ಸ್ವಾಸ್ಥ್ಯವೆಂಬ ಸ್ವಾತಂತ್ರ್ಯ
ಡಾ.ಸಾಧನಶ್ರೀ
ವಿವೇಕಿಯಾದವನು ರೋಗ ಬಂದ ಕೂಡಲೇ ಎಚ್ಚೆತ್ತುಕೊಂಡು ಸೂಕ್ತ ಚಿಕಿತ್ಸೆ ಪಡೆದು ಗುಣಮುಖನಾಗುತ್ತಾನೆ. ಆದರೆ, ಮೂರ್ಖನು ಅಜ್ಞಾನ ದಿಂದಲೋ ಆಲಸ್ಯದಿಂದಲೋ ಮೊದಲು ಎಚ್ಚೆತ್ತುಕೊಳ್ಳುವುದೇ ಇಲ್ಲ. ತಿಳಿದೂ ಅಸಡ್ಡೆ ಮಾಡುತ್ತಾನೆ. ವಾಸ್ತವವಾಗಿ ರೋಗವೆಂಬುದು ಭಯಂಕರ ಶತ್ರುವಿದ್ದಂತೆ. ಮೊದಲು ಅಲ್ಪವಾಗಿದ್ದು, ಹಾಗೇ ಬಿಟ್ಟರೆ ಹೆಮ್ಮರವಾಗುತ್ತದೆ, ಮನುಷ್ಯನ ಸರ್ವಸ್ವವನ್ನೂ ಅಪಹರಿಸುತ್ತದೆ. ಆಗ, ಒಂದೆಡೆ ಪ್ರಬಲ ಪ್ರಾಣಿಯಿಂದ ಎಳೆಯಲ್ಪಡುತ್ತಿರುವ, ಇನ್ನೊಂದೆಡೆ ಬಾಲ ಸಿಕ್ಕಿಹಾಕಿಕೊಂಡಿರುವ ಉಡದಂತೆ ಮಾನವ ಚಡಪಡಿಸುತ್ತಾನೆ, ಹೆಂಡತಿ-ಮಕ್ಕಳು, ಬಂಧು-ಬಳಗದ ವರ ಮೊರೆಹೋಗುತ್ತಾನೆ.
ವೈದ್ಯರನ್ನೂ ಸಹಾಯ ಕೇಳುತ್ತಾನೆ. ಆದರೆ, ಆಗ ಯಾವ ತಜ್ಞವೈದ್ಯರೂ ಏನೂ ಮಾಡುವ ಸ್ಥಿತಿಯಲ್ಲಿರುವುದಿಲ್ಲ. ಹೀಗಾಗಿ ಅನಾಥನಂತೆ ಅಸುನೀಗುತ್ತಾನೆ. ಆದ್ದರಿಂದ, ರೋಗ ಬರುವ ಮೊದಲೇ ಅಥವಾ ರೋಗವು ಚಿಗುರಿನಲ್ಲಿರುವಾಗಲೇ ಎಚ್ಚರ ವಹಿಸಿ ಸುಖವಾಗಿರಬೇಕು ಎಂಬುದು ಚರಕಾಚಾರ್ಯರ ಕಿವಿಮಾತು. ಹಾಗಾದರೆ, ನಮ್ಮ ಜೀವನದಲ್ಲಿ ಇಂಥ ಹೀನಾಯ ಸ್ಥಿತಿಯನ್ನು ತಪ್ಪಿಸಲು ಏನು ಮಾಡಬೇಕೆಂಬ ಪ್ರಶ್ನೆಗೆ ಒಂದೇ ಉತ್ತರವೆಂದರೆ ಸ್ವಾಸ್ಥ್ಯದ ಅರಿವು.
ಸ್ವಾಸ್ಥ್ಯವೆಂದರೆ ಕೇವಲ ರೋಗರಹಿತ ಸ್ಥಿತಿಯಲ್ಲ, ಅದು ಆರೋಗ್ಯದ ಮುಂದುವರಿದ ಸ್ಥಿತಿ. ನಮ್ಮ ದೇಹದಲ್ಲಿ ವಾತ-ಪಿತ್ತ-ಕಫಗಳೆಂಬ
ದೋಷಗಳ ಕಾರ್ಯ ಹಾಗೂ ಅಗ್ನಿಯ ಆಹಾರ ಪಚನ ಕಾರ್ಯಗಳು ಸರಿಯಾದ ರೂಪದಲ್ಲಿ ನಡೆದು, ಅದರ ಪರಿಣಾಮವಾಗಿ ನಾವು ಸೇವಿಸಿದ
ಆಹಾರವು ಧಾತು ಮತ್ತು ಮಲಗಳಾಗಿ ಬೇರ್ಪಡುವ ಕಾರ್ಯಗಳು ನಿರಂತರವಾಗಿ ನಡೆಯುತ್ತಿದ್ದರೆ, ಶರೀರ-ಇಂದ್ರಿಯ- ಮನಸ್ಸುಗಳು
ಯಾವುದೇ ಏರಿಳಿತಗಳಿಲ್ಲದೆ ಪರಸ್ಪರ ಸಹಕರಿಸಿಕೊಂಡು ನೆಮ್ಮದಿಯಿಂದ ತಮ್ಮ ಕಾರ್ಯವನ್ನು ನಿರ್ವಹಿಸುತ್ತವೆ. ಈ ಸ್ಥಿತಿಯನ್ನು ‘ಸ್ವಾಸ್ಥ್ಯ’ ಎಂದು ಕರೆಯಬಹುದು.
ಎಲ್ಲರಿಗೂ ಅಗತ್ಯವಿರುವ ಈ ಸ್ವಾಸ್ಥ್ಯದ ಸ್ಥಿತಿಯನ್ನು ಗಳಿಸುವ ಉಪಾಯಗಳನ್ನು ಆಯುರ್ವೇದವು ಬಹಳ ವಿವರವಾಗಿ ಉಖಿಸಿದೆ. ಏಕೆಂದರೆ,
ಆಯುರ್ವೇದವು ಕೇವಲ ವೈದ್ಯಕೀಯ ಪದ್ಧತಿ ಯಲ್ಲದೆ ಒಂದು ಜೀವ ವಿeನ, ಜೀವನ ವಿಜ್ಞಾನವೂ ಆಗಿದೆ! ರೋಗ ಬಂದ ಮೇಲೆ ನೀಡುವ
ಚಿಕಿತ್ಸೆಗಿಂತ ರೋಗವೇ ಬಾರದ ಹಾಗೆ ಶರೀರವನ್ನು ಹೇಗೆ ಪಾಲಿಸಬೇಕು ಎಂಬ ಉಪಾಯಗಳ ವಿವರಣೆಗೆ ಆಯುರ್ವೇದದಲ್ಲಿ ಆದ್ಯತೆ. ಆದ್ದರಿಂದಲೇ, ‘ಸ್ವಸ್ಥ್ಯಸ್ಯ ಸ್ವಾಸ್ಥ್ಯ ರಕ್ಷಣಮ’ ಎಂಬುದು ಆಯುರ್ವೇದದ ಪ್ರಥಮ ಉದ್ದೇಶ. ಸ್ವಾಸ್ಥ್ಯವನ್ನು ಉಳಿಸಿ ಬೆಳೆಸಬಲ್ಲ ಪ್ರಮುಖ ಅಂಶಗಳೆಂದರೆ ನಮ್ಮ ಆಹಾರ-ಶಯನ ಮತ್ತು ನಮ್ಮ ದಿನನಿತ್ಯದ ವ್ಯವಹಾರಗಳು. ಈ ಸ್ವಾಸ್ಥ್ಯ ರಕ್ಷಣಾ ಕ್ರಮಗಳಲ್ಲಿ ದಿನಚರ್ಯೆ-ಋತುಚರ್ಯೆಗಳ ನಂತರ ಬರುವ ಬಹಳ ಮುಖ್ಯವಾದ ಕ್ರಮವೆಂದರೆ ‘ವೇಗ’ಗಳ ತಿಳಿವಳಿಕೆ. ವೇಗಗಳೆಂದರೆ ಏನು? ಆರೋಗ್ಯದ
ಸಂರಕ್ಷಣೆಯಲ್ಲಿ ಇವುಗಳ ಪಾತ್ರವೇನು ಎಂಬುದನ್ನು ಅರಿಯೋಣ.
ಆಯುರ್ವೇದ ವೈದ್ಯರಲ್ಲಿ ಚಿಕಿತ್ಸೆ ತೆಗೆದುಕೊಂಡ ಅನುಭವ ನಿಮಗಿದ್ದರೆ, ಅವರು ಮಲ- ಮೂತ್ರಗಳ ವಿಸರ್ಜನೆ, ಹಸಿವೆ, ನಿದ್ರೆಗಳನ್ನು ಬಹಳ ಗಮನವಿಟ್ಟು ವಿಚಾರಿಸುತ್ತಾರೆಂಬುದು ಮಗೆ ತಿಳಿದಿರುತ್ತದೆ. ಏಕೆಂದರೆ, ಆರೋಗ್ಯವಂತನಲ್ಲಿ ಈ ಕ್ರಿಯೆಗಳು ಸರಿಯಾಗಿರಬೇಕು. ಇವುಗಳಲ್ಲಿ ಸ್ವಲ್ಪ ಏರುಪೇರಾದರೂ ಅದು ಯಾವುದೋ ರೋಗದ ಸೂಚಕವೇ ಆಗಿರುತ್ತದೆ. ನಮ್ಮ ಶರೀರದಲ್ಲಿ ನೂರಾರು ಕಾರ್ಯಗಳು ಸದಾಕಾಲ ನಡೆಯುತ್ತಿರುತ್ತವೆ. ಈ ಕಾರ್ಯಗಳ ಪರಿಣಾಮವಾಗಿ ಹಲವಾರು ಬೇಡದ ವಸ್ತುಗಳು ಶರೀರದಲ್ಲಿ ಉತ್ಪಾದನೆ ಆಗುತ್ತವೆ.
ಇಂಥ ಮಲಗಳನ್ನು ಹೊರಹಾಕುವ ವ್ಯವಸ್ಥೆಯು ಶರೀರದಲ್ಲಿ ಸರಿಯಾಗಿಲ್ಲವೆಂದರೆ, ನಮಗೆ ಬೇಕಾದ ವಸ್ತುವಿನ ತಯಾರಿಕೆಯೂ ಸುಸೂತ್ರವಾಗಿ ನಡೆಯಲು ಸಾಧ್ಯವಿಲ್ಲ.ಉತ್ಪಾದನೆ ಆಗುತ್ತಿರುವ ಮಲಗಳನ್ನು ಹೊರಹಾಕಲು ಶರೀರವು ಬೇರೆ ಬೇರೆ ರೀತಿಯ ಕ್ರಿಯೆಗಳನ್ನು ನಡೆಸುತ್ತದೆ. ಸಹಜವಾದ ಈ ವಿವಿಧ ಕ್ರಿಯೆಗಳಿಗೆ ಆಯುರ್ವೇದದಲ್ಲಿ ‘ವೇಗ’ಗಳು ಎನ್ನುತ್ತಾರೆ. ವೇಗ ಎಂಬ ಶಬ್ದದಲ್ಲಿ ‘ವಿ’ ಎಂದರೆ ಸ್ರೋತಸ್ಸು ಅಥವಾ ಪದಾರ್ಥ ಹರಿಯುವ ಮಾರ್ಗ ಎಂದರ್ಥ. ‘ಗ’ ಎಂದರೆ ಗತಿ ಅಥವಾ ಹರಿಯುವಿಕೆ. ‘ವೇಗ’ವೆಂದರೆ ದೇಹದಲ್ಲಿನ ವಿವಿಧ ಮಾರ್ಗಗಳಲ್ಲಿ ಪದಾರ್ಥಗಳು ಹರಿಯಲು ತೊಡಗಿದಾಗ ಉಂಟಾಗುವ ಜ್ಞಾನ. ಇದನ್ನು ’ಜಛಿ’ ಎಂದು ಕರೆಯಬಹುದು. ಇದು ದೇಹದ ಜೈವಿಕ ಗಡಿಯಾರದ ಕರೆಗಂಟೆ. ಈ ವೇಗಗಳನ್ನು ತಡೆಯುವುದು ಅಥವಾ ಬಲವಂತವಾಗಿ ಉತ್ತೇಜಿಸುವುದು ರೋಗಕ್ಕೆ ಕಾರಣವಾಗುತ್ತದೆ.
ಇವುಗಳನ್ನು ಸರಿಯಾಗಿ ಗಮನಿಸಿ, ಸಹಜವಾಗಿ ಅವುಗಳ ಪ್ರವೃತ್ತಿಯನ್ನು ಅನುಸರಿಸುವುದು ಸ್ವಾಸ್ಥ್ಯ ಸಾಧನೆಯ ಮೊದಲ ಹೆಜ್ಜೆ. ಶಾರೀರಿಕ ವೇಗವನ್ನು ಅದರ ಮಾರ್ಗವನ್ನು ಅನುಸರಿಸಿ ಹೂಸು, ತೇಗು, ಮಲ ಪ್ರವೃತ್ತಿ, ಮೂತ್ರ ಪ್ರವೃತ್ತಿ, ಸೀನು, ಬಾಯಾರಿಕೆ, ಹಸಿವು, ನಿದ್ದೆ, ಕೆಮ್ಮು, ಶ್ರಮದ ದಮ್ಮು, ಆಕಳಿಕೆ, ಕಣ್ಣೀರು, ವಾಂತಿ, ಶುಕ್ರಸ್ರಾವ- ಹೀಗೆ ೧೪ ವಿಧಗಳೆಂದಿzರೆ. ದೇಹ ನೀಡುವ ಈ ಕರೆಗಳನ್ನು ಸ್ವೀಕರಿಸದೆ, ಸಹಜ ಸೂಚನೆಗಳನ್ನು ತಿರಸ್ಕರಿಸಿ, ಕಾರಣಾಂತರಗಳಿಂದ ಈ ಸಹಜ ಕಾರ್ಯವನ್ನು ಬಲಾತ್ಕಾರವಾಗಿ ತಡೆಯುವುದನ್ನು ಆಯುರ್ವೇದದಲ್ಲಿ ವೇಗಧಾರಣೆ ಎಂದು ಕರೆದಿದ್ದಾರೆ.
ಅದೇ ರೀತಿ ಸೂಚನೆ ಇಲ್ಲದಿದ್ದಾಗಲೂ ಪ್ರಚೋದಿಸುವ ಪ್ರಯತ್ನಗಳನ್ನು ವೇಗ ಉದೀರಣ ಎಂದು ಹೇಳಿದ್ದಾರೆ. ವೇಗ ಧಾರಣೆ ಮತ್ತು ವೇಗ ಉದೀರಣೆ- ಎರಡೂ ದೇಹದಲ್ಲಿ ರೋಗ ಪ್ರಾರಂಭ ಮಾಡುವ ಬಹಳ ಬಲಿಷ್ಠವಾದ ಕಾರಣಗಳು. ಈಗ ಪ್ರತಿಯೊಂದೂ ವೇಗದ ಬಗ್ಗೆ
ಪ್ರತ್ಯೇಕವಾಗಿ ತಿಳಿದುಕೊಳ್ಳೋಣ.
೧. ಅಧೋವಾತ ವೇಗ- ಇದು ಗುದ ಮಾರ್ಗದಿಂದ ಹೋಗುವ ಹೂಸು. ಇಂದಿನ ಸಮಾಜದಲ್ಲಿ ಈ ವೇಗವನ್ನು ತಡೆಯುವುದು ಅನಿವಾರ್ಯ ವೆಂದು ಕೆಲವರು ಭಾವಿಸಿರಬಹುದು. ಆದರೆ, ಅಧೋವಾತವನ್ನು ತಡೆಯುವ ಅಭ್ಯಾಸವನ್ನು ಮಾಡಿದರೆ ಕ್ರಮೇಣವಾಗಿ ಹೊಟ್ಟೆ ಉಬ್ಬರ,
ಮಲಮೂತ್ರ ಪ್ರವೃತ್ತಿಯಲ್ಲಿ ತಡೆ, ಜೀರ್ಣಶಕ್ತಿ ಹಾಳಾಗುವಿಕೆ, ಬಾಯಲ್ಲಿ ದುರ್ವಾಸನೆ, ದೃಷ್ಟಿ ದೋಷ, ತಲೆನೋವು, ಹೊಟ್ಟೆ ನೋವು, ನೆಗಡಿ,
ಕೆಮ್ಮು ಮುಂತಾದವು ಕಾಣಿಸಿಕೊಳ್ಳುತ್ತದೆ. ಈ ಅಭ್ಯಾಸವೇ ಮುಂದುವರಿದರೆ ಹೃದಯಾಘಾತಕ್ಕೂ ಕಾರಣವಾಗಬಹುದೆಂಬುದು
ಆಯುರ್ವೇದದ ಎಚ್ಚರಿಕೆ.
೨. ಪುರೀಷ ವೇಗ- ಹೀಗೆಂದರೆ ಮಲವಿಸರ್ಜನೆ. ತಿಂದ ಆಹಾರದ ಮಲ ಭಾಗವನ್ನು ದೇಹದಿಂದ ಹೊರಹಾಕುವ ಪ್ರಯತ್ನವೇ ಪುರೀಷ
ವೇಗ. ಇದನ್ನು ತಡೆಯುವುದರಿಂದ ಶರೀರದ ಕ್ರಿಯಾತ್ಮಕ ವಿಕೃತಿ ಅಲ್ಲದೆ ರಚನಾತ್ಮಕ ಶಾರೀರಿಕ ವಿಕೃತಿಗೂ ಕಾರಣವಾಗುತ್ತದೆ. ಮಲ ವೇಗವನ್ನು ತಡೆಯುವುದರಿಂದ ಕ್ರಮೇಣ ಪೈಲ್ಸ, ಫಿಸ್ಟುಲಾ, ತಲೆನೋವು, ಮೈಗ್ರೇನ್, ಕಣ್ಣಿನ ತೊಂದರೆ, ಕಾಲಿನ ಮೀನಖಂಡಗಳ ತೀವ್ರ ವೇದನೆ, ಹೊಟ್ಟೆ ಉಬ್ಬರ ಇತ್ಯಾದಿಗಳು ಕಾಣಿಸಿಕೊಳ್ಳುತ್ತವೆ.
೩. ಮೂತ್ರ ವೇಗ- ಬಹುಕಾಲ ಅಥವಾ ಪದೇ ಪದೆ ಮೂತ್ರವನ್ನು ತಡೆದರೆ ಚಿಕಿತ್ಸೆಗೆ ಅಸಾಧ್ಯವಾದ ಅನೇಕ ರೋಗಗಳು ಉಂಟಾಗುವುದರಲ್ಲಿ
ಸಂಶಯವಿಲ್ಲ. ಮೂತ್ರಕೋಶ, ಶಿಶ್ನ, ಅಂಡಕೋಶ ಮತ್ತು ಸೊಂಟಗಳಲ್ಲಿ ಅತಿಯಾದ ನೋವು, ನಡಿಗೆಯಲ್ಲಿ ತೊಂದರೆ, ಮೂತ್ರ ಮಾಡುವಾಗ
ಅಡೆತಡೆ ಉಂಟಾಗುವುದು, ಹೊಟ್ಟೆ ನೋವು, ಮೂತ್ರದಲ್ಲಿ ಕಲ್ಲು, ತಲೆನೋವು, ವೃಕ್ಕಗಳ ಕಾರ್ಯ ಹಾನಿ, ಗ್ರಂಥಿಗಳ ಶೋಥ ಇದರಿಂದ
ಕಾಣಿಸಿಕೊಳ್ಳುತ್ತವೆ. ಒಟ್ಟಾರೆ, ಪುರೀಷ ವೇಗದ ತಡೆಯಿಂದ ಉಂಟಾಗುವ ತೊಂದರೆಗಳಿಗಿಂತ ಮೂತ್ರ ವೇಗದ ತಡೆಯಿಂದ ಉಂಟಾಗುವ
ತೊಂದರೆಗಳು ಪ್ರಬಲವಾದವುಗಳು.
೪. ಉದ್ಗಾರ – ಹೀಗೆಂದರೆ ತೇಗು. ಮೇಲೆ ಮೇಲೆ ಬರುವ ತೇಗನ್ನು ತಡೆಯುವುದರಿಂದ ಬಾಯಿರುಚಿ ಹಾಳಾಗುವಿಕೆ, ಮೈ ಕೈ ಕಾಲುಗಳ
ನಡುಕ, ಎದೆ ಬಿಗಿತ, ಹೊಟ್ಟೆ ಉಬ್ಬರ, ಕೆಮ್ಮು, ಬಿಕ್ಕಳಿಕೆ ಮುಂತಾದವು ಕಂಡುಬರುತ್ತವೆ.
೫ , ೬. ಕ್ಷವತು ವೇಗ ಮತ್ತು ಜೃಂಭಾ ವೇಗ- ಕ್ಷವತು ಎಂದರೆ ಸೀನು ಮತ್ತು ಜೃಂಭಾ ಎಂದರೆ ಆಕಳಿಕೆ. ಶಿರಸ್ಸಿನಲ್ಲಿ ಪ್ರಾಣವಾಯುವಿನ
ಮಾರ್ಗಗಳಲ್ಲಿ ಸಣ್ಣ ಅಡಚಣೆ ಉಂಟಾದರೂ ಅದನ್ನು ಹೊರಹಾಕುವ ಪ್ರವೃತ್ತಿಯೇ ಸೀನು. ಅಂತೆಯೇ ಆಕಳಿಕೆ ಕೂಡ. ಕಾರಣಾಂತರಗಳಿಂದ,
ಸೀನನ್ನು ಮತ್ತು ಆಕಳಿಕೆಯನ್ನು ತಡೆಯುವುದು ಅಥವಾ ಅನಗತ್ಯವಾಗಿ ಪ್ರಚೋದಿಸುವುದು ಇವೆರಡೂ ಕ್ರಮಗಳಿಂದ ತಲೆನೋವು, ಕಣ್ಣು-ಕಿವಿ
ಮುಂತಾದ ಇಂದ್ರಿಯಗಳ ದೌರ್ಬಲ್ಯ, ಕತ್ತು ಉಳುಕು, ಅರ್ದಿತ ಮುಂತಾದ ವಾತರೋಗಗಳು ಉಂಟಾಗುತ್ತವೆ.
೭. ಅಶ್ರು ವೇಗ – ಹೀಗೆಂದರೆ ಕಣ್ಣೀರು. ಪದೇ ಪದೆ ಕಣ್ಣೀರನ್ನು ತಡೆಯುವುದರಿಂದ ನೆಗಡಿ, ಕಣ್ಣು ನೋವು, ತಲೆನೋವು, ಅರುಚಿ, ತಲೆ ತಿರುಗುವಿಕೆ ಮುಂತಾದ ರೋಗಗಳಿಗೆ ಅದು ಕಾರಣವಾಗುತ್ತದೆ.
೮. ಶ್ರಮಶ್ವಾಸ ಅಥವಾ ಶ್ರಮದ ದಮ್ಮು- ದೇಹ ಶ್ರಮ ಹೆಚ್ಚಿದಾಗ ಬರುವ ಏದುಸಿರನ್ನು ಶ್ರಮಶ್ವಾಸ ಎಂದು ಕರೆಯುತ್ತಾರೆ. ಶಕ್ತಿ ಮೀರಿ
ನಡೆಯುವುದು, ಅತಿಯಾಗಿ ವ್ಯಾಯಾಮ ಮಾಡುವುದು, ಅನಿಯಮಿತ ಮೈಥುನ ಮುಂತಾದ ಕ್ರಿಯೆಗಳಿಂದ ಶ್ರಮಶ್ವಾಸವು ಕಂಡುಬರುತ್ತದೆ. ಕ್ರಮವರಿತು, ಪ್ರಮಾಣವರಿತು ಮಾಡಿದ ದೇಹಶ್ರಮವು ಹೆಚ್ಚಿನ ಏದುಸಿರಿಗೆ ಕಾರಣವಾಗುವುದಿಲ್ಲ. ಆದರೆ, ಪ್ರಮಾಣ ಮೀರಿದಾಗ, ಕ್ರಮ ತಪ್ಪಿದಾಗ ಬರುವ ಶ್ರಮಶ್ವಾಸವು ದೇಹ ಬಲವನ್ನು ಇನ್ನೂ ಕುಂದಿಸುತ್ತದೆ. ಇದು ಉಂಟಾದಾಗ ಬಲವಂತವಾಗಿ ತಡೆ ಹಿಡಿದರೆ
ಹೃದ್ರೋಗಗಳಿಗೆ ಕಾರಣವಾಗುವುದಲ್ಲದೆ, ಎದೆ ನೋವು ಮೊದಲಾದ ಅಸಾಧ್ಯ ರೋಗಗಳನ್ನು ಉಂಟುಮಾಡುತ್ತದೆ.
೯. ಕಾಸ- ಹೀಗೆಂದರೆ ಕೆಮ್ಮು. ಕೆಮ್ಮು ಬಂದಾಗ ತಡೆಯುವುದು ಹಾಗೆಯೇ ಬಾರದಾಗ ಕೆಮ್ಮುವುದು- ಇವೆರಡೂ ಅನಾರೋಗ್ಯಕರ. ಹೀಗೆ
ತಡೆಯುವ ಕಾಸದಿಂದ ಶ್ವಾಸರೋಗ, ಹೃದ್ರೋಗ, ಬಾಯಿರುಚಿ ಕುಂದುವಿಕೆ, ಬಿಕ್ಕಳಿಸುವುದು, ದೇಹ ಒಣಗುವುದು ಉಂಟಾಗುತ್ತವೆ.
೧೦.ಛರ್ದಿ- ಹೀಗೆಂದರೆ ವಾಂತಿ. ಶರೀರವು ತನಗೆ ಬೇಡದ ವಸ್ತುಗಳನ್ನು ವಾಂತಿಯ ರೂಪದಲ್ಲಿ ಹೊರಹಾಕುವ ಯತ್ನದಲ್ಲಿzಗ, ಆ ವೇಗವನ್ನು
ತಡೆಹಿಡಿಯುವುದರಿಂದ ಮೈನವೆ, ಅನೇಕ ರೀತಿಯ ಚರ್ಮರೋಗ, ಸರ್ಪಸುತ್ತು, ಜ್ವರ, ಬಾಯಿರುಚಿ ಕೆಡುವುದು, ಎದೆಬಡಿತ ಹೆಚ್ಚುವುದು ಮುಂತಾದ ತೊಂದರೆಗಳು ಕಾಣಿಸಿಕೊಳ್ಳುತ್ತವೆ.
೧೧.ಶುಕ್ರ ವೇಗ- ಸಹಜ ಸನ್ನಿವೇಶಗಳಲ್ಲಿ ಉತ್ಪನ್ನವಾದ ಶುಕ್ರವೇಗವನ್ನು ಭಯ, ಲಜ್ಜೆ ಅಥವಾ ಇನ್ಯಾವುದೋ ಕಾರಣಗಳಿಂದ ತಡೆಯುವು ದನ್ನು ಶುಕ್ರವೇಗದ ಧಾರಣೆ ಎಂದು ಹೇಳಬಹುದು. ಕೃತ್ರಿಮ ಶುಕ್ರಸ್ರಾವಕ್ಕಾಗಿ ಬೇಕಾದ ಸನ್ನಿವೇಶಗಳನ್ನು ಕಲ್ಪಿಸುವುದು ಶುಕ್ರ ವೇಗವನ್ನು ಉತ್ತೇಜಿಸುವುದು ಎಂದರ್ಥ. ಇವೆರಡೂ ಅನಾರೋಗ್ಯಕರ ಪರಿಸ್ಥಿತಿಗಳು. ಇದರಿಂದ ವೃಷಣದಲ್ಲಿ ನೋವು, ಮೂತ್ರಾಶಯದ ರೋಗಗಳು, ಶುಕ್ರಾಷ್ಮರೀ, ನಪುಂಸಕತೆ ಮುಂತಾದ ಅನೇಕ ತೊಂದರೆಗಳು ಉಂಟಾಗುತ್ತವೆ.
೧೨,೧೩,೧೪. ಇನ್ನು ಉಳಿದ ಮೂರು ವೇಗಗಳೆಂದರೆ ಹಸಿವು, ಬಾಯಾರಿಕೆ ಮತ್ತು ನಿದ್ದೆ. ಶರೀರಕ್ಕೆ ಆಹಾರದ ಅಗತ್ಯವಿದ್ದಾಗ ಹಸಿವೆಯ
ಮೂಲಕ, ದ್ರವದ ಅವಶ್ಯಕತೆ ಇದ್ದಾಗ ಬಾಯಾರಿಕೆಯ ಮೂಲಕ ಮತ್ತು ವಿಶ್ರಾಂತಿಯ ಸಮಯ ಬಂದಾಗ ನಿದ್ದೆಯ ವೇಗದ ಮೂಲಕ ನಮಗೆ
ತಿಳಿಸುತ್ತದೆ. ಈ ಕರೆಗಳನ್ನು ಅವು ಬಂದಂತೆಯೇ ಗುರುತಿಸಿ, ಅವುಗಳಿಗೆ ಉತ್ತರಿಸಿದರೆ ದಿನನಿತ್ಯ ಸ್ವಾಸ್ಥ್ಯವನ್ನು ನವೀಕರಿಸಿಕೊಳ್ಳಬಹುದು.
ಒಟ್ಟಾರೆ ಹೇಳುವುದಾದರೆ ಶರೀರವು ನೀಡುವ ಈ ಸಹಜವಾದ ಸೂಚನೆಗಳನ್ನು ಸೂಕ್ಷ್ಮವಾಗಿ ಗಮನಿಸಿಕೊಂಡು ಅವನ್ನು ತಡೆಯದೆ ವಿಸರ್ಜಿಸಬೇಕು.
ಇಲ್ಲವಾದರೆ ಅವು ಅನೇಕ ರೋಗಗಳಿಗೆ ಕಾರಣವಾಗುವುದರಲ್ಲಿ ಸಂಶಯವಿಲ್ಲ. ವೇಗಗಳನ್ನು ತಡೆಯದೇ ಇರುವುದು ಎಷ್ಟು ಮುಖ್ಯವೋ ಅದೇ ರೀತಿ ಇಲ್ಲದಿರುವ ವೇಗವನ್ನು ಅನಗತ್ಯವಾಗಿ ಪ್ರಚೋದಿಸುವುದು ಅಷ್ಟೇ ತಪ್ಪು. ಹಾಗಾಗಿ ವೇಗಧಾರಣೆ ಬೇಡ, ಅಂತೆಯೇ ವೇಗ ಉದೀರಣೆಯೂ ಬೇಡ!
ಹಸನಾದ ಬೆಳೆಯನ್ನು ನೋಡಿ ಅದರ ಹಿನ್ನೆಲೆಯನ್ನು ಊಹಿಸುವ ರೀತಿಯಲ್ಲೇ, ಸರಿಯಾಗಿ ನಡೆಯುತ್ತಿರುವ ವೇಗಗಳಿಂದ ಸ್ವಾಸ್ಥ್ಯವನ್ನು
ತಿಳಿಯಬಹುದು. ಹಾಗಾಗಿ, ನಿಮ್ಮ ವೇಗಗಳ ಅರಿವು ನಿಮಗಿರಲಿ. ಈ ವೇಗಗಳಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಆದರೂ ಅದನ್ನು ತಕ್ಷಣವೇ ಗುರುತಿಸಿ
ಸೂಕ್ತ ಚಿಕಿತ್ಸೆಯನ್ನು ತೆಗೆದುಕೊಂಡರೆ, ಅದರಿಂದ ಬೃಹತ್ತಾಗಿ ಬೆಳೆಯುವ ಅನೇಕ ರೋಗಗಳನ್ನು ತಡೆದು ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಬಹುದು.
ಆಗಬೇಕಾದರೆ ಸ್ವಾಸ್ಥ್ಯರಕ್ಷಣೆ, ಮಾಡಬೇಡಿ ವೇಗಧಾರಣೆ!
ಇದನ್ನೂ ಓದಿ: Dr SadhanaShri column: ಶರತ್ ಋತುವಿನ ಆಹಾರದ ಷರತ್ತುಗಳು