Sunday, 23rd June 2024

ಹಲ್ಲಿಲ್ಲದ ಹಾವಿಗೆ ಬೇಕಿದೆ ಬಲ

ಅಶ್ವತ್ಥಕಟ್ಟೆ

ranjith.hoskere@gmail.com

ವಿಶ್ವದಲ್ಲಿಯೇ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿರುವ ಭಾರತ ಮತ್ತೊಂದು ಚುನಾವಣೆಯ ಹೊಸ್ತಿಲಲ್ಲಿದೆ. ಬಿರು ಬೇಸಗೆಯ ನಡುವೆಯೂ ಭರ್ಜರಿ ಮತಬೇಟೆ ನಡೆಯುತ್ತಿದೆ. ದೇಶದ ಅಧಿಕಾರದ ಗದ್ದುಗೆ ಹಿಡಿಯಬೇಕೆಂದು ರಾಜಕೀಯ ಪಕ್ಷಗಳು ಮತ ಸೆಳೆಯುವ ಭರ್ಜರಿ ಪ್ರಚಾರವನ್ನು ದೇಶಾದ್ಯಂತ ನಡೆಸುತ್ತಿದ್ದರೆ, ಚುನಾವಣಾ ಆಯೋಗವು ರಾಜಕೀಯ ಪಕ್ಷಗಳ ರೀತಿಯಲ್ಲಿಯೇ ‘ಮತಜಾಗೃತಿ’ಗೆ ಹತ್ತು ಹಲವು ಕ್ರಮಗಳನ್ನು ಕೈಗೊಂಡಿದೆ. ಕಡ್ಡಾಯ ಮತದಾನ ಎನ್ನುವ ಕಾನೂನು ಭಾರತ ದಲ್ಲಿ ಇಲ್ಲವಾದರೂ, ಗರಿಷ್ಠ ಮತದಾನವಾಗಬೇಕು ಎನ್ನುವುದು ಚುನಾವಣಾ ಆಯೋಗದ ಧ್ಯೇಯವಾಗಿದೆ.

ಪ್ರತಿಬಾರಿಯ ಚುನಾವಣೆಯಲ್ಲಿ ಶೇ.೧೦೦ರಷ್ಟು ಮತದಾನವಾಗಬೇಕು ಎನ್ನುವ ‘ಕನಸನ್ನು’ ಚುನಾವಣಾ ಆಯೋಗ ಹೊಂದಿರು ತ್ತದೆ. ಆದರೆ ನಗರ ಪ್ರದೇಶದಲ್ಲಿ ಈ ಪ್ರಮಾಣ ಶೇ.೭೦ ದಾಟಿದರೆ, ಗ್ರಾಮೀಣ ಪ್ರದೇಶದಲ್ಲಿ ಅದು ಶೇ.೮೦ಕ್ಕೆ ಬಂದು ನಿಂತರೆ ಆ ಚುನಾವಣೆ ಯಶಸ್ವಿ ಎನ್ನುವ ನಿಟ್ಟುಸಿರನ್ನು ಚುನಾವಣಾ ಆಯೋಗದ ಅಧಿಕಾರಿಗಳು ಬಿಡುತ್ತಾರೆ. ಮತದಾನದತ್ತ ನಿರಾಸಕ್ತಿ ವಹಿಸಲು ಒಬ್ಬೊಬ್ಬರು ಒಂದೊಂದು ಕಾರಣ ನೀಡಬಹುದು.

ಆದರೆ ಬಹುಪಾಲು ಮಂದಿ, ‘ಇರುವವರೆಲ್ಲ ಅನರ್ಹ ರಾಗಿರುವಾಗ ನಾವೇಕೆ ಮತ ಚಲಾಯಿಸಬೇಕು?’, ‘ಸ್ಪರ್ಧಿಸಿರುವ ಯಾವೊಬ್ಬ ಅಭ್ಯರ್ಥಿಯ ಬಗ್ಗೆಯೂ ನನಗೆ ಒಲವಿಲ್ಲ. ಹೀಗಿರುವಾಗ ನಾನೇಕೆ ಮತ ಹಾಕಬೇಕು?’, ‘ಅರ್ಹರಲ್ಲದ ಅಭ್ಯರ್ಥಿಗೆ ನನ್ನ ಮತವನ್ನು ಹಾಕುವ ಮೂಲಕ ಮನಸ್ಸಾಕ್ಷಿಗೆ ವಿರುದ್ಧವಾಗಿ ಏಕೆ ನಡೆದುಕೊಳ್ಳಬೇಕು?’ ಎನ್ನುವ ಮನಸ್ಥಿತಿಯಿಂದ ಮತದಾನದಿಂದ ದೂರ ಉಳಿಯುತ್ತಾರೆ. ಈ ಕಾರಣಕ್ಕಾಗಿಯೇ ೨೦೦೯ರಲ್ಲಿ ಚುನಾವಣಾ ಆಯೋಗ ‘ನೋಟಾ’ (ಮೇಲಿನ ಯಾರೂ ಅಲ್ಲ) ಎಂಬ ಹೊಸ ಅವಕಾಶವನ್ನು ನೀಡಬೇಕು ಎಂದು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು.

ಆರಂಭದಲ್ಲಿ ಇದಕ್ಕೆ ಸರಕಾರ ವಿರೋಧಿಸಿತ್ತು. ಆದರೆ ಸುಪ್ರೀಂ ಕೋರ್ಟ್ ಸೂಚನೆಯ ಮೇಲೆ ೨೦೧೩ರಿಂದ ದೇಶಾದ್ಯಂತ ‘ನೋಟಾ’ ಎನ್ನುವ ಅವಕಾಶವನ್ನು ಕಲ್ಪಿಸಿತ್ತು. ಹಾಗೆ ನೋಡಿದರೆ, ೨೦೧೩ರ ಬಳಿಕವೇ ಮತವನ್ನು ತಿರಸ್ಕರಿಸುವ ವ್ಯವಸ್ಥೆ ಜಾರಿಗೆ ಬಂತು ಎಂದೇನಿಲ್ಲ. ಅದಕ್ಕೂ ಮೊದಲು ಯಾವುದೇ ವ್ಯಕ್ತಿಗೆ ಮತಗಟ್ಟೆ ಹೋಗಿ, ಅಲ್ಲಿ ತನ್ನ ಮತವನ್ನು ಯಾರಿಗೂ ಹಾಕುವುದಿಲ್ಲ ಎಂದು ‘ಮತ ತಿರಸ್ಕರಿಸುವ’ ಅವಕಾಶವಿತ್ತು. ಆದರೆ ಅದನ್ನು ಮಾಡಲು ಮತಗಟ್ಟೆ ಅಧಿಕಾರಿಯ ಬಳಿ ಪ್ರತ್ಯೇಕ ನಮೂನೆ ಪಡೆಯಬೇಕಿತ್ತು. ಈ ಬಗ್ಗೆ ಅನೇಕರಿಗೆ ಮಾಹಿತಿಯಿರಲಿಲ್ಲ. ಇದ್ದರೂ, ಈ ಎಲ್ಲ ‘ರಗಳೆ’ ಏಕೆಂದು ತೋಚಿದವರಿಗೆ ಮತವೊತ್ತಿ ಬರುತ್ತಿದ್ದರು. ಆದರೆ ೨೦೧೩ರಲ್ಲಿ ಸುಪ್ರೀಂ ಕೋರ್ಟ್ ಸೂಚನೆಯ ಬಳಿಕ ಬ್ಯಾಲೆಟ್‌ನಲ್ಲಿಯೇ ‘ನೋಟಾ’ಕ್ಕೆ ಸ್ಥಾನವನ್ನು ನೀಡಲಾಗಿತ್ತು.

ಆರಂಭದಲ್ಲಿ ದೇಶದ ಚುನಾವಣಾ ವ್ಯವಸ್ಥೆಯಲ್ಲಿ ನೋಟಾ ಬಹುದೊಡ್ಡ ಕ್ರಾಂತಿಯನ್ನೇ ಸೃಷ್ಟಿಸಲಿದೆ ಎನ್ನುವ ಭಾವನೆ ಅನೇಕರಲ್ಲಿತ್ತು. ಯಾರೂ ಅರ್ಹರಲ್ಲದಿದ್ದರೆ, ನೋಟಾವನ್ನೇ ಚಲಾಯಿಸಬಹುದು ಎನ್ನುವ ಲೆಕ್ಕಾಚಾರವೂ ಅನೇಕರಲ್ಲಿತ್ತು.
ಆದರೆ ನೋಟಾ ಚಲಾವಣೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅದು ‘ಹಲ್ಲಿಲ್ಲದ ಹಾವು’ ಎನ್ನುವುದು ಸ್ಪಷ್ಟವಾಗುತ್ತದೆ. ಮತದಾರನಿಗೆ ತನ್ನ ಕ್ಷೇತ್ರದ ಯಾವುದೇ ಅಭ್ಯರ್ಥಿಯ ಮೇಲೆ ನಂಬಿಕೆಯಿಲ್ಲದಿದ್ದರೆ, ತನ್ನನ್ನು ಪ್ರತಿನಿಧಿಸಲು ಆತ ಯೋಗ್ಯನಲ್ಲ ಎನಿಸಿದರೆ, ನೋಟಾ ಒತ್ತಿದರೆ ಆಯಿತು ಎನ್ನುವ ಮಾತುಗಳನ್ನು ಆಡುತ್ತಿದ್ದರು.

ಈಗಲೂ ಅನೇಕರು ತಮ್ಮ ಕ್ಷೇತ್ರದ ಅಭ್ಯರ್ಥಿಗಳನ್ನು ನೋಡಿ ನೋಟಾ ಚಲಾಯಿಸುವುದೇ ಲೇಸು ಎನ್ನುವ  ಮನಸ್ಥಿತಿ ಯಲ್ಲಿದ್ದಾರೆ. ಆದರೆ ಇಲ್ಲಿ ಗಮನಿಸಬೇಕಿರುವ ಪ್ರಮುಖ ಅಂಶವೆಂದರೆ, ನೋಟಾ ಚಲಾಯಿಸುವುದರಿಂದ ಆಗುವ ಬದಲಾವಣೆ ಏನು ಎನ್ನುವುದು. ಯಾವುದೇ ಕ್ಷೇತ್ರದಲ್ಲಿ ನೋಟಾ ಚಲಾಯಿಸಿದರೆ, ಅದು ‘ರಿಜಿಸ್ಟರ್’ ಆಗುತ್ತದೆ. ಅದನ್ನು ತಿರಸ್ಕೃತ
ಮತವೆಂದೇ ಪರಿಗಣಿಸಲಾಗುತ್ತದೆ. ಆದರೆ ಅದು ಅಭ್ಯರ್ಥಿಗಳ ಅನರ್ಹತೆ ಅಥವಾ ಮರುಚುನಾವಣೆಗೆ ಸಹಕಾರಿಯಾಗುವುದಿಲ್ಲ. ಈ ಹಿಂದೆ ಚುನಾವಣಾ ಆಯೋಗದ ಆಯುಕ್ತರಾಗಿದ್ದ ಎಸ್.ವೈ. ಖುರೇಷಿ ಅವರೇ ಹೇಳುವಂತೆ, ‘೧೦೦ ಮತದಾರರಲ್ಲಿ ೯೯ ಮಂದಿ ನೋಟಾವನ್ನು ಚಲಾಯಿಸಿ, ಒಬ್ಬರೇ ಒಬ್ಬರು ಯಾವುದೋ ಒಬ್ಬ ಅಭ್ಯರ್ಥಿಗೆ ಮತ ನೀಡಿದರೆ ಆ ಅಭ್ಯರ್ಥಿಯೇ ವಿಜೇತನಾಗುತ್ತಾನೆ.

ಯಾವುದೋ ಒಬ್ಬ ಅಭ್ಯರ್ಥಿಗೆ ಹಾಕಿರುವ ಮತವೊಂದೇ ಅರ್ಹವಾಗಿ, ಇನ್ನುಳಿದ ೯೯ ಮತಗಳು ಅನರ್ಹವಾಗುತ್ತವೆ’ ಎಂದಿ ದ್ದರು. ಅಂದರೆ ನೂರು ಜನರಲ್ಲಿ ೯೯ ಮಂದಿಯ ತೀರ್ಮಾನಕ್ಕಿಂತ, ಒಬ್ಬ ವ್ಯಕ್ತಿ ಯಾರಿಗೆ ಮತ ಹಾಕುವನೋ ಆ ಅಭ್ಯರ್ಥಿ ಯನ್ನು ವಿಜೇತನೆಂದು ಘೋಷಿಸಲಾಗುತ್ತದೆ. ರಾಜಕೀಯ ವಿಶ್ಲೇಷಕರ ಪ್ರಕಾರ ನೋಟಾದ ಪ್ರಕ್ರಿಯೆಯಲ್ಲಿರುವ ಬಹುದೊಡ್ಡ ‘ಲೂಪ್ ಹೋಲ್’ ಇದೇ ಆಗಿದೆ. ಅಭ್ಯರ್ಥಿಯ ಬಗ್ಗೆ ಅಸಹನೆಯಿಂದ ಮತದಾರರು ಮೇಲಿನ ಯಾರೂ ಸರಿಯಿಲ್ಲ ಎನ್ನುವ ತೀರ್ಮಾನ ಕೊಟ್ಟರೂ ಅದು ಅರ್ಹವಾಗದೇ, ಬಾಕಿಯಿರುವಷ್ಟು ಮಂದಿ ಯಾರಿಗೆ ಮತ ನೀಡಿರುವರೋ ಅವರು ವಿಜೇತ ಎನ್ನುವುದು ಎಷ್ಟು ಸರಿ ಎನ್ನುವುದು ಹಲವರ ವಾದವಾಗಿದೆ.

ಹಾಗೆಂದ ಮಾತ್ರಕ್ಕೆ ನೋಟಾಕ್ಕೆ ಹೆಚ್ಚು ಮಾನ್ಯತೆ ಸಿಗುತ್ತಿಲ್ಲವೆಂದೇನಿಲ್ಲ. ೨೦೧೪ರ ಲೋಕಸಭಾ ಚುನಾವಣೆಗೆ ಹೋಲಿಸಿದರೆ ೨೦೧೯ರ ವೇಳೆಗೆ ನೋಟಾ ಚಲಾವಣೆಯ ಸಂಖ್ಯೆ ದೇಶದಲ್ಲಿ ಹೆಚ್ಚಿದೆ. ೨೦೧೪ರಲ್ಲಿ ಒಟ್ಟು ಮತದಾರರ ಶೇ.೧.೦೬ರಷ್ಟು ಮಂದಿ ನೋಟಾವನ್ನು ಆರಿಸಿಕೊಂಡಿದ್ದರು. ಅದೇ ೨೦೧೯ರ ವೇಳೆಗೆ ಇದು ಶೇ.೧.೦೮ಕ್ಕೆ ಹೆಚ್ಚಾಯಿತು. ಅದರಲ್ಲಿಯೂ ಬಿಹಾರದಲ್ಲಿ ಶೇಕಡ ಎರಡರಷ್ಟು ಮತದಾರರು ನೋಟಾವನ್ನೇ ಆರಿಸಿಕೊಂಡಿದ್ದರಿಂದ ಹಲವು ಅಭ್ಯರ್ಥಿಗಳು ಸೋಲನುಭವಿಸಬೇಕಾಯಿತು. ಇದರೊಂದಿಗೆ ೨೦೧೪ರಲ್ಲಿ ನೋಟಾ ಪ್ರಮಾಣ ಎಲ್ಲೆಲ್ಲಿ ಹೆಚ್ಚಾಗಿತ್ತೋ, ೨೦೧೯ರಲ್ಲಿ ಆಯಾ ಕ್ಷೇತ್ರಗಳಲ್ಲಿ ಮತ್ತಷ್ಟು ಹೆಚ್ಚಾಗಿದೆ ಎನ್ನುವುದು ಅಂಕಿ-ಅಂಶಗಳಲ್ಲಿ ಸ್ಪಷ್ಟವಾಗಿದೆ.

ಅಂದರೆ, ಅಭ್ಯ ರ್ಥಿಗಳ ಅರ್ಹತೆ-ಅನರ್ಹತೆಯ ವಿಷಯದಲ್ಲಿ ನೋಟಾ ಯಾವುದೇ ಪರಿಣಾಮ ಬೀರದಿದ್ದರೂ, ಸ್ಪರ್ಧಿಸಿರು ವವರ ಬಗ್ಗೆ ಸ್ಥಳೀಯ ಮತದಾರರಿಗೆ ಇರುವ ‘ಸಿಟ್ಟನ್ನು’ ಹೊರಹಾಕಲು ಒಂದು ವೇದಿಕೆಯಾಗಿದೆ ಎನ್ನುವುದಂತೂ ಸ್ಪಷ್ಟ.
ಇನ್ನು ಕರ್ನಾಟಕದ ಮಟ್ಟಿಗೆ ನೋಡುವುದಾದರೆ, ೨೮ ಕ್ಷೇತ್ರಗಳಲ್ಲಿ ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ೩.೪೮ ಕೋಟಿ ಚಿಲ್ಲರೆ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದರು. ಇದರಲ್ಲಿ ೨,೫೦,೮೧೦ ಲಕ್ಷ ಮತದಾರರು ನೋಟಾವನ್ನು ಬಳಸಿಕೊಂಡು, ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು.

ಪ್ರತಿಕ್ಷೇತ್ರದಲ್ಲಿ ಸರಾಸರಿ ಎರಡರಿಂದ ಮೂರು ಸಾವಿರ ಮತದಾರರು ನೋಟಾ ಹಕ್ಕನ್ನು ಬಳಸಿಕೊಂಡಿದ್ದರು. ಚಾಮರಾಜ ನಗರದಲ್ಲಿ ಕೇವಲ ೧,೮೧೭ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದ ಶ್ರೀನಿವಾಸ್ ಪ್ರಸಾದ್ ಅವರಿಗೆ ಈ ನೋಟಾ ಮತಗಳು ವರವಾಗಿ ಪರಿಣ ಮಿಸಿದ್ದವು ಎಂದರೆ ತಪ್ಪಾಗುವುದಿಲ್ಲ. ಮತ್ತೊಂದು ಸ್ವಾರಸ್ಯಕರ ಘಟನೆಯೆಂದರೆ, ಕಳೆದ ಲೋಕಸಭಾ
ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಎಸ್‌ಪಿ, ಸಿಪಿಎಂನಂಥ ರಾಷ್ಟ್ರೀಯ ಪಕ್ಷಗಳು ಪಡೆದ ಮತಗಳಿಗಿಂತ ನೋಟಾಕ್ಕೆ
ರಿಜಿಸ್ಟರ್ ಆದ ಮತಗಳೇ ಹೆಚ್ಚಾಗಿತ್ತು!

೨೦೧೮ರಲ್ಲಿ ಕರ್ನಾಟಕದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ನೋಟಾ ೧೫ರಿಂದ ೨೦ ಅಭ್ಯರ್ಥಿಗಳ ಸೋಲಿಗೆ ನೇರ ಕಾರಣವಾಗಿತ್ತು. ಮಸ್ಕಿಯಲ್ಲಿ ೨೧೩ ಮತಗಳ ಅಂತರದಲ್ಲಿ ಸೋತ ಬಸನಗೌಡ ತುರುವಿನಾಳ್, ಹಿರೇಕೆರೂರಿನಲ್ಲಿ ೫೫೫ ಮತಗಳಿಂದ ಸೋತ ಯು.ಬಿ. ಬಣಕಾರ್, ಪಾವಗಡದಲ್ಲಿ ೪೦೯ ಮತಗಳಿಂದ ಸೋತ ತಿಮ್ಮರಾಯಪ್ಪ, ೬೩೪ ಅಂತರದಿಂದ ಕುಂದಗೋಳದಲ್ಲಿ ಸೋತ ಚಿಕ್ಕನಗೌಡರ್ ಅವರಿಗೆ ಒಂದು ವೇಳೆ ಚಲಾವಣೆಯಾದ ನೋಟಾದ ಅರ್ಧದಷ್ಟು ಮತಗಳು
ಸಿಕ್ಕಿದ್ದರೂ, ಸುಲಭವಾಗಿ ಗೆಲುವು ಸಾಧಿಸುತ್ತಿದ್ದರು.

ಒಟ್ಟು ಚಲಾವಣೆಯಾದ ಮತಗಳಲ್ಲಿ ೩,೨೨,೪೮೧ ಮತಗಳು ನೋಟಾಕ್ಕೆ ಬಿದ್ದಿದ್ದರಿಂದ ಅನೇಕರ ಅದೃಷ್ಟ ತಲೆಕೆಳಗಾಗಿತ್ತು.
ಹೀಗೆ ಪ್ರತ್ಯಕ್ಷವಾಗಿ, ನೋಟಾ ಎನ್ನುವುದು ಹಲ್ಲಿಲ್ಲದ ಹಾವಾಗಿದ್ದರೂ, ಇನ್ನೊಬ್ಬರನ್ನು ಸೋಲಿಸುವಲ್ಲಿ ನೋಟಾ ಬಹುದೊಡ್ಡ ಪಾತ್ರವಹಿಸುತ್ತದೆ. ಇದರೊಂದಿಗೆ ಅಭ್ಯರ್ಥಿಗಳ ವಿಷಯದಲ್ಲಿ ಅಸಮಾಧಾನವಿದ್ದರೂ, ಮತದಾನದ ಹಕ್ಕನ್ನು ತಪ್ಪಿಸಲು ಇಷ್ಟವಿರದವರಿಗೆ ನೋಟಾದ ಅವಕಾಶ ಬಳಸಿಕೊಂಡು ತಮ್ಮ ಅತೃಪ್ತಿ ಬಹಿರಂಗಪಡಿಸುವುದರೊಂದಿಗೆ, ತಮ್ಮ ಹಕ್ಕನ್ನು ಬಳಸಿಕೊಳ್ಳಲು ಅವಕಾಶ ಸಿಕ್ಕಿದೆ.

ನೋಟಾ ವಿಷಯದಲ್ಲಿ ಬಹುಜನರ ಬೇಡಿಕೆಯೆಂದರೆ, ಯಾವುದೇ ಒಂದು ಕ್ಷೇತ್ರದಲ್ಲಿ ಇಂತಿಷ್ಟು ಪ್ರಮಾಣಕ್ಕಿಂತ ಹೆಚ್ಚು ನೋಟಾ ಮತದಾನವಾದರೆ, ಅಂಥ ಕ್ಷೇತ್ರದಲ್ಲಿ ಮರುಚುನಾವಣೆ ನಡೆಸಬೇಕು. ಮರುಚುನಾವಣೆಯಲ್ಲಿ ಈಗಾಗಲೇ ಸ್ಪರ್ಧಿಸಿ ರುವ ಅಭ್ಯರ್ಥಿಗಳ ಬದಲಿಗೆ ಬೇರೆಯವರು ಸ್ಪರ್ಧಿಸುವಂಥ ಕಾನೂನು ಜಾರಿಗೊಳಿಸಬೇಕು. ಇಂಥ ಕಾನೂನು ಜಾರಿಯಾದಾಗ ಮಾತ್ರ, ನೋಟಾದ ಬಟನ್‌ಗೆ ಅಭ್ಯರ್ಥಿಗಳು ಅಂಜುತ್ತಾರೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಅಭ್ಯರ್ಥಿ ಪಡೆದಿರುವ ಮತಕ್ಕಿಂತ ಹೆಚ್ಚು ಮತಗಳು ನೋಟಾಗೆ ಬಿದ್ದರೂ, ಅದರ ಪರಿಣಾಮ ಚುನಾವಣಾ ಫಲಿತಾಂಶದ ಮೇಲಾಗುವುದಿಲ್ಲ.

ಆದ್ದರಿಂದ ಫಲಿತಾಂಶದ ಮೇಲೆ ಪರಿಣಾಮ ಬೀರುವಂತೆ ಮಾಡಬೇಕಿದೆ ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ. ಆದರೆ ನೋಟಾ ಜಾರಿಗೆ ಬಹುತೇಕ ಪಕ್ಷಗಳು ಅಡ್ಡಗಾಲು ಹಾಕಿದ್ದವು. ಇದೀಗ ಇಂಥ ನಿಯಮವನ್ನು ಜಾರಿಗೊಳಿಸಲು ಚುನಾವಣಾ ಆಯೋಗ ಕಾನೂನು ತರಲು ಮುಂದಾದರೆ, ಯಾವ ಪಕ್ಷವೂ ಇದನ್ನು ಬೆಂಬಲಿಸುವುದಿಲ್ಲ ಎನ್ನುವುದು ಸ್ಪಷ್ಟ. ಒಂದು ವೇಳೆ ಈ ರೀತಿಯ ಕಾನೂನು ಜಾರಿಯಾದರೆ, ಹಲವು ಕ್ಷೇತ್ರಗಳಲ್ಲಿ ಭವಿಷ್ಯದಲ್ಲಿ ಮರುಚುನಾವಣೆಯಾಗುವುದು ಬಹುತೇಕ ನಿಶ್ಚಿತ. ಈ ವಿಷಯವನ್ನು ರಾಜಕೀಯ ಪಕ್ಷಗಳು ಒಪ್ಪದೇ ಇರಬಹುದು. ಆದರೆ ಈಗಿರುವ ಪದ್ಧತಿಗೆ ಇನ್ನಷ್ಟು ‘ಒತ್ತು’ ನೀಡಿ ನೋಟಾ ಎನ್ನುವುದನ್ನು ಬಲಿಷ್ಠಗೊಳಿಸಬೇಕಿದೆ.

ಏಕೆಂದರೆ, ಚುನಾವಣಾ ಆಯೋಗದಿಂದ ಯಾವುದೇ ನಿಯಮ ಜಾರಿಗೊಳಿಸಿದರೂ, ಅದು ಅಭ್ಯರ್ಥಿಯ ಗೆಲುವು, ಸೋಲಿನ ಮೇಲೆ ನೇರ ಪರಿಣಾಮ ಬೀರದ ಹೊರತು, ಅದರ ಬಗ್ಗೆ ಯಾವುದೇ ರಾಜಕೀಯ ಪಕ್ಷಗಳು ಬಹುದೊಡ್ಡ ಪ್ರಮಾಣದಲ್ಲಿ ಚಿಂತಿಸು ತ್ತವೆ ಎನ್ನಲು ಆಗುವುದಿಲ್ಲ. ಆದ್ದರಿಂದ ಜಾರಿಯಲ್ಲಿರುವ ‘ನೋಟಾ’ ಎನ್ನುವ ಹಲ್ಲಿಲ್ಲದ ಹಾವನ್ನು ಶಕ್ತಿಯುತ ಗೊಳಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಮುಂದಾಗಬೇಕಿದೆ. ಚುನಾವಣಾ ಪ್ರಕ್ರಿಯೆಯಲ್ಲಿ ಈಗಾಗಲೇ ಹತ್ತಾರು ಬದಲಾವಣೆ ತಂದಿರುವ ಆಯೋಗವು, ನೋಟಾವನ್ನು ಇನ್ನಷ್ಟು ಶಕ್ತಿಯುತಗೊಳಿಸುವ ನಿಟ್ಟಿನಲ್ಲಿ ಗಮನಹರಿಸಬೇಕಿದೆ.

ಅತಿಹೆಚ್ಚು ನೋಟಾ ಬಿದ್ದರೆ ಮರುಚುನಾವಣೆಯ ಪ್ರಸ್ತಾಪಕ್ಕೆ ಬಹುತೇಕ ಪಕ್ಷಗಳು ವಿರೋಽಸುವುದು ನಿಶ್ಚಿತ. ಆದರೆ ಇದನ್ನು ಮೀರಿ, ನೋಟಾ ಎನ್ನುವ ಕಾನೂನಿಗೆ ಒಂದಷ್ಟು ಶಕ್ತಿ ನೀಡುವ ಕೆಲಸವಾಗಲೇಬೇಕು. ಇಲ್ಲದಿದ್ದರೆ, ನೂರರಲ್ಲಿ ೯೦ ಮಂದಿ
ನೋಟಾ ಚಲಾಯಿಸಿದರೂ, ರಾಜಕೀಯ ಪಕ್ಷಗಳು, ಅಭ್ಯರ್ಥಿಗಳೇನು ತಲೆಕೆಡಿಸಿಕೊಳ್ಳುವ ಗೋಜಿಗೆ ಹೋಗುವುದಿಲ್ಲ ಎನ್ನು ವುದು ವಾಸ್ತವ.

Leave a Reply

Your email address will not be published. Required fields are marked *

error: Content is protected !!