ಭಾಸ್ಕರಾಯಣ
ಎಂ.ಕೆ.ಭಾಸ್ಕರ ರಾವ್
ದೇಶದ ಯಾವ ಪ್ರಾದೇಶಿಕ ಪಕ್ಷವೂ ಕುಟುಂಬ ರಾಜಕಾರಣದ ಆರೋಪದಿಂದ ಮುಕ್ತವಾಗಿಲ್ಲ. ಕಾಂಗ್ರೆಸ್, ಬಿಜೆಪಿಯಂಥ ರಾಷ್ಟ್ರೀಯ ಪಕ್ಷಗಳೇ ಪರಿವಾರ ವಾದದ ಒಳಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿರುವ ಈ ಸನ್ನಿವೇಶದಲ್ಲಿ, ಈ ಸೋಂಕಿನಿಂದ ಜಡ್‌ಪಿಎಂ ಅನ್ನು ಲಾಲ್ಡು ಹೋಮಾ ಹೇಗೆ ದೂರವಿಡಬಲ್ಲರು ಎನ್ನುವುದು ಕುತೂಹಲಕಾರಿ.
ಜೋರಂ ಪೀಪಲಗ್ಸ್ ಮೂವ್ಮೆಂಟ್ (ಜಡ್ ಪಿಎಂ) ಎನ್ನುವುದು ಇನ್ನೂ ಬಾಲ್ಯಾವಸ್ಥೆಯಲ್ಲಿರುವ ಪ್ರಾದೇಶಿಕ ಪಕ್ಷವೇ ಆಗಿದ್ದರೂ ಮೊನ್ನೆ ಮೊನ್ನೆ ಮಿಜೋರಾಂ ವಿಧಾನ ಸಭೆಗೆ ನಡೆದ ಚುನಾವಣೆಯಲ್ಲಿ ದೊಡ್ಡ ಮತ್ತು ರಾಷ್ಟ್ರೀಯ ಪಕ್ಷಗಳಿಗೆ ಮುಟ್ಟಿನೋಡಿಕೊಳ್ಳಬೇಕಾದಂಥ ಪಾಠ ಕಲಿಸಿದೆ. ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಡ ಮತ್ತು ತೆಲಂಗಾಣ ರಾಜ್ಯಗಳ ಚುನಾವಣಾ ಫಲಿತಾಂಶ ಡಿಸೆಂಬರ್ ೩ರಂದು ಪ್ರಕಟವಾದರೆ ಮಿಜೋರಾಂ ಫಲಿತಾಂಶ ನಿಗದಿಯಂತೆ ಮರುದಿವಸ ಡಿ.೪ರಂದು ಹೊರಬಿದ್ದಿದೆ.
ನವೆಂಬರ್ ತಿಂಗಳಲ್ಲಿ ನಡೆದ ಐದು ರಾಜ್ಯಗಳ ಚುನಾವಣೆಯಲ್ಲಿ ಮೂರನ್ನು ಗೆದ್ದ ಖುಷಿ ಬಿಜೆಪಿಯನ್ನು ನೆಲದ ಮೇಲೆ ನಿಲ್ಲದಂತೆ ಮಾಡಿದೆ. ಕೆಲವೇ ತಿಂಗಳ ಹಿಂದೆ ಕರ್ನಾಟಕವನ್ನು ಜೈಸಿದ ಕಾಂಗ್ರೆಸ್ಸು ಈಗ ಮತ್ತೊಂದು ರಾಜ್ಯ ತೆಲಂಗಾಣವನ್ನು ತೆಕ್ಕೆಗೆ ತೆಗೆದುಕೊಂಡು ಬಿಜೆಪಿ-ಮುಕ್ತ ದಕ್ಷಿಣ ಭಾರತ ಮಾಡಿದ
ಅಮಲಿನಲ್ಲಿ ತೇಲುತ್ತಿದೆ. ಹೀಗಿರುವಾಗ ಮಿಜೋರಾಂನಲ್ಲಿ ಐದರ ಎಳವೆಯಲ್ಲಿ ಇನ್ನೂ ಅಂಬೆಗಾಲನ್ನಿಡುತ್ತಿರುವ ಜಡ್ ಪಿಎಂ ಅಧಿಕಾರ ಹಿಡಿದಿದೆ. ಈಶಾನ್ಯ ರಾಜ್ಯಗಳಲ್ಲಿ ಯಾವತ್ತೂ ಪ್ರಾದೇಶಿಕ ಪಕ್ಷಗಳದೇ ದರ್ಬಾರು. ಹಾಗೆ ನೋಡಿದರೆ ಅಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಕೆಲಸವಿಲ್ಲ. ರಾಷ್ಟ್ರೀಯ ಪಕ್ಷಗಳಿಂದ ಸ್ಥಳೀಯ
ಸಮಸ್ಯೆಗಳಿಗೆ ಪರಿಹಾರ ಸಾಧ್ಯವಿಲ್ಲ ಎನ್ನುವುದನ್ನು ರಾಜ್ಯದ ಜನರಿಗೆ ಮನವರಿಕೆ ಮಾಡಿಕೊಡುವ ಕೆಲಸವನ್ನು ಒಂದು ಅಭಿಯಾನದಂತೆ ನಡೆಸಿಕೊಂಡು ಬಂದ ಪ್ರಾದೇಶಿಕ ಪಕ್ಷಗಳ ಸಾಲಿಗೆ ಜಡ್ಜ್ ಪಿಎಂ ಹೊಸ ಸೇರ್ಪಡೆ.
ವಿಸರ್ಜಿತ ವಿಧಾನಸಭೆಯಲ್ಲಿ ಬಹುಮತ ಹೊಂದಿದ್ದ ಇನ್ನೊಂದು ಪ್ರಾದೇಶಿಕ ಪಕ್ಷ ಮಿಜೋ ನ್ಯಾಷನಲ್ ಫ್ರಂಟ್‌ಗೆ (ಎಂಎನ್‌ಎಫ್) ಹೊಸ ಪಕ್ಷ ಐದು ವರ್ಷದ ವಿಶ್ರಾಂತಿ ನೀಡಿದೆ. ಮಿಜೋರಾಂ ವಿಧಾನಸಭೆಯ ಸಾಮರ್ಥ್ಯ ೪೦ ಸದಸ್ಯಬಲ ಮಾತ್ರ. ಗುಡ್ಡಗಾಡು ರಾಜ್ಯ. ಜನಸಂಖ್ಯೆ ವಿರಳ. ಇಡೀ ಮಿಜೋರಾಂ ರಾಜ್ಯಕ್ಕೆ ಒಬ್ಬರೇ ಲೋಕಸಭಾ ಸದಸ್ಯ. ಆ ರಾಜ್ಯದ ಭೌಗೋಳಿಕ, ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ, ಆರ್ಥಿಕ ಬವಣೆ ಬಗೆಬಗೆಯದು. ಆ ಜನರ ಗೋಳು, ಸಂಕಟ, ಸಂಕಷ್ಟ, ನೋವು ಹೊರ ಭಾರತಕ್ಕೆ ಅಷ್ಟಾಗಿ ಗೊತ್ತಿಲ್ಲ. ಇದು ದೇಶದ ಮೂಲೆ ರಾಜ್ಯವಷ್ಟೇ ಅಲ್ಲ ಸರ್ವಾಂಗೀಣ ಅಭಿವೃದ್ಧಿ ದೃಷ್ಟಿಯಿಂದ ಮೂಲೆಗೊತ್ತಲ್ಪಟ್ಟಿರುವ
ರಾಜ್ಯವೂ ಹೌದು. ಅದರ ನೆರೆಹೊರೆಯಲ್ಲಿರುವ ಇತರ ಈಶಾನ್ಯ ರಾಜ್ಯಗಳ ಸ್ಥಿತಿಯಲ್ಲಿ ಕೂಡಾ ಅಂಥ ವ್ಯತ್ಯಾಸವೇನೂ ಇಲ್ಲ.
ತಮ್ಮ ಸಮಸ್ಯೆಗೆ ತಾವೇ ಪರಿಹಾರ ಕಂಡುಕೊಳ್ಳುವ ತಹತಹವು, ಜಡ್‌ಪಿಎಂ ಆ ರಾಜ್ಯದ ಮಟ್ಟಿಗೆ ಅಭೂತಪೂರ್ವ ಗೆಲುವನ್ನು ಪಡೆದಿರುವುದರ ಹಿಂದಿರುವ ಕಾರಣ. ೪೦ರಲ್ಲಿ ೨೭ ಸ್ಥಾನ ಜಡ್‌ಪಿಎಂಗೆ ಒಲಿದಿರುವುದು ಸಾಮಾನ್ಯ ಬೆಳವಣಿಗೆಯಲ್ಲ. ಈ ಚುನಾವಣೆಯಲ್ಲಿ ನಿರ್ಗಮಿತ ಆಡಳಿತ ಪಕ್ಷ ಎಂಎನ್‌ಎಫ್ ನ ಬಲ ಈಗ ಹತ್ತು ಸ್ಥಾನಕ್ಕೆ ಕುಸಿದಿದೆ. ಬಿಜೆಪಿ ಎರಡು ಸ್ಥಾನ ಪಡೆದರೆ ಕಾಂಗ್ರೆಸ್ ಒಂದು ಸ್ಥಾನಕ್ಕೆ ಸಮಾಧಾನಪಟ್ಟುಕೊಳ್ಳಬೇಕಿದೆ. ಒಂದು ಕಡೆಯಿಂದ ಪ್ರಾದೇಶಿಕ ಪಕ್ಷಗಳನ್ನು ಆಪೋಷನ ಮಾಡುವ ರಾಷ್ಟ್ರೀಯ ಪಕ್ಷಗಳ ರಾಜಕೀಯ ತಂತ್ರ ಪ್ರಗತಿಯಲ್ಲಿರುವಾಗಲೇ ಸಣ್ಣ ರಾಜ್ಯವೊಂದರ ಪುಟ್ಟ ಪಕ್ಷವೊಂದು ರಾಷ್ಟ್ರೀಯ ಪಕ್ಷಗಳಿಗೆ ದೊಡ್ಡ ಪಾಠ ಕಲಿಸಿರುವ ಪರಿಗೆ ಯಾರೂ ಮೆಚ್ಚಿ ಅಹುದಹುದು ಎನ್ನಬೇಕು.
ಮಿಜೋರಾಂನಲ್ಲಿ ಬಿಜೆಪಿ ಅಥವಾ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಕನಸನ್ನೇನೂ ಕಟ್ಟಿಕೊಂಡಿರಲಿಲ್ಲ. ಪ್ರಾದೇಶಿಕ ಪಕ್ಷದ ಜತೆ ಅವು ಬಾಲಂಗೋಚಿಯಾಗಿ ಅಽಕಾರ ಹಿಡಿಯುವ ಕೆಲಸ ಮಾಡಿದ ಉದಾಹರಣೆ ನಿರಂತರ. ಮಲೆನಾಡಿನಲ್ಲಿ ಕಂಬಳ ಶ್ರಾಯದಲ್ಲಿ ಕೇಳಿಬರುವ ಜೋಕ್ ಒಂದಿದೆ. ‘ನನ್ನದು ಮತ್ತು ಹೆಗಡೇರದು ಸೇರಿ ನಾಲ್ಕು ಜೊತೆ ಕೋಣ’ ಎನ್ನುತ್ತಾನೆ ಒಬ್ಬ. ಹೆಗಡೆಯವರಲ್ಲಿ ಏಳು ಕೋಣಗಳಿವೆ. ನಾಲ್ಕನೇ ಜೊತೆಗೆ ಕಡಿಮೆಯಾಗಿರುವ ಒಂದು ಕೋಣ
ಇವನದು. ಹೇಳಿಕೊಳ್ಳಲು ತೊಂದರೆ ಏನು. ಹಾಗಂತ ಅವನು ಹೇಳಿದ್ದು ಸುಳ್ಳಂತೂ ಅಲ್ಲ. ಈಶಾನ್ಯ ರಾಜ್ಯಗಳಲ್ಲಿ ಒಂದು ಎರಡು ಸ್ಥಾನ ಗೆದ್ದು ಪ್ರಾದೇಶಿಕ ಪಕ್ಷದೊಂದಿಗೆ ಕೈಜೋಡಿಸಿ ಒಂದು ಕೋಣದ ಯಜಮಾನನಂತೆ ಮೆರೆಯುತ್ತಿದ್ದ ರಾಷ್ಟ್ರೀಯ ಪಕ್ಷಗಳಿಗೆ ಈಗ ಹಾಗೆ ಹೇಳಿಕೊಳ್ಳಲೂ ಅವಕಾಶವಿಲ್ಲದಂತೆ ಮಾಡಿದೆ ಜಡ್‌ಪಿಎಂ.
ಐದು ವರ್ಷದ ಹಿಂದೆ ಮುಖಂಡ, ಭವಿಷ್ಯದ ಮುಖ್ಯಮಂತ್ರಿ ಲಾಲ್ಡು ಹೋಮಾ ಹುಟ್ಟುಹಾಕಿದ ಈ ಪಕ್ಷಕ್ಕೆ ಸ್ಥಳಿಯ ಸಮಸ್ಯೆ ಪರಿಹಾರವೇ ದೊಡ್ಡ ಅಜೆಂಡಾ. ಲಾಲ್ಡು ಹೋಮಾ ಯಾರು? ಇವರು ಐಪಿಎಸ್ ಅಽಕಾರಿಯಾಗಿದ್ದವರು. ಇಂದಿರಾ ಗಾಂಧಿಯವರ ಭದ್ರತಾ ಪಡೆಯ ಮುಖ್ಯಸ್ಥರೂ ಆಗಿದ್ದವರು. ಆ ಹುದ್ದೆಗೆ ಏರುವವರ
ಪ್ರಾಮಾಣಿಕತೆ, ನಿಷ್ಠೆ, ಕೈಶುದ್ಧವೇ ಮುಂತಾದ ತ್ರಿಕರಣ ಶುದ್ಧಿ ಬಹಳ ಬಹಳ ಮುಖ್ಯ. ಇಂದಿರಾ ಅವರ ಅನುಮತಿ ಪಡೆದು ೧೯೮೪ರಲ್ಲಿ ರಾಜಕೀಯಕ್ಕೆ ಬರಲೆಂದೇ ತಮ್ಮ ಐಪಿಎಸ್ ಹುzಗೆ ರಾಜೀನಾಮೆ ನೀಡಿ ಮಿಜೋರಾಂಗೆ ಮರಳಿದ ಇವರು ಸಾಕಷ್ಟು ಏರಿಳಿತ ಕಂಡ ರಾಜಕಾರಣಿ.
೧೯೮೮ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸಂಸದರಾದರು. ಪಕ್ಷದೊಂದಿಗಿನ ಅಸಮಾಧಾನ ಅವರು ಪಕ್ಷಕ್ಕೆ ರಾಜೀನಾಮೆ
ನೀಡುವಂತೆ ಮಾಡಿತು. ಆದರೆ ಪಕ್ಷಾಂತರ ನಿಷೇಧ ಕಾಯ್ದೆ ತನ್ನ ಬಾರುಕೋಲು ಬೀಸಿದ್ದರಿಂದ ಹೋಮಾ ಸ್ಥಾನ ಕಳೆದುಕೊಂಡರು. ೨೦೦೩ರಲ್ಲಿ ಮಿಜೋರಾಂ ವಿಧಾನಸಭಾ ಸದಸ್ಯರಾದರು. ಆಗ ಒಂದು ಪ್ರಾದೇಶಿಕ ಪಕ್ಷ ಕಟ್ಟಿದರು. ಅದನ್ನು ಕ್ರಮೇಣ ವಿಸರ್ಜಿಸಿ ಜಡ್‌ಪಿಎಂ ಸ್ಥಾಪಿಸಿದರು. ಜನಮನ ಸೆಳೆಯಲು ಲಾಲ್ಡು ಹೋಮಾ ಮಾಡಿದ ಮೊದಲ ಕೆಲಸವೆಂದರೆ ಈ ಚುನಾವಣೆಯಲ್ಲಿ ಹಳಸಲು ಮುಖಗಳನ್ನು ಪಕ್ಕಕ್ಕೆ ಇಟ್ಟು ಹೊಸಬರನ್ನು ಮುಂಚೂಣಿಗೆ ತಂದಿದ್ದು.
ಜಡ್‌ಪಿಎಂನ ೪೦ ಅಭ್ಯರ್ಥಿಗಳಲ್ಲಿ ೩೩ ಜನ ಇದೇ ಮೊದಲ ಬಾರಿಗೆ ಚುನಾವಣಾ ಕಣಕ್ಕೆ ಇಳಿದು ಶುದ್ಧಹಸ್ತರಾಗಿ ಮತ ಯಾಚಿಸಿದರು. ಇವರಲ್ಲಿ ಅನೇಕರು ಸಮಾಜದ ವಿವಿಧ ಸ್ತರಗಳಲ್ಲಿ ವೈದ್ಯ, ವಕೀಲ, ಪ್ರಾಧ್ಯಾಪಕ ಹೀಗೆ ಗೌರವದ ಸ್ಥಾನಮಾನ ಹೊಂದಿದವರು. ಇದಕ್ಕಿಂತಲೂ ಮಿಗಿಲಾದ ವಿಶೇಷವೊಂದಿದೆ. ಬಹಿರಂಗ ಸಭೆಯಲ್ಲಿ ಸಾರ್ವಜನಿಕರ ಸಮ್ಮುಖ ಜಡ್‌ಪಿಎಂ ಅಭ್ಯರ್ಥಿಗಳೆಲ್ಲರೂ ಸಾಲಾಗಿ ನಿಂತು ‘ನಾವು ಯಾವತ್ತೂ ಲಂಚ-ರುಷುವತ್ತು ಮುಟ್ಟುವುದಿಲ್ಲ’
ಎಂದು ಪ್ರಮಾಣ ಮಾಡಿ ಘೋಷಿಸಿ ಮತ ಯಾಚಿಸಿದ್ದು. ರಾಜಕಾರಣಿಗಳಲ್ಲಿ ಬಹುತೇಕರು ಕ್ಷೇತ್ರಕ್ಕೆ ಬರುವ ಪೂರ್ವದಲ್ಲಿ ಮುಂಡು ಬೀಡಿಗೂ ಗತಿಯಿಲ್ಲದವರೇ ಆಗಿರುತ್ತಾರೆ.
ಆದರೆ ಅಧಿಕಾರಕ್ಕೆ ಬಂದ ಐದೇ ವರ್ಷದಲ್ಲಿ ಅವರ ಬದುಕಿನ ಶೈಲಿ, ವರ್ತನೆಯಲ್ಲಿ ಬದಲಾವಣೆ ಆಗುತ್ತದೆ. ಈ ಮಾತನ್ನು ಮಿಜೋರಾಂ ಜನತೆ ಅರ್ಥಮಾಡಿ ಕೊಂಡವರೇ ಆಗಿದ್ದರೂ ಹೊಸ ಭರವಸೆಯನ್ನು ಅವರು ಹೊಸ ಪಕ್ಷದ ಆಡಳಿತದಲ್ಲಿ ನಿರೀಕ್ಷೆ ಮಾಡಿರುವುದು ಈ ಕ್ಷಣದ ಸತ್ಯ. ಮಿಜೋರಾಂ ಒಳಗೊಂಡಂತೆ ಈಶಾನ್ಯ ರಾಜ್ಯ ಗಳಲ್ಲಿನ ಆಹಾರ ಸಂಸ್ಕೃತಿಯಲ್ಲಿ ಗೋಮಾಂಸ ಪ್ರಧಾನ ಪಾತ್ರ ವಹಿಸಿದೆ. ಬಿಜೆಪಿಯ ಗೋಹತ್ಯಾ ನಿಷೇಧ ಕಾಯ್ದೆ ಅಲ್ಲಿ ಕೆಲಸಕ್ಕೆ ಬಾರದ ಕಾನೂನು. ಅಲ್ಲಿಯ ಬಹುಸಂಖ್ಯಾತರು ಕ್ರಿಶ್ಚಿಯನ್ ಧರ್ಮಾನುಯಾಯಿಗಳು. ಇದು ಕೂಡಾ ಬಿಜೆಪಿಗೆ ನುಂಗಲಾಗದ ತುತ್ತು. ಕಾಂಗ್ರೆಸ್ ಈ ಎರಡೂ ವಿಚಾರ ಗಳಲ್ಲಿ ಜನಕ್ಕೆ ಬೇಸರ ಆಗದಂತೆ ನಡೆದುಕೊಂಡಿದೆಯಾದರೂ ಸ್ಥಳೀಯರು ಆ ಪಕ್ಷವನ್ನು ನಂಬಲು ಸಿದ್ಧರಿಲ್ಲ. ರಾಜ್ಯ ಅಸ್ತಿತ್ವಕ್ಕೆ ಬಂದಿರುವ ಈ ಮೂರು ದಶಕ ದಲ್ಲಿ ಆಡಳಿತ ನಡೆಸಿದ ಬಹುತೇಕ ಎಲ್ಲ ಸರಕಾರಗಳಲ್ಲೂ ಪಾಲುದಾರನಾಗಿ ಕಾಂಗ್ರೆಸ್ ಉಸಾಬರಿ ನಡೆಸಿದೆ.
ಚುನಾವಣೆ ಸಮಯದಲ್ಲಿ ಆ ಪಕ್ಷ ಹೇಳುವುದು ಏನು ಮತ್ತು ಅಧಿಕಾರದಲ್ಲಿ ಪಾಲುದಾರಿಕೆ ಸಿಕ್ಕ ಬಳಿಕ ವರ್ತಿಸುವ ರೀತಿ ಯಾವುದು ಎನ್ನುವುದು ಜನಕ್ಕೆ ಮನವರಿಕೆಯಾಗಿದೆಯೆಂದೇ ಅದರ ಸ್ಥಾನಬಲ ಒಂದಕ್ಕೆ ಇಳಿದಿದೆ. ಪ್ರಾದೇಶಿಕ ಪಕ್ಷಗಳ ಬಹಳ ದೊಡ್ಡ ಸಮಸ್ಯೆಯೆಂದರೆ ಕುಟುಂಬ ರಾಜಕಾರಣದ್ದು. ದೇಶದ ಯಾವ ಪ್ರಾದೇಶಿಕ ಪಕ್ಷವೂ ಪರಿವಾರವಾದದ ಆರೋಪದಿಂದ ಮುಕ್ತವಾಗಿಲ್ಲ. ಕಾಂಗ್ರೆಸ್, ಬಿಜೆಪಿಯಂಥ ರಾಷ್ಟ್ರೀಯ ಪಕ್ಷಗಳೇ ಪರಿವಾರವಾದದ ಒಳಸುಳಿಯಲ್ಲಿ ಸಿಂಬಳದಲ್ಲಿ ಸಿಕ್ಕ ನೊಣದಂತೆ ಒzಡುತ್ತಿರುವ ಈ ಸಂದರ್ಭ ಸನ್ನಿವೇಶದಲ್ಲಿ ಲಾಲ್ಡು ಹೋಮಾ, ಈ ಸೋಂಕಿನಿಂದ ಜಡ್‌ಪಿಎಂ ಅನ್ನು ಹೇಗೆ ದೂರವಿಡಬಲ್ಲರು
ಎನ್ನುವುದು ಕುತೂಹಲಕಾರಿ.
ಕುಟುಂಬ ರಾಜಕೀಯಕ್ಕೆ ಅವರು ಒತ್ತುಕೊಟ್ಟಿದ್ದೇ ಹೌದಾದರೆ ಅವರ ಪಕ್ಷವೂ ಹತ್ತರಲ್ಲಿ ಒಂದು ಎಂಬ ಕಳಂಕ ಹೊರುವುದು ಖಚಿತ. ಅದೇನೇ ಇರಲಿ ರಾಜ್ಯ
ಅಸ್ತಿತ್ವಕ್ಕೆ ಬಂದ ಈ ಮೂವತ್ತು ವರ್ಷಗಳಲ್ಲಿ ಮುಖ್ಯಮಂತ್ರಿ ಆದವರೇ ಮತ್ತೆ ಸಿಎಂ ಆಗಿದ್ದಾರೆ. ಒಂದು ಹಳೇ ಮುಖ ತೊಲಗಿತು ಎಂದು ರಾಜ್ಯದ ಜನತೆ ಸಮಾಧಾನಪಡುವಷ್ಟರಲ್ಲಿ ಮತ್ತೊಂದು ಹಳಸಲು ಮುಖ ಅಲ್ಲಿ ವಕ್ಕರಿಸಿದ್ದು ಇತಿಹಾಸ. ಹೋದೆಯಾ ಪಿಶಾಚಿ ಎಂದರೆ ಬಂದೆ ಗವಾಕ್ಷೀಲಿ ಎಂಬ ಸ್ಥಿತಿ ಈವರೆಗಿನ ಮಿಜೋರಾಂನದು. ಈಗ ಹೊಚ್ಚ ಹೊಸ ಮುಖವೊಂದು ಲಾಲ್ಡು ಹೋಮಾ ಹೆಸರಿನಲ್ಲಿ ಮುಖ್ಯಮಂತ್ರಿ ಗಾದಿಗೆ ಏರಿದೆ.
ಸುಂದರ ಪ್ರಕೃತಿ ಮಡಿಲ ರಾಜ್ಯದ ಅಮಾಯಕ ಜನರ ಕನಸಿಗೆ ಇನ್ನಷ್ಟು ಸೊಗಸು ತರುವ ಕೆಲಸವನ್ನು ಹೋಮಾ ಮಾಡದಿದ್ದರೆ ಅವರನ್ನು ಆರಿಸಿದ ಜನತೆ
‘ಹೊಳೆಯಲ್ಲಿ ಹೋಮ ಮಾಡಿದಂತೆ ಆಯಿತು’ ಎಂದು ಪರಿತಪಿಸಬಹುದು.