Friday, 18th October 2024

ಉಚಿತ ಘೋಷಣೆಗಳು ಪ್ರಗತಿಗೆ ಮಾರಕ

ವರ್ತಮಾನ

maapala@gmail.com

ಪಕ್ಷಗಳು ಅಧಿಕಾರಕ್ಕಾಗಿ ಉಚಿತ ಘೋಷಣೆಗಳನ್ನು ನೀಡಿ ಜನರನ್ನು ಪರಾವಲಂಬಿಗಳನ್ನಾಗಿ ಮಾಡುತ್ತಿದೆ. ಆಮ್ ಆದ್ಮಿ ಪಕ್ಷ ಹಾಕಿಕೊಟ್ಟ ಮಾದರಿಯನ್ನು ಕರ್ನಾಟಕದಲ್ಲಿ ಕಾಂಗ್ರೆಸ್ ಅನುಸರಿಸುತ್ತಿದೆ. ಮತದಾರರು ಅದಕ್ಕೆ ಬಲಿಯಾದರೆ ಆ ಪರಿಸ್ಥಿತಿ ಕರ್ನಾಟಕಕ್ಕೂ ಬಂದರೆ ಅಚ್ಚರಿ ಇಲ್ಲ.

ಮತ್ತೆ ಉಚಿತ ಕೊಡುಗೆಗಳ ರಾಜಕಾರಣ ಶುರುವಾಗಿದೆ. ಆ ಮೂಲಕ ಜನರಿಗೆ ಆಮಿಷವೊಡ್ಡಿ ಮತ ಸೆಳೆಯುವ ತಂತ್ರಕ್ಕೆ ಕಾಂಗ್ರೆಸ್ ಮೊರೆ ಹೋಗಿದೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ನೀಡುವುದಾಗಿ ಕಾಂಗ್ರೆಸ್ ಘೋಷಿಸಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ವಿಧಾನ ಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಜಂಟಿ ಬಸ್ ಯಾತ್ರೆ ‘ಪ್ರಜಾಧ್ವನಿ ಯಾತ್ರೆ’ಯಲ್ಲಿ ‘ಕಾಂಗ್ರೆಸ್ ಗ್ಯಾರಂಟಿ ನಂ. ೧. ಗೃಹ ಜ್ಯೋತಿ ಮೂಲಕ ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್’ ಎಂದು ಘೋಷಣೆ ಮಾಡಿದೆ.

ಇದು ಮೊದಲನೇ ಘೋಷಣೆಯಾದರೆ ಕಾಂಗ್ರೆಸ್‌ನ ಬತ್ತಳಿಕೆಯಲ್ಲಿ ಇನ್ನಷ್ಟು ಉಚಿತ ಕೊಡುಗೆಗಳಿವೆ ಎಂಬುದು ಸ್ಪಷ್ಟ. ಈ ಘೋಷಣೆ ಇದೀಗ ಮತ್ತೆ ಅಽಕಾರಕ್ಕೆ ಬರಲು ಶತ ಪ್ರಯತ್ನ ನಡೆಸುತ್ತಿರುವ ಆಡಳಿತಾರೂಢ ಬಿಜೆಪಿಗೆ ಆತಂಕ ತಂದೊಡ್ಡಿದರೆ, ಮತ್ತೊಂದೆಡೆ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಉಚಿತ ವಿದ್ಯುತ್ ಘೋಷಣೆಯೊಂದಿಗೆ ಇನ್ನು ಕೆಲವೇ ತಿಂಗಳಲ್ಲಿ ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್‌ನ ‘ಮತ ಗಳಿಕೆಯ’ ಬೇಟೆ ಭರ್ಜರಿಯಾಗಿಯೇ ಆರಂಭವಾಗಿದೆ. ಆದರೆ, ರಾಜಕೀಯ ಪಕ್ಷಗಳ ಅಽಕಾರ ರಾಜಕಾರಣಕ್ಕಾಗಿ ಇಂತಹ ‘ಉಚಿತ’ ಘೋಷಣೆಗಳು ಆರ್ಥಿಕ ಪರಿಸ್ಥಿತಿ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ಯಾರೂ ಯೋಚಿಸುವುದಿಲ್ಲ. ಇದರ ಒಂದು ಸ್ಯಾಂಪಲ್ ಈಗಾಗಲೇ ಪಂಜಾಬ್ ರಾಜ್ಯದಲ್ಲಿ ಸಿಕ್ಕಿದೆ.

ಅಧಿಕಾರಕ್ಕೆ ಬಂದರೆ ರಾಜ್ಯದ ಜನರಿಗೆ 300 ಯೂನಿಟ್ ಉಚಿತ ವಿದ್ಯುತ್ ನೀಡುವುದಾಗಿ ಪ್ರಣಾಳಿಕೆಯಲ್ಲಿ ಪ್ರಕಟಿಸಿದ್ದ ಆಮ್ ಆದ್ಮಿ ಪಾರ್ಟಿ ಅಧಿಕಾರಕ್ಕೆ ಬಂದ ತಕ್ಷಣವೇ ಆ ಘೋಷಣೆ ಜಾರಿಗೊಳಿಸಿತು. ಇದರ ಪರಿಣಾಮ ಸರಕಾರಿ ನೌಕರರಿಗೆ ಕಳೆದ ಆಗಸ್ಟ್ ತಿಂಗಳ ವೇತನ ನೀಡಲು ಪರದಾಡಬೇಕಾಯಿತು. ಅದೇ ರೀತಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಜನರಿಗೆ ೨೦೦ ಯೂನಿಟ್ ಉಚಿತ ವಿದ್ಯುತ್ ಸೌಲಭ್ಯವಿದೆ.

ಅಲ್ಲಿ ವೇತನ ನೀಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣ ಆಗದೇ ಇದ್ದರೂ, ಸಾಕಷ್ಟು ಪ್ರಮಾಣದಲ್ಲಿ ಆದಾಯ ಬರುತ್ತಿದ್ದರೂ ಉಚಿತ ಸೌಲಭ್ಯಗಳಿಗೆ ಹೆಚ್ಚು ಹಣ ವ್ಯಯ ಮಾಡುತ್ತಿರುವುದರಿಂದ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಪಂಜಾಬ್‌ಗಿಂತ ದೊಡ್ಡ ಮತ್ತು ಹೆಚ್ಚು ಜನಸಂಖ್ಯೆ ಇರುವ ಕರ್ನಾಟಕದಲ್ಲೂ ಅದೇ ಪರಿಸ್ಥಿತಿ ಉದ್ಭವವಾದರೆ…? ಈ ಕಾರಣಕ್ಕಾಗಿಯೇ ರಾಜಕೀಯ ಪಕ್ಷಗಳ ‘ಉಚಿತ ಘೋಷಣೆ’ಗಳು ಚರ್ಚೆಯ ವಿಷಯವಾಗಿದೆ.

೨೦೨೨ರ ಜುಲೈನಲ್ಲಿ ಪ್ರಧಾನಿ ಕಚೇರಿ ಒಂದು ಟ್ವೀಟ್ ಮಾಡಿತ್ತು. ಅದರಲ್ಲಿ, ‘ನಮ್ಮ ನಾಡಿನಲ್ಲಿ ಉಚಿತವಾಗಿ ಬೀದಿ ಬದಿ
ಹಂಚುವ ಮೂಲಕ ಮತ ಸಂಗ್ರಹಿಸುವ ಸಂಸ್ಕೃತಿ ತರಲು ಪ್ರಯತ್ನಿಸಲಾಗುತ್ತಿದೆ. ಈ ರೇವಡಿ ಸಂಸ್ಕೃತಿ ದೇಶದ ಅಭಿವೃದ್ಧಿಗೆ ಅತ್ಯಂತ ಅಪಾಯಕಾರಿ. ಈ ಮೋಜು ಸಂಸ್ಕೃತಿಯ ಬಗ್ಗೆ ದೇಶದ ಜನರು ಬಹಳ ಜಾಗರೂಕರಾಗಿರಬೇಕು’ ಎಂದು ಹೇಳಿದ್ದರು. ಪ್ರಧಾನಿ ಕಚೇರಿಯ ಈ ಟ್ವೀಟ್‌ಗೆ ಹಲವು ರಾಜಕೀಯ ಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದವು.

ಕೇಂದ್ರ ಸರಕಾರ ಜನವಿರೋಽ ಎಂಬ ಷರಾ ಬರೆದರು. ಇದಕ್ಕೂ ಮುನ್ನ ೨೦೧೩ರಲ್ಲೇ ಸುಪ್ರೀಂ ಕೋರ್ಟ್, ರಾಜಕೀಯ ಪಕ್ಷಗಳು ತಮ್ಮ ಚುನಾವಣೆ ಪ್ರಣಾಳಿಕೆಯಲ್ಲಿ ನೀಡುವ ಉಚಿತ ಕೊಡುಗೆಗಳ ಆಮಿಷದಿಂದ ಮುಕ್ತ ಹಾಗೂ ನ್ಯಾಯಯುತ ಮತದಾನದ ಅಡಿಪಾಯವೇ ಅಲುಗಾಡುತ್ತದೆ ಎಂದು ಎಚ್ಚರಿಕೆ ನೀಡಿತ್ತು. ಅಲ್ಲದೆ, ರಾಜಕೀಯ ಪಕ್ಷಗಳು ಚುನಾವಣೆ ಪ್ರಣಾಳಿಕೆಯಲ್ಲಿ ‘ಉಚಿತ’ ಆಮಿಷ ಗಳನ್ನು ಒಡ್ಡಬಾರದು. ಪ್ರಣಾಳಿಕೆಯಲ್ಲಿ ಭರವಸೆಗಳ ನಿಯಂತ್ರಣಕ್ಕೆ ಸೂಕ್ತ ಮಾರ್ಗದರ್ಶಿ ಸೂತ್ರಗಳನ್ನು ಚುನಾವಣಾ ಆಯೋಗ ರೂಪಿಸಬೇಕು ಎಂದು ಹೇಳಿತ್ತು.

ಮತ್ತೊಂದೆಡೆ ೨೦೨೨ರ ಆಗಸ್ಟ್‌ನಲ್ಲಿ ಕೂಡ ಸುಪ್ರೀಂ ಕೋರ್ಟ್, ಪ್ರಣಾಳಿಕೆ ಯಲ್ಲಿ ನೀಡಿರುವ ಉಚಿತ ಭರವಸೆಗಳು ಆರ್ಥಿಕತೆಯ ಮೇಲೆ ನೇರ ಪರಿಣಾಮ ಬೀರುತ್ತವೆ ಎಂದು ಹೇಳಿತ್ತಲ್ಲದೆ, ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಗಳಲ್ಲಿ ನೀಡಿರುವ ಉಚಿತ ಭರವಸೆಗಳನ್ನು ನಿಷೇಧಿಸುವ ವಿಚಾರಕ್ಕೆ ತಾತ್ವಿಕ ಬೆಂಬಲ ನೀಡಿತ್ತು. ಇದಕ್ಕೆ ಕೇಂದ್ರ ಸರಕಾರವೂ ಸಹಮತ ವ್ಯಕ್ತಪಡಿಸಿ, ಉಚಿತ ಘೋಷಣೆಗಳು ಆರ್ಥಿಕತೆಗೆ ಹೊರೆಯಾಗಿದೆ.

ಗೊಂದಲದ ಘೋಷಣೆಗಳು ಮತದಾರರ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಕುಗ್ಗಿಸುತ್ತದೆ. ಇದರಿಂದ ನಾವು ಆರ್ಥಿಕ ಬಿಕ್ಕಟ್ಟಿನತ್ತ ಸಾಗುತ್ತಿದ್ದೇವೆ ಎಂದು ಹೇಳಿತ್ತು. ಇಷ್ಟೆಲ್ಲಾ ಆದರೂ ರಾಜಕೀಯ ಪಕ್ಷಗಳ ಉಚಿತ ಘೋಷಣೆ ಮುಂದು ವರಿಯುತ್ತಲೇ ಇದೆ. ರಾಜ್ಯದ ವಿಚಾರಕ್ಕೆ ಬರುವುದಾದರೆ, ಪಕ್ಷ ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೆ ೨೦೦ ಯೂನಿಟ್ ಉಚಿತ ವಿದ್ಯುತ್ ಎಂಬ ಕಾಂಗ್ರೆಸ್‌ನ ಘೋಷಣೆ ಕಾರ್ಯಸಾಧ್ಯವೇ ಮತ್ತು ಅಗತ್ಯ ಇದೆಯೇ ಎಂಬ ಎರಡು ಪ್ರಶ್ನೆಗಳು ಮೂಡುತ್ತವೆ.

ಇದರ ಜತೆಗೆ ಇದರಿಂದ ಆಗುವ ಆರ್ಥಿಕ ಹೊರೆಯನ್ನು ನಿಭಾಯಿಸುವುದು ಹೇಗೆ ಎಂಬ ಪ್ರಶ್ನೆಯೂ ಬರುತ್ತದೆ. ಏಕೆಂದರೆ, ಈಗಾಗಲೇ ಜಾರಿಯಲ್ಲಿರುವ ರೈತರ ಪಂಪ್‌ಸೆಟ್ ಗಳಿಗೆ ಉಚಿತ ವಿದ್ಯುತ್ ಯೋಜನೆಯಲ್ಲಿ ಹಿಂದೆ ಇದೇ ಕಾಂಗ್ರೆಸ್ ಸರಕಾರ ಇದ್ದಾಗ ಎಸ್ಕಾಂಗಳಿಗೆ ಸಾವಿರಾರು ಕೋಟಿ ರು. ಬಾಕಿ ಉಳಿಸಿಕೊಂಡಿತ್ತು. ಇದರಿಂದ ಎಸ್ಕಾಂಗಳು ನಷ್ಟಕ್ಕೆ ಒಳಗಾಗಿದ್ದವು. ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಪ್ರತಿ ಮನೆಗೂ ೨೦೦ ಯೂನಿಟ್ ವಿದ್ಯುತ್ ಉಚಿತವಾಗಿ ನೀಡಿದರೆ ಆ ಮೊತ್ತವನ್ನು ಸರಕಾರ ಎಸ್ಕಾಂಗಳಿಗೆ ಭರಿಸಬೇಕಾಗುತ್ತದೆ.

ಅಂದಾಜಿನ ಪ್ರಕಾರ ಪ್ರತಿ ವರ್ಷ ಸರಕಾರ ೨೦ ಸಾವಿರ ಕೋಟಿ ರುಪಾಯಿಗೂ ಹೆಚ್ಚು ಮೊತ್ತವನ್ನು ಇದಕ್ಕಾಗಿ ನೀಡಬೇಕಾ ಗುತ್ತದೆ. ಆ ಹಣವನ್ನು ಎಲ್ಲಿಂದ ಕ್ರೋಢೀಕರಿಸಲು ಸಾಧ್ಯ? ಒಂದೊಮ್ಮೆ ಅಷ್ಟು ಮೊತ್ತವನ್ನು ಎಸ್ಕಾಂಗಳಿಗೆ ನೀಡಿದರೆ ಅಭಿವೃದ್ಧಿ ಕೆಲಸಗಳಿಗೆ ಹಣ ಹೊಂದಿಸುವುದಾದರೂ ಹೇಗೆ? ಅದಕ್ಕಾಗಿ ಸಾಲ ಮಾಡಬೇಕಾಗುತ್ತದೆ ಇಲ್ಲವೇ ಇತರೆ
ಅಭಿವೃದ್ಧಿ ಯೋಜನೆಗಳನ್ನು ಬದಿಗಿಡಬೇಕಾಗುತ್ತದೆ. ಇದರ ದುಷ್ಪರಿಣಾಮ ಅಭಿವೃದ್ಧಿ ಯೋಜನೆಗಳ ಮೇಲೆ ಉಂಟಾಗಿ
ಆರ್ಥಿಕ ಪ್ರಗತಿ ಕುಂಠಿತವಾಗುತ್ತದೆ.

ಮತ್ತೊಂದೆಡೆ ಈ ರೀತಿಯ ಕೊಡುಗೆಯ ಅಗತ್ಯವಿದೆಯೇ ಎಂಬ ಪ್ರಶ್ನೆಯೂ ಉದ್ಭವವಾಗುತ್ತದೆ. ವಿದ್ಯುತ್ ಬಿಲ್ ಭರಿಸ ಲಾಗದ ಕಡು ಬಡವರಿಗೆ ಉಚಿತ ವಿದ್ಯುತ್ ನೀಡಿದರೆ ತಪ್ಪಲ್ಲ. ಆದರೆ, ಉಳ್ಳವರಿಗೂ ಉಚಿತವಾಗಿ ನೀಡುವ ಅಗತ್ಯವೇನು? ಈಗಾಗಲೇ ಅನ್ನಭಾಗ್ಯ ಯೋಜನೆಯಲ್ಲಿ ಬಿಪಿಎಲ್ ಕಾರ್ಡ್‌ದಾರರಿಗೆ ನೀಡುತ್ತಿರುವ ಪಡಿತರದಲ್ಲಿ ಎಷ್ಟು ಅಕ್ರಮ, ಅವ್ಯವಹಾರಗಳು ನಡೆಯುತ್ತಿವೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಈ ಬಗ್ಗೆ ಪ್ರಸ್ತಾಪಿಸಿದರೆ ಅವರಿಗೆ ಬಡವರ ವಿರೋಧಿಗಳು ಎಂಬ ಹಣೆಪಟ್ಟಿ ಕಟ್ಟಲಾಗುತ್ತದೆ.

ಅದರ ಬದಲು ಬಡವರಲ್ಲೂ ಆರ್ಥಿಕ ಶಕ್ತಿ ತುಂಬಿ ಅವರನ್ನು ಸ್ವಾಲಂಬಿಗಳಾಗಿ ಮಾಡಬೇಕು ಎಂಬ ಯೋಚನೆಯನ್ನು ಬಹುತೇಕ ರಾಜಕೀಯ ಪಕ್ಷಗಳು ಮಾಡುತ್ತಿಲ್ಲ. ಅದಕ್ಕೆ ವ್ಯತಿರಿಕ್ತವಾಗಿ ಅವರಿಗೆ ಮತ್ತಷ್ಟು ‘ಉಚಿತ ಕೊಡುಗೆ’ಗಳನ್ನು ನೀಡಿ
ಸೋಮಾರಿಗಳಾಗಿ ಮಾಡಲಾಗುತ್ತಿದೆ. ಎಲ್ಲಕ್ಕೂ ಸರಕಾರವನ್ನೇ ಅವಲಂಬಿಸುವಂತಹ ವಾತಾವರಣ ಸೃಷ್ಟಿ ಮಾಡಲಾ ಗುತ್ತಿದೆ. ಒಂದೊಮ್ಮೆ ಸರಕಾರಗಳ ಉಚಿತ ಕೊಡುಗೆಯಿಂದ ದೇಶದ ಜನ ಸ್ವಾವಲಂಬಿಗಳಾಗುತ್ತಾರೆ, ಆರ್ಥಿಕತೆ
ಅಭಿವೃದ್ಧಿಯಾಗುತ್ತದೆ, ದೇಶ ಪ್ರಗತಿಯಾಗುತ್ತದೆ ಎಂದಾಗಿದ್ದರೆ ಈ ವೇಳೆಗಾಗಲೇ ಭಾರತ ವಿಶ್ವದ ನಂ. ವನ್ ರಾಷ್ಟ್ರ ವಾಗಬೇಕಿತ್ತು. ಏಕೆಂದರೆ, ಮಾನವ ಸಂಪನ್ಮೂಲ, ಪ್ರಾಕೃತಿಕ ಸಂಪನ್ಮೂಲ ಹೀಗೆ ಎಲ್ಲವೂ ಭಾರತದಲ್ಲಿದೆ.

ಜತೆಗೆ ಸ್ವಾತಂತ್ರ್ಯಾನಂತರ ಬಂದ ಬಹುತೇಕ ಸರಕಾರಗಳು ಜನರಿಗೆ ನೀಡಿದ ಇಂತಹ ಕೊಡುಗೆಗಳಿಗೇನೂ ಕಮ್ಮಿ ಇಲ್ಲ.
ಆದರೆ, ೨೦೧೪ರವರೆಗೆ ಭಾರತ ಮುಂದುವರಿಯುತ್ತಿರುವ ರಾಷ್ಟ್ರಗಳ ಪಟ್ಟಿಯಲ್ಲೇ ಇತ್ತು. ಹಸಿರು ಕ್ರಾಂತಿ ನಡೆದರೂ
ಆಹಾರಕ್ಕಾಗಿ ಬೇರೆ ದೇಶಗಳನ್ನು ಅವಲಂಬಿಸಬೇಕಾಗಿತ್ತು. ಗರೀಬಿ ಹಠಾವೋ ಜಾರಿಯಾದರೂ ಬಡವರ ಸಂಖ್ಯೆ
ಹೆಚ್ಚಾಯಿತೇ ವಿನಃ ಕಡಿಮೆಯಾಗಲಿಲ್ಲ. ೨೦೧೪ರ ಬಳಿಕ ಉಚಿತ ಕೊಡುಗೆಗಳಿಗೆ ಯಾವಾಗ ಕತ್ತರಿ ಬೀಳಲಾರಂಭಿಸಿತೋ ನಿಧಾನವಾಗಿ ದೇಶ ಪ್ರಗತಿಯತ್ತ ಸಾಗುತ್ತಿದೆ.

ಆರ್ಥಿಕತೆ ವೃದ್ಧಿಯಾಗುತ್ತಿದೆ. ವಿಶ್ವದ ಇತರೆ ರಾಷ್ಟ್ರಗಳು ಭಾರತವನ್ನು ದೇಶದ ಅಭಿವೃದ್ಧಿಯ ವೇಗವನ್ನು ಅಚ್ಚರಿಯಿಂದ ನೋಡುವಂತಾಯಿತು. ಅದೇ ಪರಿಸ್ಥಿತಿ ಕರ್ನಾಟಕದಲ್ಲೂ ಇದೆ. ಜನರಿಗೆ ಆದಾಯ ಸಂಗ್ರಹಿಸುವ ಶಕ್ತಿ ಹೆಚ್ಚುತ್ತಿದೆ. ಸ್ವಾಲಂಬಿ ಗಳಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಉಚಿತ ಕೊಡುಗೆಗಳನ್ನು ನೀಡಿದರೆ ಮತ್ತೆ ಅವರಲ್ಲಿ ಸೋಮಾರಿತನ ಹೆಚ್ಚಾಗಿ ರಾಜ್ಯ ಮತ್ತೆ ಹಳೆಯ ಸ್ಥಿತಿಗೆ ಮರಳಬೇಕಾಗುತ್ತದೆ. ಈ ಕಾರಣಕ್ಕಾಗಿಯೇ ರಾಜಕೀಯ ಪಕ್ಷಗಳ ಉಚಿತ ಕೊಡುಗೆಗಳ ಬಗ್ಗೆ ಜನ ಎಚ್ಚರಿಕೆಯಿಂದ ಮತ್ತು ಅಷ್ಟೇ ಜವಾಬ್ದಾರಿಯಿಂದ ಯೋಚಿಸಿ ನಿರ್ಧಾರ ಕೈಗೊಳ್ಳಬೇಕಾಗಿ ಬಂದಿದೆ.

ಲಾಸ್ಟ್ ಸಿಪ್: ಉಚಿತ ಘೋಷಣೆಗಳಿಂದ ‘ಕೈ’ ಕಟ್ಟಿ ಹಾಕಿದರೆ ಮುಂದೆ ಉಣ್ಣಲೂ ಕೈ ಮುಂದೆ ಮಾಡಲು ಸಾಧ್ಯವಾಗದಿರ ಬಹುದು.
Read E-Paper click here