Sunday, 23rd June 2024

ಸಮಾರಂಭದಲ್ಲಿ ಊಟಕ್ಕಷ್ಟೇ ಹಾಜರಿ: ಇದೂ ಆಧುನಿಕತೆಯೇ ?

ತಿಳಿರುತೋರಣ

srivathsajoshi@yahoo.com

ಅಕ್ಕಿ ಮೇಲೆ ಆಸೆ ನೆಂಟರ ಮೇಲೆ ಪ್ರೀತಿ ಅನ್ನೋದೊಂದು ಜನಜನಿತ ಗಾದೆಮಾತು. ಧ್ವನ್ಯರ್ಥದಲ್ಲಾದರೆ ಒಟ್ಟಾರೆಯಾಗಿ ನಮಗೆದುರಾಗುವ ಯಾವುದೇ ಥರದ ಇಬ್ಬಂದಿ ತನವನ್ನು, ಸೂಕ್ಷ್ಮ ಅಥವಾ ಸಂದಿಗ್ಧ ಪರಿಸ್ಥಿತಿಯನ್ನು ಬಣ್ಣಿಸಲಿಕ್ಕೆ ಈ ಗಾದೆಮಾತನ್ನು ಬಳಸುತ್ತೇವೆ. ಆದರೆ ವಾಚ್ಯಾರ್ಥದಲ್ಲಿಯೂ- ಅಂದರೆ ಅಕ್ಷರಶಃ ಅಕ್ಕಿ ಮತ್ತು ನೆಂಟರ ಸಂದರ್ಭಕ್ಕೆ ಕೂಡ- ಇದನ್ನು ಬಳಸಬಹುದು. ಮನೆಯಲ್ಲಿ ಅಡುಗೆಗೆಂದು ತರುವ ಅಕ್ಕಿಯನ್ನು ವೃಥಾ ಖರ್ಚು ಮಾಡದೆ ಉಳಿಸಿಡಬೇಕೆಂಬ ಆಸೆ ಒಂದೆಡೆ; ಅಪರೂಪಕ್ಕೆ ಮನೆಗೆ ಬರುವ ನೆಂಟರನ್ನು ನಾಲ್ಕು ದಿನ ಉಳಿಯುವಂತೆ ಕೇಳಿಕೊಳ್ಳಬೇಕು, ಒಳ್ಳೊಳ್ಳೆಯ ಅಡುಗೆ ಮಾಡಿ ಚೆನ್ನಾಗಿ ಸತ್ಕರಿಸಬೇಕು, ಪ್ರತಿಯಾಗಿ ಅವರ ಪ್ರೀತಿ-ಮೆಚ್ಚುಗೆಗಳನ್ನು ಗಳಿಸಬೇಕು ಎಂಬ ಬಯಕೆ ಇನ್ನೊಂದೆಡೆ.

ಕೆಲವೊಮ್ಮೆ ಬಯಕೆ ತೀವ್ರವಾಗಿರದಿದ್ದರೂ ಕರ್ತವ್ಯವೆಂಬಂತೆ, ಸಮಾಜದ ದೃಷ್ಟಿಯಲ್ಲಿ -ಡಪೋಶಿ ಎನಿಸಬಾರದೆಂಬ ಸ್ವಕಲ್ಪಿತ ಒತ್ತಡದಿಂದ ಆ ರೀತಿ ಮಾಡುವುದೂ ಇರುತ್ತದೆನ್ನಿ. ಅಂತೂ ವಾಚ್ಯಾರ್ಥದಲ್ಲಿ ಈ ಗಾದೆಮಾತನ್ನು ಬಳಸುವುದೆಂದರೆ ಇಬ್ಬಂದಿತನಕ್ಕಿಂತಲೂ ಹೆಚ್ಚಾಗಿ ಆತಿಥೇಯನ ಜಿಪುಣತನದತ್ತ ಬೆಟ್ಟು ತೋರಿಸುವುದೇ ಆಗಿದೆ. ಆದರೆ, ‘ಅಕ್ಕಿ ಮೇಲೆ ಆಸೆ ನೆಂಟರ ಮೇಲೆ ಪ್ರೀತಿ’ ಎಂಬ ಈ ಗಾದೆಮಾತು ಏನಿದೆಯೋ ಇದಕ್ಕೆ ಆಧುನಿಕ ಕಾಲದಲ್ಲಿ ಹೊಸ
ದೊಂದು ವ್ಯಾಖ್ಯೆ, ಅರ್ಥೈಸುವಿಕೆಗೆ ಹೊಸದೊಂದು ದೃಷ್ಟಿಕೋನ ಬರಬೇಕಿದೆ ಎಂದು ನನಗನಿಸುತ್ತದೆ. ಈ ಹೊಸ ವ್ಯಾಖ್ಯೆ ಆತಿಥೇಯನನ್ನು ಕೇಂದ್ರವಾಗಿರಿಸಿದ್ದಲ್ಲ, ಬದಲಿಗೆ ನೆಂಟರನ್ನು ಸೆಂಟರ್‌ಪಾಯಿಂಟ್ ಆಗಿಟ್ಟುಕೊಂಡದ್ದು. ಅದೂ ಅಪರೂಪಕ್ಕೊಮ್ಮೆ ಮನೆಗೆ ಬರುವ ನೆಂಟರಲ್ಲ, ಮದುವೆ ಮುಂಜಿ
ಗೃಹಪ್ರವೇಶ ಮೊದಲಾದ ಸಮಾರಂಭಗಳಿಗೆ, ಕಲ್ಯಾಣಮಂಟಪ ಅಥವಾ ಸಭಾಗೃಹಗಳಲ್ಲಿ ನಡೆಯುವ ಮತ್ತಿತರ ಕಾರ್ಯಕ್ರಮಗಳಿಗೆ ಮಧ್ಯಾಹ್ನದ ಭೋಜನಕ್ಕೆ ಆಗಮಿಸುವ ಆಹ್ವಾನಿತ ನೆಂಟರಿಷ್ಟರು, ಬಂಧುಮಿತ್ರರು.

ಅಲ್ಲಿ ಆತಿಥೇಯನಿಗೆ ಅವರೆಲ್ಲರ ಬಗ್ಗೆ ನಿಶ್ಶರ್ತ ಪ್ರೀತಿಯಂತೂ ಇದ್ದೇಇರುತ್ತದೆ (ಇಲ್ಲದಿದ್ದರೆ ಆಮಂತ್ರಿಸುತ್ತಲೇ ಇರಲಿಲ್ಲ). ಅಕ್ಕಿಯ ಬಗ್ಗೆ ಜಿಪುಣತನವೇನಿಲ್ಲ.
ಆದರೆ ಅಕ್ಕಿ (ಆಹಾರ) ಪೋಲಾಗಬಾರದು, ‘ನ ದೇವಾಯ ನ ಧರ್ಮಾಯ ಆಗಬಾರದು ಎಂಬ ಪ್ರಾಕ್ಟಿಕಲ್ ಕಾಳಜಿ, ಕಕ್ಕುಲಾತಿ ಇರುತ್ತದೆ. ಅದು ಸಾಧ್ಯವಾಗುವಂತೆ ಅಷ್ಟಿಷ್ಟಾದರೂ ಸಹಕಾರವನ್ನು ಆತ ತನ್ನೆಲ್ಲ ನೆಂಟರಿಷ್ಟರಿಂದ ಬಯಸುತ್ತಾನೆ, ನಿರೀಕ್ಷಿಸುತ್ತಾನೆ. ಹಾಗೆ ನಿರೀಕ್ಷಿಸುವುದರಲ್ಲೇನೂ ತಪ್ಪಿಲ್ಲ. ಮಾತ್ರವಲ್ಲ ನನಗ ನಿಸುವಂತೆ ಇದೊಂದು ಗೌರವಾರ್ಹ ಮತ್ತು ಅನುಕರಣಯೋಗ್ಯ ನಿಲುವು.

ಮೊನ್ನೆ ಫೇಸ್‌ಬುಕ್‌ನಲ್ಲಿ ಸ್ನೇಹಿತೆ ಮಾನಸಾ ಕೀಳಂಬಿ ಅವರು ಹಾಕಿದ್ದ ಒಂದು ಪೋಸ್ಟ್‌ಅನ್ನು ಓದಿದಾಗ ನನಗೆ ಈ ಚಿಂತನೆ ಹೊಳೆಯಿತು. ಇದರ ಬಗ್ಗೆ ನಾನೊಮ್ಮೆ ಬರೆಯಬೇಕು ಅಂತ ಅನಿಸಿತು. ಮಾನಸಾ ಅವರ ಪೋಸ್ಟ್‌ನ ಈ ಒಂದು ಭಾಗವನ್ನು ನೀವೂ ಒಮ್ಮೆ ಗಮನವಿಟ್ಟು ಓದಿ: ‘ಸ್ವಲ್ಪ ಹಿಂದಿನ ಕಾಲದಲ್ಲಾದರೆ ಏನಾದರೂ ಸಮಾರಂಭಗಳು ಜರುಗುವಾಗ ಅತಿಥಿಗಳು ಬೆಳಿಗ್ಗೆ ಬೇಗನೆ ಬರುತ್ತಿದ್ದರು. ಸುಮಾರು ೧೦ ಗಂಟೆ ಹೊತ್ತಿಗೆ ಮಧ್ಯಾಹ್ನ ಊಟಕ್ಕೆ ನಿಲ್ಲುವವರ ಸಂಖ್ಯೆಯನ್ನು ಅಂದಾಜು ಮಾಡಬಹುದಿತ್ತು, ಮತ್ತು ಅದಕ್ಕೆ ತಕ್ಕುದಾಗಿ ಅಡುಗೆ ಮಾಡಬಹುದಿತ್ತು. ಈಗೀಗ ಹಾಗಾಗುವುದಿಲ್ಲ.

ಬರುವವರೆಲ್ಲರೂ ೧೨:೩೦ರ ಹೊತ್ತಿಗೆ, ಅಂದರೆ ಊಟಕ್ಕೆ ಹತ್ತು ನಿಮಿಷ ಇರುವಾಗ ಬರುತ್ತಾರೆ ಮತ್ತು ಊಟ ಮಾಡಿ ಕೈ ತೊಳೆದವರು ಕೈ ಬೀಸಿ ಟಾಟಾ ಹೇಳಿ ಹೊರಟೇ ಬಿಡುತ್ತಾರೆ. ಸಮಾರಂಭದ ಯಜಮಾನರಿಗಾದರೋ- ‘ಮಾಡಿದ ಅಡುಗೆ ಹೆಚ್ಚಾಗಿ ಚೆಲ್ಲಿದರೂ ಪರವಾಗಿಲ್ಲ, ಕಡಿಮೆಯಾಗಬಾರದು’ ಎನ್ನು
ವುದು ಒಂದು ಮನಃಸ್ಥಿತಿಯಾದರೆ, ‘ಯಾರಿಗೂ ಕಡಿಮೆಯಾಗಬಾರದು, ಹಾಗೆಂದು ಅತಿಯಾಗಿ ವ್ಯರ್ಥವೂ ಆಗಬಾರದು’ ಎಂದು ಪ್ರಾಕ್ಟಿಕಲ್ ಆಗಿ ಯೋಚಿಸು ವುದು ಮತ್ತೊಂದು ಮನಃ ಸ್ಥಿತಿ. ಇನ್ನು ಯಾವುದಾದರೂ ಹೋಟೆಲ್‌ಗಳಲ್ಲೋ, ದೇವಸ್ಥಾನದಲ್ಲೋ ಕಾರ್ಯಕ್ರಮ ಮಾಡಿದಾಗ, ಊಟದ ವ್ಯವಸ್ಥೆಗೆ ಕೇಟರಿಂಗ್‌ನವರಿಗೆ ಹೇಳಿದಾಗ ಅವರು ‘ಎಷ್ಟು ಜನಕ್ಕೆ?’ ಎಂದು ಪ್ರಶ್ನಿಸುತ್ತಾರೆ. ಇದಕ್ಕೆ ಉತ್ತರ ಕೊಡುವುದು ಬಲು ಕಷ್ಟದ ಕೆಲಸ.

ಆಹ್ವಾನ ಕೊಟ್ಟವರೆಲ್ಲ ಬಂದೇಬರುತ್ತಾರೆ ಎನ್ನುವಂತಿಲ್ಲ. ಹಾಗೆಂದು, ‘ನೀವು ಕಾರ್ಯಕ್ರಮಕ್ಕೆ ಬರುತ್ತೀರಾ? ನಿಮ್ಮ ಮನೆಯಿಂದ ಎಷ್ಟು ಜನ ಬರುತ್ತೀರಿ?’ ಎಂದು ಕೇಳುವುದು ಸೌಜನ್ಯ ಅಲ್ಲ ಎನಿಸಿಬಿಡುತ್ತದೆ. ಆದರೆ ಕೇಳದೆ ವಿಧಿ ಇರುವುದಿಲ್ಲ. ಈಗೀಗ ಹಾಗೆ ಕೇಳುವುದು ಸಹಜವಾಗುತ್ತಿದೆ. ಯಾರೂ ತಪ್ಪಾಗಿ ತಿಳಿಯು
ತ್ತಿಲ್ಲ. ಏಕೆಂದರೆ, ಹೆಚ್ಚಿನವರು ಆ ಪರಿಸ್ಥಿತಿಯನ್ನು ಎದುರಿಸಿರುತ್ತಾರೆ. ಹಾಗಾಗಿ, ಸಹಜವಾಗಿ ಬರುವವರ ಸಂಖ್ಯೆಯನ್ನು ಹೇಳಿಬಿಡುತ್ತಾರೆ. ಇದು ಬದಲಾದ ಕಾಲದ ವ್ಯವಸ್ಥೆ…’ ಮಾನಸಾ ಅವರು ಇದನ್ನು ಬರೆದದ್ದು ಅವರದೇ ಒಂದು ಪುಸ್ತಕ ಬಿಡುಗಡೆ ಸಮಾರಂಭದ ಆಹ್ವಾನಕ್ಕೆ ಪೀಠಿಕೆಯಾಗಿ.

ಮುಂದುವರಿಸುತ್ತ ‘ಕಾರ್ಯಕ್ರಮಕ್ಕೆ ತುಂಬು ಹೃದಯದ ಸ್ವಾಗತ ಕೋರುತ್ತಿದ್ದೇನೆ. ಅಲ್ಲಿ ಊಟ ಮುಖ್ಯ ವಿಷಯ ಅಲ್ಲ. ಆದರೆ, ನನ್ನ ಮೇಲಿನ ವಿಶ್ವಾಸಕ್ಕೆ ಬಂದವರನ್ನು ಹಾಗೇ ಹಸಿದ ಹೊಟ್ಟೆಯಲ್ಲಿ ಕಳಿಸುವುದು ಸಾಧುವೇ? ಇಷ್ಟು ಹೇಳಿದ ಮೇಲೆ ನೀವು ನನ್ನನ್ನು ತಪ್ಪಾಗಿ ತಿಳಿಯುವುದಿಲ್ಲ ಎನ್ನುವ ನಂಬಿಕೆ ನನಗಿದೆ. ಹಾಗಾಗಿ ಕಾರ್ಯಕ್ರಮಕ್ಕೆ ಬರುವವರು ಇಲ್ಲಿ ಅಥವಾ ಮೆಸೆಂಜರ್ ಮೂಲಕ ಖಚಿತಪಡಿಸಿದರೆ ಬಹಳ ಉಪಕಾರ ಆಗುತ್ತದೆ. ಖಚಿತಪಡಿಸದೆಯೂ ನಿಮಗೆ ಸ್ವಾಗತವಿದೆ. ನೀವು ಭಾಗಿಯಾಗುವುದು ಮುಖ್ಯ’ ಎಂದು ಕೂಡ ಬರೆದಿದ್ದರು.

ಅಂದಹಾಗೆ ಅವರ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯಲಿರುವುದು ಈ ಅಂಕಣಬರಹ ಪ್ರಕಟವಾಗುತ್ತಿರುವ ಭಾನುವಾರದಂದೇ. ನಾನು ಅಮೆರಿಕದಲ್ಲಿರುವು ದರಿಂದ ನನ್ನದು ದೂರದಿಂದಲೇ ಶುಭಹಾರೈಕೆ. ಊಟಕ್ಕೆ ಬರುತ್ತೇನೆ ಅಥವಾ ಬರುವುದಿಲ್ಲ ಎಂದು ತಿಳಿಸುವ ಪ್ರಮೇಯವಿಲ್ಲ. ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿದ
ಕೆಲವರು ಬರುತ್ತೇವೆ ಎಂದಿದ್ದಾರೆ, ಕೆಲವರು ಬರಲಿಕ್ಕಾಗುವುದಿಲ್ಲ ಎನ್ನುತ್ತ ಶುಭ ಹಾರೈಸಿದ್ದಾರೆ. ಒಟ್ಟಿನಲ್ಲಿ ಪೋಸ್ಟ್‌ನ ಇಂಗಿತವನ್ನು ಅರ್ಥಮಾಡಿಕೊಂಡು ಅದರಂತೆಯೇ ನಡೆದುಕೊಂಡಿದ್ದಾರೆ.

ಆಗಲೇ ಹೇಳಿದಂತೆ ಮಾನಸಾ ಅವರ ಟಿಪ್ಪಣಿ ನನ್ನನ್ನು ಚಿಂತನೆಗೆ ಹಚ್ಚಿದ್ದು ಹೌದು. ಅದರಲ್ಲೂ ‘ಬರುವವರೆಲ್ಲರೂ ೧೨:೩೦ರ ಹೊತ್ತಿಗೆ, ಅಂದರೆ ಊಟಕ್ಕೆ ಹತ್ತು ನಿಮಿಷ ಇರುವಾಗ ಬರುತ್ತಾರೆ ಮತ್ತು ಊಟ ಮಾಡಿ ಕೈ ತೊಳೆದವರು ಕೈ ಬೀಸಿ ಟಾಟಾ ಹೇಳಿ ಹೊರಟೇ ಬಿಡುತ್ತಾರೆ…’ ವಾಕ್ಯ. ಅದು, ನಾನೂ ಅಲ್ಲಿ-ಇಲ್ಲಿ ನೋಡಿ ಕಂಡುಕೊಂಡಿರುವ ಕಹಿಸತ್ಯವೇ. ಇಲ್ಲಿ ಅಂದರೆ ಅಮೆರಿಕದಲ್ಲಿ. ಮುಖ್ಯವಾಗಿ ಇಲ್ಲಿ ನಡೆಯುವ ಕನ್ನಡ ಕೂಟಗಳ ಅಥವಾ ಅಂತಹದೇ ಬೇರೆ ಕಾರ್ಯಕ್ರಮ ಗಳಲ್ಲಿ. ಹೆಚ್ಚೇಕೆ, ಕಳೆದ ವಾರಾಂತ್ಯವಷ್ಟೇ ನಡೆದ (ಮತ್ತು ಆ ವಾರದ ಅಂಕಣದಲ್ಲಿ ನಾನೊಂದು ಸಮಗ್ರ ಪಕ್ಷಿನೋಟ ನೀಡಿದ) ಕನ್ನಡ ಸಾಹಿತ್ಯ ರಂಗ – ಶರಾವತಿ ಕನ್ನಡ ಬಳಗದವರ ಸಹಯೋಗದ ವಸಂತ ಸಾಹಿತ್ಯೋತ್ಸವದಲ್ಲೂ ಅದೇ ಅವಸ್ಥೆ.

ಸಾಹಿತ್ಯಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ವೇದಿಕೆಯಲ್ಲಿ ನಡೆಯುತ್ತಿದ್ದಾಗ ಸಭಾಂಗಣದಲ್ಲಿ ಅಷ್ಟೇನೂ ಕಾಣಿಸಿಕೊಳ್ಳದ ಜನಸಂದಣಿ, ಊಟದ ಹಾಲ್ ಮಾತ್ರ ತುಂಬಿತುಳುಕುವಂತೆ ಶೋಭಿಸುತ್ತಿತ್ತು! ಅಷ್ಟೇಅಲ್ಲ, ಇನ್ನೂ ಕೆಲವರ ಊಟ ಬಾಕಿಯಿರುವಾಗಲೇ ಬಿಸಿಬೇಳೆಭಾತಿನ, ಮೊಸರನ್ನದ ದೊಡ್ಡ ಟ್ರೇಗಳೆಲ್ಲ ಖಾಲಿ! ಮುಂಚಿತವಾಗಿ ನೋಂದಣಿ ಮಾಡಿದವರು ಇಂತಿಷ್ಟು ಜನರಿರುತ್ತಾರೆ ಎಂದು ಹದಾ ಮಟ್ಟದ್ದೊಂದು ಅಂದಾಜು ಇದ್ದರೂ ಆಯೋಜಕರಿಗೆ ಇರುಸುಮುರುಸು ಎನಿಸುವ ಪರಿಸ್ಥಿತಿ. ಸಂಘ-ಸಂಸ್ಥೆಗಳ ಕಾರ್ಯಕ್ರಮಗಳನ್ನಾದರೂ ‘ಹೋಗುತ್ತೇನೋ ಇಲ್ಲವೋ ಎಂದು ಕೊನೆಕ್ಷಣದವರೆಗಿನ ಅನಿಶ್ಚಿತತೆ’ ಉಳ್ಳವರಿಂದಾಗಿ
ಹಾಗಾಗುತ್ತವೇನೋ ಎಂದುಕೊಳ್ಳೋಣ.

ಆದರೆ ಸತ್ಯನಾರಾಯಣ ಪೂಜೆ, ಷಷ್ಟ್ಯಬ್ದಿ, ನವಜಾತ ಶಿಶುವಿನ ನಾಮಕರಣದಂಥ ತೀರಾ ಖಾಸಗಿ ಸಮಾರಂಭಗಳಿಗೂ ಕೇವಲ ಊಟದ ಸಮಯಕ್ಕಷ್ಟೇ
ಸರಿಯಾಗಿ ಪ್ರತ್ಯಕ್ಷರಾಗುತ್ತೇವೆಂದರೆ ಏನರ್ಥ!? ಹಾಗಂತ, ಅವರೆಲ್ಲ ಹೊಟ್ಟೆಬಾಕ ಸ್ವಭಾವದವರೇ? ತಿಂಡಿಪೋತರೇ? ಊಟಕೆ ಬಾರೋ ಮಲ್ಲ ತಯಾರಿದ್ದೇನಲ್ಲ ಎನ್ನುವವರೇ? ತಿನ್ನುವುದಕ್ಕೆಂದೇ ಬದುಕುವವರೇ? ಖಂಡಿತ ಅಲ್ಲ! ಎಲ್ಲರೂ ಗೌರವಾರ್ಹ ಸಜ್ಜನರೇ. ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ಇರುವವರೇ. ಆದರೆ ಆಧುನಿಕ ಜೀವನಶೈಲಿಯು ಅವರನ್ನು ‘ಊಟದ ಸಮಯಕ್ಕೆ ಸರಿಯಾಗಿ ಹೋದರೆ ಧಾರಾಳ ಸಾಕು; ಬೇರೆಯವರೂ ಹಾಗೆಯೇ ತಾನೆ ಮಾಡುವರು? ನಾನು ಮಾತ್ರ ಬೇಗ ಹೋಗಿ ಅಲ್ಲಿ ಮಾಡುವುದಾದರೂ ಏನಿದೆ? ಕುರ್ಚಿ ಬಿಸಿಮಾಡುತ್ತ ನಾಲ್ಕಾರು ಗಂಟೆ ಕಾಯಬೇಕೇಕೆ? ಆ ಸಮಯವನ್ನು ನಾನು ಬೇರೆಲ್ಲ ಕೆಲಸಗಳಿಗೆ ಉಪಯೋಗಿಸಬಹು ದಲ್ಲವೇ…’ ಎಂಬ ಆಲೋಚನೆಗೆ ತಳ್ಳಿರುತ್ತದೆ.

ಅವರಿಗೆ ಅದರ ಬಗ್ಗೆ ತಪ್ಪಿತಸ್ಥ ಭಾವನೆಯಾಗಲೀ ಪಶ್ಚಾತ್ತಾಪವಾಗಲೀ ಏನೂ ಇರುವುದಿಲ್ಲ. ಮೂರು-ನಾಲ್ಕು ದಶಕಗಳ ಹಿಂದಿನ ದಿನಗಳನ್ನೊಮ್ಮೆ ನೆನಪಿಸಿಕೊಳ್ಳಿ. ಅದರಲ್ಲೂ ಹಳ್ಳಿಗರ ಬದುಕಿನ ಚಿತ್ರಣವನ್ನೊಮ್ಮೆ ಕಣ್ಮುಂದೆ ತಂದುಕೊಳ್ಳಿ. ಹತ್ತಿಪ್ಪತ್ತು ಮೈಲು ದೂರದ ಊರಿನಲ್ಲಿ/ ಪಟ್ಟಣಪ್ರದೇಶದಲ್ಲಿ ಮುದುವೆಯೋ ಮುಂಜಿಯೋ ಮತ್ತ್ಯಾವುದೋ ಸಮಾರಂಭವಿದ್ದರೆ ಅದರಲ್ಲಿ ಗವಹಿಸಲಿಕ್ಕೆ ಹಳ್ಳಿಗನು ಬೆಳಗ್ಗೆ ಬೇಗ ಎದ್ದು ದೈನಂದಿನ ಕೆಲಸಗಳನ್ನೆಲ್ಲ ಬೇಗಬೇಗ ಮುಗಿಸಿ, ಬೆಳಗ್ಗೆ ಒಮ್ಮೆ ಸಂಜೆ ಒಮ್ಮೆ ಮಾತ್ರ ಪೇಟೆಯಿಂದ ಬಂದುಹೋಗುವ ಬಸ್ ಹತ್ತಲಿಕ್ಕೆ ಕನಿಷ್ಠ ಒಂದೆರಡು ಮೈಲುಗಳಷ್ಟಾದರೂ ನಡೆದುಕೊಂಡು
ಹೋಗಬೇಕಿತ್ತು. ಸಹಜವಾಗಿಯೇ ಆತ ಬೆಳಗಿನ ಹತ್ತು-ಹತ್ತೂವರೆಗೆಲ್ಲ ಸಮಾರಂಭದ ಸ್ಥಳ ತಲುಪಿಯಾಗುತ್ತಿತ್ತು.

ಆಮೇಲೆ ಮನೆಗೆ ಹಿಂದಿರುಗುವುದು ಸಂಜೆಯ ಬಸ್ಸಿನಲ್ಲೇ. ಆದ್ದರಿಂದ ಊಟದ ಸಮಯಕ್ಕಷ್ಟೇ ಪ್ರತ್ಯಕ್ಷರಾದರು, ಕೈತೊಳೆದ ಮೇಲೆ ಹೊರಟೇಬಿಟ್ಟರು… ಎಂದಾಗುವುದು ಸಾಧ್ಯವೇ ಇಲ್ಲ. ಆದರೆ ಈಗ? ಎಲ್ಲರ ಬಳಿ ಸ್ವಂತ ವಾಹನಗಳಿವೆ. ಸಂಪರ್ಕಕ್ಕೆ ಒಳ್ಳೆಯ ರಸ್ತೆಗಳೂ ಇವೆ. ಮಧ್ಯಾಹ್ನ ಹನ್ನೆರಡಕ್ಕೆ ಹಠಾತ್ತನೆ
ನಿರ್ಧರಿಸಿದರೂ ಸಾಕು, ಅರ್ಧ-ಮುಕ್ಕಾಲು ಗಂಟೆಯೊಳಗೆ ಭುರ್ರೆಂದು ಸಾಗಿ ಸಮಾರಂಭದ ಸ್ಥಳ ತಲುಪಬಹುದು. ‘ಬರುವವರೆಲ್ಲರೂ ಊಟಕ್ಕೆ ಹತ್ತು ನಿಮಿಷ ಇರುವಾಗ ಬರುತ್ತಾರೆ…’ ಎಂದಾಗಲಿಕ್ಕೆ ಅದೇ ಮುಖ್ಯ ಕಾರಣ. ಪಟ್ಟಣಿಗರೋ ಟ್ರಾಫಿಕ್ ದಟ್ಟಣೆಯೆಂಬ ಇನ್ನೊಂದು ಆಧುನಿಕತೆಯಲ್ಲಿ ಸಿಕ್ಕಿಹಾಕಿಕೊಂಡು ಇನ್ನಷ್ಟು ತಡವಾಗಿ ತಲುಪುತ್ತಾರೆ.

ಇದು, ಸಮಾರಂಭಗಳಲ್ಲಿ ಊಟದ ಸಮಯಕ್ಕೆ ಸರಿಯಾಗಿ ಹಾಜರಾಗುವುದು ಎಂಬ ಒಂದು ವಿಷಯಕ್ಕಷ್ಟೇ ಸೀಮಿತ ಬದಲಾವಣೆ ಎಂದುಕೊಳ್ಳಬೇಡಿ! ಇದೇನಿದ್ದರೂ ಹಿಮಗುಡ್ಡೆಯ ತುದಿಬಿಂದು ಅಷ್ಟೇ. ಬಹುಶಃ ನಮ್ಮ ಅರಿವಿಗೇ ಬಾರದಂತೆ ನಾವೆಲ್ಲರೂ ಅನೇಕ ವಿಚಾರಗಳಲ್ಲಿ ಈ ರೀತಿಯ ಬದಲಾವಣೆಗೆ
ಒಡ್ಡಿಕೊಂಡಿದ್ದೇವೆ, ಒಗ್ಗಿಹೋಗಿದ್ದೇವೆ. ನಮ್ಮ ಬದುಕೆಂಬ ಹಡಗುಗಳು ಈ ಹಿಮಗುಡ್ಡೆಗೆ ಮತ್ತೆಮತ್ತೆ ಗುದ್ದಿ ಆಕಾರ ಕಳೆದುಕೊಂಡಿವೆ, ಕಳೆದುಕೊಳ್ಳುತ್ತಲೇ ಇವೆ. ಸಮಾಜಶಾಸಜ್ಞರು ಮತ್ತು ಮನೋವಿಜ್ಞಾನಿಗಳು ಇದನ್ನು ‘ಡೊಪಮೈನ್ ಕಲ್ಚರ್’ ಎಂದು ಗುರುತಿಸುತ್ತಾರೆ. ಕ್ಷಣಕ್ಷಣವೂ ಸುಖವೆಂಬ ಮರೀಚಿಕೆಯತ್ತ ಓಟ, ಒಂದು ಸುಖ ಸಿಕ್ಕಿತೆಂದು ಅನಿಸಿದ ಕೂಡಲೇ ಇನ್ನೊಂದರ ಹುಡುಕಾಟ. ಹಳೇ ಕಾಲದ ಮಂದಗತಿಯ ಜೀವನಶೈಲಿ, ಆಮೇಲೆ ಅಷ್ಟಿಷ್ಟು ವೇಗ ಪಡೆದ ಮಾಡರ್ನ್
ಜೀವನಶೈಲಿ, ಮತ್ತು ಇತ್ತೀಚಿನ ಈ ಹೊಸ ‘ಡೊಪಮೈನ್’ ಜೀವನಶೈಲಿ- ಈ ಮೂರರ ವ್ಯತ್ಯಾಸಗಳು ಬದುಕಿನ ಬೇರೆಬೇರೆ ಕ್ಷೇತ್ರಗಳಲ್ಲಿ ಹೇಗೆ ಪ್ರತಿ-ಲಿಸಿವೆ ಎಂದು ಚಂದದ್ದೊಂದು ಕೋಷ್ಟಕದ ಮೂಲಕ ವಿವರಿಸುತ್ತಾರೆ.

ಉದಾಹರಣೆಗೆ- ಕ್ರೀಡೆ ಅಥವಾ ಆಟೋಟ ಕ್ಷೇತ್ರ: ಯಾವುದಾದರೂ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದು ಹಳೇ ಶೈಲಿ; ಕ್ರೀಡೆಯನ್ನು ಟಿವಿಯಲ್ಲಿ ನೋಡಿ ಆನಂದಿಸುವುದು ಮಾಡರ್ನ್ ಶೈಲಿ; ಕ್ರೀಡೆಯ -ಲಿತಾಂಶದ ಬಗ್ಗೆ ಬಾಜಿ ಕಟ್ಟುವುದು ಡೊಪಮೈನ್ ಶೈಲಿ. ಇನ್ನೊಂದು ಉದಾಹರಣೆ- ಸುದ್ದಿಮಾಧ್ಯಮ: ಮುದ್ರಿತ ಪತ್ರಿಕೆ ಓದುವುದು ಹಳೇ ಶೈಲಿ; ಮಲ್ಟಿಮೀಡಿಯಾದಿಂದ ಸಮಾಚಾರ ಸಂಗ್ರಹ ಮಾಡರ್ನ್ ಶೈಲಿ; ಮೊಬೈಲ್ ಫೋನ್‌ನಲ್ಲಿ ಕ್ಲಿಕ್‌ಬೈಟ್ ಗಳನ್ನಷ್ಟೇ ನೋಡುವುದು ಡೊಪಮೈನ್ ಶೈಲಿ. ದೃಶ್ಯಮಾಧ್ಯಮ: ಸಿನಿಮಾ ಮತ್ತು ಟಿವಿ ಹಳೇ ಶೈಲಿ; ಡಿವಿಡಿ ಪ್ಲೇಯರ್ ಮಾಡರ್ನ್ ಶೈಲಿ; ರೀಲ್ಸ್, ಶಾರ್ಟ್ಸ್‌ಗಳೆಲ್ಲ ಡೊಪಮೈನ್ ಶೈಲಿ. ಸಂಗೀತ ಆಸ್ವಾದನೆ: ಗ್ರಾಮೊಫೋನ್ ತಟ್ಟೆಗಳಿಂದ ಆಲ್ಬಮ್‌ಗಳನ್ನು ಕೇಳುವುದು ಹಳೇ ಶೈಲಿ; ಜ್ಯೂಕ್‌ಬಾಕ್ಸ್‌ನಿಂದ ಬೇಕಾದ ಟ್ರ್ಯಾಕ್ ಗಳನ್ನು ಕೇಳುವುದು ಮಾಡರ್ನ್ ಶೈಲಿ; ಟಿಕ್‌ಟಾಕ್‌ಗಳು ಡೊಪಮೈನ್ ಶೈಲಿ. ಸಂವಹನ ಕ್ಷೇತ್ರ: ಕೈಬರಹದ ಪತ್ರಗಳು ಹಳೇ ಶೈಲಿ; ಇಮೇಲ್, ವಾಯ್ಸ್ ಮೆಸೇಜುಗಳು ಮಾಡರ್ನ್ ಶೈಲಿ; ಟ್ವೀಟುಗಳು, ಎಸ್ಸೆಮ್ಮೆಸ್‌ಗಳು ಡೊಪಮೈನ್ ಶೈಲಿ. ಹೆಣ್ಣು-ಗಂಡು ಸಂಬಂಧ: ಸಂಪ್ರದಾಯಬದ್ಧ ವೈವಾಹಿಕ ಜೀವನ ಹಳೇದು; ಲಿವ್ -ಇನ್ ರಿಲೇಷನ್ ಮಾಡರ್ನ್ ಶೈಲಿ; ಮೊಬೈಲ್ ಫೊನ್ ದಾಂಪತ್ಯ ಡೊಪಮೈನ್ ಶೈಲಿ! ಪ್ರವಾಸ, ಶಾಪಿಂಗ್, ಶಿಕ್ಷಣ, ಅಡುಗೆ… ಎಲ್ಲವೂ ಹೀಗೆಯೇ.

ಸೂಕ್ಷ್ಮವಾಗಿ ಗಮನಿಸಿದರೆ ಗೊತ್ತಾಗುತ್ತದೆ: ಹಳೇ ಶೈಲಿಯ ಎಲ್ಲದಕ್ಕೂ ಭೌತಿಕ ಅಸ್ತಿತ್ವ ಇರುತ್ತಿತ್ತು, ಅವಶ್ಯವಿತ್ತು. ಅಂದರೆ ಎಲ್ಲವೂ ಆಫ್ ಲೈನ್. ಡೊಪಮೈನ್ ಶೈಲಿ ಹಾಗಲ್ಲ. ಪ್ರತಿಯೊಂದೂ ಆನ್‌ಲೈನ್. ಹಳೆಯ ಶೈಲಿಯದು ಸಾಕಾರಗೊಳ್ಳಿಲಿಕ್ಕೇ ವರ್ಷಗಟ್ಟಲೆ ಕಾಯಬೇಕಾಗುತ್ತಿತ್ತು, ಅದರ ಉತ್ಪಾದನೆ ಮತ್ತು ಲಭ್ಯತೆ ಸೀಮಿತವಾಗಿರುತ್ತಿತ್ತು. ಡೊಪಮೈನ್ ಶೈಲಿಯಲ್ಲಿ ಎಲ್ಲವೂ ವಿಪುಲ, ಅಪರಿಮಿತ, ತತ್‌ಕ್ಷಣವೇ ಲಭ್ಯ. ಸಿಗುವ ಸುಖ ಮಾತ್ರ ಕ್ಷಣಿಕ. ಹಳೇ ಶೈಲಿಯಲ್ಲಿ ಮನೆಗೆ ಹೊಸದೊಂದು ಟಿವಿಯನ್ನೋ, ರೆಫ್ರಿಜರೇಟರನ್ನೋ ಕೊಳ್ಳುವಾಗಿನ ತಯಾರಿ, ಅದು ಬರುವವರೆಗೂ ಮತ್ತು ಬಂದ ಮೇಲೂ ಸಂಭ್ರಮದ ವಾತಾವರಣ, ಮನಸ್ಸಿಗೆ ಹಿಗ್ಗು. ಡೊಪಮೈನ್ ಶೈಲಿಯಲ್ಲಿ ಅಮೆಜಾನ್ ಡಾಟ್ ಕಾಮ್‌ನಲ್ಲಿ ಕ್ಲಿಕ್ ಆಫ್ ಎ ಬಟನ್ ಎಂಬಂತೆ ಆರ್ಡರ್ ಮಾಡುವುದೇನು, ಕೆಲವೇ ಗಂಟೆಗಳಲ್ಲಿ ಅದು ಮನೆಯ ಹೊಸ್ತಿಲಬಳಿ ಬಂದುಬೀಳುವುದೇನು! ಹಳೇ ಶೈಲಿಯಲ್ಲಿ ಯಾವತ್ತಾದರೂ ಒಮ್ಮೆ ಮನೆಮಂದಿಯೆಲ್ಲ ಸೇರಿ ರೆಸ್ಟೋರೆಂಟಿಗೆ ಹೋಗಿ ನೆಚ್ಚಿನ
ತಿಂಡಿತಿನಸನ್ನು ಸವಿಯುವುದಿತ್ತು; ಈಗ ಡೊಪಮೈನ್ ಶೈಲಿಯಲ್ಲಿ ಸ್ವಿಗ್ಗಿ ಝೊಮಾಟೊಗಳದೇ ಭರಾಟೆ.

‘ನಿರೀಕ್ಷೆಯ ಸುಖ’ಕ್ಕೆ ಆಸ್ಪದವೇ ಇಲ್ಲ. ಒಂದು ವಸ್ತುವನ್ನು ಒಬ್ಬರ ಮನೆಗೆ ತಲುಪಿಸುವ ಅಥವಾ ಅಲ್ಲಿಂದ ತರುವ ನೆಪದಲ್ಲಾದರೂ ಸೌಹಾರ್ದ ಭೇಟಿಗೆ
ಉಭಯಕುಶಲೋಪರಿಗೆ ಅವಕಾಶ ಇರುತ್ತಿತ್ತು ಹಳೇ ಶೈಲಿಯಲ್ಲಿ. ಈಗ ಅದನ್ನೂ ಹೊಸಕಿಹಾಕಿದೆ ಡೊಪಮೈನ್ ಶೈಲಿಯ ಡನ್ ಝೊ. ಇದೊಂದು ತಮಾಷೆ ಎನಿಸಬಹುದಾದರೂ ಸತ್ಯವೇ. ಏನೆಂದರೆ, ರೋಟಿ-ಕಪಡಾ-ಮಕಾನ್ ಈ ಮೂರು ಮಾತ್ರ ಸರಾಸರಿ ಮನುಷ್ಯನ ‘ಚಿಂತೆ’ಗಳಾಗಿದ್ದವು ಹಳೇ ಶೈಲಿಯ ಆ-
ಲೈನ್ ಜೀವನದಲ್ಲಿ. ಈಗಿನ ಆನ್‌ಲೈನ್ ಬದುಕಿನಲ್ಲಿ ಧರ್ಮ, ರಾಜಕೀಯ, ಸಮಾಜ, ಸಂಸ್ಕೃತಿ, ಭಾಷೆ, ಫ್ಯಾಷನ್, ಮೀಸಲಾತಿ, ಖಾಸಗೀಕರಣ, ಆಯವ್ಯಯ ಪತ್ರ, ಆರ್‌ಸಿಬಿ ತಂಡ ಕಪ್  ಗೆಲ್ಲುವ ಚಿತ್ರ, ಜಾಗತಿಕ ತಾಪಮಾನ, ಸೆಲೆಬ್ರಿಟಿಗಳ ಖಾಸಗಿ ಬದುಕು… ನಮ್ಮ ಚಿಂತೆಗಳು ಒಂದೇ ಎರಡೇ! ಎಲ್ಲ ಕ್ಷೇತ್ರಗಳಲ್ಲೂ ಬದಲಾವಣೆ ಆಗಿದೆ. ಅಂದಮಾತ್ರಕ್ಕೇ ಹಳೆಯದೆಲ್ಲವೂ ಒಳ್ಳೆಯದು, ಈಗಿನದು ಕೆಟ್ಟದು ಅಂತಲ್ಲ.

ಬದಲಾವಣೆ ಜಗದ ನಿಯಮ. ಕೆಲವರಷ್ಟೇ ‘ನಮ್ಮದು ಬದಲಾವಣೆಗೆ ಜಗ್ಗದ ನಿಯಮ’ ಎಂದುಕೊಂಡು ಹಳೇ ಕಾಲದವರಾಗಿಯೇ ಉಳಿದಾರು. ಮಿಕ್ಕ ನಾವೆಲ್ಲ ‘ಕಾಲವನ್ನು ತಡೆಯೋರು ಯಾರೂ ಇಲ್ಲ…’ ಎಂದು ಹಾಡುವವರೇ. ಬೇಕಿದ್ದರೆ ‘ಕಾಲಾಯ ತಸ್ಮೈ ನಮಃ’ ಎನ್ನುತ್ತ ಅದಕ್ಕೊಂದಿಷ್ಟು ಆಧ್ಯಾತ್ಮಿಕ ಟಚ್ ಕೊಡುವವರೇ. ಈಗ ಮತ್ತೊಮ್ಮೆ ಊಟದ ವಿಚಾರಕ್ಕೇ ಬರೋಣ. ಹಿಂದಿನ ಕಾಲದಲ್ಲಾದರೆ, ಮದುವೆ ಮುಂಜಿ ಮತ್ತಿತರ ಖಾಸಗಿ ಸಮಾರಂಭಗಳಲ್ಲಿ ದೇವಸ್ಥಾನಗಳ ಪೂಜೆ ಪುನಸ್ಕಾರಗಳಲ್ಲಿ ಭೋಜನವೆಂದರೆ ನೆಲದ ಮೇಲೆ ಚಕ್ಳಮಕ್ಳ ಹಾಕಿ ಸಾಲಾಗಿ ಪಂಕ್ತಿಯಲ್ಲಿ ಕುಳಿತು ಬಾಳೆಎಲೆಯಲ್ಲಿ ಊಟ. ಅದರದ್ದೇ ಆದ ಶಿಸ್ತು, ಸೌಂದರ್ಯ. ಶ್ಲೋಕ ಚೂರ್ಣಿಕೆಗಳ ಶಬ್ದಮಾಧುರ್ಯ. ಮಾಡರ್ನ್ ಶೈಲಿಯಲ್ಲಿ ಬಾಳೆ ಎಲೆಯೇನೋ ಉಳಿದುಕೊಂಡಿದೆಯಾದರೂ ನೆಲದ ಮೇಲೆ ಕೂರುವ ಬದಲಿಗೆ= ಟೇಬಲ್ ಚೇರ್ ವ್ಯವಸ್ಥೆ. ಬಡಿಸುವವರೂ ಬಾಗಬೇಕಿಲ್ಲ.

ಅತ್ಯಾಧುನಿಕ ಡೊಪಮೈನ್ ಶೈಲಿಯಲ್ಲಾದರೋ ಊಟ ಮಾಡಲು ಕುಳಿತುಕೊಳ್ಳುವ ಅಗತ್ಯವೂ ಇಲ್ಲ. ಬೇಕಾದ್ದನ್ನು ಬೇಕಾದಷ್ಟು ಬಡಿಸಿಕೊಳ್ಳುತ್ತ ನಿಂತುಕೊಂಡೇ ಬ- ಊಟ (ನನ್ನ ಸಂಬಂಧಿಕರೊಬ್ಬರು ‘ಬಫೆಲೊ ಊಟ’ ಎಂದು ತಮಾಷೆ ಮಾಡುವರು). ಊಟಕ್ಕೆ ಹತ್ತು ನಿಮಿಷಗಳಷ್ಟೇ ಇರುವಾಗ
ಸಮಾರಂಭ ಸ್ಥಳವನ್ನು ತಲುಪುವವರಿಗೆ, ತನ್ನ ಅನುಕೂಲವೊಂದೇ ತನಗೆ ಗೊತ್ತು ಬೇರೆಯವರ ಗೊಡವೆ ತನಗೇಕೆ ಎನ್ನುವವರಿಗೆ ಹೇಳಿ ಮಾಡಿಸಿದಂಥದ್ದು. ಮಾನಸಾ ಅವರೆಂದಂತೆ ನಮ್ಮ ಮನಸ್ಸುಗಳೆಲ್ಲ ಇದನ್ನು ಒಪ್ಪಿಕೊಳ್ಳಬೇಕಿದೆ ಅಷ್ಟೇ.

Leave a Reply

Your email address will not be published. Required fields are marked *

error: Content is protected !!