Thursday, 19th September 2024

ಈಶ್ವರಪ್ಪ ಮಂತ್ರಿಗಿರಿಗೆ ಡಿಕೆಶಿ ಅಡ್ಡಗಾಲು

ಮೂರ್ತಿಪೂಜೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಂಪುಟ ವಿಸ್ತರಣೆಗೆ ಅನುಮತಿ ಪಡೆಯಲು ಸಜ್ಜಾಗಿದ್ದಾರೆ. ‘ದಸರೆಯ ನಂತರ ದಿಲ್ಲಿಗೆ ಹೋಗುತ್ತೇನೆ, ಸಂಪುಟ ವಿಸ್ತರಣೆಗೆ ಅನುಮತಿ ಪಡೆದು ಬರುತ್ತೇನೆ’ ಅಂತ ಅವರು ಮಂತ್ರಿಪದವಿ ಆಕಾಂಕ್ಷಿ ಗಳಿಗೆ ಈ ಹಿಂದೆ ಭರವಸೆ ನೀಡಿದ್ದು ರಹಸ್ಯವೇನಲ್ಲ.

ಇದರನ್ವಯ ಅವರು ದಿಲ್ಲಿಗೆ ಹೋಗಲು ಅಣಿಯಾಗಿದ್ದಾರೆ. ಅಷ್ಟೇ ಅಲ್ಲ, ಭೇಟಿಗೆ ಅವಕಾಶ ಕೊಡಿ ಅಂತ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರಿಗೂ ಸಮಯ ಕೇಳಿದ್ದಾರೆ. ಆದರೆ ನಡ್ಡಾರಿಂದ ಪೂರಕ ಪ್ರತಿಕ್ರಿಯೆ ಸಿಕ್ಕಿಲ್ಲ. ಅರ್ಥಾತ್, ಸಂಪುಟ ವಿಸ್ತರಣೆ ಮಾಡಬೇಕು, ಕನಿಷ್ಠಪಕ್ಷ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ, ರಮೇಶ್ ಜಾರಕಿಹೊಳಿ ಅವರನ್ನಾದರೂ ಮಂತ್ರಿಮಂಡಲಕ್ಕೆ ತೆಗೆದುಕೊಳ್ಳಬೇಕು ಅಂತ ಮುಖ್ಯಮಂತ್ರಿಗಳು ಪ್ರಾಮಾಣಿಕವಾಗಿ ಬಯಸಿ ದ್ದರೂ ವರಿಷ್ಠರಿಗೆ ಈ ವಿಷಯದಲ್ಲಿ ಆಸಕ್ತಿಯಿರು ವಂತೆ ಕಾಣುತ್ತಿಲ್ಲ.

ಅಂದ ಹಾಗೆ, ಸಂಪುಟ ವಿಸ್ತರಣೆ, ಪುನರ್‌ರಚನೆಗೆ ಸಂಬಂಧಿಸಿ ಕಳೆದ ಏಳೆಂಟು ತಿಂಗಳಿಂದ ಬೊಮ್ಮಾಯಿ ನಡೆಸಿದ ಯಾವ ಕಸರತ್ತೂ ಫಲಪ್ರದ ವಾಗಿಲ್ಲ. ಕಾರಣ? ಇವರಿಗೆ ಆಸಕ್ತಿಯಿದ್ದರೂ ದಿಲ್ಲಿಯವರಿಗೆ ಆತುರವಿಲ್ಲ. ಹೀಗಾಗಿ ಮಂತ್ರಿ ಮಂಡಲಕ್ಕೆ ಸೇರ್ಪಡೆಯಾಗಲು ಹೋರಾಟ ಮಾಡುತ್ತ ಬಂದಿದ್ದ ಎಂ.ಪಿ. ರೇಣುಕಾಚಾರ್ಯ, ರಾಜುಗೌಡರಂಥ ಶಾಸಕರು, ‘ಇನ್ನು ನಮಗೆ ಮಂತ್ರಿಗಿರಿ ಬೇಡ. ಮಂತ್ರಿಯಾದರೆ ಅನುಕೂಲಕ್ಕಿಂತ ಸಮಸ್ಯೆಯೇ ಜಾಸ್ತಿ’ ಅಂತ ಬೊಮ್ಮಾಯಿ ಎದುರೇ ಹೇಳಿ ಕೈ ತೊಳೆದುಕೊಂಡಿದ್ದಾರಂತೆ.

ಆದರೆ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಮತ್ತು ರಮೇಶ್ ಜಾರಕಿಹೊಳಿ ಅವರಿಗೆ ಮಾತ್ರ ಇದು ‘ಇಜ್ಜತ್ ಕಿ ಸವಾಲ್’ ಆಗಿ ಪರಿಣಮಿಸಿದೆ. ‘ಮಂತ್ರಿಗಿರಿಯಿಂದ ನಮಗೇನೂ ಆಗಬೇಕಿಲ್ಲ. ಆದರೆ ಆರೋಪ ಹೊತ್ತು ಮಂತ್ರಿಪದವಿಗೆ ರಾಜೀನಾಮೆ ನೀಡಿದ್ದ ನಾವು ಈಗ ಮರಳಿ ಮಂತ್ರಿಮಂಡಲಕ್ಕೆ ಸೇರ್ಪಡೆಯಾಗದಿದ್ದರೆ, ವಿರೋಧಿಗಳು ಇದನ್ನೇ ಅಸ್ತ್ರವನ್ನಾಗಿಸಿಕೊಂಡು ಅಪಪ್ರಚಾರ ಮಾಡುತ್ತಾರೆ’ ಎಂಬುದು ಇವರ ವಾದ.

ಅಂದ ಹಾಗೆ, ‘ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣಕ್ಕೂ ಈಶ್ವರಪ್ಪ ಅವರಿಗೂ ಸಂಬಂಧವಿಲ್ಲದಿದ್ದರೆ ಇದುವರೆಗೆ ಯಾಕೆ ಅವರನ್ನು ಮಂತ್ರಿಮಂಡಲಕ್ಕೆ ತೆಗೆದುಕೊಳ್ಳಲಿಲ್ಲ? ಅಂತ ವಿರೋಧಿಗಳು ಬಾಣ ಎಸೆದರೆ ಅದಕ್ಕೇನು ಉತ್ತರ ಕೊಡು ವುದು?’ ಅಂತ ಈಶ್ವರಪ್ಪ ಕೇಳುತ್ತಿದ್ದಾರಂತೆ. ಈಶ್ವರಪ್ಪ ಹಾಗೆ ಕೇಳಿದಾಗಲೆಲ್ಲ ಬೊಮ್ಮಾಯಿಯವರು ಎತ್ತಿದ ಮಾತಿಗೇ ಮಂತ್ರಿಮಂಡಲ ವಿಸ್ತರಣೆಯ ಡೇಟು ಕೊಟ್ಟು ‘ನೀವು ಮಂತ್ರಿಯಾಗುವುದು ಗ್ಯಾರಂಟಿ ಸರ್’ ಎನ್ನುತ್ತಿದ್ದಾರೆ.

ಅವರು ಕೊಟ್ಟ ಡೇಟುಗಳನ್ನುನಂಬಿ ನಂಬಿ ಈಶ್ವರಪ್ಪ ಕೂಡಾ ನಿರಾಶರಾಗಿದ್ದಾರೆ. ತಾವು ಆರೋಪ ಮುಕ್ತರಾದ ಮೇಲೆ ಸಂಪುಟಕ್ಕೆ ಮರುಸೇರ್ಪಡೆಯಾಗಬೇಕಿತ್ತು. ಆದರೆ ಇದಕ್ಕೆ ತಡೆಯೊಡ್ಡುತ್ತಿರುವವರು ಯಾರು? ಎಂಬುದು ಈಶ್ವರಪ್ಪ ಅವರಿಗೆ ತಲೆನೋವಿನ ಪ್ರಶ್ನೆಯಾಗಿದೆ. ಈಗ ಅವರ ಪರವಾಗಿ ಕೆಲಸಮಾಡುವ ಗೂಢಚಾರರು, ‘ನೀವು ಸಂಪುಟಕ್ಕೆ ಸೇರ್ಪಡೆಯಾಗ ದಿರಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರೇ ಕಾರಣ’ ಅಂತ ಕುಮಾರಪಾರ್ಕ್ ಹಿಂಭಾಗದಲ್ಲಿರುವ ಅವರ ಮನೆಯ ಬಳಿಯೇ ಬಾಂಬ್ ಸಿಡಿಸಿದ್ದಾರಂತೆ.

‘ಹೇಗೆ?’ ಅಂತ ಕೇಳಿದರೆ, ‘ಭಗವಾಧ್ವಜದ ವಿಚಾರ ಬಂದಾಗ ವಿಧಾನಸಭೆಯಲ್ಲಿ ನೀವು ಶಿವಕುಮಾರ್ ಅವರ ತಂದೆಯ ಹೆಸರನ್ನು ಎತ್ತಾಡಿದಿರಿ. ಇದು ಅವರನ್ನು ವಿಪರೀತ ಹರ್ಟ್ ಮಾಡಿದೆ. ಹೀಗಾಗಿ ಶತಾಯಗತಾಯ ನೀವು ಸಂಪುಟಕ್ಕೆ ಸೇರ್ಪಡೆಯಾಗದಂತೆ ಅವರು ಒತ್ತಡ ಹೇರುತ್ತಿದ್ದಾರೆ’ ಅಂತ ಗೂಢಚಾರರು ವಿವರಿಸಿದ್ದಾರೆ.

‘ನನ್ನ ಮಾತಿನಿಂದ ಶಿವಕುಮಾರ್ ಅವರಿಗೆ ಹರ್ಟ್ ಆಗಿರುವುದು ನಿಜ, ಒಪ್ಪುತ್ತೇನೆ. ಮಾತಿನ ಭರದಲ್ಲಿ ನಾನು ಹಾಗಂದಿದ್ದು ನಿಜ. ಆದರೆ ಅವರನ್ನು ನೋಯಿಸಬೇಕು ಎಂಬುದು ನನ್ನ ಉದ್ದೇಶವಾಗಿರಲಿಲ್ಲ. ಆದರೆ ಇದನ್ನು ಹಿಡಿದುಕೊಂಡು ಅವರು ಯಾರ ಮೇಲೆ ಒತ್ತಡ ಹೇರುತ್ತಿದ್ದಾರೆ?’ ಅಂತ ಈಶ್ವರಪ್ಪ ಅಚ್ಚರಿ ವ್ಯಕ್ತಪಡಿಸಿದಾಗ ಗೂಢಚಾರರು, “ನೀವು ಸಂಪುಟಕ್ಕೆ ಸೇರದಂತೆ ನೋಡಿಕೊಳ್ಳಲು ಶಿವಕುಮಾರ್ ಅವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲೆ ಒತ್ತಡ ಹೇರು ತ್ತಿದ್ದಾರೆ.

ಎಷ್ಟೇ ಆದರೂ ಡಿಕೆಶಿ ಮತ್ತು ಯಡಿಯೂರಪ್ಪ ಕ್ಲೋಜು. ಹೀಗಾಗಿ ಡಿಕೆಶಿ ಒತ್ತಡದ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರು ವರಿಷ್ಠರಿಗೆ ‘ಸಂಪುಟ ವಿಸ್ತರಣೆಯ ಅಗತ್ಯವೇನಿಲ್ಲ’ ಎಂದು ಹೇಳುತ್ತಿದ್ದಾರೆ. ಎಷ್ಟೇ ಆದರೂ ಕರ್ನಾಟಕದ ಲಿಂಗಾಯತ ಮತದಾರರ ಮೇಲೆ ಯಡಿಯೂರಪ್ಪ ಅವರಿಗೆ ಈಗಲೂ ದೊಡ್ಡ ಪ್ರಭಾವವಿದೆ. ಹೀಗಿರುವಾಗ ಅವರ ಸಲಹೆ ಪಾಲಿಸುವುದು ಸೂಕ್ತವೆಂದು ವರಿಷ್ಠರು ಸಂಪುಟ ವಿಸ್ತರಣೆಯ ವಿಷಯದಲ್ಲಿ ಮೌನವಾಗಿದ್ದಾರೆ” ಅಂತ ವಿವರಿಸಿದ್ದಾರೆ.

ಹೀಗಾಗಿ, ‘ನನ್ನ ವಿರುದ್ಧ ಪಕ್ಷದ ಒಂದು ಷಡ್ಯಂತ್ರ ನಡೆಯುತ್ತಿದೆಯೆಂದು ಗೊತ್ತಿತ್ತು. ಆದರೆ ಇದು ತೀರಾ ಮ್ಯಾಚ್ ಫಿಕ್ಸಿಂಗ್ ಲೆವೆಲ್ಲಿನಲ್ಲಿದೆ ಅಂತ ಗೊತ್ತಿರಲಿಲ್ಲ’ ಎಂದು ಈಶ್ವರಪ್ಪ ಆಪ್ತರ ಬಳಿ ಹೇಳುತ್ತಿದ್ದಾರಂತೆ. ಹೀಗೆ ಈಶ್ವರಪ್ಪ ಅವರಿಗೆ ದಕ್ಕಿದ ಮಾಹಿತಿ ಏನೇ ಇರಲಿ, ಬೊಮ್ಮಾಯಿಯವರು ಮಾತ್ರ ‘ದೀಪಾವಳಿ ಕಳೆದ ಕೂಡಲೇ ನೀವು ಮಂತ್ರಿಯಾಗುತ್ತೀರಿ’ ಅಂತ ಈಶ್ವರಪ್ಪನವರಿಗೆ ಮತ್ತೊಂದು ಡೇಟು ಕೊಟ್ಟಿದ್ದಾರೆ. ಅದರನ್ವಯ, ಈ ಬಾರಿ ಬೊಮ್ಮಾಯಿ ದಿಲ್ಲಿಗೆ ಹೋಗಬಹುದು. ಆದರೆ
ಅವರು ವಾಪಸ್ಸು ಬರುವಾಗ ತಮಗೆ ಮಂತ್ರಿಗಿರಿಯ ಗಿಫ್ಟ್ ತರುತ್ತಾರೆ ಎಂಬ ನಂಬಿಕೆ ಈಶ್ವರಪ್ಪ ಅವರಿಗಿಲ್ಲ.

***

ಅಂದ ಹಾಗೆ, ಮೊನ್ನೆ ಮೊನ್ನೆಯವರೆಗೂ ತಮ್ಮ ಪುತ್ರ ವಿಜಯೇಂದ್ರ ಅವರನ್ನು ಬೊಮ್ಮಾಯಿ ಸಂಪುಟಕ್ಕೆ ಸೇರಿಸಲು ಕಸರತ್ತು ಮಾಡುತ್ತಿದ್ದ ಯಡಿಯೂರಪ್ಪ ಈಗ ಸುಮ್ಮನಿರಲು ನಿರ್ಧರಿಸಿದ್ದಾರಂತೆ. ವಸ್ತುಸ್ಥಿತಿ ಎಂದರೆ ವಿಜಯೇಂದ್ರ ಅವರಿಗೆ ವಿಧಾನ ಪರಿಷತ್ತಿನ ಟಕೆಟ್ ಸಿಗುವಂತೆ ನೋಡಿಕೊಳ್ಳಬೇಕು, ನಂತರ ಸಂಪುಟಕ್ಕೆ ಸೇರ್ಪಡೆ ಮಾಡಿಸಬೇಕು; ಇಷ್ಟು ಮಾಡಿದರೆ ಸಾಕು, ಮುಂದಿನ ಚುನಾವಣೆಯ ವೇಳೆಗೆ ರಾಜ್ಯ ಬಿಜೆಪಿ ಸೈನ್ಯದ ಮುಂದೆ ವಿಜಯೇಂದ್ರ ದಂಡನಾಯಕನಾಗಿ ನಿಲ್ಲುವುದು ಸುಲಭ ಅಂತ ಯಡಿಯೂರಪ್ಪ ಯೋಚಿಸಿದ್ದರು.

ಅಂತೆಯೇ, ‘ನನ್ನ ಮಗ ಇನ್ನೂ ೬ ವರ್ಷ ವಿಧಾನಸಭೆ ಚುನಾವಣೆಗೆ ನಿಲ್ಲುವುದು ಬೇಡ’ ಅಂತ ಯಡಿಯೂರಪ್ಪ ಹೇಳುತ್ತಿದ್ದ ರಂತೆ. ಹೀಗೆ ಹೇಳಿದರೆ ವಿಜಯೇಂದ್ರರಿಗೆ ವಿಧಾನಪರಿಷತ್ತಿನ ಟಿಕೆಟ್ ಆದರೂ ಸಿಗುತ್ತದೆ ಎಂಬುದು ಯಡಿಯೂರಪ್ಪ ಅವರ ಲೆಕ್ಕಾಚಾರ. ಆದರೆ ಅವರೇನೇ ಲೆಕ್ಕ ಹಾಕಿದರೂ ಮೋದಿ-ಅಮಿತ್ ಶಾ ಜೋಡಿ ತಪ್ಪಲೆ ಮಗುಚಿ ಹಾಕುತ್ತಿದೆ. ಇದರಿಂದ ಯಡಿಯೂರಪ್ಪ ಅವರಿಗೆ ಕೆಂಡದಂಥ ಕೋಪ ಬಂದಿದೆಯಾದರೂ, ಅದನ್ನು ತೋರಿಸಿಕೊಳ್ಳಲು ಇದು ಸಕಾಲವಲ್ಲ ಅಂತ ಸುಮ್ಮನಾಗಿದ್ದಾರೆ.

ಅಷ್ಟೇ ಅಲ್ಲ, ಈಗವರು ಇದ್ದಕ್ಕಿದ್ದಂತೆ ‘ಯೂ-ಟರ್ನ್’ ಹೊಡೆದಿದ್ದಾರೆ. ಕಾರಣ? ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ವಿಜಯೇಂದ್ರರಿಗೆ ಶಿಕಾರಿಪುರ ಕ್ಷೇತ್ರದ ಟಿಕೆಟ್ ಸಿಕ್ಕರೆ ಸಾಕು, ಉಳಿದಿದ್ದನ್ನು ಮುಂದೆ ನೋಡಬಹುದು ಅನ್ನುವುದು ಒಂದು ಯೋಚನೆ. ಉಳಿದಂತೆ ತಾವು ಅಧಿಕಾರದಲ್ಲಿದ್ದಾಗ ಮಾಡಿಕೊಂಡ ಕಮಿಟ್‌ಮೆಂಟುಗಳನ್ನು ಬೊಮ್ಮಾಯಿ ಸರಕಾರ ಈಡೇರಿಸಿದರೆ ಸಾಕು ಎಂಬುದು ಅವರ ಮತ್ತೊಂದು ಯೋಚನೆ. ಈ ಯೋಚನೆಗೆ ಬೊಮ್ಮಾಯಿಯವರು ಯಾವತ್ತೂ ಭಂಗ ತಂದಿಲ್ಲ.

ಹಿಂದೆ ಡಿ.ವಿ. ಸದಾನಂದಗೌಡರು ಮುಖ್ಯಮಂತ್ರಿಯಾಗಿದ್ದಾಗ ಯಡಿಯೂರಪ್ಪ ಅವರ ಕಮಿಟ್‌ಮೆಂಟುಗಳಿಗೆ ತಲೆ ಕೊಡು
ತ್ತಿರಲಿಲ್ಲ. ಇದೇ ಕಾರಣಕ್ಕಾಗಿ ಅವತ್ತು ಯಡಿಯೂರಪ್ಪ ದಂಗೆ ಎಬ್ಬಿಸಿ ಅವರನ್ನು ಕೆಳಗಿಳಿಸಿದ್ದರು. ಇದು ಬೊಮ್ಮಾಯಿಗೆ ಗೊತ್ತಿರುವ ಇತಿಹಾಸ. ಏಕೆಂದರೆ ಸದಾನಂದಗೌಡರನ್ನು ಕೆಳಗಿಳಿಸಿ, ಜಗದೀಶ್ ಶೆಟ್ಟರ್ ಅವರಿಗೆ ಪಟ್ಟಕಟ್ಟಲು ಹೊರಟಾಗ ಬೊಮ್ಮಾಯಿಯವರು ಯಡಿಯೂರಪ್ಪ ಅವರ ಸೈನ್ಯದ ಕಮಾಂಡರ್ ಆಗಿದ್ದರು. ಇದು ಗೊತ್ತಿರುವುದರಿಂದಲೇ ಅವರು ಯಡಿಯೂರಪ್ಪ ಅವರ ಕಮಿಟ್‌ಮೆಂಟುಗಳಿಗೆ ಅಡ್ಡಿಯಾಗುತ್ತಿಲ್ಲ. ಹೀಗಿರುವಾಗ ಯಡಿಯೂರಪ್ಪ ಅವರಾದರೂ ಯಾಕೆ ಉಲ್ಟಾ ಹೊಡೆಯುತ್ತಾರೆ?

***

ಅಂದ ಹಾಗೆ, ರಾಜ್ಯದಲ್ಲಿ ಬಿಜೆಪಿಯನ್ನು ಮರಳಿ ಅಧಿಕಾರಕ್ಕೆ ತರಲು ಬೊಮ್ಮಾಯಿ ಜನಸಂಕಲ್ಪ ಯಾತ್ರೆ ಹೊರಟಿರುವು ದೇನೋ ಸರಿ. ಆದರೆ ಕೆಲ ಹಿರಿಯ ಮಂತ್ರಿಗಳು ಮಾತ್ರ, ‘ಮುಂದಿನ ಚುನಾವಣೆಯಲ್ಲಿ 2018ರ ರಿಸಲ್ಟು ಮರುಕಳಿಸ ಬಹುದು’ ಅಂತ ಹೇಳತೊಡಗಿದ್ದಾರೆ. ವ್ಯತ್ಯಾಸವೆಂದರೆ ಅವತ್ತು ಬಿಜೆಪಿ ಇದ್ದ ಜಾಗದಲ್ಲಿ ಕಾಂಗ್ರೆಸ್, ಕಾಂಗ್ರೆಸ್ ಇದ್ದ ಜಾಗದಲ್ಲಿ ಬಿಜೆಪಿ ಇರುತ್ತವೆ ಎಂಬುದು ಇವರ ವಿಶ್ಲೇಷಣೆ.

ಅವತ್ತು ಬಿಜೆಪಿ 104 ಸೀಟು ಗೆದ್ದರೆ, ಕಾಂಗ್ರೆಸ್ ೮೦ರ ಗಡಿಗೆ ಬಂದು ನಿಂತಿತ್ತು. ಮುಂದಿನ ಸಲ ಇದು ಉಲ್ಟಾ ಆಗಿ
ಕಾಂಗ್ರೆಸ್ ಅತ್ಯಂತ ದೊಡ್ಡ ಶಕ್ತಿಯಾಗಿ ಹೊರಹೊಮ್ಮುತ್ತದೆ. ಹೀಗಾಗಿ 2023ರ ಚುನಾವಣೆಯ ನಂತರ ನಾವು ಜೆಡಿಎಸ್
ಜತೆ ಕೈಜೋಡಿಸುವುದು ಅನಿವಾರ್ಯ ಎಂಬುದು ಈ ಸಚಿವರ ಮಾತು. ಇವತ್ತು ಮಾತೆತ್ತಿದರೆ, ಕಾರ್ಯಕರ್ತರೇ ನಮ್ಮ ಆಸ್ತಿ,
ಬೇರೆ ಪಕ್ಷಗಳಿಗೆ ಹೋಲಿಸಿದರೆ ಬೂತ್ ಮಟ್ಟದಲ್ಲಿ ಬಿಜೆಪಿ ಕಾರ್ಯಕರ್ತರ ಪಡೆ ಬಲಿಷ್ಠವಾಗಿದೆ ಅಂತ ಕೊಚ್ಚಿಕೊಳ್ಳುತ್ತಿರುವುದು ಸರಿ.

ಆದರೆ ಬಿಜೆಪಿ ಸರಕಾರದ ಅವಧಿಯದ ಬೆಲೆ ಹೆಚ್ಚಳದ ಬಿಸಿಗೆ ‘ಉರಿ ಉರಿ’ ಎನ್ನುತ್ತಿರುವ ಮತದಾರರನ್ನು ಕಾರ್ಯಕರ್ತರು ತಂಪು ಮಾಡಲು ಸಾಧ್ಯವೇ? ಹೀಗೆ ಹೇಳಲು ಹೋದರೆ ಲಿಂಗಾಯತರ ಅಸಮಾಧಾನ ದಿಂದ ಹಿಡಿದು ಇನ್ನೂ ಹಲವು ವಿಷಯಗಳು ಬಿಜೆಪಿಗೆ ಹೊಡೆತ ನೀಡಲಿವೆ. ಹೀಗಾಗಿ ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಮೈತ್ರಿ ಸರಕಾರಕ್ಕೆ ಅಣಿಯಾಗು ವುದು ಅನಿವಾರ್ಯ. ಹೀಗಾಗಿ ಪಕ್ಷಕ್ಕೆ ಗೆಲ್ಲುವ ಕ್ಯಾಂಡಿಡೇಟುಗಳು ಬೇಕು ಅಂತ ಜೆಡಿಎಸ್ ಕೊಳದಲ್ಲಿ ಗಾಳ ಹಾಕಬಾರದು.

ಹಾಗೇನಾದರೂ ಹಾಕಿದರೆ ಅದು ಕಾಂಗ್ರೆಸ್ಸಿಗೆ ಲಾಭವಾಗುವ ಸಾಧ್ಯತೆ ಜಾಸ್ತಿ. ಆದ್ದರಿಂದ ಎಲ್ಲಿ ಕಾಂಗ್ರೆಸ್ಸಿಗೆ ಜೆಡಿಎಸ್ ಪ್ರಮುಖ ಎದುರಾಳಿಯೋ, ಅಲ್ಲಿ ನಾವೇ ಅದನ್ನು ಬೆಂಬಲಿಸಬೇಕು. ಅ ಮೂಲಕ ಅದರ ಶಕ್ತಿ ಹೆಚ್ಚಿಸಬೇಕು. ಹೀಗೆ ಅದಕ್ಕೆ ಶಕ್ತಿ ಕೊಟ್ಟರೆ ತಾನೆ ಮೈತ್ರಿ ಸರಕಾರ ಮಾಡೋಣ ಅಂತ ಹೇಳಲು ಸಾಧ್ಯ? ಇಲ್ಲದಿದ್ದರೆ ಹಾಗೆ ಹೇಳುವ ಶಕ್ತಿ ನಮಗೇ ಇಲ್ಲದಂತಾ ಗಬಹುದು ಎಂಬುದು ಈ ಸಚಿವರ ಅಭಿಪ್ರಾಯ. ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು ಎಂಬುದಕ್ಕೆ ಇದು ಸಾಕ್ಷಿ.