗಳಲ್ಲಿ ಟಿವಿ ಬಂದ್ ಆಗಿರಲಿಕ್ಕೆ ಸಾಕು. ಅವನ ವಿಕೆಟ್ ಎತ್ತಲು ನಮ್ಮ ತಂಡದ ಉಪಾಯದ ಬುಟ್ಟಿ ಬರಿದಾಗಿದ್ದಾಗ ದೇವರಂತೆ ಬಂದ ನಮ್ಮ ಪಾಂಡ್ಯ, ಅನಿರೀಕ್ಷಿತವಾಗಿ ‘ಕ್ಲಾಸೆನ್’ ವಿಕೆಟ್ ಕಿತ್ತುಬಿಟ್ಟ. ಅಲ್ಲಿಂದ ನಮ್ಮ ತಂಡದ ಗ್ರಹಗತಿಯೇ ಬದಲಾಗಿಬಿಟ್ಟಿತು ನೋಡಿ!
ನಂತರ ಬಂದವ ಇನ್ನೊಬ್ಬ ದೈತ್ಯ ‘ಕಿಲ್ಲರ್’ ಎಂದೇ ಖ್ಯಾತನಾದ್ದ ಮಿಲ್ಲರ್. ಅವನೂ ಕ್ಲಾಸೆನ್ಗೆ ಕಡಿಮೆ ಏನೂ ಇರಲಿಲ್ಲ. ಆದರೆ, ಪಾಂಡ್ಯ ಎಸೆದ ಫಲ್ಟಾಸ್ ಬಾಲನ್ನು ಸಿಕ್ಸರ್ಗಾಗಿ ನೇರವಾಗಿ ಮೇಲಕ್ಕೆ ಎತ್ತಿದ ನೋಡಿ! ಎಲ್ಲರ ಹೃದಯ ಬಡಿತ ಕ್ಷಣಕಾಲ ನಿಲ್ಲುವಂತಾಗಿತ್ತು. ಎಲ್ಲಿಂದಲೋ ಓಡಿಬಂದ ನಮ್ಮ ಸೂರ್ಯಕುಮಾರ ಚಂಡನ್ನು ಹಿಡಿದು ‘ಸಿP’ಗೆ ಹೋಗುವುದನ್ನು ತಪ್ಪಿಸಿದ್ದು ಮಾತ್ರವಲ್ಲದೇ ಪವಾಡ ಸದೃಶವಾಗಿ ಕ್ಯಾಚ ಆಗಿ ಪರಿವರ್ತಿಸುವ ಮೂಲಕ ‘ಕ್ಯಾಚಸ್ ವಿ ಮ್ಯಾಚಸ್’ ಎನ್ನುವ ಮಾತನ್ನು ಮತ್ತೊಮ್ಮೆ ಸತ್ಯವಾಗಿಸಿಬಿಟ್ಟ!
೧೯೮೩ರಲ್ಲಿ ವಿಂಡೀಸ್ ತಂಡವನ್ನು ಗೆಲುವಿನ ದಡಕ್ಕೆ ಸುಲಿತವಾಗಿ ಮುನ್ನಡೆಸುತ್ತಿದ್ದ ವಿವಿಯನ್ ರಿಚq ಅವರು ಬಾರಿಸಿದ ಚೆಂಡನ್ನು ಕಪಿಲ್ ಹಿಮ್ಮುಖವಾಗಿ ಓಡುತ್ತ ಕೈಯ್ಯಲ್ಲಿ ಭದ್ರಪಡಿಸಿಕೊಂಡು ಪಂದ್ಯದ ಗತಿಯನ್ನೇ ಬದಲಿಸಿದಂತೆ ಸೂರ್ಯನ ಅಸೀಮ ಸಮಯ ಪ್ರಜ್ಮೆ ಮೆರೆದು ಹಿಡಿದ
ಈ ಐತಿಹಾಸಿಕ ಕ್ಯಾಚ್ ಕೂಡಾ ಪಂದ್ಯದ ಫಲಿತಾಂಶ ಭಾರತದ ಕಡೆಗೆ ಜಾರುವಂತೆ ಮಾಡಿತ್ತು. ೨೦೦೭ ರ ಟಿ ೨೦ ವಿಶ್ವಕಪ್ನ ಪಾಕಿಸ್ತಾನದ ವಿರುದ್ಧದ ಅಂತಿಮ ಪಂದ್ಯದ ಗೆಲುವೂ ಶ್ರೀಶಾಂತ್ ಹಿಡಿದ ಕ್ಯಾಚ್ನಿಂದಲೇ ನಮ್ಮೆಲ್ಲರ ನೆನಪಿನಲ್ಲಿ ಈಗಲೂ ಉಳಿದಿದೆ.
ಬಾರ್ಬಡೋಸ್ನಲ್ಲಿ ಭಾರತವು ದಕ್ಷಿಣ ಆಫ್ರಿಕಾವನ್ನು ‘ನೇಲ-ಬೈಟರ್’ನಲ್ಲಿ ಸೋಲಿಸಿದ ಕ್ಷಣ ಎರಡು ತಂಡಗಳ ಆಟಗಾರರ ಕಣ್ಣಾಲಿಗಳಲ್ಲಿ ನೀರು ತುಂಬುವಂತೆ ಮಾಡಿತ್ತು. ಭಾರತೀಯ ಆಟಗಾರರು ಆನಂದದಿಂದ ಕಣ್ಣೀರಾದರೆ, ದಕ್ಷಿಣ ಆಫ್ರಿಕದವರು ತಮ್ಮ ಮೂವತ್ಮೂರು ವರ್ಷಗಳಿಂದ ಮುಂದು ವರೆದ ದೌರ್ಭಾಗ್ಯವನ್ನು ನೆನೆದು ಕಣ್ಣೀರಾಗಿರಬೇಕು. ಉಭಯ ತಂಡಗಳ ಈ ಭಾವುಕ ಸ್ಥಿತಿಯನ್ನು ನೋಡಿ ವೀಕ್ಷಕರ ಕಣ್ಣಾಲಿಗಳೂ ಒದ್ದೆಯಾದವು. ಭಾರತದ ತಂಡದ ಆಟಗಾರರು ಮಕ್ಕಳಂತೆ ಕುಣಿದು ಕುಪ್ಪಳಿಸಿ ಆ ಕ್ಷಣವನ್ನು ಆನಂದಿಸಿದರು.
ಉಳಿದವರನ್ನು ಬಿಡಿ, ಸದಾ ಸ್ಥಿತಪ್ರಜ್ಮನಂತೆ ಇರುತ್ತಿದ್ದ ತರಬೇತುದಾರ ರಾಹುಲ್ ದ್ರಾವಿಡ್ ಕೈಗೆ ಟ್ರೋಫಿಯನ್ನು ವಿರಾಟ್ ತಂದು ನೀಡಿದ್ದೇ ತಡ, ಅಕ್ಷರಶಃ ಹುಚ್ಚನಂತೆ ಮೈಮರೆತು ಕಿರುಚಾಡಿಬಿಟ್ಟಿದ್ದ ಆತ. ಸೋತ ಭಾರತ ತಂಡವನ್ನು ಅಂದು ಸಂತೈಸಿ ಮನೆಗೆ ಆಮಂತ್ರಣ ನೀಡಿದ್ದ ಪ್ರಧಾನಿ ಮೋದಿಯವರ ಮನೆಗೆ ಬರಿಗೈನಿಂದ ಹೋಗದೇ, ಸೋತು ವರ್ಷ ತುಂಬುವುದರೊಳಗೆ ಹಠ ಹೊತ್ತು ಮತ್ತೊಂದು ವಿಶ್ವ ಕಪ್ ಪಾರಿತೋಷಕದ ಜತೆಗೆ
ತೆರಳಿ, ಅದನ್ನು ಅವರ ಕೈಗಿತ್ತ ಧನ್ಯತೆಯ ಕ್ಷಣ ನಿಜಕ್ಕೂ ಸ್ಮರಣೀಯವಾಗಿತ್ತು.
ಇನ್ನು, ಭಾರತದ ಬೌಲರುಗಳು ಚಂಡನ್ನು ವಿರೂಪ ಮಾಡಿದರು, ಸೂರ್ಯನ ಕ್ಯಾಚ್, ಕ್ಲೀನ್ ಆಗಿರಲ್ಲ, ಈ ಪಂದ್ಯ ‘ಫಿಕ್ಸ್’ ಆಗಿತ್ತು ಮುಂತಾಗಿ ಸಾಮಾ ಜಿಕ ಜಾಲತಾಣಗಳಲ್ಲಿ ಬಾಯಿ ಹರಿ ಬಿಡುವ ಮೂರ್ಖರಿಗೆನೂ ಕಡಿಮೆ ಇರಲಿಲ್ಲ. ಎರಡೂ ತಂಡಗಳ ಅಟಗಾರರ ಕಣ್ಣಾಲಿಗಳಲ್ಲಿ ನೀರು ನೋಡಿದ ಮೇಲೆಯೂ, ಈ ಪಂದ್ಯದ ಫಲಿತಾಂಶ ಮೊದಲೇ ತೀರ್ಮಾನ ವಾಗಿತ್ತು ಎನ್ನುವ ಪ್ರಭೃತಿಗಳಿಗೆ ನಮ್ಮದೊಂದು ದಿವ್ಯವಾದ ಧಿಕ್ಕಾರವಿರಲಿ ಅಷ್ಟೆ.
(ಲೇಖಕರು: ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)