Sunday, 8th September 2024

ಜೋಡಿಸಬೇಕಿದ್ದ ಭಾರತ್‌ ಜೋಡೋದಲ್ಲೇ ಒಡಕು

ಅಶ್ವತ್ಥಕಟ್ಟೆ

ranjith.hoskere@gmail.com

ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರಿಬ್ಬರೂ ಒಂದಾಗಿ ಹೋದರೆ ಮಾತ್ರ ಮುಂದಿನ ಚುನಾವಣೆಯಲ್ಲಿ, ಭಾರತ್ ಜೋಡೋ ಯಾತ್ರೆಯಿಂದ ಲಾಭವಾಗಲಿದೆ ಹೊರತು, ಇಬ್ಬರು ಒಂದಾಗದಿದ್ದರೆ ಬಿಜೆಪಿಗೆ ಇದರ ಲಾಭವಾಗಲಿದೆ ಎನ್ನುವು ದನ್ನು ಮರೆಯುವಂತಿಲ್ಲ.

ಲೋಕಸಭಾ ಚುನಾವಣೆಗೆ ಈಗಿನಿಂದಲೇ ತಯಾರಿ ಆರಂಭಿಸಿರುವ ‘ಭಾರತ್ ಜೋಡೋ’ ಯಾತ್ರೆಗೆ ಭರ್ಜರಿಯಾಗಿಯೇ ಕಾಂಗ್ರೆಸ್ ಚಾಲನೆ ನೀಡಿದೆ. ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ನೇತೃತ್ವದಲ್ಲಿ ತಮಿಳುನಾಡಿ ನಲ್ಲಿ ಆರಂಭವಾಗಿರುವ ಯಾತ್ರೆ, ತಮಿಳುನಾಡಿನಿಂದ ಕೇರಳದತ್ತ ಬಂದಿದೆ. ಕೆಲವೇ ದಿನದಲ್ಲಿ ಕರ್ನಾಟಕಕ್ಕೆ ಕಾಲಿಡುವ ಸಮಯದಲ್ಲಿ ರಾಜ್ಯ ಕಾಂಗ್ರೆಸ್‌ ನಲ್ಲಿನ ಆಂತರಿಕ ಬೇಗುದಿಯ ತಿಕ್ಕಾಟ ಬಹಿರಂಗವಾಗಿರುವುದು ಕಾಂಗ್ರೆಸ್‌ಗೆ ಭಾರಿ ಹಿನ್ನಡೆಯಾಗುವ ಆತಂಕ ಶುರುವಾಗಿದೆ.

ಹೌದು, ಕಾಂಗ್ರೆಸ್ ಸಂಘಟನೆಯಲ್ಲಿ ಆಗಿರುವ ಸಡಿಲಿಕೆಯನ್ನು ಗಟ್ಟಿಗೊಳಿಸಿ ಕೊಂಡು ಮತ್ತೆ ಕಳೆದುಕೊಂಡಿರುವ ಅಧಿಕಾರ ವನ್ನು ವಾಪಸು ಪಡೆಯ ಬೇಕು ಎನ್ನುವ ಮಹತ್ವಾಕಾಂಕ್ಷೆಯೊಂದಿಗೆ ಕಾಂಗ್ರೆಸ್ ನಾಯಕರು ಬೃಹತ್ ಪಾದಯಾತ್ರೆಗೆ ಮುಂದಾಗಿದ್ದಾರೆ.

ರಾಹುಲ್ ಗಾಂಧಿ ಅವರು ಮೂರು ಸಾವಿರಕ್ಕೂ ಹೆಚ್ಚು ಕಿಮೀ ನಡೆಯುವ ಮೂಲಕ, ಜನರನ್ನು ಪಕ್ಷದತ್ತ ವಾಲುವಂತೆ ಮಾಡುವ ಲೆಕ್ಕಾಚಾರದಲ್ಲಿದ್ದರು. ಲೋಕಸಭಾ ಚುನಾವಣೆಯ ಜತೆಜತೆಗೆ ಕರ್ನಾಟಕ ಸೇರಿದಂತೆ ನಾನಾ ರಾಜ್ಯದಲ್ಲಿ ಎದುರಾಗುತ್ತಿರುವ ವಿಧಾನಸಭಾ ಚುನಾವಣೆಗೂ ಲಾಭವಾಗಲಿ ಎನ್ನುವ ಕಾರಣವೂ ಇದರಲ್ಲಿ ಸೇರಿತ್ತು.

ಅದರಲ್ಲಿಯೂ ಇಡೀ ದೇಶದಲ್ಲಿ ಕಾಂಗ್ರೆಸ್‌ಗೆ ಉತ್ತಮ ವಾತಾವರಣವನ್ನು ಹೊಂದಿರುವ ರಾಜ್ಯ ಕರ್ನಾಟಕದಲ್ಲಿರುವ ಈಗಿರುವ ಸಂಘಟನೆಗೆ ಇನ್ನಷ್ಟು ಒತ್ತು ನೀಡಬೇಕು ಎನ್ನುವ ಲೆಕ್ಕಾಚಾರ ರಾಜ್ಯ ಹಾಗೂ ರಾಷ್ಟ್ರ ನಾಯಕರದಾಗಿತ್ತು. ಆದರೆ ಭಾರತ್
ಜೋಡೋ ಯಾತ್ರೆಯ ನೆಪದಲ್ಲಿ ಕರ್ನಾಟಕದಲ್ಲಿ ಆಗುತ್ತಿರುವ ಬೆಳವಣಿಗೆ, ಪಕ್ಷ ಸಂಘಟನೆಗೆ ಸಹಾಯ ಮಾಡುವುದಿರಲಿ, ಈಗಿರುವ ಒಗ್ಗಟ್ಟಿನಲ್ಲಿಯೂ ಬಿರುಕು ಕಾಣಿಸಿಕೊಳ್ಳುತ್ತಿರುವುದು ಪಕ್ಷದಲ್ಲಿನ ನಿಜವಾದ ಸಮಸ್ಯೆಯಾಗಿದೆ.

ಹಾಗೇ ನೋಡಿದರೆ, ರಾಹುಲ್ ಗಾಂಧಿ ನೇತೃತ್ವದಲ್ಲಿ ಆರಂಭವಾಗಿರುವ ಭಾರತ್ ಜೋಡೋ ಯಾತ್ರೆಗೆ ಕರ್ನಾಟಕದಲ್ಲಿ ಆಗಬೇಕಿರುವ ತಯಾರಿಯ ಆರಂಭದಿಂದಲೂ ಒಗ್ಗಟ್ಟಿನ ಮಂತ್ರವನ್ನು ಕಾಂಗ್ರೆಸ್ ನಾಯಕರು ತೋರಿಸಿಲ್ಲ. ಬದಲಿಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಂಡ್ ಟೀಂ ಮಾತ್ರ ಈ ಯಾತ್ರೆಯಲ್ಲಿ ಅತ್ಯುತ್ಸಾಹ ತೋರಿತ್ತು. ಆದರೆ ಸಾಮೂಹಿಕ ನಾಯಕತ್ವದಲ್ಲಿ ಆಗಬೇಕಿದ್ದ ಈ ಕಾರ್ಯಕ್ಕೆ, ಕೇವಲ ಸಿದ್ದರಾಮಯ್ಯ ಅವರು ಮಾತ್ರವಲ್ಲದೇ ಹಲವು ಪ್ರಮುಖ ನಾಯಕರು ಕೊಂಚ ಆಸಕ್ತಿ ಕಳೆದುಕೊಂಡಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿದೆ.

ಅಷ್ಟಕ್ಕೂ ಈ ಸಮಸ್ಯೆಗೆ ಕಾರಣ ಬಹಿರಂಗವಾಗಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಒಂದು ಸಭೆಯಿಂದ ದೂರ ಉಳಿದಾಗಿನಿಂದ. ಹೌದು, ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಹಾಗೂ ಭಾರತ್ ಜೋಡೋ ಸಭೆ ಅಕ್ಕಪಕ್ಕದಲ್ಲಿ ನಡೆಯು ತ್ತಿತ್ತು. ಆದರೆ ಭಾರತ್ ಜೋಡೋ ಯಾತ್ರೆಯ ಸಿದ್ಧತಾ ಸಭೆಗೆ ಸಿದ್ದರಾಮಯ್ಯ ಅವರಿಗೆ ಆಹ್ವಾನವಿರಲಿಲ್ಲ ಎನ್ನುವ ಕಾರಣಕ್ಕೆ, ಗೈರಾಗಿದ್ದರು. ಈ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದ ಸಿದ್ದರಾಮಯ್ಯ ಅವರು, ‘ಕರೆಯದಿದ್ದರೆ ಸಭೆಗೆ ಏಕೆ ಬರಬೇಕು’ ಎಂದು ಪ್ರಶ್ನಿಸಿದರು.

ಈ ಘಟನೆಯ ಬಳಿಕ, ಮೊದಲ ಸಭೆಗೆ ಬಾರದವರಿಗೆ ಮಾತ್ರ ಎರಡನೇ ಸಭೆಗೆ ಕರೆಯಲಾಗಿತ್ತು. ಆದ್ದರಿಂದ ಸಿದ್ದರಾಮಯ್ಯ ಅವರು ಈ ಸಭೆಗೆ ಆಗಮಿಸುವ ಪ್ರಮೇಯವಿರಲಿಲ್ಲ ಎನ್ನುವ ಸ್ಪಷ್ಟನೆಯನ್ನು ಕಾಂಗ್ರೆಸ್ ನಾಯಕರು ನೀಡುತ್ತಿದ್ದಾರೆ. ಆದರೆ ಪ್ರತಿಪಕ್ಷದ ನಾಯಕರು, ಶಾಸಕಾಂಗ ಪಕ್ಷದ ನಾಯಕರನ್ನು ಬಿಟ್ಟು ಸಭೆ ನಡೆಸಿದರೆ ಕೆಟ್ಟ ಸಂದೇಶ ರವಾನೆಯಾಗಲಿದೆ ಎಂದರೆ ತಪ್ಪಾಗುವುದಿಲ್ಲ.

ಇನ್ನು ಭಾರತ್ ಜೋಡೋ ಯಾತ್ರೆಯ ಆರಂಭ ದಿಂದಲೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು, ಕರ್ನಾಟಕದಲ್ಲಿ ನಡೆಯಲಿರುವ ಇಡೀ ಯಾತ್ರೆಯನ್ನು ತಾವೊಬ್ಬರೇ ನಿಭಾಯಿಸಿದ್ದರು ಹೊರತು, ಎಲ್ಲರೊಂದಿಗೆ ಚರ್ಚಿಸಿಲ್ಲ ಎನ್ನುವ ಆರೋಪ ಕೇಳಿಬಂದಿತ್ತು. ಇದಕ್ಕೆ ಪೂರಕವಾಗಿ ಹಲವು ಸಮಯದಲ್ಲಿ ಡಿಕೆಶಿ ನಡೆದುಕೊಂಡಿರುವುದು ವಿವಾದಕ್ಕೆ ಕಾರಣವಾಗಿದೆ.
ಅಷ್ಟಕ್ಕೂ ಬೂದಿ ಮುಚ್ಚಿದ ಕೆಂಡವಾಗಿದ್ದ ಕಾಂಗ್ರೆಸ್‌ನ ಈ ಭಿನ್ನರಾಗ ಭಾರಿ ಪ್ರಮಾಣದಲ್ಲಿ ಮುನ್ನಲೆಗೆ ಬಂದಿದ್ದು, ಕೆಪಿಸಿಸಿ ಅಧ್ಯಕ್ಷರ ವಿರುದ್ಧವೇ ಮಾತನಾಡಲು ಶುರುವಾಗಿದ್ದು, ಕೆಲ ದಿನಗಳ ಹಿಂದೆ. ಡಿ.ಕೆ.ಶಿವಕುಮಾರ್ ಅವರು, ನಾಲ್ಕು ದಿನದ ಹಿಂದೆ ನಡೆದ ಕಾರ್ಯಕ್ರಮದಲ್ಲಿ, ಆರ್.ವಿ. ದೇಶಪಾಂಡೆ ಅವರಿಗೆ ಐದು ಸಾವಿರ ಜನರನ್ನು ಭಾರತ್ ಜೋಡೋ ಯಾತ್ರೆಗೆ ಕಳುಹಿಸಿ ಎಂದರೆ ಅವರು ಆಗುವುದಿಲ್ಲ ಎನ್ನುತ್ತಾರೆ.

ಪಕ್ಷಕ್ಕಾಗಿ, ರಾಹುಲ್ ಗಾಂಧಿ ಅವರಿಗಾಗಿ ಒಂದು ದಿನ ದುಡಿಯುವುದಕ್ಕೆ ಸಮಸ್ಯೆಯೇನು? ಈ ಬಾರಿ ಕೆಲಸ ಮಾಡದಿದ್ದರೆ ಟಿಕೆಟ್ ಕೊಡುವುದಿಲ್ಲ ಎಂದು ಹೇಳಿದ್ದು. ಆರ್‌ವಿಡಿ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿ, ಟಿಕೆಟ್ ಸಿಗುವು ದಿಲ್ಲ ಎನ್ನುವ ಎಚ್ಚರಿಕೆಯನ್ನು ನೀಡುತ್ತಿದ್ದಂತೆ, ಡಿಕೆ ವಿರುದ್ಧ ಕಾಂಗ್ರೆಸ್ ಹಲವು ನಾಯಕರು ಮುಗಿಬಿದ್ದರು. ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಬಸವರಾಜ ರಾಯರೆಡ್ಡಿ, ಆರ್.ವಿ. ದೇಶಪಾಂಡೆ ಸೇರಿದಂತೆ ಹಲವು ನಾಯಕರು ‘ಟಿಕೆಟ್ ನೀಡುವುದು ಒಬ್ಬ ವ್ಯಕ್ತಿಯಲ್ಲ.

ಪಕ್ಷದ ಹೈಕಮಾಂಡ್ ಈ ಬಗ್ಗೆ ತೀರ್ಮಾನಿಸುತ್ತದೆ’ ಎನ್ನುವ ಮೂಲಕ ಡಿಕೆ ವಿರುದ್ಧ ಅಸಮಾಧಾನವನ್ನು ಹೊರಹಾಕಿದರು. ಇನ್ನು ಹಲವು ನಾಯಕರು ಆಫ್ ದಿ ರೆಕಾರ್ಡ್ ಇದೇ ಮಾತನ್ನು ಹೇಳಿಕೊಂಡಿದ್ದಾರೆ. ಈ ಮೂಲಕ ಡಿಕೆ ಶಿವಕುಮಾರ್ ಬಣ ಹಾಗೂ ಇನ್ನೊಂದು ಬಣ ಪಕ್ಷದಲ್ಲಿರುವುದು ಸ್ಪಷ್ಟವಾಗಿ ಗೋಚರಿಸಲು ಶುರುವಾಗಿದೆ. ಹಾಗೇ ನೋಡಿದರೆ ಸಿದ್ದರಾಮಯ್ಯ ಅವರ ೭೫ನೇ ಜನ್ಮೋತ್ಸವವನ್ನು ದಾವಣಗೆರೆಯಲ್ಲಿ ಆರಂಭಿಸಿದಾಗಲೇ, ಈ ಬಣ ರಾಜಕೀಯ ಕಾಂಗ್ರೆಸ್‌ನಲ್ಲಿ ಕಾಣಿಸಿಡಿತ್ತು.

ಡಿ.ಕೆ.ಶಿವಕುಮಾರ್ ಅವರು ಸಿದ್ದರಾಮೋತ್ಸವಕ್ಕೆ ಪರೋಕ್ಷವಾಗಿ ವಿರೋಧ ಪಡಿಸಿದಾಗ, ಅವರ ವಿರುದ್ಧ ಸಿದ್ದು ಬಣ ತಿರುಗಿ ಬಿತ್ತು. ಆದರೆ ಅಂತಿಮವಾಗಿ, ಕಾಂಗ್ರೆಸ್ ವರಿಷ್ಠರ ಮಧ್ಯ ಪ್ರವೇಶದಿಂದ ಎಲ್ಲ ನಾಯಕರೂ ಒಂದಾಗಿ ಸಿದ್ದರಾಮೋತ್ಸವವನ್ನು ಆಚರಿಸಿದರು. ಆದರೂ ಈ ಕಾರ್ಯಕ್ರಮದಲ್ಲಿ ಡಿಕೆಶಿ ವೈಯಕ್ತಿಕವಾಗಿ ಅಂತರ ಕಾಯ್ದುಕೊಂಡಿದ್ದರು. ಇದೀಗ ಭಾರತ್ ಜೋಡೋ ಯಾತ್ರೆಯಲ್ಲಾಗಲಿ, ಸ್ವಾತಂತ್ರ್ಯ ನಡಿಗೆಯಲ್ಲಾಗಲಿ ಸಿದ್ದರಾಮೋತ್ಸವದಲ್ಲಿ ಭಾಗವಹಿಸಿದ್ದ ನಾಯಕರು ಸಕ್ರಿಯ ವಾಗಿ ಭಾಗವಹಿಸುತ್ತಿಲ್ಲ ಎನ್ನುವುದು ಡಿಕೆಶಿ ಅವರ ನೇರ ಆರೋಪವಾಗಿದೆ.

ವ್ಯಕ್ತಿಯೊಬ್ಬರ ಜನ್ಮದಿನದ ಕಾರ್ಯಕ್ರಮಕ್ಕೆ ಒಗ್ಗಟ್ಟು ಪ್ರದರ್ಶಿಸುವ ನಾಯಕರು, ಪಕ್ಷದ ಕಾರ್ಯಕ್ರಮದಲ್ಲಿ ಏಕೆ ನಿರಾಸಕ್ತಿ ತೋರಿಸಬೇಕು ಎನ್ನುವುದು ಡಿಕೆ ವಾದವಾಗಿದೆ. ಆದರೆ ಈ ವಾದವನ್ನು ಒಪ್ಪದ ನಾಯಕರು, ಡಿಕೆ ಶಿವಕುಮಾರ್ ಅವರು ಎಲ್ಲಿಯೂ ಎಲ್ಲರನ್ನು ಒಳಗೊಂಡು ಕಾರ್ಯಕ್ರಮ ಹಮ್ಮಿಕೊಳ್ಳುತ್ತಿಲ್ಲ. ಆದ್ದರಿಂದ ನಾವು ಅಂತರ ಕಾಯ್ದುಕೊಳ್ಳುತ್ತಿದ್ದೇವೆ ಎನ್ನುವ ಮಾತನ್ನು ಹೇಳುತ್ತಿದ್ದಾರೆ.

ಸಿದ್ದರಾಮಯ್ಯ ಬಣ, ಡಿ.ಕೆ.ಶಿವಕುಮಾರ ಬಣ ಹಾಗೂ ಇನ್ನು ಹತ್ತು ಹನ್ನೊಂದು ಬಣ ರಾಜಕೀಯ ಕಾಂಗ್ರೆಸ್ ನಲ್ಲಿರುವುದು ಇತ್ತೀಚಿನ ದಿನದಲ್ಲಿ ಬಹಿರಂಗವಾಗಿಯೇ ಕಾಣಿಸುತ್ತಿದೆ. ಈ ರೀತಿಯ ಬಣ ರಾಜಕೀಯದಿಂದ, ತಳ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಭಾರಿ ಸಮಸ್ಯೆಯಾಗುತ್ತಿದೆ. ಈ ಬಣ ರಾಜಕೀಯವನ್ನು ಮಾಡಬೇಡಿ ಎನ್ನುವ ಸ್ಪಷ್ಟ ಸಂದೇಶವನ್ನು ರಾಹುಲ್ ಗಾಂಧಿ ಸೇರಿದಂತೆ ರಾಷ್ಟ್ರೀಯ ನಾಯಕರು ರಾಜ್ಯ ನಾಯಕರಿಗೆ ರವಾನಿಸಿದರೂ, ಬಣ ರಾಜಕೀಯಕ್ಕೆ ಬ್ರೇಕ್ ಹಾಕುವ ಪ್ರಯತ್ನಕ್ಕೆ ಕರ್ನಾಟಕದ ನಾಯಕರು ಮಾತ್ರ ಕೈಹಾಕಿಲ್ಲ.

ಈ ರೀತಿ ಬಣ ರಾಜಕೀಯದಿಂದ, ಆರೇಳು ತಿಂಗಳಲ್ಲಿ ಎದುರಾಗಲಿರುವ ವಿಧಾನಸಭಾ ಚುನಾವಣೆಯಲ್ಲಿ ಭಾರಿ ಸಮಸ್ಯೆ ಯಾಗುವ ಆತಂಕವನ್ನು ಆಂತರಿಕ ಸಮೀಕ್ಷೆಗಳು ಪದೇಪದೆ ಹೇಳುತ್ತಿದ್ದರು ನಾಯಕರು ಮಾತ್ರ ತಲೆಕಡೆಸಿಕೊಂಡಂತೆ ಕಾಣುತ್ತಿಲ್ಲ. ಇಷ್ಟೆಲ್ಲ ಗೊಂದಲದ ನಡುವೆ ಭಾರತ್ ಜೋಡೋ ಯಾತ್ರೆ ಕರ್ನಾಟಕಕ್ಕೆ ಮುಂದಿನ ವಾರ ಆಗಮಿಸಲಿದೆ.
ಪಕ್ಷದ ಬಲವರ್ದನೆ ದೇಶಾದ್ಯಂತ ಈ ಯಾತ್ರೆ ನಡೆಯುತ್ತಿದ್ದರೆ, ಕರ್ನಾಟಕದಲ್ಲಿ ಈ ಯಾತ್ರೆಯಿಂದಲೇ ಪಕ್ಷದ ಆಂತರಿಕ ಭಿನ್ನಮತ ಭುಗಿಲೇಳುತ್ತಿದೆ.

ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರಿಬ್ಬರೂ ಒಂದಾಗಿ ಹೋದರೆ ಮಾತ್ರ ಮುಂದಿನ ಚುನಾವಣೆಯಲ್ಲಿ, ಈ
ಯಾತ್ರೆಯಿಂದ ಲಾಭವಾಗಲಿದೆ ಹೊರತು, ಇಬ್ಬರು ಒಂದಾಗದಿದ್ದರೆ ಬಿಜೆಪಿಗೆ ಇದರ ಲಾಭವಾಗಲಿದೆ ಎನ್ನುವುದನ್ನು
ಮರೆಯುವಂತಿಲ್ಲ. ಕಾಂಗ್ರೆಸ್‌ನ ಅಸ್ವಿತ್ವ ಪ್ರಶ್ನೆಯಾಗಿರುವ ಭಾರತ್ ಜೋಡೋ ಯಾತ್ರೆಯ ನೆಪದಲ್ಲಿ ಮುಂದಿನ ವಿಧಾನ ಸಭಾ ಚುನಾವಣೆಗೆ ಪಕ್ಷವಾಗಿ ಒಂದಾಗಿ ಹೋಗಬೇಕಾಗಿರುವುದನ್ನು ಬಿಟ್ಟು, ಈ ರೀತಿ ವೈಯಕ್ತಿಕ ಪ್ರತಿಷ್ಠೆಗೆ ಬಿದ್ದು ಪಕ್ಷದಲ್ಲಿ ರುವ ಆಂತರಿಕ ಬೇಗುದಿಯನ್ನು ಬಹಿರಂಗಪಡಿಸಿಕೊಂಡು ಹೋಗುವುದು ಪಕ್ಷಕ್ಕೆ ಒಳಿತಲ್ಲ.

ಡಿ.ಕೆ.ಶಿವಕುಮಾರ್ ಅವರ ಸಹ, ಪಕ್ಷ ಸಂಘಟನೆಯ ವೇಳೆ ಏಕಾಂಗಿಯಾಗಿಯೇ ಎಲ್ಲವನ್ನು ನಿಭಾಯಿಸುತ್ತೇನೆ ಎನ್ನುವ
ಬದಲು, ಎಲ್ಲರನ್ನು ಒಳಗೊಂಡು ಕೆಲಸ ಮಾಡಬೇಕು. ಇಲ್ಲದಿದ್ದರೆ, ಮುಂದಿನ ಚುನಾವಣೆ ಸಮಯದಲ್ಲಿ ಈ ಬೇಗುದಿ, ಪಕ್ಷಕ್ಕೆ ಆಪತ್ತು ತಂದರೂ ಅಚ್ಚರಿಯಿಲ್ಲ.

error: Content is protected !!