Saturday, 30th November 2024

ನಾನು ಎನ್ನುವ ಅಹಂ ಯಾರಿಗಿಲ್ಲ ಹೇಳಿ ?!

ಅಭಿಮತ

ಪ್ರೊ.ಸಿ.ಶಿವರಾಜು

ನಾನು ಎಂಬ ಎರಡಕ್ಷರ ತನ್ನೊಳಗಿನ ಅಹಂ ಅನ್ನು ತೋರಿಸುತ್ತದೆ. ಇದು ವ್ಯಕ್ತಿಯ ವ್ಯಕ್ತಿತ್ವವನ್ನು ಅಳೆಯುತ್ತದೆ. ಈ ಪದ ಬಹಳ ಗಂಭೀರತೆಯಿಂದ ಕೂಡಿದ್ದು, ವ್ಯಕ್ತಿಯ ನಡತೆಯನ್ನು ಸೂಚಿಸುತ್ತದೆ. ನಾನು ಅಥವಾ ಅಹಂ ಅನ್ನು ವ್ಯಕ್ತಿ ತನ್ನ ಸ್ವ-ಇಚ್ಛೆಯಿಂದ ಗುರುತಿಸಲಾಗದು. ಬೇರೆಯವರ ಅನುಭವದಿಂದಲೇ ಅರಿವಾಗುವುದು. ಸಾಮಾನ್ಯವಾಗಿ ಜ್ಞಾನಿಗಳ ಮುಂದೆ ಕುಳಿತವನು ನಿರಂತರವಾಗಿ ಮಾತನಾಡುತ್ತಾ ಎಲ್ಲವನ್ನೂ ತಿಳಿದವನಂತೆ ವರ್ತಿಸುತ್ತಿರುತ್ತಾನೆ.

ಜ್ಞಾನಿಯು ಅದಕ್ಕೆ ಯಾವ ಪ್ರತಿಕ್ರಿಯೆಯನ್ನು ನೀಡದೆ ಹಸನ್ಮುಖಿಯಾಗಿ ನಗುವುದನ್ನು ಗಮನಿಸಿದಾಗಲೇ ಮಾತನಾಡುತ್ತಿರುವವನ ಅಹಂ ಎನ್ನುವು ದರ ಅರಿವಾಗುತ್ತದೆ. ‘ಜೀವ ಹೋಗುವ ಈ ದೇಹ, ನಾಶವಾಗುವ ಈ ಸಂಪತ್ತು, ಮಾಸಿ ಹೋಗುವ ಈ ಸೌಂದರ್ಯ’ ಇವುಗಳನ್ನು ನಮ್ಮ ಬದುಕಿನಲ್ಲಿ ಸೋಸಿ ನೋಡಿದಾಗ ನಮಗೆ ಅರಿವಾಗುವುದು ನಮ್ಮ ಒಳ್ಳೆಯತನ ಮಾತ್ರ. ಮಾನವೀಯತೆ, ಕರುಣೆ, ಪ್ರೀತಿ, ಸಾಮಾಜಿಕ ಬದ್ಧತೆ, ನ್ಯಾಯ ಸಮ್ಮತಗಳೇ ನಮ್ಮ ಹೆಜ್ಜೆ ಗುರುತುಗಳು ಎಂದರೆ ತಪ್ಪಾಗಲಾರದು.

ನಾನು ಎಂಬುದನ್ನು ಕುರಿತು ಭಕ್ತಕನಕದಾಸರಿಗೆ ತಮ್ಮ ಗುರುಗಳು ಶಿಷ್ಯರನ್ನು ಕುರಿತು ಯಾರು ಸ್ವರ್ಗಕ್ಕೆ ಹೋಗುತ್ತೀರಾ! ಎಂದು ಕೇಳಲು ಕೆಲವರು ನಾನು ಎಂದು ಹೇಳುತ್ತಾರೆ. ಆದರೆ ಕನಕದಾಸರು ‘ನಾನು ಎನ್ನುವುದು ಹೋದರೆ ಮಾತ್ರ ಸ್ವರ್ಗಕ್ಕೆ ಹೋಗಬಹುದು’ ಎನ್ನುತ್ತಾರೆ. ಇದು ಒಬ್ಬ ವ್ಯಕ್ತಿಯ ಪರ ಮೋಚ್ಚ ಬದುಕಿನ ತುತ್ತ ತುದಿಯೆಂದರೆ ತಪ್ಪಾಗಲಾರದು. ಸ್ಮಶಾನದಲ್ಲಿ ಬಿದ್ದ ಬೂದಿಯನ್ನು ನೋಡಿ ಮಾನವನ ಮನಸ್ಸು ಮೆಲ್ಲನೆ ನುಡಿಯಿತು. ಬರಿ ಬೂದಿಯಾಗಲು, ಮನುಷ್ಯ ಜೀವನ ಪೂರ್ತಿ ನಾನು ಎಂದು ಅರಚಿಕೊಳ್ಳುವುದೇಕೆ ಇದನ್ನು ಬಿಟ್ಟು ನಾವೆಲ್ಲರು ಎಂಬುದನ್ನು ಅರಿಯಬೇಕಾಗಿದೆ.

ಆ ಅರಿವು ಗುರುವಾದಾಗ ನಾನು ಎನ್ನುವುದನ್ನು ಮನುಷ್ಯ ಕಡಿಮೆ ಮಾಡಿಕೊಳ್ಳುತ್ತಾನೆ. ಈ ಜಗತ್ತಿನಲ್ಲಿ ಯಾವುದು ನಿನಗೆ ಸ್ವಂತದಲ್ಲದಿರುವಾಗ ನಿಮಗೆ ನಾನು, ನನ್ನದು, ನನ್ನವರು, ನಮ್ಮವರು, ಎಂಬ ನಾನತ್ವವೇಕೆ ? ಈ ಭ್ರಮೆಯ ಬದುಕನ್ನು ಬಿಟ್ಟು ವಾಸ್ತವಿಕ ಜಗತ್ತಿನಲ್ಲಿ ಬದುಕುವುದನ್ನು ನಾವೆಲ್ಲರೂ ಕಲಿಯಬೇಕಾಗಿದೆ. ನಾನು ಎನ್ನುವುದನ್ನು ಬಿಟು, ಯಾರಲ್ಲಿ ಕರುಣೆ, ಪ್ರೀತಿ, ಸ್ನೇಹ, ಹಾಗೂ ಗೌರವದ ಭಾವನೆಗಳಿವೆಯೋ ಅವರೇ ಎಲ್ಲರಿಗಿಂತ ದೊಡ್ಡ ವರು ಎನ್ನುವುದು ಬುದ್ಧನ ಬೋಧನೆಯಾಗಿದೆ.

ಮನುಷ್ಯರು ಅಲ್ಪ ಕಾಲಕ್ಕೆ ಭೂಮಿಗೆ ಬಂದು, ಎಲ್ಲವನ್ನು ಮೂರು ದಿನ ಅನುಭವಿಸಿ, ತನ್ನ ಕಾಲವನ್ನು ಮುಗಿಸಿ ಮತ್ತೆ ಪ್ರಕೃತಿಯ ಮಡಿಲಲ್ಲಿ ಲೀನ
ವಾಗುತ್ತಾರೆ. ಈ ಮೂರು ದಿನದ ಸಂತೆಯಲ್ಲಿ ಎಲ್ಲವನ್ನೂ ನಾನೇ ಸೃಷ್ಟಿಸಿದೆ, ನಾನೇ ಸಂಪಾದಿಸಿ, ನಾನೇ ಅನುಭವಿಸಿ, ಮೆರೆಯಬೇಕು ಎಂದು ಬಯಸುತ್ತಾರೆ. ರಾಜ್ಯಭಾರವನ್ನು ಮಾಡುತ್ತಿರುವ ರಾಜರೂ ಸಹ ನಾನೇ ಸರ್ವಸ್ವ, ನಾನೇ ಅಂತಿಮವೆಂದು ಮೆರೆಯುತ್ತಾರೆ, ಕೊನೆಗೆ ತನ್ನ ಜೀವದ ಕೊನೆ
ಉಸಿರು ಬಿಟ್ಟಾಗ ರಾಜನನ್ನು ಅರಮನೆಯಲ್ಲಿಟ್ಟು ಕೊಳ್ಳದೆ ಹೊರಗಡೆ ಇಡುತ್ತಾರೆ. ಆತನ ಮರಣದ ನಂತರ ರಾಜ ಎಂತಲೂ ಕರೆಯದೆ ಹೆಣವನ್ನು
ಹೊರಗಡೆ ಇಡಿ, ಹೆಣವನ್ನು ಸುಡ ಬೇಕೋ ಅಥವಾ ಹೂಳಬೇಕೋ ಇತ್ಯಾದಿಯಾಗಿ ಕರೆಯುತ್ತಾರೆ.

ಅಂದರೆ ರಾಜರೂ ಕೂಡ ಪ್ರಕೃತಿ ಯಲ್ಲಿ ಲೀನರಾಗುತ್ತಾರೆ, ಇಷ್ಟೇ ಜೀವನ. ಇದಕ್ಕೇಕೆ ನಾನು ಎನ್ನುವ ಅಹಂಕಾರ. ಬೇಟೆಗಾರ ಬೇಟೆಯಾಡಿ ತಂದಂತಹ
ಮೊಲವನ್ನು, ಕೊಂಡುಕೊಂಡ ಮಾಂಸಹಾರಿ ಅದನ್ನು ಮನೆಯೊಳಗೆ ತೆಗೆದುಕೊಂಡು ಹೋಗುತ್ತಾನೆ. ಆದರೆ ನಮ್ಮನ್ನು ಆಳ್ವಿಕೆ ಮಾಡಿದ ರಾಜರ ಮರಣಾನಂತರ, ಸತ್ತ ಹೆಣವನ್ನು ಅರಮನೆ ಯಿಂದ ಹೊರಗಡೆ ಇಡುತ್ತಾರೆ. ಇಲ್ಲಿ ಸತ್ತ ಮೊಲಕ್ಕಿರುವ ಪ್ರಾಮುಖ್ಯತೆ ರಾಜನಿಗೆ ಇಲ್ಲ, ಆತನ ಮಂತ್ರಿ
ಪದವಿಗೂ ಸಿಗಲಾರದು ‘ನಾನು ಎನ್ನುವ ಅಹಂ’ ಇವರನ್ನು ನಾಶಪಡಿಸುತ್ತದೆ. ಬುದ್ಧರ ಬೋಧನೆಯಂತೆ ಕ್ಷಮೆ ಮತ್ತು ಅಹಂ ಎರಡು ಚಿಕ್ಕಪದಗಳು. ಆದರೆ ಕ್ಷಮೆ ಎನ್ನುವುದು ಎಷ್ಟೋ ಸಂಬಂಧಗಳನ್ನು ಉಳಿಸಿದರೆ ಅಹಂ ಎನ್ನುವುದು ಎಷ್ಟೋ ಸಂಬಂಧಗಳನ್ನು ಹಾಳುಮಾಡುತ್ತದೆ ಇದು ಕ್ಷಮೆಗೂ ಮತ್ತು ಅಹಂಗೂ ಇರುವ ವ್ಯತ್ಯಾಸ.

ಕ್ಷಮಾ ಗುಣಕ್ಕೆ ಇರುವ ಬೆಲೆ ಅಹಂಗಿಲ್ಲ. ಅಯ್ಯ ಎಂದರೆ ಸ್ವರ್ಗ ಎಲವೋ ಎಂದರೆ ನರಕ ಎಂದು ಹಿರಿಯರು ಮಾತನಾಡುತ್ತಾರೆ. ಇದರಲ್ಲಿ ಎಷ್ಟು ಸತ್ಯವಿದೆ ಎಂದು ಎರಡು ಕೈಗಳನ್ನು ಎತ್ತಿ ಕೈ ಮುಗಿಯುವುದರಿಂದ ನಾವು ದೊಡ್ಡವರಾಗುತ್ತೇವೆ ವಿನಃ ಕಳೆದು ಕೊಳ್ಳುವುದು ಏನಿದೆ? ನಾಲ್ವರು ಒಬ್ಬ ವ್ಯಕ್ತಿಗೆ ಪ್ರಾಮುಖ್ಯತೆ ನೀಡಿದಾಗ ಆತ ಎತ್ತರದ ಸ್ಥಾನ ಅಲಂಕರಿಸುತ್ತಾನೆ. ಅನುಭವಿಸುವ ಅವಕಾಶ ಸಿಕ್ಕಾಗ ಅದನ್ನು ಸರಿಯಾಗಿ ಬಳಸಿಕೊಳ್ಳದೆ ಅಹಂ ನಿಂದ ಬೀಗಿದರೆ ತನ್ನ ಭವಿಷ್ಯದ ಅವನತಿಗೆ ನಾಂದಿ ಯಾಗುತ್ತದೆ.

ನಾನು ಎನ್ನುವುದನ್ನು ಮರೆತು ಸಹನೆ ಇದ್ದರೆ ಸಕಲವು ನಿನ್ನದೆ, ವಿನಯವಿದ್ದರೆ ವಿಜಯವೂ ನಿನ್ನದೆ ಸಹನೆ ಹಾಗೂ ವಿನಯದಿಂದ ಜೀವಿಸಿದರೆ ಮಾತ್ರ
ಬದುಕಿನ ಉನ್ನತ ಸ್ಥಾನ ತಲಪಬಹುದು. ಎಂಬ ಬುದ್ಧನ ಸಂದೇಶವನ್ನು ಅರಿಯಬೇಕಾಗಿದೆ. ಮುಂದುವರೆದು ಬುದ್ಧನು ಉಪದೇಶಿಸುತ್ತಾ ಸಾವಿನ ತನಕ ಕೆತ್ತಿದರು ಪರಿಪೂರ್ಣ ಶಿಲ್ಪವಾಗದ ಶಿಲೆ ಮನುಜ ಅಂದರೆ ಇಲ್ಲಿ ಒಬ್ಬ ವ್ಯಕ್ತಿ ಎಷ್ಟು ಬುದ್ಧಿವಂತರಾದರು, ಸಿರಿವಂತನಾದರೂ, ತಾಳ್ಮೆ ಮತ್ತು ಸಹನೆ ಇದ್ದರೂ ಎಲ್ಲೋ ಒಂದು ಕಡೆ ನಾನು (ಅಹಂ) ಎಂಬ ಬೀಜ ಬೆಳೆದು ಹೆಮ್ಮರವಾಗುತ್ತಿರುತ್ತದೆ.

ಇದನ್ನು ಮೊಳಕೆಯಲ್ಲೇ ಚಿವುಟಿ ಹಾಕುವ ಕೆಲಸವನ್ನು ಮಾಡಬೇಕಾಗಿದೆ. ಒಳ್ಳೆಯ ನಡತೆಯಿಂದ ನಮಗೆ ಯಾವುದೇ ಲಾಭ ಸಿಗದೆ ಇರಬಹುದು, ಅಂತಹ ಗುಣಕ್ಕೆ ಸಾವಿರಾರು ಹೃದಯಗಳನ್ನು ಗೆಲ್ಲುವ ಶಕ್ತಿಯಿರುತ್ತದೆ. ಎಂಬ ಅಂಬೇಡ್ಕರ್ ರವರ ಹಿತನುಡಿಯನ್ನು ಮೈಗೂಡಿಸಿಕೊಳ್ಳಬೇಕಾಗಿದೆ. ಸಾವಿರಾರು ಹೃದಯಗಳನ್ನು ಗೆಲ್ಲುವಂತಹ ಶ್ರೀಮಂತಿಕೆ ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಅದು ಎಲ್ಲರನ್ನು ಗೆಲ್ಲುವ ನಡತೆಯನ್ನು, ಗುಣವನ್ನು ಬೆಳೆಸಿಕೊಂಡಿರುವವರಿಂದ ಮಾತ್ರಸಾಧ್ಯ ಎನ್ನುವುದು ಇಲ್ಲಿ ನಿತ್ಯ ಸತ್ಯ.

ನಾನು, ನನ್ನದು, ಎನ್ನುವುದು ಮಾಯೆ, ಈ ಮಾಯಾ ಪಾಶಕ್ಕೆ ಯಾರು ಸಿಕ್ಕಿ ಹಾಕಿಕೊಳ್ಳುತ್ತಾರೋ, ಅವರು ಬಂದುದೆಲ್ಲವನ್ನು ಅನುಭವಿಸಲೇ ಬೇಕು.
ಹಿಟ್ಲರ್ ಎಂಬ ವ್ಯಕ್ತಿ ನಾನು ಇಡೀ ಜಗತ್ತಿಗೆ ಸರ್ವಾಧಿಕಾರಿಯಾಗಬೇಕು, ಎಲ್ಲವನ್ನು ತನ್ನ ಕಪಿಮುಷ್ಟಿಯಲ್ಲಿ ಹಿಡಿದಿಟ್ಟಿಕೊಳ್ಳಬೇಕೆಂದು ರಾಜ್ಯಭಾರ
ಮಾಡಿದ, ಕೊನೆಗೆ ಆತನಲ್ಲಿದ್ದ ಸರ್ವಾಧಿಕಾರತ್ವ ಆತನಲ್ಲಿದ್ದ ನಾನು ಎನ್ನುವ ಅಹಂ ಅತನನ್ನು ಮಣ್ಣಲ್ಲಿ ಮಣ್ಣಾಗಿಸಿತ್ತು. ನಾನು ಸರಿ ಎನ್ನುವುದನ್ನು ಒಪ್ರೋಣ, ನಾನೇ ಸರಿ ಎಂಬುವುದನ್ನು ಒಪ್ಪಲಾಗದು ಏಕೆಂದರೆ ನಾನು ಎನ್ನುವ ಪದವೇ ಅಹಂನಿಂದ ಕೂಡಿದೆ, ನನ್ನನ್ನು ಬಿಟ್ಟು ಬೇರೆ ಏನು ಇಲ್ಲ. ಅಥವಾ ಯಾರು ಇಲ್ಲಿ ಎನ್ನುವುದು ಅಹಂನ ಮನಸ್ಥಿತಿ.

ಬಾವಿಯೊಳಗಿನ ಕಪ್ಪೆ ಇದ್ದಂತೆ, ಬಾವಿಯನ್ನೇ ಸಮುದ್ರ ಎಂದು ತಿಳಿದು ಕುಣಿಯುವಂತಾಯಿತು. ಬಸವಣ್ಣ ನವರು ತಮ್ಮ ವಚನಗಳಲ್ಲಿ ಹೀಗೆ ಹೇಳುತ್ತಾರೆ ಎನಗಿಂತ ಕಿರಿಯರಿಲ್ಲ ಶಿವಭಕ್ತಿರಿಗಿಂತ ಹಿರಿಯರಿಲ್ಲ ನಿಮ್ಮ ಪಾದಸಾಕ್ಷಿ ಎನ್ನುವ ಮನಸಾಕ್ಷಿ ಕೂಡಲಸಂಗಮದೇವ ಎನಗಿದೆ. ದಿಬ್ಬ
ಮಾನವನು ನಾನು ಎನ್ನುವ ಅಹಂಕಾರದಿಂದ ಬೇರೆಯವರ ಪ್ರೌಢಿಮೆಯನ್ನು, ಜ್ಞಾನವನ್ನು, ಹಿರಿಮೆಯನ್ನು, ಸತ್ಕಾರ್ಯವನ್ನು, ಅವರ ಸಾಮರ್ಥ್ಯ ಗಳನ್ನು ಒಪ್ಪಿಕೊಳ್ಳದೆ, ಪ್ರೋತ್ಸಾಹಿಸಿದೆ.

ಇರುವುದರಿಂದ ಮಾನವನ ಶಕ್ತಿ ಹರಿದು ಹಂಚಿಹೋಗಿ, ಅಪವ್ಯಯವಾಗಿದೆ. ವ್ಯಕ್ತಿ ಪ್ರತಿಷ್ಠೆಯಿಂದ ನಾನು ಎಂಬ ಅಹಂಕಾರದ ನಾನಾತ್ವದಿಂದಾಗಿ ಲೋಕವು ಸರ್ವಾಂಗೀಣವಾಗಿ ಅಭಿವೃದ್ಧಿಯಾಗದೆ ಮನಷ್ಯನ ಬದುಕು ಕ್ಷೀಣಿಸುತ್ತಿದೆ. ನಾನು ಎಂಬ ಎರಡಕ್ಷರದಿಂದಾಗಿ ಗೆದ್ದಲನ್ನು ಇರಿವೆಗಳು
ತಿಂದಂತೆ, ಮನುಷ್ಯನ ಶರೀರವನ್ನು ನಾನು ಎನ್ನುವ ಅಹಂಕಾರವು ತಿಂದು ನಾಶಪಡಿಸುತ್ತದೆ ಎಂಬ ಮನವರಿಕೆಯನ್ನು ಮಾಡಿಕೊಟ್ಟಿದ್ದಾರೆ.

ಅಹಂಕಾರವನ್ನು ತ್ಯಜಿಸಿ ಎನ್ನುತ್ತಾ ಎನಗಿಂತ ಕಿರಿಯರಿಲ್ಲ, ಶಿವಶರಣರಿಗಿಂತ ಹಿರಿಯರಿಲ್ಲ ಎಂದು ಬಸವಣ್ಣನವರು ಘೋಷಿಸಿದರು. ಈ ನಿಶ್ಚಲ
ನಿರ್ಧಾರದಿಂದ ಶರಣರು ಶಿವನ ಪಾದ ಮುಟ್ಟಿ ಪ್ರತಿಜ್ಞೆ ಮಾಡಿದರು. ಇದಕ್ಕೆ ತಪ್ಪಿದರೆ ಶಿವನ ಪಾದ ತಮ್ಮ ಕೈಗೆ ಕಾದ ಕಬ್ಬಿಣವಾಗಲೆಂದು ಪರಿಚ್ಛೇದಿಸಿ
ದರು. ಮುಂದುವರೆದು ತಮ್ಮ ವಚನದ ಮೂಲಕ ಮಾನವನು ಒಗ್ಗೂಡಿ ಬದುಕಬೇಕು, ಮನುಷ್ಯ ಸಂಗಜೀವಿ, ನಾನು ಎಂಬ ಭಾವವನ್ನು ಬಿಟ್ಟು ನಾವೆಲ್ಲರೂ ಒಂದೇ ಎನ್ನುವ ಕಡೆಗೆ ಸಾಗಬೇಕು. ಮೊದಲ ಮನಸ್ಸನ್ನು ಬದಲಾಯಿಸಿಕೊಳ್ಳಬೇಕು ಎಂಬ ಉಪದೇಶವನ್ನು ನೀಡಿದ್ದಾರೆ.

ಉದಾಹರಣೆಗೆ ನೆಲದ ಮೇಲೆ ಚೆಲ್ಲಿದ ಆಹಾರದ ಅಗಳುಗಳನ್ನು ಕಂಡರೆ ಕಾಗೆ ಮತ್ತು ಕೋಳಿ ತನ್ನೆಲ್ಲ ಬಳಗವನ್ನು ಕೂಗಿ ಕರೆದು ಹಂಚಿಕೊಂಡು ಜೊv
ಯಾಗಿ, ಸಂತೋಷದಿಂದ ತಿನ್ನುತ್ತವೆ. ಕೋಳಿಯೂ ಅಷ್ಟೇ ಸ್ವಲ್ಪ ಅಗಳು ಸಿಕ್ಕದರೂ ತನ್ನೆಲ್ಲ ಮರಿಮಂದಿಯೆನ್ನೆಲ್ಲ ಕರೆದು ಒಟ್ಟುಗೂಡಿ ತಿನ್ನುವವು. ಮನುಷ್ಯರಾದ ನಾವು ಗಾಳಿ, ನೀರು, ಬೆಳಕು, ಆಹಾರವನ್ನು ಸೇವಿಸಿ ಬದುಕುತ್ತಿಲ್ಲವೇ? ನಿಮಗೇಕೆ ಇಂತಹ ಮನಸ್ಸಿಲ್ಲ? ಪರಸ್ಪರ ಒಬ್ಬರನೊಬ್ಬರು ಪ್ರೀತಿಸುವ ಮಾನವೀಯತೆಯಿಂದ ಇತರರನ್ನು ಕಾಣುವ ಗುಣವಿಲ್ಲ? ಯೋಚಿಸಿ ಬದುಕುವ ಬುದ್ಧಿ ಇರುವ ನಮಗೆ ಪಕ್ಷಿಗಳಾದ ಕಾಗೆ, ಕೋಳಿಗಳಂತಹ ಗುಣವಿಲ್ಲವೇಕೆ? ನೀವು ಈ ಪಕ್ಷಿಗಳಿಂದ ಕೀಳಾಗಿ ವರ್ತಿಸುತ್ತೀರಿ, ಮನುಷ್ಯ ಮತ್ತು ಪಕ್ಷಿಗಳಿಗೆ ಇರುವ ವ್ಯತ್ಯಾಸವೆಂದರೆ ಅವು ಕೂಡಿ ಬಾಳುವ, ಹಂಚಿಕೊಂಡು ತಿನ್ನುವ ಪ್ರವೃತ್ತಿಯನ್ನು ಬೆಳೆಸಿಕೊಂಡಿವೆ.

ಆದರೆ ಮನುಷ್ಯರಾದ ನಾವು ಒಬ್ಬರನ್ನು ಕಂಡರೆ ಮತ್ತೊಬ್ಬರು ನಾನು ಎಂಬ ಅಹಂಕಾರದಿಂದ ದ್ವೇಷ, ಅಸೂಯೆ, ವೈರತ್ವ ಹಾಗೂ ಮಾನವೀಯ ವಿರೋಧಿ ಗುಣಗಳನ್ನು ಬೆಳೆಸಿ ಕೊಂಡಿರುವುದು ವಿಪರ್ಯಾಸವೇ ಸರಿ. ಚಿಕ್ಕ ಮಗುವಿನಿಂದಲೂ ಏನನ್ನಾದರೂ ಕಲಿಯಬಹುದು ಎಂದೆಲ್ಲ ನಾವು ಕೇಳಿರುತ್ತೇವೆ. ಆದರೆ ಅದು ಸಾಧ್ಯವಾಗುವುದು ನಮ್ಮೊಳಗಿರುವ ಅಹಂ ನಾಶವಾದಾಗ ಮಾತ್ರಸಾಧ್ಯ. ವಿದ್ಯಾರ್ಥಿಗಳಾಗಲೀ ದೊಡ್ಡವರಾಗಲೀ ಈ ವಿನೀತತೆಯನ್ನು ಬೆಳೆಸಿಕೊಳ್ಳದೆ ಹೋದರೆ ಅಪಾಯ ತಪ್ಪಿದ್ದಲ್ಲ. ಯುವಕರ ಮೂಲಕ ಜಗತ್ತನ್ನೇ ಬದಲಾಯಿಸುವ ಕನಸು ಕಂಡಿದ್ದ ವಿವೇಕಾ
ನಂದರು, ನಾನು ಎನ್ನುವ ಅಹಂ ಬಿಡುವವರೆಗೂ ನಿಮ್ಮ ಅಭಿವೃದ್ಧಿ ಆಗುವುದಿಲ್ಲ ಎಂದಿದ್ದಾರೆ. ನಾನು ಎನ್ನುವ ಅಹಂಕಾರವೇ ನಮ್ಮ ಸೋಲಿನ ಮತ್ತೊಂದು ಮೆಟ್ಟಿಲು ಎಂದರೆ ತಪ್ಪಾಗಲಾರದು.

ಒಂದು ಬಾರಿ ಎಡವಿದ ಕಾಲನ್ನು ಮತ್ತೆ ಮತ್ತೆ ಎಡವುವಂತೆ ನಾನು ಎಂಬ ಅಹಂಕಾರ ಮಾತ್ರ ಮತ್ತೆ ಮನುಷ್ಯನನ್ನು ಕುಗ್ಗಿಸುತ್ತದೆ. ನಾನು ಎನ್ನುವ ಅಹಂಕಾರವೇ ಸರ್ವನಾಶಕ್ಕೆ ದಾರಿಯಾಗುತ್ತದೆ. ಅಹಂಕಾರದ ಮನಸ್ಥಿತಿ ನಮ್ಮಲ್ಲಿ ಇರುವವರೆಗೂ ಸತ್ಯವು ನಮ್ಮ ಮನಸ್ಸಿನಲ್ಲಿ ನೆಲೆಸುವುದಿಲ್ಲ.
ನಾವೆಲ್ಲರೂ ಈ ಅಹಂಕಾರವನ್ನು ಹೊರ ಹಾಕಲು ಪ್ರಯತ್ನಿಸಬೇಕು ನಮಗೆ ನಾವೇ ಸಂಪೂರ್ಣ ಶರಣಾಗತಿಯಾಗಬೇಕು. ಅಹಂಕಾರದಿಂದ ನಿರ್ಮಿಸ
ಲ್ಪಟ್ಟ ಜಗತ್ತನ್ನು ನಾವು ತ್ಯಜಿಸುವವರೆಗೆ ನಾವು ಎಂದಿಗೂ ಬೆಳಕನ್ನು, ನೆಮ್ಮದಿಯ ಜೀವನವನ್ನು ಅನುಭವಿಸಲು ಸಾಧ್ಯವಿಲ್ಲ, ಎಂಬ ಸಂದೇಶವನ್ನು
ಸ್ವಾಮಿ ವಿವೇಕಾನಂದರು ಈ ಜಗತ್ತಿಗೆ ನೀಡಿದ್ದಾರೆ.

‘ನಾನೆಂಬುದು ಅಹಂಕಾರ, ನೀನೆಂಬುದು ಮಾಯೆ ನಾನು ನೀನೆಂಬ ಉಭಯವಳಾದರೆ ನಾನೆಂಬವನೂ ನೀನೆಂಬವನೂ ನೀನೇ ಅಯ್ಯಾ ಇವೆರಡರ ಭೇದವೆಲ್ಲಿಯದೋ ಮಹಾಲಿಂಗ ಗುರು ಶಿವಸಿದ್ಧೇಶ್ವರಪ್ರಭುವೇ?’ ನಾನೆಂಬ ಆಹಂಕಾರ ತಲೆದೋರಿದಲ್ಲಿ ಅಟಮಟ ಕುಟಿಲ ಕುಹಕವೆಂಬ ಬಿರು ಗಾಳಿ ಹುಟ್ಟಿತು, ಆ ಬಿರುಗಾಳಿ ಹುಟ್ಟಲೊಡನೆ ಜ್ಞಾನ ಜ್ಯೋತಿ ಕೆಟ್ಟಿತ್ತು, ಜ್ಞಾನಜ್ಯೋತಿ ಕೆಡಲೊಡನೆ ನಾ ಬಲ್ಲೆ ಬಲ್ಲಿದರೆಂಬ ಅರುಹಿರಿಯರೆಲ್ಲರು ತಾಮಸ ಕ್ಕೊಳಗಾಗಿ ಸೀಮೆದಪ್ಪಿ ಕೆಟ್ಟರು ಕಾಣಾ ಗುಹೇಶ್ವರಾ.

ಎಲ್ಲ ರೀತಿಯಿಂದಲೂ ಇತರರಿಗಿಂತ ನಾನೇ ದೊಡ್ಡವ ನೆಂಬ ಅಥವಾ ನನ್ನಿಂದಲೇ ಎಲ್ಲವೂ ನಡೆಯುತ್ತಿದೆಯೆಂಬ ಅಥವಾ ನಾನಿಲ್ಲದೇ ಈ ಜಗತ್ತೇ ಇಲ್ಲವೆಂಬ ಅಹಂಕಾರದ ತುತ್ತತುದಿಯಲ್ಲಿ ಮೆರೆಯ ತೊಡಗುವ ವ್ಯೆಕ್ತಿಗಳು ಅರಿವನ್ನು ಕಳೆದುಕೊಂಡು ಹೇಗೆ ನೆಲಕಚ್ಚುತ್ತಾರೆ ಎಂಬುದನ್ನು ಈ ವಚನದಲ್ಲಿ ಹೇಳಲಾಗಿದೆ. ನಾನು ನನ್ನಿಂದಲೇ, ಮಾಡುವವ ನೀಡುವವ ನಾನೇ ಎಂಬ ಅಹಂಕಾರ, ನಿನ್ನ ಮನದಲ್ಲಿ ಬಂದ ತಕ್ಷಣವೇ, ನಿನ್ನ ಕೇಡು ಗಾಲ ಶುರುವೆಂದು ಭಾವಿಸು, ನಾನೇ ಎಂಬ ಅಹಂಕರ ನಿನ್ನಲ್ಲಿ ಬಂದ ಮರುಕ್ಷಣವೇ ಆಚಾರವು ನಶಿಸಿ, ಅನಾಚಾರ ತುಂಬುತ್ತದೆ, ಸ್ವಾರ್ಥ ಹೆಚ್ಚುತ್ತದೆ. ಅಂತಹವರಲ್ಲಿ ಲಿಂಗ ತಾನೆಲ್ಲಿಪ್ಪುದೊ. ಮನದಲ್ಲಿ ಅಹಂಕಾರಕ್ಕೆ ಎಡೆಗೊಡದೆ ನಾನು ನನ್ನದೆಂಬ ಅಹಂ ಭಾವ ತೊಲಗಿ, ಸಕಲವೂ ಸಕಲರು ಒಂದೇ ಎಂಬ ವಿನಯ ಭಾವ ಮೂಡಬೇಕು.

ದಯೆ, ಕರುಣೆ, ಪ್ರೀತಿ, ಸಮತೆ, ಎಂಬ ಸದಾಚಾರ ತುಂಬಿದ ಮನಸ್ಸು ಸತ್ಕ್ರಿಯೆವುಳ್ಳ ವ್ಯೆಕ್ತಿಯಾಗಬೇಕು. ಅಹಂಕಾರವು ಕಣ್ಣುಗಳಲ್ಲಿನ ಧೂಳಿನಂತಿದೆ.
ಧೂಳನ್ನು ತೆರವುಗೊಳಿಸದೆ, ನಾವು ಏನನ್ನೂ ಸ್ಪಷ್ಟವಾಗಿ ನೋಡುವುದಿಲ. ಆದ್ದರಿಂದ ಅಹಂಕಾರವನ್ನು ತೆರವುಗೊಳಿಸಿ ಜಗತ್ತನ್ನು ನೋಡಿ ಎಂಬುದು
ಪ್ರಕೃತಿಯಷ್ಟೇ ಸತ್ಯವಾಗಿದೆ. ಅಹಂಕಾರ ಎನ್ನುವುದು ‘ಬೆಳೆಯುವ ಗಿಡಕ್ಕೆ ಹತ್ತುವ ರೋಗ’ ವಿದ್ದಂತೆ ಬೆಳೆಗೆ ರೋಗನಾಶವಾಗದ ಹೊರತು ಬೆಳೆ ನಮಗೆ ಹೇಗೆ ಸಿಗುವುದಿಲ್ಲವೋ ಹಾಗೆ ಅಹಂಕಾರದ ಮನುಷ್ಯನಿಗೆ ಶ್ರೇಯಸ್ಸು ಬರುವುದಿಲ್ಲ.

ಯಾರು ಸರಿ ಎನ್ನುವುದಕ್ಕಿಂತ ಯಾವುದು ಸರಿ, ನಾನು ಎನ್ನುವ ಅಹಂಕಾರವೇ? ಅಥವಾ ನಾನು ಎನ್ನುವ ಮಮಕಾರವೇ? ನಾವೇ ನಿರ್ಧರಿಸಬೇಕು.
ಜಗತ್ತಿನಲ್ಲಿ ನಾವು ವಿದ್ಯಾವಂತರಾಗಿ, ಬುದ್ಧಿವಂತರಾಗಿ ಸರಿ-ತಪ್ಪುಗಳನ್ನು ಯೋಚಿಸುವ ಜ್ಞಾನವಿದ್ದರೂ, ಮನುಷ್ಯ ತಪ್ಪುಗಳನ್ನು ಮಾಡುತ್ತಲೇ ಇರುತ್ತಾನೆ. ‘ವಿದ್ಯಾದದಾತಿ ವಿನಯಂ ವಿದ್ಯೆಯು ವಿನಯವನ್ನು ಕಲಿಸುತ್ತದೆ. ವಿನಯವಂತನಾದ ಮೇಲೆ ನಾನು ಎಂಬ ಅಹಂಕಾರ ತನ್ನಷ್ಟಕ್ಕೆ ತಾನೇ ಹೋಗಬೇಕು. ವಿದ್ಯೆಯೊಂದಿಗೆ ಆದರ್ಶಗುಣಗಳು ನಿನ್ನಲ್ಲಿ ಬರದಿದ್ದರೆ ನೀನು ಓದಿದ್ದು ವ್ಯರ್ಥವಾಗುತ್ತದೆ.’ ಎಂಬುದು ಪ್ರಕೃತಿಯಷ್ಟೇ ಸತ್ಯವಾಗಿದೆ.

ಮತ ಮನುಜ ಮತವಾಗಬೇಕು, ಪಥ ವಿಶ್ವಪಥವಾಗಬೇಕು ಮಾನವ ವಿಶ್ವ ಮಾನವನಾಗಬೇಕು. ಈ ದಿಕ್ಕಿನಲ್ಲಿ ಪ್ರತಿಯೊಬ್ಬರೂ ಸಾಗಬೇಕು ಎಂದು ಕುವೆಂಪು ರವರು ಕರೆ ನೀಡಿದ್ದಾರೆ. ಹೀಗೆ ಅಹಂಕಾರವನ್ನು ತ್ಯಜಿಸಿ ನಾನು, ನನ್ನದು, ನನ್ನಿಂದಲೇ ಎಂಬ ಅಹಂನ್ನು ಬಿಟ್ಟು ಮನುಷ್ಯ ಮನುಷ್ಯರನ್ನು ಪ್ರೀತಿಸುವ ಸಹೋದರ ಭಾವನೆ ಉಳ್ಳವರಾಗಿ ಪ್ರೀತಿ, ವಾತ್ಸಲ್ಯ, ಮಮತೆ, ಕರುಣೆ ಹಾಗೂ ಮಾನವೀಯತೆಯಿಂದ ಎಲ್ಲರನ್ನೂ ಒಡಗೂಡಿ ಬದುಕುವ ಸಂಘ ಜೀವಿಯಾದಾಗ ಮಾತ್ರ ಭೂಮಿಯ ಮೇಲೆ ನಾವೆಲ್ಲರೂ ನಶ್ವರರು, ಎಲ್ಲರೂ ಒಂದು ಗೂಡಿ ಬದುಕು ಮಂಕುತಿಮ್ಮ ಎಂಬ ಡಿ.ವಿ.ಜಿಯವರ ನುಡಿಮುತ್ತಿನಂತೆ ಎಲ್ಲರಲ್ಲೂ ಒಬ್ಬರಾಗಿ ಬದುಕಬೇಕು.

‘ಇಟ್ಟರೇ ಸಗಣಿಯಾದೆ, ತಟ್ಟಿದರೆ ಬೆರೆಣಿಯಾದೆ ಸುಟ್ಟರೆ ಹಣೆಗೆ ವಿಭುತಿಯೂ ಆದೆ, ತೂರಿಬಿಟ್ಟರೆ ಹೊಲ ಗದ್ದೆಗಳಿಗೆ ಮೇಲುಗೊಬ್ಬರವಾದೆ ನೀನಾರಿಗಾ ದೆಯೋ ಎಲೆ ಮಾನವ’ ಇದನ್ನು  ಪ್ರಜ್ಞಾವಂತರು ಅರಿಯಬೇಕಿದೆ.

(ಲೇಖಕರು: ಬೆಂಗಳೂರು ವಿಶ್ವವಿದ್ಯಾಲಯ
ಸಂಸ್ಕೃತ ವಿಭಾಗದ ಅಧ್ಯಕ್ಷರು)