Sunday, 8th September 2024

’ನನ್ನ ತಂದೆ, ನನ್ನ ಅಣ್ಣ ಇದೇ ಗಂಗಾತಟದಲ್ಲಿ ನಡೆದಾಡಿದ್ದರು…’

ತಿಳಿರು ತೋರಣ

srivathsajoshi@yahoo.com

ಮೋದಿ-ಯೋಗಿ ಜೋಡಿಯ ಮಹತ್ತ್ವಾಕಾಂಕ್ಷೆಯ ‘ಕಾಶಿ ಕಾರಿಡಾರ್’ ಯೋಜನೆಯಿಂದಾಗಿ ವಾರಾಣಸಿಯಲ್ಲಿ ಎಲ್ಲವೂ ಬದಲಾಗಿದೆ. ‘ಸಂದಿಗೊಂದಿ ಗಳಲ್ಲಿ, ಗಲೀಜು ಗಲ್ಲಿಗಳಲ್ಲಿ ನಡೆದುಕೊಂಡು ಹೋಗುವಾಗ ಹಠಾತ್ತನೇ ವಿಶ್ವನಾಥನ ಗರ್ಭಗುಡಿ ಎದುರಾಗುವ’ ಪರಿಸ್ಥಿತಿ ಈಗ ಇಲ್ಲ. ಗುಡಿಯಿಂದ ಗಂಗಾದ್ವಾರದವರೆಗಿನ ಜಾಗದ ನವನಿರ್ಮಾಣ, ಗಂಗೆಯ ನಿರ್ಮಲೀಕರಣ, ಗರ್ಭಗುಡಿಯ ಗೋಪುರಕ್ಕೆ ಸ್ವರ್ಣ ಲೇಪನ… ಕಾಶಿ ಕಾರಿಡಾರ್ ಯೋಜನೆಯಿಂದ ಆಗಿರುವ ಅನುಕೂಲ ಅಷ್ಟಿಷ್ಟಲ್ಲ.

ಅವು ಇಂದಿಗೆ ಸುಮಾರು ೩೬ ವರ್ಷಗಳಷ್ಟು ಹಿಂದಿನ ದಿನಗಳು. ನಿಖರವಾಗಿ ಹೇಳುವುದಾದರೆ ೧೯೮೮ನೆಯ ಇಸವಿ ಏಪ್ರಿಲ್ ತಿಂಗಳ ಮೊದಲ ವಾರ. ನನ್ನ ಅಣ್ಣ ಉದ್ಯೋಗನಿಮಿತ್ತ ಒಂದು ವರ್ಷದ ಪ್ರಾಜೆಕ್ಟ್ ಮೇಲೆ ಅಮೆರಿಕಕ್ಕೆ ಹೋಗಿ ಮುಂಬೈಗೆ ಮರಳಿದ್ದರು. ಆ ಖುಶಿಯಲ್ಲಿ ನಮ್ಮ ತಂದೆ-ತಾಯಿ ಯನ್ನು ಕಾಶೀಯಾತ್ರೆಗೆ ಕರೆದುಕೊಂಡು ಹೋಗಿದ್ದರು. ವಾರಾಣಸಿಗೆ ಆಗಿನ್ನೂ ವಿಮಾನಯಾನ ಸೌಕರ್ಯ ಇರಲಿಲ್ಲ.

ಮುಂಬೈಯಿಂದ ಒಂದೂವರೆ ದಿನ ಅವಧಿಯ ರೈಲುಪ್ರಯಾಣ. ಕಾಶಿಯಲ್ಲಿ ದಶಾಶ್ವಮೇಧ ಲಾಡ್ಜ್‌ನಲ್ಲಿ ಅವರ ವಾಸ್ತವ್ಯ. ಗಂಗಾಸ್ನಾನ, ವಿಶ್ವೇಶ್ವರ ದರ್ಶನ ಮಾತ್ರವಲ್ಲದೆ ಮಣಿಕರ್ಣಿಕಾ ತೀರ್ಥಶ್ರಾದ್ಧ, ದುರ್ಗಾಘಾಟ್‌ನಲ್ಲಿ ಪಿಂಡಪ್ರದಾನ ಇತ್ಯಾದಿಗೆ ಮಿತ್ರರೊಬ್ಬರು ಪರಿಚಯಿಸಿದ್ದ ಚಿಂತಾಮಣಿ ದೀಕ್ಷಿತರೆಂಬ ಪುರೋಹಿತರ ಮಾರ್ಗದರ್ಶನ. ಅಂದುಕೊಂಡಷ್ಟು ಕಷ್ಟವಾಗದೆ ಮನಸ್ಸಿಗೆ ತೃಪ್ತಿ-ಸಮಾಧಾನ ಸಿಗುವ ರೀತಿಯಲ್ಲಿ ನಮ್ಮ ತಂದೆ-ತಾಯಿ ಕಾಶಿಯಲ್ಲಿ ವಿಽವಿಧಾನಗಳನ್ನೆಲ್ಲ ಪೂರೈಸಿದ್ದರು.

ಕಾಶಿಯಿಂದ ಬಸ್ಸಿನಲ್ಲಿ ಅಲಹಾಬಾದ್‌ಗೆ (ಆಗಿನ್ನೂ ಪ್ರಯಾಗರಾಜ ಹೆಸರು ಮರುಸ್ಥಾಪನೆಯಾಗಿರಲಿಲ್ಲ) ಹೋಗಿ ತ್ರಿವೇಣಿಸಂಗಮದಲ್ಲಿ ಸ್ನಾನ; ಕಾಶಿಯಿಂದಲೇ ಬೋಧಗಯಾಕ್ಕೆ ರೈಲಿನಲ್ಲಿ ಪಯಣಿಸಿ ಅಲ್ಲಿ ನಾಗೇಶಾಚಾರ್ಯರೆಂಬುವರ ಪೌರೋಹಿತ್ಯದಲ್ಲಿ ಶ್ರಾದ್ಧಕರ್ಮದ ಬಳಿಕ ಫಲ್ಗುಣೀನದಿ,
ವಿಷ್ಣುಪದ, ಮತ್ತು ವಟವೃಕ್ಷದಡಿ ಪಿಂಡಪ್ರದಾನ; ಮತ್ತೆ ಕಾಶಿಗೆ ಹಿಂದಿರುಗಿ ಒಂದುದಿನ ಅಲ್ಲೇ ಉಳಿದು ಇನ್ನೊಮ್ಮೆ ಗಂಗಾಸ್ನಾನ, ವಿಶ್ವನಾಥದರ್ಶನ, ಹಲ್ವಾ ಪ್ರಸಾದ, ಕಾಶೀನೂಲು ಸ್ಮರಣಿಕೆಗಳ ಚಿಕ್ಕಪುಟ್ಟ ಖರೀದಿ; ಹಿಂದಿರುಗುತ್ತ ನಾಶಿಕ್‌ನಲ್ಲಿ ತ್ರ್ಯಂಬಕೇಶ್ವರ ದರ್ಶನವನ್ನೂ ಪಡೆದು ಮುಂಬೈ ತಲುಪಿದ್ದರು.

ಇದೆಲ್ಲವನ್ನೂ ನಾನಿಲ್ಲಿ ಇಷ್ಟು ಕರಾರುವಾಕ್ಕಾಗಿ ಬರೆಯಲಿಕ್ಕೆ ಸಾಧ್ಯವಾಗಿರುವುದು ನನ್ನ ಅಣ್ಣ ಆಗ ಬರೆದಿಟ್ಟ ‘ಕಾಶೀಯಾತ್ರೆ ಡೈರಿ’ಯಿಂದ. ಒಂಬತ್ತು ದಿನಗಳ ಯಾತ್ರೆಯ ಅಷ್ಟೂ ವಿವರಗಳು- ಕಾಶಿಯಲ್ಲಿ ‘ಪಂಡ’ ಭಟ್‌ಜೀಗಳ ಉಪಟಳ, ರಾತ್ರಿ ಬೋಧಗಯಾ ತಲುಪಿದಾಗ ಪವರ್‌ಕಟ್, ಬೆಳದಿಂಗಳ ಬೆಳಕಿನಲ್ಲಿ, ಗೊತ್ತಿಲ್ಲದ ಊರಿನಲ್ಲಿ ಗೊತ್ತಿಲ್ಲದ ಸೈಕಲ್‌ರಿಕ್ಷಾದವನೊಡನೆ ವಿಪರೀತ ಸೊಳ್ಳೆಕಾಟವನ್ನೂ ಅನುಭವಿಸಿ ಗಮ್ಯ ಸ್ಥಳ ತಲುಪಿದ್ದು, ‘ಗಯಾದಿಂದ ವಾರಾಣಸಿಗೆ ಹಿಂದಿರುಗುವಾಗ ಪ್ಯಾಸೆಂಜರ್ ರೈಲಿನಲ್ಲಿ ಜನಸಂದಣಿ. ರಾತ್ರಿಯಾದ ಮೇಲೆ ರೈಲಿನಲ್ಲಿ ದೀಪವಿಲ್ಲ, ನೀರಿಲ್ಲ.

ಫೋನ್‌ಗಳನ್ನು ಕಿಟಕಿಗಾಜುಗಳನ್ನೆಲ್ಲ ಕಿತ್ತೆಸೆಯಲಾಗಿತ್ತು. ಯಾವ್ಯಾವುದೋ ನಿಲ್ದಾಣಗಳಲ್ಲಿ ರೈಲು ಗಂಟೆಗಟ್ಟಲೆ ಸ್ತಬ್ಧ. ವಾರಾಣಸಿ ತಲುಪಿದಾಗ ಮಧ್ಯರಾತ್ರಿ…’ ರೀತಿಯ ಅನುಭವಗಳೂ- ಅದರಲ್ಲಿ ದಾಖಲಾಗಿವೆ. ನಾವು ಮನೆಮಂದಿ ಡೈರಿಯನ್ನು ಮತ್ತೆಮತ್ತೆ ಓದಿ ಆನಂದಿಸಿದ್ದೇವೆ. ಕಾಶೀಯಾತ್ರೆಯ ಒಂದು ಅತ್ಯಂತ ಭಾವುಕ ಕ್ಷಣವನ್ನು ನನ್ನ ಅಣ್ಣ ಆಗಾಗ ನೆನಪಿಸಿಕೊಳ್ಳುವುದಿದೆ. ಅದೇನೆಂದರೆ ಕಾಶಿಯಲ್ಲಿ ಗಂಗಾಘಾಟ್ ನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ನಮ್ಮ ತಂದೆಯವರು ಧನ್ಯತೆಯ ಭಾವ ಉಕ್ಕಿಬಂದು ಆನಂದಬಾಷ್ಪ ಸುರಿಸುತ್ತ ಹೇಳಿದ್ದ ಮಾತು: ‘ಇದೇ ದಾರಿಯಲ್ಲಿ, ಗಂಗಾತಟದ ಇದೇ ಮೆಟ್ಟಿಲುಗಳ ಮೇಲೆ ತುಂಬ ವರ್ಷಗಳ ಹಿಂದೆ ನನ್ನ ತಂದೆ, ಆಮೇಲೆ ಕೆಲ ವರ್ಷಗಳ ಬಳಿಕ ನನ್ನ ಅಣ್ಣ ನಡೆದುಕೊಂಡು ಹೋಗಿದ್ದರು.

ಅಂಥ ಪುಣ್ಯಸ್ಥಳದಲ್ಲಿ ಈಗ ನಾನೂ ಹೆಜ್ಜೆಯಿಡುವಂತಾದದ್ದು ಅದೆಷ್ಟು ಸಂತಸ ತಂದಿದೆ!’ ಅಂದರೆ ನಮ್ಮ ತಂದೆಯವರು ನೆನಪಿಸಿಕೊಂಡದ್ದು ಅವರ ತಂದೆ (ನಮ್ಮ ಅಜ್ಜ) ಕಾಶೀಯಾತ್ರೆ ಮಾಡಿಬಂದಿದ್ದನ್ನು. ಅದು ಬಹುಶಃ ಸ್ವಾತಂತ್ರ್ಯಪೂರ್ವದ ಕಾಲ. ಆಗೆಲ್ಲ ಯಾರಾದರೂ ಕಾಶೀಯಾತ್ರೆ ಮಾಡಿ ಜೀವಂತ ಮರಳಿದರೆಂದರೆ ಹೆಚ್ಚೂಕಡಿಮೆ ಪವಾಡವೇ. ಆಮೇಲೆ ನಮ್ಮ ದೊಡ್ಡಪ್ಪ-ದೊಡ್ಡಮ್ಮನಾದರೋ ಸ್ವಾತಂತ್ರ್ಯೋತ್ತರ ಕಾಲದಲ್ಲಿ ಕಾಶಿಗೆ ಹೋಗಿಬಂದವರು. ಊರಿಂದ ನಾಲ್ಕೈದು ಮಂದಿ ಜತೆಗೂಡಿ ಬಾಡಿಗೆ ಕಾರು ಮಾಡಿಕೊಂಡು ಯಾತ್ರೆ ಮುಗಿಸಿದವರು.

ಅವರ ಯಾತ್ರೆ ಅಷ್ಟೇನೂ ದುಸ್ತರವಿದ್ದಿರಲಾರದು. ಆದರೂ ಅದನ್ನೆಲ್ಲ ನೆನೆದು ನಮ್ಮ ತಂದೆ ಗದ್ಗದಿತರಾಗಿ ಹಾಗೆ ನುಡಿದದ್ದಾಗಿತ್ತು. ಮೊನ್ನೆ ನಮ್ಮ ಕಾಶೀಯಾತ್ರೆಯ ವೇಳೆ ಸಂಜೆ ದೋಣಿವಿಹಾರದಲ್ಲಿ ೬೪ ಘಾಟ್‌ಗಳ ವೀಕ್ಷಣೆ- ಕೇದಾರ ಘಾಟ್, ಕರ್ನಾಟಕ ಘಾಟ್, ಹರಿಶ್ಚಂದ್ರ ಘಾಟ್, ಲಲಿತಾ ಘಾಟ್,
ಮಣಿಕರ್ಣಿಕಾ ಘಾಟ್… ಹೆಸರುಗಳನ್ನು ಗಮನಿಸಿದಾಗ ನನಗೆ ಅಣ್ಣನ ಡೈರಿ ನೆನಪಾಯ್ತು. ಆಮೇಲೆ ಅಲ್ಲೇ ‘ದಶಾಶ್ವಮೇಧ ಲಾಡ್ಜ್’ ಸಹ ಕಾಣಿಸಿತು.

ತತ್‌ಕ್ಷಣವೇ ಫೋಟೊ ಕ್ಲಿಕ್ಕಿಸಿ ನಮ್ಮ ಫ್ಯಾಮಿಲಿ ವಾಟ್ಸ್ಯಾಪ್ ಗ್ರೂಪ್‌ನಲ್ಲಿ ಹಾಕಿದೆ. ‘ದಶಕಗಳ ಹಿಂದೆ ನಮ್ಮ ತಂದೆ-ತಾಯಿಯನ್ನು ಹರಿಅಣ್ಣ ಕಾಶೀ ಯಾತ್ರೆಗೆ ಕರೆದುಕೊಂಡು ಬಂದಿದ್ದಾಗ ಅವರ ವಾಸ್ತವ್ಯವಿದ್ದದ್ದು ಇದೇ ಲಾಡ್ಜ್‌ನಲ್ಲೆಂದು ನನ್ನ ನೆನಪು’ ಅಂತ ಸೇರಿಸಿದೆ. ಈಗ ಇಂಗ್ಲೆಂಡ್ ನಲ್ಲಿರುವ ಹರಿಅಣ್ಣ ತತ್‌ಕ್ಷಣ ಉತ್ತರಿಸಿದರು. ಅವರ ಕಾಶೀ ಯಾತ್ರೆಯನ್ನು ನೆನಪಿಸಿಕೊಂಡರು. ಡೈರಿಯ ಪುಟಗಳ ಡಿಜಿಟಲ್ ರೂಪವನ್ನು ವಾಟ್ಸ್ಯಾಪ್ ಗ್ರೂಪಿ ಗೇರಿಸಿ ಹೊಸ ತಲೆಮಾರಿ ನವರಿಗೂ ಸಿಗುವಂತೆ ಮತ್ತೊಮ್ಮೆ ಎಲ್ಲರ ಓದಿಗೆ ಒದಗಿಸಿದರು.

ತಂದೆಯವರ ಭಾವುಕ ಹೇಳಿಕೆಯನ್ನೂ ನಾವೆಲ್ಲರೂ ಒಮ್ಮೆ ಸ್ಮರಿಸಿಕೊಂಡು ಮನಸ್ಸಿನಲ್ಲೇ ಅವರನ್ನು ವಂದಿಸಿದೆವು. ‘ನಮ್ಮ ಪೂರ್ವಜರು ನಡೆದಾಡಿದ ನೆಲದಲ್ಲೇ ನಾನೂ ಹೆಜ್ಜೆ ಯೂರುತ್ತಿದ್ದೇನೆ…’ ಎನ್ನುವ ರೋಮಾಂಚನವೇ ಅಂಥದ್ದು. ಅದೂ ಕಾಶಿಯಂಥ ಪುಣ್ಯಸ್ಥಳವಾದರೆ ಮತ್ತಷ್ಟು ಪುಳಕ. ನಮ್ಮ
ತಂದೆ ಗಂಗಾತಟದಲ್ಲಿ ನಡೆಯುತ್ತ ಹೇಗೆ ಅವರ ತಂದೆಯನ್ನು ಮತ್ತು ಅಣ್ಣನನ್ನು ನೆನಪಿಸಿಕೊಂಡರೋ, ನಾನೂ ಕಾಶಿಯಲ್ಲಿ ನಡೆದಾಡುತ್ತ ಹಾಗೆಯೇ ಮಾಡುವಂತಾಯ್ತು. ಅದೇನೂ ಪ್ರಜ್ಞಾಪೂರ್ವಕ ಅಲ್ಲ, ಅರಿವಿಲ್ಲದಂತೆಯೇ ಆಗುವ ಅನುಭೂತಿ.

ಉಕ್ಕಿಬರುವ ಭಾವುಕತೆ. ಒತ್ತರಿಸಿ ಬರುವ ನೆನಪು. ಒಂದೇಒಂದು ವ್ಯತ್ಯಾಸವೆಂದರೆ ಕಾಶೀವಿಶ್ವನಾಥನ ಗುಡಿಯ ತೀರಾ ಸುತ್ತಮುತ್ತಲಲ್ಲಿ ನಡೆದಾಡುವಾಗ ಮಾತ್ರ ಈಗ ಹಾಗೆ ಹೇಳು ವುದು ಸಮಂಜಸವಾಗಲಿಕ್ಕಿಲ್ಲ. ಏಕೆಂದರೆ ಮೋದಿ- ಯೋಗಿ ಜೋಡಿಯ ಮಹತ್ತ್ವಾಕಾಂಕ್ಷೆಯ ‘ಕಾಶಿ ಕಾರಿಡಾರ್’ ಯೋಜ ನೆಯಿಂದಾಗಿ ಅಲ್ಲೀಗ ಎಲ್ಲವೂ ಬದಲಾಗಿದೆ. ‘ಸಂದಿಗೊಂದಿಗಳಲ್ಲಿ, ಗಲೀಜು ಗಲ್ಲಿಗಳಲ್ಲಿ ನಡೆದುಕೊಂಡು ಹೋಗುವಾಗ ಹಠಾತ್ತನೇ ವಿಶ್ವನಾಥನ ಗರ್ಭಗುಡಿ ಎದುರಾಗುವ’ ಪರಿಸ್ಥಿತಿ ಈಗ ಇಲ್ಲ. ಗುಡಿಯಿಂದ ಗಂಗಾದ್ವಾರದವರೆಗಿನ ಜಾಗದ ನವನಿರ್ಮಾಣ, ಗಂಗೆಯ ನಿರ್ಮಲೀಕರಣ, ಗರ್ಭಗುಡಿಯ ಗೋಪುರಕ್ಕೆ ಸ್ವರ್ಣಲೇಪನ, ದರ್ಶನವಾದ ಮೇಲೆ ಸ್ವಲ್ಪಹೊತ್ತು ಆರಾಮಾಗಿ ಕಳೆಯಲು ಸ್ಥಳಾವಕಾಶ, ಕುಡಿಯುವ ನೀರಿನ ವ್ಯವಸ್ಥೆ, ಪ್ರಸಾದ ಕೊಂಡುಕೊಳ್ಳಲು ಪ್ರಶಸ್ತ ಸ್ಥಳ… ಕಾಶಿ ಕಾರಿಡಾರ್ ಯೋಜನೆಯಿಂದ ಆಗಿರುವ ಅನುಕೂಲ ಅಷ್ಟಿಷ್ಟಲ್ಲ.

‘ಮೋದಿ ಯವರೊಬ್ಬರಿಂದಲೇ ಇದು ಸಾಧ್ಯವಾಯಿತು!’ ಎಂದು ಎಲ್ಲರೂ- ಅಪ್ಪಟ ಮೋದಿದ್ವೇಷಿಗಳೂ- ಒಪ್ಪಲೇಬೇಕಾದ ಸತ್ಯವಿದು. ಆದರೂ, ಅಯೋಧ್ಯೆಯಲ್ಲಿ ರಾಮಲಲ್ಲಾನ ದರ್ಶನಕ್ಕೆ ಹೋಲಿಸಿದರೆ ಕಾಶಿಯಲ್ಲಿ ವಿಶ್ವನಾಥನ ದರ್ಶನದ ವೇಳೆ ನಾವು ಪಟ್ಟ ಬವಣೆಯನ್ನು, ಒಂದು ಹಂತದಲ್ಲಿ ನಮಗಾದ ತೀವ್ರ ಹತಾಶೆ-ನಿರಾಶೆಗಳನ್ನು, ನಾನಿಲ್ಲಿ ಬಣ್ಣಿಸಲೇಬೇಕು. ಶನಿವಾರ ನಾವು ಗಯಾದಿಂದ ವಾರಾಣಸಿಗೆ ತಲುಪಿದಾಗ ತಡರಾತ್ರಿಯಾಗಿತ್ತು. ಅದು ಉದ್ದೇಶಪೂರ್ವಕವೇ. ಏಕೆಂದರೆ ಬೆಳಗ್ಗೆ ೯ರಿಂದ ರಾತ್ರಿ ೧೧ರವರೆಗೆ ಕಾಶಿಯೊಳಗೆ ಟೂರಿಸ್ಟ್ ಬಸ್ಸುಗಳಿಗೆ ಪ್ರವೇಶವಿಲ್ಲ. ಬಸ್ಸನ್ನು ದೂರ ನಿಲ್ಲಿಸಿ ಪ್ರಯಾಣಿಕರು ಆಟೋರಿಕ್ಷಾಗಳಲ್ಲಿ ಬರಬೇಕು. ಕಾಶಿಯಲ್ಲಿ ನಮ್ಮ ವಾಸ್ತವ್ಯಕ್ಕಿದ್ದ ಹೊಟೇಲ್ ಇದ್ದದ್ದು ವಿಶ್ವನಾಥನ ಗುಡಿಗೆ ಕಾಲ್ನಡಿಗೆಯ ದೂರದಲ್ಲಿ. ಆದ್ದರಿಂದ ರಾತ್ರಿ ೧೧ರ ನಂತರವಷ್ಟೇ ಅಲ್ಲಿಗೆ ತಲುಪುವ ಏರ್ಪಾಡು.

ಅಂದಹಾಗೆ ಕಾಶಿಯೂ ಮುಂಬೈ, ನ್ಯೂಯಾರ್ಕ್‌ಗಳಂತೆ ‘ನಿದ್ರಿಸದ ನಗರಿ’ ಆದ್ದರಿಂದ ಬೀದಿಗಳೆಲ್ಲ ರಾತ್ರಿಯೂ ಜನನಿಬಿಡ. ಬಸ್ಸಿನಿಂದಿಳಿದು
ಹೊಟೇಲ್ ರೂಮ್ ಸೇರಿದಾಗ ಮಧ್ಯರಾತ್ರಿ ಕಳೆದು ೧ ಗಂಟೆ. ವಿಶ್ವನಾಥದರ್ಶನಕ್ಕೆ ೪ ಗಂಟೆಗೆ ದ್ವಾರ ತೆಗೆಯುತ್ತಾರೆ. ೨ ಗಂಟೆಯ ಹೊತ್ತಿಗೇ ಸರದಿಯ ಸಾಲಿನಲ್ಲಿ ನಿಲ್ಲಬೇಕಾಗುತ್ತದೆ. ಈಗಲೇ ಸ್ನಾನ ಮಾಡಿ ಹೊರಡಿರೆಂದರು ಟೂರ್ ಮ್ಯಾನೇಜರ್ ಪ್ರಕಾಶ ಹೆಬ್ಬಾರರು. ಅಷ್ಟಾಗಿ ನಾವು ಕಾಶಿಗೆ ಹೋಗಿದ್ದು ಹೊಟೇಲ್ ರೂಮಿನಲ್ಲಿ ಹಾಯಾಗಿ ನಿದ್ದೆಮಾಡಲಿಕ್ಕೆ ಅಲ್ಲವಲ್ಲ? ಕೆಲವರು ಮೊದಲಬಾರಿ, ಕೆಲವರು ಮರಳಿಬಂದವರಾದರೂ ಎಲ್ಲರಿಗೂ ವಿಶ್ವನಾಥ ದರ್ಶನದ ಉತ್ಕಟ ಅಪೇಕ್ಷೆ.

ನಾವು ಮೊದಲಿಗೆ ನಿಂತದ್ದು ಧರ್ಮದರ್ಶನದ ಸಾಲಿನಲ್ಲಿ. ನಮ್ಮ ಮುಂದೆ ಅದಾಗಲೇ ಸಾಕಷ್ಟು ಸಂಖ್ಯೆಯಲ್ಲಿ ಭಕ್ತಾದಿಗಳಿದ್ದರು. ತಲಾ ೩೦೦ ರು. ಕೊಟ್ಟು ಟಿಕೆಟ್ ಪಡಕೊಂಡರೆ ‘ಸುಗಮ ದರ್ಶನ’ ವ್ಯವಸ್ಥೆ ಇದೆ, ಅದರಲ್ಲಿ ಹೋದರೆ ‘ಸ್ಪರ್ಶದರ್ಶನ’ (ಜ್ಯೋತಿರ್ಲಿಂಗವನ್ನು ಕೈಯಾರೆ ಮುಟ್ಟಿ ಪೂಜಿಸುವ, ಪತ್ರ-ಪುಷ್ಪ-ಫಲ-ತೋಯ ಅರ್ಪಿಸುವ ಅವಕಾಶ) ಸಿಗುತ್ತ ದೆಂದು ಗೊತ್ತಾಯ್ತು. ಸರಿ, ಎಲ್ಲರೂ ದುಡ್ಡು ತೆತ್ತು ಸುಗಮದರ್ಶನ ಸಾಲಿನಲ್ಲಿ ನಿಂತೆವು.

ನಮ್ಮ ಮುಂದೆ ಹೆಚ್ಚೆಂದರೆ ೪೦-೫೦ ಮಂದಿ ಇದ್ದರೇನೋ. ಆರಾಮಾಗಿ ದರ್ಶನ ಸಿಗುತ್ತದೆಂದೇ ನಾವಂದುಕೊಂಡಿದ್ದು. ಆದರೆ ಆಮೇಲೆ ನಡೆದದ್ದೇ ಬೇರೆ. ನಾಲ್ಕು ಗಂಟೆಗೆ ದ್ವಾರವೇನೋ ತೆರೆಯಿತು. ಪರಂತು ಕ್ಯೂ ಸಾಗುತ್ತಿಲ್ಲ. ಮಾತ್ರವಲ್ಲ, ಕ್ಯೂನ ಮುಂಭಾಗದಲ್ಲೇ ತಂಡತಂಡಗಳಲ್ಲಿ ಜನ ಬಂದು ಸೇರಿಕೊಳ್ಳುತ್ತಿದ್ದಾರೆ! ದಲ್ಲಾಳಿಗಳು ರು.೩೦೦ರ ಟಿಕೆಟ್‌ಗಳನ್ನು ಹತ್ತುಪಟ್ಟು ಬೆಲೆಗೆ ಮಾರಿ ಅಮಾಯಕ ಭಕ್ತರನ್ನು ಕುರಿಗಳಂತೆ ಕ್ಯೂನಲ್ಲಿ ಸೇರಿಸುತ್ತಿದ್ದಾರೆ. ಸೆಕ್ಯುರಿಟಿಯವರು ‘ಗದರಿಸುವ ನಾಟಕ’ ಆಡುತ್ತಿದ್ದಾರೆ. ಸರದಿಯಲ್ಲಿ ಒಬ್ಬೊಬ್ಬರೇ ಸಾಗುವಂತೆ ಉದ್ದಕ್ಕೂ ನೀಟಾಗಿ ಬ್ಯಾರಿಕೇಡ್ಸ್ ಇರುತ್ತವೆಂದು ನಾನಂದುಕೊಂಡಿದ್ದು. ಹಾಗೆ ಇಲ್ಲವೇಇಲ್ಲ!

ಯದ್ವಾತದ್ವಾ ನುಗ್ಗಲಿಕ್ಕಾಗುವಂತೆ ಅಗಲ ಬ್ಯಾರಿಕೇಡ್ಸ್. ಕೆಲವೆಡೆ ಅದೂ ಇಲ್ಲ, ಓಪನ್ ಜಾಗ. ಅಲ್ಲಿ ಎಲ್ಲರೂ ಓಡಬೇಕು. ಕೈಕಾಲು ಗಟ್ಟಿಯಿಲ್ಲದವರ ಗತಿ ಗೋವಿಂದಾ. ಒಳಗೆ ಹೋದಾಗ ಸಾಲಿನಲ್ಲಿ ನಮ್ಮ ಮುಂದೆ ಕನಿಷ್ಠ ೪೦೦೦ ಜನರಿದ್ದರು! ಸರ್ವೈವಲ್ ಆಫ್ ದ ಫಿಟ್ಟೆಸ್ಟ್ ನೆನಪಿಸುವಂತೆ ರಟ್ಟೆ ಬಲಪ್ರದರ್ಶನ. ಇದ್ಯಾವ ನಮೂನೆ ಸುಗಮ ದರ್ಶನ? ಅಷ್ಟುಹೊತ್ತಿಗೇ ಸ್ಪರ್ಶದರ್ಶನದ ಅವಧಿ ಮುಗಿಯಿತು. ಜ್ಯೋತಿರ್ಲಿಂಗದ ಮೇಲೆ ಭಕ್ತಾದಿಗಳು ಸುರಿದಿದ್ದ ಪದಾರ್ಥಗಳನ್ನು ತೆಗೆದು ಸ್ವಚ್ಛಗೊಳಿಸಲಿಕ್ಕೆ ಕೆಲಕಾಲ ಎಲ್ಲ ಸ್ಥಗಿತ.

ಆಮೇಲೆ ಧರ್ಮದರ್ಶನ ಮತ್ತು ಸುಗಮದರ್ಶನ ಎರಡೂ ಸಾಲುಗಳನ್ನು ಒಟ್ಟಿಗೇ ತೆರೆದರು. ನೂಕುನುಗ್ಗಲಲ್ಲಿ ದೂರ ದಿಂದಲೇ ಲಿಂಗವನ್ನು ನೋಡಿ ತೃಪ್ತರಾಗಬೇಕು. ನನಗೆ, ಸಹನಾಗೆ, ನಮ್ಮ ಗುಂಪಿನಲ್ಲಿ ಇನ್ನೂ ಕೆಲವರಿಗೆ ಆ ಭಾಗ್ಯವೂ ಸಿಗಲಿಲ್ಲ. ಸೆಕ್ಯುರಿಟಿಯವರು ನಮ್ಮನ್ನು ಹಿಡಿದೆಳೆದು ಹೊರದೂಡುವ ಹೊತ್ತಿಗೆ ನಾವು ಜ್ಯೋತಿರ್ಲಿಂಗಕ್ಕೆ ಬೆನ್ನುಮಾಡಿ ನಿಂತಿದ್ದೆವು! ಇನ್ನು ಈ ಜನ್ಮದಲ್ಲಿ ಕಾಶೀಯಾತ್ರೆಯ ಉಸಾಬರಿ ಬೇಡ. ಮನೆಯಲ್ಲೇ ಕುಳಿತು ದೇವರಿಗೆ ಕೈ ಮುಗಿ. ಶಿವಮಾನಸಪೂಜೆ ಸ್ತೋತ್ರ ಪಠಿಸು. ಅದೇ ಎಷ್ಟೋ ವಾಸಿ ಎಂದು ಒಂದೊಮ್ಮೆ ಅನಿಸಿದ್ದು ಹೌದು.

ಹೆಬ್ಬಾರರ ಉದ್ಯಮ ಪಾಲುದಾರ ಜೀತನ್ ಕುಮಾರ್ ಅಲ್ಲೇ ನಿಂತಿದ್ದರು. ನಮ್ಮ ನಿರಾಶೆ ತೋಡಿಕೊಂಡಾಗ ಅವರಿಗೂ ಬೇಸರವಾಯ್ತು. ನಮ್ಮನ್ನು ಇಷ್ಟುದೂರ ಕರೆದುಕೊಂಡು ಬಂದು ವಿಶ್ವನಾಥನನ್ನು ಸ್ಪರ್ಶಿಸುವುದಿರಲಿ, ದರ್ಶಿಸುವುದೂ ಸಾಧ್ಯವಾಗಲಿಲ್ಲವೆಂದರೆ ದುಃಖವಾಗದಿರುತ್ತದೆಯೇ? ಜೀತನ್ ಅದನ್ನು ಸಹಿಸಿಕೊಳ್ಳದಾದರು. ನನ್ನನ್ನೂ ಸಹನಾಳನ್ನೂ ಮತ್ತೊಮ್ಮೆ, ದರ್ಶನ ಮುಗಿಸಿ ಭಕ್ತರು ಹೊರಬರುವ ಬ್ಯಾರಿಕೇಡ್‌ಗಳಲ್ಲಿ
ವಿರುದ್ಧ ದಿಕ್ಕಿನಲ್ಲಿ ಕರೆದುಕೊಂಡು ಹೋಗಿ, ಸೆಕ್ಯುರಿಟಿಯವರಿಗೂ ಅದೇನೋ ಮಾತಿನ ಮೋಡಿ ಮಾಡಿ ದರ್ಶನ ಒದಗಿಸಿಯೇ ಬಿಟ್ಟರು. ಸಹನಾಗಂತೂ ಪೂಜಾರಿಯೊಬ್ಬರು ಪ್ರಸಾದರೂಪವಾಗಿ ಹೂಮಾಲೆಯನ್ನೂ ಕೊಟ್ಟರು.

ಸಂತೋಷ-ಸಂತೃಪ್ತಿಯಿಂದ ಅವಳ ಮುಖ ಅರಳಿತು. ಹತಾಶೆಗೊಂಡಿದ್ದ ಮನಸ್ಸು ಹದ್ದುಬಸ್ತಿಗೆ ಬಂತು. ಎಲ್ಲರೂ ಆರಾಮಾಗಿ ಅಲ್ಲೆಲ್ಲ ಅಡ್ಡಾಡಿದೆವು. ಅನ್ನಪೂರ್ಣೆಯ ದರ್ಶನ ಪಡೆದೆವು. ‘ಜ್ಞಾನವಾಪಿ’ಯನ್ನು ನೋಡಿದೆವು. ಕಾಶಿ ಕಾರಿಡಾರ್ ಅನ್ನು ಮನಸಾರೆ ಕೊಂಡಾಡಿದೆವು. ನಮ್ಮ ಇಡೀ ತಂಡದ ಗ್ರೂಪ್ ಫೋಟೊ ತೆಗೆಸಿಕೊಂಡೆವು. ಊರಿಗೆ ಒಯ್ಯಲಿಕ್ಕೆ ಪ್ರಸಾದ, ಗಿಂಡಿಗಳಲ್ಲಿ ಗಂಗಾಜಲ ಕೊಂಡುಕೊಂಡೆವು. ಅಷ್ಟುಹೊತ್ತಿಗೆ ಗಂಟೆ ಎಂಟಾಗಿತ್ತು. ಆವತ್ತಿನ ದಿನ ಕಾಶಿಯಲ್ಲಿ ತಾಪಮಾನ ೫೦ ಡಿಗ್ರಿ ಸೆಂಟಿಗ್ರೇಡ್ ಆಗಲಿರುವ ಸೂಚನೆಯೆಂಬಂತೆ ಬಿಸಿಲಿನ ಝಳ ಏರಿತ್ತು. ಹೊಟೇಲ್‌ಗೆ ಮರಳಿ ನಮ್ಮ ತಂಡದ ಅಡುಗೆಯವರು ಆಗಲೇ ತಾಜಾ ಆಗಿ ತಯಾರಿಸಿದ್ದ ರುಚಿಕರ ಉಪಾಹಾರ ಸೇವಿಸಿ ಕೊಂಚ ವಿಶ್ರಾಂತಿ ಪಡೆದೆವು.

ಮಧ್ಯಾಹ್ನ ಊಟದ ಬಳಿಕ ಅನ್ನಪೂರ್ಣ ಬನಾರಸಿ ಸ್ಯಾರಿ ಫ್ಯಾಕ್ಟರಿ ಎಂದು ಇಂಗ್ಲಿಷ್-ತೆಲುಗು-ತಮಿಳು-ಕನ್ನಡ ನಾಲ್ಕು ಭಾಷೆಗಳಲ್ಲಿ ಫಲಕವಿದ್ದ ಸೀರೆ ಅಂಗಡಿಗೆ ನಮ್ಮ ತಂಡದ ನೀರೆಯರಿಂದ ಮುತ್ತಿಗೆ. ನಾವು ಗಂಡಸರು ಏ.ಸಿ.ಯ ತಂಪುಹವೆಯನ್ನೂ, ಜೇಬಿಗೆ ಕತ್ತರಿ ಬೀಳುತ್ತದೆಂದು ಒಳಗೊಳಗೇ ಬೇಗುದಿಯನ್ನೂ ಒಟ್ಟೊಟ್ಟಿಗೇ ಅನುಭವಿಸುತ್ತಿದ್ದರೆ ಹೆಂಗಸರು ಯಥಾಪ್ರಕಾರ ‘ಇದೇ ಡಿಸೈನ್‌ನಲ್ಲಿ ಬೇರೆ ಕಲರ್ ತೋರಿಸಿ; ಇದೇ ಬಣ್ಣದಲ್ಲಿ ಬೇರೆ ಡಿಸೈನ್ ಇದ್ರೆ ತೋರಿಸಿ’ ಎನ್ನುತ್ತ ವ್ಯಾಪಾರ ನಡೆಸಿದ್ದರು. ಒಟ್ಟು ಕನಿಷ್ಠ ೧೦೦ ಸೀರೆಗಳ ಖರೀದಿ ಆಗಿರಬೇಕೆಂದು ಗೊತ್ತಾಗುತ್ತಿತ್ತು ಗಂಟುಮೂಟೆ ಯನ್ನು ನೋಡಿದರೆ.

ಸಂಜೆ ಏಳರಿಂದ ಎಂಟರವರೆಗೆ ನಡೆಯುವ ‘ಗಂಗಾ ಆರತಿ’ ನನ್ನ ಮಟ್ಟಿಗೆ ಕಾಶೀಯಾತ್ರೆಯ ಹೈಲೈಟ್. ಇದೊಂದು ಸುಂದರ ದೃಶ್ಯಾವಳಿಯಷ್ಟೇ ಅಲ್ಲ. ಸನಾತನ ಭಾರತೀಯ ಸಂಸ್ಕೃತಿಯಲ್ಲಿ ಪ್ರಕೃತಿಯನ್ನು, ನೀರನ್ನು, ನದಿಯನ್ನು, ಅದರಲ್ಲೂ ಗಂಗಾಮಾತೆಯನ್ನು ಪರಮಪವಿತ್ರವೆಂದು ಪರಿಗಣಿಸಿ ಪೂಜಿಸುತ್ತೇವೆಂಬ ಭಾವನೆಯೇ ಅದ್ಭುತ ರೋಮಾಂಚನ ತರಿಸುವಂಥದ್ದು. ಇದೂ ಅಷ್ಟೇ. ಕಣ್ತುಂಬಿಸಿ ಎದೆಗಿಳಿಸಿಕೊಂಡು ಅನುಭವಿಸಬೇಕೇ
ಹೊರತು ಬಣ್ಣನೆಗೆ ನಿಲುಕದು. ಸೋಮವಾರವೂ ಇಡೀ ದಿನ ನಾವು ಕಾಶಿಯಲ್ಲೇ ಇದ್ದೆವು. ಬೆಳಗ್ಗೆ ಕಾಲಭೈರವ, ಸಂಕಟಮೋಚನ ಹನೂಮಾನ್, ಕವಡೆಬಾಯಿ ಮುಂತಾದ ದೇವಸ್ಥಾನಗಳಿಗೆ ಭೇಟಿ. ಮಣಿಮಂದಿರ ಎಂಬ ಆಧುನಿಕ ಸುಂದರ ದೇವಸ್ಥಾನದಲ್ಲಿ ಶಿವಲಿಂಗಕ್ಕೆ ನಾವೇ ಅಭಿಷೇಕ ಮಾಡುವ ಅನುಕೂಲ.

ಸಂಜೆ ಸಾರನಾಥದಲ್ಲಿ ಅಶೋಕಸ್ತಂಭ, ಸ್ತೂಪ ಮತ್ತಿತರ ಬೌದ್ಧಸ್ಮಾರಕಗಳ ವೀಕ್ಷಣೆ. ರಾತ್ರಿ ೮:೨೦ಕ್ಕೆ ವಾರಾಣಸಿ ವಿಮಾನನಿಲ್ದಾಣದಿಂದ ಬೆಂಗಳೂರಿಗೆ ಹೊರಡಬೇಕಿದ್ದ ವಿಮಾನ ಎರಡು ಗಂಟೆಗಳಷ್ಟು ತಡ ಆದದ್ದು, ಪುಣ್ಯಭೂಮಿಯಲ್ಲಿ ನಾವು ಮತ್ತೂ ಒಂದಷ್ಟು ಹೊತ್ತು ಕಳೆಯುವಂತಾದದ್ದೂ, ದೈವೇಚ್ಛೆಯೇ ಇರಬೇಕು! ಕಳೆದವಾರದ ಅಂಕಣದಲ್ಲಿ ಅಯೋಧ್ಯೆಯಲ್ಲಿನ ರಾಮಲಲ್ಲಾ ದರ್ಶನಾನುಭವವನ್ನು ಬಣ್ಣಿಸಿದೆ. ಈವಾರ ಕಾಶಿ ವಿಶ್ವನಾಥನ
ದರ್ಶನಾನುಭವವನ್ನು ಹಂಚಿಕೊಂಡೆ. ಅದರ ನಡುವೆ ಅಯೋಧ್ಯೆಯಿಂದ ಪ್ರಯಾಗರಾಜಕ್ಕೆ ನಮ್ಮ ಪ್ರವಾಸ; ತ್ರಿವೇಣಿಸಂಗಮದಲ್ಲಿ ಪುಣ್ಯಸ್ನಾನ; ತೆಲುಗು-ತಮಿಳು-ಕನ್ನಡ ಕಲಸುಮೇಲೋಗರ ಮಾತಾಡುತ್ತಿದ್ದ ವೃದ್ಧರೊಬ್ಬರ ಪೌರೋಹಿತ್ಯದಲ್ಲಿ ವೇಣಿ ದಾನ; ರಾತ್ರಿಗೆ ಬೋಧಗಯಾ ತಲುಪಿದಾಗ
ಹೊಟೇಲ್‌ನಲ್ಲಿ ನಮ್ಮ ತಂಡದವರೆಲ್ಲರಿಗೆ ರೇಷ್ಮೆಶಾಲು ಹೊದೆಸಿ ತಂಪು ಪಾನೀಯ ಕುಡಿಸಿ ಆತ್ಮೀಯ ಸ್ವಾಗತ; ಮಾರನೆದಿನ ಗಯಾದಲ್ಲಿ ಪಿಂಡಪ್ರದಾನ ಮಾಡಬಯಸುವವರಿಗೆ ವಿಶೇಷ ವ್ಯವಸ್ಥೆ; ನನಗಂತೂ ಕುಕ್ಕೆಸುಬ್ರಹ್ಮಣ್ಯ ಮೂಲದ ಪವನ ಆಚಾರ್ಯ ಎಂಬ ಪುರೋಹಿತರೇ ಸಿಕ್ಕಿ ಸಕಲ ಧಾರ್ಮಿಕ
ವಿಧಾನಗಳೊಂದಿಗೆ ಪಿತೃಶ್ರಾದ್ಧ-ಪಿಂಡಪ್ರದಾನ ಮಾಡಿದ ಸಂತೃಪ್ತಿ; ಅಡುಗೆಯವರಿಂದ ಮಧ್ಯಾಹ್ನಕ್ಕೆ ತೊವ್ವೆ, ಹೆಸರುಬೇಳೆ ಪಾಯಸ, ವಡೆ, ರವೆಉಂಡೆ ಸಹಿತ ಪಕ್ಕಾ ಶ್ರಾದ್ಧದೂಟ; ರಾತ್ರಿ ಅನ್ನಸೇವನೆ ವರ್ಜ್ಯವೆಂದು ಫಲಾಹಾರದ ಏರ್ಪಾಡು… ಪ್ರಕಾಶ ಹೆಬ್ಬಾರರು (೯೪೪೮೭೯೨೮೯೧) ತಮ್ಮ ಉದ್ಯಮಕ್ಕೆ ‘ಭಾರತ ಪರಂಪರಾ ದರ್ಶನ’ ಎಂದು ಹೆಸರಿಟ್ಟುಕೊಂಡಿದ್ದು ಸುಮ್ಮನೆ ಅಲ್ಲ.

ಸಂಸ್ಕೃತಿ-ಸಂಸ್ಕಾರಗಳನ್ನು ಅಕ್ಷರಶಃ ಪಾಲಿಸುವ ಧ್ಯೇಯನಿಷ್ಠೆ ಅವರದು. ಬಸ್ ಪ್ರಯಾಣದ ವೇಳೆ ಅವರು ಭಜನೆ ಮಾಡಿಸುವರು; ಅಂತ್ಯಾಕ್ಷರಿ ಆಟಗಳನ್ನೂ ಆಡಿಸುವರು. ನಮ್ಮ ಸಹಯಾತ್ರಿಗಳೂ ಅಷ್ಟೇ. ಸಾಮಾಜಿಕ ಹಿನ್ನೆಲೆ/ಲಿಂಗ/ವಯಸ್ಸಿನ ಭೇದ ಇಲ್ಲದೆ ಎಲ್ಲರೂ ಸ್ನೇಹಮಯಿ ಸಜ್ಜನರು, ಶ್ರದ್ಧೆಯುಳ್ಳವರು. ಅಡುಗೆತಂಡದ ನಾರಾಯಣ ಭಟ್, ಪ್ರಸಾದ್ ಮತ್ತು ನವೀನ್ ಬಗ್ಗೆಯಂತೂ ಎಷ್ಟು ಹೇಳಿದರೂ ಕಡಿಮೆಯೇ. ಏಳೂ ದಿನಗಳಲ್ಲಿ ನಮಗೆ ಒದಗಿಸಿದ ಕಾಫಿ/ಚಹ ತಿಂಡಿ ಊಟಗಳಲ್ಲಿದ್ದ ಉತ್ಕೃಷ್ಟತೆ, ವೈವಿಧ್ಯ, ರುಚಿ ಮತ್ತು ಪ್ರೀತಿಗೆ ನಾವೆಲ್ಲರೂ ಫಿದಾ ಆಗಿದ್ದೆವು. ನಗುಮೊಗದ ಸೇವೆಗೆ ಈ ಮೂವರೂ ಮಾದರಿ. ಅಂತೆಯೇ ಲಖನೌದಿಂದ ಕಾಶಿಯವರೆಗೂ ನಮ್ಮನ್ನು ಹೊತ್ತೊಯ್ದ ‘ವಾರಾಣಸಿ ಟೂರಿಸ್ಟ್’ ಏ.ಸಿ. ಡೀಲಕ್ಸ್ ಬಸ್ಸಿನ ಚಾಲಕ
ಮುನ್ನುಭಾಯಿ ಮತ್ತು ಸಹಾಯಕ ರಾಮಲಾಲ್‌ರ ದಕ್ಷ, ಸಮರ್ಥ ಸೇವೆ ಕೂಡ ಶ್ಲಾಘನೀಯ. ಹೀಗೆ ಒಂದು ಗುಂಪಿನಲ್ಲಿ ಯಾತ್ರೆಗೈದದ್ದು ನಮಗೊಂದು ವಿಶೇಷ ಅನುಭವ.

ನಾವಿಬ್ಬರೇ ಹೋಗಿಬರುತ್ತಿದ್ದರೆ ಇಷ್ಟೊಂದು ಅನುಕೂಲಕರ, ಫಲಪ್ರದ ಖಂಡಿತ ಆಗುತ್ತಿರಲಿಲ್ಲ. ಈಗ ನಾನು ಜನ್ಮಭೂಮಿಯಿಂದ ಕರ್ಮ ಭೂಮಿ ಯತ್ತ ಪ್ರಯಾಣದಲ್ಲಿದ್ದೇನೆ. ವಿಮಾನದಲ್ಲಿ ಕುಳಿತು ಕಣ್ಮುಚ್ಚಿಕೊಂಡಾಗ ಯಾತ್ರೆಯ ಸವಿನೆನಪುಗಳದೇ ಮೆಲುಕು.

Leave a Reply

Your email address will not be published. Required fields are marked *

error: Content is protected !!