Sunday, 8th September 2024

ನಾವು ವಿವೇಕಿಗಳೋ, ಅವಿವೇಕಿಗಳೋ ?

ಹಿಂದಿರುಗಿ ನೋಡಿದಾಗ

ನಮ್ಮ ಪೂರ್ವಜರ ದಾಯಾದಿಗಳಲ್ಲಿ ‘ಫ್ಲಾರೆಸ್ ಮಾನವ’ ಹಾಗೂ ‘ನಿಯಾಂದರ್ಥಾಲ್ ಮಾನವ’ನ ಬಗ್ಗೆ ತಿಳಿದುಕೊಂಡೆವು. ನಮ್ಮ ಪೂರ್ವಜರ ೩ನೇ ದಾಯಾದಿ ಡೆನಿಸೋವನ್ ಮಾನವನ ಬಗ್ಗೆ ತಿಳಿದುಕೊಳ್ಳುವುದು ಅಗತ್ಯವಾಗಿದೆ. ಏಕೆಂದರೆ ಈ ಡೆನಿಸೋವನ್ ಮಾನವ ಇತ್ತೀಚಿನವರೆಗೆ, ಅಂದರೆ ಸುಮಾರು ೧೫,೦೦೦ ವರ್ಷಗಳವರೆಗೆ ನಮ್ಮ ಜತೆಯಲ್ಲಿಯೇ ಬಾಳಿ ಬದುಕಿದವನು. ಈಗ ಈತನ ಸಂತತಿ ಸಂಪೂರ್ಣ ನಾಶವಾಗಿದೆ. ಇವನು ಯಾರು, ಎಲ್ಲಿದ್ದ, ಹೇಗಿದ್ದ ಇತ್ಯಾದಿಗಳ ಬಗೆಗಿನ ಲಭ್ಯ ಮಾಹಿತಿಯನ್ನು ತಿಳಿಯೋಣ.

ರಷ್ಯಾ ದೇಶದ ಸೈಬೀರಿಯ ಪ್ರಾಂತ್ಯ. ಇಂದಿನ ಕಜ಼ಕಸ್ತಾನ್, ಚೀನ ಮತ್ತು ಮಂಗೋಲಿಯ ದೇಶಗಳ ಸರಹದ್ದನ್ನು ರೂಪಿಸುವ ಆಲ್ಟಾಯ್ ಪರ್ವತ ಪ್ರದೇಶ. ಅಲ್ಲಿ ಡೆನಿಸೋವ ಎಂಬ ಒಂದು ಗುಹೆ. ರಷ್ಯಾದ ‘ಡೆನಿಸ್’ ಅಥವ ‘ದ್ಯೋನಿಸಿ’ ಎಂಬ ಸಂತನು ೧೮ನೇ ಶತಮಾನದ ಆಸುಪಾಸಿನಲ್ಲಿ ಈ
ಗುಹೆಯಲ್ಲಿ ವಾಸವಾಗಿದ್ದ. ಹಾಗಾಗಿ ಇದನ್ನು ‘ಡೆನಿಸೋವ ಗುಹೆ’ ಎನ್ನುತ್ತಿದ್ದರು. ಅದು ೨೦೦೮ರ ಕಾಲಘಟ್ಟ. ರಷ್ಯಾದ ಮೈಕೇಲ್ ಶುಂಕೋವ್ ಮತ್ತು ಇತರ ಪ್ರಾಕ್ತನಶಾಸ್ತ್ರಜ್ಞರು ಈ ಗುಹೆಯನ್ನು ಅನ್ವೇಷಿಸಿದರು. ಆಗ ಅವರಿಗೆ ಬೆರಳ ಮೂಳೆಯೊಂದು ದೊರೆಯಿತು. ಪರೀಕ್ಷಿಸಿದಾಗ ಅದು
ಇಂದಿಗೆ ೭೬,೨೦೦-೫೧,೬೦೦ ವರ್ಷಗಳ ಹಿಂದೆ ಬದುಕಿದ್ದಿರಬಹುದಾದ ಓರ್ವ ಬಾಲೆಯ ಕೈಬೆರಳ ಮೂಳೆ ಎಂದು ತಿಳಿಯಿತು.

ಇದನ್ನು ‘ಎಕ್ಸ್-ಮಹಿಳೆ’ಯ ಕೈಬೆರಳು ಎಂದು ಕರೆದರು. ಈ ಮೂಳೆಯಲ್ಲಿದ್ದ ಮೈಟೋಕಾಂಡ್ರಿಯ ವಂಶವಾಹಿಗಳನ್ನು ವಿಸ್ತೃತವಾಗಿ ಪರೀಕ್ಷಿಸಿದಾಗ, ಅದು ನಿಯಾಂದರ್ಥಾಲ್ ಮನುಷ್ಯರು ಹಾಗೂ ನಮ್ಮ ಪೂರ್ವಜರಿಗಿಂತಲೂ ಭಿನ್ನವಾಗಿರುವುದು ಗೊತ್ತಾಯಿತು. ಡೇನಿಸೋವ ಗುಹೆಯಲ್ಲಿ ದೊರೆತ ಇತರ ಮೂಳೆಗಳ ಕಾಲಮಾನವನ್ನು ಅಧ್ಯಯನ ಮಾಡಿದಾಗ ಅಲ್ಲಿ ಮಾನವ ವಸತಿಯು ೨೮೭+೪೧-೨೦೩+೧೪ ವರ್ಷಗಳಿಂದ ಇತ್ತು ಎನ್ನುವು ದಕ್ಕೆ ಪುರಾವೆಯು ದೊರೆಯಿತು. ಇವರಿಗೆ ಪ್ರತ್ಯೇಕವಾದ ಒಂದು ನಾಮಕರಣ ಮಾಡಬೇಕಾಗಿತ್ತು. ಹಾಗಾಗಿ ಇವರನ್ನು ‘ಹೋಮೋ ಡೆನಿಸೋವ’ ಅಥqಅ ‘ಹೋಮೋ ಆಲ್ಟೈ ನ್ಸಿಸ್’ ಎಂದು ಕರೆದರು. ವಾಡಿಕೆಯಲ್ಲಿ ‘ಡೇನಿಸೋವನ್ ಮಾನವ’ ಎಂದು ಕರೆಯುವ ರೂಢಿಯು ಬೆಳೆಯಿತು.

೧೯೮೦ರಲ್ಲಿ ಟಿಬೆಟ್ ಪ್ರಾಂತ್ಯದ ‘ಬೈಶಿಯಾ ಕಾರ್ಸ್ಟ್ ಗುಹೆ’ಯಲ್ಲಿ ಒಂದು ದವಡೆಮೂಳೆಯು ಭಾಗಶಃ ದೊರೆಯಿತು. ಇದನ್ನು ‘ಶಿಯಾಹಿ ದವಡೆ’ ಎಂದು ಕರೆದರು. ಇದರ ಅಧ್ಯಯನದಿಂದ, ಈ ಮೂಳೆಯಲ್ಲೂ ಡೆನಿಸೋವನ್ ಮಾನವರ ಗುಣಲಕ್ಷಣಗಳು ಇರುವುದನ್ನು ಪತ್ತೆ ಹಚ್ಚಿದರು. ಇದು ಇಂದಿಗೆ ೧,೬೦,೦೦೦ ವರ್ಷಗಳ ಹಿಂದಿನದಾಗಿತ್ತು. ೨೦೧೮ರ ಕಾಲಘಟ್ಟ. ಲಾವೋಸ್, ಫ್ರೆಂಚ್ ಮತ್ತು ಅಮೆರಿಕನ್ ಮಾನವನ ಶಾಸ್ತ್ರಜ್ಞರು ಲಾವೋಸ್‌ನ ‘ಅನ್ನಮೈಟ್ ಪರ್ವತ’ ಪ್ರದೇಶದ ಕಾಡುಗಳಲ್ಲಿದ್ದ ಗುಹೆಗಳನ್ನು ಹುಡುಕುತ್ತಿದ್ದಾಗ ಅವರಿಗೆ ಒಂದು ಹುಡುಗಿಯ ಹಲ್ಲು ದೊರೆಯಿತು. ಇದರ ಗುಣಲಕ್ಷಣಗಳು ಶಿಯಾಹಿ ದವಡೆಯ ಲಕ್ಷಣಗಳನ್ನು ಹೋಲುತ್ತಿದ್ದವು.

ಇವಲ್ಲದೆ ಏಷ್ಯಾ ವಲಯದಲ್ಲಿ ಹಲವು ಕಡೆ ಪ್ರಾಚೀನ ಮಾನವರ ಮೂಳೆಗಳು ದೊರೆತಿವೆ. ಡ್ಯಾಲಿ ಕಪಾಲ, ಶುಜಿಯಾವೊ ಮಾನವ, ಮಾಬ
ಮಾನವ, ಜಿನ್ನುಶನ್ ಮಾನವ, ನರ್ಮದಾ ಮಾನವ ಇತ್ಯಾದಿ. ಇವು ಬಹುಶಃ ಡೆನಿಸೋವನ್ ಮಾನವನ ಮೂಳೆಗಳೇ ಆಗಿರಬಹುದು. ಈ ಬಗ್ಗೆ ವಿಸ್ತೃತವಾದ ಅಧ್ಯಯನಗಳು ನಡೆದಿಲ್ಲ. ಸದ್ಯಕ್ಕೆ ಪಶ್ಚಿಮದ ಸೈಬೀರಿಯದಿಂದ ಹಿಡಿದು ಪೂರ್ವದ ಲಾವೋಸ್‌ವರೆಗೆ ಈ ಡೇನಿಸೋವನ್ ಪೂರ್ವ
ಜರು ವಾಸವಾಗಿದ್ದರು ಎನ್ನಬಹುದು. ಇವರು ಮಲಯ ಸುತ್ತಮುತ್ತಲಿನ ಸಾಗರವನ್ನು ದಾಟಿ ಆಸ್ಟ್ರೇಲಿಯಕ್ಕೂ ವಲಸೆ ಹೋಗಿರಬಹುದು ಎನ್ನುವ ವಾದವೂ ಇದೆ.

ಇಂದಿಗೆ ಸುಮಾರು ೮ ಲಕ್ಷ ವರ್ಷಗಳ ಹಿಂದೆ ಬದುಕಿದ್ದ ಮಾತೃಜೀವಿಯೊಂದರಿಂದ ಚಿಂಪಾಂಜಿಗಳೂ ಮಾನವ ಪೂರ್ವಜನೂ ಪ್ರತ್ಯೇಕವಾಗಿರ ಬೇಕು. ಈ ಮಾನವ ಪೂರ್ವಜನಿಂದ ಆಧುನಿಕ ಮಾನವ ಹಾಗೂ ನಿಯಾಂದ ರ್ಥಾಲ್/ಡೇನಿಸೋವನ್ ಪೂರ್ವಜರು ಸುಮಾರು ೬,೪೦,೦೦೦ ವರ್ಷಗಳ ಹಿಂದೆ ಕವಲೊಡೆದಿರಬೇಕು. ಇಂದಿಗೆ ೨೩೬-೧,೯೦,೦೦೦ ವರ್ಷಗಳ ಹಿಂದೆ ನಿಯಾಂದರ್ಥಾಲ್ ಹಾಗೂ ಡೆನಿಸೋವನ್ ಮಾನವರು ಬೇರೆ ಬೇರೆಯಾಗಿ, ನಂತರ ಸ್ವತಂತ್ರವಾಗಿ ಬೆಳೆದರು ಎನ್ನಲಾಗಿದೆ. ಡೇನಿ ಸೋವನ್ ಮಾನವರ ದೈಹಿಕ ಲಕ್ಷಣಗಳ ಬಗ್ಗೆ ನಿಶ್ಚಿತವಾಗಿ ಹೇಳುವುದು ಕಷ್ಟ. ಡೆನಿಸೋವನ್ ಮಾನವನ ಸಂಪೂರ್ಣ ಅಸ್ಥಿಪಂಜರವು ಇದುವರೆಗೂ ದೊರೆತಿಲ್ಲ. ದೊರೆತಿರುವುದು ಒಂದು ಬೆರಳ ಮೂಳೆ, ನಾಲ್ಕು ಹಲ್ಲುಗಳು, ಅರ್ಧ ದವಡೆಮೂಳೆ, ಕಪಾಲ ಮೂಳೆಯ ಒಂದು ಭಾಗ ಹಾಗೂ ನಾಲ್ಕು ದೊಡ್ಡ ಮೂಳೆಗಳ ಚೂರುಗಳು. ಇವೆಲ್ಲದರ ಆಧಾರದ ಮೇಲೆ ಡೆನಿಸೋವನ್ ಮಾನವರೂ ಹೆಚ್ಚು ಕಡಿಮೆ ನೋಡಲಿಕ್ಕೆ ನಿಯಾಂದರ್ಥಾಲ್ ಮಾನವರ ಹಾಗೆಯೇ ಕಾಣುತ್ತಿದ್ದಿರಬೇಕು ಎಂದು ಊಹಿಸಲಾಗಿದೆ.

ಎಸ್.ಎಲ್.ಭೈರಪ್ಪನವರ ‘ವಂಶವೃಕ್ಷ’ ಕಾದಂಬರಿಯ ಶ್ರೀನಿವಾಸ ಶ್ರೋತ್ರಿಗಳು ತಮ್ಮ ಹಿಂದಿನ ತಲೆಮಾರುಗಳ ವಂಶವೃಕ್ಷವನ್ನು ನೋಡಿ ಬೀಗುತ್ತಿರುವಾಗ ತಮ್ಮ ಜನ್ಮ ರಹಸ್ಯವು ತಿಳಿಯುತ್ತಿರುವಂತೆಯೇ ವಿರಕ್ತರಾಗುತ್ತಾರೆ. ವಾಸ್ತವದಲ್ಲಿ ಈ ‘ಶುದ್ಧವಂಶ’ವೆನ್ನುವುದೇ ಒಂದು ಮಿಥ್ಯೆ.
ಆಧುನಿಕ ಮಾನವನ ವಂಶವಾಹಿಗಳನ್ನು ವಿಶ್ಲೇಷಿಸಿದಾಗ, ಅವುಗಳಲ್ಲಿ ನಿಯಾಂದರ್ಥಾಲ್ ಹಾಗೂ ಡೆನಿಸೋವನ್ ಮಾನವನ ವಂಶವಾಹಿಗಳು ಕಲಬೆರಕೆಯಾಗಿರುವುದು ನಿಚ್ಚಳವಾಗಿ ಕಾಣುತ್ತದೆ. ಅಂದರೆ ಈ ಮೂರೂ ಮಾನವ ಪ್ರಭೇದಗಳ ನಡುವೆ ಲೈಂಗಿಕ ಸಂಬಂಧವೇರ್ಪಟ್ಟಿರಬೇಕು.
ಆಧುನಿಕ ಮಾನವ ಹಾಗೂ ನಿಯಾಂದರ್ಥಾಲ್ ನಡುವೆ ಲೈಂಗಿಕ ಸಂಪರ್ಕವೇರ್ಪಟ್ಟಿದ್ದರೂ ಇವರಿಗೆ ಮಕ್ಕಳು ಹುಟ್ಟುವ ಸಾಧ್ಯತೆಯು ಕಡಿಮೆಯಿತ್ತು ಎನ್ನುವುದನ್ನು ಈಗಾಗಲೇ ಅರಿತಿದ್ದೇವೆ.

ಆದರೆ ನಿಯಾಂದರ್ಥಾಲ್ ಹಾಗೂ ಡೆನಿಸೋವನ್ನರ ನಡುವೆ ಹೀಗಾಗಿರಲಿಲ್ಲ. ಡೆನಿಸೋವನ್ ಗುಹೆಯಲ್ಲಿ ದೊರೆತ ಮೂಳೆಗಳ ವಂಶವಾಹಿಗಳಲ್ಲಿ
ಸುಮಾರು ಶೇ.೧೭ರಷ್ಟು ನಿಯಾಂದರ್ಥಾಲ್ ಮನುಷ್ಯರದ್ದಾಗಿವೆ. ಹಾಗೆಯೇ ಡೆನಿಸೋವ ಗುಹೆಯಲ್ಲಿ ದೊರೆತಿರುವ ನಮೂನೆ ೧೧ರ ಮೂಳೆಗಳು ಡೆನಿಸೋವನ್ ತಂದೆ ಹಾಗೂ ನಿಯಾಂದರ್ಥಾಲ್ ತಾಯಿಗೆ ಹುಟ್ಟಿದ ಸಂತಾನದ ಮೂಳೆಯಾಗಿರುವುದು ಪತ್ತೆಯಾಗಿದೆ. ಡೆನಿಸೋವನ್ ವಂಶವಾಹಿಗಳನ್ನು ಅಧ್ಯಯನ ಮಾಡುವಾಗ ಮತ್ತೊಂದು ಕುತೂಹಲಕರ ಮಾಹಿತಿ ಹೊರಬಿದ್ದಿದೆ. ಡೆನಿಸೋವನ್ ವಂಶವಾಹಿಗಳಲ್ಲಿ ಶೇ.೪ರಷ್ಟು ಪಾಲು ಡೆನಿಸೋವನ್ ಅವರದ್ದೂ ಅಲ್ಲ, ನಿಯಾಂದರ್ಥಾಲ್ ಅವರದ್ದೂ ಅಲ್ಲ. ಹಾಗೆಯೇ ಆಧುನಿಕ ಮಾನವನದ್ದೂ ಅಲ್ಲ. ಸಂಪೂರ್ಣ ಭಿನ್ನವಾಗಿರುವ ಮತ್ತೊಂದು ಮಾನವ ಪ್ರಭೇದದ್ದಾಗಿದೆ. ಆದರೆ ಈ ನಾಲ್ಕನೆಯ ಪ್ರಭೇದವು ಯಾವುದು, ಎಲ್ಲಿತ್ತು, ಹೇಗಿತ್ತು, ಇದುವರೆಗೂ ಅದರ ಕುರುಹುಗಳು ಯಾಕೆ ದೊರೆತಿಲ್ಲ ಎನ್ನುವ ಪ್ರಶ್ನೆಗಳಿಗೆ ನಮ್ಮ ಬಳಿ ಉತ್ತರವೇ ಇಲ್ಲ.

ಬಹುಶಃ ಇಂದಿಗೆ ೧೯ ಲಕ್ಷ ವರ್ಷಗಳ ಹಿಂದೆ ಆಫ್ರಿಕವನ್ನು ಬಿಟ್ಟು ಯುರೋಪಿನ ಕಡೆಗೆ ಜೀವಿಯು ಬಂದಿರಬೇಕು. ಇವರೊಡನೆ ಡೆನಿಸೋವನ್ ಮಾನವನ ಸಂಪರ್ಕವೇರ್ಪಟ್ಟ ಕಾರಣ, ಈ ಅನಾಮಧೇಯ ಮಾನವನ ವಂಶವಾಹಿಗಳು ಡೆನಿಸೋವನ್ ಮಾನವನನ್ನು ಸೇರಿಕೊಂಡಿವೆ. ಡೆನಿಸೋವನ್ ಹಾಗೂ ಆಧುನಿಕ ಮಾನವ ಪೂರ್ವಜರ ನಡುವೆ ಸಂಬಂಧವೇರ್ಪಟ್ಟ ಕಾರಣ, ಡೆನಿಸೋವನ್ ವಂಶವಾಹಿಗಳು ಆಸ್ಟ್ರೇಲಿಯದ ಮೂಲವಾಸಿ ಗಳು, ಫಿಜಿ, ಪೂರ್ವ ಇಂಡೋನೇಶಿಯದವರು, ಫಿಲಿಪೈನ್ಸ್ ಜನರು ಮತ್ತು ಅಂಡಮಾನಿನ ಓಂಗೆ ಬುಡಕಟ್ಟಿನವರಲ್ಲೂ
ಕಂಡುಬರುತ್ತಿವೆ.

ಫ್ಲಾರೆಸ್ ಮಾನವರು ಫ್ಲಾರೆಸ್ ದ್ವೀಪದಲ್ಲಿ, ನಿಯಾಂದ ರ್ಥಾಲ್ ಮಾನವರು ಯುರೋಪಿನಲ್ಲಿ ಹಾಗೂ ಡೆನಿಸೋವನ್ ಮಾನವರು ಸೈಬೀರಿಯದಲ್ಲಿ ಬದುಕಿದ್ದಾಗ, ನಮ್ಮ ಪೂರ್ವಜರಲ್ಲಿ ಬಹುಪಾಲು ಜನರು ಆಫ್ರಿಕ ಖಂಡದಲ್ಲಿ ವಾಸವಾಗಿದ್ದರು. ಇವರೆಲ್ಲರಿಗೂ ನಾಮಕರಣ ಮಾಡುವಾಗ, ನಾವು ಅವರು ವಾಸಿಸುತ್ತಿದ್ದ ಪ್ರದೇಶಗಳ ಹೆಸರನ್ನೇ ನೀಡಿದೆವು. ಫ್ಲಾರೆನ್ಸ್ ದ್ವೀಪದಲ್ಲಿ ವಾಸವಾಗಿದ್ದವರನ್ನು ಹೋಮೋ ಫ್ಲಾರೆನ್ಸಿಯನ್ಸ್ ಎಂದೆವು. ನಿಯಾಂದ ರ್ಥಾಲ್ ಕಣಿವೆಯಲ್ಲಿದ್ದವರನ್ನು ಹೋಮೋ ನಿಯಾಂದ ರ್ಥಾಲೆನ್ಸಿಸ್ ಎಂದೂ, ಡೆನಿಸೋವನ್ ಗುಹೆಯಲ್ಲಿದ್ದವರನ್ನು ಹೋಮೋ ಡೆನಿಸೋವ ಎಂದೂ ಕರೆದವು. ನಾವು ನಮ್ಮನ್ನು ‘ಹೋಮೋ ಸೆಪಿಯನ್ಸ್’ ಎಂದು ಕರೆದುಕೊಂಡಿದ್ದೇವೆ.

ವಾಡಿಕೆಯಲ್ಲಿ ಸೆಪಿಯನ್ಸ್ ಎಂದು ಕರೆಯುವ ಪದ್ಧತಿಯಿದೆ. ಈ ಸೆಪಿಯನ್ಸ್ ಎಂದರೆ ಏನು? ಅದು ನಮ್ಮ ಪೂರ್ವಜರು ವಾಸಮಾಡುತ್ತಿದ್ದ ದ್ವೀಪದ ಹೆಸರೇ? ಕಣಿವೆಯ ಅಥವಾ ಗುಹೆಯ ಹೆಸರೇ? ಯಾವುದೂ ಅಲ್ಲ. ‘ಸೆಪಿಯನ್ಸ್’ ಎಂಬ ಲ್ಯಾಟಿನ್ ಶಬ್ದದ ಸರಳ ಇಂಗ್ಲಿಷ್ ಅರ್ಥ ‘ವೈಸ್ ಮ್ಯಾನ್’.
ವೈಸ್ ಮ್ಯಾನ್ ಎನ್ನುವ ಶಬ್ದವನ್ನು ನಾವು ‘ವಿವೇಕವುಳ್ಳ ಮನುಷ್ಯ, ಜ್ಞಾನವನ್ನುಳ್ಳ ಮನುಷ್ಯ ಅಥವಾ ಬುದ್ಧಿವಂತ ಮನುಷ್ಯ’ ಎಂದು ಕನ್ನಡದಲ್ಲಿ ಹೇಳಬಹುದು. ಸಾಮಾನ್ಯ ವಾಗಿ ಬುದ್ಧಿವಂತ ಮಾನವ ಎನ್ನುವ ಪದವನ್ನೇ ಹೆಚ್ಚು ಬಳಸುವ ಪದ್ಧತಿಯಿದೆ.

ಪ್ರಜ್ಞಾವಂತ, ಜ್ಞಾನವಂತ, ವಿವೇಕಿ, ಬುದ್ಧಿವಂತ ಇತ್ಯಾದಿ ವಿಶೇಷಣಗಳನ್ನು ನಮಗೆ ನಾವೇ ಕೊಟ್ಟುಕೊಂಡಿದ್ದೇವೆ. ಸ್ವಲ್ಪ ಆಲೋಚನೆ ಮಾಡಿದರೂ
ಮನುಷ್ಯನು ತನ್ನನ್ನು ಹೊಗಳಿಕೊಂಡದ್ದು ಸ್ವಲ್ಪ ‘ಅತಿ’ ಯಾಯಿತೇನೋ ಎನಿಸುತ್ತದೆ. ಮಾನವನು ಚಂದ್ರನ ಅಂಗಳದಲ್ಲಿ ಹೆಜ್ಜೆಯೂರಿ ಮಂಗಳನ ಅಂಗಳಕ್ಕೆ ಜಿಗಿಯುತ್ತಿದ್ದಾನೆ ಎನ್ನುವ ವಿಚಾರ ಸತ್ಯ. ಇದು ಮನುಷ್ಯನ ಬುದ್ಧಿವಂತಿಕೆಗೆ ಸಾಕ್ಷಿ ಎನ್ನುವುದು ನಿರ್ವಿವಾದ. ಆದರೆ ತನ್ನನ್ನು ತಾನು ಪ್ರಜ್ಞಾವಂತ, ವಿವೇಕಿ ಎಂದು ಕರೆದುಕೊಂಡಿರುವುದು ಸಭ್ಯತೆಯ ಮಿತಿಮೀರಿತೇನೋ ಎನಿಸುತ್ತದೆ.

ಅವನು ಪರಿಸರವನ್ನು ವಿನಾಶ ಮಾಡುತ್ತಿರುವ ರೀತಿಯನ್ನು ನೋಡಿದರೆ, ಧರ್ಮ, ದೇಶ, ಜಾತಿ, ಭಾಷೆಗಳ ಹೆಸರಿನಲ್ಲಿ ನಡೆಸುತ್ತಿರುವ ಯುದ್ಧ ಗಳನ್ನು ನೋಡಿದರೆ, ಕೊರೋನದಂಥ ರೋಗಜನಕಗಳನ್ನು ಪ್ರಯೋಗಾಲಯದಲ್ಲಿ ಸೃಜಿಸಿ, ಸಮಸ್ತ ಮಾನವ ಕುಲವನ್ನೇ ವಿನಾಶಮಾಡುವ ಹುನ್ನಾರವನ್ನು ನೋಡಿದರೆ, ಇವನು ನಿಜಕ್ಕೂ ವಿವೇಕಿಯಾ? ಎಂಬ ಪ್ರಶ್ನೆ ನಮ್ಮ ಮುಂದೆ ಬೃಹದಾಕಾರವಾಗಿ ನಿಲ್ಲುತ್ತದೆ. ಆದರೇನು ಮಾಡು ವುದು? ಮನುಷ್ಯನಿಗೆ ಹೇಳುವವರೂ ಇಲ್ಲ, ಕೇಳುವವರೂ ಇಲ್ಲ. ಅವನು ಆಡಿದ್ದೇ ಆಟ. ಹಾಗಾಗಿ ಅವನು ತನ್ನನ್ನು ತಾನೇ ವಾಚಾಮಗೋಚರವಾಗಿ ಹೊಗಳಿ ಕೊಳ್ಳಲು ಆರಂಭಿಸಿದರೆ, ಅವನನ್ನು ಹೇಗೆ ತಾನೆ ತಡೆಯಬಲ್ಲೆವು?

Leave a Reply

Your email address will not be published. Required fields are marked *

error: Content is protected !!