Friday, 18th October 2024

ಚುನಾವಣೆ ಎದುರಿಸಲು ಬಿಜೆಪಿ ನೋಡಿ ಕಲೀಬೇಕು

ವರ್ತಮಾನ

maapala@gmail.com

ಈಗ ಚುನಾವಣೆ ಹೇಗೆ ಎದುರಿಸಬೇಕು ಎಂಬುದನ್ನು ಕೂಡ ಬಿಜೆಪಿಯನ್ನು ನೋಡಿ ತಿಳಿಯಬೇಕು. ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಕೇಂದ್ರ ಮತ್ತು ರಾಜ್ಯದಲ್ಲಿರುವ ಬಿಜೆಪಿಯ ಡಬಲ್ ಎಂಜಿನ್ ಸರಕಾರದ ಕಾರ್ಯವೈಖರಿ ಇದನ್ನು ಸಾಬೀತುಪಡಿಸುತ್ತಿದೆ.

ಕಳೆದ ಮೂರ್ನಾಲು ತಿಂಗಳಿನಿಂದ ರಾಜ್ಯದ ಆಡಳಿತಾರೂಢ ಬಿಜೆಪಿ ವಿರುದ್ಧ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಮುಗಿಬಿದ್ದಿದ್ದನ್ನು ನೋಡಿದಾಗ ಸರಕಾರದ ವಿರುದ್ಧ ಜನಾಭಿಪ್ರಾಯ ಮೂಡಿಸುವಲ್ಲಿ ಅದು ಯಶಸ್ವಿಯಾಗುತ್ತದೆ ಎಂಬ ಅಭಿಪ್ರಾಯ ಮೂಡಿತ್ತು. ಕಾಂಗ್ರೆಸ್ ಅಷ್ಟೊಂದು ತೀವ್ರಗತಿಯಲ್ಲಿ ತನ್ನ ವಿರುದ್ಧ ಒಂದಾದ ಮೇಲೊಂದರಂತೆ ಅಸ್ತ್ರವನ್ನು ಪ್ರಯೋಗಿಸುತ್ತಿದ್ದರೂ ಬಿಜೆಪಿ ಅದನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸದೇ ರಕ್ಷಣಾತ್ಮಕವಾಗಿ ಮುಂದುವರಿ ಯುತ್ತಿದ್ದುದನ್ನು ಗಮನಿಸಿದಾಗ ಅದು ಸೋಲು ಒಪ್ಪಿಕೊಳ್ಳುತ್ತದೆಯೇ ಎಂಬ ಅನುಮಾನವೂ ಮೂಡಿತ್ತು.

ಅದರ ಮಧ್ಯೆಯೂ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್ ಶಾ ಅವರಂತಹ ಚಾಣಾಕ್ಷರಿರುವಾಗ ಬಿಜೆಪಿ ಅಷ್ಟು ಸುಲಭವಾಗಿ ಬಗ್ಗುವುದಿಲ್ಲ ಎಂಬ ನಂಬಿಕೆಯೂ ಇತ್ತು. ಇದೀಗ ಆ ನಂಬಿಕೆ ನಿಜವಾಗಿದೆ. ಕಾಂಗ್ರೆಸ್ ಪುಂಖಾನುಪುಂಖವಾಗಿ ತನ್ನ ವಿರುದ್ಧ ಅಸಗಳನ್ನು ಪ್ರಯೋಗಿಸುತ್ತಿದ್ದರೂ ಸುಮ್ಮನಿದ್ದ ಬಿಜೆಪಿಯ ಆ ಮೌನದ ಹಿಂದೆ ದೊಡ್ಡ ಸ್ಫೋವೇ ಇತ್ತು ಎಂಬು
ದು ಈಗ ಜಾಹೀರಾಗಿದೆ. ಮತ್ತೊಂದೆಡೆ ಓವರ್ ಸ್ಪೀಡ್‌ನಲ್ಲಿದ್ದ ಕಾಂಗ್ರೆಸ್ ರಕ್ಷಣಾತ್ಮಕ ಹಂತಕ್ಕೆ ಇಳಿಯುವಂತಾಗಿದೆ.

ರಾಜ್ಯ ಬಿಜೆಪಿ ಸರಕಾರದ ವಿರುದ್ಧ ೪೦ ಪರ್ಸೆಂಟ್ ಕಮಿಷನ್ ಆರೋಪ, ಪೇ ಸಿಎಂ ಅಭಿಯಾನ, ಬೆಂಗಳೂರಿನಲ್ಲಿ ಚಿಲುಮೆ ಸಂಸ್ಥೆಯಿಂದ ಮತದಾರರ ಮಾಹಿತಿ ಕಳ್ಳತನ… ಹೀಗೆ ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ಸರಕಾರದ ವಿರುದ್ಧ ಕಾಂಗ್ರೆಸ್ ಭಾರೀ ಹೋರಾಟ ನಡೆಸಿತ್ತು. ಇದರ ನಡುವೆ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗುವಾಗ ಎಲ್ಲವನ್ನೂ ಇಟ್ಟುಕೊಂಡು ಸದನದಲ್ಲಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬಹುದು ಎಂದು ಭಾವಿಸಲಾಗಿತ್ತು.

ಇದರ ಜತೆಗೆ ಕಬ್ಬು ಬೆಳೆಗಾರರ ಸಮಸ್ಯೆ, ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಮುಂತಾದ ವಿಷಯಗಳು ಕಾಂಗ್ರೆಸ್ ಮುಂದಿತ್ತು. ಆದರೆ, ಯಾವುದನ್ನೂ ಪಕ್ಷ ಗಂಭೀರವಾಗಿ ತೆಗೆದುಕೊಳ್ಳಲೇ ಇಲ್ಲ. ಕೇವಲ ನೆಪಮಾತ್ರ ಎನ್ನುವಂತೆ ಅಧಿವೇಶನ ದಲ್ಲಿ ಭಾಗವಹಿಸಿತ್ತು. ಕಾಂಗ್ರೆಸನ್ನು ಕೆಣಕಲೆಂದೇ ಬಿಜೆಪಿ ಸರಕಾರ ಸುವರ್ಣ ಸೌಧದ ವಿಧಾನಸಭೆ ಸಭಾಂಗಣ ದಲ್ಲಿ ವೀರ್ ಸಾವರ್ಕರ್ ಭಾವಚಿತ್ರ ಅನಾವರಣಗೊಳಿಸಿತ್ತು. ಇದೇ ಕೆಲ ತಿಂಗಳ ಹಿಂದೆ ಆಗಿದ್ದರೆ ಕಾಂಗ್ರೆಸ್ ಬೆಂಕಿ ಯಾಗುತ್ತಿತ್ತು.

ಸರಕಾರದ ವಿರುದ್ಧ ಪ್ರತಿಭಟನೆ, ಗದ್ದಲ ಮಾಡಿ ರಾಡಿ ಎಬ್ಬಿಸುತ್ತಿತ್ತು. ಆದರೆ, ಭಾವನಾತ್ಮಕ ವಿಚಾರದಲ್ಲಿ ಹಿಂದುತ್ವಕ್ಕೆ ವಿರುದ್ಧವಾಗಿ ಹೋದರೆ ರಾಜಕೀಯವಾಗಿ ಏನು ಹಿನ್ನಡೆಯಾಗುತ್ತದೆ ಎಂಬ ತನ್ನ ಹಿಂದಿನ ಅನುಭವಗಳಿಂದ ಪಾಠ ಕಲಿತ ಕಾಂಗ್ರೆಸ್ ಅದನ್ನು ದೊಡ್ಡ ವಿಷಯ ಮಾಡಲೇ ಇಲ್ಲ. ಅದೇ ರೀತಿ ಮಂಗಳೂರಿನ ಕುಕ್ಕರ್ ಬಾಂಬ್ ಸ್ಫೋದ ಆರೋಪಿ
ಕುರಿತಂತೆ ಬಿಜೆಪಿಯ ಸಿ.ಟಿ.ರವಿ ವಿಷಯ ಪ್ರಸ್ತಾಪಿಸಿ ಕಾಂಗ್ರೆಸ್ ಅಧ್ಯಕ್ಷರ ವಿರುದ್ಧ ಹರಿಹಾಯ್ದರೂ ಕಾಂಗ್ರೆಸ್ ಮೌನದ ಮೂಲಕ ರಕ್ಷಣಾತ್ಮಕ ಆಟವಾಡಿತು. ಇದರ ಪರಿಣಾಮ ವಿಧಾನಮಂಡಲ ಅಽವೇಶನ ಹೆಚ್ಚು ಗದ್ದಲವಿಲ್ಲದೆ, ನೀರಸವಾಗಿ ಮುಕ್ತಾಯಗೊಳ್ಳುವಂತಾಯಿತು.

ಇದೀಗ ವಿಧಾನಸಭೆಯ ಹೊರಗೆ ಜಂಟಿ ಯಾತ್ರೆ ಮೂಲಕ ಬಿಜೆಪಿ ಸರಕಾರದ ವಿರುದ್ಧ ಹೋರಾಟಕ್ಕೆ ಇಳಿದಿದೆ. ಆದರೆ,
ಅದಕ್ಕೆ ಮುನ್ನವೇ ಬಿಜೆಪಿ ಆಡಳಿತ ವಿರೋಧಿ ಅಲೆ ಮೂಡಿಸುವ ಕಾಂಗ್ರೆಸ್ ಪ್ರಯತ್ನ ಯಶಸ್ವಿಯಾಗದಂತೆ ತಡೆಗೋಡೆ ನಿರ್ಮಿಸಿಕೊಂಡು ಬಿಟ್ಟಿದೆ. ಅದೂ ಪ್ರಬಲ ಸಮುದಾಯಗಳ ಮೀಸಲು ಮತ್ತು ಉತ್ತರ ಕರ್ನಾಟಕ ಭಾಗದ ಜನರ ಬಹುವರ್ಷ ಗಳ ಬೇಡಿಕೆಗಳನ್ನು ಈಡೇರಿಸುವ ಮೂಲಕ. ಮೀಸಲು ವಿಚಾರದಲ್ಲಿ ನಿರ್ಧಾರ ಕೈಗೊಂಡಿರುವುದು ರಾಜ್ಯ ಸರಕಾರವೇ ಇರಬಹುದು, ಆದರೆ, ಪಕ್ಷದ ವರಿಷ್ಠರ ಸಮ್ಮತಿ ಇಲ್ಲದೆ, ಅವರ ಸಹಯ ಇಲ್ಲದೆ ಇಂತಹ ಮಹತ್ವದ ನಿರ್ಧಾರ ಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತಿರಲಿಲ್ಲ.

ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲು ವಿಚಾರವನ್ನೇ ತೆಗೆದುಕೊಳ್ಳೋಣ. ಒಟ್ಟಾರೆ ಮೀಸಲು ಪ್ರಮಾಣ ಶೇ. ೫೦
ಮೀರುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಆದರೂ ಅದನ್ನು ಮೀರಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲನ್ನು ಒಟ್ಟಾರೆ ಶೇ. ೬ರಷ್ಟು ಹೆಚ್ಚಿಸುವ ನಿರ್ಣಯ ಕೈಗೊಂಡಿರುವ ರಾಜ್ಯದ ಬಿಜೆಪಿ ಸರಕಾರ, ಒಟ್ಟು ಮೀಸಲು ಪ್ರಮಾಣವನ್ನು ಶೇ. ೫೬ಕ್ಕೆ ಹೆಚ್ಚಿಸಿದೆ. ಆದರೆ, ಇದು ಜಾರಿಯಾಗಬೇಕಾದರೆ ಸಂವಿಧಾನದ ೯ನೇ ಶೆಡ್ಯೂಲ್ ಗೆ ತಿದ್ದುಪಡಿ ತರಬೇಕು. ಆ ಕೆಲಸವನ್ನು ಕೇಂದ್ರ ಸರಕಾರ ಮಾಡಬೇಕು. ಇಂತಹ ಪರಿಸ್ಥಿತಿಯಲ್ಲಿ ಮೀಸಲು ಹೆಚ್ಚಳದ ನಿರ್ಧಾರ ಕೈಗೊಳ್ಳಬೇಕಾದರೆ ಅದಕ್ಕೆ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷದ ವರಿಷ್ಠರ ಸಮ್ಮತಿ ಬೇಕಾಗುತ್ತದೆ.

ಇದು ಗೊತ್ತಿದ್ದರೂ ಮೀಸಲು ಹೆಚ್ಚಳ ಕುರಿತು ರಾಜ್ಯ ಸರಕಾರ ತೀರ್ಮಾನ ಕೈಗೊಂಡಿದೆ ಎಂದಾದರೆ ಅದರಲ್ಲಿ ಬಜೆಪಿ
ವರಿಷ್ಠರ ತಂತ್ರಗಾರಿಕೆ ಅಡಗಿರುವುದರಲ್ಲಿ ಎರಡು ಮಾತಿಲ್ಲ. ಇನ್ನು ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯ ಮತ್ತು ಒಕ್ಕಲಿಗ ಸಮುದಾಯದವರಿಗೆ ಮೀಸಲು ನೀಡುವ ವಿಚಾರವನ್ನೇ ತೆಗೆದುಕೊಳ್ಳುವುದಾದರೆ ಇಲ್ಲೂ ಬಿಜೆಪಿ ವರಿಷ್ಠರ ಕೈವಾಡ ಇರುವುದು ಸ್ಪಷ್ಟವಾಗುತ್ತದೆ.

ಏಕೆಂದರೆ, ಮೊನ್ನೆ ಮೊನ್ನೆ ದೆಹಲಿಗೆ ಹೋಗಿ ವರಿಷ್ಠರೊಂದಿಗೆ ಮೀಸಲು ಕುರಿತು ಪ್ರಸ್ತಾಪಿಸಿದ್ದ ಮುಖ್ಯಮಂತ್ರಿ ಬಸವರಾಜ
ಬೊಮ್ಮಾಯಿ ಅವರ ಮುಂದೆ ಇದ್ದ ವಿಚಾರ ಪಂಚಮಸಾಲಿ ಸಮುದಾಯಕ್ಕೆ ಮೀಸಲು ಕಲ್ಪಿಸುವುದಷ್ಟೇ ಆಗಿತ್ತು. ೨ಎ
ಪ್ರವರ್ಗದಲ್ಲಿ ಈ ಸಮುದಾಯಕ್ಕೆ ಮೀಸಲು ಸಾಧ್ಯವಿಲ್ಲ ಎಂದು ಹಿಂದುಳಿದ ವರ್ಗದವರ ಆಯೋಗ ಹೇಳಿತ್ತು. ಹೀಗಾಗಿ ಸಮುದಾಯಕ್ಕೆ ಪ್ರತ್ಯೇಕ ಪ್ರವರ್ಗ ಸೃಷ್ಟಿಸುವ ಉದ್ದೇಶ ಇತ್ತಾದರೂ ಆ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಆದರೆ, ದೆಹಲಿಗೆ ಹೋಗಿ ಬಂದ ಮೇಲೆ ಕೈಗೊಂಡ ನಿರ್ಧಾರ ಎಲ್ಲರಿಗೂ ಅಚ್ಚರಿ ಮೂಡಿಸಿತ್ತು. ಪಂಚಮಸಾಲಿ ಸಮುದಾಯದ ಜತೆಗೆ ಒಕ್ಕಲಿಗ ಸಮುದಾಯಕ್ಕೂ ಮೀಸಲು ಕಲ್ಪಿಸುವ ಮಹತ್ವದ ನಿರ್ಧಾರವನ್ನು ಸರಕಾರ ತೆಗೆದುಕೊಂಡಿತ್ತು.

೨ಸಿ ಹಾಗೂ ೨ಡಿ ಪ್ರವರ್ಗವನ್ನು ಸೃಷ್ಟಿಸಿ, ಹಿಂದೆ ೩ಎ ನಲ್ಲಿದ್ದ ಒಕ್ಕಲಿಗರಿಗೆ ೨ ಸಿ ಹಾಗೂ ೩ಬಿ ನಲ್ಲಿದ್ದ ಪಂಚಮಸಾಲಿ ಸಮುದಾಯವನ್ನು ೨ಡಿ ವರ್ಗಕ್ಕೆ ಸೇರಿಸಲು ತೀರ್ಮಾನಿಸಿತು. ವರಿಷ್ಠರ ಕೈವಾಡ ಇಲ್ಲದೇ ಇದ್ದರೆ ಈ ರೀತಿ ಒಂದೇ ಬಾರಿ ಎರಡು ಪ್ರಬಲ ಸಮುದಾಯಗಳಿಗೆ ಮೀಸಲು ನಿಗದಿಪಡಿಸುವ ನಿರ್ಧಾರ ಕೈಗೊಳ್ಳುವ ಧೈರ್ಯವನ್ನು ಸರಕಾರ ತೋರಿಸು ತ್ತಿರಲಿಲ್ಲ. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಬಿಜೆಪಿ, ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿರುವ ಹಳೇ ಮೈಸೂರು ಭಾಗದಲ್ಲಿ ತನ್ನ ಶಕ್ತಿ ಹೆಚ್ಚಿಸಿಕೊಳ್ಳಲು ಮುಂದಾಗಿದೆ. ಅದಕ್ಕಾಗಿಯೇ ಮೀಸಲು ಘೋಷಣೆಯಾದ ಮಾರನೇ ದಿನವೇ ಅಮಿತ್ ಶಾ ಮಂಡ್ಯ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ.

ಅಮಿತ್ ಶಾ ಅವರ ಪ್ರವಾಸವನ್ನು ಗಮನಿಸಿದಾಗ, ಒಕ್ಕಲಿಗರಿಗೆ ಮೀಸಲು ಕಲ್ಪಿಸುವ ಬಗ್ಗೆ ಬಿಜೆಪಿ ವರಿಷ್ಠರು ಮೊದಲೇ ನಿರ್ಧರಿಸಿದ್ದರು ಎಂಬುದು ಗೊತ್ತಾಗುತ್ತದೆ. ಅದೇ ರೀತಿ ಕಳಸಾ ಬಂಡೂರಿ ಯೋಜನೆಗೆ ಕೇಂದ್ರ ಅನುಮೋದನೆ ನೀಡಿರು ವುದು ಕೂಡ ಉತ್ತರ ಕರ್ನಾಟಕ ಭಾಗಕ್ಕೆ ಅತ್ಯಂತ ಪ್ರಮುಖ ವಿಷಯವಾಗಿದೆ. ಎರಡು ದಶಕಕ್ಕೂ ಹೆಚ್ಚು ಸಮಯದಿಂದ ಈ ಯೋಜನೆಗಾಗಿ ಮೂರು ಜಿಲ್ಲೆಗಳ ಜನ ಒತ್ತಾಯಿಸುತ್ತಿದ್ದರು. ಆದರೆ, ಇದೀಗ ಅದಕ್ಕೆ ಮನ್ನಣೆ ಸಿಕ್ಕಿದೆ. ಇದನ್ನೇ ಮುಂದಿಟ್ಟು ಕೊಂಡು ಮುಂಬರುವ ಚುನಾವಣೆಯಲ್ಲಿ ಬಿಜೆಪಿ, ಮಹದಾಯಿಯ ಹನಿ ನೀರನ್ನೂ ಕರ್ನಾಟಕಕ್ಕೆ ಬಿಡುವುದಿಲ್ಲ ಎಂದು ಸೋನಿಯಾ ಗಾಂಧಿ ೨೦೦೭ರಲ್ಲಿ ಗೋವಾದಲ್ಲಿ ನೀಡಿದ್ದ ಹೇಳಿಕೆಯನ್ನು ಮುಂದಿಟ್ಟುಕೊಂಡು ಜನರ ಮುಂದೆ ಹೋಗುವುದು ನಿಶ್ಚಿತ.

ಇದರೊಂದಿಗೆ ಮೀಸಲು ವಿಚಾರದಲ್ಲಿ ಸರಕಾರ ಕೈಗೊಂಡ ತೀರ್ಮಾನಗಳೂ ಅದಕ್ಕೆ ಚುನಾವಣೆಯ ಪ್ರಮುಖ  ವಿಷಯ ವಾಗಿದೆ. ಸಹಜವಾಗಿಯೇ ಇದು ಕಾಂಗ್ರೆಸ್ ಪಾಲಿಗೆ ಬಿಸಿ ತುಪ್ಪವಾಗಬಹುದು. ಸರಕಾರದ ಈ ಎಲ್ಲ ನಿರ್ಧಾರಗಳು ಬಿಜೆಪಿಯ ಚುನಾವಣಾ ರಾಜಕೀಯದ ಒಂದು ಭಾಗವಾಗಿರಬಹುದು. ಆದರೆ, ಅದರಿಂದ ಜನರಿಗೆ ಬಿಜೆಪಿ ಬಗ್ಗೆ ಇರುವ ಅಭಿಪ್ರಾಯ ಬದಲಾಗುವುದಂತೂ ಸಹಜ. ಸರಕಾರದ ನಿರ್ಧಾರದಿಂದ ಸಮಾಧಾನಗೊಂಡಿರುವವರು ಪಕ್ಷವನ್ನು ಬೆಂಬಲಿಸಬಹುದು. ಮತ್ತೊಂದೆಡೆ ಬಿಜೆಪಿ ಅಧಿಕಾರದಲ್ಲಿದ್ದರೆ ಮುಂದೆ ನಮ್ಮ ಬೇಡಿಕೆಗಳನ್ನೂ ಈಡೇರಿಸಬಹುದು ಎಂಬ ವಿಶ್ವಾಸ ಇತರರಿಗೂ ಬರಬಹುದು.

ಏಕೆಂದರೆ, ಮೀಸಲಿಗಾಗಿ ಸಾಕಷ್ಟು ಸಮುದಾಯಗಳು ಕಾಯುತ್ತಿವೆ. ಅದೇ ರೀತಿ ನೀರಾವರಿಗೆ ಸಂಬಂಧಿಸಿದಂತೆ ಮೇಕೆ ದಾಟು, ಕೃಷ್ಣಾ ಮೇಲ್ದಂಡೆ ಯೋಜನೆಗಳು ಇವೆ. ಈ ಭಾಗದ ಜನರಿಗೆ ಮುಂದೆ ತಮ್ಮ ಬೇಡಿಕೆ ಈಡೇರಬಹುದು ಎಂಬ ಭರವಸೆ ಹುಟ್ಟಬಹುದು. ಇದಕ್ಕೇ ಹೇಳುವುದು ಚುನಾವಣೆಯನ್ನು ಹೇಗೆ ಎದುರಿಸುವುದು ಹೇಗೆ ಎಂಬುದನ್ನು ಬಿಜೆಪಿಯನ್ನು
ನೋಡಿ ಕಲಿಯಬೇಕು ಎಂದು.

ಲಾಸ್ಟ್ ಸಿಪ್: ಏನೂ ಮಾಡದೇ ಸುಮ್ಮನಿದ್ದರೂ ಅದರ ಹಿಂದೆ ಮಹತ್ವದ ಉದ್ದೇಶ, ಗುರಿ ಇರುತ್ತದೆ ಎಂದಾದರೆ ಅದು ಬಿಜೆಪಿಯ ರಾಜಕಾರಣ.