Friday, 18th October 2024

ಅಕ್ಷರ ಪ್ರಪಂಚದಲ್ಲಿ ಪಸರಿಸಿರುವ ಕೇದಗೆ ಹೂವಿನ ಕಂಪು

ತಿಳಿರು ತೋರಣ

srivathsajoshi@yahoo.com

ಅಕ್ಷರಗಳದು ಅದೊಂದು ವಿಶೇಷ ಶಕ್ತಿ. ನಿಮ್ಮ ಪ್ರೀತಿಯ ಅಥವಾ ನಿಮಗೆ ಅತಿಪರಿಚಿತ ಯಾವುದೋ ವಸ್ತುವಿನದಾಗಲೀ ವ್ಯಕ್ತಿಯದಾಗಲೀ ಸ್ಥಳದ್ದಾಗಲೀ
ಹೆಸರು ಅಕ್ಷರಗಳಲ್ಲಿ ಬರೆದಿದ್ದನ್ನು ಎಲ್ಲಿಯೋ ಓದುತ್ತೀರಿ ಎಂದುಕೊಳ್ಳಿ. ತತ್‌ಕ್ಷಣವೇ ಆ ವಸ್ತು/ವ್ಯಕ್ತಿ/ಸ್ಥಳ ನಿಮ್ಮ ಮನಸ್ಸನ್ನೆಲ್ಲ ಆವರಿಸಿಬಿಡುತ್ತದೆ. ಪ್ರತ್ಯಕ್ಷ ಕಾಣಬೇಕೆಂದಿಲ್ಲ, ಚಿತ್ರವೂ ಬೇಕಾಗಿಲ್ಲ, ಬರೀ ಅಕ್ಷರಗಳಲ್ಲಿ ಆ ಹೆಸರು ಇದ್ದರೂ ಸಾಕಾಗುತ್ತದೆ.

ಉದಾಹರಣೆಗೆ- ಮಸಾಲೆದೋಸೆ ಎಂದು ಈಗ ನಾನಿಲ್ಲಿ ಅಕ್ಷರಗಳಲ್ಲಿ ಉಲ್ಲೇಖಿಸಿದೆನು, ನೀವು ಓದಿದಿರಿ. ಮಸಾಲೆದೋಸೆ ನಿಮ್ಮೆದುರಿಗೆ ಇಲ್ಲದಿದ್ದರೂ,
ಮಸಾಲೆದೋಸೆಯ ಚಿತ್ರವನ್ನು ತೋರಿಸದಿದ್ದರೂ ನಿಮ್ಮ ಬಾಯಿಯಲ್ಲಿ ನೀರೂರುವಷ್ಟರ ಮಟ್ಟಿಗೆ ಮಸಾಲೆದೋಸೆ ನಿಮ್ಮಮನಸ್ಸನ್ನೊಮ್ಮೆ ಆಕ್ರಮಿಸ ಲಿಲ್ಲವೇ? ಇದೇ ಮಾತನ್ನು ಮಾವಿನಹಣ್ಣಿನ ಸೀಕರಣೆ ಬಗ್ಗೆನೂ ಹೇಳಬಹುದು, ಮಂಡಕ್ಕಿ-ಮಿರ್ಚಿಬಜ್ಜಿ ಬಗ್ಗೆನೂ ಹೇಳಬಹುದು, ಮೈಸೂರು ಪಾಕ್ ಬಗ್ಗೆನೂ ಹೇಳಬಹುದು, ಮಾವಳ್ಳಿ ಟಿಫನ್ ರೂಮ್ ಬಗ್ಗೆಯೂ ಹೇಳಬಹುದು!

ಇಲ್ಲ, ತಿನ್ನುವುದಕ್ಕೆ ಸಂಬಂಧಿಸಿದ್ದೇ ಆಗಬೇಕಿಲ್ಲ, ತುಂಬ ಚಂದ ಕಾಣುತ್ತದೆಂದೋ ಆಹ್ಲಾದಕರ ಪರಿಮಳ ಬೀರುತ್ತದೆಂದೋ ನಾವು ಮೆಚ್ಚುವ
ಹೂವಿನ ಹೆಸರಿಗೂ ಇದು ಅನ್ವಯಿಸುತ್ತದೆ. ಬೇಕಿದ್ದರೆ ಇಂದು ನಾನಿದನ್ನು ಕೇದಗೆ ಹೂವಿನ ನಿದರ್ಶನದಿಂದ ಸಾಧಿಸಿ ತೋರಿಸುತ್ತೇನೆ. ಕೇದಗೆ ಅಥವಾ ಕೇದಿಗೆ ಹೂವು ಕನ್ನಡಿಗರೆಲ್ಲರಿಗೂ ಚಿರಪರಿಚಿತ ಎಂದುಕೊಳ್ಳಲಿಕ್ಕಡ್ಡಿಯೇನಿಲ್ಲ. ಆದ್ದರಿಂದಲೇ ಕುವೆಂಪು ಹೇಳಿದ್ದಾರೆ ‘ಕಾಜಾಣಕೆ ಗಿಳಿ ಕೋಗಿಲೆ ಯಿಂಪಿಗೆ, ಮಲ್ಲಿಗೆ ಸಂಪಿಗೆ ಕೇದಗೆ ಸೊಂಪಿಗೆ, ಮಾವಿನ ಹೊಂಗೆಯ ತಳಿರಿನ ತಂಪಿಗೆ, ರಸರೋಮಾಂಚನಗೊಳುವಾತನ ಮನ ಎಲ್ಲಿದ್ದರೆ ಏನ್? ಎಂತಿದ್ದರೆ ಏನ್? ಎಂದೆಂದಿಗು ತಾನ್- ಕನ್ನಡವೇ ಸತ್ಯ!’ ಎಂದು.

ಕರ್ನಾಟಕದ ಕರಾವಳಿ ಪ್ರದೇಶದವರಿಗಂತೂ ಕೇದಗೆ ಮತ್ತಷ್ಟು ಆಪ್ಯಾಯಮಾನ. ಅಲ್ಲಿನ ನಾಗಾರಾಧನೆಯಲ್ಲಿ ಕೇದಗೆ ಹೂ ಬೇಕೇಬೇಕು; ಯಕ್ಷಗಾನ ಕಲೆಯ ವೇಷಭೂಷಣಗಳಲ್ಲಿ ಕಿರೀಟದ ಒಂದು ಪ್ರಕಾರಕ್ಕೆ ಕೇದಗೆ ಮುಂದಲೆ ಎಂದೇ ಹೆಸರು. ಹಳ್ಳಿಯ ಹೆಂಗಸರು ಕೇದಗೆಯ ಎಸಳನ್ನು ತ್ರಿಕೋನಾ ಕಾರ ಮಡಚಿ ತೆಂಗಿನಕಡ್ಡಿ ಪೋಣಿಸಿ ಹೂವಿನಂತೆ ಮಾಡಿಕೊಂಡು ತಲೆಗೆ ಮುಡಿದುಕೊಂಡರೆ ಮಲ್ಲಿಗೆ ಸಂಪಿಗೆಗಳೆಲ್ಲ ನಾಚಿ ದೂರ ಸರಿಯಬೇಕು.

ಗಾಳಿ ಬೀಸುವ ದಿಕ್ಕಿನಲ್ಲಿ ನೂರಾರು ಮೀಟರ್ ದೂರಕ್ಕೂ ಪರಿಮಳ ಸೂಸಬಲ್ಲ ಕೇದಗೆ ಸೌಗಂಧಿಕಾ ಪುಷ್ಪವಿದ್ದಂತೆ. ಅಷ್ಟಾಗಿ ಸಸ್ಯಶಾಸಜ್ಞರೇನಾದರೂ ಚರ್ಚೆಗೆ ಬಂದರೆ ಕೇದಗೆ ಹೂವೆಂದು ನೀವು ಮುಡಿದುಕೊಳ್ಳುವುದು ನಿಜವಾಗಿ ಹೂವಲ್ಲ ಸಂರಕ್ಷಕ ಎಲೆಗಳು ಎಂಬ ಥಿಯರಿ ಮಂಡಿಸಿಯಾರು. ಅದು ನಿಜವೂ ಇರಬಹುದು. ಅಲ್ಲದೇ ಒಟ್ಟಾರೆಯಾಗಿ ಕೇದಗೆಯು ಪರಿಮಳ ದ್ರವ್ಯ ತಯಾರಿಯಲ್ಲಿ, ಔಷಧಿಯ ಸಸ್ಯವಾಗಿ, ಆಹಾರ ಸಾಮಗ್ರಿಯಾಗಿ, ಗರಿಗಳು
ಮತ್ತು ಎಲೆಗಳ ನಾರು ಕೂಡ ಗೃಹೋಪಯೋಗಿ ವಸ್ತುಗಳ ತಯಾರಿಯಲ್ಲಿ ಉಪಯುಕ್ತವಾದ್ದರಿಂದ ಒಂಥರದ ಕಲ್ಪವೃಕ್ಷ ಎನಿಸುವುದೂ ಹೌದು.

ಆದರೆ ಇಲ್ಲಿ ನಾವು ಕೇದಗೆಯನ್ನು ಚಿತ್ತಾಕರ್ಷಕ ಹೂವೆಂದೇ ಪರಿಗಣಿಸಿ ಮುಂದುವರಿಯೋಣ. ಅಕ್ಷರಪ್ರಪಂಚದಲ್ಲಿ ಕೇದಗೆ ಹೂವಿನ ಉಲ್ಲೇಖ ನಮ್ಮನ್ನೆಷ್ಟು ಉದ್ದೀಪನಗೊಳಿಸಬಲ್ಲದೆಂದು ನೋಡೋಣ. ಡಿ.ವಿ.ಗುಂಡಪ್ಪನವರು ತಮ್ಮದೊಂದು ಕವನ ಸಂಕಲನಕ್ಕೆ ‘ಕೇತಕೀವನ’ ಎಂದು ಹೆಸರಿಟ್ಟಿದ್ದಾರೆ. ಕೇತಕೀ ಅಂದರೆ ಸಂಸ್ಕೃತದಲ್ಲಿ ಕೇದಗೆಯ ಹೆಸರು. ಕೇತಕೀ ತಾಳೀ ಖರ್ಜೂರೀ ಚತೃಣದ್ರುಮಾಃ ಎಂದು ಅಮರಕೋಶದ ವಾಕ್ಯ. ಕೇತಕೀವನ ಪುಸ್ತಕದ ಮುನ್ನುಡಿಯನ್ನು ಡಿವಿಜಿ ಹೀಗೆ ಆರಂಭಿಸಿದ್ದಾರೆ: ‘ನನ್ನ ಹುಟ್ಟೂರು ಮುಳಬಾಗಿಲು.

ಅಲ್ಲಿಯ ಶ್ರೀ ಮದಾಂಜನೇಯಸ್ವಾಮಿ ಸನ್ನಿಧಿ ಪ್ರಸಿದ್ಧವಾದದ್ದು. ವರ್ಷದ ೩೬೦ ದಿನವೂ ಆ ಸ್ವಾಮಿಗೆ ಕೇತಕೀ ಪುಷ್ಪ (ತಾಳೆಯ) ಪೂಜೆ ನಡೆಯುತ್ತಿತ್ತು. ಅದರ ನಿರ್ಮಾಲ್ಯದ ತಾಳೆ ರೇಕನ್ನು ಪ್ರಸಾದವೆಂದು ರೋಗಾದಿ ಪೀಡಿತರ ತಲೆದಿಂಬಿನ ಕೆಳಗಿಡುವುದು ವಾಡಿಕೆ. ಅದು ರಕ್ಷೆಯೆಂದು ನಂಬಿಕೆ. ಇಂಥದ್ದು ಕೇತಕೀ (ಕೇದಗೆ = ತಾಳೆ). ನನಗೆ ಓದಲಿಕ್ಕೂ ಯೋಚಿಸಲಿಕ್ಕೂ ಕೊಂಚ-ಕೊಂಚವಾಗಿಯಾದರೂ ಬಿಡುವು ದೊರೆಯುತ್ತಿದ್ದ ಕಾಲವೊಂದಿತ್ತು.

ಆ ಕಾಲದಲ್ಲಿ ಆಗಾಗ ಮನಸ್ಸಿಗೆ ಭಾವನೆಗಳು ಬರುತ್ತಿದ್ದದ್ದೂ ಉಂಟು. ಅವು ಬಂದಾಗ ಅವು ಹಾರಿ ಹೋಗುವುದಕ್ಕೆ ಮುನ್ನ ಅವುಗಳನ್ನು ಆಗ ತೋಚಿದ
ಮಾತುಗಳಲ್ಲಿ, ಆಗ ಕೈಗೆ ಸಿಕ್ಕಿದ ಚೀಟಿಗಳಲ್ಲಿ, ಗುರುತು ಹಾಕುತ್ತಿದ್ದದ್ದುಂಟು. ಅಂಥ ಚೀಟಿಗಳು ಈ ಪುಸ್ತಕವಾಗಿವೆ.’ ಸಂಕಲನದ ಹೆಸರಿಗೆ ಕಾರಣವಾದ ‘ಕೇತಕೀ-ಕೇದಗೆ’ ಕವನ ಪುಸ್ತಕದ ಕೊನೆಯಲ್ಲಿದೆ. ‘ಮನಕೆ ಮತ್ತೀ ಗಂಧ| ತನುವು ಚೆಂಬೊನ್ನಂದ| ವನಸುಮ ಮಧುಸ್ಯಂದ| ಏನೆನ್ನ ಭಾಗ್ಯ! ಎಷ್ಟೆಲ್ಲಿ
ಭೋಗ್ಯ! ಔತಣವು ತನಗೆಂದು| ಆತುರದಿ ಮರಿದುಂಬಿ| ಕೀರ್ತಿ ಬಣ್ಣವ ನಂಬಿ| ಕೇತಕಿಗೆ ತುತ್ತು| ಕ್ಷುತ್ತಿಂಗೆ ಮಿತ್ತು| ಧೂಳ್ ಕಣ್ಣ ಕವಿದು| ಮುಳ್ ರೆಕ್ಕೆ ಹರಿದು| ಲದ್ದಿ ತುಟಿ ಬಿಗಿದು| ಮಧುಪಂಗೆ ಮಸಣ| ವಿಽಗದುವೆ ಹಸನ| ಜೀವ ವಿಭ್ರಾಂತಿ| ಸಾಕೆ ವಿಶ್ರಾಂತಿ.’

ಇದನ್ನು ಡಿವಿಜಿ ಬರೆದಿದ್ದು ಸಂಸ್ಕೃತ ಅನ್ಯೋಕ್ತಿ ಸುಭಾಷಿತವೊಂದರ ಕನ್ನಡ ಭಾವಾನುವಾದವಾಗಿ. ಮೂಲ ಸಂಸ್ಕೃತ ಪದ್ಯವೂ ತುಂಬ ಪ್ರಸಿದ್ಧವೇ. ಕೇದಗೆಯ ಚಿತ್ರಣವನ್ನು ಕಣ್ಮುಂದೆ ತರಬಲ್ಲದ್ದೇ. ‘ಗಂಧಾಢ್ಯಾಸೌ ಭುವನವಿದಿತಾ ಕೇತಕೀ ಸ್ವರ್ಣಪರ್ಣಾ| ಪದ್ಮಭ್ರಾಂತ್ಯಾ ಕ್ಷುಧಿತಮಧುಪಃ  ಷ್ಪಮಧ್ಯೇ
ಪಪಾತ| ಅಂಧಿಭೂತಃ ಕುಸುಮರಜಸಾ ಕಂಟಕೈಶ್ಛಿನ್ನ ಪಕ್ಷಃ| ಸ್ಥಾತುಂ ಗಂತುಂ ದ್ವಯಮಪಿ ಸಖೇ ನೈವಶಕ್ತೋ ದ್ವಿರೇ-ಃ||’ ಕೇದಗೆ ಹೂವು ವಿಶ್ವವಿಖ್ಯಾತ ವಾದದ್ದು, ಬಂಗಾರದ ಬಣ್ಣದ್ದು ಮತ್ತು ಸುಗಂಧಭರಿತವಾದದ್ದು.

ಕಮಲದ ಹೂವೆಂದು ಭಾವಿಸಿದ ಹಸಿದ ದುಂಬಿಯು ನೇರವಾಗಿ ಅದರೊಳಕ್ಕೆ ಹಾರಿತು. ಕೇದಗೆಯ ಪರಾಗರೇಣುಗಳಿಂದ ದುಂಬಿಯ ಕಣ್ಣುಗಳು ಕುರುಡಾದುವು. ಗರಗಸದಂಥ ಎಸಳುಗಳು ರೆಕ್ಕೆಗಳನ್ನು ಕತ್ತರಿಸಿದವು. ದುಂಬಿಗೆ ಪಜೀತಿ- ಇಲ್ಲಿರಲಾರೆ, ಇಲ್ಲಿಂದ ಹೋಗಲಾರೆ ಎಂಬ ಉಭಯಸಂಕಟ. ಜೀವನದಲ್ಲಿ ಎಂಥೆಂಥದೋ ಆಕರ್ಷಣೆಗೊಳಗಾಗಿ ನಾವೂ ಇಂಥದೇ ಪಜೀತಿಗಳನ್ನು ತಂದುಕೊಳ್ಳುತ್ತೇವೆ- ಎಂದು ಈ ಅನ್ಯೋಕ್ತಿ ಸುಭಾಷಿತದ
ಗಾಢವಾದ ಅರ್ಥ.

ಡಿವಿಜಿಯವರ ಮಗ ಬಿ.ಜಿ.ಎಲ್.ಸ್ವಾಮಿ ‘ಹಸಿರು ಹೊನ್ನು’ ಕೃತಿಯಲ್ಲಿ ಕೇದಗೆಯ ಬಗ್ಗೆಯೂ ವಿಸ್ತೃತವಾಗಿ ಬರೆದಿದ್ದಾರೆ: ‘ತಮಿಳು ಕವಿಗಳಿಗೆ ಪರಿಚಿತ ವಾದ ಗಿಡ ಇದು. ಕಾಂಡದ ಹೊರಮೈ ಹತ್ತು ಕಾಲಿನ ಸೀಗಡಿ ಪ್ರಾಣಿಯ ಬೆನ್ನಿನಂತೆ ಒರಟೊರಟಾಗಿದೆಯಂತೆ; ದಳದ ಮುಳ್ಳುಗಳು ಷಾರ್ಕ್ ಮೀನಿನ ತೊಂಡಿಲು ಗರಗಸದಂತೆ; ಗಂಡು ಹೂ ಮೊಗ್ಗು ಮದಕರಿಯ ದಂತದಂತೆ; ಬಿರಿಹೂ ಕುದುರೆಯ ತಲೆಯ ಮೇಲೆ ಎದ್ದಿರುವ ಕೇಶಗುಚ್ಛದಂತೆ. ಇನ್ನೊಬ್ಬ ಕವಿಗೆ ಕೇದಗೆ ಹೂ ಹಂಸಪಕ್ಷಿಯಂತೆ ಕಂಡಿತು. ಕೇದಗೆಯ ಪೊದರು ಹಂಸಗಳನ್ನು ತಳೆಯಿತು ಎಂದೇ ಆಲಂಕಾರಿಕವಾಗಿ ನುಡಿದಿದ್ದಾನೆ.

ಪೊದರನ್ನು ಮೊತ್ತವಾಗಿ ನೋಡಿದಾಗ ಅದು ರಾಕ್ಷಸನ ತಲೆಯ ಮೇಲೆ ಬೆಳೆದಿರುವ ಕೇಶರಾಶಿಯಂತಿದ್ದಿತು. ಮುಳ್ಳೆಲೆಗಳು ಸುವಾಸನೆಯನ್ನು ಸೂಸುವ ಸುಮಗಳಿಗೆ ಕಾವಲಾಗಿ ನಿಂತಿರುವಂತೆ ಭಾಸವಾಯಿತು. ಇನ್ನೊಬ್ಬ ಕವಿಗೆ ಹೂವಿಂದ ಹೊಮ್ಮಿದ ವಾಸನೆ ಹಬ್ಬಹಾಡಿಗೆಗಳ ನೆನಪು ತಂದಿತು. ಈ ತಮಿಳು ಕವಿಗಳು ಕೇದಗೆಯ ಪಾದಾದಿ ಕೇಶಾಂತ ವರ್ಣನೆಯನ್ನು ಕೊಟ್ಟಿರುವರಾದರೂ ಹೂವಿನ ಕಂಪಿಗೆ ಮನಸೋತಂತೆ ಕಾಣದು. ಹೂವಿನ ವಾಸನೆ ಯನ್ನೇನೋ ಕುರಿತಿದ್ದಾರೆ, ಆದರೆ ಅದರ ವರ್ಣನೆಗೆ ಕೈಹಾಕಲಿಲ್ಲ. ಕನ್ನಡ ಕವಿಗಳ ವಿಚಾರಕ್ಕೆ ಬಂದರೆ- ಮುದ್ದಣನು ಅದ್ಭುತರಾಮಾಯಣದಲ್ಲಿ ಶ್ರೀಮತಿಯನ್ನು ವರ್ಣಿಸುವಾಗ ಅವಳ ನಖಗಳನ್ನು ಗರಿಪೂವಂತೆ ಮೊನೆಗೊಂಡುಗುರು ಎಂದಿದ್ದಾನೆ- ಕನ್ನಡನಾಡಿನ ಕಡಲುತೀರ ಪ್ರದೇಶಗಳಲ್ಲಿ ಕೇದಗೆಗೆ ಗರಿ ಹೂ ಎಂಬ ಹೆಸರೂ ಇರುವುದರಿಂದ. ಕೇತಕಿಯ ಬನಗಳಲಿ ಸಂಚರಿಸದಿರು ಚೆಲುವೆ, ಸರ್ಪಮಂದಿರವಂತೆ ಕಂಪಿನೊಡಲು ಎಂದು ಎಚ್ಚರಿಕೆ ಕೊಡುವುದು ನಮ್ಮ ಕವಿಗಳ ವಾಡಿಕೆ.

ಕವಿಪರಂಪರೆಯಲ್ಲಿ ಇದೊಂದು ಕವಿಸಮಯವಾಗಿ ನೆಲೆಸಿದೆ. ಕೇದಗೆಯ ಪೊದರಿನಲ್ಲಿ ಮಾತ್ರ ಹಾವು ವಾಸ ಮಾಡುತ್ತದೆಯೆಂಬುದಕ್ಕೆ ಆಧಾರ ವಾದರೂ ಏನಿದೆ? ಹಾಗೆ ನೋಡಿದರೆ ಕೇದಗೆಯ ಪೊದರೊಂದೇ ಅಲ್ಲ, ಇನ್ನೂ ಎಷ್ಟೋ ಪೊದರುಗಳೂ ಹಾವಿನ ವಾಸಸ್ಥಾನವೇ! ಕೇದಗೆಗೂ ಹಾವಿಗೂ ಯಾವ ಕಾರಣದಿಂದ ನಂಟು ಬಿತ್ತೋ? ಬಹುಶಃ ಕೇದಗೆಯ ಬಿಡಿ ಎಲೆ ನೀಟಾಗಿ ಹಸುರು ಹಾವಿನಂತೆ ಕಾಣುವುದರಿಂದಲೆ? ಅಥವಾ ಕಾಂಡ ರೆಂಬೆಗಳು ಡೊಂಕುಡೊಂಕಾಗಿ ಬಾಗಿ ಹೆಬ್ಬಾವಿನಂತೆ ಕಾಣುವುದರಿಂದಲೆ? ಅಥವಾ ಕೇದಗೆಯ ಕಂಪಿಗೆ ಹಾವು ಆಕರ್ಷಿತವಾಗುತ್ತದೆಂಬ ಭ್ರಮೆಯಿಂದಲೆ?’
ಆದರೆ ಕೇದಗೆಗೂ ಹಾವಿಗೂ ನಂಟು ಚಾಣಕ್ಯನ ಅರ್ಥಶಾಸ್ತ್ರ ಕಾಲದಿಂದಲೂ ಇದೆ! ಚಾಣಕ್ಯನೀತಿಯಲ್ಲಿ ಕೊನೆಯ ಅಧ್ಯಾಯದ ಕೊನೆಗೆ ಹೀಗೊಂದು ಕೇದಗೆ ಶ್ಲೋಕ ಬರುತ್ತದೆ: ‘ವ್ಯಾಲಾಶ್ರಯಾಪಿ ವಿಕಲಾಪಿ ಸಕಂಟಕಾಪಿ| ವಕ್ರಾಪಿ ಪಂಕಿಲಭವಾಪಿ ದುರಾಸದಾಪಿ| ಗಂಧೇನ ಬಂಧುರಸಿ ಕೇತಕಿ ಸರ್ವ ಜಂತಾ| ರೇಕೋ ಗುಣಃ ಖಲು ನಿಹಂತಿ ಸಮಸ್ತದೋಷಾನ್||’ ಇದರ ಭಾವಾರ್ಥ ಹೀಗಿದೆ: ಎಲೈ ಕೇದಗೆಯೇ, ನೀನು ಸರ್ಪಗಳಿಗೆ ಆಶ್ರಯವನ್ನು ಕೊಟ್ಟಿದ್ದೀಯೆ.

ನೀನು ಫಲವತಿಯಲ್ಲ (ಹಣ್ಣುಗಳನ್ನು ಬಿಡುವುದಿಲ್ಲ), ಮೈತುಂಬ ಮುಳ್ಳುಗಳನ್ನು ಹೊಂದಿದ್ದೀಯೆ. ನಿನ್ನ ರೆಂಬೆಕೊಂಬೆಗಳನ್ನು ನೋಡಿದರೆ ತುಂಬ ವಕ್ರಳಾಗಿದ್ದೀಯೆ. ನೀನು ಕೆಸರಲ್ಲಿ ಹುಟ್ಟಿ ಅಲ್ಲೇ ಹೊರಳಾಡುತ್ತೀಯೆ. ನಿನ್ನನ್ನು ಕಷ್ಟಪಟ್ಟು ಹೊಂದಬಹುದಾಗಿದೆ. ಇಷ್ಟೆಲ್ಲ ಅವಗುಣಗಳು ನಿನ್ನಲ್ಲಿ ದ್ದರೂ ನಿನ್ನಲ್ಲಿರುವ ಪರಿಮಳದಿಂದ ನೀನು ಎಲ್ಲರಿಗೂ ಬೇಕಾದವಳಾಗಿದ್ದೀಯೆ. ಹೀಗೆಯೇ ಮನುಷ್ಯನಲ್ಲಿ ಹಲವು ಅವಗುಣಗಳಿದ್ದರೂ ಕೂಡ ಒಂದೇ ಒಂದು ಗುಣವಿದ್ದರೂ ಅವನು ಜನಪ್ರಿಯನಾಗಬಹುದು!

ಹರಿಹರ ಕವಿಯು ಬರೆದ ಬಸವರಾಜ ದೇವರ ರಗಳೆ ಎಂಬ ಕೃತಿ ಬಸವಣ್ಣನವರ ಜೀವನಚರಿತ್ರೆ ರೀತಿಯದು. ಅದರಲ್ಲಿ ಬಸವಣ್ಣನವರ ಬದುಕಲ್ಲಿ ನಡೆದ ಪವಾಡಗಳ ವರ್ಣನೆ ಬರುತ್ತದೆ. ಅಂಥದೊಂದು ಪವಾಡವೇ ಕೇದಗೆಯ ಕಥೆ. ಹರಿಹರ ಕವಿಯು ಹಳಗನ್ನಡದಲ್ಲಿ ಬರೆದಿದ್ದಕ್ಕೆ ತಳುಕಿನ
ವೆಂಕಣ್ಣಯ್ಯನವರು ಹೊಸಗನ್ನಡದಲ್ಲಿ ಬರೆದ ಭಾಷ್ಯದಿಂದ ಆ ಕಥೆಯನ್ನಷ್ಟೇ ಉದ್ಧರಿಸುವುದಾದರೆ- ‘ಬಿಜ್ಜಳನ ರಾಜಧಾನಿಗೆ ಆಗಂತುಕನಾಗಿ ಬಂದಿದ್ದ ಬಸವಣ್ಣನು ಕಾಲಕ್ರಮದಲ್ಲಿ ಅತ್ಯುನ್ನತ ಪದವಿಗೇರಿದನು. ಇತ್ತಕಡೆ ಆತನ ಭಕ್ತಿಯೂ ಒಳಗೊಳಗೇ ಬೆಳೆದು ಮಹಿಮಾಸಂಪನ್ನವಾಯಿತು.

ಬಿಜ್ಜಳನ ಭಂಡಾರಿಯಾದ ಬಸವಣ್ಣನು ಭಕ್ತಿಭಂಡಾರಿಯೂ ಆದನು. ಆಕಸ್ಮಿಕವಾಗಿ ನಡೆದ ಒಂದು ಘಟನೆಯು ಈತನ ಭಕ್ತಿಯ ಮಹಿಮೆಯನ್ನು ಪ್ರಕಾಶಕ್ಕೆ ತಂದಿತು. ಒಂದು ದಿನ ಬಿಜ್ಜಳನು ಸಭೆಯಲ್ಲಿದ್ದಾಗ ಒಬ್ಬ ಮಾಲೆಗಾರನು ಒಂದು ಕೇದಗೆಯ ಹೂವನ್ನು ತಂದು ಆತನಿಗೆ ಅರ್ಪಿಸಿದನು. ಅರಸನು ಅದನ್ನು ಬಿಚ್ಚಿ ಅದರೊಳಗಣ ಒಂದು ಎಸಳನ್ನು ತನ್ನ ಪಕ್ಕದ ಗದ್ದುಗೆಯಲ್ಲಿ ಕುಳಿತಿದ್ದ ಬಸವಣ್ಣನಿಗೆ ಕೊಟ್ಟನು. ತನಗೆ ದೊರೆತುದನ್ನೆಲ್ಲ ಶಿವಾರ್ಪಣ ಮಾಡುತ್ತಿದ್ದ ಬಸವಣ್ಣನು ತಾನು ಧರಿಸಿದ್ದ ಲಿಂಗಕ್ಕೆ ಆ ಎಸಳನ್ನು ಅರ್ಪಿಸಿದನು.

ಬಸವಣ್ಣನ ಉನ್ನತಸ್ಥಿತಿಯನ್ನು ನೋಡಿ ಅಸೂಯೆಗೊಂಡಿದ್ದವರಲ್ಲಿ ಒಬ್ಬನಾದ ನಾರಣಭಟ್ಟನು ಅದನ್ನು ನೋಡಿ- ಶಿವಲಿಂಗಕ್ಕೆ ಕೇದಗೆಯ ಹೂವನ್ನು ಏರಿಸಬಾರದೆಂದು ಶಿವಾಗಮಗಳಲ್ಲಿ ನಿಯಮವಿದೆ. ಅದನ್ನು ಮೀರಿ ಬಸವಣ್ಣನು ಶಿವಾರ್ಪಿತ ಮಾಡಿದ್ದು ತಪ್ಪು ಎಂದು ಆಕ್ಷೇಪವೆತ್ತಿದನು. ಬಸವಣ್ಣ ನಸುನಗುತ್ತ ‘ಎಲೈ ಮರುಳುವಿಪ್ರ, ಎಲೈ ದ್ವಿಜಾಧಮಾ, ಎಲೈ ಕರ್ಮಜಡನೇ, ಕೇಳು. ದೇವಂ ಭಕ್ತರ್ ಕೊಟ್ಟಡೆ ಕೈಕೊಳ್ವನು.

ಭೂತೇಶನು ಭಕ್ತರ ಪರಾಽನ. ಭಕ್ತರು ಭಕ್ತಿಯಿಂದ ಕೊಟ್ಟಿದ್ದನ್ನು ಪ್ರೀತಿಯಿಂದಲೇ ಸ್ವೀಕರಿಸುತ್ತಾನೆ. ಇದು ದಿಟವಾದ ಮಾತು ಎಂದು ಉತ್ತರಿಸಿದನು. ಈ ಸಂಭಾಷಣೆಗಳನ್ನೆಲ್ಲ ಕೇಳುತ್ತಿದ್ದ ಬಿಜ್ಜಳನು, ಭಕ್ತರು ಕೊಟ್ಟಿದ್ದನ್ನು ಈಶ್ವರನು ಸ್ವೀಕರಿಸುವನೆಂಬುದಕ್ಕೆ ಸಾಕ್ಷಿಯೇನು? ಎಂದು ಕೇಳಿದನು. ಬಸವಣ್ಣನು ತನ್ನ ಅಕ್ಕಪಕ್ಕದ ಮಾಹೇಶ್ವರರ ಕಕ್ಷಪುಟಗಳಲ್ಲಿದ್ದ ಸೆಜ್ಜೆಗಳನ್ನು ತೆರೆಯಿಸಿ ತೋರಿಸಲು ಆ ಎಲ್ಲ ಲಿಂಗಗಳ ಉತ್ತಮಾಂಗಗಳಲ್ಲಿಯೂ ಅಲ್ಲದೆ ಮಂಗಳ ವಾಡದ ಮಹಾಲಿಂಗದ ಅಂಗಳಲ್ಲಿಯೂ ಬಸವಣ್ಣನು ಅರ್ಪಿಸಿದ ಕೇದಗೆಯ ಎಸಳನ್ನು ಹೋಲುವ ನುಣ್ಣೆಸಳುಗಳಿದ್ದುವು. ಬಿಜ್ಜಳನು ಬಸವಣ್ಣನ ಮಹಿಮೆಗೆ ಮೆಚ್ಚಿ, ಆತನ ಪಾದಕ್ಕೆರಗಿ ಅಂದಿನಿಂದ ಆತನು ತನ್ನ ಭಂಡಾರಿ ಎಂಬುದನ್ನು ಮರೆತು ಸಾಕ್ಷಾತ್ ಸಂಗಮೇಶ್ವರನೆಂದೇ ಭಾವಿಸತೊಡಗಿ ದನು.’

ಹರಿಹರನ ಸೋದರಳಿಯ ರಾಘವಾಂಕ ಕೇದಗೆಯನ್ನು ಹೇಗೆ ಕಂಡಿದ್ದಾನೆ? ರಾಘವಾಂಕನ ಅತಿಶ್ರೇಷ್ಠ ಕೃತಿರತ್ನವೆನಿಸಿದ ಹರಿಶ್ಚಂದ್ರ ಕಾವ್ಯದಲ್ಲಿ, ವನವರ್ಣನೆಯ ಪದ್ಯವೊಂದರಲ್ಲಿ ಕೇತಕೀವನದ ದೃಶ್ಯಾವಳಿ ಹೀಗೆ ಬರುತ್ತದೆ: ‘ವಿರಹಿಗಳ ಚಿತ್ತವಂ ಸೀಳ್ವ ಕಾಮನ ಕೈಯ| ಗರಗಸದ ಕಕ್ಕುಗಳೋ ಕಂತು ಹೊಡೆದಡೆ ಮುನೀ| ಶ್ವರಕಟಿನಮನಮಾಂತು ಧಾರೆಗಳು ಮುರಿದಲಗು ಮುಕ್ಕುಗಳ ಬಳಗವೋ| ಪರಿಮಳದ ಮುಳುವೇಲಿಯೋ ಎನಿಸಿ ಕಂಟಕೋ| ತ್ಕರಭರಿತ ಕೇತಕಿಗಳೊಪ್ಪಿದುವು ಹೊರಗೆ ಶಂ| ಕರವಿರೋಽಯನು ನಡುವಿರಿಸಲಮ್ಮದೆ ವನಂ ಪೊರೆಮಡಿಸಿತೆಂಬಂದದಿ|| ಇದರ ಅರ್ಥವನ್ನು ಶತಾವಧಾನಿ ರಾ.ಗಣೇಶರ ವ್ಯಾಖ್ಯಾನದಿಂದ ತಿಳಿದುಕೊಂಡರೆ ಇನ್ನೂ ಸೊಗಸು.

‘ವಿರಹಿಗಳ ಎದೆಯನ್ನು ಸೀಳುವುದಕ್ಕೆ ಇರತಕ್ಕಂಥ ಮನ್ಮಥನ ಕೈಯ ಗರಗಸವೋ ಎಂಬಂತೆ ಕೇದಗೆಯ ಹೂವು ಕಾಣುತ್ತಿದೆ. ತಪಸ್ಸು ಮಾಡುತ್ತಿದ್ದ ಈಶ್ವರನ ಕಠಿನ ಮನಸ್ಸನ್ನು ಸೀಳುವುದಕ್ಕೆ, ಕತ್ತರಿಸುವುದಕ್ಕೆ ಅಂತ ಮನ್ಮಥನು ಪ್ರಯತ್ನ ಮಾಡಿ ಆಗ ಮುರಿದ ಕತ್ತಿಗಳ ತುಂಡುಗಳೋ ಎಂಬಂತೆ ಕೇದಗೆಯ ಎಲೆಗಳು ಕಾಣುತ್ತಿವೆ. ಪರಿಮಳ ತನ್ನಿಂದ ಆಚೆ ಹೋಗಬಾರದೆಂದು ಮುಳ್ಳಿನ ಬೇಲಿ ಮಾಡಿಕೊಂಡಿದೆಯೇನೋ ಎಂಬಂತೆ ತೋರುತ್ತಿದೆ. ಮುಳ್ಳು ತುಂಬಿದ ಕೇದಗೆಗಳು ತೋಟದ ಹೊರಬದಿಯಲ್ಲಿವೆ. ಶಂಕರವಿರೋಧಿಯನ್ನು ನಾವು ಸೇರಿಸಿಕೊಳ್ಳುವುದಿಲ್ಲ ಅಂತ ವನವು ಕೇದಗೆಯನ್ನು ಬಹಿಷ್ಕರಿಸಿದಂತೆ, ಗಡೀಪಾರು ಮಾಡಿದಂತೆ ಇದೆ!’

ಏನಿದು ಕೇದಗೆಗೂ ಶಂಕರನಿಗೂ ಪರಸ್ಪರ ವಿರೋಧ? ಅದೊಂದು ಕುತೂಹಲಕಾರಿ ಕಥೆ. ತ್ರಿಮೂರ್ತಿಗಳ ದರ್ಪದ ಧಗೆಯಲ್ಲಿ ಕೇದಗೆ ಸಿಕ್ಕಿಬಿದ್ದ ಕಥೆ. ಸ್ಕಾಂದ, ಲಿಂಗ, ಕೂರ್ಮಾದಿ ಪುರಾಣಗಳಲ್ಲಿ ಆ ಕಥೆ ಬರುತ್ತದೆ. ತಮ್ಮಲ್ಲಿ ಯಾರು ಹೆಚ್ಚಿನವರು ಎಂದು ಬ್ರಹ್ಮನಿಗೂ ವಿಷ್ಣುವಿಗೂ ಚರ್ಚೆಯಾದಾಗ ಅವರಿಬ್ಬರ ಗರ್ವಭಂಗ ಮಾಡುತ್ತೇನೆಂದು ಶಿವನು ಮಹಾಲಿಂಗಾಕಾರನಾಗಿ, ಒಂದು ದೊಡ್ಡ ಅಗ್ನಿಸ್ತಂಭದಂತೆ ಕಾಣಿಸಿಕೊಂಡನು. ನನ್ನ ತುದಿ ಅಥವಾ ಬುಡವನ್ನು ಮೊದಲು ಕಂಡುಕೊಂಡವರೇ ಶ್ರೇಷ್ಠರು ಎಂದನು.

ಅವನ ಮೂಲಚೂಲಗಳನ್ನು ನೋಡುತ್ತೇವೆಂದು ವಿಷ್ಣು ಮತ್ತು ಬ್ರಹ್ಮ ಇಬ್ಬರೂ ಸಂಕಲ್ಪ ಮಾಡಿ, ವರಾಹ ರೂಪದಿಂದ ವಿಷ್ಣು, ಹಂಸ ರೂಪದಿಂದ ಬ್ರಹ್ಮ ಹೋದಾಗ ಆ ಸ್ತಂಭದ ಬೇರು-ತುದಿಗಳನ್ನು ಕಾಣುವುದು ಇಬ್ಬರಿಂದಲೂ ಆಗಲಿಲ್ಲ. ಆಗ ಮೇಲಿಂದ ಬೀಳುತ್ತಿದ್ದ ಒಂದು ಕೇದಗೆಯ ಹೂವನ್ನು ಹಂಸರೂಪಿಯಾಗಿದ್ದ ಬ್ರಹ್ಮನು ಹಿಡಿದು ಕೇದಗೆಗೆ ಪುಸಲಾವಣೆ ಮಾಡಿದನು. ನೀನು ನನ್ನ ಪರವಾಗಿ ಸಾಕ್ಷಿ ಹೇಳು, ಶಿವಲಿಂಗದ ಮೇಲ್ತುದಿಯಲ್ಲಿದ್ದ ನಿನ್ನನ್ನು ನಾನು ತೆಗೆದುಕೊಂಡು ಬಂದೆ ಅಂತ. ಬದಲಾಗಿ ನಿನಗೇನಾದರೂ ಅತಿಶಯವಾದದ್ದನ್ನು ಮಾಡಿಕೊಡುತ್ತೀನಿ. ಆಗಲಿ ಎಂದು ಒಪ್ಪಿಕೊಂಡಿತು ಕೇದಗೆ. ಆಗಲೇ ಅದಕ್ಕೆ ಬ್ರಹ್ಮನು ದಿವ್ಯವಾದ ಪರಿಮಳವನ್ನು ಕೊಟ್ಟಿದ್ದು.

ಎಷ್ಟೆಂದರೂ ಸೃಷ್ಟಿಕರ್ತ ಅಲ್ಲವೇ? ಆಮೇಲೆ ಬ್ರಹ್ಮ ಬಂದು ಶಿವನ ಬಳಿ ಹೇಳುತ್ತಾನೆ, ನಾನು ನಿನ್ನ ತಲೆಯ ಮೇಲಿದ್ದ ಈ ಕೇದಗೆ ಹೂವನ್ನು ತಂದಿ ದ್ದೀನಿ. ಬೇಕಾದರೆ ಅದೇ ಸಾಕ್ಷಿ ಹೇಳುತ್ತೆ ನೋಡು ಅಂತ. ಈನಡುವೆ ವಿಷ್ಣುವಿಗೆ ವರಾಹರೂಪದಲ್ಲಿ ಹೋಗಿ ಲಿಂಗದ ಬುಡ ಕಂಡುಕೊಳ್ಳುವುದು ಸಾಧ್ಯವಾಗಲಿಲ್ಲ, ಆತ ನಿರಾಶನಾಗಿ ಹಿಂದಿರುಗಿದನು. ಶಿವ ನಿಜವಾಗಿಯೂ ಅನಾದಿ-ಅನಂತ ಎಂದು ವಿಷ್ಣು ಒಪ್ಪಿಕೊಂಡನು.

ಬ್ರಹ್ಮನಾದರೋ ಚೇಷ್ಟೆ ಮಾಡಿ ಕೇದಗೆಯ ಮುಖಾಂತರ ಸುಳ್ಳು ಸಾಕ್ಷ್ಯವನ್ನು ಹೇಳಿಸಿದನು. ಆಗ ಶಿವನಿಗೆ ನಿಜಾಂಶ ಗೊತ್ತಾಗಿ ಬ್ರಹ್ಮನ ಐದನೆಯ ತಲೆಯನ್ನು ಕತ್ತರಿಸಿದನು; ಅದೇ ಬ್ರಹ್ಮಕಪಾಲವಾಗಿ ಶಿವನ ಕೈಸೇರಿತು. ಈ ಕೇದಗೆ ಹೂವು ಎಂದೂ ತನ್ನ ಪೂಜೆಗೆ ಅರ್ಹವಾಗಬಾರದು ಎಂದು ಅದಕ್ಕೆ ಶಾಪ ಕೊಟ್ಟನು. ಹೀಗಾಗಿ ಶಿವಪೂಜೆಗೆ ಕೇದಗೆ ಹೂವು ಬಳಸುವುದಿಲ್ಲ ಎಂದು ಸಂಪ್ರದಾಯ. ಆಮೇಲೆ ಶಿವನೇ ಮರುಗಿ ಕೇದಗೆಯ ಮೇಲೆ ದಯ ತೋರಿದನೋ, ಅಥವಾ ಶಿವಭಕ್ತರು ಕೇದಗೆಯ ಪರವಾಗಿ ವಕಾಲತ್ತು ನಡೆಸಿದರೋ- ಮಹಾಶಿವರಾತ್ರಿಯಂದು ಮಾತ್ರ ಪೂಜೆಯಲ್ಲಿ ಶಿವಲಿಂಗಕ್ಕೆ ಕೇದಗೆ ಏರಿಸಬಹುದು ಎಂದು ಕೂಡ ಕೆಲವೆಡೆ ಆಚರಣೆ ಇದೆ.

ಪುರಾಣಕಾಲದಿಂದ ಆಧುನಿಕ ಕಂಪ್ಯೂಟರ್ ಯುಗಕ್ಕೆ ಬಂದರೆ ಇಲ್ಲೂ ಅಕ್ಷರಪ್ರಪಂಚದಲ್ಲಿ ಕೇದಗೆ ಕಂಪು ಇದೆ, ಅದೇನು ಗೊತ್ತೇ? ಕಂಪ್ಯೂಟರ್‌ನಲ್ಲಿ, ಯುನಿಕೋಡ್ ರೀತಿಯಲ್ಲಿ ಮುದ್ದಾದ ಕನ್ನಡ ಅಕ್ಷರಗಳನ್ನು ಮೂಡಿಸಲಿಕ್ಕಿರುವ ಒಂದು ಫಾಂಟ್‌ನ ಹೆಸರು ಕೇದಗೆ ಎಂದೇ ಇರುವುದು!