ಸಾರಸ್ವತ
ಡಾ.ಆರ್.ಜಿ.ಹೆಗಡೆ
ಕವಿಗಳು, ಕಲಾವಿದರು ತಮ್ಮ ಕೃತಿಗಳಲ್ಲಿ ಚಂದದ ಸುಳ್ಳು ಹೇಳುತ್ತಾರೆ, ತನ್ಮೂಲಕ ಜನರನ್ನು ತಪ್ಪುದಾರಿಗೆಳೆಯುತ್ತಾರೆ. ಹಾಗಾಗಿ ಅವರನ್ನು
‘ಆದರ್ಶ ರಿಪಬ್ಲಿಕ್’ನಿಂದ ಹೊರಗಿಡಬೇಕು” ಎಂದವನು ದಾರ್ಶನಿಕ ಪ್ಲೆಟೋ. ತನ್ನ ಗುರುವಿನ ಈ ವಾದವನ್ನು ಖಂಡಿಸಿ, ಕಲೆ-ಸಾಹಿತ್ಯಗಳಿಗೆ ಮನ್ನಣೆಯ ಸ್ಥಾನ ನೀಡಿದವನು ಮತ್ತೋರ್ವ ತತ್ತ್ವಜ್ಞಾನಿ ಅರಿಸ್ಟಾಟಲ್.
ತನ್ನ ‘ಪೊಯೆಟಿಕ್ಸ್’ ಕೃತಿಯಲ್ಲಿ ಅರಿಸ್ಟಾಟಲ್, “ಕವಿಗಳು, ಕಲಾಕಾರರು ಜೀವನವನ್ನು ಅದು ಇರುವುದಕ್ಕಿಂತಲೂ ಹೆಚ್ಚು ಸುಂದರವಾಗಿ ತೋರಿಸುತ್ತಾರೆ. ಘನತೆವೆತ್ತ ಮಾನವ ಪಾತ್ರಗಳನ್ನು ನಿರೂಪಿಸುತ್ತಾರೆ. ಆ ಮೂಲಕ ಅವರು ಜನರ ಮನಸ್ಸಿಗೆ ಪುಳಕ ತಂದು ಕೀಳು ಭಾವನೆಗಳನ್ನು ಓಡಿಸುತ್ತಾರೆ. ಮನಸ್ಸುಗಳನ್ನು ಸಕಾರಾತ್ಮಕವಾಗಿ ಪ್ರಭಾವಿಸುತ್ತಾರೆ. ಹಾಗಾಗಿ ಕಲೆ/ ಸಾಹಿತ್ಯ ಜನರ ಮೇಲೆ ಒಳ್ಳೆಯ ಪರಿಣಾಮ ಬೀರುತ್ತವೆ.
ಈ ಕಾರಣದಿಂದ ಅವಕ್ಕೆ ಸಮಾಜದಲ್ಲಿ ಅಗ್ರಸ್ಥಾನವಿರಬೇಕು” ಎಂದು ವಾದಿಸಿದ. ಇದೇ ಅಭಿಪ್ರಾಯವನ್ನು ಎತ್ತಿಹಿಡಿದ ಬ್ರಿಟಿಷ್ ಕವಿ-ವಿಮರ್ಶಕ ಮ್ಯಾಥ್ಯೂ ಆರ್ನಾಲ್ಡ್, “ಕವಿಗಳು/ಸಾಹಿತಿಗಳು ಜಗತ್ತಿನ ಅಘೋಷಿತ ಶಾಸಕರು; ಅವರು ಸಮಾಜದ ರೀತಿ- ರಿವಾಜುಗಳನ್ನು ನಿರೂಪಿಸು ತ್ತಾರೆ” ಎಂದು ಹೇಳಿದ. ನಾಗರಿಕತೆಯುದ್ದಕ್ಕೂ ಸಮಾಜಗಳು ಸಾಹಿತ್ಯಕ್ಕೆ, ಬರಹಗಾರರಿಗೆ, ಕಲಾವಿದರಿಗೆ ಗೌರವದ ಸ್ಥಾನಗಳನ್ನು ನೀಡುತ್ತಲೇ ಬಂದಿವೆ. ಎಷ್ಟರ ಮಟ್ಟಿಗೆ ಎಂದರೆ, ಕೆಲವೊಮ್ಮೆ ದೇಶಗಳು ಗುರುತಿಸಲ್ಪಟ್ಟಿರುವುದು ಅಲ್ಲಿನ ಪ್ರಮುಖ ಸಾಹಿತಿ/ಕಲಾವಿದರಿಂದ. ದೇಶ, ಕಾಲ ಇತ್ಯಾದಿಗಳಿಗೆ ಅತೀತವಾಗಿ ನಿಂತ ಅವರು ಮಾನವತೆಯ ಪ್ರತಿನಿಧಿಗಳು. ಹೋಮರ್, ವ್ಯಾಸ, ವಾಲ್ಮೀಕಿ, ಷೇಕ್ಸ್ ಪಿಯರ್, ಚಿನುವಾ ಅಚೆಬೆ, ರವೀಂದ್ರನಾಥ ಟ್ಯಾಗೋರ್ ಇಂಥವರೆಲ್ಲ ಮನುಕುಲದ ಕಥೆ ಹೇಳಿದವರು, ಜಗತ್ತಿಗೆ ಮಾರ್ಗದರ್ಶಕರು ಎಂದೇ ಭಾವಿಸಲ್ಪಟ್ಟವರು.
ಕನ್ನಡನಾಡನ್ನೇ ನೋಡಿ- ಮಾಸ್ತಿ, ಕುವೆಂಪು, ಕಾರಂತ, ಬೇಂದ್ರೆ, ಜಿ.ಎಸ್.ಶಿವರುದ್ರಪ್ಪ, ಅನಂತಮೂರ್ತಿ, ಕಂಬಾರ, ತೇಜಸ್ವಿ, ಲಂಕೇಶ್, ಎಸ್.ಎಲ್.ಭೈರಪ್ಪ, ಬರಗೂರು ರಾಮಚಂದ್ರಪ್ಪ, ದೇವನೂರು ಮಹಾದೇವ, ಚಂಪಾ, ಗಿರಡ್ಡಿ ಗೋವಿಂದರಾಜ, ಜಯಂತ ಕಾಯ್ಕಿಣಿ ಇಂಥವರ ಹೆಸರುಗಳು ಜನರ ಬಾಯಲ್ಲಿವೆ. ಇವರೆಲ್ಲ ನಮ್ಮ ಸಾರ್ವಜನಿಕ ಬದುಕಿನ ಸಾಕ್ಷಿಪ್ರಜ್ಞೆಯಾಗಿ ನಿಂತವರು. ಕಾರಂತರು ಗುಟುರು ಹಾಕಿದರೆ ಸರಕಾರಗಳು ನಡುಗುತ್ತಿದ್ದವು.
ಕನ್ನಡದ ಬಂಡಾಯ, ದಲಿತ ಸಾಹಿತ್ಯದ ಚಳವಳಿಗಳು ಸರಕಾರಗಳ ನೀತಿಗಳನ್ನೇ ಪ್ರಭಾವಿಸುವಷ್ಟು ಶಕ್ತಿ ಹೊಂದಿದ್ದವು/ ಹೊಂದಿವೆ. ಹೀಗೆ ಕಲೆ-ಸಾಹಿತ್ಯಕ್ಕೆ ಅಗ್ರಪೂಜೆ ಸಲ್ಲುತ್ತಾ ಬಂದಿರುವ ನಮ್ಮ ನಾಡಿನ ಊರೂರುಗಳಲ್ಲಿ ಸಾಹಿತಿ/ ಬರಹಗಾರರ ಹೆಸರುಗಳಲ್ಲಿ ರಸ್ತೆಗಳು, ಶಾಲಾ- ಕಾಲೇಜುಗಳು ಇವೆ. ಅವರೆಲ್ಲಾ ನೈತಿಕತೆಯ, ಹೋರಾಟದ ಸಂಕೇತವಾಗಿದ್ದರು ಎಂಬ ನಂಬುಗೆಯಿದೆ. ಆದರೆ ಇತ್ತೀಚೆಗೆ, ಒಟ್ಟಾರೆಯಾಗಿ ಸಾಹಿತ್ಯ ಮತ್ತು ಸಮಾಜದ ನಡುವಿನ ಸಂಬಂಧದಲ್ಲಿ ಬದಲಾವಣೆಯಾಗಿದೆಯೇ? ಅದು ಕುಸಿತ ಕಂಡಿದೆಯೇ ಎನ್ನುವ ಪ್ರಶ್ನೆಗೆ ಸಮಾಜದಿಂದ ‘ಹೌದು’ ಎಂಬ ಉತ್ತರವೇ ಹೊಮ್ಮುವಂಥ ಲಕ್ಷಣಗಳು ಕಾಣುತ್ತಿವೆ.
‘ತಾರಾವರ್ಚಸ್ಸು’ ಹೊಂದಿದ ಅಥವಾ ಒಂದು ಯುಗಧರ್ಮದ ಪ್ರಾತಿನಿಽಕ ಬರಹಗಾರರೆಂದು ವಿಶಿಷ್ಟವಾಗಿ ಗುರುತಿಸಲ್ಪಡುವವರು, ಎತ್ತರದಲ್ಲಿ
ನಿಲ್ಲಬಲ್ಲವರು ಕಡಿಮೆಯಾಗಿದ್ದರೆಯೇ ಅಥವಾ ಹೊಸದಾಗಿ ಅಷ್ಟು ಪ್ರಮಾಣದಲ್ಲಿ ಬರುತ್ತಿಲ್ಲವೇ? ಎಂಬ ಪ್ರಶ್ನೆಯೂ ಸುಳಿಯುವುದಿದೆ (ಪ್ರತಿ ಭಾವಂತ ಬರಹಗಾರರು ಇಲ್ಲವೆಂದೇನಲ್ಲ, ಸಾಕಷ್ಟಿದ್ದಾರೆ. ಜತೆಗೆ ಸಾಹಿತ್ಯ ಸಂಬಂಧಿತ ಪುಸ್ತಕಗಳನ್ನು ಮಾರುವ ಉಮೇದು ಹೊತ್ತವರೂ ಬಂದಿದ್ದಾರೆ. ಅಂಥ ಪುಸ್ತಕ ಮೇಳವೊಂದು ಇತ್ತೀಚೆಗೆ ಬೆಂಗಳೂರಿನಲ್ಲಿ ಯಶಸ್ವಿಯಾಯಿತು).
ಆದರೂ, ಹೊಸ ಬರಹಗಾರರಿಂದ ಬಂದ, ಇಡೀ ರಾಜ್ಯದ ಲಕ್ಷ್ಯ ಸೆಳೆದು ಭಾರಿ ಸುದ್ದಿಮಾಡಿದ ಶ್ರೇಷ್ಠ ಸಾಹಿತ್ಯ ಕೃತಿಗಳಾವುವು ಎಂಬುದನ್ನು ಪಟ್ಟಿಮಾಡುವುದು ತ್ರಾಸದಾಯಕ ಕೆಲಸ ಎಂಬ ಅನಿಸಿಕೆಯಿದೆ. ಹಾಗೆಯೇ ಇಂದಿನ ದಿನಗಳಲ್ಲಿ ಸಾಹಿತ್ಯಕ ಕಾರ್ಯಕ್ರಮಗಳಿಗೆ ಜನ ಸೇರು ವುದು ಕಡಿಮೆ. ಸಾಹಿತ್ಯವು ಎಲ್ಲರಿಗಲ್ಲ, ಅಂಥ ಕಾರ್ಯಕ್ರಮಗಳಿಗೆ ಜನ ಸೇರುವುದು ಯಾವಾಗಲೂ ಅಷ್ಟಕ್ಕಷ್ಟೇ ಇತ್ತು ಎಂಬ ವಾದವನ್ನು ಪರಿಗಣಿಸಿ ರಿಯಾಯಿತಿ ನೀಡಿದರೂ ಈ ಸಂಖ್ಯೆ ಕಡಿಮೆಯೇ. “ಸಾಹಿತ್ಯ ಸಮ್ಮೇಳನಗಳಲ್ಲಿ ಜನರು ಸೇರುವುದು ಉದ್ಘಾಟನೆ ಮತ್ತು ಸಮಾರೋಪಕ್ಕೆ. ಅವಕ್ಕೆ ಜನ ಸೇರಿದರೆ ಮತ್ತು ಊಟೋಪಚಾರ ಚೆನ್ನಾಗಿ ನಡೆದರೆ ಸಮ್ಮೇಳನ ಯಶಸ್ವಿಯಾದ ಹಾಗೆ” ಎಂಬ ಮಾತೂ ಚಾಲ್ತಿಯಲ್ಲಿದೆ. ತಾಂತ್ರಿಕ ಗೋಷ್ಠಿಗಳಲ್ಲಿ ಸಾಧಾರಣವಾಗಿ ಕೇಳುಗರು ಕಡಿಮೆ, ಹೇಳಲು ಸಿಗುವ ಸಮಯ ಕೂಡ ಕಡಿಮೆ. ಅವೆಲ್ಲ ಕಾಟಾಚಾರ ವಾಗಿ ಹೋಗಿಬಿಡುವುದೂ ಉಂಟು.
ಕೆಲವೇ ವರ್ಷಗಳ ಹಿಂದೆ ವಿಶ್ವವಿದ್ಯಾಲಯಗಳ ಸಾಹಿತ್ಯ ವಿಭಾಗಗಳು ಸಾಮಾನ್ಯವಾಗಿ ಒಂದು ಪ್ರದೇಶದ ಸಾಹಿತ್ಯ, ಸಾಮಾಜಿಕ ಚಳವಳಿಗಳ ಮುನ್ನೆಲೆಯಲ್ಲಿ ಇರುತ್ತಿದ್ದವು. ಈಗ ಅದು ಬದಲಾದಂತಿದೆ. ಮಾತ್ರವಲ್ಲ, ಕೆಲವೇ ವರ್ಷಗಳ ಹಿಂದೆ ಬರಹಗಾರರು ಚಳವಳಿಗಳಿಗೆ ನೈತಿಕಶಕ್ತಿ
ಒದಗಿಸುತ್ತಿದ್ದರು. ಈಗ ಹಾಗಿದ್ದಂತಿಲ್ಲ. ಮುಖ್ಯವಾಗಿ 2000ನೇ ವರ್ಷದ ನಂತರ ಜನಿಸಿದವರಲ್ಲಿ ಸಾಮಾನ್ಯವಾಗಿ ಸಾಹಿತ್ಯದ ಕುರಿತಾದ ಒಲವು ಕಡಿಮೆಯಿರುವಂತಿದೆ. ಈ ಅನಿಸಿಕೆಗಳ ಹಿನ್ನೆಲೆಯಲ್ಲಿ, ಕನಿಷ್ಠ ಮೇಲ್ನೋಟಕ್ಕಾದರೂ ಸಮಕಾಲೀನವಾಗಿ ಸ್ಥಾನಮಾನ ಬದಲಾಗಿರು ವಂತೆ ಕಾಣಿಸುವುದು ಸತ್ಯ. ಉಡುಗೆ, ತೊಡುಗೆ, ಇತರೆ ಆಕರ್ಷಣೆಗಳು ಹೀಗೆ ಸಮ್ಮೇಳನಗಳು ಗ್ಲಾಮರಸ್ ಆಗುತ್ತಿವೆ. ಅವೆಲ್ಲ ಇರಲಿ, ಅದರ ಮಧ್ಯೆ ‘ಒಳಗನ್ನು ಬೆಳೆಸುವ’ ಗಟ್ಟಿಯಾದ ಸಾಹಿತ್ಯಕ್ಕಾಗಿ ಹುಡುಕಾಡುವ ಪರಿಸ್ಥಿತಿ ಬಂದಂತಿದೆ.
ಇಂಥ ಪರಿಸ್ಥಿತಿಗೆ 3 ಕಾರಣಗಳಿವೆ. ಮೊದಲನೆಯದು ಯುಗಧರ್ಮ. ಪ್ರಸ್ತುತ, ‘ಭಕ್ತಿ ಭಾವದ’ ಗೌರವ ನಿರಂತರ ಇಳಿಮುಖವಾಗುತ್ತಿದ್ದು, ಮೂರ್ತಿಭಂಜನೆಯ ಮನೋಭಾವ ಜಾಸ್ತಿಯಾಗುತ್ತಿದೆ (ಇದು ಎಲ್ಲ ಕಾರ್ಯಕ್ಷೇತ್ರಗಳಿಗೂ ಅನ್ವಯ). ಈ ಮನೋಭೂಮಿಕೆಯು, ನಾವು ‘ಶ್ರೇಷ್ಠ’ವೆಂದು ಅಂದುಕೊಂಡಿದ್ದ ಸಾಮಾಜಿಕ ಮೌಲ್ಯಗಳನ್ನು ‘ಹಾಸ್ಯಾಸ್ಪದ’ ಎಂದು ಪರಿಭಾವಿಸುತ್ತದೆ. ಉದಾಹರಣೆಗೆ, ನಾವು ‘ಪವಿತ್ರ’
ಎಂದು ಗ್ರಹಿಸಿದ ಎಲ್ಲವನ್ನೂ ಬ್ರಿಟಿಷ್ ಬರಹಗಾರ ಬರ್ನಾರ್ಡ್ ಷಾ, ಫ್ರೆಂಚ್ ಕವಿ ಬೋದಿಲೇರ್ ಇಂಥವರ ಬರಹಗಳು ಅಪಹಾಸ್ಯ ಮಾಡಿದವು. ‘ಶ್ರೇಷ್ಠತೆ’ಯ ಪರಿಕಲ್ಪನೆಯನ್ನು, ‘ಅಮರಪ್ರೇಮ’ವನ್ನು ಲೇವಡಿ ಮಾಡಿದ ಷಾ, “ಕಲೆಗಾಗಿ ಆದರೆ ನಾನು ಒಂದಕ್ಷರವನ್ನು ಕೂಡ ಬರೆಯುತ್ತಿದ್ದಿಲ್ಲ” ಎಂದು ಹೇಳಿದ.
ಬೋದಿಲೇರ್ ತನ್ನ ಪ್ರೇಯಸಿಯನ್ನು ‘ತಂಗಿ’ ಎಂದು ಕರೆದ. ಮಾರ್ಕೆಜ್‌ನ One Hundred Years of Solitude ಎಂಬ ಅಗಾಧ ಕೃತಿಯಲ್ಲಿ ‘ಶ್ರೇಷ್ಠ’ ವ್ಯಕ್ತಿಗಳ ಅವಹೇಳನದ ಚಿತ್ರಗಳು ಬರುತ್ತವೆ. ಅಲ್ಲಿ ಬರುವ ಹೂವಿನಂಥ ಸುಂದರ ಹುಡುಗಿಯೊಬ್ಬಳಿಗೆ ಮಲತಿನ್ನುವ ಚಟವಿದೆ. ಹೀಗೆ ಹಲವು ಕೃತಿಗಳು ಸೌಂದರ್ಯದ ಪರಿಕಲ್ಪನೆಯನ್ನೇ ಬದಲಾಯಿಸಿವೆ.
ಇಂಥವುಗಳ ಪ್ರಕಾರ, ಕಲೆಯು ಬದುಕನ್ನು ಸುಂದರವಾಗಿ ತೋರಿಸುವ ಕ್ರಿಯೆಯಲ್ಲ, ಜೀವನ ಹೇಗಿದೆಯೇ ಅದೇ ಕಲೆ. ಬಹುಶಃ ಇದರಿಂದಾ ಗಿಯೇ ಸಾಂಪ್ರದಾಯಿಕ ಅರ್ಥದ ‘ಸಾಹಿತ್ಯ’ ತನ್ನ ಪೀಠದಿಂದ ಕೆಳಗಿಳಿದಿರುವಂತೆ ಅನಿಸುತ್ತಿರುವುದು. ಎರಡನೆಯ ಕಾರಣ, ಬಹುಶಃ ಇಡೀ ಸಮಾಜವೇ ಬೇರೆಲ್ಲವನ್ನೂ ಬಿಟ್ಟು ದುಡ್ಡಿನ ಹಿಂದೆ ಬಿದ್ದಿರುವುದು. ಮೂರನೆಯ ಕಾರಣ, ಅಂಥ ವಾತಾವರಣವನ್ನು ನಾವೇ (ಸಾಹಿತಿ/ ಬರಹಗಾರರು) ಸೃಷ್ಟಿಸಿದ್ದಿರಬಹುದೇ ಎಂಬುದು. ಇದಕ್ಕೆ ಇತ್ತೀಚಿನ ಉದಾಹರಣೆ, ಈ ವರ್ಷದ ಮೈಸೂರು ದಸರಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗಳ ಆಯ್ಕೆ ಮತ್ತು ಅದರ ಸುತ್ತಮುತ್ತ ನಡೆದ ಪ್ರಹಸನ.
ಅದನ್ನೆಲ್ಲ ಕನ್ನಡ ಜನತೆ ಮೆಚ್ಚಲಿಲ್ಲ. ಕವಿಗೋಷ್ಠಿಯ ಪ್ಯಾನೆಲ್‌ನಲ್ಲಿ ಸೀಟು ಪಡೆಯಲು ರಾಜಕಾರಣದಲ್ಲಿ ನಡೆಯುವಂಥ ಸ್ಪರ್ಧೆ ನಡೆಯಿತು
ಎನ್ನುವ ಕಾಮೆಂಟ್‌ಗಳು ಬಂದವು. “ಜಾತಿ, ಒಳಜಾತಿ, ಧರ್ಮ ಇಂಥ ವಿಷಯ ಇಟ್ಟುಕೊಂಡು ಆಯ್ಕೆ ನಡೆಯಿತು. ಕೆಲವರು ಅತ್ತು ಕರೆದು ಸ್ಥಾನ ಪಡೆದರೆ, ಇನ್ನು ಕೆಲವರು ‘ಹೋರಾಡಿ’ ಜಯಗಳಿಸಿದರು” ಎನ್ನುವ ಮಾತು ಕೇಳಿಬಂತು. ಇಂಥವು ಈಚೀಚೆಗೆ ಸಾಮಾನ್ಯವಾಗುತ್ತಿವೆ. ತಾಲೂಕು ಮಟ್ಟದಿಂದ ಹಿಡಿದು ಅಖಿಲ ಭಾರತ ಸಾಹಿತ್ಯ ಸಮ್ಮೇಳನದವರೆಗೂ ಸಾಹಿತ್ಯೇತರ ಕಾರಣಗಳಿಗಾಗಿ ಸಾಹಿತಿಗಳ ಜಟಾಪಟಿಗಳು ಆಗಾಗ ಸುದ್ದಿಯಾಗುವುದಿದೆ.
ಇವೆಲ್ಲವೂ ಸಾಹಿತ್ಯ ಕ್ಷೇತ್ರಕ್ಕೆ ಕಪ್ಪುಚುಕ್ಕೆಯಾಗುತ್ತವೆ. ಖುಷಿಯ ವಿಷಯವೆಂದರೆ, ಈ ಸಲದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಆಯ್ಕೆಯ ಕುರಿತು
ಬಿರುಮಾತುಗಳು ಬಂದಿಲ್ಲ. ಅವರಂಥವರು ಇಷ್ಟು ವರ್ಷ ಕಾಯಬೇಕಾಯ್ತಲ್ಲಾ ಎಂಬ ಮಾತು ಬಂತು ಅಷ್ಟೇ. ಹಿಂದೆಲ್ಲಾ ಅಧ್ಯಕ್ಷರ ಆಯ್ಕೆ ಕುರಿತಾದ ಚರ್ಚೆಗಳು ವಿಪರೀತ/ವೈಯಕ್ತಿಕ ಮಟ್ಟಕ್ಕೂ ಹೋಗಿಬಿಟ್ಟಿದ್ದವು. ಹಾಗೆ ನೋಡಿದರೆ, ಅಧ್ಯಕ್ಷತೆಗೆ, ವಿವಿಧ ಗೋಷ್ಠಿಗಳಿಗೆ ಸೂಕ್ತ ವ್ಯಕ್ತಿಗಳನ್ನು ಆಯ್ಕೆಮಾಡುವುದು ಸುಲಭವೇನಲ್ಲ. ಏಕೆಂದರೆ ಆಯ್ಕೆಪಟ್ಟಿಯು ‘ಒಳಗೊಳ್ಳುವಂತೆ’ ಇರಬೇಕು. ಅಲ್ಲದೆ, ಪ್ರತಿವರ್ಷವೂ ಸಾವಿರಾರು ಕೃತಿಗಳು ಪ್ರಕಟವಾಗುತ್ತವೆ, ಅವುಗಳ ಮೌಲ್ಯಮಾಪನ ಮಾಡುವವರಾರು, ಹೇಗೆ? ಎನ್ನುವ ಪ್ರಶ್ನೆಯಿದೆ. ಓದುಗರೇ ಅವುಗಳ ನೈಜ ಮೌಲ್ಯಮಾಪಕರು. ನಮ್ಮಲ್ಲಿ ಅಂಥ ಓದುಗರು ಇಲ್ಲವೆಂದೇನಿಲ್ಲ. ಕನ್ನಡದ ಹಲವು ಬರಹಗಾರರ ಕೃತಿಗಳನ್ನು, ಕಾದು ಕುಳಿತು ಖರೀದಿಸಿ
ಓದುವ ದೊಡ್ಡ ಸಂಖ್ಯೆಯ ಓದುಗರಿದ್ದಾರೆ.
ಸಮಸ್ಯೆಯೆಂದರೆ, ಹೆಚ್ಚಾಗಿ ಬೇಡಿಕೆಯಿರುವುದು ಹಳೆಯ ಮುಖಗಳಿಗೇ. ಹೊಸ ಪ್ರತಿಭೆಗಳನ್ನು ಗುರುತಿಸುವುದು ಸುಲಭವಲ್ಲ. ಅರ್ಥಪೂರ್ಣ
ಕೃತಿಗಳನ್ನು ಸಮಾಜದ ಮುಂದಿಡುವಲ್ಲಿ ನಮ್ಮ ವಿಮರ್ಶಕರು ಕೂಡ ಸಫಲವಾಗಿಲ್ಲವೇ ಎಂಬ ಪ್ರಶ್ನೆ ಕೂಡ ಇದೆ. ಕನ್ನಡದಲ್ಲಿ ಶ್ರೇಷ್ಠ ವಿಮರ್ಶಕರಿದ್ದಾರೆ. ಆದರೆ ಅವರನ್ನು ಹೊರತುಪಡಿಸಿದರೆ ಸಾಹಿತ್ಯ ವಿಮರ್ಶೆಯೆಂಬುದು ಸಾಮಾನ್ಯವಾಗಿ ಒಂದು ‘ಟೆಂಪ್ಲೇಟ್’ ಆಗಿಹೋಗಿದೆಯೇ ಎಂಬ ಅನುಮಾನವೂ ಕಾಡುತ್ತಿದೆ.
ಕನ್ನಡ ಸಾಹಿತ್ಯ ಒಂದು ಮಹಾಸಾಗರ, ಅಲ್ಲಿ ಎಲ್ಲ ರೀತಿಯ ಜೀವಜಂತುಗಳೂ ಇರುತ್ತವೆ ಎನ್ನುವ ವಾದವನ್ನು ಒಪ್ಪಿಕೊಳ್ಳಬೇಕು. ಆದರೆ ಕನ್ನಡ ಸಾಹಿತ್ಯವು ಚಿಲ್ಲರೆ ವಿಷಯಗಳಿಗಾಗಿ ನಕಾರಾತ್ಮಕ ಇಮೇಜ್ ಪಡೆದು ಪ್ರಜ್ಞಾವಂತ ಕನ್ನಡಿಗರಿಂದ ದೂರವಾಗಬಾರದು ಮತ್ತು ಈಗಿರುವ ಗದ್ದಲದಲ್ಲಿ ‘ಸಾಹಿತ್ಯ ಎಂದರೇನು?’ ಎಂಬುದನ್ನು ನಾವು ಮರೆಯಬಾರದು ಎನ್ನುವುದಷ್ಟೇ ಇಲ್ಲಿನ ಆಶಯ.
(ಲೇಖಕರು ಮಾಜಿ ಪ್ರಾಂಶುಪಾಲರು ಹಾಗೂ ಸಂವಹನಾ ಸಲಹೆಗಾರರು)
ಇದನ್ನೂ ಓದಿ: Prof R G Hegde Column: ವ್ಯಕ್ತಿತ್ವ ವಿಕಸನದ ವಿಭಿನ್ನ ಆಯಾಮಗಳು