Saturday, 27th July 2024

ಈ ವರ್ಷ ವಿಶ್ವಾದ್ಯಂತ ಮತದಾನದ ಹಬ್ಬ

ಮತ ಕೂಟ

ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ

ಭಾರತದ ಚುನಾವಣೆಯನ್ನು ತೆಗೆದುಕೊಂಡರೆ ಈ ವರ್ಷದ ಚುನಾವಣೆಯ ಮುಕ್ಕಾಲು ಭಾಗ ಚುನಾವಣೆ ಮುಗಿದಿದೆ. ಭಾರತ ವಿಶ್ವದಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವ. ಚುನಾವಣೆಯೆಂಬುದು ದೊಡ್ಡ ಹಬ್ಬವೇ ಆಗಿದೆ. ಒಟ್ಟಾರೆ ಈ ಬಾರಿಯ ಚುನಾವಣೆ ೧೦೮ ದಿನಗಳ ಕಾಲ ನಡೆಯುವುದು.

ಇದು ಜಾಗತಿಕ ಯುಗ. ಭಾರತದಲ್ಲಿ ನಡೆಯುವ ಚುನಾವಣೆಯ ನೆಲದ ಕಂಪನ ಅಮೆರಿಕ, ಆಸ್ಟ್ರೇಲಿಯಾ, ಯುರೋಪಿಯನ್ ರಾಷ್ಟ್ರಗಳವರೆಗೂ ಅನು
ಭವಕ್ಕೆ ಬರುತ್ತದೆ. ಅಮೆರಿಕದ ಫಲಿತಾಂಶ ಇಡೀ ಜಗತ್ತಿನ ವಿದ್ಯಾಮಾನಗಳನ್ನು ಬದಲಿಸಬಲ್ಲ ಶಕ್ತಿಯನ್ನು ಹೊಂದಿದೆ. ೨೦೨೪ ವಿಶ್ವದಲ್ಲಿ ಹಲವಾರು ಚುನಾವಣೆಗಳನ್ನು ಎದುರಿಸುವ ವರ್ಷವಾಗಿದೆ. ೫೬ ದೇಶಗಳ ಸುಮಾರು ೭೬ ಚುನಾವಣೆಗಳು ಈ ವರ್ಷ ನಡೆಯುತ್ತಿದೆ. ಅವುಗಳಲ್ಲಿ ಐವತ್ತು ರಾಷ್ಟ್ರ ಮಟ್ಟದ ಚುನಾವಣೆಗಳು. ಚುನಾವಣೆಯೆಂದರೆ ಪ್ರಜೆಗಳು ತಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡುವ ಪ್ರಕ್ರಿಯೆ.

೨೦೨೪ನೇ ವರ್ಷ ಪ್ರಜಾಪ್ರಭುತ್ವದ ಪೂರ್ಣಶಕ್ತಿಯನ್ನು ಪರೀಕ್ಷೆಗೆ ಒಡ್ಡುತ್ತಿದೆ. ಪ್ರಪಂಚದ ಶೇ. ೪೯ರಷ್ಟು ಜನರಿಗೆ ಮತ ಚಲಾಯಿಸುವ ಹಕ್ಕಿದೆ. ಪ್ರಜೆ ಗಳು ತಮ್ಮ ಹಕ್ಕನ್ನು ಯಾವ ರೀತಿಯಲ್ಲಿ ಬಳಸಿಕೊಳ್ಳುತ್ತಾರೆ ಎಂಬುದು ಇಡೀ ಜಗತ್ತಿನ ದಿಕ್ಕನ್ನೇ ಬದಲಿಸಲಿದೆ. ತನ್ಮೂಲಕ ೨೦೨೪ ಒಂದು ಅಭೂತ ಪೂರ್ವ ವರ್ಷ. ಜಗತ್ತಿನ ಚರಿತ್ರೆಯಲ್ಲಿ ಹಿಂದೆ ಎಂದೂ ಕೇಳಿಲ್ಲದಷ್ಟು ಚುನಾವಣೆಗಳು ಇದೊಂದೇ ವರ್ಷದಲ್ಲಿ ನಡೆಯುತ್ತಿವೆ. ಪ್ರಪಂಚದ ಅರ್ಧ ದಷ್ಟು ಅಂದರೆ ೪.೨ ಬಿಲಿಯನ್ ಜನರು ಈ ವರ್ಷ ಮತ ಚಲಾವಣೆ ಮಾಡುತ್ತಿದ್ದಾರೆ.

ಈ ಜಾಗತಿಕ ಯುಗದಲ್ಲಿ ಒಂದು ದೇಶದ ರಾಜಕೀಯ, ಸಾಮಾಜಿಕ, ಆರ್ಥಿಕ ನಿಲುವುಗಳು ಮತ್ತೊಂದು ದೇಶದ ಮೇಲೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಪರಿಣಾಮ ಬೀರುತ್ತವೆ. ಸರಣಿಯಲ್ಲಿ ನಡೆಯಲಿರುವ ಈ ವರ್ಷದ ಚುನಾವಣೆಗಳ ಬಗ್ಗೆ ಯೋಚಿಸುವಾಗ ಈ ವರ್ಷದಲ್ಲಿ ಬಹಳಷ್ಟು ಸಂಭವಿಸುತ್ತ ದೇನೋ ಎಂಬ ಆತಂಕವೂ ಮೂಡುತ್ತದೆ. ತೈವಾನ್, ಬಾಂಗ್ಲಾದೇಶ, ಇಂಡೊನೇಷಿಯಾ, ಸೆನೆಗಲ್, ಕಾಂಬೋಡಿಯಾ, ಬೆಲಾರಸ್. ಎಲ್ ಸಾಲ್ವೆಡಾರ್, ಪಿನ್ ಲ್ಯಾಂಡ್, ಭೂತಾನ್, ತುವಾಲು, ಪಾಕಿಸ್ತಾನ ಮತ್ತು ರಷ್ಯಾಗಳಲ್ಲಿ ಈಗಾಗಲೇ ಚುನಾವಣೆಗಳು ಮುಗಿದಿವೆ. ತೈವಾನಿನ ಆಳ್ವಿಕೆಯನ್ನು ತೈವಾನಿಗಳೇ ಉಳಿಸಿಕೊಂಡಿದ್ದಾರೆ.

ಇಡೀ ಪ್ರಪಂಚದಲ್ಲಿ ಪ್ರಧಾನಿಯ ಪಟ್ಟವನ್ನು ಅತ್ಯಂತ ಹೆಚ್ಚುಕಾಲ ಅಲಂಕರಿಸಿದ ಮಹಿಳೆಯ ದಿಟ್ಟ ನಾಯಕತ್ವದಿಂದಾಗಿ ಬಾಂಗ್ಲಾದೇಶದ ಪ್ರಧಾನಿ
ಯಾಗಿ ಶೇಕ್ ಹಸೀನಾ ಸತತ ನಾಲ್ಕನೇಯ ಬಾರಿಗೆ ಚುನಾಯಿತರಾಗಿದ್ದಾರೆ. ಪಾಕಿಸ್ತಾನದಲ್ಲಿ ಅವಹೇಳನಗಳ ನಡುವೆ ಹಾಲಿ ಪ್ರಧಾನಿ ಮುಹಮ್ಮದ್ ಶೆಹ್ವಾಸ್ ಶರೀ- ಆರಿಸಲ್ಪಟ್ಟಿದ್ದಾರೆ. ಎಲ್ ಸಾಲ್ವಡಾರ್, ಬೆಲಾರಸ್, ಇಂಡೋನೇಷಿಯಾದ ಚುನಾವಣೆ ಮುಗಿದಿದೆ. ಇದೇ ಮಾರ್ಚ್ನಲ್ಲಿ ನಡೆದ ರಷ್ಯಾದ ಚುನಾವಣೆ ಇತ್ತೀಚೆಗಷ್ಟೇ ಮುಗಿದು ವ್ಲಾಡೀಮಿರ್ ಪುಟಿನ್ ಐದನೇಯ ಬಾರಿಗೆ ಚುನಾಯಿತನೆಂದು ಘೋಷಿಸಲಾಗಿದೆ.

ಹಿಂದೆ ಅಧಿಕಾರದಲ್ಲಿದ್ದವರೇ ಮತ್ತೆ ಅಧಿಕಾರಕ್ಕೆ ಬರುತ್ತಿರುವ ದೇಶಗಳನ್ನು ನೋಡುತ್ತಿರುವಾಗ ಪ್ರಜಾಪ್ರಭುತ್ವವು ನಿರಂಕುಶ ಪ್ರಭುತ್ವದೆಡೆಗೆ ವಾಲು ತ್ತಿದೆಯೇ ಎಂಬ ಅನುಮಾನ ಕಾಡುತ್ತಿದೆ. ಒಂದು ವರದಿಯ ಪ್ರಕಾರ ಈ ವರ್ಷದಲ್ಲಿ ನಡೆಯಲಿರುವ ಶೇ.೩೮ರಷ್ಟು ಚುನಾವಣೆಗಳು ಭ್ರಷ್ಟ ರೀತಿಯಲ್ಲಿ ನಡೆಯಲಿವೆ ಎನ್ನಲಾಗಿದೆ. ಇನ್ನುಳಿದವುಗಳನ್ನು ಭಾಗಶಃ ಸರಿಯಾದ ರೀತಿ ಯಲ್ಲಿ ನಡೆಯಬಹುದೆಂದು ಪರಿಗಣಿಸಲಾಗಿದೆ. ಭಾರತದ ಚುನಾವಣೆಗಳು ವರ್ಷದಿಂದ ವರ್ಷಕ್ಕೆ ಹೆಚ್ಚಿನ ಅಬ್ಬರವನ್ನು ಗಳಿಸಿಕೊಳ್ಳುತ್ತಿವೆ. ಅದರೊಂದಿಗೆ ಅವು ನ್ಯಾಯಯುತವಾಗಿ ನಡೆಯುತ್ತಿಲ್ಲವೆಂಬ ಶಂಕೆ ಜನರನ್ನು ಹತಾಶೆಗೊಳಿಸುತ್ತ ಸಾಗಿದೆ. ತಪ್ಪು ಮಾಹಿತಿಗಳು, ಸುಳ್ಳು ಸುದ್ದಿಗಳು, ಜೊತೆಗೆ ಮಾಹಿತಿಯ ಅಲಭ್ಯತೆ ಇತ್ಯಾದಿಗಳು ಜನರ ವೈಚಾರಿಕತೆ, ನಂಬಿಕೆ, ಬುದ್ಧಿವಂತಿಕೆ, ಭಾವಾನಾತ್ಮಕತೆಯ ವಿಚಾರಗಳ ಮೇಲೆ ಅಡ್ಡ ಪರಿಣಾಮಗಳನ್ನು ಉಂಟು ಮಾಡಿದೆ.

ಬಹುಸಂಖ್ಯಾತರ ಮತ್ತು ಅಲ್ಪ ಸಂಖ್ಯಾತರ ನಡುವಿನ ತಿಕ್ಕಾಟಗಳು ಹೆಚ್ಚಾಗಿವೆ. ಕೋಮುಗಲಭೆ, ಅಸಹಿಷ್ಣುತೆ ಎರಡೂ ದಿಕ್ಕುಗಳಲ್ಲಿ, ವ್ಯಾಪಕವಾಗಿ
ಹರಡುತ್ತಿದೆ. ಧರ್ಮದ ವಿಚಾರಗಳು ಜನರ ನಡುವೆ ಕಂದಕಗಳನ್ನು ಹಿಗ್ಗಿಸಲಿವೆ. ಚುನಾವಣೆ ಸಮಯವೆಂದರೆ ಅದು ಪ್ರಭುಗಳು, ಪ್ರಜೆಗಳ ಅಹವಾಲ ನ್ನು ಕೇಳುವ ಸಮಯ. ಆದರೆ, ಅದು ತಕ್ಷಣದ ಅಹವಾಲುಗಳೇ ಅಥವಾ ದೇಶವನ್ನು ಪ್ರಗತಿಯತ್ತ ಕೊಂಡೊಯ್ಯಬಲ್ಲ ದೂರದೃಷ್ಟಿಯುಳ್ಳು ಯೋಜನೆ ಗಳೇ? ಒಬ್ಬ ನಾಯಕ ಎರಡನ್ನೂ ಮಾಡಬಹುದಾದರೆ ಎದುರಿಸುವ ಪ್ರಾಕ್ಟಿಕಲ್ ಸಮಸ್ಯೆಗಳು ಏನಾಗಬಹುದು ಎಂಬ ವಿಚಿತ್ರ ದ್ವಂದ್ವಗಳು ಈ ಬಾರಿ ಹೆಚ್ಚಿವೆ. ೨೦೨೪ ನ್ನು ಚುನಾವಣಾ ಸುಗ್ಗಿಯ ವರ್ಷ ಎಂದರೂ, ಎಲ್ಲ ಚುನಾವಣೆಗಳು ರಾಷ್ಟ್ರ ಅಥವಾ ರಾಜ್ಯಮಟ್ಟದ ಚುನಾವಣೆಗೆಳು ಅಲ್ಲ.

ಯುರೋಪಿಯನ್ ಪಾರ್ಲಿಮೆಂಟಿಗೆ ನಡೆಯುತ್ತಿರುವುದು ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವದ ಚುನಾವಣೆ. ಜೊತೆಗೆ ಈ ವರ್ಷದ ಎಲ್ಲಾ ಚುನಾವಣೆಗಳು ಪ್ರಜಾಪ್ರಭುತ್ವದ ಆಳ್ವಿಕೆಯ ದೇಶಗಳಲ್ಲಿ ನಡೆಯುತ್ತಿಲ್ಲ. ಉದಾಹರಣೆಗೆ ರಷ್ಯಾದಲ್ಲಿ ಚುನಾವಣೆ ನಡೆಯಿತಾದರೂ ಅದು ಸರ್ವಾಧಿ ಕಾರಿಯ ಚುನಾವಣೆ. ನ್ಯಾಯಯುತ ಆಯ್ಕೆ, ಸಮಾನತೆ ಸ್ವಾತಂತ್ರ್ಯ ಇತ್ಯಾದಿ ಈ ಆಳ್ವಿಕೆಯ ನೀತಿಯಲ್ಲ ಎಂದು ಪಾಶ್ಚಾತ್ಯ ದೇಶಗಳು ಅಭಿಪ್ರಾಯ ಪಡುತ್ತವೆ. ಪ್ರಜಾಪ್ರಭುತ್ವದ ಮಾದರಿಯಲ್ಲಿ ಡೊನಾಲ್ಡ್ ಟ್ರಂಪ್ ಮತ್ತೆ ಅಧಿಕಾರ ಹಿಡಿದರೆ ಅದು ಪ್ರಜಾ ಪ್ರಭುತ್ವಕ್ಕೆ ಅಪಾಯ ತರಬಹುದು ಎಂಬ ಆತಂಕಗಳು ಕೂಡಾ ಈ ವರ್ಷದ ಚುನಾವಣಾ ಆಗಸದಲ್ಲಿ ಆತಂಕದ ಮೋಡಗಳನ್ನು ಸೃಷ್ಟಿಸಿದೆ.

ಪ್ರಜೆಗಳಿಂದ, ಪ್ರಜೆಗಳಿಗಾಗಿ ಪ್ರಜೆಗಳೇ ಚುನಾಯಿಸುವ ಸರಕಾರ ಇಂದಿಗೂ ಅತ್ಯಂತ ಜನಪ್ರಿಯತೆಯನ್ನು ಗಳಿಸಿಕೊಂಡಿರುವ ವ್ಯವಸ್ಥೆ. ಆದರೆ ೨೦೨೪ರ ಚುನಾವಣೆಗಳು ಪ್ರಜಾಪ್ರಭುತ್ವದ ಗಂಭೀರ ಸತ್ವ ಪರೀಕ್ಷೆಯಲ್ಲಿ ನಡೆಸಲಿವೆ. ಹಲವು ಮೂಲಗಳ ಪ್ರಕಾರ ಪ್ರಜಾಪ್ರಭುತ್ವ ಇಂದು ಅಪಾಯದಲ್ಲಿದೆ ಪ್ರಪಂಚದ ಹಲವು ದೇಶಗಳು ನೇತಾರರು ಮತ್ತು ಒಂದಷ್ಟು ಭಾಗದ ಜನರು ಡೆಮಾಕ್ರಸಿ ಯನ್ನು ಅಣಕಗೊಳಿಸುವ ಯತ್ನವನ್ನು ಮಾಡುತ್ತಿದ್ದಾರೆ. ಡೆಮಾಕ್ರಸಿಯ ಮೃದು ತತ್ವಗಳು ದೇಶವೊಂದರ ಸಮರ್ಥ ಆಳ್ವಿಕೆಗೆ ಭಂಗ ತರುತ್ತಿವೆ ಎನ್ನುವ ಅಭಿಪ್ರಾಯದ ಹಲವು ಜನರಿದ್ದಾರೆ. ತಮ್ಮ ದೇಶವನ್ನು ಆಳಲು ಕಠೋರ ನೀತಿಗಳ ಬಲಿಷ್ಠ ನಾಯಕರು ಬೇಕು ಎಂದು ಇವರು ನಂಬುತ್ತಾರೆ.

ಪ್ರಜಾಪ್ರಭುತ್ವದ ಬಗ್ಗೆ ಅಷ್ಟೇನೂ ತಳಮಳವಿಲ್ಲದೆ ನ್ಯಾಯಯುತವಾಗಿ ನಡೆಸುತ್ತಿರುವ ದೇಶಗಳೆಂದರೆ ಆಸ್ಟ್ರಿಯಾ, ಬೆಲ್ಜಿಯಂ, ಕ್ರೊಯೇಷಿಯಾ, ಫಿನ್‌ಲ್ಯಾಂಡ್, ಪಾಲ, ಪನಾಮ, ಪೋರ್ಚುಗಲ್, ರೊಮೇನಿಯಾ ಮತ್ತು ಉರುಗ್ವೆ. ಈ ದೇಶಗಳಲ್ಲಿ ಮತದಾರರಿಗೆ ಬಲವಾದ ಆಯ್ಕೆಗಳಿವೆ. ಜೊತೆಗೆ ಆರಿಸುವ ಸ್ವಾತಂತ್ರ್ಯವೂ ಇದೆ. ಇನ್ನು ಭಾರತದ ಚುನಾವಣೆಯನ್ನು ತೆಗೆದುಕೊಂಡರೆ ಈ ವರ್ಷದ ಚುನಾವಣೆಯ ಮುಕ್ಕಾಲು ಭಾಗ ಚುನಾವಣೆ ಮುಗಿದಿದೆ. ಭಾರತ ವಿಶ್ವದಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವ. ಚುನಾವಣೆಯೆಂಬುದು ದೊಡ್ಡ ಹಬ್ಬವೇ ಆಗಿದೆ. ಒಟ್ಟಾರೆ ಈ ಬಾರಿಯ ಚುನಾವಣೆ ೧೦೮ ದಿನಗಳ ಕಾಲ ನಡೆ ಯುವುದು. ಅಬ್ಬಾ ಚುನಾವಣೆಯ ಅಬ್ಬರ ರೋಷಾವೇಶ, ಕರ್ಕಶ, ವೈಯಕ್ತಿಕ ಟೀಕೆ ಟಿಪ್ಪಣಿಗಳು, ಅಸಂವಿಧಾನಿಕ, ಅಶ್ಲೀಲ ಮಾತುಗಳು, ತಾವೇನು ಮಾಡಿದ್ದೇವೆ, ತಮ್ಮ ಮುಂದಿನ ಗುರಿಯೇನು ಎಂಬುದನ್ನು ಮರೆತೇ ಬಿಟ್ಟಿದೆ.

ಕರ್ಕಶ ಕ್ರೋಧಗಳ ಭಾಷಣ, ಬೀಷಣಗಳ ಅಬ್ಬರ. ಎಲ್ಲೂ ಸಲ್ಲದವರು ರಾಜಕೀಯಲ್ಲಿ ಸಲ್ಲುತ್ತಾರೆ ಎಂಬುದನ್ನು ಕೆಲವು ಜನನಾಯಕರು, ಅಭ್ಯರ್ಥಿಗಳು
ರುಜುವಾತು ಮಾಡೆ ಪುರಾವೆಗಳನ್ನು ಸಲ್ಲಿಸಿಯೇ ಬಿಟ್ಟರು. ದೇಶದ ಪ್ರಧಾನಿಯಿಂದ ಹಿಡಿದು ಗ್ರಾಮ ಪಂಚಾಯಿತಿ ಮುಖಂಡನವರೆಗೆ ಹಳ್ಳಿ-ಗಲ್ಲಿ,
ಊರು, ಕೇರಿ ಸುತ್ತಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ವಿದ್ಯಾಮಾನಗಳನ್ನು ತಮ್ಮ ಮೂಗಿನ ನೇರಕ್ಕೆ ವಿಶ್ಲೇಷಿಸಿ, ಪರಸ್ಪರ ಕಚ್ಚಾಡಿ, ಜಾತಿ, ಕೋಮು, ಸಮುದಾಯಗಳು ಇನ್ನೇನು ಒಡೆದು ಛಿದ್ರವಾದವೇನೋ ಎನ್ನುವ ರೀತಿಯಲ್ಲಿ, ಮತ ಬ್ಯಾಂಕ್ ಕ್ರೋಢೀಕರಣದ ವ್ಯಾಖ್ಯಾನ ನಡೆದವು. ಲೈಂಗಿಕ ಹಗರಣ
ಗಳು ಬೆಳಕಿಗೆ ಬಂದವು.

ಸಾರಸಗಟಾಗಿ ಬಾಯಿ ಚಪಲವನ್ನು ಕೆಲ ರಾಜಕಾರಣಿಗಳು ತೀರಿಸಿಕೊಂಡರು. ಮುಂಗೈಗೆ ತುಪ್ಪ, ಸುರಿದ ಆಶ್ವಾಸನೆಗಳು ಬಹಳ ಪುಕ್ಕಟೆಗಳ ಭರವಸೆಯ ಮಹಾಪೂರ. ಭಾರತದಲ್ಲಿ ಚುನಾವಣೆಯನ್ನು ಪ್ರಜಾ ಪ್ರಭುತ್ವದ ಹಬ್ಬ ಎಂದೇ ವ್ಯಾಖ್ಯಾನಿಸಲಾಗುತ್ತದೆ. ಅದೇ ರೀತಿಯಲ್ಲಿ ವಾಗ್ಯುದ್ಧಗಳ ಸಮರ ವೆಂಬಂತೆ ನಡೆಯಿತು. ಭಾರತದ ಚುನಾವಣೆಗಳ ಬಗ್ಗೆ ವಿದೇಶೀಯರಿಗೂ ಅತ್ಯಂತ ಕುತೂಹಲವಿದೆ. ನೆರೆಯ ಪಾಕಿಸ್ಥಾನ ಮತ್ತು ಚೀನಾಗಳಿಗೆ ಭಾರತದ
ಚುನಾವಣೆ ಮತ್ತು ಫಲಿತಾಂಶಗಳ ಮೇಲೆ ಕೆಟ್ಟ ಕುತೂಹಲವಿದೆ. ಈ ಬಾರಿಯ ಚುನಾವಣೆಯ ಮೇಲೆ ವಿದೇಶಿ ಮಾಧ್ಯಮಗಳು ಹಿಂದೆಂದಿಗಿಂತಲೂ  ಹೆಚ್ಚಿನ ನಿಗಾ ಇಟ್ಟಿದೆ. ಅದನ್ನು ಭಾರತದ ಶಕ್ತಿ ಮತ್ತು ಸಾಮರ್ಥ್ಯಕ್ಕೆ ಸಾಕ್ಷಿ ಎಂದೂ ಕೂಡಾ ಹೇಳಬಹುದು. ಆದರೆ ಇಡೀ ಜಗತ್ತಿಗೆ ದಿ ಗಾರ್ಡಿಯನ್, ಟೆಲಿಗ್ರಾಫ್, ವಾಷಿಂಗ್ ಟನ್ ಪೋಸ್ಟ್, ಗ್ಲೋಬಲ್ ಪಾಲಿಸಿಯಂತಹ ಡಿಜಿಟಲ್ ಮಾಧ್ಯಮಗಳೆಲ್ಲವೂ ಭಾರತದ ಪ್ರಸಕ್ತ ಕೇಂದ್ರ ಸರಕಾರದ ಹಿಂದೆ ಬಿದ್ದಿವೆ.

ಪ್ರಜಾಪ್ರಭುತ್ವ, ವ್ಯವಸ್ಥೆಯ ಮಾದರಿಯಂತಿರುವ ಜನ ನಾಯಕನ ವಿರುದ್ಧವೂ ಬಹಳ ಅನಾವಷ್ಯಕ ಟೀಕೆ, ಟಿಪ್ಪಣಿಗಳನ್ನು ಮಾಡುತ್ತಿರುವುದು ಒಂದು ದೇಶ ಇನ್ನೊಂದು ದೇಶದ ಏಳಿಗೆಯನ್ನು ಬಯಸುವುದುದಿಲ್ಲವೆಂಬುದಕ್ಕೆ ಸಾಕ್ಷಿಯಾಗಿದೆ. ಒಟ್ಟಾರೆಯಾಗಿ ಈ ಬಾರಿಯ ವಿಶ್ವದ ಚುನಾವಣೆಗಳು ಮತ್ತು ಚುನಾಯಿತ ನಾಯಕರಿಂದ ವಿಶ್ವದಲ್ಲಿಯೇ ರಾಜಕೀಯ ವಿಚಾರಗಳು ಹಲವಾರು ತಿರುವುಗಳಿಗೆ ಕಾರಣವಾಗುವ ಸಾಧ್ಯತೆಯಿದೆ.

(ಲೇಖಕರು : ನಿವೃತ್ತ ಮುಖ್ಯ ಪ್ರಬಂಧಕರು
ವಿಜಯ ಬ್ಯಾಂಕ್ ಮತ್ತು ಸಂದರ್ಶಕ
ಪ್ರಾಧ್ಯಾಪಕರು)

Leave a Reply

Your email address will not be published. Required fields are marked *

error: Content is protected !!