Saturday, 27th July 2024

ನಮ್ಮ ಸಂಸ್ಕೃತಿಯ ಹಿರಿಮೆ

ಸಂಸ್ಕೃತಿ ಸಂಸ್ಕಾರ

ಶಂಬು ಶಂಕರಲಿಂಗ

ದೇಹವೇ ದೇಗುಲ ಶಿರವೇ ಹೊನ್ನಕಳಸವಯ್ಯ ಎಂಬ ವಚನ ಹಾಗೂ ದೇಹೋ ದೇವಾಲಯ ಪ್ರೋಕ್ತೋ, ದೇವೋ ಜೀವಃ ಸದಾಶಿವಃ (ದೇಹವೇ
ದೇವಾಲಯ, ಸದಾಶಿವನೇ ಜೀವ) ಎಂಬ ಸಂಸ್ಕೃತ ಸುಪ್ರಸಿದ್ಧ ವಾಕ್ಯವೂ ಒಂದೇ ಅಭಿಪ್ರಾಯವನ್ನು ಬಿಂಬಿಸುತ್ತವೆ. ‘ಜೀವಾತ್ಮನೇ ಸದಾಶಿವ’ ಅವನೇ ಜಂಗಮ ಎಂಬ ಸ್ಥಿತಿ ಯನ್ನು ಅನುಭವಿಸುವುದೇ ಜೀವನ್ಮುಕ್ತಿ ಎಂದು ಕರೆಯಬಹುದು.

ಅದೊಂದು ಹೇಳಿಕೆಯೋ, ಹೊಗಳಿಕೆಯೋ ಅಂಬೋಣವೋ ಅಲ್ಲ. ಅದು ಅನುಭವಗಮ್ಯವಾಗ ಬೇಕಾದ್ದು. ಆದ್ದರಿಂದಲೇ ‘ನಾಯಮಾತ್ಮಾ ಪ್ರವಚ ನೇನ ಲಭ್ಯಃ ಎಂದು ವೇದಗಳು ಘೋಷಿಸಿವೆ. ಸ್ವಾಮಿ ವಿವೇಕಾನಂದರು ತಿಳಿಸುವಂತೆ, ಮೂರ್ತಿಪೂಜೆ ಈ ರೀತಿ ಜಂಗಮ – ಸದಾಶಿವನೇ ಜೀವ ಎಂಬ ಸ್ಥಿತಿಯನ್ನು ತಲುಪಲು ನೆರವಾಗುವ ಪರಿಕರ ಅಷ್ಟೆ. ಅದೊಂದು ಪ್ರಥಮ ಸೋಪಾನ ಎನ್ನಬಹುದು. ಹಿರಿದಾದ ಪರ್ವತದ ತುದಿಯನ್ನೇರಲು ಅನೇಕ ದಾರಿಗಳಿರುವುದು ಸಹಜ. ಶಕ್ತಿ ಯುಕ್ತಿ ಇದ್ದವನು ನೇರವಾದ ಆದರೆ ಅತಿ ದುರ್ಗಮವಾದ ಜಾಡನ್ನೇ ಹಿಡಿದು ಶಿಖರವನ್ನೇರಬಲ್ಲ. ಆದರೆ ಎಲ್ಲರಿಗೂ ಅದೇ ಎಲ್ಲರಿಗೂ ದಾರಿಸೂಕ್ತವಾಗಿರಲಾರದು.

ಅವರವರ ಸಾಮರ್ಥ್ಯ, ಪರಿಶ್ರಮ,ದೇಹ ಸಂರಚನೆ, ಮನಸ್ಸಿನ ದಾರ್ಷ್ಟ್ಯತೆಗಳಿಗೆ ಅನುಸಾರವಾಗಿ ಬೇರೆ ಬೇರೆ ದಾರಿಗಳಿಂದಲೂ ಅದೇ ಪರ್ವತದ ತುದಿಯನ್ನೇರುವುದನ್ನು ನಾವು ದಿನವೂ ಕಾಣುತ್ತಿರುತ್ತೇವೆ. ಅಂತೆಯೇ ಚರಮ ಜಂಗಮಸ್ಥಿತಿ ತಲುಪುದಕ್ಕೂ ಭಕ್ತಿಮಾರ್ಗವನ್ನೋ, ಕರ್ಮ ಮಾರ್ಗ ವನ್ನೋ, ಜ್ಞಾನಮಾರ್ಗವನ್ನೋ ಅಥವಾ ಇನ್ನಾವುದೋ ಉಪಾಸನಾ ಮಾರ್ಗವನ್ನೋ ಅನುಸರಿಸಿ ಗುರಿ ಸೇರುವ ಉಪಾಯವನ್ನು ಮನುಕುಲವು ಪ್ರಯತ್ನಿಸುತ್ತಲೇ ಇದೆ.

ಮೂರ್ತಿಪೂಜೆ ಮಾಡುವವರಲ್ಲಿ, ತಮತಮಗೆ ಇಷ್ಟವಾದ ಯಾವುದರಲ್ಲಿ ಸರಸವಾಗಿ, ಸರಾಗವಾಗಿ ಮನಸ್ಸನ್ನು ನಿಲ್ಲಿಸಿ ಗೆಲ್ಲಿಸಬಹುದೋ ಅಂಥ ಪ್ರತಿಮೆಯನ್ನೋ, ಪ್ರತೀಕವನ್ನೋ, ಪ್ರತಿಕೃತಿಯನ್ನೋ ಮನುಷ್ಯ ನಿರ್ಮಿಸಿ ಅದರ ಸಹಾಯದಿಂದ ತನ್ನ ಗುರಿ ತಲುಪಲು ಯತ್ನಿಸುವುದೂ ಅಷ್ಟೇ ಸಹಜ. ಹೇಗೆ ಜೀವಗಳಲ್ಲಿ ವೈವಿಧ್ಯವಿದೆಯೋ ಹಾಗೇ ಜೀವಿಗಳ ಬುದ್ಧಿ- ಮನಸ್ಸುಗಳ ಸಂಚಲನೆ, ಸಂರಚನೆಗಳಲ್ಲಿಯೂ ಭಿನ್ನತೆ, ಭಿನ್ನರುಚಿಗಳು. ಆ ಕಾರಣದಿಂದಲೇ ಚರಮ ಗಂತವ್ಯಕ್ಕೆ ಅನೇಕ ಮಾರ್ಗೋಪಾಯಗಳು.

ಆದ್ದರಿಂದಲೇ ನಮ್ಮ ದೇಶದಲ್ಲಿ ೩೩ ಕೋಟಿ ದೇವತೆಗಳಲ್ಲಿ ನಂಬಿಕೆ. ಆ ದೇವರುಗಳಲ್ಲಿ ಯಾರು ಹಿರಿಯ, ಯಾರು ಕಿರಿಯ? ಎಂಬ ಚರ್ಚೆ ಅತ್ಯಂತ ಚಾಲಕವಾದದ್ದು. ಗಣಪತಿ ಉಪನಿಷತ್ತಿನಲ್ಲಿ ಗಣಪತಿಯನ್ನು- ನೀನೇ ಬ್ರಹ್ಮ, ನೀನೇ ವಿಷ್ಣು, ನೀನೇ ರುದ್ರ, ನೀನೇ ಅಗ್ನಿ, ನೀನೇ ವಾಯು, ನೀನೇ ಇಂದ್ರ, ನೀನೇ ಸೂರ್ಯ, ನೀನೇ ಚಂದ್ರ, ನೀನೇ ಈ ಸಕಲ ಜಗತ್ತು ಎಂದು ಗುರುತಿಸಲಾಗಿದೆ. ಅದೇ ರೀತಿ ಶ್ರೀ ರುದ್ರ ಪ್ರಶ್ನೆಯಲ್ಲಿ ಶಿವನಿಗೆ ನೀನೇ ಗಣಪತಿ ಎಂದು ಕೊಂಡಾಡಲಾಗಿದೆ. ವಿಷ್ಣುವಿನ ಅನೇಕ ಪ್ರಸಿದ್ಧ ನಾಮಗಳು ಶಿವನನ್ನು ಪೂಜಿಸುವ ಸಹಸ್ರ ನಾಮಗಳಲ್ಲಿ ದೊರೆಯುತ್ತವೆ. ಇದೇ ನಮ್ಮ ಸಂಸ್ಕೃತಿಯ ಹಿರಿಮೆ. ಇದನ್ನು ಮರೆತವರ ಸಲುವಾಗಿಯೇ ಇರುವ ವಚನವೇ- ಇದಿರು ಹಳಿಯಲು ಬೇಡ, ಅನ್ಯರಿಗೆ ಅಸಹ್ಯ ಪಡಬೇಡ ಎಂಬುದು. ಇದನ್ನು ಮರೆತಿರುವುದೇ ನಮ್ಮ ದುರಂತಕ್ಕೆ ಕಾರಣ.

Leave a Reply

Your email address will not be published. Required fields are marked *

error: Content is protected !!