ಅಶ್ವತ್ಥಕಟ್ಟೆ
ranjith.hoskere@gmail.com
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ಪಕ್ಷವೆಷ್ಟು ಮುಖ್ಯವೋ, ಪ್ರತಿಪಕ್ಷಗಳೂ ಅಷ್ಟೇ ಮುಖ್ಯ. ಯಾವುದೇ ರಾಜ್ಯ ಅಥವಾ ದೇಶ ಸುಸೂತ್ರವಾಗಿ ನಡೆಯ ಬೇಕೆಂದರೆ ಆಡಳಿತ ಪಕ್ಷದ ಜತೆಜತೆಗೆ ಪ್ರತಿಪಕ್ಷವೂ ಪ್ರಮುಖವಾಗಿರುತ್ತದೆ. ಆಡಳಿತ ಪಕ್ಷದ ಮಾಡುವ ತಪ್ಪುಗಳನ್ನು ಎತ್ತಿಹಿಡಿಯುವ ಕೆಲಸವನ್ನು ಮಾಡುವೇ ಪ್ರತಿಪಕ್ಷದ ಆದ್ಯ ಜವಾಬ್ದಾರಿಯಾಗಿರುತ್ತದೆ.
ಈ ಕಾರಣಕ್ಕಾಗಿಯೇ ಪ್ರತಿಪಕ್ಷವನ್ನು ಹಾಗೂ ಪ್ರತಿಪಕ್ಷದ ನಾಯಕನನ್ನು ‘ಶ್ಯಾಡೋ ಸಿಎಂ’ ಎಂದು ಕರೆಯಲಾಗುತ್ತದೆ. ಆದರೆ ಕರ್ನಾಟಕದಲ್ಲಿ ಮಾತ್ರ ಕಳೆದೊಂದು ವಾರದಿಂದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ನಡೆಯು ತ್ತಿರುವ ಘಟನಾವಳಿ ಗಳು, ಅದಕ್ಕೆ ಆಡಳಿತ ಪಕ್ಷದ ಸಮರ್ಥನೆ ಹಾಗೂ ಸರಕಾರದ ಜವಾಬ್ದಾರಿಯುತವಾಗಿ ನಡೆದುಕೊಳ್ಳದೇ ಇರುವುದು ಇದೀಗ ರಾಜಕೀಯ ಸಂಘರ್ಷಕ್ಕೆ ಕಾರಣವಾಗುತ್ತಿದೆ.
ಹೌದು, ಕಳೆದ ವಾರ ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪ್ರವಾಹ ಪೀಡಿತ ಪ್ರದೇಶಗಳ ಪರಿಶೀಲನೆ ಗೆಂದು ಕೊಡಗು, ಮಡಿಕೇರಿ ಭಾಗದ ಪ್ರವಾಸ ಕೈಗೊಂಡ ಸಮಯದಲ್ಲಿ ಅವರ ಕಾರಿನ ಮೇಲೆ ಮೊಟ್ಟೆ, ಕಪ್ಪು ಪ್ರದರ್ಶನ ನಡೆದಿರುವುದು ಕರ್ನಾಟಕದ ಪಾಲಿಗೆ ಕೆಟ್ಟ ವಿಷಯವೆಂದರೆ ತಪ್ಪಾಗುವುದಿಲ್ಲ. ಕರ್ನಾಟಕದಲ್ಲಿ ಈ ಹಿಂದಿನಿಂದಲೂ ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೂ, ಈ ರೀತಿಯ ವೈಯಕ್ತಿಕ ದಾಳಿಗೆ ಇಳಿದ ಉದಾ ಹರಣೆಗಳಿರಲಿಲ್ಲ. ಆದರೀಗ ನಡೆಯುತ್ತಿರುವ ದಾಳಿ, ಪ್ರತಿಪಕ್ಷ ನಾಯಕ ಸ್ಥಾನದ ಗೌರವಕ್ಕೆ ಚ್ಯುತಿ ತರುವ ಕೆಲಸ. ಸಿದ್ದರಾ ಮಯ್ಯ ಅವರು ಹೇಳಿರುವ ಹೇಳಿಕೆಗಳ ವಿಷಯದಲ್ಲಿ ಭಿನ್ನಾಭಿಪ್ರಾಯಗಳಿದ್ದರೆ, ಅದನ್ನು ವಿರೋಧಿಸಲು ಹಾಗೂ ಚರ್ಚಿಸಲು ಹಲವಾರು ವೇದಿಕೆಗಳಿವೆ, ಮಾಧ್ಯಮಗಳಿವೆ.
ಆದರೆ ಅದನ್ನು ಬಿಟ್ಟು ಈ ರೀತಿ ಮೊಟ್ಟೆ ಎಸೆಯುವುದು, ಕಪ್ಪು ಪಟ್ಟಿ ಪ್ರದರ್ಶನ ಮಾಡುವುದು ಸರಿಯಲ್ಲ. ಹಾಗೆಂದ ಮಾತ್ರಕ್ಕೆ ಸಿದ್ದರಾಮಯ್ಯ ಅವರು ಹೇಳಿದ್ದೆಲ್ಲವನ್ನು ಒಪ್ಪಿಕೊಂಡು ಕೂರಬೇಕು ಎಂದಲ್ಲ. ಆದರೆ ಅವರ ಮಾತುಗಳಿಗೆ ಒಪ್ಪಿಗೆ ಇಲ್ಲದಿದ್ದರೆ, ಅದನ್ನು ಪ್ರತಿಭಟಿಸುವ ಹಕ್ಕಿದೆ. ಅದನ್ನು ಇತರೆ ಮಾಧ್ಯಮದಲ್ಲಿ ಮಾಡಬೇಕೇ ಹೊರತು, ಈ ರೀತಿಯಲ್ಲ. ಇನ್ನು ಈ ದಾಳಿಯ ಬಳಿಕ ಹಲವು ಬಿಜೆಪಿ ನಾಯಕರು, ಸಮರ್ಥಿಸಿಕೊಂಡಿದ್ದಾರೆ.
ಆದರೆ ಅವರಿಗೆ ಅರ್ಥವಾಗದ ಒಂದು ವಿಷಯವೇನೆಂದರೆ, ಸಿದ್ದರಾಮಯ್ಯ ಅವರ ಮೇಲಿನ ದಾಳಿಯ ನೇರೆ ಹೊಣೆಯನ್ನು ಗೃಹ ಇಲಾಖೆಯೇ ಹೊರಬೇಕು. ಏಕೆಂದರೆ ವಿಧಾನಸಭೆಯ ಪ್ರತಿಪಕ್ಷ ನಾಯಕರೊಬ್ಬರು ಪ್ರವಾಸ ಹೊರಟ ಸಮಯದಲ್ಲಿ, ಸೂಕ್ತ ಬಿಗಿ ಭದ್ರತೆ ಒದಗಿಸುವುದು ಸರಕಾರದ ಕರ್ತವ್ಯ. ಆದರೆ ಅದನ್ನು ಮಾಡದೇ ಅವರ ಮೇಲೆ ದಾಳಿಯಾಗುತ್ತದೆ ಎಂದರೆ, ಅದು ಗೃಹ ಇಲಾಖೆ ಹಾಗೂ ಗುಪ್ತಚರ ಇಲಾಖೆಯ ಲೋಪವಾಗುತ್ತದೆ.
ಇನ್ನು ಸಂವಿಧಾನದಲ್ಲಿಯೇ ಪ್ರತಿಪಕ್ಷ ನಾಯಕರಿಗೆ, ಪ್ರವಾಸ ಮಾಡುವ, ಅಧಿಕಾರಿಗಳಿಂದ ಮಾಹಿತಿ ಪಡೆಯುವ ಅಧಿಕಾರ ವನ್ನು ನೀಡಲಾಗಿದೆ. ಹೀಗಿರುವಾಗ, ನೆರೆ ಸಂತ್ರಸ್ತರನ್ನು ಭೇಟಿಯಾಗಲು ಸಿದ್ದರಾಮಯ್ಯ ಅವರು ತೆರಳಿದ್ದಾಗ, ಈ ರೀತಿಯ ಘಟನೆ ನಡೆದಿದ್ದು ಸರಕಾರಕ್ಕೆ ಶೋಭೆ ತರುವುದಿಲ್ಲ. ಈ ಘಟನೆ ನಡೆಯುತ್ತಿದ್ದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಬಿಜೆಪಿಯ ಪ್ರಮುಖರೆಲ್ಲರೂ, ಘಟನೆಯನ್ನು ಖಂಡಿಸಿದರು. ಆದರೆ ಇನ್ನುಳಿದ ನಾಯಕರು, ಘಟನೆಯನ್ನು ವಿರೋಧಿಸುವ ಬದಲು, ಸಿದ್ದರಾಮಯ್ಯ ಅವರನ್ನೇ ವಿರೋಧಿಸಲು ಮುಂದಾ ದರು.
ಈ ಸಮಯದಲ್ಲಿ ಸಿದ್ದರಾಮಯ್ಯ ಅವರು ವೀರ ಸಾವರ್ಕರ್ ಬಗ್ಗೆ ಮಾತನಾಡಿದ ವಿಷಯ, ಹಿಂದುತ್ವದ ವಿಷಯದಲ್ಲಿ ಅವರ ಧೋರಣೆಗಳನ್ನು ಹೇಳಿ, ಅದನ್ನು ಬಿಟ್ಟರೆ ಮಾತ್ರ ಈ ರೀತಿಯ ಘಟನೆಗಳು ನಿಲ್ಲುತ್ತವೆ ಎನ್ನುವ ರೀತಿಯಲ್ಲಿ ಮಾತನಾಡಿದರು. ಸಿದ್ದರಾಮಯ್ಯ ಅವರು ವೀರ ಸಾವರ್ಕರ್ ವಿಷಯದಲ್ಲಿ ಹಾಗೂ ಹಿಂದುತ್ವದ ವಿಷಯದಲ್ಲಿ ಹೇಳಿಕೆ ನೀಡುವುದು ಸರಿಯಲ್ಲ ಎನ್ನುವುದು ಸರಿ. ಈ ಹಿಂದೆಯೂ ಸಿದ್ದರಾಮಯ್ಯ ಅವರು ಹೇಳಿಕೆ ನೀಡಿದಾಗ, ಅದನ್ನು ಬಿಜೆಪಿ ಹಾಗೂ ಹಿಂದೂ ಸಂಘಟನೆ ಗಳು ವಿರೋಧಿಸಿ, ತಕ್ಕ ಉತ್ತರವನ್ನು ನೀಡಿದ್ದರು.
ಆದರೆ ಈ ಬಾರಿ ಮೊಟ್ಟೆ ಎಸೆಯುವ ಮೂಲಕ ಅನಾಗರಿಕ ನಡೆಯನ್ನು ಅನುಸರಿಸಿದ್ದು ಖಂಡನೀಯವಷ್ಟೆ. ಈ ರೀತಿ ಮೊಟ್ಟೆ ಎಸೆದದ್ದು ಯಾರೂ ಎನ್ನುವುದು ಈ ಹಂತದಲ್ಲಿಯೂ ಸ್ಪಷ್ಟತೆ ಇಲ್ಲ. ಆರಂಭದಲ್ಲಿ ಬಿಜೆಪಿ ಕಾರ್ಯಕರ್ತರು ಮಾಡಿಸಿದ್ದು ಎಂದು ಕೆಲವರು ಆರೋಪಿ ಸಿದರೆ, ಜಾಮೀನು ಪಡೆಯುವ ವೇಳೆ ಆತ ಕಾಂಗ್ರೆಸ್ ಕಾರ್ಯಕರ್ತ ಎನ್ನುವ ಮಾತನ್ನು ಹೇಳಿದ್ದ ಎನ್ನುವ ಮಾತುಗಳು ಕೇಳಿಬಂದಿದೆ.
ಹಾಗೇ ನೋಡಿದರೆ ಆತ ಕಾಂಗ್ರೆಸ್ ಹಾಗೂ ಬಿಜೆಪಿ ಎರಡರಲ್ಲಿ ಕಾಣಿಸಿಕೊಂಡಿರುವ ಫೋಟೋಗಳಿದ್ದರೂ, ಸ್ಪಷ್ಟತೆಯಿಲ್ಲ. ಆದರೆ ಈ ಘಟನೆ ನಡೆಯುತ್ತಿದ್ದಂತೆ ಅಪ್ಪಂಚು ರಂಜನ್, ಬೋಪಯ್ಯ ಅವರು ನಡೆದುಕೊಂಡ ರೀತಿ ಮಾತ್ರ ‘ಬೆಂಕಿಗೆ ತುಪ್ಪ ಸುರಿದಂತಾಗಿದೆ’. ಸಿದ್ದರಾಮಯ್ಯ ಅವರ ಮೇಲೆ ಸಾಲು ಸಾಲು ದಾಳಿಗಳಾದ ಬಳಿಕ, ಬಿಜೆಪಿ ಸರಕಾರ ಮಾಜಿ ಮುಖ್ಯ ಮಂತ್ರಿಗಳಿಗೆ ಹೆಚ್ಚಿನ ಭದ್ರತೆ ಒದಗಿಸಲು ತೀರ್ಮಾನಿಸಿ ‘ಝೆಡ್ +’ ಭದ್ರತೆ ನೀಡುತ್ತಿರುವುದು ಉತ್ತಮ ನಡೆ. ಕೇವಲ ಸಿದ್ದರಾಮಯ್ಯ ಅವರಿಗೆ ಮಾತ್ರವಲ್ಲದೇ, ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ಅವರಿಗೂ ಭದ್ರತೆ ಹೆಚ್ಚಿಸಲಾಗಿದೆ.
ಆದರೆ ಈ ರೀತಿಯ ದಾಳಿಗಳಾಗುತ್ತದೆ ಎನ್ನುವ ಎಚ್ಚರಿಕೆ ಗುಪ್ತಚರ ಇಲಾಖೆಯಿಂದ ಇರಲಿಲ್ಲವೇ? ಒಂದು ವೇಳೆ ಇದಿದ್ದರೆ, ಈ ದಾಳಿಯನ್ನು ತಪ್ಪಿಸಲು ಪ್ರಯತ್ನಿಸಬಹುದಾಗಿತ್ತು ಅಲ್ಲವೇ? ಇರಲಿಲ್ಲವೆಂದರೆ ಗುಪ್ತಚರ ಇಲಾಖೆಯ ವೈಫಲ್ಯವಲ್ಲವೇ?
ಚುನಾವಣಾ ವರ್ಷದ ಸಮಯದಲ್ಲಿ ಈ ರೀತಿಯ ದಾಳಿಗಳು ಪ್ರತಿಪಕ್ಷ ನಾಯಕರಿಗೆ ಭಾರಿ ಪ್ಲಸ್ ಪಾಯಿಂಟ್ ಆಗುವುದರಲ್ಲಿ ಅನುಮಾನವೇ ಇಲ್ಲ. ಸಿದ್ದರಾಮಯ್ಯ ಅವರ ಮೇಲಿನ ದಾಳಿಯಿಂದ ಮೈಲೇಜ್ ಹೆಚ್ಚಳವಾಗಿರುವುದರಲ್ಲಿ ಎರಡನೇ ಮಾತಿಲ್ಲ.
ಅದರಲ್ಲಿಯೂ ಮುಸ್ಲಿಂ ಪರವಾಗಿ ಮಾತನಾಡಿದ್ದಕ್ಕೆ, ಈ ರೀತಿಯ ದಾಳಿಯಾಗಿದೆ ಎನ್ನುವ ಸಂದೇಶ ರವಾನಿಸುವ ಪ್ರಯತ್ನ ವನ್ನು ಸಿದ್ದರಾಮಯ್ಯ ಆಂಡ್ ಟೀಂ ಅಚ್ಚುಕಟ್ಟಾಗಿ ಮಾಡುವ ಮೂಲಕ, ವೋಟುಗಳ ಕ್ರೋಢೀಕರಣಕ್ಕೆ ಸದ್ದಿಲದೇ ತಯಾ ರಾಗಿದೆ. ಈ ರೀತಿಯ ಘಟನೆಗಳು ನಡೆಯದಂತೆ ಎಚ್ಚರವಹಿಸಬೇಕಾಗಿರುವುದು ಸರಕಾರ ಜವಾಬ್ದಾರಿ ಎನ್ನುವುದರಲ್ಲಿ
ಎರಡನೇ ಮಾತಿಲ್ಲ. ಆದರೆ ಸಿದ್ದರಾಮಯ್ಯ ಅವರು ಸಹ ತಮ್ಮ ಹೇಳಿಕೆಗಳನ್ನು ನೀಡುವಾಗ ಎಚ್ಚರ ವಹಿಸಬೇಕು ಎನ್ನು
ವುದು ನಿಜ. ಹಿಂದೂ ದೇವಾಲಯದೊಳಗೆ ಹೋಗುವ ಮಾಂಸ ಸೇವನೆ ಮಾಡಿರುವ ಬಗ್ಗೆ ಮಾತನಾಡುವುದು, ವೀರ ಸಾವರ್ಕರ್‌ರನ್ನು ಹೀಳಾಯಿಸಿ ಮಾತನಾಡುವುದು, ಮುಸ್ಲಿಮರನ್ನು ಒಲೈಸುವ ಸಮಯದಲ್ಲಿ ಹಿಂದುತ್ವವನ್ನೇ ಪದೇಪದೆ ಟೀಕಿಸುವುದು, ಹಿಂದೂಗಳನ್ನು ಕೆರಳಿಸಿದೆ ಎಂದರೆ ತಪ್ಪಾಗುವುದಿಲ್ಲ.
ಇದರೊಂದಿಗೆ ಕೆಲವೊಮ್ಮೆ ಬೇಕೆಂದೆ ನೀಡುವ ವಿವಾದಾತ್ಮಕ ಹೇಳಿಕೆಗಳೂ ವೈಯಕ್ತಿಕ ವರ್ಚಸ್ಸಿಗೆ ಧಕ್ಕೆಯಾಗುತ್ತದೆ. ಇದರೊಂದಿಗೆ ಕೆಲವೊಮ್ಮೆ ಸೂಕ್ಷ್ಮ ವಿಷಯಗಳನ್ನು ಸಮಯ-ಸಂದರ್ಭ ನೋಡಿಕೊಂಡು ಮಾತನಾಡುವುದೇ ಸೂಕ್ತ. ಅದನ್ನು ಮಾಡದೇ, ಬೂದಿಯಾಡುತ್ತಿರುವ ಕೆಂಡಕ್ಕೆ ಇನ್ನಷ್ಟು ತುಪ್ಪ ಸುರಿದು, ರಾಜಕೀಯದ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸು ವುದು ಉತ್ತಮ ನಡೆಯಲ್ಲ. ಅದರಲ್ಲಿಯೂ ಆಯಕಟ್ಟಿನ ಸ್ಥಾನ ದಲ್ಲಿರುವ ಸಿದ್ದರಾಮಯ್ಯ ಅಂತವರು ಸೂಕ್ಷ್ಮ ವಿಷಯಗಳ ಬಗ್ಗೆ ಹೇಳಿಕೆ ನೀಡುವಾಗ ಇನ್ನಷ್ಟು ಎಚ್ಚರವಹಿಸುವುದು ಅತ್ಯವಶ್ಯಕ.
ದಾಳಿ, ಆರೋಪ-ಪ್ರತ್ಯಾರೋಪವೆಲ್ಲ ಒಂದು ಭಾಗವಾದರೆ, ಇದಾದ ಬಳಿಕ ಈಗ ನಡೆಯಲಿರುವ ಮಡಿಕೇರಿ ಚಲೋ ಸಹ ಮತ್ತೊಂದು ರಾಜಕೀಯ ಸಂಘರ್ಷಕ್ಕೆ ವೇದಿಕೆಯಾಗುವ ಸಾಧ್ಯತೆಯಿದೆ. ಸಿದ್ದರಾಮಯ್ಯ ಅವರ ಮೇಲಿನ ದಾಳಿಯನ್ನು ಖಂಡಿಸಿ ಕಾಂಗ್ರೆಸ್‌ನವರು ಮಡಿಕೇರಿ ಚಲೋ ಮಾಡಿದರೆ, ಅದಕ್ಕೆ ವಿರೋಧವಾಗಿ ಬಿಜೆಪಿ ನಾಯಕರೂ ಸಹ ಮಡಿಕೇರಿ ಚಲೋ ನಡೆಸುವ ಮೂಲಕ, ಅಲ್ಲಿ ರಾಜಕೀಯ ಮೇಲಾಟಕ್ಕೆ ವೇದಿಕೆಯನ್ನು ಸಜ್ಜುಗೊಳಿಸಿಕೊಳ್ಳುತ್ತಿದೆ.
ಆದರೆ ಈ ವಿಷಯದಲ್ಲಿ, ಕಾಂಗ್ರೆಸ್ ಒಂದು ಹೆಜ್ಜೆ ಹೆಚ್ಚುವರಿ ‘ಮೈಲೇಜ್’ ಪಡೆಯುವುದು ಬಹುತೇಕ ನಿಶ್ಚಿತವಾಗಿದ್ದು, ಈ ಮೂಲಕ ಬಿಜೆಪಿಯ ಭದ್ರಕೋಟೆಯಲ್ಲಿಯೇ ಬಿರುಕು ಮೂಡುವಂತೆ ಮಾಡುವ ಲೆಕ್ಕಾಚಾರದಲ್ಲಿ ಕಾಂಗ್ರೆಸಿಗರಿದ್ದಾರೆ. ಏನೇ ಆಗಲಿ, ಪ್ರತಿಪಕ್ಷ ನಾಯಕ ಸ್ಥಾನದಲ್ಲಿರುವವರನ್ನು ಗೌರವದಿಂದ ಕಾಣಬೇಕಾಗಿರುವುದು ಯಾವುದೇ ಒಂದು ಸರಕಾರದ ಜವಾಬ್ದಾರಿಯಾಗಿರುತ್ತದೆ. ಅದನ್ನು ನಿಭಾಯಿಸಲೇಬೇಕು. ವೈಚಾರಿಕ ಭಿನ್ನಾಭಿಪ್ರಾಯಕ್ಕಾಗಿ, ದೈಹಿಕವಾಗಿ ದಾಳಿ ನಡೆಸುವು ದನ್ನು ಯಾವುದೇ ನಾಗರೀಕ ಸಮಾಜ ಒಪ್ಪುವುದಿಲ್ಲ ಎನ್ನುವುದನ್ನು ಎಲ್ಲರೂ ಅರ್ಥೈಸಿಕೊಳ್ಳಬೇಕು.
ಹಿಂದೂ ಕಾರ್ಯಕರ್ತರನ್ನು ಎಡಪರ ಸಂಘಟನೆಗಳು ಕೊಲೆ ಮಾಡಿದಾಗ ಅದನ್ನು ವಿರೋಧಿಸಿದ್ದು ಎಷ್ಟು ತಪ್ಪೋ, ಇಂದು ಪ್ರತಿಪಕ್ಷ ನಾಯಕರ ಆರೋಪಕ್ಕೆ ಅವರ ಮೇಲೆ ಹಲ್ಲೆಗೆ ಮುಂದಾಗುವುದು ತಪ್ಪು. ಇದನ್ನು ಪ್ರತಿಯೊಬ್ಬರು ಅರ್ಥೈಸಿಕೊಂಡರೆ ಮಾತ್ರ, ಪ್ರಜಾಪ್ರಭುತ್ವಕ್ಕೆ ಶೋಭೆ.