Saturday, 7th September 2024

ದೇಶ ನಡೆಸುವರು ಕನಸು ಕಾಣಲೇಬೇಕು

ವಿದೇಶವಾಸಿ

dhyaapa@gmail.com

ಸೌದಿ ಅರೇಬಿಯಾ ಅತ್ಯಂತ ತ್ವರಿತ ಗತಿಯಲ್ಲಿ ಬದಲಾಗುತ್ತಿದೆ. ಖಗೋಳ ಶಾಸ್ತ್ರ ಮತ್ತು ಯುದ್ಧ ಸಾಮಗ್ರಿಗಳನ್ನು ಹೊರತು ಪಡಿಸಿ, ಜಗತ್ತಿನ ಯಾವುದೇ ಮೂಲೆಯಲ್ಲಿ ಏನೇ ಹೊಸತು ಕಂಡರೂ ಕೆಲವೇ ದಿನಗಳಲ್ಲಿ ಅದು ಸೌದಿ ತಲುಪುತ್ತದೆ. ಇದರ ಬಹುತೇಕ ಶ್ರೇಯ ಸಲ್ಲಬೇಕಾದದ್ದು ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಅಲ್ ಸೌದ್‌ಗೆ.

ಬಹಳ ದಿನಗಳಿಂದ ಅದೊಂದು ಆಸೆಯಿತ್ತು. ಕೇವಲ ಹಾಲಿವುಡ್ ಚಿತ್ರಗಳಲ್ಲಿ ಮಾತ್ರ ಕಾಣುತ್ತಿದ್ದ ಕಲ್ಪನಾಲೋಕ ಭುವಿಯ ಒಂದು ಭಾಗದಲ್ಲಿ ಸೃಷ್ಟಿ ಯಾಗುತ್ತಿದೆ ಎಂದರೆ ಸುಮ್ಮನಿರಲು ಸಾಧ್ಯವೇ ಇಲ್ಲ. ಸ್ವರ್ಗ ಸಮಾನ ಸ್ಥಳವೊಂದು ಭೂಮಿಯ ಮೇಲೆ ನಿರ್ಮಾಣವಾಗುತ್ತದೆ, ಅದೂ ಸೌದಿ ಅರೇಬಿಯಾದಂತಹ ದೇಶದಲ್ಲಿ ಎಂದರೆ ಖಂಡಿತ ಸುಮ್ಮನಿರ ಲಾಗದು. ಆ ಪ್ರಪಂಚವನ್ನು ಒಮ್ಮೆ ಕಾಣಬೇಕು, ಅದರಲ್ಲೂ ನಿರ್ಮಾಣಗೊಳ್ಳುವುದಕ್ಕಿಂತ ಮೊದಲೇ ಕಾಣಬೇಕು. ನಿರ್ಮಾಣಗೊಂಡ ನಂತರದ ವೈಭವವಂತೂ ಇದ್ದದ್ದೇ. ಅದನ್ನು ಯಾರಾದರೂ ಕಣ್ತುಂಬಿಕೊಳ್ಳಬಹುದು.

ನಿರ್ಮಾಣಗೊಳ್ಳುವುದಕ್ಕಿಂತ ಮೊದಲೇ ಅದನ್ನು ಕಂಡರೆ, ಮುಂದೊಂದು ದಿನ ವಸ್ತು ಸಂಗ್ರಹಾಲಯ ಸೇರಬಹುದಾದ ಛಾಯಾಚಿತ್ರಗಳು, ವಿಡಿಯೋ ತುಣುಕುಗಳು, ಪಳೆಯುಳಿಕೆಗಳು, ಉಪಯೋಗಿಸಿದ ಯಂತ್ರೋ ಪಕರಣಗಳನ್ನೆಲ್ಲ ಇಂದೇ ಕಣ್ಣಾರೆ ಕಂಡು, ಅದಕ್ಕೆ ಸಾಕ್ಷಿಯೂ ಆಗಬಹುದಲ್ಲ! ಮೊನ್ನೆ ಅದಕ್ಕೆ ತಕ್ಕ ಅವಕಾಶವೂ ಒದಗಿಬಂತು. ಕಂಪನಿಯ ಕೆಲಸದ ಮೇಲೆ ಅಂತಹ ಒಂದು ಸ್ಥಳಕ್ಕೆ ಹೋಗುವ ಅನಿವಾರ್ಯತೆ, ಅವಕಾಶ ಒದಗಿಬಂತು. ಇನ್ನೇನು, ಸ್ವಾಮಿ-ಕಾರ್ಯ, ಸ್ವ-ಕಾರ್ಯ ಎರಡೂ ಒಟ್ಟಿಗೆ ಆಗಲೆಂದು, ಒಂದೆರಡು ದಿನ ಹೆಚ್ಚೇ ಇಟ್ಟುಕೊಂಡು ಹೊರಟೆ.

ಪ್ರಯಾಣವೇನೂ ಸಾಮಾನ್ಯವಲ್ಲ. ಸೌದಿ ಅರೇಬಿಯಾದ ಒಂದು ಕಡೆಯ ಅರಬ್ಬಿ ಸಮುದ್ರದ ತೀರದಿಂದ ಇನ್ನೊಂದು
ಕಡೆಯಲ್ಲಿರುವ ಕೆಂಪು ಸಮುದ್ರದ ತೀರಕ್ಕೆ ಕಾರಿನಲ್ಲಿ ಪ್ರಯಾಣ. ಸುಮಾರು 2000 ಕಿ.ಮೀ. ದಾರಿ. ನನಗೆ ಕಾರುದಾರಿ ಹೊಸತೇನೂ ಅಲ್ಲದಿದ್ದರೂ, ಕ್ರಮಿಸಬೇಕಾದ ದೂರ ನನ್ನೊಳಗಿನ ಧೈರ್ಯಕ್ಕೆ ಸವಾಲು ಹಾಕುವಂತಿತ್ತು. ಬರೀ ಹೋಗುವು ದಷ್ಟೇ ಅಲ್ಲ, ಒಮ್ಮೆ ಹೋದಮೇಲೆ ಹಿಂದಿರುಗಿ ಬರಲೂ ಬೇಕಲ್ಲ! ನಾನಿದ್ದಲ್ಲಿಂದ ಅಲ್ಲಿಗೆ ಒಮ್ಮೆ ಹೋಗಿ ಬರುವುದೆಂದರೆ ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ಹೋಗುವುದಕ್ಕಿಂತಲೂ ಹೆಚ್ಚು.

ಆದರೂ ಇಂತಹ ಅವಕಾಶ ಪುನಃ ಬರದಿದ್ದರೆ? ಮತ್ತೆ, ಮೋಟಾರಿನಲ್ಲಿ ಮೂಟೆ ಇಟ್ಟು ಹೊರಟಿದ್ದೇ. ಮಜದ ಸಂಗತಿ
ಯೆಂದರೆ, ನಾನು ಕಾರು ಹತ್ತಿ ಹೊರಟದ್ದು ಮುಂದೊಂದು ದಿನ ಭೂಮಿಯ ಮೇಲೆ ಕಾರು ಓಡಾಡದ ಊರಿಗೆ! ಇದನ್ನು ಕಾರಿಲ್ಲದ ಊರಿನ ಕಾರುಬಾರು ಎಂದರೂ ತಪ್ಪಿಲ್ಲ!

ಎಲ್ಲವೂ ಎಣಿಸಿದಂತೆ ನಡೆದರೆ, ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಅಲ್ ಸೌದ್‌ರ ಕನಸಾದ, 26500 ಚ.ಕಿ.ಮೀ. ವಿಸ್ತೀರ್ಣದ ‘ನಿಯೊಮ್’ (NEOM) ಎಂಬ ಮಾಯಾ ನಗರಿಯ ಮೊದಲ ಹಂತ 2026ರ ವೇಳೆಗೆ ನಿರ್ಮಾಣಗೊಳ್ಳಲಿದೆ. ಅಮೆರಿಕದ ನ್ಯೂಯಾರ್ಕ್ ಶಹರಕ್ಕಿಂತ ಸುಮಾರು 30 ಪಟ್ಟು ದೊಡ್ಡದಾದ, 500 ಬಿಲಿಯನ್ ಡಾಲರ್ ವೆಚ್ಚದಲ್ಲಿ ರೂಪು ಗೊಳ್ಳಲಿರುವ ಈ ಸ್ಮಾರ್ಟ್ ಸಿಟಿಯಲ್ಲಿ ಮಾನವರಿಗಿಂತ ಹೆಚ್ಚು ರೊಬೋಟ್‌ಗಳು ಇರಲಿವೆ. ದೇಶದ ವಾಯವ್ಯ ಭಾಗದಲ್ಲಿ ಜೋರ್ಡಾನ್ ಗಡಿಗೆ ಹೊಂದಿಕೊಂಡು ಸೌದಿ ಅರೇಬಿಯಾ ಮತ್ತು ಈಜಿಪ್ಟ್ ನಡುವೆ ಇರುವ ಕೆಂಪು ಸಮುದ್ರದ ತೀರದಲ್ಲಿ ಸುಮಾರು ಐವತ್ತು ದ್ವೀಪಗಳೂ ಸೇರಿದಂತೆ 460 ಕಿ.ಮೀ. ಉದ್ದಕ್ಕೆ ಪ್ರವಾಸಿತಾಣವಾಗಿ ಇದು ಮೈದಳೆಯಲಿದೆ.

ಸಂಪೂರ್ಣವಾಗಿ ನವೀಕರಿಸಬಹುದಾದ ಇಂಧನ (Renewable energy) ಮೂಲಗಳಿಂದ ಈ ಯೋಜನೆಯನ್ನು ನಡೆಸಲು ಆಲೋಚಿಸಲಾಗಿದೆ. ಸೌದಿ ಅರೇಬಿಯಾದ ಉಳಿದೆಡೆಗಿಂತ ವಿಭಿನ್ನವಾದ ಈ ಪ್ರದೇಶ, ಸಮುದ್ರ ಮಟ್ಟದಿಂದ ಸುಮಾರು ೨೫೦೦ ಮೀ. ಎತ್ತರದ ಪರ್ವತಗಳನ್ನು ಹೊಂದಿದ್ದು, ಬೇಸಿಗೆಯಲ್ಲಿ ಸಮುದ್ರದ ತಂಗಾಳಿ ಮತ್ತು ಚಳಿಗಾಲದಲ್ಲಿ ಹಿಮಪಾತ ವನ್ನು ಕಾಣಬಹುದಾದ ಸ್ಥಳವಾಗಿದೆ. ಜಲಕ್ರೀಡೆ ಮತ್ತು ಜಲಮನರಂಜನೆಯ ಕಾರ್ಯಕ್ರಮಗಳಿಗೆ ಇಲ್ಲಿ ಹೆಚ್ಚು ಒತ್ತುಕೊಡ ಲಾಗಿದೆ.

‘ಹೊಸಭವಿಷ್ಯ’ (New Future) ಎಂದು ಅರ್ಥಕೊಡುವ ನಿಯೋಮ್‌ನಲ್ಲಿ ಸ್ವಯಂಚಾಲಿತ ಕಾರುಗಳು, ಹಾರುವ ಕಾರುಗಳು, ಡೈನೊಸರ್ ರೋಬೋಟ್‌ಗಳೊಂದಿಗೆ ಕೃತಕ ಚಂದ್ರನನ್ನೂ ಕಾಣಬಹುದಾಗಿದೆ. ಆಫ್ರಿಕಾ, ಯುರೋಪ್ ಮತ್ತು ಏಷ್ಯಾ ಖಂಡದ ಕೇಂದ್ರವಾಗಿರುವ ಈ ನಗರಿಗೆ ಪ್ರಪಂಚದ 70 ಪ್ರತಿಶತ ಭಾಗದಿಂದ ಪ್ರಯಾಣದ ಸಮಯ 8 ಗಂಟೆಗಿಂತಲೂ ಕಮ್ಮಿ ಎಂದರೆ ಆಶ್ಚರ್ಯಪಡಬೇಡಿ.

ನೀರು, ಆಹಾರ, ಮಾಧ್ಯಮ, ಮನರಂಜನೆಯೊಂದಿಗೆ ಬಯೋಟೆಕ್, ಅಡ್ವಾನ್ಸ್ಡ್ ಮ್ಯಾನುಫ್ಯಾಕ್ಚರಿಂಗ್, ಡಿಜಿಟಲ್ ಟೆಕ್ನಾಲಜಿಗೆ ಇಲ್ಲಿ ಹೆಚ್ಚಿನ ಅವಕಾಶ ಒದಗಿಸಿಕೊಡಲಾಗಿದೆ. ಈ ಯೋಜನೆ ಒಮ್ಮೆ ಕಾರ್ಯನಿರ್ವಹಿಸಲು ಆರಂಭಿಸಿತೆಂದರೆ ಮಾಯಾ ನಗರಿಯಂತೆ ಕಾಣುವುದರಲ್ಲಿ ಎರಡು ಮಾತಿಲ್ಲ. ಇನ್ನು ಈ ನಿಯೋಮ್ ಪ್ರಪಂಚದಲ್ಲಿ ಪ್ರಮುಖವಾಗಿ ಮೂರು ಭಾಗಗಳಿವೆ. ಮೊದಲನೆಯದು ‘ಟ್ರೊಜೆನಾ’.

ಇದು ಜೋರ್ಡಾನ್ ಗಡಿಗೆ ಸಮೀಪ ದಲ್ಲಿರುವ, ಸಮುದ್ರ ಮಟ್ಟಕ್ಕಿಂತ ಸುಮಾರು 1500-2500 ಮೀ. ಎತ್ತರದಲ್ಲಿರುವ ಗುಡ್ಡಗಾಡು ಪ್ರದೇಶ. ಇಲ್ಲಿ ಕೃತಕ ಕೆರೆಗಳ ನಿರ್ಮಾಣವಾಗಲಿದೆ. ಅದೂ ಸಾಮಾನ್ಯ ಕೆರೆಯಲ್ಲ, ದೋಣಿಸವಾರಿ
ಮಾಡಬಹುದಾದ ಕೆರೆ. ಚಳಿಗಾಲದಲ್ಲಿ ಶೂನ್ಯಡಿಗ್ರಿ ತಾಪಮಾನಕ್ಕಿಳಿಯುವ ಈ ಸ್ಥಳ ಪರ್ವತ ಪ್ರವಾಸೋದ್ಯಮಕ್ಕೆ ಹೊಸಭಾಷ್ಯ ಬರೆಯಲಿದೆ.

ಇನ್ನೊಂದು ‘ಆಕ್ಸಗನ್’ ಎಂಬ ದ್ವೀಪ. ಅಲ್ಲಿ ವಸತಿ, ಕಚೇರಿಗಳೊಂದಿಗೆ ಸಂಶೋಧನಾ ಕೇಂದ್ರ, ವಾಣಿಜ್ಯ, ಕ್ರೀಡೆ ಇತ್ಯಾದಿಗಳಿಗೆ ಭರಪೂರ ಅವಕಾಶವಿರಲಿದೆ. ವಿದ್ಯುಚ್ಚಾಲಿತ ಕಾರುಗಳನ್ನು ತಯಾರಿಸುವ ಬ್ರಿಟನ್ನಿನ ಮೆಕ್ ಲಾರೆನ್ ಸಂಸ್ಥೆ ಇದರಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಮುಂದೊಂದು ದಿನ ‘ಫಾರ್ಮುಲಾ-ಇ’ ಕಾರುಗಳ ಸ್ಪರ್ಧೆಯನ್ನೂ ಇಲ್ಲಿ ಕಾಣಬಹುದು. ಈ ನಗರಸಂಪೂರ್ಣ ಕ್ರಿಯೆ ನಡೆಯುವುದು ನವೀಕರಿಸಬಹುದಾದ ಇಂಧನದಿಂದ.

ಇವೆರಡಕ್ಕಿಂತಲೂ ಮಜವಾಗಿರುವುದು, ‘ದಿಲೈನ್’. ಇದು ಸಮುದ್ರಮಟ್ಟದಿಂದ ಸುಮಾರು 500 ಮೀ. ಎತ್ತರದಲ್ಲಿ ಇರಲಿದೆ. ಇದರ ವಿಶೇಷತೆ- ಉದ್ದ 196 ಕಿ.ಮೀ., ಅಗಲ ಕೇವಲ 200 ಮೀ. ಇದೇನು ಹೀಗೆ? ಲೆಕ್ಕಾಚಾರ ತಪ್ಪಿದೆಯೇ? ಎಂದು
ಯೋಚಿಸಬೇಡಿ. ಅದರ ವಿನ್ಯಾಸವೇ ಹಾಗೆ. 34 ಚ.ಕಿ.ಮೀ. ವಿಸ್ತೀರ್ಣದ ಈ ‘ನಗರ’ದಲ್ಲಿ 90 ಲಕ್ಷ ಜನ ವಾಸಿಸಲು ಅವಕಾಶವಿದೆ. ಮಜವೆಂದರೆ, ಅಷ್ಟೊಂದು ಜನವಸತಿಯಿದ್ದರೂ ಈ ನಗರದಲ್ಲಿ ಕಾರುಗಳು ಇರುವುದಿಲ್ಲ.

ಅಸಲಿಗೆ ವಾಹನ ಓಡಾಡಲು ರಸ್ತೆಗಳೂ ಇರುವುದಿಲ್ಲ. ಇನಿದ್ದರೂ ಒಂದು ತುದಿಯಿಂದ ಇನ್ನೊಂದು ತುದಿಗೆ 20  ನಿಮಿಷದಲ್ಲಿ ತಲುಪಬಹುದಾದ ಸೂಪರ್ -ಸ್ಟ್ ಟ್ರೇನು ಮಾತ್ರ! ‘ಭವಿಷ್ಯದಿಂದ ಭವಿಷ್ಯದ ಕಡೆಗೆ’ಎಂಬ ನಿಯೋಮ್ ನಗರದ ಟ್ಯಾಗ್‌ಲೈನ್‌ಗೆ ಅರ್ಥ ಬರಬೇಕಾದರೆ ಇಂತಹ ಸಾಹಸಗಳು ಆಗಲೇಬೇಕು!

ಆಶ್ಚರ್ಯದ ಸಂಗತಿಯೆಂದರೆ, ಇಷ್ಟೆಲ್ಲ ಆಗುತ್ತಿರುವುದು ಸೌದಿ ಅರೇಬಿಯಾದಲ್ಲಿ. ಮೊನ್ನೆ ನಾನು ಕಣ್ಣಾರೆ ಕಂಡದ್ದು; ಈ ಸ್ಥಳದ ಬಹುತೇಕ ಭಾಗ ಈಗಲೂ ಬೋಳುಗುಡ್ಡ, ಅಲ್ಲಲ್ಲಿ ಹೊಯಿಗೆ ರಾಶಿ. ಆದರೆ, ಕೆಲವು ನೂರಲ್ಲ, ಸಾವಿರದ ಸಂಖ್ಯೆಯಲ್ಲಿ
ಭಾರಿ ಗಾತ್ರದ ಯಂತ್ರೋಪಕರಣಗಳು ಬರೀ ಮಣ್ಣು ಕಡಿದು, ಭೂಮಿ ಸಮತಟ್ಟಾಗಿಸುವ ಕಾರ್ಯದಲ್ಲಿ ತೊಡಗಿದ್ದು, ಯುದ್ಧೋಪಾದಿಯಲ್ಲಿ ಕೆಲಸ ಮಾಡುತ್ತಿವೆ.

ಒಂದು ಕಾಲದಲ್ಲಿ ಸೌದಿ ಅರೇಬಿಯಾ ಎಂದರೆ ಮೂಗು ಮುರಿಯುತ್ತಿದ್ದವರೇ ಹೆಚ್ಚು. ‘ಇದು ಕಟ್ಟಾ ಮುಸ್ಲಿಂರಾಷ್ಟ್ರ. ಆಧುನಿಕ ತಂತ್ರeನದ ಕೊರತೆ, ಶರಿಯಾ ಕಾನೂನಿನ ಪ್ರಕಾರ ಕಠಿಣ ಶಿಕ್ಷೆ ಇರುವ, ಸೀಯರಿಗೆ ಲವಮಾತ್ರದ ಸ್ವಾತಂತ್ರ್ಯವೂ ಇಲ್ಲದ,
ಭೌಗೋಳಿಕವಾಗಿ ನದಿ, ಕೆರೆ, ಕೊಳ, ಹಳ್ಳಗಳಿಲ್ಲದ, ರಣರಣ ಮರುಭೂಮಿಯ, ಒಣಒಣಹವೆಯ, ಸುಡುಬಿಸಿಲಿನ ಈ ದೇಶದಲ್ಲಿ ಜನರು ಹೇಗೆ ಬದುಕುತ್ತಾರೋ?!’ ಎಂದು ಪರದೇಶದವರು ಹುಬ್ಬೇರಿಸುತ್ತಿದ್ದರು.

ಆದರೆ ಸೌದಿ ಅರೇಬಿಯಾ ತನ್ನ ಮಣ್ಣಿನ ಘಮಲನ್ನು ಉಳಿಸಿಕೊಂಡೇ ಬದಲಾವಣೆಯ ಬೆಳಕು ಕಾಣಲು ಮೈಮುರಿದು ಎದ್ದುನಿಂತದ್ದು ಒಂದು ವಿಸ್ಮಯವೇ ಸರಿ. 1938ರ ತೈಲನಿಕ್ಷೇಪ ದೊರೆತು, ಅಮೆರಿಕದ ಕೆಲವು ಕಂಪನಿಗಳು, ಜನರು ಸೌದಿ ಅರೇಬಿಯಾಕ್ಕೆ ಬಂದರೂ ದೇಶದಲ್ಲಿ ಬದಲಾವಣೆ ನಿಧಾನ ಗತಿಯಲ್ಲಿಯೇ ಸಾಗಿತ್ತು. ದೇಶದಲ್ಲಿ ಹೆಣ್ಣುಮಕ್ಕಳಿಗೆ ಶಿಕ್ಷಣ ಸೌಲಭ್ಯವೇ ಇರಲಿಲ್ಲ. ಸಾಕಷ್ಟು ಸಾಮಾಜಿಕ ಆಕ್ರೋಶದ ನಡುವೆ 1955ರಲ್ಲಿ ಅಂದಿನ ರಾಜಕುಮಾರಿ ಎ-ತ್ ಮೊದಲ ಖಾಸಗಿ ಶಾಲೆ ಆರಂಭಿಸಿ, ಐದು ವರ್ಷದ ನಂತರ ಹೆಣ್ಣುಮಕ್ಕಳು ಸಾರ್ವಜನಿಕ ಶಿಕ್ಷಣ ಪಡೆಯುವುದಕ್ಕೆ ಕಾರಣಳಾ
ದಳು. ಸಂಪ್ರದಾಯವಾದಿಗಳ ಪ್ರತಿಭಟನೆಯ ನಡುವೆ ಅಂದಿನ ದೊರೆ ಕಿಂಗ್ -ಸಲ, ಧರ್ಮಗ್ರಂಥ ಕುರಾನ್ ಪಠಣೆಗಷ್ಟೇ ಸೀಮಿತವಾಗಿ ದೂರದರ್ಶನ ಪ್ರಸಾರಕ್ಕೆ ಅನುಮೋದನೆ ನೀಡಿದ್ದರು.

ದೇಶದ ಮೊದಲ ಉನ್ನತ ಶಿಕ್ಷಣ ಹೊಂದಿದ ವಿಶ್ವವಿದ್ಯಾಲಯ ಸ್ಥಾಪಿಸಲ್ಪಟ್ಟಿದ್ದು 1957ರಲ್ಲಿ. ಈಗ ಒಂದು ದಶಕದ ಹಿಂದಿನವರೆಗೂ ಮಹಿಳೆಂi ರು ಆಸ್ಪತ್ರೆಯಲ್ಲಿ ಮತ್ತು ಶಾಲೆ-ಕಾಲೇಜುಗಳಲ್ಲಿ, ಡಾಕ್ಟರ್, ಟೀಚರ್, ನರ್ಸ್, ಜೆನಿಟರ್ ಅಥವಾ
ಬ್ಯಾಂಕಿನ ಮಹಿಳಾ ಶಾಖೆಯ ಸಿಬ್ಬಂದಿಯ ಕೆಲಸ ಬಿಟ್ಟು ಉಳಿದೆಡೆ, ಬೇರೆ ಕೆಲಸ ಮಾಡುವಂತಿರಲಿಲ್ಲ, ಕ್ರೀಡೆಗಳಲ್ಲಿ ಭಾಗವಹಿಸುವಂತಿರಲಿಲ್ಲ. ಇಂದು ಯೋಗವನ್ನೂ ಒಂದು ಕ್ರೀಡೆ ಎಂದು ಪರಿಗಣಿಸಲಾಗಿದ್ದು, ಸಾಕಷ್ಟು ಯೋಗ ತರಬೇತಿ ಕೇಂದ್ರಗಳೂ ತಲೆಯೆತ್ತಿ ನಿಲ್ಲುತ್ತಿವೆ.

2016ರಲ್ಲಿ ಮೊದಲ ಬಾರಿಗೆ ಸೌದಿ ಅರೇಬಿಯಾದ ಮಹಿಳೆಯೊಬ್ಬಳು ಬ್ರೆಜಿಲ್ ನಲ್ಲಿ ನಡೆದ ಬೇಸಿಗೆಯ ಒಲಿಂಪಿಕ್ ಪಂದ್ಯದಲ್ಲಿ ಭಾಗವಹಿಸಿ ಹೊಸ ಇತಿಹಾಸಕ್ಕೆ ನಾಂದಿ ಹಾಡಿದಳು. ಇಂದು ಮಹಿಳೆಯರು ಸೌದಿ ಸ್ಟಾಕ್ ಎಕ್ಸ್‌ಚೇಂಜ್‌ನ
ಅಧ್ಯಕ್ಷ ಸ್ಥಾನದಿಂದ ಹಿಡಿದು ರಾಯಭಾರಿಯವರೆಗಿನ ಎಲ್ಲ ಕ್ಷೇತ್ರಗಳಲ್ಲೂ ಕಾರ್ಯ ನಿರ್ವಹಿಸುತ್ತಿzರೆ. 1957ರಿಂದಲೂ ದೇಶದಲ್ಲಿ ಮಹಿಳೆಯರು ವಾಹನ ಚಾಲನೆ ಮಾಡಲು ನಿಷೇಧವಿತ್ತು. 6 ದಶಕಗಳ ನಂತರ 2017ರಲ್ಲಿ ಮಹಿಳೆಯರಿಗ
ವಾಹನ ಚಲಾಯಿಸಲು ಪುನಃ ಪರವಾನಗಿ ನೀಡಲಾಯಿತು.

ಮೂರೂವರೆ ದಶಕದ ನಂತರ ಚಿತ್ರಮಂದಿರಗಳನ್ನು ಪುನಃ ಆರಂಭಿಸಿ ಚಲನಚಿತ್ರಗಳ ಪ್ರದರ್ಶನಕ್ಕೆ ಅನುಮತಿಸಲಾಯಿತು. ಇಂದು ಸೌದಿ ಅರೇಬಿಯಾ ಅತ್ಯಂತ ತ್ವರಿತ ಗತಿಯಲ್ಲಿ ಬದಲಾಗುತ್ತಿದೆ. ಖಗೋಳ ಶಾಸ ಮತ್ತು ಯುದ್ಧ ಸಾಮಗ್ರಿ ಗಳನ್ನುಹೊರತುಪಡಿಸಿ, ಜಗತ್ತಿನ ಯಾವುದೇ ಮೂಲೆಯಲ್ಲಿ ಏನೇ ಹೊಸತು ಕಂಡರೂ ಕೆಲವೇ ದಿನಗಳಲ್ಲಿ ಅದು ಸೌದಿ ಅರೇಬಿಯಾ ತಲುಪುತ್ತದೆ. ಇದರ ಬಹುತೇಕ ಶ್ರೇಯ ಸಲ್ಲಬೇಕಾದದ್ದು ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್
ಅಲ್ ಸೌದ್‌ಗೆ. ‘ಆಧುನಿಕತೆಯೆಡೆಗೆ ನಮ್ಮ ದೇಶ ಗಮನಹರಿಸಬೇಕಾಗಿದೆ, ಇನ್ನು ಮುಂದೆ ಕೇವಲ ಪೆಟ್ರೋಲಿಯಂ ಉತ್ಪನ್ನಗಳನ್ನೇ ಅವಲಂಬಿಸಿರಲು ಸಾಧ್ಯವಿಲ್ಲ’ ಎಂದು ಕರೆನೀಡಿ ಸಾಕಷ್ಟು ಪರ್ಯಾಯ ವ್ಯವಸ್ಥೆಗೆ ನಾಂದಿ ಹಾಡಿದವರು ಮೊಹಮ್ಮದ್.

ವಿದೇಶಿ ಕಾರ್ಮಿಕರಿಗೆ, ಸ್ಥಳೀಯರಿಗೆ ಸ್ವಲ್ಪ ಭಾರವೆನಿಸಿದರೂ ದೇಶದ ಒಳಿತನ್ನು ಲಕ್ಷ್ಯದಲ್ಲಿಟ್ಟುಕೊಂಡು ಮೊದಲ ಬಾರಿಗೆ ಮೌಲ್ಯವಽತ ತೆರಿಗೆ ಪದ್ಧತಿ ಯನ್ನು (ಅS) ಜಾರಿಗೆ ತರಲಾಗಿದೆ. ಸ್ವತಃ ಸೇನಾ ಪಡೆಯ ಮುಖ್ಯಸ್ಥರಾದ ಅವರು ಯಾವ
ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಕ್ಕೂ ಸೈ ಎಂದವರು. ಭ್ರಷ್ಟಾಚಾರ ಮತ್ತು ಭಯೋತ್ಪಾದನೆಯ ವಿರುದ್ಧ ಹೋರಾಟಕ್ಕೆ ನಿಂತ ಅವರು, ಪಕ್ಕದ ಯೆಮನ್ ದೇಶದೊಂದಿಗೆ ಯುದ್ಧ ಮಾಡುವುದಕ್ಕಾಗಲಿ, ಕತಾರ್ ದೇಶವನ್ನುಬಹಿಷ್ಕರಿಸುವುದಕ್ಕಾಗಲಿ
ಹಿಂಜರಿದವರಲ್ಲ.

ಈಗ ಆಡಳಿತದ ಚುಕ್ಕಾಣಿ ಹಿಡಿದವರ ಕನಸಿನ ನೀಲನಕ್ಷೆ ‘ವಿಷನ್ 2030’ ಸಿದ್ಧಪಡಿಸಲಾಗಿದೆ. ಶಿಕ್ಷಣ, ತಂತ್ರeನ, ಮಹಿಳಾ ಸಬಲೀಕರಣವೂ ಸೇರಿದಂತೆ ದೇಶದ ಸಮಗ್ರ ಅಭಿವೃದ್ಧಿಗೆ ಹೆಚ್ಚು ಮಹತ್ವ ನೀಡಲಾಗಿದೆ. ಯಾರು ಕನಸು ಕಾಣುತ್ತಾರೋ ಬಿಡುತ್ತಾರೋ ಗೊತ್ತಿಲ್ಲ, ದೇಶ ಆಳುವವರು ಮಾತ್ರ ಕನಸು ಕಾಣಲೇಬೇಕು. ಭೌಗೋಳಿಕವಾಗಿ ಎಲ್ಲ ಕೊಲ್ಲಿ ರಾಷ್ಟ್ರಗಳದ್ದೂ ಒಂದೇ ಲೆಕ್ಕ. ಸಂಸ್ಕೃತಿ, ಭಾಷೆಯ ವಿಷಯ ಗಳಲ್ಲೂ ಅಷ್ಟೇ. ಆದರೂ ಇಂದು ದುಬೈ ಉಳಿದವುಗಳಿಗಿಂತ ಸಾಕಷ್ಟು ಮುಂದಿದೆ. ಹಾಗೆ ನೋಡಿದರೆ ಸೌದಿ ಅರೇಬಿಯಾ, ಕತಾರ್, ಕುವೈತ್, ಓಮಾನ್ ದೇಶದಲ್ಲಿದ್ದಷ್ಟು ತೈಲ ಸಂಪನ್ಮೂಲ ಅಲ್ಲಿಲ್ಲ. ಆದರೂ ಉಳಿದವರನ್ನು ದುಬೈ ಹಿಂದಿಕ್ಕಲು ಕಾರಣ ಅಲ್ಲಿಯ ಆಡಳಿತ ನಡೆಸುತ್ತಿದ್ದವರ ಮುಂದಾಲೋಚನೆ.

ಅಲ್ಲಿ ಆಡಳಿತ ನಡೆಸುವವರು ಪ್ರತಿನಿತ್ಯ ಅಲ್ಲ, ಪ್ರತಿ ನಿಮಿಷಕ್ಕೂ ಒಂದೊಂದು ಕನಸು ಕಂಡವರು. ಅದನ್ನು ಕಾರ್ಯರೂಪಕ್ಕೆ ತರಲು ಶ್ರಮಿಸಿದವರು. ದೇಶ ಆಳುವವರು ಕನಸು ಕಾಣುವುದನ್ನು ನಿಲ್ಲಿಸಿದರೆ ದೇಶವೂ ಯಥಾಸ್ಥಿತಿಯಲ್ಲಿದ್ದು ಸ್ತಬ್ಧವಾಗಿ ನಿಲ್ಲುತ್ತದೆ. ಅವರವರು ಕನಸು ಕಂಡರೆ ಅದು ಅವರವರಿಗೆ. ಹೆಚ್ಚೆಂದರೆ ಅವರ ಪರಿವಾರದವರಿಗೆ. ಆದರೆ, ಒಂದು ದೇಶ ಆಳುವವರು ಕನಸು ಕಂಡರೆ ಅದು ಆ ದೇಶದಲ್ಲಿರುವ ಎಲ್ಲರಿಗೂ. ಕೆಲವೊಮ್ಮೆ ಬೇರೆ ದೇಶದವರಿಗೂ!

error: Content is protected !!