Saturday, 27th July 2024

ಸಚಿನ್ ತೆಂಡೂಲ್ಕರ‍್’ಗೆ ಹೆಣ್ಣು ಕೊಟ್ಟ ಮಾವ ಯಾರು ?

ಇದೇ ಅಂತರಂಗ ಸುದ್ದಿ

vbhat@me.com

‘ಕ್ರಿಕೆಟ್ ದೇವರು’ ಎಂದೇ ಕರೆಯಿಸಿಕೊಳ್ಳುವ, ‘ಭಾರತರತ್ನ’ ಸಚಿನ್ ತೆಂಡೂಲ್ಕರ್ ಜೀವಿತ ಅವಧಿಯಲ್ಲಿ ದಂತಕಥೆಯಾಗಿರುವುದು ಎಲ್ಲರಿಗೂ ಗೊತ್ತು.
‘ಸಚಿನ್ ಆಟವನ್ನು ಹತ್ತಿರದಿಂದ ನೋಡಿದ್ದು, ಅವರೊಂದಿಗೆ ಆಡಿದ್ದು, ಅವರ ಕಾಲಾವಧಿಯಲ್ಲಿ ನಾನೂ ಕ್ರಿಕೆಟ್ ಆಡಿರುವುದು ನನ್ನ ಅದೃಷ್ಟ’ ಎಂದು ಸ್ವತಃ ಬ್ರಿಯಾನ್ ಲಾರಾನಂಥ ಆಟಗಾರ ಮನಬಿಚ್ಚಿ ಹೇಳಿರುವುದು ಗೊತ್ತು. ಸಚಿನ್ ಆಡಿದ ಪಂದ್ಯ, ಹೊಡೆದ ರನ್, ಬಾರಿಸಿದ ಶತಕ-ಅರ್ಧಶತಕ, ಹಿಡಿದ ಕ್ಯಾಚ್, ಆಡಿದ ಟೆಸ್ಟ್ ಮ್ಯಾಚ್… ಹೀಗೆ ಪ್ರತಿ ವಿವರವನ್ನೂ ಬಲ್ಲವರಿದ್ದಾರೆ.

ಸಚಿನ್ ಆಡಿದ ಎಲ್ಲ ಪಂದ್ಯಗಳನ್ನೂ ನೋಡಿದವರಿದ್ದಾರೆ. ಸಚಿನ್ ಎಂಬ ಆಟಗಾರ ಕ್ರಿಕೆಟ್ ದೇವರಾಗಿದ್ದು ಒಂದು ಅದ್ಭುತಗಾಥೆ. ಸಚಿನ್ ಕ್ರಿಕೆಟ್ ಜೀವನದ ಎಲ್ಲ ವಿವರಗಳನ್ನು ಬಲ್ಲವರಿಗೆ, ಒಂದು ಪ್ರಶ್ನೆ ಕೇಳಿ ನೋಡಿ. ‘ಸಚಿನ್ ತೆಂಡೂಲ್ಕರ್ ಅವರ ಪತ್ನಿ ಅಂಜಲಿ ಅವರ ತಂದೆ ಮತ್ತು ತಾಯಿ ಯಾರು?’ ಎಂದು ಕೇಳಿ,
ಬಹುತೇಕರಿಗೆ ಗೊತ್ತಿಲ್ಲ. ‘ಹಾಗೆ ಗೊತ್ತಿಲ್ಲದಂತೆ ಬದುಕುವುದು ಸಹ ಒಂದು ಕಲೆ’ ಎಂದು ಅಂಜಲಿ ಅವರ ತಾಯಿ ಹೇಳಿರುವುದು ಸುದ್ದಿಯಾಗಿತ್ತು. ಇರಲಿ.
ಸಚಿನ್ ತೆಂಡೂಲ್ಕರ್ ಅವರಿಗೆ ಹೆಣ್ಣು ಕೊಟ್ಟ ಮಾವನ ಹೆಸರು ಆನಂದ ಮೆಹತಾ. ಮೂಲತಃ ಅವರು ಕೈಗಾರಿಕೋದ್ಯಮಿ. ಅವರು ಓದಿದ್ದು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ.

ಆಗ ಅವರಿಗೆ ಪರಿಚಿಯವಾದವರು ಅನ್ನಬೆಲ. ಮೂಲತಃ ಅವರು ಸ್ಕಾಟ್ ಲ್ಯಾಂಡಿನವರು. ಅವರು ಸೋಷಿಯಲ್ ಅಡ್ಮಿನಿಸ್ಟ್ರೇಷನ್ ವಿಷಯದಲ್ಲಿ ಅಲ್ಲಿ ಡಿಪ್ಲೊಮಾ ಓದುತ್ತಿದ್ದರು. ಆ ಪರಿಚಯ ಪ್ರೀತಿಗೆ ತಿರುಗಿ ವಿವಾಹದಲ್ಲಿ ಅಂತ್ಯವಾಯಿತು. ಇದು ಅರವತ್ತರ ದಶಕದ ಕಥೆ. ೧೯೬೬ರಲ್ಲಿ ಆನಂದ ಮೆಹತಾ ಮತ್ತು ಅನ್ನಬೆಲ್ ಭಾರತಕ್ಕೆ ಬಂದರು. ಅನ್ನಬೆಲ್ ಮುಂಬೈಯಲ್ಲಿ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡರು. ಸ್ಪಾಸ್ಟಿಕ್ ಸೊಸೈಟಿ ಆಫ್ ಇಂಡಿಯಾ ಸ್ಥಾಪನೆಯಲ್ಲಿ ಅವರ ಪಾತ್ರ ಮಹತ್ವದ್ದು. ನಂತರ ಹಾಲೆಂಡ್ ವೆಲ್ ಫೇಟರ್ ಸೆಂಟರ್ ಎಂಬ ಸ್ವಯಂ ಸೇವಾ ಸಂಸ್ಥೆಯನ್ನು ಸೇರಿದರು. ಈ ಸಂಸ್ಥೆ ನಂತರ ‘ಅಪ್ನಾಲಯ’ ಎಂದು ಕರೆಯಿಸಿಕೊಂಡು ಪ್ರಸಿದ್ಧವಾಯಿತು. ಮಹಿಳಾ ಸಬಲೀಕರಣದಲ್ಲಿ ‘ಅಪ್ನಾಲಯ’ದ ಪಾತ್ರ ನಿರ್ಣಾಯಕವಾದುದು.

ಪ್ರತಿ ವರ್ಷ ಸಚಿನ್ ತೆಂಡೂಲ್ಕರ್ ಇನ್ನೂರು ಮಕ್ಕಳನ್ನು ‘ಅಪ್ನಾಲಯ’ದ ಮೂಲಕ ದತ್ತು ತೆಗೆದುಕೊಳ್ಳುವುದು ಅನೇಕರಿಗೆ ಗೊತ್ತಿಲ್ಲ. ಇನ್ನು ಆನಂದ ಮೆಹತಾ ಕುರಿತು. ತಮ್ಮ ಹೆಸರಿನಲ್ಲಿ ‘ಆನಂದ ಗ್ರೂಪ್’ ಸ್ಥಾಪಿಸಿ ಸಾಧನೆ ಮಾಡಿದ ಮೆಹತಾ ಹೆಸರಾಂತ ಉದ್ಯಮಿ. ಅದಕ್ಕಿಂತ ಮುಖ್ಯವಾಗಿ ಇವರು ಹೆಸರು ಮಾಡಿದ್ದು
ಬ್ರಿಜ್ (ಇಸ್ಪೀಟು) ಆಟಗಾರರಾಗಿ. ಇವರು ಹತ್ತಾರು ಸಲ ಭಾರತ ವನ್ನು ಅಂತಾರಾಷ್ಟ್ರೀಯ ಬ್ರಿಜ್ ಟೂರ್ನಮೆಂಟಿನಲ್ಲಿ ಭಾರತವನ್ನು ಪ್ರತಿನಿಧಿಸಿ, ಏಳು ಸಲ ಚಾಂಪಿಯನ್ ಆದವರು. ‘ನನಗೆ ಕ್ರಿಕೆಟ್ ಆಟದ ಬಗ್ಗೆ ಹೆಚ್ಚು ಗೊತ್ತಿಲ್ಲ. ಸ್ಟೇಡಿಯಂಗೆ ಹೋಗಿ ಕ್ರಿಕೆಟ್ ನೋಡಿದ್ದೂ ಕಡಿಮೆಯೇ. ಸಚಿನ್ ಬ್ಯಾಟ್ ಮಾಡುವಾಗ ಇಡೀ ದೇಶ ವೀಕ್ಷಿಸಿದರೂ ನಾನು ವೀಕ್ಷಿಸಿದ್ದು ಕಡಿಮೆಯೇ.

ನನಗೆ ಕ್ರಿಕೆಟ್‌ನಲ್ಲಿ ಹೆಚ್ಚು ಆಸಕ್ತಿ ಇಲ್ಲ’ ಎಂದು ಸುಮಾರು ಹದಿನಾಲ್ಕು ವರ್ಷಗಳ ಹಿಂದೆ ಆನಂದ ಮೆಹತಾ ಹೇಳಿದ್ದು ಸುದ್ದಿಯಾಗಿತ್ತು. ‘ಸಚಿನ್ ಮಾವನಿಗೆ ಕ್ರಿಕೆಟ್ ಗೊತ್ತಿಲ್ಲವಂತೆ’ ಎಂದು ಪತ್ರಿಕೆಗಳು ಸೋಜಿಗ ವರದಿ ಪ್ರಕಟಿಸಿದ್ದವು. ಅದೇ ಸಂದರ್ಭದಲ್ಲಿ ಆನಂದ ಮೆಹತಾ, ‘ಸಚಿನ್‌ಗೆ ಬ್ರಿಜ್ ಆಟದಲ್ಲಿ ಸ್ವಲ್ಪವೂ ಆಸಕ್ತಿ ಇಲ್ಲ. ಅದನ್ನು ಕಲಿಸಲು ನಾನು ಪ್ರಯತ್ನಿಸಿ ವಿಫಲನಾದೆ. ಬ್ರಿಜ್ ಕಲಿಯಲು ಸಚಿನ್ ಸ್ವಲ್ಪವೂ ಆಸಕ್ತಿ ತೋರಿಸಲಿಲ್ಲ. ನನ್ನ ಮೊಮ್ಮಕ್ಕಳು ಕಲಿಯಬಹುದೇನೋ,
ನೋಡೋಣ’ ಹೇಳಿದ್ದರು.

ಆನಂದ ಮೆಹತಾ ಅವರ ತಾಯಿ ಅಮರಗಂಗಾ ಮೆಹತಾ. ಇವರು ನೆಹರು-ಗಾಂಧಿ ಕುಟುಂಬಕ್ಕೆ ನಿಕಟವರ್ತಿಯಾಗಿದ್ದ ಪುಪುಲ್ ಜಯಕರ್ ಅವರ ಸಹೋದರಿ. ಪುಪುಲ್ ಜಯಕರ್ ಇಂದಿರಾಗಾಂಧಿ ಜೀವನಚರಿತ್ರೆ ಬರೆದಿರುವುದು ಗೊತ್ತಿರುವ ಸಂಗತಿ. ಈ ಸಂಪರ್ಕದಲ್ಲಿ ಸಚಿನ್ ಪತ್ನಿ ಅಂಜಲಿಯವರು ಚಿಕ್ಕವರಾಗಿದ್ದಾಗ ಇಂದಿರಾ ಗಾಂಧಿ ನಿವಾಸಕ್ಕೆ ಆಗಾಗ ಹೋಗುತ್ತಿದ್ದ ರಂತೆ. ೨೦೧೨ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಸಚಿನ್ ಅವರನ್ನು ರಾಜ್ಯಸಭೆ ಸದಸ್ಯರನ್ನಾಗಿ ನೇಮಿಸಿದಾಗ, ಈ ವಿವರ ಗಳು ಬಹಿರಂಗವಾಗಿದ್ದವು. ನಂತರ ಯುಪಿಎ ಸರಕಾರ ೨೦೧೪ರಲ್ಲಿ ಸಚಿನ್ ಗೆ ಪ್ರತಿಷ್ಠಿತ ‘ಭಾರತರತ್ನ’ ಪ್ರಶಸ್ತಿಯನ್ನು ಘೋಷಿಸಿತು.
ಆ ಪ್ರಶಸ್ತಿಗೆ ಅವರು ಎಲ್ಲ ವಿಧಗಳಲ್ಲೂ ಅರ್ಹರಾಗಿದ್ದರು ಎಂಬುದು ಬೇರೆ ಮಾತು. ಅಂಜಲಿ ತೆಂಡೂಲ್ಕರ್ ಅವರ ಚಿಕ್ಕಮ್ಮ ರಾಧಿಕಾ ಹೆರ್ಜ್ ಬೆರ್ಗೆರ್ ಕೂಡ ಶಿಕ್ಷಣಕ್ಕಾಗಿ ಸಲ್ಲಿಸಿದ ಸೇವೆಗಾಗಿ ‘ಪದ್ಮಶ್ರೀ’ ಪ್ರಶಸ್ತಿಗೆ ಪಾತ್ರರಾದರು.

ಅಂಜಲಿ ಮತ್ತು ಸಚಿನ್ ಮೊದಲ ಬಾರಿಗೆ ಭೇಟಿಯಾದಾಗ, ಅವರು (ಸಚಿನ್) ಕ್ರಿಕೆಟ್ ಆಟಗಾರ ಎಂಬುದೂ ಗೊತ್ತಿರಲಿಲ್ಲವಂತೆ. ಸಚಿನ್ ಆಟವನ್ನೂ ಟಿವಿಯಲ್ಲಿ ನೋಡಿರಲಿಲ್ಲವಂತೆ. ಸಚಿನ್ ಅವರಿಗಿಂತ ಆರು ವರ್ಷ ದೊಡ್ಡವಳಾದ ಅಂಜಲಿ, ಮೂಲತಃ ಮಕ್ಕಳ ವೈದ್ಯೆ. ಸಚಿನ್‌ಗಾಗಿ ತನ್ನ ವೃತ್ತಿಯನ್ನು ಬಿಟ್ಟು ಕುಟುಂಬವನ್ನು ನೋಡಿಕೊಂಡವಳು.

ಪೈಲಟ್ ಮತ್ತು ಲ್ಯಾಂಡಿಂಗ್
ಕೆಲವು ವಾರಗಳ ಹಿಂದೆ, ನಾನು ಪ್ಯಾಟ್ರಿಕ್ ಸ್ಮಿಥ್ ಬಗ್ಗೆ ಬರೆದಿದ್ದೆ. ವಿಮಾನಯಾನಕ್ಕೆ ಸಂಬಂಧಿಸಿದಂತೆ ಜನರು ಕೇಳುವ ಪ್ರಶ್ನೆಗಳಿಗೆ, ಎಲ್ಲರಿಗೂ ಅರ್ಥ ಆಗುವ ಹಾಗೆ, ಆತ ಉತ್ತರಿಸು ತ್ತಾನೆ. ವಿಮಾನ, ವಿಮಾನ ನಿಲ್ದಾಣ, ವಿಮಾನಯಾನ… ಹೀಗೆ ಈ ವಿಷಯಕ್ಕೆ ಸಂಬಂಧಿಸಿದ ಯಾವುದೇ ಪ್ರಶ್ನೆಗಳಿಗೆ ಆತ ಸಮಾಧಾನ ಕರ ಉತ್ತರ ನೀಡುತ್ತಾನೆ. ಈ ಪ್ರಶ್ನೋತ್ತರಗಳನ್ನು ಸೇರಿಸಿ ಆತ Ask The Pilot ಎಂಬ ಪುಸ್ತಕವನ್ನೂ ಹೊರ ತಂದಿದ್ದಾನೆ.

ಮೂಲತಃ ಸ್ಮಿಥ್ ಕಮರ್ಷಿಯಲ್ ಏರ್‌ಲೈನ್ಸ್ ಪೈಲಟ್ ಮತ್ತು ಉತ್ತಮ ಟ್ರಾವೆಲ್ ಬರಹಗಾರ. ವಿಮಾನಯಾನಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಜಗತ್ತಿನ ಪ್ರತಿಷ್ಠಿತ ಪತ್ರಿಕೆಗಳಿಗೆ, ನಿಯತಕಾಲಿಕಗಳಿಗೆ ಸ್ಮಿಥ್ ನಿಯಮಿತವಾಗಿ ಬರೆಯುತ್ತಾನೆ. ಸಾಮಾನ್ಯ ವಾಗಿ ಪೈಲಟ್‌ಗಳು ಚೆನ್ನಾಗಿ ಮಾತಾಡಬಲ್ಲರು. ಅದು ಉತ್ತಮ ಪೈಲಟ್ ಲಕ್ಷಣಗಳಂದು. ಆದರೆ ನೂರು ಪೈಲಟ್‌ಗಳ ಪೈಕಿ ಒಬ್ಬ ಬರಹಗಾರನನ್ನು ಹುಡುಕುವುದು ಕಷ್ಟ. ಕಳೆದ ೩೩ ವರ್ಷ ಗಳಿಂದ ಕಾರ್ಗೋ ಮತ್ತು ಪ್ಯಾಸೆಂಜರ್ ವಿಮಾನಗಳ ಪೈಲಟ್ ಆಗಿರುವ ಸಿಥ್, ಡೊಮೆಸ್ಟಿಕ್ ಮತ್ತು ಅಂತಾರಾಷ್ಟ್ರೀಯ ಮಾರ್ಗ ಗಳಲ್ಲಿ ವಿಮಾನವನ್ನು ಹಾರಿಸಿದ ಅನುಭವ ಇರುವವನು.
ಕೆಲವು ತಿಂಗಳುಗಳ ಹಿಂದೆ, ಪ್ರಯಾಣಿಕನೊಬ್ಬ ಸ್ಮಿಥ್‌ಗೆ ಒಂದು ಪ್ರಶ್ನೆ ಕೇಳಿದ್ದ – ಮಿಸ್ಟರ್ ಪೈಲಟ್, ಪೈಲಟ್ ಪಕ್ಕಾ ಕಸುಬಿ ಹೌದೋ, ಅಲ್ಲವೋ ಎಂಬುದನ್ನು ನಿರ್ಧರಿಸುವುದು ಹೇಗೆ? ಇದಕ್ಕೆ ಸ್ಮಿಥ್ ಉತ್ತರಿಸಿದ್ದ – ಇದು ಮೇಲ್ನೋಟಕ್ಕೆ ಸರಳ ಪ್ರಶ್ನೆ ಎಂದೆನಿಸಬಹುದು.

ಆದರೆ ಈ ಪ್ರಶ್ನೆಗೆ ನೀಡುವ ಉತ್ತರದಲ್ಲಿ ಇಡೀ ವಿಮಾನಯಾನದ ಅಂತರಂಗ ಅಡಗಿದೆ. ಅನೇಕರಲ್ಲಿ ತಪ್ಪು ಅಭಿಪ್ರಾಯವಿದೆ. ವಿಮಾನವನ್ನು ಸರಿಯಾಗಿ ಟೇಕಾ- ಮಾಡುವ ಮತ್ತು ಸುರಕ್ಷಿತವಾಗಿ ಲ್ಯಾಂಡ್ ಮಾಡುವವನೇ ಉತ್ತಮ ಪೈಲಟ್ ಎಂಬ ಅಭಿಪ್ರಾಯವಿದೆ. ಟೇಕಾಫ್ ಮತ್ತು ಲ್ಯಾಂಡಿಂಗ್ ಅನ್ನು ಆಧರಿಸಿ ಪೈಲಟ್‌ ನನ್ನು ಅಳೆಯುವುದೆಂದರೆ, ಒಂದು ಪದ ಅಥವಾ punctuation ಚಿಹ್ನೆ ಮೂಲಕ ಒಂದು ಪ್ಯಾರ ಅಥವಾ ಪುಟದ ಬರಹವನ್ನು ಅಳೆದಂತೆ. ಸಾಮಾನ್ಯವಾಗಿ ಟೇಕಾ- ಆಗುವಾಗ ಯಾವ ಸಮಸ್ಯೆಯೂ ಆಗುವುದಿಲ್ಲ. ಪೈಲಟ್‌ಗಳಿಗೂ ಅದು ಸಮಸ್ಯೆ ಅಲ್ಲ. ಒಬ್ಬ ಪೈಲಟ್ ಹತ್ತು ತಾಸು ಸುರಕ್ಷಿತವಾಗಿ ವಿಮಾನ ಹಾರಿಸಿ, ಲ್ಯಾಂಡ್ ಆಗುವಾಗ ‘ಧಡ್’ ಎಂದು ಭೂಸ್ಪರ್ಶ ಮಾಡಿದರೆ, ‘ಪಡಪೋಶಿ ಪೈಲಟ್’ ಎಂದು ಅಂದುಕೊಳ್ಳದೇ ಹೋಗುವುದಿಲ್ಲ.

ಹತ್ತು ತಾಸು ವಿಮಾನ ಹಾರಿಸಿದವನು ಇವನೇನಾ? ಎಂದು ಎಲ್ಲರೂ ಉದ್ಗಾರ ತೆಗೆಯುತ್ತಾರೆ. ‘ಭಗವಂತಾ! ಬಚಾವ್ ಮಾಡಿದೆಯಲ್ಲ!’ ಎಂದು ತಮ್ಮ
ಅದೃಷ್ಟವನ್ನು ಮೆಚ್ಚುತ್ತಾರೆ. ಲ್ಯಾಂಡ್ ಮಾಡುವಾಗ, ರನ್ ವೇ ಉದ್ದ, ಗಾಳಿ ಬೀಸುವ ಗತಿ, ರನ್ ವೇ ಗೋಚರವಾಗುವ ಪ್ರಮಾಣ, ವಿಮಾನದ ಭಾರ, ವಿಮಾನ ಸಂಚಾರ ನಿಯಂತ್ರಣ ಅಧಿಕಾರಿಗಳು ನೀಡುವ ಸೂಚನೆ.. ಈ ಎಲ್ಲ ಸಂಗತಿಗಳೂ ಮುಖ್ಯವಾಗುತ್ತವೆ. ರನ್ ವೇ ಉದ್ದ ಕಡಿಮೆ ಇರುವ ವಿಮಾನ ನಿಲ್ದಾಣದಲ್ಲಿ, ‘ಟಚ್ ಡೌನ್ ಜೋನ್’ನೊಳಗೆ ಬೇಗನೆ ವಿಮಾನವನ್ನು ಸುರಕ್ಷಿತವಾಗಿ ಇಳಿಸುವುದು ಮುಖ್ಯ. ಕ್ರಾಸ್ ವಿಂಡ್ ಇದ್ದಾಗಲೂ ಈ ಸಂಗತಿ ಮುಖ್ಯವಾಗುತ್ತದೆ. ಆಗ ವಿಮಾನ ಬೇಗನೆ ಭೂಮಿಯನ್ನು ಸ್ಪರ್ಶಿಸುವುದರಿಂದ ‘ಧಡ್’ ಎಂದು ಅಪ್ಪಳಿಸುತ್ತದೆ. ಇದನ್ನು ಕ್ರ್ಯಾಶ್ ಲ್ಯಾಂಡಿಂಗ್ ಅಂತಾರೆ.

ಆಗ ಎಲ್ಲರೂ ಪೈಲಟ್‌ನನ್ನು ಉಗಿಯುತ್ತಾರೆ. ಆದರೆ ಆತನ ಜಾಣ್ಮೆ ಅರಿವಿಗೆ ಬರುವುದೇ ಇಲ್ಲ. ರನ್ ವೇ ಉದ್ದ ಕಮ್ಮಿಯಿರುವ, ಗಾಳಿ ಅಡ್ಡ ಬೀಸುತ್ತಿರುವ ಮತ್ತು visibility ಅಸ್ಪಷ್ಟವಾಗಿರುವ ಅಂಶ ಪ್ರಯಾಣಿಕರ ಅರಿವಿಗೆ ಬಂದಿರುವುದಿಲ್ಲ. ಕ್ರಾಸ್ ವಿಂಡ್ ಇದ್ದಾಗ, ವಿಪರೀತ ಗಾಳಿಮಳೆಯಿದ್ದಾಗ, ವಿಮಾನ ಸೊಟ್ಟವಾಗಿ ಲ್ಯಾಂಡ್ ಆಗುತ್ತದೆ. ಒಂದು ಸೆಟ್ ಚಕ್ರ ಇನ್ನೊಂದಕ್ಕಿಂತ ಮುಂಚಿತವಾಗಿ ಭೂಸ್ಪರ್ಶವಾಗುತ್ತದೆ. ಸೊಟ್ಟಗೆ ಲ್ಯಾಂಡ್ ಆದರೂ, ತಕ್ಷಣ ವಿಮಾನವನ್ನು ನೇರವಾಗಿ ತಿರುಗಿಸಬೇಕು. ಇಲ್ಲದಿದ್ದರೆ ವಿಮಾನ ರನ್ ವೇ ಬಿಟ್ಟು ಹೊರಕ್ಕೆ ಹೋಗುವ ಅಪಾಯವಿರುತ್ತದೆ. ಈ ರೀತಿ ಲ್ಯಾಂಡ್ ಮಾಡುವುದು ಪೈಲಟ್ ಜಾಣ್ಮೆಯನ್ನು ಆಧರಿಸಿರುತ್ತದೆ.

ಆಗ ಪ್ರಯಾಣಿಕರಿಗೆ smooth landing ಅನುಭವ ಆಗಲು ಸಾಧ್ಯವೇ ಇಲ್ಲ. ಹೀಗಾಗಿ ಅವರು ಪೈಲಟ್ ಕಸುಬಿ ಅಲ್ಲ ಎಂಬ ನಿರ್ಧಾರಕ್ಕೆ ಬಂದುಬಿಡುತ್ತಾರೆ.
ರಾಮನಾಥ ಪಾರ್ಕರ್ – ಆರ್.ಎನ್.ಶೆಟ್ಟಿ ಮುಂಬೈನಲ್ಲಿ ಸುಮಾರು ಇಪ್ಪತ್ನಾಲ್ಕು ವರ್ಷಗಳಿಂದ ನೆಲೆಸಿರುವ ನನ್ನ ಕಾಲೇಜು ಸಹಪಾಠಿ ಭರತ್ ಪುರಾಣಿಕ್ ಅವರನ್ನು ಕಳೆದ ವಾರ, ಬೆಂಗಳೂರಿನ ಒಂದು ಮದುವೆ ಕಾರ್ಯಕ್ರಮದಲ್ಲಿ ಭೇಟಿಯಾಗಿದ್ದೆ. ಪುರಾಣಿಕ್ ಮುಂಬೈಯಲ್ಲಿ ತಮ್ಮದೇ ಒಂದು ಕಂಪ್ಯೂಟರ್ ಸಂಸ್ಥೆ ಸ್ಥಾಪಿಸಿದ್ದಾರೆ. ಸುಮಾರು ನಲವತ್ತು ಮಂದಿ ಆ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಲಂಡನ್ ಮತ್ತು ಸಿಂಗಾಪುರದಲ್ಲೂ ಅವರು ಕಚೇರಿಗಳನ್ನು ತೆರೆದಿದ್ದಾರೆ.

ಪುರಾಣಿಕ್ ಅವರನ್ನು ಭೇಟಿಯಾಗದೇ ಮೂವತ್ತೆಂಟು ವರ್ಷ ಗಳಾಗಿದ್ದವು. ಕಾಲೇಜು ಬಿಟ್ಟ ನಂತರ, ಮೊದಲ ಬಾರಿಗೆ ಅವರು ಸಿಕ್ಕಿದ್ದರು. ಅವರನ್ನು ಗುರುತಿ ಸಲು ಕಷ್ಟವೇನೂ ಆಗಲಿಲ್ಲ. ಬಹಳ ಹೊತ್ತು ಇಬ್ಬರೂ ಮಾತಾಡಿದೆವು. ಹೋಗುವಾಗ ಅವರು ತಮ್ಮ ವಿಸಿಟಿಂಗ್ ಕಾರ್ಡ್ ಕೊಟ್ಟರು. ಅದರಲ್ಲಿ ಅವರ ಆಫೀಸು ವಿಳಾಸ – ರಾಮನಾಥ ಪಾರ್ಕರ್ ಮಾರ್ಗ, ಎಂಐಜಿ ಕ್ಲಬ್ ಹತ್ತಿರ, ಬಾಂದ್ರಾ ಪೂರ್ವ, ಮುಂಬೈ ಎಂದು ಬರೆದಿತ್ತು. ನಾನು ಕುತೂಹಲದಿಂದ ಪುರಾಣಿಕ್‌ಗೆ, ‘ಓಹೋ, ನಿಮ್ಮ ಆಫೀಸು ರಾಮನಾಥ ಪಾರ್ಕರ್ ಮಾರ್ಗ್‌ನಲ್ಲಿದೆಯಾ?’ ಎಂದು ಕೇಳಿದೆ. ಅದಕ್ಕೆ ಅವರು, ’ಹೌದು.. ನಿಮಗೆ ಆ ಪ್ರದೇಶ ಗೊತ್ತಾ?’ ಎಂದು ಕೇಳಿದರು. ‘ಆ ಪ್ರದೇಶ ಗೊತ್ತಿಲ್ಲ. ಆದರೆ ರಾಮನಾಥ ಪಾರ್ಕರ್ ಗೊತ್ತು’ ಎಂದೆ. ಅವರು ನನ್ನ ಮುಖವನ್ನು ದಿಟ್ಟಿಸಿದರು.

‘ಅಂದ ಹಾಗೆ, ನಿಮಗೆ ರಾಮನಾಥ ಪಾರ್ಕರ್ ಯಾರು ಗೊತ್ತಾ?’ ಎಂದು ಕೇಳಿದೆ. ಅದಕ್ಕೆ ಅವರು, ‘ನನ್ನ ಆಫೀಸು ಇರುವುದೇ ಅಲ್ಲಿ. ಆದರೆ ರಾಮನಾಥ ಪಾರ್ಕರ್ ಯಾರು ಎಂಬುದು ಗೊತ್ತಿಲ್ಲ’ ಎಂದರು. ಅವರ ಮುಖದಲ್ಲಿ ವಿಷಾದದ ಸಣ್ಣ ಸೆಲೆ ಕಾಣಿಸಿತು. ರಾಮನಾಥ ಪಾರ್ಕರ್ ಮಾರ್ಗ್‌ದಲ್ಲಿದ್ದರೂ ಆ ಮನುಷ್ಯನ
ಹೆಸರೇ ಗೊತ್ತಿಲ್ಲವಲ್ಲ ಎಂದು ನಾನು ಅಂದುಕೊಂಡೆ. ಅವರಿಗೂ ಹಾಗೆ ಅನಿಸಿರಬೇಕು. ‘ಭಟ್ರೇ, ರಾಮನಾಥ ಪಾರ್ಕರ್ ಯಾರು?’ ಎಂದು ಮೆಲ್ಲಗೆ ಕೇಳಿದರು.

‘ನನಗೆ ಅವರ ಬಗ್ಗೆ ಹೆಚ್ಚು ಗೊತ್ತಿಲ್ಲ. ಆದರೆ ಅವರು ಅಷ್ಟೇನೂ ಹೆಸರು ಮಾಡಿರದ, ಉತ್ತಮ ಕ್ರಿಕೆಟ್ ಆಟಗಾರರು. ಈ ದೇಶ ಕಂಡ ಅತ್ಯುತ್ತಮ ಫೀಲ್ಡರ್‌ಗಳಲ್ಲಿ ಒಬ್ಬರು. ಅವರು ಆಡಿದ್ದು ಕೇವಲ ಎರಡೇ ಎರಡು ಟೆಸ್ಟ್ ಪಂದ್ಯ. ಶಾರ್ಟ್ ಲೆಗ್ ಮತ್ತು ಸಿಲ್ಲಿ ಪಾಯಿಂಟ್‌ನಲ್ಲಿ ಅವರನ್ನು ಮೀರಿಸುವ ಫೀಲ್ಡರ್ ಇರಲಿಲ್ಲವಂತೆ.
ಅವರ ವೇಗ, ಪ್ರತಿ-ಲನ ಅತ್ಯಂತ ಕರಾರುವಾಕ್ಕಾಗಿತ್ತಂತೆ. ಹಾಗಂತ ಸುನಿಲ್ ಗವಾಸ್ಕರ್ ಬರೆದಿದ್ದನ್ನು ಓದಿದ ನೆನಪು’ ಎಂದು ಹೇಳಿದೆ.

ಮುಂಬೈ ತಂಡವನ್ನು ರಣಜಿ ಪಂದ್ಯಗಳಲ್ಲಿ ಪ್ರತಿನಿಧಿಸಿದ್ದ ರಾಮನಾಥ ಪಾರ್ಕರ್, ೮೫ ಪ್ರಥಮ ದರ್ಜೆ ಪಂದ್ಯಗಳಲ್ಲಿ ಆಡಿದ್ದಾರೆ. ೬೪ ಕ್ಯಾಚುಗಳನ್ನು ಹಿಡಿದಿದ್ದಾ ರೆ. ೮ ಶತಕ ಮತ್ತು ೨೧ ಅರ್ಧ ಶತಕ ಹೊಡೆದಿದ್ದಾರೆ. ಬಹಳ ವರ್ಷಗಳ ಕಾಲ ಸುನಿಲ್ ಗವಾಸ್ಕರ್ ಅವರೊಂದಿಗೆ ಆರಂಭಿಕ ಆಟಗಾರರಾಗಿ ಜತೆಯಾಗಿದ್ದರು. ಮತ್ತೊಬ್ಬ ಆಟಗಾರ ದಿಲೀಪ್ ವೆಂಗಸರ್ಕಾರ್ ಕೂಡ ರಾಮನಾಥ ಪಾರ್ಕರ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಹೇಳಿದ್ದಿದೆ. ೧೯೯೫ರ ಒಂದು ದಿನ ಮುಂಬೈ ಯಲ್ಲಿ ದ್ವಿಚಕ್ರವಾಹನದಲ್ಲಿ ಹೋಗುವಾಗ, ಕಾರೊಂದು ಡಿಕ್ಕಿ ಹೊಡೆದು ಪಾರ್ಕರ್, ರಸ್ತೆ ಯ ಮೂರ್ಛೆ ಬಿದ್ದರು. ಸುಮಾರು ೪೩ ತಿಂಗಳಾದರೂ ಅವರಿಗೆ ಪ್ರಜ್ಞೆ ಬರಲಿಲ್ಲ. ಅಷ್ಟು ತಿಂಗಳುಗಳ ಕಾಲ ಅವರು ಕೋಮಾದಲ್ಲಿಯೇ ಇದ್ದರು. ಅವರ ಕುಟುಂಬಕ್ಕೆ ಆಸ್ಪತ್ರೆಗೆ ಕಟ್ಟಲು ಹಣವಿರಲಿಲ್ಲ. ಸುನಿಲ್ ಗವಾಸ್ಕರ್ ನೇತೃತ್ವದಲ್ಲಿ ದೇಣಿಗೆ ಸಂಗ್ರಹಿಸಿ ಆಸ್ಪತ್ರೆ ಬಿಲ್ ಅನ್ನು ಪಾವತಿಸಲಾಯಿತು. ತಮ್ಮ ೫೨ ನೇ ವಯಸ್ಸಿನಲ್ಲಿ ಪಾರ್ಕರ್ ನಿಧನರಾದರು. (ಈ ಎಲ್ಲ ಸಂಗತಿಗಳನ್ನು ಸೇರಿಸಿ, ಕೆಲ ವರ್ಷಗಳ ಹಿಂದೆ ನಾನು ಅವರ ಬಗ್ಗೆ ಬರೆದಿದ್ದೆ.) ‘ನೋಡ್ರಿ, ಆ ರಸ್ತೆಯಲ್ಲಿಯೇ ನನ್ನ ಆಫೀಸು ಇದೆ. ಆ ವ್ಯಕ್ತಿ ಯಾರೆಂಬುದು ನನಗೇ ಗೊತ್ತಿಲ್ಲ.. ವೆರಿ ಬ್ಯಾಡ್’ ಎಂದರು ಪುರಾಣಿಕ್.

ನಾನು ಅವರನ್ನು ಸಂತೈಸುತ್ತಾ, ‘ಹೌದು, ಒಮ್ಮೊಮ್ಮೆ ಹಾಗೆ ಆಗುತ್ತದೆ. ನಾನು ಮೊನ್ನೆ ಆರ್.ಎನ್.ಶೆಟ್ಟಿ ಎಂಜಿನಿಯರಿಂಗ್ ಕಾಲೇಜಿಗೆ ಮುಖ್ಯ ಅತಿಥಿಯಾಗಿ ಕನ್ನಡ ರಾಜ್ಯೋತ್ಸವ ಕಾರ್ಯ ಕ್ರಮದಲ್ಲಿ ಪಾಲ್ಗೊಂಡಿದ್ದೆ. ಒಬ್ಬ ವಿದ್ಯಾರ್ಥಿಗೆ ‘ಆರ್.ಎನ್.ಶೆಟ್ಟಿ ಎಂಬ ಹೆಸರಿನಲ್ಲಿರುವ ಆರ್.ಎನ್. ಪೂರ್ಣ ರೂಪ (ಫುಲ್
ಫಾರ್ಮ್) ಏನು ಎಂದು ಕೇಳಿದೆ. ಆತನಿಗೆ ಗೊತ್ತಿರಲಿಲ್ಲ. ‘ನಾನು ಎಂದೂ ಆ ಬಗ್ಗೆ ಯೋಚಿಸಿಲ್ಲ’ ಎಂದು ಪ್ರಾಮಾಣಿಕವಾಗಿ ಹೇಳಿದ. ‘ರಾಮ ನಾಗಪ್ಪ ಶೆಟ್ಟಿ ಅವರೇ ಆರ್.ಎನ್.ಶೆಟ್ಟಿ ಅಂದ್ರೆ ಅನೇಕರಿಗೆ ಗೊತ್ತಾಗಲಿಕ್ಕಿಲ್ಲ’ ಎಂದೆ. ಆದರೂ ಪುರಾಣಿಕರಿಗೆ ಸಮಾಧಾನವಾಗಲಿಲ್ಲ.

ಊರ ಹೆಸರಿನ ಗೊಂದಲ
ನಾನು ಬ್ರಿಟನ್‌ನ ವೇಲ್ಸ ರಾಜಧಾನಿ ಕಾರ್ಡಿಫ್ ನಲ್ಲಿ ಓದುವಾಗ, ವಾರಾಂತ್ಯ ಪ್ರವಾಸ ಹೋಗುತ್ತಿದ್ದೆವು. ಸಮಸ್ಯೆ ಅಂದರೆ ಆ ಊರುಗಳ ಹೆಸರನ್ನೇ ಹೇಳಲು ಬರುತ್ತಿರಲಿಲ್ಲ. ಒಮ್ಮೆ ನಾನು ಇಡಿಞ ಎಂಬಲ್ಲಿಗೆ ಹೋಗಿದ್ದೆ. ಬಹಳ ಸುಂದರವಾದ ಊರು ಅದು. ವೆಲ್ಷ್ ಭಾಷೆಯಲ್ಲಿ Cwm ಅಂದರೆ ಕಣಿವೆ ಎಂದರ್ಥ. ಈ
ಊರನ್ನು ಪೂರ್ತಿಯಾಗಿ Cwm, Blaenau Gwent ಎಂದು ಕರೆಯುತ್ತಾರೆ. ಅಂದ ಹಾಗೆ ಇಡಿಞನ್ನು ಕುಮ್ ಎಂದು ಉಚ್ಚಾರ ಮಾಡುತ್ತಾರೆ. ಅದನ್ನು ಹಾಗೆ ಉಚ್ಚಾರ ಮಾಡುತ್ತಾರೆ ಎಂದು ನನಗೆ ಅಲ್ಲಿಗೆ ಹೋದಾಗಲೇ ಗೊತ್ತಾಗಿದ್ದು. ಕುಮ್‌ನಿಂದ ಸನಿಹದಲ್ಲಿ ಇನ್ನೊಂದು ಊರು ಇದೆ. ಅದರ ಹೆಸರನ್ನು ಹೇಳುವುದು ತುಸು ಕಷ್ಟವೇ. ಅಂದ ಹಾಗೆ ಆ ಊರಿನ ಹೆಸರು Ynysybw. ಇದನ್ನು ಯಿಸಿಬಲ್ ಎಂದು ಉಚ್ಚರಿಸುತ್ತಾರೆ. ಆದರೆ ಯಿಸಿಬಲ್ ಮತ್ತು Ynysybwl ಎರಡೂ ಒಂದೇ ಎಂಬುದು ಅಲ್ಲಿಗೆ ಹೋಗಿ ಬಂದ ನಂತರವೇ ಗೊತ್ತಾಗಿದ್ದರೂ, ಒಂದನ್ನು ನೆನಪಿಟ್ಟುಕೊಳ್ಳಲು ಇನ್ನೊಂದರ ಸಹಾಯ ಬೇಕೇ ಬೇಕು.

ವೇಲ್ಸ್‌ನಲ್ಲಿ ಓಡಾಡುವಾಗ, ಇದೇ ರೀತಿಯ ಅನೇಕ ಊರುಗಳು ಸಿಗುತ್ತವೆ. ಉದಾಹರಣೆಗೆ, Mwnt, Shwt, Betws Bledrws, Splott Sblot, Llanllwni, Aberllynfi….ಈ ಊರುಗಳ ಪೈಕಿ ಒಂದಕ್ಕಿಂತ ಮತ್ತೊಂದು ಸುಂದರವಾಗಿದೆ. ಆದರೆ ಯಾವ ಊರಿನ ಹೆಸರೂ ನೆನಪಿರದೇ ಇರುವುದರಿಂದ, ಎಲ್ಲಿ, ಏನನ್ನು ನೋಡಿದೆವು ಎಂಬುದು ಕೊನೆಗೂ ಮನಸ್ಸಿನಲ್ಲಿ ಉಳಿಯುವುದಿಲ್ಲ. ಇವೆ ಯಾಕೆ ನೆನಪಾಯಿತೆಂದರೆ, ಇತ್ತೀಚೆಗೆ ನನಗೆ, ಅಲ್ಲಿಗೆ ಹೋದಾಗ ತೆಗೆದ ಫೋಟೋಗಳು ಸಿಕ್ಕವು. ಯಾವ ಫೋಟೋವನ್ನು ಯಾವ ಊರಿನಲ್ಲಿ ತೆಗೆದಿದ್ದು ಎಂಬುದನ್ನು ಪತ್ತೆ ಹಚ್ಚಲು ಪರದಾಡಬೇಕಾಯಿತು.

Leave a Reply

Your email address will not be published. Required fields are marked *

error: Content is protected !!