Sunday, 23rd June 2024

ಈ ಕನಸಿನ ಆಟ ಜೂಜು ಅಲ್ಲ..!?

ವಿದೇಶವಾಸಿ

dhyapaa@gmail.com

‘ಈ ಸಲ ಕಪ್ ನಮ್ದೇ…!’ ೨೦೦೮ರಲ್ಲಿ ಐಪಿಎಲ್ ಕ್ರಿಕೆಟ್ ಪಂದ್ಯಾಟ ಆರಂಭವಾದಾಗಿ ನಿಂದಲೂ ರಾಜ್ಯದ ಕ್ರಿಕೆಟ್ ಪ್ರೇಮಿಗಳ ಬಾಯಿಂದ ಕೇಳಿಬರು ತ್ತಿರುವ ಘೋಷ ಇದು. ನಿನ್ನೆ ಮುಗಿದ ಐಪಿಎಲ್ ಸೇರಿಸಿದರೆ ಒಟ್ಟೂ ಹದಿನೇಳು ಪಂದ್ಯಾಟ ಕಳೆದವು. ಬೆಂಗಳೂರು ತಂಡದ ಅಭಿಮಾನಿಗಳಿಗೆ ಈ ಬಾರಿಯೂ ಸಿಕ್ಕಿದ್ದು ಒಂದಷ್ಟು ಮನರಂಜನೆ ಬಿಟ್ಟರೆ ನಿರಾಸೆ ಮಾತ್ರ.

ಇರಲಿ, ಅದಕ್ಕೇನಂತೆ, ಇದು ಐಪಿಎಲ್‌ನ ಕೊನೆಯ ಪ್ರದರ್ಶನವೇನೂ ಅಲ್ಲವಲ್ಲ! ಮುಂದಿನ ವರ್ಷವೂ ಮತ್ತೆ ಈ ಪಂದ್ಯಾಟ ಇದೆ, ಮತ್ತೆ ‘ಈ ಸಲ ಕಪ್ ನಮ್ದೇ…’ ಎಂಬ ಘೋಷವೂ ಇದೆ. ಐಪಿಎಲ್ ಕ್ರಿಕೆಟ್ ಪಂದ್ಯವನ್ನು ಆಟಕ್ಕಿಂತ ಮನರಂಜನೆಗಾಗಿಯೇ ನೋಡಬೇಕು ಎನ್ನುವವನು ನಾನು. ಎರಡೂವರೆ-ಮೂರು ತಾಸಿನ ಸಿನಿಮಾದಲ್ಲಿ ಸಿಗುವುದಕ್ಕಿಂತ ಹೆಚ್ಚು ಮನರಂಜನೆ ಐಪಿಎಲ್ ಕ್ರಿಕೆಟ್‌ನಲ್ಲಿ ಸಿಗುತ್ತದೆ.

ಇತ್ತೀಚಿನ ಸಿನಿಮಾದಲ್ಲಿ ಹೆಚ್ಚೆಂದರೆ ನಾಲ್ಕು ಹಾಡು, ಮೂರು ಹೊಡೆದಾಟ, ಎರಡು ರೇಪ್ ಅಥವಾ ಮರ್ಡರ್, ಒಂದು ಡಾ, ಸೊನ್ನೆ ಸಂದೇಶ!
ಆದರೆ ಐಪಿಎಲ್ ಹಾಗಲ್ಲ, ಸೆಂಟಿಮೆಂಟ್, ಡಾನ್ಸ್, ಫೈಟ್, ಸ್ಟಂಟ್, ಕ್ಲೈಮ್ಯಾಕ್ಸ್ ಎಲ್ಲವೂ ಇದೆ. ನಾಲ್ಕು ತಾಸಿನ ಪ್ರತಿ ಪಂದ್ಯವೂ ಒಂದು ಸಿನಿಮಾ.
ಅಲ್ಲೋ ಇಲ್ಲೋ ಒಂದೊಂದು ಆರ್ಟ್ ಮೂವಿಯಂತಹ ಮ್ಯಾಚ್ ಬಿಟ್ಟರೆ ಬಹುತೇಕ ಎಲ್ಲ ಪಂದ್ಯಗಳೂ ಮಾಸ್ ಮೂವಿಗಳೇ.

ಒಂದು ಮಾತು ಸತ್ಯ, ಭಾರತದಲ್ಲಿ ಕೋಟಿ ಗಳಿಸುವ ಸಿನಿಮಾಗಳು, ನಿರ್ಮಾಪಕರು ಅಪರೂಪ. ಅದೇ ಐಪಿಎಲ್ ಪಂದ್ಯ, ತಂಡದ ಮಾಲೀಕರು ಮಾತ್ರ ಕೋಟಿ ಕೋಟಿ ರೂಪಾಯಿ  ಗಳಿಸುವುದರಲ್ಲಿ ಯಾವ ಅನುಮಾನವೂ ಇಲ್ಲ. ಒಂದು ವೇಳೆ ಪಂದ್ಯ ರೋಮಾಂಚಕಾರಿಯಾಗಿಯೂ, ರಂಜನೀಯ ವಾಗಿಯೂ ಇರಲಿಲ್ಲ ಅಂದುಕೊಳ್ಳಿ, ಸಾಮಾಜಿಕ ಜಾಲತಾಣದಲ್ಲಿ ಬರುವ ಟೀಕೆ, ಟಿಪ್ಪಣಿ ಓದಿ ನೋಡಿ, ನಿಮಗೆ ಮನರಂಜನೆಯ ಗ್ಯಾರಂಟಿ ಖಚಿತ.

ಐಪಿಎಲ್‌ನ ಹಣದ ಲಕ್ಕಾಚಾರ ನೋಡುವುದಾದರೆ, ಇದರಲ್ಲಿ ಪ್ರಮುಖವಾಗಿರುವುದು ಪ್ರಾಯೋಜಕರು, ಪ್ರಸಾರ ಮಾಧ್ಯಮದವರು ಮತ್ತು ತಂಡಗಳು. ಐಪಿಎಲ್‌ನ ಶೀರ್ಷಿಕೆ ಪ್ರಾಯೋಜಕತ್ವಕ್ಕಾಗಿ ಮೊದಲು ಐದು ವರ್ಷ ‘ಡಿಎಲ್ಎಫ್’ ಸಂಸ್ಥೆ ಪ್ರತಿ ವರ್ಷ ನಲವತ್ತು ಕೋಟಿ ರೂಪಾಯಿ ನೀಡಿತ್ತು. ನಂತರ ಎರಡು ವರ್ಷ ‘ಪೆಪ್ಸಿ’ ಕಂಪನಿ ಪ್ರತಿ ವರ್ಷ ಎಂಬತ್ತು ಕೋಟಿ ಕೊಟ್ಟಿತ್ತು. ನಂತರ ‘ವಿವೊ’ ಮೊದಲ ವರ್ಷ ನೂರು ಕೋಟಿ ರೂಪಾಯಿ ನೀಡಿದರೆ
ಎರಡನೆಯ ವರ್ಷ ನಾಲ್ಕುನೂರ ನಲವತ್ತು ಕೋಟಿ ರೂಪಾಯಿ ನೀಡಿತ್ತು. ನಂತರ ‘ಡ್ರೀಮ್ ಎಲೆವೆನ್’ಗೆ ಇನ್ನೂರು ಇಪ್ಪತ್ತು ಕೋಟಿಗೆ ಶೀರ್ಷಿಕೆಯನ್ನು ಮಾರಲಾಯಿತು.

ನಂತರ ಪುನಃ ‘ವಿವೊ’, ಕಳೆದ ವರ್ಷ ಮತ್ತು ಈ ವರ್ಷ ‘ಟಾಟಾ’ ಸಂಸ್ಥೆಗೆ ಈ ಹಕ್ಕು ಮಾರಾಟವಾಯಿತು. ಈ ರೀತಿ ಪ್ರಾಯೋಜಕತ್ವದಿಂದ ಬಂದ
ಮೊತ್ತದಲ್ಲಿ ಶೇಕಡಾ ಐವತ್ತರಷ್ಟು ಬಿಸಿಸಿಐಗೆ. ಉಳಿದ ಶೇಕಡಾ ಐವತ್ತನ್ನು ತಂಡಗಳಿಗೆ ಸಮನಾಗಿ ಹಂಚಲಾಗುತ್ತದೆ. ಐಪಿಎಲ್ ಅಂತಿಮ ಪಂದ್ಯದಲ್ಲಿ ಗೆದ್ದ ತಂಡಕ್ಕೆ ಬಹುಮಾನವಾಗಿ ಸಿಗುವ ಮೊತ್ತ ಇಪ್ಪತ್ತು ಕೋಟಿ ರೂಪಾಯಿ, ಅಂತಿಮ ಪಂದ್ಯದಲ್ಲಿ ಸೋತ ತಂಡಕ್ಕೆ ಸಿಗುವ ಮೊತ್ತ ಹದಿಮೂರು ಕೋಟಿ ರೂಪಾಯಿ. ಮೂರನೆಯ ಮತ್ತು ನಾಲ್ಕನೆಯ ಸ್ಥಾನದಲ್ಲಿರುವ ತಂಡಕ್ಕೆ ತಲಾ ಏಳು ಮತ್ತು ಆರೂವವರೆ ಕೋಟಿ ರೂಪಾಯಿ ಬಹುಮಾನ.
ಅದರಲ್ಲಿ ಅರ್ಧ ತಂಡದ ಮಾಲೀಕರಿಗೆ, ಉಳಿದ ಅರ್ಧ ತಂಡದ ಆಟಗಾರರಿಗೆ.

ಅಂದರೆ, ಈ ಬಾರಿ ಬೆಂಗಳೂರು ತಂಡಕ್ಕೆ ದಕ್ಕಿದ್ದು ಆರೂವರೆ ಕೋಟಿ ರೂಪಾಯಿ. ಅದರಲ್ಲಿ ಆಟಗಾರರಿಗೆ ದಕ್ಕಿದ್ದು ಎಷ್ಟು ಎಂದರೆ ಇಪ್ಪತ್ತು ಲಕ್ಷಕ್ಕೂ ಕಡಿಮೆ. ಅಂತಿಮ ಪಂದ್ಯದಲ್ಲಿ ಜಯಿಸಿದ ಆಟಗಾರರಿಗೆ ದಕ್ಕಿದ್ದು ಐವತ್ತು ಲಕ್ಷಕ್ಕೂ ಕಡಿಮೆ. ಇದು ಒಂದು ತಂಡ ಗೆದ್ದು ಬಹುಮಾನದ ರೂಪದಲ್ಲಿ ಪಡೆದ ಹಣದ ಲೆಕ್ಕಾಚಾರವೇ ಹೊರತು ಖರೀದಿಸುವ ಪ್ರಕ್ರಿಯೆಯಲ್ಲಿ ಆಟಗಾರರು ಪಡೆದ ಹಣದ ಲೆಕ್ಕ ಸೇರಿಲ್ಲ. ಇನ್ನು ಅತಿ ಹೆಚ್ಚು ರನ್ ಗಳಿಸಿದ
ಆಟಗಾರನಿಗೆ ಕಿತ್ತಳೆ ಬಣ್ಣದ ಟೋಪಿ ಮತ್ತು ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರನಿಗೆ ನೇರಳೆ ಬಣ್ಣದ ಟೋಪಿಯ ಜತೆಗೆ ತಲಾ ಹದಿನೈದು ಲಕ್ಷ
ರೂಪಾಯಿ ಬಹುಮಾನವಾಗಿ ನೀಡಲಾಗುತ್ತದೆ.

ಸರಿ, ಆಟಗಾರರು-ಮಾಲಿಕರು ಪಡೆದ ಹಣದ ಲೆಕ್ಕವಾಯಿತು, ಪ್ರೇಕ್ಷಕರಿಗೆ ಏನು ಲಾಭವಾಯಿತು? ಮನರಂಜನೆ, ಅಭಿಮಾನ ಎಲ್ಲ ಬಿಡಿ, ಆರ್ಥಿಕವಾಗಿ ಎಷ್ಟು ಲಾಭವಾಯಿತು? ಇದಕ್ಕೂ ಉತ್ತರ ಕೊಡಲು ಸಿದ್ಧವಾಗಿ ಹುಟ್ಟಿಕೊಂಡದ್ದು ‘ಡ್ರೀಮ್ ಎಲೆವೆನ್’ ಸಂಸ್ಥೆ. ಹೌದು, ಈಗಾಗಲೇ ಹೇಳಿದ, ಒಂದು ವರ್ಷ ಶೀರ್ಷಿಕೆ ಪ್ರಾಯೋಜಕತ್ವ ಪಡೆದುಕೊಂಡಿದ್ದ ‘ಡ್ರೀಮ್ ಎಲೆವೆನ್, ಸಂಸ್ಥೆ. ಇದು ನೋಡುಗರನ್ನು ಆಟದಲ್ಲಿ ಸೇರಿಸಿಕೊಂಡು, ಅವರ ಕನಸಿನ ತಂಡ ರಚಿಸುವಂತೆ ಹೇಳಿ, ಗೆದ್ದ ನೋಡುಗರಿಗೆ ಹಣದ ಬಹುಮಾನ ನೀಡುವ ಸಂಸ್ಥೆ.

ಏನು? ಇದು ‘ಬೆಟ್ಟಿಂಗ್’ ಅಂದಿರಾ? ಹಾಗೆ ಹೇಳುವಂತಿಲ್ಲ, ನ್ಯಾಯಾಲಯವೇ ಇದನ್ನು ‘ಜೂಜು’ ಅಲ್ಲ ಎಂದಿರುವಾಗ ಇನ್ನು ನಾವು-ನೀವು ಯಾರು? ನಿನ್ನೆ ನಡೆದ ಐಪಿಎಲ್‌ನ ಅಂತಿಮ ಪಂದ್ಯದ ಸಂದರ್ಭದಲ್ಲಿ ಡ್ರೀಮ್ ಎಲೆವೆನ್ನ ಒಂದು ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಅದರಲ್ಲಿ, ಪ್ರವೇಶ ಶುಲ್ಕ ಕೇವಲ ಒಂದು ರುಪಾಯಿ ಎಂದಿತ್ತು. ಪ್ರಥಮ ಬಹುಮಾನ ಮೂರು ಕೋಟಿ ರೂಪಾಯಿ. (ಅಂದರೆ, ಈಗಾಗಲೇ ಹೇಳಿದಂತೆ, ಅಂತಿಮ ಪಂದ್ಯದಲ್ಲಿ ಗೆದ್ದ ತಂಡದ ಆಟಗಾರರು ಮತ್ತು ವಿಶೇಷ ಬಹುಮಾನದ ಹಣಕ್ಕಿಂತಲೂ ಹೆಚ್ಚು.)

ಒಟ್ಟೂ ಬಹುಮಾನದ ಮೊತ್ತ ತೊಂಬತ್ತು ಕೋಟಿ ರುಪಾಯಿ ಎಂದು ಬರೆದಿತ್ತು. ಅಂದರೆ, ಉಳಿದ ಎಂಬತ್ತೇಳು ಕೋಟಿ ರೂಪಾಯಿಗಳನ್ನು ಅನೇಕರಿಗೆ ಹಂಚುತ್ತೇವೆ, ಇದರಿಂದ ಗೆಲ್ಲುವ ಅವಕಾಶ ಹೆಚ್ಚುತ್ತದೆ ಎಂಬ ಸಂದೇಶ ಅದಾಗಿತ್ತು. ಈ ಮೂಲಕ, ಕೇವಲ ಆಟಗಾರರಷ್ಟೇ ಅಲ್ಲ, ಪ್ರೇಕ್ಷಕರೂ ತಮ್ಮದೇ ಆದ ತಂಡ ಕಟ್ಟಿಕೊಳ್ಳಬಹುದು, ಆಟದಲ್ಲಿ ಭಾಗವಹಿಸಬಹುದು, ಹಣ ಗೆಲ್ಲಬಹುದು ಎಂಬ ಸಂದೇಶ ರವಾನಿಸಿದ್ದರು.

ಹಾಗಂತ ಡ್ರೀಮ್ ಎಲೆವೆನ್ ಸಂಸ್ಥೆಗೆ ಇದೇ ಮೊದಲ ಪಂದ್ಯವೂ ಅಲ್ಲ, ಮೊದಲ ವರ್ಷವೂ ಅಲ್ಲ. ಕಳೆದ ಹದಿನಾರು ವರ್ಷಗಳಿಂದಲೂ ಸಂಸ್ಥೆ
ಈ ಕಾರ್ಯ ಮಾಡಿಕೊಂಡು ಬಂದಿದೆ. ಕಳೆದ ಹನ್ನೆರಡು ವರ್ಷದಿಂದ ಕ್ರಿಕೆಟ್ ನಲ್ಲೂ ತೊಡಗಿಸಿಕೊಂಡಿದೆ. ಒಂದು ಸಣ್ಣ ಮಾಹಿತಿಯ ನಂತರ ಮುಂದುವರಿಯೋಣ. ‘ಡ್ರೀಮ್ ಎಲೆವೆನ್’ ಸಂಸ್ಥೆಯನ್ನು ಸ್ಥಾಪಿಸಿದ್ದು ಹರ್ಷ್ ಜೈನ್ ಮತ್ತು ಭವಿತ್ ಸೇಠ್. ಹದಿನಾರು ವರ್ಷದ ಹಿಂದೆ ಆರಂಭಿಸಿದ
ಈ ಸಂಸ್ಥೆ ಇಂದು ಅರವತ್ತೈದು ಸಾವಿರ ಕೋಟಿ ಬೆಲೆಬಾಳುತ್ತಿದ್ದು, ಸುಮಾರು ಒಂದು ಸಾವಿರ ಜನ ಈ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಇದರಲ್ಲಿ ಹರ್ಷ್ ಜೈನ್ ಅವರನ್ನು ಮುಖೇಶ್ ಅಂಬಾನಿ ತಮ್ಮ ಮಕ್ಕಳಾದ ಇಶಾ, ಆಕಾಶ್, ಅನಂತ್ ಅವರ ಜತೆ ಇನ್ನೊಬ್ಬ ಮಗನನ್ನಾಗಿ ಕಾಣುತ್ತಾರೆ ಎಂಬ ಮಾತಿದೆ. ಅದಕ್ಕೆ ಕಾರಣ ಹರ್ಷ್ ಜೈನ್ ತಂದೆ ಆನಂದ್ ಜೈನ್ ಮತ್ತು ಮುಖೇಶ್ ಅಂಬಾನಿಯ ಸ್ನೇಹ. ಮುಖೇಶ್ ಅಂಬಾನಿ ಮತ್ತು ಆನಂದ್ ಜೈನ್ ಬಾಲ್ಯ ಸ್ನೇಹಿತರು. ಆನಂದ್ ಜೈನ್ ೧೯೮೫ ರಲ್ಲಿ ‘ಜೈನ್ ಕಾರ್ಪ್ ಲಿಮಿಟೆಡ್’ ಸಂಸ್ಥೆ ಆರಂಭಿಸಿ, ಉಕ್ಕು, ನೂಲು, ಪ್ಲಾಸ್ಟಿಕ್, ಬಂಡವಾಳ ಮಾರುಕಟ್ಟೆ, ರಿಯಲಎಸ್ಟೇಟ್ ಇತ್ಯಾದಿ ಉದ್ಯಮ ಮಾಡಿ ಅಪಾರ ಅನುಭವ ಉಳ್ಳವರು. ಆನಂದ್ ರಿಲಾಯ ಗ್ರೂಪ್‌ನಲ್ಲಿ ಪ್ರಮುಖ ವ್ಯಕ್ತಿ
ಯಾಗುವುದರ ಜತೆಗೆ ರಿಲಾಯ ಟೆಲಿಕಾಂ ಮತ್ತು ಇನೊಕಾಂ ವಿಭಾಗದಲ್ಲಿಯೂ ಮಹತ್ವದ ಪಾತ್ರ ವಹಿಸಿದರು.

ಸಹೋದರರಾದ ಮುಖೇಶ್ ಅಂಬಾನಿ ಮತ್ತು ಅನಿಲ್ ಅಂಬಾನಿ ದೂರವಾಗುವುದಕ್ಕೆ ಆನಂದ್ ಜೈನ್ ಅವರೂ ಒಂದು ಕಾರಣ ಎಂಬ ಸುದ್ದಿ ಇದೆ, ನಿಜವೋ ಸುಳ್ಳೋ ಗೊತ್ತಿಲ್ಲ. ಡ್ರೀಮ್ ಎಲೆವೆನ್‌ಗೂ, ರಿಲಾಯನ್ಸ್‌ಗೂ, ಜೈನ್ ಕಾರ್ಪ್‌ಗೂ ಸಂಬಂಧವಿಲ್ಲ, ಅದರ ಮಾಲೀಕರ ಸಂಬಂಧ ತಿಳಿದಿರಲಿ ಎಂದಷ್ಟೇ ಈ ವಿಷಯ ಇಲ್ಲಿ ಪ್ರಸ್ತಾಪಿಸಿದ್ದು. ಈ ಡ್ರೀಮ್ ಎಲೆವೆನ್ ಹೇಗೆ ಕೆಲಸ ಮಾಡುತ್ತದೆ? ಇದರಲ್ಲಿ ಭಾಗವಹಿಸುವವರು ತಮ್ಮದೇ ಆದ ತಂಡವನ್ನು ಆರಿಸಿಕೊಳ್ಳಬೇಕು. ಅದು ಹೇಗೆ ಎಂದರೆ, ಒಂದು ಪಂದ್ಯದಲ್ಲಿ ಆಡುವ ಎರಡೂ ತಂಡಗಳಿಂದ ಆಟಗಾರರನ್ನು ಆಯ್ಕೆ ಮಾಡಿ ಒಂದೇ ತಂಡವನ್ನು ನಿರ್ಮಿಸಿಕೊಳ್ಳಬೇಕು. ಅದೊಂದು ಕಾಲ್ಪನಿಕ ತಂಡವೇ ವಿನಃ ನೈಜವಲ್ಲ. ಇದು ಆನ್ಲೈನ್ ಆಟ. ಅಲ್ಲಿ ಆಟಗಾರರ ಪ್ರದರ್ಶನಕ್ಕೆ ತಕ್ಕಂತೆ ಅಂಕ ಗಳಿರುತ್ತವೆ. ಪಂದ್ಯದ ಕೊನೆಯಲ್ಲಿ ಆಟಗಾರರು ಗಳಿಸಿದ ಅಂಕಗಳ ಮೇಲೆ ವಿಜೇತರು ಯಾರು ಎಂದು ನಿರ್ಣಯವಾಗುತ್ತದೆ.

ಈ ಕಾಲ್ಪನಿಕ ತಂಡ ರಚಿಸಲು ಡ್ರೀಮ್ ಎಲೆವೆನ್ ಆಪ್ ಡೌನ್ಲೋಡ್ ಮಾಡಿಕೊಳ್ಳಬೇಕು. ಆಯಾ ಪಂದ್ಯಕ್ಕೆ ತಕ್ಕಂತೆ ಆಟಗಾರರ ಆಯ್ಕೆ ಮಾಡಿಕೊಂಡು ತಂಡ ರಚಿಸಬೇಕು. ಇದರಲ್ಲಿ ಉಚಿತವಾಗಿಯೂ ಭಾಗವಹಿಸಬಹುದು ಅಥವಾ ನಲವತ್ತೊಂಬತ್ತು ರೂಪಾಯಿ ಪ್ರವೇಶ ಶುಲ್ಕ ನೀಡಿಯೂ ಭಾಗವಹಿಸ ಬಹುದು. ಬಹುಮಾನದ ಹಣ ಸಿಗಬೇಕು ಎಂದರೆ ದುಡ್ಡು ಕಟ್ಟಿ ಆಡಬೇಕು. ಭಾಗವಹಿಸುವವರು ಹದಿನೆಂಟು ವರ್ಷಕ್ಕೂ ಮೇಲ್ಪಟ್ಟವರಾಗಿರಬೇಕು, ಅವರ ‘ಪ್ಯಾನ್ ಸಂಖ್ಯೆ’ಯನ್ನು ನಮೂದಿಸಿಕೊಳ್ಳಬೇಕು.

ಅದರಲ್ಲಿ ವಿಜೇತರಾದವರಿಗೆ ಬಹುಮಾನ ನೀಡುವುದರಲ್ಲಿ ಡ್ರೀಮ್ ಎಲೆವೆನ್ ಮೋಸ ಮಾಡುವುದಿಲ್ಲ. ಅಪ್ರಾಮಾಣಿಕ ವ್ಯವಹಾರವೇ ಆದರೂ ಪ್ರಾಮಾಣಿಕವಾಗಿ ಮಾಡಬೇಕು ಎನ್ನುತ್ತಾರಲ್ಲ, ಹಾಗೆ! ಹಾಗಾದರೆ ಇದು ಅಪ್ರಾಮಾಣಿಕ ವ್ಯವಹಾರವೇ? ನ್ಯಾಯಾಲಯ ನೀಡಿದ ತೀರ್ಪಿನ ಪ್ರಕಾರ ಅಲ್ಲ. ಇದನ್ನು ಏಕೆ ಹೇಳುತ್ತಿದ್ದೇನೆ ಎಂದರೆ, ೨೦೧೭ ರಲ್ಲಿ ಇದು ‘ಬೆಟ್ಟಿಂಗ್’ ಅಥವಾ ‘ಜೂಜು’, ಇದನ್ನು ನಿಲ್ಲಿಸಬೇಕು ಎಂದು ಸಂಸ್ಥೆಯ ವಿರುದ್ಧ
ಉಚ್ಛನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು. ನ್ಯಾಯಾಲಯ ತನ್ನ ತೀರ್ಪಿನಲ್ಲಿ, ಈ ರೀತಿ ಆನ್ಲೈನ್ನಲ್ಲಿ ತಂಡ ಕಟ್ಟಿ ಆಟ ಆಡಲು ಕೌಶಲ್ಯ ಬೇಕು, ಹೆಚ್ಚಿನ ಬುದ್ಧಿ ಬೇಕಾದುದರಿಂದ ಇದು ಜೂಜಲ್ಲ ಎಂಬ ತೀರ್ಪು ನೀಡಿತು.

ಇದನ್ನು ಪ್ರಶ್ನಿಸಿ ಸರ್ವೋಚ್ಛ ನ್ಯಾಯಾಲಯದಲ್ಲಿ ಸಲ್ಲಿಸಿದ ಮೇಲ್ಮನವಿ ವಜಾಗೊಂಡಿತು. ಆದುದರಿಂದ ಕಾನೂನಿನ ಪ್ರಕಾರ ಈ ಆಟ ಜೂಜಲ್ಲ. ಆದರೆ ಆಂಧ್ರಪ್ರದೇಶ, ತೇಲಂಗಾಣ, ಅಸ್ಸಾಂ ಮುಂತಾದ ಕೆಲವು ರಾಜ್ಯಗಳಲ್ಲಿ ಆನ್ಲೈನ್ ಆಟ ಇಂದಿಗೂ ನಿಷಿದ್ಧ. ಅಕ್ಟೋಬರ್ ೨೦೨೧ ರಲ್ಲಿ ಕರ್ನಾಟಕದಲ್ಲಿ
ಆನ್ಲೈನ್ ಜೂಜಾಟ ನಿಷೇಽಸಿದ ನಂತರ ಡ್ರೀಮ್ ಎಲೆವೆನ್ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿತ್ತು. -ಬ್ರವರಿ ೨೦೨೨ ರಲ್ಲಿ, ಕರ್ನಾಟಕ ಹೈಕೋರ್ಟ್ ಆನ್ಲೈನ್ ಜೂಜಿನ ಮೇಲಿನ ನಿಷೇಧವನ್ನು ರದ್ದುಗೊಳಿಸಿದ ನಂತರ ಮತ್ತು ಕಂಪನಿಯ ವಿರುದ್ಧ ಸಲ್ಲಿಸಲಾದ ದೂರನ್ನು ಹಿಂದೆ ಪಡೆದ ನಂತರ, ಸಂಸ್ಥೆ ಕರ್ನಾಟಕದಲ್ಲಿ ಕಾರ್ಯಾಚರಣೆಯನ್ನು ಪುನರಾರಂಭಿಸಿತು.

ಅಷ್ಟಕ್ಕೂ ಡ್ರೀಮ್ ಎಲೆವೆನ್ ಕ್ರಿಕೆಟ್ ಆಟಕ್ಕೆ ಮಾತ್ರ ಸೀಮಿತವಾಗಿಲ್ಲ. ಇದು ಕ್ರಿಕೆಟ್ ಆಟಕ್ಕೆ ಬಂದದ್ದು ೨೦೧೨ ರಲ್ಲಿ. ಅದಕ್ಕೂ ಮೊದಲೇ ಫುಟ್ಬಾಲ್, ಬಾಸ್ಕೆಟ್‌ಬಾಲ್, ಕಬಡ್ಡಿ, ಬೇಸ್ಬಾಲ್, ವಾಲಿಬಾಲ್, ಹಾಕಿ ಇತ್ಯಾದಿಗಳ ಆನ್ಲೈನ್ ಆಟ ದಲ್ಲಿ ಡ್ರೀಮ್ ಎಲೆವೆನ್ ತೊಡಗಿಸಿಕೊಂಡಿದೆ. ಡ್ರೀಮ್ ಎಲೆವೆನ್‌ನಲ್ಲಿ ಭಾಗವಹಿಸುವುದು ಕಾನೂನಿನ ಪ್ರಕಾರ ಅಪರಾಧವಲ್ಲ, ಆಡುವುದು-ಬಿಡುವುದು ಅವರವರ ನೈತಿಕತೆಗೆ, ವಿವೇಚನೆಗೆ ಬಿಟ್ಟದ್ದು. ಇಲ್ಲಿ ಅರ್ಥವಾಗದ ಒಂದು ಸಂಗತಿಯೆಂದರೆ, ಈ ರೀತಿಯ ಆಟ ಆಡಲು ಹೆಚ್ಚಿನ ಕೌಶಲ್ಯ ಬೇಕಾಗುತ್ತದೆ, ಇದು ಜೂಜಲ್ಲ ಎನ್ನುವುದೇ ಆದರೆ, ಇದಕ್ಕೆ ಹದಿನೆಂಟು ವರ್ಷ ವಯೋಮಿತಿಯ ನಿರ್ಬಂಧ ಏಕೆ? ಒಂದೇ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಒಂದೇ ವಿಷಯದ ಕುರಿತಂತೆ ಬೇರೆ ಬೇರೆ ನೀತಿ,
ನಿಯಮ, ನಿರ್ಬಂಧಗಳೇಕೆ?

Leave a Reply

Your email address will not be published. Required fields are marked *

error: Content is protected !!