Saturday, 7th September 2024

ಡೊನಾಲ್ಡ್ ಟ್ರಂಪ್ ಎಂಬ ಅಮೆರಿಕದ ದೇವಮಾನವ

ಅಕ್ಬರ್‌ ನಾಮಾ

ಎಂ.ಜೆ.ಅಕ್ಬರ್‌

ಅಮೆರಿಕವನ್ನು ಉಳಿಸುವುದಕ್ಕಾಗಿ ದೇವರೇ ಡೊನಾಲ್ಡ್ ಟ್ರಂಪ್ ಅವರನ್ನು ಗುಂಡಿನ ದಾಳಿಯಿಂದ ಉಳಿಸಿದ್ದಾನೆ ಎಂದು ಅಮೆರಿಕದ ಬಹುತೇಕ ಜನರು ನಂಬಿದ್ದಾರೆ. ಆದರೆ, ಟ್ರಂಪ್ ಅಽಕಾರಕ್ಕೆ ಬಂದ ಮೇಲೆ ಅಮೆರಿಕದ ವಿದೇಶಾಂಗ ನೀತಿಯನ್ನು ದೇವರ ಕೈಗಳು ಬರೆಯುವು ದಿಲ್ಲ. ವಿದೇಶಾಂಗ ನೀತಿಯನ್ನು ರಚಿಸುವವರ ಮೇಲೆ ದೇವರು ಒಂದಷ್ಟು ಪ್ರಭಾವ ಬೀರಬಹುದಷ್ಟೆ.

ಯಾರು ದೇವರನ್ನು ನಂಬುತ್ತಾರೋ ಅವರಿಗೇ ದೇವರು ಸೇರಿದ್ದಾನೆ ಎನ್ನುವ ಮಾತು ನಿಜವಾಗಿದ್ದರೆ ಈ ವಾರ ದೇವರು ಅಮೆರಿಕನ್ ಆಗಿದ್ದಾನೆ. ಅದಿಲ್ಲವಾದರೆ ಮುಖಕ್ಕೇ ಗುಂಡು ತಾಗಿ, ಅದು ಕೇವಲ ಕಿವಿಯ ತುದಿಯಲ್ಲಿ ಮಾತ್ರ ರಕ್ತ ಬರುವಂತೆ ಸಣ್ಣದೊಂದು ಗಾಯ ಮಾಡಿ ಮಾಯವಾಗಲು
ಹೇಗೆ ಸಾಧ್ಯವಿತ್ತು? ದೇವರ ಆಟವಲ್ಲದೆ ಇದು ಮತ್ತೇನಿರಲು ಸಾಧ್ಯ? ಇದು ನನ್ನ ವಾದವಲ್ಲ. ಪೆನ್ಸಿಲ್ವೇನಿಯಾದಲ್ಲಿ ಡೊನಾಲ್ಡ್ ಟ್ರಂಪ್ ಗುಂಡಿನ ದಾಳಿಯಿಂದ ಬಚಾವಾದ ಮೇಲೆ ರಿಪಬ್ಲಿಕನ್ ಪಕ್ಷದವರೇ ಮಂಡಿಸುತ್ತಿರುವ ವಾದವಿದು. ಗುಂಡಿನ ದಾಳಿಯ ಕೆಲ ದಿನಗಳ ಬಳಿಕ ರಿಪಬ್ಲಿಕನ್ ಪಕ್ಷದ ಸಮಾವೇಶದಲ್ಲಿ ಮಾತನಾಡಿದ ಪಾದ್ರಿಯೊಬ್ಬರು ‘ಖಂಡಿತ ನಾನಿದನ್ನು ಅದೃಷ್ಟ ಎನ್ನುವುದಿಲ್ಲ… ನನಗೆ ಇದರಲ್ಲಿ ದೇವರ ಕೈಗಳು ಕಾಣಿಸುತ್ತಿವೆ…
ದೇವರೇ ಟ್ರಂಪ್ ಅವರನ್ನು ಕಾಪಾಡಿದ್ದಾನೆ ಎಂದು ಹೇಳಿದರು.

ಟ್ರಂಪ್ ಕೂಡ ಇದು ದೇವರದೇ ಆಟ ಎಂದು ನಂಬುತ್ತಾರೆ. ಹೆಚ್ಚಿನ ಅಮೆರಿಕನ್ನರಿಗೆ ಅನುಮಾನ ಎಂಬುದು ನಂಬಿಕೆಗೆ ವಿರುದ್ಧಾರ್ಥಕ ಪದ. ದೇವರ ಅಸ್ತಿತ್ವವನ್ನು ಅನುಮಾನದಿಂದ ನೋಡುವ ಯುರೋಪಿಯನ್ನರಂತೆ ಅಮೆರಿಕನ್ನರು ಅಲ್ಲ. ಅಮೆರಿಕದಲ್ಲಿ ಅeಯತಾವಾದಕ್ಕೆ ಬೆಲೆಯಿಲ್ಲ. ಅಂದರೆ ಅವರಿಗೆ ದೇವರ ಅಸ್ತಿತ್ವದ ಬಗ್ಗೆ ಯಾವ ಅನುಮಾನವೂ ಇಲ್ಲ. ಟ್ರಂಪ್ ಮೇಲೆ ದಾಳಿಗೆ ಯತ್ನ ನಡೆದ ಬೆನ್ನಲ್ಲೇ ನಡೆದ ರಾಯ್ಟರ್ಸ್-ಇಪ್ಸೋಸ್ ಜನಮತಗಣನೆ ನಡೆದಿತ್ತು. ಅದರ ಫಲಿತಗಳು ಜುಲೈ ೧೬ರಂದು ಪ್ರಕಟವಾಗಿದ್ದವು. ಅದರಲ್ಲಿ ರಿಪಬ್ಲಿಕನ್ ಪಕ್ಷದ ಶೇ.೬೫ರಷ್ಟು ಮತದಾರರು ‘ದೇವರೇ ಟ್ರಂಪ್ ಅವರನ್ನು ಉಳಿಸಿದ್ದಾನೆ ಎಂದು ಹೇಳಿದರು.

ಟ್ರಂಪ್ ಅವರನ್ನು ವಿರೋಧಿಸುವ ಡೆಮಾಕ್ರೆಟಿಕ್ ಪಕ್ಷದ ಮತದಾರರಲ್ಲೂ ಶೇ.೧೧ರಷ್ಟು ಜನರು ಇದೇ ನಂಬಿಕೆಯನ್ನು ವ್ಯಕ್ತಪಡಿಸಿದ್ದರು. ಅಡ್ಡಗೋಡೆ ಯ ಮೇಲೆ ಕುಳಿತಿರುವ ಇವರೂ ಟ್ರಂಪ್ ಬೆನ್ನಿಗೇನಾದರೂ ನಿಂತರೆ ನವೆಂಬರ್‌ನಲ್ಲಿ ನಡೆಯಲಿರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷ ಕ್ಲೀನ್ ಸ್ವೀಪ್ ಮಾಡಿ ಗೆಲುವಿನ ನಗೆ ಬೀರುವುದರಲ್ಲಿ ಅನುಮಾನವೇ ಇಲ್ಲ. ೨೦೨೨ರಲ್ಲೂ ರಾಯ್ಟರ್ಸ್ ಇಂಥದ್ದೇ ಸಮೀಕ್ಷೆ ಯೊಂದನ್ನು ನಡೆಸಿತ್ತು. ಆಗ ಶೇ.೭೭ರಷ್ಟು ಅಮೆರಿಕನ್ನರು ದೇವರನ್ನು ನಂಬುತ್ತಾರೆ ಎಂಬುದು ಪತ್ತೆಯಾಗಿತ್ತು. ಆದರೆ ಬ್ರಿಟಿಷರಲ್ಲಿ ಕೇವಲ ಶೇ.೩೯ ರಷ್ಟು ಜನರು ಮಾತ್ರ ದೇವರನ್ನು ನಂಬುತ್ತಿದ್ದರು. ಈ ನಂಬಿಕೆ ರಾಜಕೀಯದ ಮೇಲೂ ಪರಿಣಾಮ ಬೀರುತ್ತದೆ.

ವಾಸ್ತವವಾಗಿ ಜೋ ಬೈಡೆನ್‌ಗೆ ಇದು ಕೆಟ್ಟ ಸುದ್ದಿ. ಸಮೀಕ್ಷೆಗಳ ಪ್ರಕಾರ ಅಮೆರಿಕದಲ್ಲಿ ಶೇ.೮೦ರಷ್ಟು ಜನರು ‘ಈ ದೇಶ ನಿಯಂತ್ರಣ ತಪ್ಪಿ ಹೋಗುತ್ತಿದೆ ಎಂದು ನಂಬಿದ್ದಾರೆ. ಇವರಲ್ಲಿ ಎರಡೂ ರಾಜಕೀಯ ಪಕ್ಷದವರೂ ಸೇರಿದ್ದಾರೆ. ಶೇ.೮೪ರಷ್ಟು ಜನರು ಭಯೋತ್ಪಾದಕರು ಅಥವಾ ತೀವ್ರಗಾಮಿಗಳ ಬಗ್ಗೆ
ಆತಂಕ ವ್ಯಕ್ತಪಡಿಸಿದ್ದಾರೆ. ಈ ಆತಂಕವನ್ನೇ ರಾಜಕಾರಣದ ತರ್ಕಕ್ಕೆ ಅನುವಾದ ಮಾಡಿದರೆ ಅದರ ಸಂದೇಶ ಹೀಗಾಗುತ್ತದೆ: ‘ಅಮೆರಿಕವನ್ನು ರಕ್ಷಿಸು ವಲ್ಲಿ ಮನುಷ್ಯರು ವಿಫಲರಾಗಿದ್ದಾರೆ. ದೇವರೇ ಬಂದು ನಮ್ಮನ್ನು ಕಾಪಾಡಬೇಕು. ಈಗ ಅವನೇ ಈ ಬಗ್ಗೆ ಸಂದೇಶ ಕಳಿಸುತ್ತಿದ್ದಾನೆ.

ಒಮ್ಮೆ ನೀವು ದೇವರೇ ಮನುಷ್ಯನ ಎಲ್ಲಾ ವ್ಯವಹಾರಗಳಿಗೂ ರಕ್ಷಕ ಎಂದು ನಂಬಲು ಆರಂಭಿಸಿದರೆ ಗುಂಡೇಟಿನಿಂದ ಕೂದಲೆಳೆ ಅಂತರದಲ್ಲಿ ಟ್ರಂಪ್ ಪಾರಾದ ರೀತಿಯ ಘಟನೆಗಳು ದೇವರ ಪವಾಡವಲ್ಲದೆ ಮತ್ತೇನೂ ಅಲ್ಲ ಎಂದೇ ಭಾವಿಸುತ್ತೀರಿ. ಅಮೆರಿಕದ ಹೊರಗಿರುವ ಕ್ರಿಶ್ಚಿಯನ್ನೇತರರಲ್ಲೂ ಬಹುತೇಕ ಜನರು ದೇವರೇ ನಮ್ಮ ರಕ್ಷಕ ಎಂದು ನಂಬುತ್ತಾರೆ. ಹೀಗಾಗಿ ಅಮೆರಿಕವನ್ನು ಟ್ರಂಪ್ ಕಾಪಾಡಲಿ ಎಂದು ದೇವರೇ ಟ್ರಂಪ್ ರನ್ನು ಕಾಪಾಡಿ ದ್ದಾನೆ ಎಂಬುದು ಇವರೆಲ್ಲರ ದೃಢವಾದ ನಂಬಿಕೆ. ದೇವರಿದ್ದಾನೆ ಎಂಬುದಕ್ಕೆ ಇನ್ನೇನು ಸಾಕ್ಷ್ಯ ಬೇಕು!

ಹಾಗಿದ್ದರೆ ದೇವರು ಡೊನಾಲ್ಡ್ ಟ್ರಂಪ್‌ರನ್ನು ಬದಲಾಯಿಸಿದ್ದಾನೆಯೇ? ಸ್ವತಃ ಟ್ರಂಪ್ ನಾನೀಗ ಹೊಸ ಮನುಷ್ಯ ಎಂದು ಹೇಳಿಕೊಳ್ಳುತ್ತಿದ್ದಾರೆ. ನಾವು ಅವರನ್ನು ನಂಬಬೇಕು. ಕಣ್ಮುಂದೆಯೇ ಸರಕ್ಕೆಂದು ನಮ್ಮ ಸಾವು ಹಾರಿಕೊಂಡು ಹೋಗಿ ಪವಾಡ ಸದೃಶವಾಗಿ ಜೀವ ಉಳಿದಾಗ ಕ್ಷುಲ್ಲಕ ಹಾಗೂ ಪ್ರಮುಖ ಸಂಗತಿ ಗಳೆಲ್ಲ ಒಂದೇ ಮರೀಚಿಕೆಯ ಭಾಗವಾಗಿ ಕಾಣಿಸುತ್ತವೆ. ಟ್ರಂಪ್ ಗೆ ಹೀಗಾದಾಗ ಅಮೆರಿಕದ ಭವಿಷ್ಯ ಹಿಂದೆಂದೂ ಕಾಣಿಸದಷ್ಟು
ನಿಚ್ಚಳವಾಗಿ ಕಾಣಿಸಿರಬಹುದು. ಗುಂಡಿನ ದಾಳಿ ನಡೆದ ಮಿಲ್ವಾ ಕಿಯ ರಿಪಬ್ಲಿಕನ್ ಸಮಾವೇಶಕ್ಕೆ ಟ್ರಂಪ್ ಬಂದಾಗ ತುಂಬಾ ಮೆತ್ತಗೆ ಕಾಣಿಸುತ್ತಿದ್ದರು.

ಅದು ಬದಲಾವಣೆಯಲ್ಲದೇ ಮತ್ತೇನು? ಅವರ ನಡೆ ನುಡಿಯಲ್ಲಿ ಡ್ರಾಮಾ ಇರಲಿಲ್ಲ. ಹಿಂದುಳಿದ, ಗ್ರಾಮೀಣ, ಬಿಳಿಯರ ಪರವಾದ ರಾಜಕಾರಣ ಮಾಡುತ್ತಿದ್ದ ವ್ಯಕ್ತಿ ಅಲ್ಲಿ ಒಗ್ಗಟ್ಟಿನ ಬಗ್ಗೆ, ಏಕತೆಯ ಬಗ್ಗೆ ಮಾತನಾಡಿದ್ದರು. ವೇದಿಕೆಯ ಮೇಲೆ ಅಮೆರಿಕದ ಅಲ್ಪಸಂಖ್ಯಾತರೇ ಪ್ರಮುಖವಾಗಿ ಕಾಣಿಸುತ್ತಿದ್ದರು. ಇಲ್ಲೊಂದು ಪ್ರಮುಖ ಪ್ರಶ್ನೆಯನ್ನು ಯಾರೂ ಕೇಳಿದಂತಿಲ್ಲ. ಅಥವಾ ಕೇಳಿದ್ದರೂ ನನ್ನ ಗಮನಕ್ಕೆ ಬಂದಿಲ್ಲ. ಹತ್ಯೆಗೆ ಯತ್ನ ನq
ಯದೇ ಇದ್ದಿದ್ದರೆ ಟ್ರಂಪ್ ತಮ್ಮ ಪಕ್ಷದಿಂದ ಅಮೆರಿಕದ ಉಪಾಧ್ಯಕ್ಷ ಹುದ್ದೆಗೆ ಜೆ.ಡಿ.ವೇನ್ಸ್ ಅವರನ್ನು ಆಯ್ಕೆ ಮಾಡುತ್ತಿದ್ದರೇ? ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆ ತೋರಿಸುವ ರೀತಿಯ ಮನುಷ್ಯ ಟ್ರಂಪ್ ಅಲ್ಲ. ಅವರಿಗೆ ಅಗಾಧವಾದ ನೆನಪಿನ ಶಕ್ತಿಯಿದೆ.

ವೇನ್ಸ್ ಯಾವತ್ತೂ ಟ್ರಂಪ್ ಜತೆಗೆ ಇದ್ದವರಲ್ಲ. ೨೦೧೬ ರಲ್ಲಿ ಅವರು ಟ್ರಂಪ್ ನೀತಿಗಳನ್ನು ‘ಸಾಮೂಹಿಕ ಅಫೀಮು ಎಂದು ಕರೆದಿದ್ದರು. ಅವರೇ ಇನ್ನೊಮ್ಮೆ ‘ಟ್ರಂಪ್ ಅಮೆರಿಕಕ್ಕೆ ಬಹಳ ಅಪಾಯಕಾರಿಯಾದ ವ್ಯಕ್ತಿ. ಅವರು ಅಮೆರಿಕದ ಹಿಟ್ಲರ್ ಎಂದು ಹೇಳಿದ್ದರು. ವೇನ್ಸ್ ಅವರ ಪತ್ನಿ ಉಷಾ ಚಿಲುಕುರಿ ಭಾರತೀಯ ಮೂಲದವರು. ಹೀಗಾಗಿ ಅವರ ಮಕ್ಕಳು ಸಾಂಸ್ಕೃತಿಕವಾಗಿ ಮುಕ್ತ ಮನಸ್ಥಿತಿಯೊಂದಿಗೆ ಬೆಳೆದಿರುತ್ತಾರೆ. ಯಾವುದೋ ಒಂದು ಜನಾಂಗ ಶ್ರೇಷ್ಠ ಎಂಬಂತಹ ಸಂಕುಚಿತ ಮನೋಭಾವ ಅವರಲ್ಲಿ ಇರುವುದಕ್ಕೆ ಸಾಧ್ಯವಿಲ್ಲ. ವೇನ್ಸ್ ಈ ಹಿಂದೆ ತಾವು ಆಡಿದ್ದ ಮಾತುಗಳನ್ನು ಮರೆತು ಮುಂದೆ ಬಂದಿದ್ದಾರೆ ಅಂತಾದರೆ ಟ್ರಂಪ್ ಕೂಡ ಹಾಗೇ ಮಾಡಿದ್ದಾರೆ ಎಂದು ನಂಬೋಣ. ಆದರೆ ವೇನ್ಸ್ ಹಾಗೆ ಮಾಡಿದ್ದು ಆಶ್ಚರ್ಯವಲ್ಲ.

ಟ್ರಂಪ್ ಅದನ್ನೆಲ್ಲ ಮರೆತಿದ್ದಾರೆ ಎಂಬುದೇ ನಿಜವಾದ ಅಚ್ಚರಿ. ಅಮೆರಿಕದಲ್ಲಿ ಯಾರು ಗೆದ್ದರೂ, ಯಾವ ರಾಜಕೀಯ ಪಕ್ಷ ಅಧಿಕಾರಕ್ಕೆ ಬಂದರೂ ನಮಗೇನೂ ಚಿಂತೆಯಿಲ್ಲ ಎನ್ನುವ ಜಗತ್ತಿನ ಬೇರೆ ಬೇರೆ ದೇಶಗಳು ಕೂಡ ಈಗಾಗಲೇ ತಮ್ಮದೇ ಲೆಕ್ಕಾಚಾರ ಆರಂಭಿಸಿವೆ. ಟ್ರಂಪ್ ಅವರ ಸರಕಾರದಲ್ಲಿ ೩೯ ವರ್ಷದ ವೇನ್ಸ್ ಅಸಲಿ ವಿದೇಶಾಂಗ ಸಚಿವರಾಗಲಿದ್ದಾರೆಯೇ? ಟ್ರಂಪ್ ಬೇರೆ ಬೇರೆ ದೇಶಗಳೊಂದಿಗೆ ಚೌಕಾಸಿ ವ್ಯವಹಾರದಲ್ಲಿ ತೊಡಗಿರುವಾಗ
ವೇನ್ಸ್ ಜಾಗತಿಕ ಸಮಸ್ಯೆಗಳನ್ನು ಪರಿಹರಿಸಲು ಒಂದಷ್ಟು ನಿಜವಾದ ಪ್ರಯತ್ನಗಳನ್ನು ಮಾಡಲಿದ್ದಾರೆಯೇ? ಈಗಾಗಲೇ ನಾವು ಉಕ್ರೇನ್ ಯುದ್ಧದ ಮೇಲೆ ಹಾಗೂ ನ್ಯಾಟೋದ ಭವಿಷ್ಯದ ಮೇಲೆ ಟ್ರಂಪ್ ಪ್ರಭಾವ ಬೀರಿರುವುದನ್ನು ನೋಡುತ್ತಿದ್ದೇವೆ.

ನವೆಂಬರ್‌ನಲ್ಲಿ ಅಮೆರಿಕದ ಚುನಾವಣೆಯ ಫಲಿತಾಂಶ ಬಂದ ಮೇಲೆ ಯುದ್ಧಕ್ಕೆ ಸಂಬಂಧಪಟ್ಟಂತೆ ಒಳ್ಳೆಯ ಬೆಳವಣಿಗೆಗಳು ಆಗಬಹುದು ಎಂದು ಉಕ್ರೇನ್ ಅಧ್ಯಕ್ಷ ಜೆಲೆನ್‌ಸ್ಕಿ ಹೇಳಿರುವುದು ಸುಮ್ಮನೆ ಬಾಯ್ಮಾತಿನ ಹೇಳಿಕೆಯಲ್ಲ. ತಾವು ಗೆದ್ದ ಮೂರು ತಿಂಗಳೊಳಗೆ ಶಾಂತಿ ಸ್ಥಾಪನೆ ಮಾತುಕತೆಯನ್ನು ಯಶಸ್ವಿಯಾಗಿ ಮುಗಿಸುವುದಾಗಿ ಟ್ರಂಪ್ ಭರವಸೆ ನೀಡಿದ್ದಾರೆ. ನ್ಯಾಟೋದ ಯುರೋಪಿಯನ್ ಸದಸ್ಯ ದೇಶಗಳಿಗೆ ರಕ್ಷಣಾ ಬಜೆಟ್‌ನ ಮೊತ್ತವನ್ನು ಏರಿಕೆ ಮಾಡಲು (ಜರ್ಮನಿಯ ವಿಷಯ ದಲ್ಲಿ ದುಪ್ಪಟ್ಟು) ಅವರು ಒತ್ತಡ ಹೇರಲಿದ್ದಾರೆ. ಆದರೆ ಟ್ರಂಪ್ ಸರ್ಕಾರ ತನ್ನ ಹಣವನ್ನು ಅಮೆರಿಕನ್ನರಿಗಾಗಿ ಖರ್ಚು ಮಾಡಲಿದೆ.

ಈ ಸಂದೇಶ ಯಾವುದೇ ರೀತಿಯಲ್ಲೂ ತಿರುಚಲ್ಪಡದೆ ಯಥಾವತ್ತು ರವಾನೆಯಾಗಿದೆ. ಅಮೆರಿಕ್ಕೆ ನಿಜವಾದ ಅಪಾಯವಿರುವುದು ಚೀನಾದಿಂದ ಎಂಬ ವೇನ್ಸ್ ಹೇಳಿಕೆ ಬೀಜಿಂಗ್‌ನ ಕಿವಿಗೂ ಬಿದ್ದಿರಬಹುದು. ಆದರೆ ತೈವಾನ್‌ಗೆ ಇದು ಕೆಟ್ಟ ಸುದ್ದಿ. ಏಕೆಂದರೆ ಅದು ತನ್ನ ರಕ್ಷಣಾ ಬಜೆಟ್ ಮೊತ್ತವನ್ನು ಹೆಚ್ಚಿಸಿಕೊಳ್ಳಬೇಕಾಗುತ್ತದೆ. ಅಂಕಲ್ ಸ್ಯಾಮ್ ಡೊನಾಲ್ಡ್ ತೈವಾನ್‌ನ ನೆರವಿಗೆ ಹೋಗುವವರಲ್ಲ. ಹೀಗಾಗಿ ಚೀನಾದಿಂದ ಬಚಾವಾಗುವುದು ಹೇಗೆ ಎಂಬುದನ್ನು ಇನ್ನುಮುಂದೆ ಅಮೆರಿಕದ ಕಡೆಗೆ ದಯನೀಯವಾಗಿ ನೋಡದೆ ತೈವಾನ್ ತಾನೇ ನಿರ್ಧರಿಸಿಕೊಳ್ಳಬೇಕಾಗುತ್ತದೆ.

ಅಮೆರಿಕದಲ್ಲಿನ ಬೆಳವಣಿಗೆಗಳನ್ನು ನೋಡಿ ಬಿಕ್ಕಳಿಸುತ್ತಿರುವ ಇನ್ನೊಂದು ದೇಶವೆಂದರೆ ಬ್ರಿಟನ್. ಅಮೆರಿಕದೊಂದಿಗೆ ‘ವಿಶೇಷ ಸಂಬಂಧ ಹೊಂದಿದ್ದ ಬ್ರಿಟನ್‌ನಲ್ಲಿ ಪ್ರಧಾನಿ ಕೀರ್ ಸ್ಟಾರ್ಮರ್ ಈಗ ಕೈಕೈ ಹೊಸಕಿಕೊಳ್ಳಲು ಆರಂಭಿಸಿದ್ದಾರೆ. ವಿದೇಶಾಂಗ ಸಚಿವರಾಗಿ ಡೇವಿಡ್ ಲ್ಯಾಮಿಯನ್ನು ನೇಮಿಸಿದ್ದು ತಪ್ಪಾಯಿತು ಎಂದು ಈಗಾಗಲೇ ಅವರಿಗೆ ಪಶ್ಚಾತ್ತಾಪ ಆಗುತ್ತಿರಬಹುದು. ೨೦೧೮ರಲ್ಲಿ ಟ್ರಂಪ್ ಬ್ರಿಟನ್ನಿಗೆ ಭೇಟಿ ನೀಡಿದ್ದಾಗ ‘ಟ್ರಂಪ್ ಒಬ್ಬ ನವ ನಾಜಿ ನಾಯಕ ‘ನಿರಂಕುಶಾಧಿಕಾರಿ ‘ಅಂತಾರಾಷ್ಟ್ರೀಯ ಭದ್ರತೆಗೆ ದೊಡ್ಡ ಅಪಾಯ ತಂದೊಡ್ಡಿರುವ ವ್ಯಕ್ತಿ ಎಂದು ಡೇವಿಡ್ ಲ್ಯಾಮಿ ಯದ್ವಾತದ್ವಾ ವಾಗ್ದಾಳಿ ನಡೆಸಿದ್ದರು.

ಅವರ ನಿಲುವು ಸ್ಪಷ್ಟವಾಗಿದೆ. ಬ್ರಿಟನ್ನಿನಲ್ಲಿ ನನ್ನನ್ನು ಬಹಳ ಕೆಟ್ಟದಾಗಿ ನಡೆಸಿಕೊಂಡರು ಎಂದು ಟ್ರಂಪ್ ಹೇಳಿದಾಗ ಲ್ಯಾಮಿ ‘ಅಮೆರಿಕದ ನಾಲ್ವರು ಅಧ್ಯಕ್ಷರು ಹತ್ಯೆಗೀಡಾಗಿದ್ದಾರೆ ಎಂದು ಟ್ವೀಟ್ ಮಾಡಿ ತಿರುಗೇಟು ನೀಡಿದ್ದರು. ಅದನ್ನೆಲ್ಲ ಟ್ರಂಪ್ ಮರೆತಿದ್ದಾರಾ? ದೇವರು ಟ್ರಂಪ್‌ರನ್ನು ಅಷ್ಟೊಂದು ಬದಲಾಯಿಸಿದ್ದಾನಾ? ಒಂದು ಕೆನ್ನೆಗೆ ಹೊಡೆದರೆ ಅಮೆರಿಕನ್ನರಿಗೂ ಬ್ರಿಟಿಷರಿಗೂ ಇನ್ನೊಂದು ಕೆನ್ನೆ ತೋರಿಸುವಷ್ಟು ಟ್ರಂಪ್ ಬದಲಾಗಿದ್ದಾರಾ?
ತೀರಾ ಹಿಟ್ಲರ್, ಸರ್ವಾಽಕಾರಿ, ಹುಚ್ಚ ಎಂದು ಕರೆದವರನ್ನೂ ಕ್ಷಮಿಸುವಷ್ಟು ಟ್ರಂಪ್ ಮೆತ್ತಗಾಗಿದ್ದಾರಾ? ಕುತೂಹಲದಿಂದ ಕಾದು ನೋಡಬೇಕಷ್ಟೆ.

ದೇವರ ಕೈಗಳು ಅಮೆರಿಕದ ವಿದೇಶಾಂಗ ನೀತಿಯನ್ನು ಬರೆಯುವುದಿಲ್ಲ. ಆದರೆ ಡೊನಾಲ್ಡ್ ಟ್ರಂಪ್ ಅವರ ಆಡಳಿತದಲ್ಲಿ ದೇವರು ವಿದೇಶಾಂಗ ನೀತಿಯ ಚಿಂತಕರ ಮೇಲೆ ಸಣ್ಣ ಪ್ರಮಾಣ ದಲ್ಲಾದರೂ ಪ್ರಭಾವ ಬೀರಿಯೇ ಬೀರುತ್ತಾನೆ. ಭಾಷಣದಲ್ಲಿ ಇದ್ದಕ್ಕಿದ್ದಂತೆ ಏನಾದರೂ ಉತ್ಪ್ರೇಕ್ಷಿತ ವಿಚಾರ ಹೇಳಿ ಹೆಡ್‌ಲೈನ್ ಆಗುವುದು ಟ್ರಂಪ್‌ಗೆ ಸಿದ್ಧಿಸಿರುವ ಕಲೆ. ಈ ಹಿಂದಿನ ಅವಧಿಯಲ್ಲಿ ಅದನ್ನು ನೋಡಿದ್ದೇವೆ. ಆದರೆ ವೇನ್ಸ್ ಕೂಡ ಈ ಹಿಂದೆ ‘ಬ್ರಿಟನ್ ಮುಂದೊಂದು ದಿನ ಅಣ್ವಸ್ತ್ರ ಹೊಂದಿರುವ ಮೊದಲ ಇಸ್ಲಾಮಿಕ್ ದೇಶವಾಗಬಹುದು ಎಂದು ಹೇಳಿದ್ದರು.

ಅದು ಕನ್ಸರ್ವೇಟಿವ್ ಪಕ್ಷದವರ ನರಗಳನ್ನು ಅಲುಗಾಡಿಸಿತ್ತು. ಕೀರ್ ಸ್ಟಾರ್ಮರ್ ಅವರ ಅರ್ಧದಷ್ಟು ಕ್ಯಾಬಿನೆಟ್ ಸಚಿವರು ಹಾಗೂ ಶೇ.೪೦ಕ್ಕಿಂತ ಹೆಚ್ಚು ಸಂಸದರು ರಾಜನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದವರು. ಏಕೆಂದರೆ ಅವರು ದೇವರನ್ನು  ನಂಬುವುದಿಲ್ಲ. ಆದರೆ ಬ್ರಿಟನ್ನಿನ ರಾಷ್ಟ್ರೀಯ ಘೋಷವಾಕ್ಯವೇ ‘ದೇವರು ರಾಜನನ್ನು ಕಾಪಾಡಲಿ! (ಗಾಡ್ ಸೇವ್ ದಿ ಕಿಂಗ್!). ಆದರೆ ಇಂದು ಬ್ರಿಟಿಷರು ದೇವರನ್ನೂ ನಂಬುವುದಿಲ್ಲ, ರಾಜನನ್ನೂ ನಂಬುವುದಿಲ್ಲ. ದೇವರಿಗಿಂತಲೂ ಹೆಚ್ಚಾಗಿ ರಾಜಮ ನೆತನವೇ ಬ್ರಿಟನ್ನಿನ ಅಭಿವೃದ್ಧಿಗೆ ದೊಡ್ಡ ಅಡ್ಡಿಯಾಗಿದೆ ಎಂದು ಅವರು ಭಾವಿಸಿದ್ದಾರೆ.

ಅeಯತಾವಾದ ಎಂಬುದು ಆಡಳಿತಾರೂಢ ಲೇಬರ್ ಪಕ್ಷದ ಸಮಸ್ಯೆಯೂ ಅಲ್ಲ, ಮೌಲ್ಯವೂ ಅಲ್ಲ. ಬ್ರಿಟನ್ನಿನ ಕ್ರಿಶ್ಚಿಯನ್ ಧರ್ಮದ ಎಲ್ಲಾ ಶಾಖೆ ಉಪಶಾಖೆಗಳಲ್ಲೂ ಅದು ಹರಡಿಕೊಂಡಿದೆ. ಭಾನುವಾರ ಮಧ್ಯಾಹ್ನ ನೀವು ಬ್ರಿಟನ್ನಿನ ಯಾವುದಾದರೂ ಚರ್ಚ್‌ಗೆ ಹೋದರೆ ಅಲ್ಲಿ ಪ್ರಾರ್ಥನೆಯ
ಬದಲಿಗೆ ಡಿಸ್ಕೋ ತಯಾರಿ ಕಾಣಿಸುತ್ತದೆ. ಬ್ರಿಟನ್ನಿನ ಪ್ರಧಾನಿಯೊಬ್ಬರು ಚರ್ಚ್‌ಗೆ ಹೋಗಿ ಪ್ರಾರ್ಥನೆ ಮಾಡಿದ್ದನ್ನು ನೀವು ಕೊನೆಯ ಬಾರಿ ನೋಡಿದ್ದು ಯಾವಾಗ? ಆದರೆ ಅದಕ್ಕೆ ವ್ಯತಿರಿಕ್ತವಾಗಿ ರಿಷಿ ಸುನಕ್ ೧೦ ಡೌನಿಂಗ್ ಸ್ಟ್ರೀಟ್‌ನಲ್ಲಿ ತಮ್ಮ ಮನೆಯ ದೇವರನ್ನು ಪ್ರತಿಷ್ಠಾಪನೆ ಮಾಡಿದ್ದರು. ಈಗಿನ ಪ್ರಧಾನಿ ಕೀರ್ ಸ್ಟಾರ್ಮರ್ ನಾಸ್ತಿಕನಾಗಿದ್ದರೂ ಅವರ ಹೆಂಡತಿ ಒಬ್ಬ ಶ್ರದ್ಧಾವಂತ ಯಹೂದಿ.

ಅವರ ಮನೆಯಲ್ಲಿ ಪ್ರತಿ ಶುಕ್ರವಾರ ಶಬ್ಬತ್ ನಡೆಯುತ್ತದೆ. ಪ್ರಧಾನಿ ಕೂಡ ಅದರಲ್ಲಿ ಭಾಗವಹಿಸುತ್ತಾರೆ. ಬ್ರಿಟನ್ನಿನಲ್ಲಿ ಅಲ್ಪಸಂಖ್ಯಾತ ಧರ್ಮಗಳು ಇವತ್ತಿಗೂ ಜೀವಂತ ವಾಗಿವೆ ಮತ್ತು ಚೆನ್ನಾಗಿಯೇ ಇವೆ. ಇಸ್ಲಾಮ್, ಹಿಂದೂ, ಸಿಖ್, ಜುಡಾಯಿಸಂ ಹೀಗೆ ಬೇರೆ ನಂಬಿಕೆಯ ಜನರು ತಮ್ಮ ಧರ್ಮ ಗಳೊಂದಿಗೆ ಬ್ರಿಟನ್ನಿನಲ್ಲಿ ನೆಲೆಸಿದ್ದಾರೆ. ಅವರು ಮಸೀದಿ, ದೇವಸ್ಥಾನ, ಗುರುದ್ವಾರ, ಸಿನೆಗಾಗ್‌ಗಳಿಗೆ ಹೋಗುತ್ತಾರೆ. ಹೀಗಾಗಿ ಬ್ರಿಟನ್ ಯಾವತ್ತೂ ಇಸ್ಲಾಮಿಕ್ ದೇಶವಾಗಲು ಸಾಧ್ಯವಿಲ್ಲ.

ಆದರೆ ಜಗತ್ತಿನಾದ್ಯಂತ ಉತ್ಸಾಹಿ ಅಲ್ಪಸಂಖ್ಯಾತರು ರಾಜಕೀಯದಲ್ಲಿ ಮೇಲೆ ಬರುತ್ತಿರುವುದು ಮಾತ್ರ ಸತ್ಯ. ದೇವರಿಗೆ ತಾನು ಬದುಕುವುದಕ್ಕೆ ರಾಜಕೀಯ ವ್ಯವಸ್ಥೆಯ ಅಗತ್ಯವಿಲ್ಲ. ಆದರೆ ರಾಜಮನೆತನಕ್ಕೆ ರಾಜಕೀಯ ವ್ಯವಸ್ಥೆಯ ಅಗತ್ಯವಿದೆ. ಒಂದು ಪ್ರಶ್ನೆ ಮಾತ್ರ ಯಾವಾಗಲೂ ನನ್ನ ಕಿವಿಯ
ಸುತ್ತ ನೊಣದಂತೆ ಗುಂಯ್‌ಗುಡುತ್ತಲೇ ಇರುತ್ತದೆ. ದೇವರನ್ನು ಕಟ್ಟುಕತೆ ಎಂದು ಆಚೆ ಎಸೆಯುವ ಬ್ರಿಟಿಷ್ ರಾಜಕಾರಣಿಗಳು ರಾಜಪ್ರಭುತ್ವ ಮಾತ್ರ ನಿಜ ಎಂದು ನಂಬುವುದೇಕೆ? ಬ್ರಿಟನ್ನಿನ ರಾಜಮನೆತನದವರು ಈಗಂತೂ ಜನಸಾಮಾನ್ಯರ ಬದುಕಿನ ಏಕತನಾತೆಯ ಬೇಸರವನ್ನು ಕಳೆಯಲು ಆಗಾಗ ರಾಜ
ರಾಣಿಯರಂತೆ ಮೇಕಪ್ ಮಾಡಿಕೊಂಡು ಬಂದು ಮನರಂಜನೆ ನೀಡುವ ಕಾಸ್ಟ್ಯೂಮ್ ಪಾರ್ಟಿಯಂತಾಗಿದ್ದಾರೆ.

ಬರೆದುಕೊಟ್ಟಿದ್ದನ್ನು ನಾಟಕೀಯವಾಗಿ ಓದುವ, ಮೊದಲೇ ಹೇಳಿಕೊಟ್ಟಂತೆ ಚೆನ್ನಾಗಿ ನಟಿಸುವ ಕಲೆಯಲ್ಲಿ ಮಾತ್ರ ಅವರು ನಿಷ್ಣಾತರು. ಅಲ್ಲಿನ ರಾಜ, ರಾಣಿಯರು ಮಾತ್ರವಲ್ಲ, ರಾಜಕುಮಾರರು ಹಾಗೂ ಸೊಸೆಯರು ಕೂಡ ಪಕ್ಕಾ ಮೇಲ್ವರ್ಗದ ಧಾರಾವಾಹಿಯ ಶ್ರೀಮಂತರ ಪಾತ್ರಗಳಂತೆ ಕಾಣಿಸಿ ಕೊಳ್ಳುವ ಕಲೆಯನ್ನು ಸಿದ್ಧಿಸಿಕೊಂಡಿದ್ದಾರೆ. ಬ್ರಿಟನ್ನಿನ ರಾಜ ಚುನಾವಣೆಯಲ್ಲಿ ಗೆದ್ದು ಪ್ರಧಾನಿಯಾಗಲು ಯಾವತ್ತಾದರೂ ಸಾಧ್ಯವಿದೆಯೇ? ಹಾಗಿದ್ದರೆ ಏಕೆ ಚುನಾಯಿತ ಪ್ರಧಾನ ಮಂತ್ರಿಗಳು ಇವತ್ತಿಗೂ ಫಲಿತಾಂಶ ಬಂದ ತಕ್ಷಣ ಅರಮನೆಗೆ ಹೋಗಿ ಅಲ್ಲಿ ರಾಜನಂತೆ ಮೇಕಪ್ ಮಾಡಿಕೊಂಡು ನಿಂತ ವ್ಯಕ್ತಿಗೆ ಮೊದಲ ಸಲಾಮು ಹೊಡೆದು ಬರುತ್ತಾರೆ? ಆದರೆ ಬ್ರಿಟಿಷ್ ರಾಜಮನೆತನಕ್ಕೆ ಇವತ್ತಿಗೂ ಒಂದು ಬಹಳ ಮುಖ್ಯವಾದ ಸೇವೆಯ ಜವಾಬ್ದಾರಿ ಯಿದೆ. ಅದು ದೇವರ ಸೇವೆ. ಪನ್ ಅರ್ಥವಾಗುವವರಿಗೆ ಇದು ಅರ್ಥವಾಗುತ್ತದೆ. ಓ ರಾಜನೇ, ದೇವರನ್ನು ಕಾಪಾಡು!

(ಲೇಖಕರು : ಕೇಂದ್ರದ ಮಾಜಿ ಸಚಿವರು, ಹಿರಿಯ
ಪತ್ರಕರ್ತರು)

Leave a Reply

Your email address will not be published. Required fields are marked *

error: Content is protected !!