Saturday, 7th September 2024

ಕೇಂದ್ರದ ವಿರುದ್ದ ಹೋರಾಟದಲ್ಲಿ ಗೆದ್ದೀತೇ ರಾಜ್ಯ ?

ವರ್ತಮಾನ

maapala@gmail.com

ಕೇಂದ್ರದ ವಿರುದ್ಧ ನಿರಂತರ ಹೋರಾಟಕ್ಕಿಳಿದಿರುವ ರಾಜ್ಯ ಕಾಂಗ್ರೆಸ್ ಸರಕಾರ ತೆರಿಗೆ ಹಂಚಿಕೆ ಮತ್ತು ಅನುದಾನ ತಾರತಮ್ಯದ ವಿರುದ್ಧ ವಿಧಾನಸಭೆ ಯಲ್ಲೂ ಕೇಂದ್ರ ಸರಕಾರದ ವಿರುದ್ಧ ನಿರ್ಣಯ ಕೈಗೊಳ್ಳುವ ಮೂಲಕ ಮುಂಬರುವ ಲೋಕಸಭೆ ಚುನಾವಣೆಗೆ ಭರ್ಜರಿ ಯಾಗಿಯೇ ಸಿದ್ಧತೆ ನಡೆಸಿದ್ದು, ಮೇಲ್ನೋಟಕ್ಕೆ ಯಶಸ್ವಿಯೂ ಆಗಿದೆ. ಆದರೆ…

ರಾಜಕೀಯವಾಗಿ ಭಾಷಣ ಮಾಡುವಾಗ ಇಲ್ಲವೇ ಹೋರಾಟಗಳನ್ನು ಕೈಗೊಳ್ಳುವಾಗ ಯಾರ ವಿರುದ್ಧವಾದರೂ ಟೀಕೆ, ಆರೋಪಗಳನ್ನು ಮಾಡುವುದು ಸುಲಭ. ಅದರಲ್ಲೂ ಸರಕಾರಗಳ ವಿರುದ್ಧ ಆರೋಪ ಮಾಡುವುದು ಸಾಮಾನ್ಯ. ಆದರೆ, ಒಂದು ಸರಕಾರವಾಗಿ ಇನ್ನೊಂದು ಸರಕಾರದ ವಿರುದ್ಧ, ಅದರಲ್ಲೂ ರಾಜ್ಯ ಸರಕಾರವು ಕೇಂದ್ರ ಸರಕಾರದ ವಿರುದ್ಧ ನಿರಂತರ ಆರೋಪ ಮಾಡುವುದು, ಹೋರಾಟ ನಡೆಸುವುದು ಅಪರೂಪ.

ಅಂತಹ ಅಪಾಯ ಮೈಮೇಲೆ ಎಳೆದುಕೊಳ್ಳಲು ಯಾವ ರಾಜ್ಯ ಸರಕಾರಗಳೂ ಮುಂದೆ ಬರುವುದಿಲ್ಲ. ಮುಖ್ಯಮಂತ್ರಿ ಅಥವಾ ರಾಜ್ಯದ ಸಚಿವರು ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುವುದು, ಗಂಭೀರ ಆರೋಪಗಳನ್ನು ಮಾಡುವುದು ರಾಜಕೀಯ ವ್ಯವಸ್ಥೆಯಲ್ಲಿ ಸಾಮಾನ್ಯವಾದರೂ ಒಂದು ರಾಜ್ಯ ಸರಕಾರ ವಾಗಿ ಕೇಂದ್ರ ಸರಕಾರದ ವಿರುದ್ಧ ತಿರುಗಿ ಬೀಳುವುದು ಇದೆಯಲ್ಲಾ, ಅದಕ್ಕೆ ಸರಕಾರದ ನೇತೃತ್ವ ವಹಿಸಿದವರಿಗೆ ಗಟ್ಟಿ ಗುಂಡಿಗೆಯೇ  ಬೇಕು.

ಏನೋ ಆರೋಪ ಮಾಡಿ ಬಳಿಕ ಸುಮ್ಮನಾಗುವುದು ಒಂದು ವಿಷಯವಾದರೆ ಆ ಆರೋಪವನ್ನು ನಿರಂತರವಾಗಿ ಮುಂದುವರಿಸುತ್ತಾ, ಜನರಿಗೂ ಈ ಆರೋಪಗಳಲ್ಲಿ ಹುರುಳಿದೆ ಎಂಬು ದನ್ನು ಮನವರಿಕೆ ಮಾಡಿಕೊಡುವುದು ಅತ್ಯಂತ ತ್ರಾಸದಾಯಕ ಕೆಲಸ. ಅದಕ್ಕೆ ಬದ್ಧತೆಯೂ ಬೇಕು. ಏಕೆಂದರೆ, ಇಲ್ಲಿ ಸ್ವಲ್ಪ ಯಡವಟ್ಟಾದರೂ ಜನರ ಮುಂದೆ ಬೆತ್ತಲಾಗಬೇಕಾಗುತ್ತದೆ. ಆದರೆ, ಈ ವಿಚಾರದಲ್ಲಿ ರಾಜ್ಯದಲ್ಲಿ ಅಧಿಕಾರದಲ್ಲಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಯಶಸ್ವಿಯಾಗಿದೆ. ತೆರಿಗೆ ಹಂಚಿಕೆ ಮತ್ತು ಅನುದಾನ ನೀಡುವಲ್ಲಿ ಕೇಂದ್ರ ಸರಕಾರ ತಾರತಮ್ಯ ಮಾಡುತ್ತಿದೆ ಎಂದು ಕಳೆದ ಒಂದು ತಿಂಗಳಿಗು ಹೆಚ್ಚು ಸಮಯದಿಂದ ನಿರಂತರ ಆರೋಪಗಳನ್ನು ಮಾಡುತ್ತಾ, ದೆಹಲಿಗೆ ತೆರಳಿ ಕೇಂದ್ರದ ವಿರುದ್ಧ ಪ್ರತಿಭಟನೆ ನಡೆಸಿದ ರಾಜ್ಯ
ಕಾಂಗ್ರೆಸ್ ಸರಕಾರ, ದೇಶದ ಇತರೆಡೆಗಳಲ್ಲಿರುವ ಬಿಜೆಪಿಯೇತರ ಸರಕಾರವನ್ನು ಎಚ್ಚರಗೊಳಿಸಿ ಅವರು ಕೂಡ ಕೇಂದ್ರದ ವಿರುದ್ಧ ತಿರುಗಿ ಬೀಳುವಂತೆ
ಮಾಡಿದೆ.

ಆದರೆ, ಇತರೆ ರಾಜ್ಯಗಳು ಕರ್ನಾಟಕದಷ್ಟು ಪ್ರಭಾವಿಯಾಗಿ ಈ ಕೆಲಸ ಮಾಡದೇ ಇದ್ದರೂ ಕೇಂದ್ರದ ವಿರುದ್ಧ ಧ್ವನಿ ಎತ್ತುವ ಮಟ್ಟಿಗೆ ಅವರಲ್ಲಿ ಧೈರ್ಯ ತುಂಬಲಾಗಿದೆ. ಸದ್ಯಕ್ಕೆ ಇದರಿಂದ ರಾಜಕೀಯವಾಗಿ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರಕ್ಕೆ ಯಾವುದೇ ಅಪಾಯ ಸಂಭವಿಸುವ ಲಕ್ಷಣ ಕಾಣಿಸುತ್ತಿಲ್ಲವಾದರೂ ಈ ಧ್ವನಿ ನಿರಂತರವಾಗಿ ಮುಂದುವರಿದರೆ ಮುಜುಗರ ಅನುಭವಿಸಬೇಕಾಗುತ್ತದೆ.

ಇದೆಲ್ಲಕ್ಕಿಂತ ಮುಖ್ಯವಾಗಿ ವಿಧಾನಸಭೆಯಲ್ಲಿ ರಾಜ್ಯದ ಕಾಂಗ್ರೆಸ್ ಸರಕಾರ ಕೇಂದ್ರ ಸರಕಾರದ ವಿರುದ್ಧ ತೆಗೆದುಕೊಂಡಿರುವ ಎರಡು ನಿರ್ಣಯಗಳು
ಈ ಎಲ್ಲಾ ಹೋರಾಟಗಳನ್ನು ಮೀರಿ ರಾಜ್ಯ ಸರಕಾರ ಕೇಂದ್ರದೊಂದಿಗೆ ನೇರಾನೇರ ಸಂಘರ್ಷಕ್ಕೆ ಇಳಿಯುವಂತಹ ವಾತಾವರಣ ನಿರ್ಮಾಣ ಮಾಡಿದೆ.
ಮೊದಲನೆಯದಾಗಿ, ತೆರಿಗೆ ಹಂಚಿಕೆ ಮತ್ತು ಅನುದಾನ ದಲ್ಲಿ ಆಗಿರುವ ತಾರತಮ್ಯದಿಂದಾಗಿ ಕೇಂದ್ರ ಸರಕಾರ ದಿಂದ ರಾಜ್ಯಕ್ಕೆ ಉಂಟಾಗಿರುವ ಆರ್ಥಿಕ ನಷ್ಟ ಮತ್ತು ಅನ್ಯಾಯ ಖಂಡಿಸಿ ಹಾಗೂ ಯಾವುದೇ ರೀತಿ ಅನ್ಯಾಯ ಮಾಡದಂತೆ ಕೈಗೊಂಡಿರುವ ನಿರ್ಣಯ ಹಾಗೂ ಎರಡನೆಯದಾಗಿ, ಕೇಂದ್ರ ಸರಕಾರದ ರೈತ ವಿರೋಧಿ ಧೋರಣೆ ಖಂಡಿಸಿ ಮತ್ತು ಡಾ. ಎಂ.ಎಸ್. ಸ್ವಾಮಿನಾಥನ್ ವರದಿಯನ್ವಯ ಕೃಷಿಕನ ಸಾಗುವಳಿ ವೆಚ್ಚದ ಶೇ. ೫೦ರಷ್ಟನ್ನು ಸೇರಿಸಿ ಕನಿಷ್ಠ ಬೆಂಬಲ ಬೆಲೆಯನ್ನು ಘೋಷಿಸಲು ಶಾಸನ ರೂಪಿಸಬೇಕು ಎಂದು ಕೇಂದ್ರ ಸರಕಾರವನ್ನು ಆಗ್ರಹಿಸುವ ನಿರ್ಣಯಗಳು ಕೇಂದ್ರದ ವಿರುದ್ಧ ರಾಜ್ಯ ಸರಕಾರದ ಸಮರವನ್ನು ತೀವ್ರಗೊಳಿಸಿದೆ.

ಈ ಹಿಂದಿನ ಹೇಳಿಕೆ, ಹೋರಾಟಗಳು ಮರೆತುಹೋಗುವ ಸಾಧ್ಯತೆಗಳಿವೆಯಾದರೂ ಕೈಗೊಂಡಿರುವ ಎರಡು ನಿರ್ಣಯಗಳು ಪ್ರಜಾಪ್ರಭುತ್ವ ವ್ಯವಸ್ಥೆ ಯಲ್ಲಿ ಸದನದ ದಾಖಲೆಗಳಾಗಿ ಉಳಿಯುತ್ತವೆ. ರಾಜ್ಯ ಸರಕಾರವೊಂದು ಕೇಂದ್ರದ ವಿರುದ್ಧ ಇಂತಹ ನಿರ್ಣಯ ಕೈಗೊಳ್ಳಬಹುದು ಎಂಬುದು ಇತಿಹಾ ಸದ ದಾಖಲೆಯಾಗುತ್ತದೆ. ಅಷ್ಟರ ಮಟ್ಟಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಕೇಂದ್ರದ ವಿರುದ್ಧದ ನೇರಾನೇರ ಹೋರಾಟ ದಲ್ಲಿ ಯಶಸ್ವಿಯಾದಂತೆ ಕಂಡು ಬರುತ್ತಿದೆ. ಏಕೆಂದರೆ, ರಾಜ್ಯ ಸರಕಾರದ ಆರೋಪಗಳು ಸುಳ್ಳು ಎಂದು ಸಾಬೀತುಪಡಿಸಲು ಅಂತಹ ದಾಖಲೆಗಳನ್ನು ಇದುವರೆಗೆ ಕೇಂದ್ರ ಸರಕಾರವಾಗಲೀ, ರಾಜ್ಯದಲ್ಲಿರುವ ಪ್ರತಿಪಕ್ಷಗಳಾಗಲೀ ಒದಗಿಸಿಲ್ಲ.

ಏಕೆಂದರೆ, ೧೫ನೇ ಹಣಕಾಸು ಆಯೋಗದ ವರದಿ ಯಂತೆ ಕೇಂದ್ರ ಸರಕಾರ ಕ್ರಮ ಕೈಗೊಳ್ಳಬೇಕಾಗಿರುವುದರಿಂದ ಮತ್ತು ಆ ರೀತಿ ಮಾಡಿರುವುದರಿಂದ
ರಾಜ್ಯಕ್ಕೆ ತೆರಿಗೆ ಪಾಲು ಕಡಿಮೆಯಾಗಿರುವುದಂತೂ ಸತ್ಯ. ಆದರೆ, ಅದೇ ಸಂದರ್ಭದಲ್ಲಿ ರಾಜ್ಯಕ್ಕೆ ಕೇಂದ್ರ ಪುರಸ್ಕೃತ ಯೋಜನೆಗಳಿಂದ ಬಂದಿರುವ ಅನುದಾನ ದುಪ್ಪಟ್ಟಿಗಿಂತ ಹೆಚ್ಚಾಗಿದೆಯಾದರೂ ಅದನ್ನು ಸರಿಯಾಗಿ ಜನರಿಗೆ ಮನವರಿಕೆ ಮಾಡುವಲ್ಲಿ ಬಿಜೆಪಿ ಹೆಚ್ಚು ಪ್ರಭಾವಶಾಲಿಯಾಗಿ ಕೆಲಸ ಮಾಡಲಿಲ್ಲ.

ಅದಕ್ಕಿಂತಲೂ ಮುಖ್ಯವಾಗಿ ಬಿಜೆಪಿ ನಾಯಕರು ಈ ಅಂಶವನ್ನು ಪ್ರಸ್ತಾಪಿಸುವ ವೇಳೆಗೆ ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ ಎಂಬುದನ್ನು ಜನರ ಮನಸ್ಸಿಗೆ ನಾಟುವಂತೆ ಹೇಳುವಲ್ಲಿ ಕಾಂಗ್ರೆಸ್ ಯಶಸ್ಸು ಸಾಧಿಸಿತ್ತು. ಅದಕ್ಕೆ ಬೇಕಾದ ಅಂಕಿ ಅಂಶಗಳನ್ನು ಆರಂಭದಿಂದಲೇ ಮುಂದಿಟ್ಟಿದ್ದರಿಂದ ಜನರು ಕೂಡ ಅದನ್ನು ನಂಬಿದ್ದಾರೆ.

ಆದರೆ, ಒಕ್ಕೂಟ ವ್ಯವಸ್ಥೆಯಲ್ಲಿ ಇಂತಹದ್ದು ನಡೆಯುತ್ತವೆ. ಸಮ ಸಮಾಜದ ನಿರ್ಮಾಣ ವ್ಯವಸ್ಥೆಯಲ್ಲಿ ಶ್ರೀಮಂತರಿಂದ ತೆರಿಗೆ ವಸೂಲಿ ಮಾಡಿ ಬಡವರಿಗೆ ಹಂಚುವ ವ್ಯವಸ್ಥೆ ಭಾರತದಲ್ಲಿದೆ. ಅದೇ ರೀತಿ ಹೆಚ್ಚು ತೆರಿಗೆ ನೀಡುವ ರಾಜ್ಯಗಳಿಂದ ಬರುವ ಆದಾಯವನ್ನು ಇತರೆ ಹಿಂದುಳಿದ ರಾಜ್ಯಗಳಿಗೆ ಹಂಚಿಕೆ ಮಾಡಿ ದೇಶದ ಸುಸ್ಥಿರ ಅಭಿವೃದ್ಧಿಗೆ ಕೇಂದ್ರ ಸರಕಾರ ಈ ರೀತಿ ಮೊದಲಿನಿಂದಲೂ ಮಾಡಿಕೊಂಡು ಬಂದಿದೆ. ಈ ಹಿಂದೆ ಕೇಂದ್ರದಲ್ಲಿ ಪ್ರಧಾನಿ ಮನವೋಹನ್ ಸಿಂಗ್ ನೇತೃತ್ವದ ಸರಕಾರ ಅಧಿಕಾರದಲ್ಲಿದ್ದು, ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಇದೇ ರೀತಿಯ ಆರೋಪ ಮಾಡಿದ್ದರು. ಆದರೆ, ಅದಕ್ಕೆ ಹೆಚ್ಚು ಪ್ರಚಾರ ಸಿಗದ ಕಾರಣ ಮತ್ತು ಆಗ ನರೇಂದ್ರ ಮೋದಿ ಮತ್ತು ಯುಪಿಎ ಸರಕಾರದ ಮಧ್ಯೆ ದ್ವೇಷದ ವಾತಾವರಣ ಇದ್ದ ಕಾರಣ ಇದೊಂದು ರಾಜಕೀಯ ಆರೋಪ ಎಂದು ಹೇಳಿ ವಿವಾದ ತಣ್ಣಗೆ ಮಾಡಲಾಯಿತು.

ಆದರೆ, ಅಂದು ಕೇಂದ್ರದ ವಿರುದ್ಧ ತೆರಿಗೆ ಹಂಚಿಕೆಯಲ್ಲಿ ಅನ್ಯಾಯವಾಗುತ್ತಿದೆ ಎಂಬ ಆರೋಪ ಮಾಡಿದ್ದ ನರೇಂದ್ರ ಮೋದಿ ಅವರು ಪ್ರಧಾನಿ ಯಾಗಿರುವಾಗಲೂ ಆ ತಾರತಮ್ಯ, ಅನ್ಯಾಯ ಮುಂದುವರಿದಿದೆ ಎಂಬ ಕಾರಣಕ್ಕೆ ಕರ್ನಾಟಕ ಸರಕಾರ ಆರಂಭಿಸಿದ ವಿವಾದಕ್ಕೆ ಹೆಚ್ಚು ಶಕ್ತಿ ಬಂದಿದೆ. ಈ ಆರೋಪ, ಜಟಾಪಟಿಗಳು ಇನ್ನೆಷ್ಟು ದಿನ ಮುಂದುವರಿಯುತ್ತದೆ ಎಂಬುದರ ಮೇಲೆ ಅದು ಕೇಂದ್ರದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ನಿರ್ಧರಿಸಬಹುದು. ಏಕೆಂದರೆ, ರಾಜ್ಯ ಸರಕಾರ ಮಾಡಿರುವ ಈ ಆರೋಪದ ಹಿಂದೆ ಸದ್ಯ ದಲ್ಲೇ ಬರಲಿರುವ ಲೋಕಸಭೆ ಚುನಾವಣೆ ಇರುವುದು ಕಂಡುಬರುತ್ತಿದೆ.

೧೯೯೯ರ ಬಳಿಕ ರಾಜ್ಯದಲ್ಲಿ ಯಾವುದೇ ಪಕ್ಷದ ಸರಕಾರ ಅಧಿಕಾರದಲ್ಲಿರಲಿ, ಲೋಕಸಭೆ ವಿಷಯ ಬಂದಾಗ ಬಿಜೆಪಿಯನ್ನು ಮತದಾರರು ಬೆಂಬಲಿಸಿ ಕೊಂಡು ಬಂದಿದ್ದಾರೆ. ಅದರಲ್ಲೂ ೨೦೧೯ರ ಲೋಕಸಭೆ ಚುನಾವಣೆಯಲ್ಲಿ ೨೮ಕ್ಕೆ ೨೫ ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಿದ್ದರು. ಉಳಿದ ಮೂರು ಕ್ಷೇತ್ರಗಳ ಪೈಕಿ ಒಂದು ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ, ಇನ್ನೊಂದು ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ಮತ್ತೊಂದು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಽಸಿತ್ತು. ನಂತರದಲ್ಲಿ ಪಕ್ಷೇತರ ಅಭ್ಯರ್ಥಿ ಬಿಜೆಪಿಗೆ ಬೆಂಬಲಿಸಿದ್ದರು.

ಇದೀಗ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ಇರುವ ಒಂದು ಸ್ಥಾನವನ್ನು ಉಳಿಸಿಕೊಳ್ಳುವು ದರೊಂದಿಗೆ, ಪಕ್ಷ ಅಧಿಕಾರದಲ್ಲಿರುವುದರಿಂದ ಹೆಚ್ಚುವರಿ ಸ್ಥಾನಗಳನ್ನು ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಕಸಿದುಕೊಳ್ಳಲೇ ಬೇಕಾದ ಅನಿವಾರ್ಯ ಇದೆ.
ಇಲ್ಲವಾದಲ್ಲಿ ಸರಕಾರಕ್ಕೆ ಏನೂ ಅಪಾಯವಾಗದೇ ಇದ್ದರೂ ನೈತಿಕವಾಗಿ ಕಾಂಗ್ರೆಸ್ ಸೋಲು ಅನುಭವಿಸಬೇಕಾಗುತ್ತದೆ.

ಅದಕ್ಕಾಗಿಯೇ ರಾಜ್ಯ ಕಾಂಗ್ರೆಸ್ ಸರಕಾರ ಕೇಂದ್ರ ಸರಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿಕೊಂಡು ಆರೋಪಗಳು, ನಿರ್ಣಯ ಗಳನ್ನು ಮಾಡುತ್ತಿದೆ. ಏಕೆಂದರೆ, ಮುಂಬರುವ ಲೋಕಸಭೆ ಚುನಾವಣೆ ನಡೆಯುತ್ತಿರುವುದು ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನ ಮೇಲೆ. ರಾಜ್ಯದಲ್ಲಿ ಬಿಜೆಪಿಗೆ ಹೆಚ್ಚಿನ ಪ್ರಮಾಣದ ಮತಗಳು ಬೀಳುವುದು ಕೂಡ ಅವರ ಹೆಸರಿನಲ್ಲೇ. ಹೀಗಿರುವಾಗ ಬಿಜೆಪಿಯತ್ತ ಮುಖ ಮಾಡಿರುವ ಮತದಾರರನ್ನು ಒಲಿಸಿ ಕೊಳ್ಳಬೇಕಾದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸರಕಾರ ನಮಗೆ ಅನ್ಯಾಯ ಮಾಡುವ ಮೂಲಕ ರಾಜ್ಯದ ಪಾಲಿಗೆ ಖಳನಾಯಕನಾಗಿದೆ ಎಂಬುದನ್ನು ಬಿಂಬಿಸಿ ಅವರ ಮನಸ್ಸನ್ನು ಪರಿವರ್ತನೆ ಮಾಡಬೇಕು.

ಸದ್ಯದ ಮಟ್ಟಿಗೆ ಅಭಿವೃದ್ಧಿ ವಿಷಯದಲ್ಲಿ ಆ ರೀತಿ ಮಾಡುವ ವಾತಾವರಣ ಇಲ್ಲ. ಏಕೆಂದರೆ, ವಿಶ್ವವೇ ನರೇಂದ್ರ ಮೋದಿ ಸರಕಾರದ ಆಡಳಿತವನ್ನು
ಕೊಂಡಾಡುತ್ತಿದೆ. ಮತ್ತೊಂದೆಡೆ ರಾಮಮಂದಿರ ನಿರ್ಮಾಣದ ಮೂಲಕ ಭಾವನಾತ್ಮಕವಾಗಿಯೂ ಜನರ ಮನಸ್ಸನ್ನು ಗೆದ್ದಿದೆ. ಗಟ್ಟಿಯಾಗಿ ಪ್ರಸ್ತಾಪಿಸೋಣ ಎಂದರೆ ಆಡಳಿತ ವೈಫಲ್ಯ, ಅಭಿವೃದ್ಧಿ ಕುಂಠಿತದಂತಹ ವಿಷಯಗಳು ಸಿಗುತ್ತಿಲ್ಲ. ಸಿಕ್ಕಿ ಪ್ರಸ್ತಾಪಿಸಿದರೂ ಜನ ಅದನ್ನು ನಂಬುವ ಸ್ಥಿತಿಯಲ್ಲಿ ಇಲ್ಲ. ಈ ಕಾರಣಕ್ಕಾಗಿಯೇ ರಾಜ್ಯದ ಕಾಂಗ್ರೆಸ್ ಸರಕಾರ ತೆರಿಗೆ ಹಂಚಿಕೆ ಮತ್ತು ಅನುದಾನದಲ್ಲಿ ತಾರತಮ್ಯ ವಿಚಾರವನ್ನು ಮುನ್ನಲೆಗೆ ತಂದು ಕೇಂದ್ರದ ವಿರುದ್ಧ ಸಮರ ಸಾರಿ ಅದರಲ್ಲಿ ಯಶಸ್ವಿಯೂ ಆಗಿದೆ.

ಇದು ಲೋಕಸಭೆ ಚುನಾವಣೆಯಲ್ಲಿ ಯಾವ ರೀತಿ ಪರಿಣಾಮ ಬೀರ ಬಹುದು? ಕಾಂಗ್ರೆಸ್‌ಗೆ ಎಷ್ಟರ ಮಟ್ಟಿಗೆ ಸಹಾಯಕ ವಾಗಬಹುದು ಎಂಬುದನ್ನು ಕಾದು ನೋಡಬೇಕು. ಆದರೆ, ಇದರಿಂದ ರಾಜ್ಯಕ್ಕೆ ಅನ್ಯಾಯವಾಗುವ ಸಾಧ್ಯತೆಗಳು ಮಾತ್ರ ಹೆಚ್ಚಾಗಿದೆ. ಏಕೆಂದರೆ ಈ ರೀತಿ ತನ್ನನ್ನು ನಿಂದಿಸುವ, ತನ್ನ ಮೇಲೆ ಆರೋಪಗಳ ಸುರಿ ಮಳೆಗೈಯುತ್ತಾ ನಿರ್ಣಯವನ್ನು ಕೈಗೊಳ್ಳುವ ರಾಜ್ಯಕ್ಕೆ ಕೇಂದ್ರ ಸರಕಾರ ಶಾಸನಬದ್ಧವಾಗಿ ನೀಡಬೇಕಾದ ಅನುದಾನ (ತೆರಿಗೆ ಹಂಚಿಕೆ ಸೇರಿ) ಹೊರತುಪಡಿಸಿ ವಿಶೇಷ ಅನುದಾನ ಒದಗಿಸುವ ಸಾಧ್ಯತೆ ಕಡಿಮೆ.

ಮೇಲಾಗಿ ರಾಜ್ಯಕ್ಕೆಂದೇ ವಿಶೇಷ ಯೋಜನೆಗಳನ್ನು ಘೋಷಿಸಲು ಹಿಂದೇಟು ಹಾಕಬಹುದು. ಇದರ ನೇರ ಪರಿಣಾಮ ರಾಜ್ಯದ ಅಭಿವೃದ್ಧಿ ಮೇಲೆ ಬೀಳುವ ಸಾಧ್ಯತೆ ಇದೆ. ಏಕೆಂದರೆ, ಕೇಂದ್ರದ ವಿರುದ್ಧ ತಿರುಗಿ ಬೀಳುವ ರಾಜ್ಯಗಳಿಗೆ ಹೆಚ್ಚುವರಿ ನೆರವು ನೀಡದೆ ಸತಾಯಿಸಿದ ಸಾಕಷ್ಟು ಉದಾಹರಣೆಗಳು ಸ್ವಾತಂತ್ರ್ಯಾ ನಂತರ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೂ ನಡೆದಿದೆ. ಅನೇಕ ಸಂದರ್ಭದಲ್ಲಿ ರಾಜ್ಯ ಸರಕಾರ ಗಳನ್ನೇ ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿದೆ. ಇದೀಗ ಆ ಸಾಧ್ಯತೆ ಇಲ್ಲವಾದರೂ ಹೆಚ್ಚುವರಿ ನೆರವು ನಿಲ್ಲುವ ಆತಂಕ ಕಾಣಿಸಿಕೊಂಡಿದೆ.

ಒಂದೊಮ್ಮೆ, ರಾಜ್ಯದಲ್ಲಿ ಅಧಿಕಾರದಲ್ಲಿರುವ ಪಕ್ಷ ಏನೇ ಹೇಳಿದರೂ ರಾಜ್ಯದ ಜನರಿಗೆ ಸಮಸ್ಯೆಯಾಗಬಾರದು, ಅಭಿವೃದ್ಧಿಗೆ ಅಡ್ಡಿಯಾಗಬಾರದು ಎಂದು ಕೇಂದ್ರ ಭಾವಿಸಿದರೆ ಆಗ ರಾಜ್ಯಕ್ಕೆ ನ್ಯಾಯ ಸಿಗಬಹುದು. ಆದರೆ, ಅಂತಿಮವಾಗಿ ಈ ನಷ್ಟ ಆಗುವುದು ಕಾಂಗ್ರೆಸ್‌ಗೆ. ಏಕೆಂದರೆ, ಕಾಂಗ್ರೆಸ್
ಸರಕಾರ ಏನೇ ಆರೋಪ ಮಾಡಿದರೂ ಕೇಂದ್ರ ಸರಕಾರ ರಾಜ್ಯದ ಜನರಿಗೆ ಅನ್ಯಾಯ ಮಾಡಿಲ್ಲ ಎಂಬ ಭಾವನೆ ಜನರಲ್ಲಿ ಮೂಡುತ್ತದೆ.

ಲಾಸ್ಟ್ ಸಿಪ್: ಅತಿಯಾದರೆ ಅಮೃತವೂ ವಿಷವಾಗು ತ್ತದೆ ಎಂಬ ಮಾತು ರಾಜಕೀಯ ಆರೋಪಗಳಿಗೂ ಅನ್ವಯವಾಗುತ್ತದೆ.

Leave a Reply

Your email address will not be published. Required fields are marked *

error: Content is protected !!