Saturday, 7th September 2024

ನೆನಪಿನಿಂದ ಮರೆಯಾದ ರೈತ ನಾಯಕ ರಾಮಚಂದ್ರ

ಶಶಾಂಕಣ

shashidhara.halady@gmail.com

ಕಾಂಗ್ರೆಸ್ ನಾಯಕರು ಹೇಳಿದ್ದಕ್ಕೆ ಸರಿ ಎಂದು ಹೇಳುತ್ತಾ ಮುಂದುವರಿದಿದ್ದರೆ, ನಾನು ಸಹ ದೊಡ್ಡ ಬಂಗಲೆಯಲ್ಲಿ ವಾಸಿಸ ಬಹುದಿತ್ತು ಮತ್ತು ಬದುಕಿನಲ್ಲಿ ಎಲ್ಲಾ ರೀತಿಯ ಸುಖಗಳನ್ನು ಪಡೆಯಬಹುದಿತ್ತು’ ಎಂದು ರೈತ ನಾಯಕ ರಾಮಚಂದ್ರ ತನ್ನ ಜೀವನದ ಕೊನೆಯಲ್ಲಿ ಬರೆದುಕೊಂಡಿದ್ದರು.

1950ರಲ್ಲಿ ಮೃತಪಟ್ಟ ಈ ಸ್ವಾತಂತ್ರ್ಯ ಹೋರಾಟಗಾರನ ಬದುಕು, ನಾಯಕತ್ವ ಗುಣ, ರೈತರ ಕುರಿತು ಇವರಿಗಿದ್ದ ಪ್ರೀತಿ ಎಲ್ಲವೂ ಅದೇಕೋ ನಮ್ಮ ದೇಶದಲ್ಲಿ ಹೆಚ್ಚಿನ ಜನರಿಗೆ ತಿಳಿಯದೇ ಹೋಯಿತು. ನೆಹರೂ, ಗಾಂಧೀಜಿ ಮತ್ತು ಇತರ ಕಾಂಗ್ರೆಸ್ ನಾಯಕರ ಸಮಕಾಲೀನರಾಗಿದ್ದರೂ, ಆ ಕಾಲದ ಈ ಜನಪ್ರಿಯ ಹೋರಾಟಗಾರ ಮೂಲೆಗುಂಪಾಗಲು ಕಾರಣ ವೇನು? 1920ರ ದಶಕದಲ್ಲಿ ಹಲವು ಬಾರಿ, 1930, 1941 ಮತ್ತು 1942ರಲ್ಲಿ ಬ್ರಿಟಿಷ್ ಸರಕಾರದ ವಿರುದ್ಧ ಹೋರಾ  ಡಿದ್ದರಿಂದಾಗಿ ಜೈಲು ಶಿಕ್ಷೆ ಅನುಭವಿಸಿದ್ದರು.

ಆದರೆ, ಜನಪ್ರಿಯ ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಲ್ಲಿ ರೈತನಾಯಕ ರಾಮಚಂದ್ರರ ವಿವರಗಳು ಕಾಣಸಿಗುವುದಿಲ್ಲ. ಯಾರಿವರು ರಾಮಚಂದ್ರ? ಇವರನ್ನು ಬಾಬಾ ರಾಮಚಂದ್ರ ಎಂದೂ ಗುರುತಿಸುವುದುಂಟು. ಇವರ ಮೂಲ ಹೆಸರು ಶ್ರೀಧರ್ ಬಲವಂತ್ ಜೋಧಪುರಕರ್. 1864ರಲ್ಲಿ ಜನಿಸಿದ ಇವರು, 1904ರಲ್ಲಿ ಫಿಜಿ ದ್ವೀಪಕ್ಕೆ ಹೋದರು. ಆಗ ಬ್ರಿಟಿಷರ ವಶದಲ್ಲಿದ್ದ ಫಿಜಿ ದ್ವೀಪಕ್ಕೆ ನಮ್ಮ ದೇಶದಿಂದ ನೂರಾರು ಕೆಲಸಗಾರರನ್ನು ಅತಿ ಕಡಿಮೆ ಸಂಬಳದಲ್ಲಿ ಕೆಲಸ ಮಾಡಲು ಸಾಗಿಸುವ ಪದ್ಧತಿ ಇತ್ತು; ಫಿಜಿ ದ್ವೀಪಕ್ಕೆ ಹೋದ ಸಮಯದಲ್ಲಿ ಇವರು ತಮ್ಮ ಹೆಸರನ್ನು ರಾಮ ಚಂದ್ರ ರಾವ್ ಎಂದು ಬದಲಿಸಿಕೊಂಡರು.

1905-17 ಅವಧಿಯಲ್ಲಿ ಫಿಜಿಯಲ್ಲಿ ಕಾರ್ಮಿಕನಾಗಿ ದುಡಿಯುವ ಸಮಯದಲ್ಲಿ ರಾಮಚಂದ್ರ ಅವರಲ್ಲಿದ್ದ ನಾಯಕನು ಬೆಳಕಿಗೆ ಬಂದ. ಕಷ್ಟಕರ ಸ್ಥಿತಿಯಲ್ಲಿ ಫಿಜಿಯಲ್ಲಿ ದುಡಿಯುತ್ತಿದ್ದ ಕಾರ್ಮಿಕರ ಬವಣೆಗಳನ್ನು ನೀಗಿಸಲು ಅವರನ್ನು ಒಗ್ಗೂಡಿಸಿ,
ಅವರ ವರ್ಕಿಂಗ್ ಕಂಡಿಷನ್‌ಗಳನ್ನು ಉತ್ತಮ ಪಡಿಸಲು ಹೋರಾಡಿದರು. ರಾಮಚಂದ್ರರು ಆಗಿನ ದಿನಗಳಲ್ಲಿ ‘ಫಿಜಿಯ ಯಶಸ್ವಿ ಹೋರಾಟಗಾರ’ ಎಂದು ಬ್ರಿಟಿಷರು ದಾಖಲಿಸಿದ್ದಾರೆ. ಫಿಜಿಯಲ್ಲಿದ್ದ ನಮ್ಮ ದೇಶದ ಕಾರ್ಮಿಕರನ್ನು ಒಗ್ಗೂಡಿಸಲು
‘ರಾಮ ಲೀಲಾ’ ಆಚರಣೆಯ ಸಂದರ್ಭವನ್ನು ಉಪಯೋಗಿಸಿಕೊಂಡರು. ಫಿಜಿಯ ಕೆಲಸಗಾರರ ಬವಣೆಗಳನ್ನು ವರ್ಣಿಸುವ ಒಂದು ಬರಹವನ್ನು ಕೊಲ್ಕೊತ್ತಾಕ್ಕೆ ರಹಸ್ಯವಾಗಿ ಕಳುಹಿಸಿ, ‘ಭಾರತ್ ಮಾತಾ’ ಪತ್ರಿಕೆಯಲ್ಲಿ ಪ್ರಕಟಿಸಿದರು.

ಇದನ್ನು ಕಂಡು ಗಾಬರಿಗೊಂಡ ಫಿಜಿ ಸರಕಾರಿ ಅಧಿಕಾರಿಗಳು ರಾಮಚಂದ್ರ ಅವರನ್ನು ಕಾನೂನು ಕ್ರಮಕ್ಕೆ ಒಳಪಡಿಸಲು ಮುಂದಾದಾಗ, ಸ್ನೇಹಿತರ ಸಲಹೆಯ ಮೇರೆಗೆ ಭಾರತಕ್ಕೆ ವಾಪಸಾದರು. ಇದೇ ಸಮಯದಲ್ಲಿ ಬಾಲಗಂಗಾಧರ ತಿಲಕರು
ಇವರಿಗೊಂದು ಪತ್ರ ಬರೆದು, ನಮ್ಮ ದೇಶದಲ್ಲಿ ಹೋರಾಟ ಮುಂದುವರಿಸುವಂತೆ ಕರೆ ನೀಡಿದರು. ಇದು ನಡೆದದ್ದು 1917ರ ಸಮಯದಲ್ಲಿ. ಅದೇ ತಾನೆ ಗಾಂಧೀಜಿಯವರು 1915ರಲ್ಲಿ ಭಾರತಕ್ಕೆ ವಾಪಸಾಗಿ, ಇಲ್ಲಿನ ಹೋರಾಟದ ನಾಯಕತ್ವವನ್ನು ವಹಿಸಿಕೊಳ್ಳಲು ಸಿದ್ಧತೆ ನಡೆಸಿದ್ದರು.

ಭಾರತಕ್ಕೆ ವಾಪಸಾದ ರಾಮಚಂದ್ರರು, ಅವಧ್ ಪ್ರದೇಶದಲ್ಲಿ ರೈತರನ್ನು ಒಟ್ಟಾಗಿಸಲು ಪ್ರಯತ್ನಿಸಿದರು. ಇದಕ್ಕೆ ಅವರು ಉಪಯೋಗಿಸಿದ ಒಂದು ಮಾರ್ಗವೆಂದರೆ, ಧಾರ್ಮಿಕ ಪ್ರವಚನಗಳ ಮೂಲಕ ಜನರನ್ನು ಆಕರ್ಷಿಸಲು ಯತ್ನಿಸುವುದು.
1919ರಲ್ಲಿ ಪ್ರವಚನ ಆರಂಭಿಸಿದ ರಾಮಚಂದ್ರ ಗುರುತಿಸಿದರು. ರೂರೆ ಎಂಬುದು ಸಣ್ಣ ಹಳ್ಳಿ; ಅವಧ್ ಪ್ರದೇಶದಲ್ಲಿ ಬ್ರಿಟಿಷರ ಪರವಾಗಿದ್ದ ತಾಲುಕ್‌ದಾರ್ ಮತ್ತು ಬಲಾಢ್ಯ ಜಮೀನುದಾರರ ಬಿಗಿ ಮುಷ್ಟಿಗೆ ಇನ್ನೂ ಸಿಕ್ಕಿಲ್ಲದೇ ಇದ್ದ ಆ ಗ್ರಾಮೀಣ
ಪ್ರದೇಶವೇ ರೈತರನ್ನು ಒಗ್ಗೂಡಿಸಲು ಸೂಕ್ತ ಎಂದು ರಾಮಚಂದ್ರ ಗುರುತಿಸಿ, ಅಲ್ಲಿಂದಲೇ ರೈತ ತಮ್ಮ ಕೆಲಸ ಆರಂಭಿಸಿದರು.

ಬಲಾಢ್ಯ ಜಮೀನುದಾರರು ಸಣ್ಣ ರೈತರನ್ನು ಶೋಷಣೆ ಮಾಡುತ್ತಿದ್ದ ಕಾಲವದು; ಇದಕ್ಕೆ ಬ್ರಿಟಿಷರ ನೇರ ಬೆಂಬಲವಿತ್ತು. ಸಣ್ಣ ಮತ್ತು ಮಧ್ಯಮ ರೈತರು ತಮ್ಮ ಜಮೀನಿನ ಒಂದು ಭಾಗದಲ್ಲಿ ನೀಲಿಯನ್ನು ಕಡ್ಡಾಯವಾಗಿ ಬೆಳೆದು, ಅದನ್ನು ಬಲಾಢ್ಯ
ಜಮೀನುದಾರರಿಗೆ ಮಾರಬೇಕೆಂಬ ನಿಯಮವು ಇಂತಹ ಶೋಷಣೆಗಳ ಒಂದು ಉದಾಹರಣೆ ಮಾತ್ರ. ಇದರಿಂದ ರೈತರಿಗೆ ತೊಂದರೆ ಎಂದರಿತ ರಾಮಚಂದ್ರರು ‘ಅಧಿಕ ಮೊತ್ತದ ತೆರಿಗೆಯನ್ನು, ಗೇಣಿಯನ್ನು ಪಾವತಿಸಬೇಡಿ, ಮಾಮೂಲಿ ಬಾಡಿಗೆ
(ಗೇಣಿ) ಮಾತ್ರ ನೀಡಿ’ ಎಂದು ರೈತರಿಗೆ ಕರೆ ನೀಡಿದರು. ಜತೆಗೆ ಜಾನುವಾರು ಮೇಯಲು ಗೋಮಾಳ, ನಿಗದಿತ ಮೊತ್ತದ ಗೇಣಿಯ ಪಾವತಿ, ಮಹಿಳಾ ಶಿಕ್ಷಣ, ಕೆರೆ ಮತ್ತು ಬಾವಿಗಳ ನಿರ್ಮಾಣ ಇವೆಲ್ಲವೂ ರೈತರ ಹಕ್ಕು ಮತ್ತು ಇದನ್ನು ಒದಗಿಸಿ ಕೊಡುವುದು ಸರಕಾರದ ಕರ್ತವ್ಯ ಎಂದು ತಮ್ಮ ಭಾಷಣಗಳಲ್ಲಿ ಹೇಳತೊಡಗಿದರು. ಅವಧ್ ಪ್ರದೇಶದಲ್ಲಿ ಮೇ 1920ರಲ್ಲಿ ರಾಮಚಂದ್ರರ ನಾಯಕತ್ವದಲ್ಲಿ ರೈತರು ಒಗ್ಗಟ್ಟಾಗಿ, ತಮ್ಮ ಬದುಕು ಹಸನಾಗಲು ಸರಕಾರದ ಸಹಾಯ ಬೇಕು ಎಂಬ ಹಕ್ಕೊತ್ತಾಯ ಮಾಡತೊಡಗಿದರು.

ರಾಮಚಂದ್ರರಿಗೆ ಅಪಾರ ಜನಬೆಂಬಲವಿತ್ತು. ಇವರ ಒಗ್ಗಟ್ಟನ್ನು ಕಂಡ ಪ್ರತಾಪಗಡದ ಡೆಪ್ಯುಟಿ ಕಮಿಷನರ್‌ರು, ರೈತರ ದೂರುಗಳನ್ನು ಸಂಗ್ರಹಿಸಿ ಕೊಡುವಂತೆ ರಾಮಚಂದ್ರರಿಗೆ ಹೇಳಿದರು. ಸುಮಾರು ಒಂದು ಸಾವಿರ ರೈತರು ತಮ್ಮ ಅಹವಾಲುಗಳೊಂದಿಗೆ ಡೆಪ್ಯುಟಿ ಕಮಿಷನರ್ ಆಫೀಸಿಗೆ ಬಂದು ತಮ್ಮ ಕಷ್ಟಗಳನ್ನು ತೋಡಿಕೊಂಡರು. ಅದೇ ಮೂರು ವರ್ಷಗಳ ಮುಂಚೆ 1917ರಲ್ಲಿ ಚಂಪಾರಣ್ಯದಲ್ಲಿ ನಡೆದ ಹೋರಾಟದಲ್ಲಿ, ರೈತರು ಒಗ್ಗಟ್ಟಾಗಿ ಬಲಾಢ್ಯ ಜಮೀನುದಾರರ ಮತ್ತು ನೀಲಿ ಬೆಳೆಯ ಸಗಟು ವ್ಯಾಪಾರಿಗಳ ಹಿಡಿತದಿಂದ ತಪ್ಪಿಸಿಕೊಂಡದ್ದನ್ನು ಉದಾಹರಣೆಯಾಗಿ ನೀಡಿದ ರಾಮಚಂದ್ರರು, ಅದೇ ರೀತಿ ಅವಧ್‌ನ ರೈತರು ಸಹ ತಮ್ಮ ಕಷ್ಟಗಳಿಂದ ಹೊರಬರಬಹುದು ಎಂದು ಜನರಿಗೆ ತಿಳಿಸಿದರು. ಇದಕ್ಕಾಗಿ ರೈತರ ಒಂದು ಪಾದಯಾತ್ರೆಯನ್ನು ಆಯೋಜಿಸಿದರು.

ಪಟ್ಟಿ ಎಂಬಲ್ಲಿಂದ 75 ಕಿ.ಮೀ. ದೂರದ ಅಲಹಾಬಾದ್ ಗೆ ೫೦೦ ಜನ ರೈತರ ಜಾಥಾವನ್ನು ಹೊರಡಿಸಿದರು. ಇದು ನಮ್ಮ ದೇಶದ ಮೊದಲ ಕಾಲ್ನಡಿಗೆ ಜಾಥಾ ಎನಿಸಿದೆ. ಈ ಜಾಥಾವನ್ನು ಗಮನಿಸಿದ ಜವಹರ್ ಲಾಲ್ ನೆಹರೂ ಅವರು, ಇವರ ಉದ್ದೇಶವನ್ನು ಗುರುತಿಸಿದರೂ, ‘ಇದಕ್ಕೆ ಒಂದು ನಿರ್ದಿಷ್ಟ ಯೋಜನೆ ಇಲ್ಲ’ ಎಂದು ಟಿಪ್ಪಣಿ ಬರೆದಿದ್ದರು. ತಮ್ಮ ಹೋರಾಟ ವನ್ನು ಬೆಂಬಲಿಸಲು, ನೆಹರೂ, ಗಾಂಧೀಜಿ ಮೊದಲಾದ ನಾಯಕರು ಬರಬೇಕು ಎಂಬುದು ರಾಮಚಂದ್ರರ ಅಭಿಲಾಷೆ ಯಾಗಿತ್ತು. ಆದರೆ ರೈತರ ಒಕ್ಕೂಟ ಎನಿಸಿದ ಕಿಸಾನ್ ಸಭಾದ ಹೋರಾಟ ಮತ್ತು ಬೇಡಿಕೆಗಳಿಗೆ ತಾಲುಕ್‌ದಾರ್ ಗಳ ತೀವ್ರ ವಿರೋಧವಿತ್ತು.

ಬ್ರಿಟಿಷರ ಪ್ರತಿನಿಧಿಗಳ ರೂಪದಲ್ಲಿ, ಗ್ರಾಮೀಣ ಪ್ರದೇಶದಲ್ಲಿ ರೈತರನ್ನು ಶೋಷಿಸುತ್ತಿದ್ದ ಬಲಾಢ್ಯ ರೈತರ ಬೆಂಬಲವು
ತಾಲೂಕ್‌ ದಾರ್‌ಗಳಗಿತ್ತು. ಆದರೆ ರಾಮಚಂದ್ರರು ಮಾಡಿದ ಭಾಷಣಗಳಿಂದ ಪ್ರಭಾವಿತರಾದ ರೈತರು, ತಮಗೆ ನ್ಯಾಯ ಬೇಕು ಎಂದು ಕೆಲವು ಕಡೆ ಗಲಾಟೆಗಳನ್ನು ಮಾಡಲು ಆರಂಭಿಸಿದರು. ಇದನ್ನು ಹತ್ತಿಕ್ಕಲು ಬ್ರಿಟಿಷರು ಪ್ರಯೋಗಿಸಿದ ಅಸವೇ
ಬಂಧನ. ೨೮.೮.1920ರಂದು ರಾಮಚಂದ್ರ ಮತ್ತು ಅವರ ಬೆಂಬಲಿಗರನ್ನು ಬಂಧಿಸಿ, ಜಾಮೀನು ನೀಡದೇ, ಪ್ರತಾಪಘರ್ ಜೈಲಿನಲ್ಲಿ ಕೂಡಿಹಾಕಿದರು.

ಇದನ್ನು ತಿಳಿದ ಸುತ್ತ ಮುತ್ತಲಿನ ರೈತರು, ತಮ್ಮ ನಾಯಕ ರಾಮಚಂದ್ರರನ್ನು ಬಿಡಬೇಕೆಂದು ಜೈಲಿನ ಆವರಣದಲ್ಲಿ ಸತ್ಯಾಗ್ರಹ ಆರಂಭಿಸಿದರು. ೧.೯.1920ರಂದು ಸುಮಾರು 5000 ರೈತರು ಜೈಲಿನ ಹೊರಭಾಗದಲ್ಲಿ ಸೇರಿದ್ದರು ಎಂದು
ಬ್ರಿಟಿಷ್ ಅಧಿಕಾರಿಗಳು ಬರೆದಿಟ್ಟಿದ್ದಾರೆ. ರಾಮಚಂದ್ರರ ಬಿಡುಗಡೆಗೆ ನಡೆದ ರೈತರ ಸತ್ಯಾಗ್ರಹವು ದಿನದಿಂದ ದಿನಕ್ಕೆ ತೀವ್ರವಾಗಿ, ಸೆಪ್ಟೆಂಬರ್ 10ರ ಸಮಯಕ್ಕೆ ಜೈಲಿನ ಸುತ್ತಲೂ ಸೋಟಕ ಸ್ಥಿತಿಯನ್ನು ನಿರ್ಮಿಸಿತ್ತು.

ಗಾಂಧೀಜಿಯವರು ಮಧ್ಯಪ್ರವೇಶಿಸಿ, ರಾಮಚಂದ್ರರ ಬಿಡುಗಡೆಗೆ ಸಹಾಯ ಮಾಡಬೇಕೆಂದು ರೈತರು ಒತ್ತಾಯಿಸಿದರು. ಕೊನೆಗೆ ಸ್ಥಳೀಯ ಪ್ಲೀಡರ್ ಪಾಂಡೆಯವರ ಮಧ್ಯಸ್ಥಿಕೆಯಿಂದ, ಷರತ್ತುಬದ್ಧ ಬಿಡುಗಡೆಗೆ ಸರಕಾರ ಒಪ್ಪಿತು. ೫೦೦ ರುಪಾಯಿ ಗಳ ವೈಯಕ್ತಿಕ ಬಾಂಡ್ ಬರೆಸಿಕೊಂಡು, ರಾಮಚಂದ್ರರನ್ನು ರಹಸ್ಯವಾಗಿ ಹೊರಗೆ ಕರೆದೊಯ್ದು, ದೂರದ ಕಬ್ಬಿನ
ಗದ್ದೆಯೊಂದರಲ್ಲಿ ಬಿಟ್ಟರು!

ಆ ನಂತರ, ರಾಮಚಂದ್ರರ ಹೋರಾಟ ತೀವ್ರವಾಯಿತು. ದೊಡ್ಡ ಜಮೀನುದಾರ ಮತ್ತು ತಾಲುಕ್‌ದಾರರ ವಿರುದ್ಧ ರೈತರನ್ನು ಸಂಘಟಿಸಿದ ರಾಮಚಂದ್ರರು, ರಾಯ್‌ಬರೇಲಿ ಪ್ರದೇಶಕ್ಕೆ ತಮ್ಮ ಹೋರಾಟವನ್ನು ವಿಸ್ತರಿಸಿದರು. ಡಿಸೆಂಬರ್ ೨೦ನ್ನು
‘ಕಿಸಾನ್ ದಿನ’ ಎಂದು ಘೋಷಿಸಿ, ಎಲ್ಲರೂ ಅಯೋಧ್ಯೆಗೆ ಬರುವಂತೆ ಕರೆ ನೀಡಿದರು. ಆ ದಿನ ಅಲ್ಲಿ ಸೇರಿದ ಸಾವಿರಾರು ರೈತರ ಮುಂದೆ ರಾಮಚಂದ್ರ ಕಾಣಿಸಿಕೊಂಡಿದ್ದು ಒಬ್ಬ ಕೈದಿಯ ದಿರಿಸಿನಲ್ಲಿ!

ಹಗ್ಗಗಳಿಂದ ಕೈಗಳನ್ನು ಕಟ್ಟಿಸಿಕೊಂಡು ವೇದಿಕೆಯಲ್ಲಿ ಕಾಣಿಸಿಕೊಂಡ ಅವರು, ನಮ್ಮ ದೇಶದ ರೈತರ ಸ್ಥಿತಿ ಇದೇ ರೀತಿ ಇದೆ. ಆದ್ದರಿಂದ, ಎಲ್ಲರೂ ಒಗ್ಗಟ್ಟಾಗಿ, ಹೋರಾಡಬೇಕು ಎಂದರು. ಎಲ್ಲೆಡೆ ರೈತರು ರಾಮಚಂದ್ರರ ನಾಯಕತ್ವದಲ್ಲಿ  ಒಗ್ಗಟ್ಟಾಗು ತ್ತಿದ್ದು ದನ್ನು ಕಂಡ ಬ್ರಿಟಿಷ್ ಸರಕಾರವು, ಈ ಹೋರಾಟವನ್ನು ಬಗ್ಗುಬಡಿಯಬೇಕು ಎಂದು ಯೋಚಿಸಿತು. ಸ್ಥಳೀಯ ತಾಲುಕ್‌ ದಾರರು ಸಹ ರೈತರನ್ನು ಹಣಿಯಲು ಯೋಜನೆ ತಯಾರಿಸಿದರು. 1921ರ ಜನವರಿಯಲ್ಲಿ ರೈತರ ಹೋರಾಟ
ತೀವ್ರಗೊಂಡಿತು. ಮುನ್ಷಿಗಂಜ್ ಎಂಬಲ್ಲಿ ರೈತರು ಧರಣಿ ನಡೆಸಿದರು; ಪೊಲೀಸರು ಅವರ ಮೇಲೆ ಲಾಠಿ ಬೀಸಿದಾಗ, ರೈತರು ತಿರುಗಿಬಿದ್ದರು.

ಇಂತಹದ್ದೇ ಅವಕಾಶಕ್ಕೆ ಕಾಯುತ್ತಿದ್ದ ಪೊಲೀಸರು, ರೈತರ ಮೇಲೆ ಮನಬಂದಂತೆ ಗುಂಡುಹಾರಿಸಿದರು. ಇದು ಜಲಿಯನ್‌ ವಾಲಾ ಬಾಗ್‌ನ ಇನ್ನೊಂದು ರೂಪ; ಸರಕಾರದ ಪ್ರಕಾರ ಕೆಲವೇ ರೈತರು ಸತ್ತರು; ಆದರೆ, ಪ್ರತ್ಯಕ್ಷದರ್ಶಿಗಳ ಪ್ರಕಾರ ಆ ದಿನ ನೂರಕ್ಕೂ ಹೆಚ್ಚು ರೈತರನ್ನು ಗುಂಡಿಟ್ಟು ಸಾಯಿಸಲಾಗಿತ್ತು; ಪಕ್ಕದಲ್ಲಿ ಹರಿಯುತ್ತಿದ್ದ ಹೊಳೆಯ ನೀರು ಕೆಂಪಗೆ
ಬದಲಾಗಿತ್ತು. ಈ ಘಟನೆಯು ಮುನ್ಷಿಬಂದ್ ಹತ್ಯಾಕಾಂಡ ಎಂದು ಹೆಸರಾಗಿದೆ.

ರಾಮಚಂದ್ರ ಅವರನ್ನು ಮತ್ತೊಮ್ಮೆ ಬಂಧಿಸಲು ಬಲವಾದ ಕಾರಣವನ್ನು ಸಿದ್ಧಪಡಿಸಲಾಯಿತು; 1921ರ ಜನವರಿ ತಿಂಗಳಲ್ಲಿ ಬಾರ ಬಂಕಿಯಲ್ಲಿ ರಾಮಚಂದ್ರ ಮಾಡಿದ ಭಾಷಣವು ಜನರನ್ನು ಕೆರಳಿಸುವಂತಿತ್ತು. ಆದ್ದರಿಂದ, ಸೆಕ್ಷನ್ 124 ಎ
(ದೇಶದ್ರೋಹ) ಮತ್ತು ಸೆಕ್ಷನ್ 133 ಎ (ವಿವಿಧ ವರ್ಗಗಳ ನಡುವೆ ದ್ವೇಷ ಹುಟ್ಟಿಸುವಿಕೆ) ಅಡಿ ಅವರನ್ನು ಬಂಧಿಸಲು ಸಿದ್ಧತೆ ನಡೆಸಿತು. ೧೦.೨.1921ರಂದು ಕಾಶಿ ವಿದ್ಯಾಪೀಠದ ಸಮಾರಂಭಕ್ಕೆ ರಾಮಚಂದ್ರರು ಆಹ್ವಾನಿತ ಅತಿಥಿಯಾಗಿ
ಬಂದಿದ್ದರು. ಅದೇ ವೇದಿಕೆಯಲ್ಲಿ ಗಾಂಧಿ, ನೆಹರು ಮೊದಲಾದವರು ಇದ್ದರು.

ಆ ಸಮಾರಂಭದಲ್ಲಿ 80000 ಜನರು ಸೇರಿದ್ದರು. ಅವರ ಮುಂದೆ ರಾಮಚಂದ್ರರನ್ನು ಬಂಧಿಸಿ, ಗಾಂಧೀಜಿಯವರ
ಕೊಠಡಿಯಲ್ಲಿ ಕೆಲ ಕಾಲ ಇರಿಸಿ, ನಂತರ ಬೆನರಾಸ್ ಜೈಲಿಗೆ ಕಳುಹಿಸಲಾಯಿತು. ಅವರ ಬಂಧನವನ್ನು ಜನರು ವಿರೋಧಿಸಿ, ಗಲಭೆ ನಡೆಸಿದ್ದರೆ, ಅದು ಗಾಂಧೀಜಿಯವರ ಅಹಿಂಸಾತ್ಮಕ ಹೋರಾಟ ತತ್ವದ ವಿರುದ್ಧವಾಗಿರುತ್ತಿತ್ತು, ಆದ್ದರಿಂದ ಗಲಭೆ ನಡೆ
ಯುವುದಿಲ್ಲ ಎಂದೇ ಸರಕಾರವು ಆ ಸಂದರ್ಭವನ್ನು ಆಯ್ಕೆ ಮಾಡಿ, ರಾಮಚಂದ್ರ ಅವರನ್ನು ಬಂಧಿಸಿತ್ತು.

ರಾಮಚಂದ್ರರ ಅವರ ಬಂಧನಕ್ಕೆ ಗಾಂಧೀಜಿಯವರ ಸಹಮತ ಇತ್ತು ಎಂಬ ಅಭಿಪ್ರಾಯವನ್ನು ಜನರಲ್ಲಿ ಮೂಡಿಸುವುದು ಸರಕಾರದ ಉದ್ದೇಶವಾಗಿತ್ತು. ಆದರೆ ರಾಮಚಂದ್ರರ ಬಂಧನದ ವಿಚಾರ ತಿಳಿದು ಜನರು ಭುಗಿಲೆದ್ದರು; ಆದ್ದರಿಂದ ರಾಮಚಂದ್ರರನ್ನು ಬೆನಾರಸ್‌ನಿಂದ ಲಕ್ನೋಗೆ ರಹಸ್ಯವಾಗಿ ಕಳುಹಿಸಲಾಯಿತು. ಜನರು ಇನ್ನಷ್ಟು ಉದ್ವಿಗ್ನರಾದರು; ಏಕೆಂದರೆ ಆ ಪ್ರದೇಶದಲ್ಲಿ ರಾಮಚಂದ್ರರು ಅಷ್ಟು ಜನಪ್ರಿಯರಾಗಿದ್ದರು.

ಇವರ ಬಂಧನಕ್ಕೆ ಪ್ರತಿಕ್ರಿಯಿಸುತ್ತಾ, ಗಾಂಧೀಜಿಯವರು ‘ಅದೊಂದು ಪವಿತ್ರ ಘಟನೆ ಮತ್ತು ರಾಮಚಂದ್ರರ ಬಿಡುಗಡೆಗೆ ರೈತರು ಒತ್ತಾಯಿಸಿದರೆ ರಾಮಚಂದ್ರರಿಗೆ ಬೇಸರವಾಗುತ್ತದೆ’ ಎಂದು ಹೇಳಿಕೆ ನೀಡಿದರು. ನೆಹರೂ, ಮೋತಿಲಾಲ್
ನೆಹರು ಅವರ ಹೆಸರಿನಲ್ಲಿ ಹೊರಡಿಸಲಾದ ಕರಪತ್ರದಲ್ಲಿ, ರೈತರು ಗಲಾಟೆ ಮಾಡಬಾರದು ಮತ್ತು ರಾಮಚಂದ್ರರ ದರ್ಶನ ಪಡೆಯಲು ಪ್ರಯತ್ನಿಸಬಾರದು ಎಂಬ ಮನವಿ ಮಾಡಲಾಗಿತ್ತು. ಆದರೆ ರಾಮಚಂದ್ರರ ಬಿಡುಗಡೆಗೆ ವಕೀಲರಾದ ಮೋತಿ ಲಾಲ್ ನೆಹರೂ, ಜವಹರ್ ಲಾಲ್ ನೆಹರೂ ವಾದಿಸಲು ಬರಲಿಲ್ಲ; ಶೌಕತ್ ಅಲಿಯವರ ಸೇವೆಯನ್ನು ತಿರಸ್ಕರಿಸಿದ ರಾಮಚಂದ್ರು, ತಾವೇ ವಾದ ಮಂಡಿಸಿದರು. ಅವರಿಗೆ ಎರಡು ವರ್ಷ ಶಿಕ್ಷೆ ಆಯಿತು; ರು.2000 ದಂಡ ವಿಽಸಲಾಯಿತು.

1923ರಲ್ಲಿ ಬಿಡುಗಡೆಯಾದ ನಂತರ, ರಾಮಚಂದ್ರರು ಕಿಸಾ ಸಭಾ ಚಳವಳಿಯನ್ನು ಚಾಲ್ತಿಯಲ್ಲಿಟ್ಟರು. ಆದರೆ ಕಾಂಗ್ರೆಸ್ ಹೋರಾಟವು ರೈತರನ್ನು ಒಳಗೊಂಡಿಲ್ಲ ಎಂಬ ಭಾವನೆ ಅವರಲ್ಲಿ ಮೂಡಿತು. ಅವರು ಗಾಂಧೀಜಿ ಮತ್ತು ನೆಹರೂ ಅವರನ್ನು ಗೌರವಿಸುತ್ತಿದ್ದರು, ಆದರೆ, ಕಾಂಗ್ರೆಸ್ ಹಲವು ನಿರ್ಣಯಗಳು ಬಂಡವಾಳಶಾಹಿಗಳು ಮತ್ತು ತಾಲುಕ್ ದಾರರು, ಜಮೀನು ದಾರರ ಪರವಾಗಿತ್ತು ಎಂಬ ಭಾವನೆ ಅವರಲ್ಲಿತ್ತು. ದೇಶಕ್ಕೆ ಸ್ವಾತಂತ್ರ್ಯ ದೊರೆತ ನಂತರ, ಬಲಾಢ್ಯ ಜಮೀನುದಾರರು
ಕಾಂಗ್ರೆಸ್ ಪಕ್ಷ ಸೇರಿ, ಅಧಿಕಾರದಲ್ಲಿ ಪಾಲ್ಗೊಂಡದ್ದನ್ನು ಗುರುತಿಸಿದ ರಾಮಚಂದ್ರ ಅವರು, ಒಂದು ರೀತಿಯಲ್ಲಿ ಭ್ರಮ ನಿರಸನಗೊಂಡರು. ಬದುಕಿನ ಕೊನೆಯ ದಿನಗಳಲ್ಲಿ ಅವರು ಕಷ್ಟದ ಜೀವನ ನಡೆಸಿ, 1950ರಲ್ಲಿ ಮೃತಪಟ್ಟರು.

ಕಾಂಗ್ರೆಸ್ ಪಕ್ಷದ ನಾಯಕರು ಹೇಳಿದಂತೆ ಕೇಳಿದ್ದರೆ ತಾನೂ ಸುಖವಾಗಿ ಬಂಗಲೆಯಲ್ಲಿ ಜೀವಿಸಬಹುದಿತ್ತು ಎಂದು ಅವರು ಬರೆದುಕೊಂಡಿದ್ದರು! ಉತ್ತರ ಪ್ರದೇಶ ಮತ್ತು ಅವಧ್ ಪ್ರದೇಶದಲ್ಲಿ ಬೃಹತ್ ಮಟ್ಟದಲ್ಲಿ ರೈತ ಹೋರಾಟವನ್ನು ಸಂಘಟಿಸಿದ ರಾಮಚಂದ್ರ ಅವರ ಹೆಸರು ಇಂದು ಜನರ ನೆನಪಿನಿಂದ ಮರೆಯಾಗಿರುವುದು ಒಂದು ದುರಂತ.

(ಪ್ರೊಫೆಸರ್ ಕಪಿಲ್ ಕುಮಾರ್ ಅವರ ಲೇಖನವನ್ನು ಆಧರಿಸಿದ್ದು)

error: Content is protected !!