Saturday, 23rd November 2024

ನ್ಯಾಯಾಲಯದಲ್ಲಿ ತನ್ನ ಉಡುಪನ್ನು ಕಳಚಿದಳು !

ಹಿಂದಿರುಗಿ ನೋಡಿದಾಗ

ಮನುಕುಲದ ಇತಿಹಾಸದಲ್ಲಿ ಮಹಿಳೆಯ ಸ್ಥಾನಮಾನವು ಸ್ಥಿರವಾಗಿದ್ದದ್ದು ಕಡಿಮೆ. ಬಹುಶಃ ಮಾತೃದೇವತೆಯ ಆರಾಧನೆಯು ಅಸ್ತಿತ್ವದಲ್ಲಿದ್ದ ಕಾಲ ದಲ್ಲಿ ಮಹಿಳೆಗೆ ಉನ್ನತ ಸ್ಥಾನವು ಇದ್ದಿರಬೇಕು. ಆದರೆ ಕಾಲಕ್ರಮೇಣ, ಪುರುಷನು ತನ್ನ ಮೃಗೀಯ ದೈಹಿಕ ಶಕ್ತಿಯಿಂದ ಹೆಣ್ಣನ್ನು ಬಗ್ಗು ಬಡಿದ.
ಪುರುಷ ಪ್ರಧಾನ ಸಮಾಜವು ಜಗತ್ತಿನ ಎಲ್ಲ ಸಂಸ್ಕೃತಿಗಳಲ್ಲಿ ಹೆಚ್ಚೂ ಕಡಿಮೆ ಏಕಕಾಲದಲ್ಲಿ ಕಂಡುಬಂದದ್ದು ಒಂದು ವಿಪರ್ಯಾಸ.

ಆದರೂ ನಮ್ಮ ದೇಶದಲ್ಲಿ ಹೆಣ್ಣಿಗೆ ಸಾಕಷ್ಟು ಸ್ವಾತಂತ್ರವಿದ್ದದ್ದನ್ನು ಅಲ್ಲಗಳೆಯಲಾಗದು. ನಮ್ಮ ವೇದಗಳ ಕಾಲದಲ್ಲಿ ಮಹಿಳೆಯರೂ ಉಪಕುಲಪತಿ ಗಳಾಗಿ ವಿದ್ಯಾಲಯಗಳನ್ನು ನಡೆಸುತ್ತಾ, ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನವನ್ನು ಮಾಡುತ್ತಿದ್ದ ಉದಾಹರಣೆಗಳು ದೊರೆಯುತ್ತವೆ. ಭಾರತದಲ್ಲಿ ಬಹುಶಃ ಕ್ರಿ.ಶ.೧೦ನೆಯ ಶತಮಾನ ದವರೆಗೂ ಮಹಿಳೆಯರ ಸ್ಥಾನಮಾನವು ಭದ್ರವಾಗಿಯೇ ಇತ್ತು ಎನ್ನಬಹುದು.

ಆನಂತರ ನಡೆದ ಪರಕೀಯರ ದಾಳಿಯ ಕಾರಣ, ಮಹಿಳೆಯ ಸ್ಥಾನಮಾನವು ಎಲ್ಲ ರೀತಿಯಿಂದಲೇ ಅಧೋಗತಿಗೆ ಇಳಿದು, ಆಕೆ ದ್ವಿತೀಯ ಪ್ರಜೆಯಾ
ದದ್ದು ಐತಿಹಾಸಿಕ ಸತ್ಯ. ಆ ಸ್ಥಿತಿಯು ಇತ್ತೀಚಿನವರೆಗೂ ಮುಂದುವರೆದಿತ್ತು. ಆದರೆ ಈಗ, ೨೧ ನೆಯ ಶತಮಾನದಲ್ಲಿ ಹೆಣ್ಣು ಮಕ್ಕಳೇ ಉನ್ನತ ಶಿಕ್ಷಣ ವನ್ನು ಪಡೆದು, ಅತ್ಯುತ್ತಮ ಸ್ಥಾನಗಳಲ್ಲಿ ಕೆಲಸ ಮಾಡುತ್ತಾ, ಕೈತುಂಬಾ ಹಣವನ್ನು ಸಂಪಾದನೆ ಮಾಡುತ್ತಿರುವುದರಿಂದ ಮತ್ತೊಮ್ಮೆ ಹೆಣ್ಣು ಮಕ್ಕಳ ಪಾರಮ್ಯ ಆರಂಭವಾಗಿದೆ ಎನ್ನಬಹುದು. ಆದರೆ ಪಾಶ್ಚಾತ್ಯ ಜಗತ್ತಿನಲ್ಲಿ ಪ್ರಾಚೀನ ಗ್ರೀಕರ ಕಾಲದಲ್ಲಿಯೇ ಹೆಣ್ಣು ಮಕ್ಕಳ ಸ್ಥಾನಮಾನವು ಎರಡನೆಯ ದರ್ಜೆಗೆ ಇಳಿದದ್ದು ಆಶ್ಚರ್ಯ ಹಾಗೂ ಶೋಚನೀಯ ವಿಷಯವಾಗಿದೆ.

ಅನಾದಿಕಾಲದಿಂದಲೂ ಮನುಕುಲ ಚರಿತ್ರೆಯಲ್ಲಿ ವೈದ್ಯಕೀಯಕ್ಕೆ ಸಂಬಂಧಪಟ್ಟ ಹಾಗೆ ಮಹಿಳೆಯರೇ ಪ್ರಧಾನ ಪಾತ್ರವನ್ನು ವಹಿಸುತ್ತಿದ್ದರು. ಸಮುದಾಯದಲ್ಲಿದ್ದ ಅತ್ಯಂತ ಹಿರಿಯ ಹಾಗೂ ಅನುಭವೀ ಮಹಿಳೆಯೇ ಹೆರಿಗೆಯನ್ನು ನಡೆಸುತ್ತಿದ್ದಳು. ಗಂಡಸರು ಬೇಟೆಗೆಂದು ಹೊರಟಾಗ,
ಹೆಣ್ಣು ಮಕ್ಕಳು ಸಾಮಾನ್ಯವಾಗಿ ಹಣ್ಣುಹಂಪಲನ್ನು, ಗಡ್ಡೆ ಗೆಣಸುಗಳನ್ನು ಸಂಗ್ರಹಿಸಲು ಹೋಗುತ್ತಿದ್ದರು. ಆ ಅವಧಿಯಲ್ಲಿ ಅವರಿಗೆ ಅನೇಕ ಔಷಽಯ ಸಸ್ಯಗಳ ಪರಿಚಯ-ಪ್ರಯೋಗ-ಸಿದ್ಧಿಗಳಾಗಿರಬೇಕು. ಹಾಗಾಗಿ ಮನೆಯಲ್ಲಿ ಸಣ್ಣ ಪುಟ್ಟ ಅನಾರೋಗ್ಯಗಳು ತಲೆದೋರಿದಾಗ ಮನೆಯ ಹಿರಿಯ ಅಜ್ಜಿಯೇ ನಾರು-ಬೇರುಗಳ ಔಷಧಗಳನ್ನು ಮಾಡುತ್ತಿದ್ದಳು.

ಮುಂದಿನ ದಿನಗಳಲ್ಲಿ ಪುರುಷರೂ ಸಹ ವೈದ್ಯಕೀಯವನ್ನು ಕಲಿತು ಸಮುದಾಯದ ಅಧಿಕೃತ ವೈದ್ಯರಾದರೂ ಸಹ, ಮಹಿಳೆಯರ ಸ್ಥಾನಕ್ಕೆ ಚ್ಯುತಿ ಬರಲಿಲ್ಲ. ಮಾನವನ ಇತಿಹಾಸದಲ್ಲಿ ಮಹಿಳಾ ವೈದ್ಯರ ಅಧಿಕೃತ ಸ್ಥಾನಮಾನವನ್ನು ತಿಳಿಯಬೇಕಾದರೆ ಯೂಫ್ರಟಿಸ್ ಮತ್ತು ಟೈಗ್ರಿಸ್ ನದಿಗಳ ನಡುವೆ ಅರಳಿದ ಮೆಸೊಪೊಟೋಮಿಯನ್ ಸಂಸ್ಕೃತಿಯ ಕಾಲಕ್ಕೆ ಹೋಗಬೇಕು. ಕ್ರಿ.ಪೂ.೩೫೦೦ ವರ್ಷಗಳ ಹಿಂದೆ ಬದುಕಿದ್ದ ‘ಉರ್’ ಪ್ರದೇಶದ ಅರಸಿ
ಶುಬದ್ (ಶುದಿ-ಅದ್ / ಪೌಬಿ) ಸಮಾಧಿಯಲ್ಲಿ ಕಂಚು ಮತ್ತು ಬೆಣಚುಕಲ್ಲಿನ ಶಸಚಿಕಿತ್ಸಾ ಉಪಕರಣಗಳು ದೊರೆತಿವೆ.

ಪ್ರಾಚೀನ ಈಜಿಪ್ಟಿನಲ್ಲಿ ‘ಐಸಿಸ್’ ಎಂಬ ದೇವತೆಯು ವೈದ್ಯ ವಿಜ್ಞಾನದ ದೇವತೆಯಾಗಿದ್ದಳು. ಆಕೆಯ ಹೆಸರಿನಲ್ಲಿ ದೊಡ್ಡ ದೊಡ್ಡ ದೇವಾಲಯಗಳನ್ನು ಕಟ್ಟಿದ್ದರು. ಆಕೆಯ ಆರಾಧನೆಯನ್ನು ಮಹಿಳೆಯರೇ ಮಾಡುತ್ತಿದ್ದರು. ಹಾಗಾಗಿ ಐಸಿಸ್‌ಳ ಅಂಶವು ಅವರಲ್ಲಿ ಸೇರಿದೆ ಎಂದು ಎಲ್ಲರೂ ಭಾವಿಸುತ್ತಿದ್ದರು. ಇವರು ವೈದ್ಯಕೀಯ ಚಿಕಿತ್ಸೆಯನ್ನು ನೀಡುತ್ತಿದ್ದರು. ಪ್ರಾಚೀನ ಈಜಿಪ್ಟಿನ ಇತಿಹಾಸದಲ್ಲಿ ಕಂಡು ಬರುವ ಮೊದಲ ಮಹಿಳಾ ವೈದ್ಯೆಯ ಹೆಸರು ಮೆರಿಟ-ಪ್ತ (ಕ್ರಿ.ಪೂ.೨೭೦೦). ಈಜಿ ದೇಶವನ್ನು ಆಳಿದ ಮೊದಲ ವಂಶಜರ ಕೊನೆಯ ದಿನಗಳಲ್ಲಿ ಬದುಕಿದ್ದಳು. ಆಕೆಯ ಸಮಾಧಿಯು ಸಕ್ಕಾರದಲ್ಲಿದೆ.

ಈ ಸಮಾಧಿಯ ಮೇಲೆ ಆಕೆಯ ಮಗ ಕೆತ್ತಿಸಿರುವ ‘ಮುಖ್ಯ ವೈದ್ಯರು’ ಎಂಬ ಬರಹವನ್ನು ನೋಡಬಹುದು. ಅಂದರೆ ಆಕೆಯು ತನ್ನ ಕಾಲದ ಸ್ತ್ರೀ ವೈದ್ಯರ ಜೊತೆಯಲ್ಲಿ ಪುರುಷ ವೈದ್ಯರಿಗೂ ಮಾರ್ಗದರ್ಶನವನ್ನು ನೀಡುತ್ತಿದ್ದಿರಬಹುದು. ಪ್ರಾಚೀನ ಈಜಿ ದೇಶದಲ್ಲಿ ‘ಸಯಸ್’ ಎಂಬ ನಗರವಿತ್ತು. ಆ ನಗರದ ದೇವಾಲಯವು ಧಾರ್ಮಿಕ ಕೇಂದ್ರವಾಗಿರುವುದರ ಜೊತೆಯಲ್ಲಿ ಶೈಕ್ಷಣಿಕ ಹಾಗೂ ವೈದ್ಯಕೀಯ ಕೇಂದ್ರವೂ ಆಗಿತ್ತು. ಇಲ್ಲಿ ಪೆಸೆಷೆತ್ (ಕ್ರಿ.ಪೂ.೨೫೦೦) ಎಂಬ ಮಹಿಳೆಯು ವೈದ್ಯಳಾಗಿದ್ದ ಬಗ್ಗೆ ಹಾಗೂ ‘ಮಹಿಳಾ ವೈದ್ಯರ ಮೇಲ್ವಿಚಾರಕಿ’ ಆಗಿದ್ದ ಬಗ್ಗೆ ಮಾಹಿತಿಯು ದೊರೆಯುತ್ತದೆ.

ಈಕೆಯ ಈಜಿ ಅರಸನ ಖಾಸಗಿ ವೈದ್ಯೆಯಾಗಿದ್ದಳು. ಈಕೆ ಸೂಲಗಿತ್ತಿಯರಿಗೆ ತರಬೇತಿಯನ್ನು ನೀಡುವ ಶಾಲೆಯನ್ನು ನಡೆಸುತ್ತಿದ್ದಳು. ಅನೇಕ ವಿದ್ಯಾರ್ಥಿ ನಿಯರು ಸೂಲಗಿತ್ತಿತನದ ಸೂಕ್ಷ್ಮಗಳನ್ನು ಕಲಿಯುತ್ತಿದ್ದರು. ಅವರಿಗೆ ಪೆಸೆಷೆತ್ ಶಿಕ್ಷಣವನ್ನು ನೀಡುತ್ತಿದ್ದಳು. ಮೆಸೊಪೊಟೋಮಿಯದ ‘ಗಾರ್ಸಾನ’ ಎಂಬ ನಗರದಲ್ಲಿ ಉಬರ್ಟಮ್ (ಕ್ರಿ.ಪೂ.೨೦೭೦) ಎಂಬ ವೈದ್ಯೆ ಇದ್ದಳು. ಉಬರ್ಟಮ್‌ಳಿಗೆ ಸಂಬಂಧಿಸಿದ ೫೦ ಕ್ಯೂನಿಫಾರಂ ಬರಹಗಳಲ್ಲಿ ೧೧ ಬರಹ ಗಳು ಆಕೆಯನ್ನು ‘ವೈದ್ಯೆ’ ಎಂದು ಕರೆದಿವೆ. ಈಕೆಯು ವೈದ್ಯರ ಕುಟುಂಬದಲ್ಲಿಯೇ ಹುಟ್ಟಿದ್ದ ಕಾರಣ, ವೈದ್ಯಕೀಯವನ್ನೇ ಆರಿಸಿಕೊಂಡದ್ದು ಸಹಜ ವಾಗಿದೆ.

ಪ್ರಾಚೀನ ಗ್ರೀಸ್ ಸಂಸ್ಕೃತಿಯಲ್ಲಿ (ಕ್ರಿ.ಪೂ.೫೦೦) ಅಥೀನ ಎಂಬ ದೇವತೆಯು ಅಂಧತ್ವವನ್ನು ಗುಣಪಡಿಸುವ ದೇವತೆಯಾಗಿದ್ದಳು. ‘ಹೆರಾ’ ಮುಖ್ಯ ವೈದ್ಯಕೀಯ ದೇವತೆ. ‘ಲೇಟೋ’ ಎಂಬ ಶಸವೈದ್ಯೆ ಇದ್ದಳು. ಈಕೆಯು ದೇವತೆಗಳ ಅರಸ ‘ಸ್ಯೂಸ್’ನ ಪತ್ನಿ ಹಾಗೂ ‘ಅಪೋಲೊ’ವಿನ ತಾಯಿ. ರೋಮ್ ನಗರವನ್ನು ಸ್ಥಾಪಿಸಿದ ‘ಅರ್ನಿಯಸ್’ ಗೆ ಆದ ಗಾಯಗಳನ್ನು ಈಕೆಯು ಗುಣಪಡಿಸಿದಳು. ಅಪೋಲೊವಿನ ಮಗ ‘ಅಯಸ್ಕ್ಲುಪಿಯಸ್’. ಈತನು ವೈದ್ಯ ಕೀಯ ಚಿಕಿತ್ಸೆಯ ಅಧಿಕೃತವಾಗಿ ದೈವವಾದ ಮಾನವ. ಇವನ ಹಾವು ಸುತ್ತಿಕೊಂಡಿರುವ ದಂಡವು ಇಂದಿಗೂ ಆಧುನಿಕ ವೈದ್ಯಕೀಯದ ಲಾಂಛನ ವಾಗಿದೆ. ಈತನಿಗೆ ನಾಲ್ವರು ಹೆಣ್ಣು ಮಕ್ಕಳು.

ಅವರೆಲ್ಲರೂ ವೈದ್ಯೆಯರಾಗಿದ್ದರು. ‘ಹೈಜಿಯ’ ಆರೋಗ್ಯ ಮತ್ತು ಸ್ವಚ್ಛತೆಯ, ‘ಅಯಾಸೊ’ ಗುಣಪಡಿಸುವ, ‘ಅಜಿಲ’ ಉತ್ತಮ ಆರೋಗ್ಯದ ಹಾಗೂ ‘ಪನಾಶಿಯ’ ಸರ್ವರೋಗ ಗುಣಕಾರಿಯಾಗಿ ಪ್ರಸಿದ್ಧರಾಗಿದ್ದರು. ಹೋರ್ಮ ಟ್ರೋಜನ್ ಯುದ್ಧವು ನಡೆಯುವ ಮೊದಲೇ ಬದುಕಿದ್ದ ಅಗಮೇಡ್
ಎಂಬ ಮಹಿಳಾ ವೈದ್ಯೆಯ ಬಗ್ಗೆ ಬರೆದಿದ್ದಾನೆ.

ಕ್ರಿ.ಪೂ.೫೦೦ ನಂತರದ ಗ್ರೀಕ್ ಸಾಮ್ರಾಜ್ಯದಲ್ಲಿ ಮಹಿಳೆಯರ ಸ್ಥಾನಮಾನ ಕ್ರಮೇಣ ಇಳಿಮುಖವಾಗಲಾರಂಭಿಸಿತು. ಮಹಿಳೆಯರು ಕೇವಲ ‘ಸಂತಾನ ವರ್ಧನಾ ಯಂತ್ರಗಳ’ ಎಂಬ ಅಭಿಪ್ರಾಯವು ಬಲವಾಯಿತು. ಇದು ವೈದ್ಯಕೀಯ ಕ್ಷೇತ್ರಕ್ಕೂ ವ್ಯಾಪಿಸಿತು. ಹಾಗಾಗಿ ಹಿಪ್ಪೋಕ್ರೇಟ್ಸ್ ಆದಿಯಾಗಿ ಯಾವೊಬ್ಬ ವೈದ್ಯನು ವಿದ್ಯಾರ್ಥಿನಿಯರನ್ನು ಸ್ವೀಕರಿಸಲಿಲ್ಲ. ಆದರೆ ಪ್ರಸೂತಿ ತಂತ್ರ ಹಾಗೂ ಸೀರೋಗಗಳಿಗೆ ಸಂಬಂಧಪಟ್ಟ ಹಾಗೆ, ಆನುವಂಶಿಕವಾಗಿ ದಾದಿಯರ ಕೆಲಸವನ್ನು ಮಾಡಿಕೊಂಡು ಬರುತ್ತಿದ್ದ ಮಹಿಳೆಯರೇ, ತಮಗೆ ಗೊತ್ತಿದ್ದ ಚಿಕಿತ್ಸೆಯನ್ನು ನೀಡುತ್ತಿದ್ದರು.

ಹಾಗಾಗಿ ಮಹಿಳಾ ಆರೋಗ್ಯವು ಅಧೋಗತಿಗೆ ಇಳಿದಿತ್ತು. ಈ ಬಗ್ಗೆ ಅಂದಿನ ಪುರುಷ ಪ್ರಧಾನ ಸಮಾಜವು ಅಷ್ಟಾಗಿ ತಲೆ ಕೆಡಿಸಿಕೊಂಡಿರಲಿಲ್ಲ. ಹೆರಿಗೆ ಯಲ್ಲಿ ತಾಯಂದಿರು ಸಾಯುವುದು ಸರ್ವೇಸಾಮಾನ್ಯವಾಯಿತು. ಈ ಅವಧಿಯಲ್ಲಿದ್ದ ಆಗ್ನೋ ದೀಸ್ ಅಥವ ಆಗ್ನೋದಿಕೆ (ಕ್ರಿ.ಪೂ.೪೦೦) ಎಂಬ ಮಹಿಳಾ ವೈದ್ಯೆ ಹಾಗೂ ಸೂಲಗಿತ್ತಿಯ ಬಗ್ಗೆ ಗೈಸ್ ಜೂಲಿಯಸ್ ಹೈಜಿನಸ್ (ಕ್ರಿ.ಪೂ.೬೭-ಕ್ರಿ.ಪೂ.೧೭) ಎಂಬ ಲೇಖಕನು ತನ್ನ ‘ಫ್ಯಾಬುಲೆ’ ಪುಸ್ತಕದಲ್ಲಿ ಬರೆದಿರುವುದು ಗಮನೀಯ. ಆಗ್ನೋದಿಕೆ ತನ್ನ ಸುತ್ತಮುತ್ತಲಿನ ಮಹಿಳೆಯರು ಹೆರಿಗೆಯಲ್ಲಿ ಅನುಭವಿಸುವ ನಾನಾ ನೋವುಗಳನ್ನು ಕಣ್ಣಾರೆ ಕಂಡಳು. ಅಂದಿನ ದಿನಗಳಲ್ಲಿ ಪುರುಷ ವೈದ್ಯರು ನೇರವಾಗಿ ಹೆರಿಗೆಯನ್ನು ಮಾಡಿಸುವಂತಿರಲಿಲ್ಲ.

ಸೂಲಗಿತ್ತಿಯರು ಹೆರಿಗೆಯನ್ನು ಮಾಡಿಸುತ್ತಿದ್ದರು. ಪುರುಷ ವೈದ್ಯರು ಹೊರಗಿನಿಂದಲೇ ಮಾರ್ಗದರ್ಶನವನ್ನು ನೀಡಬೇಕಾಗಿತ್ತು. ಹಾಗಾಗಿ ಮಹಿಳೆಯರ ನೋವು-ಸಮಸ್ಯೆಗಳು ಪುರುಷ ವೈದ್ಯರ ಗಮನಕ್ಕೆ ಬರುತ್ತಿರಲಿಲ್ಲ. ಹಾಗಾಗಿ ಆಗ್ನೋದಿಕೆ ವೈದ್ಯಕೀಯವನ್ನು ಕಲಿಯಬೇಕೆಂಬ ಪಣತೊಟ್ಟಳು. ಆದರೆ
ಅಂದಿನ ದಿನಗಳಲ್ಲಿ ಮಹಿಳೆಯರಿಗೆ ವೈದ್ಯಕೀಯವನ್ನು ಕಲಿಯಲು ಅನುಮತಿಯಿರಲಿಲ್ಲ. ಹಾಗಾಗಿ ಆಗ್ನೋದಿಕೆ ತನ್ನ ಸ್ವರೂಪವನ್ನು ಬದಲಿಸಿ ಕೊಂಡು ಪುರುಷನಾದಳು.

ಈಜಿಪ್ಟಿನ ಅಲೆಗ್ಸಾಂಡ್ರಿಯಕ್ಕೆ ಹೋದಳು. ಅಲ್ಲಿ ಪ್ರಖ್ಯಾತ ಹೆರೋಫಿಲಸ್ (ಕ್ರಿ.ಪೂ.೩೩೫-ಕ್ರಿ.ಪೂ.೨೮೦) ಬಳಿ ವೈದ್ಯಕೀಯವನ್ನು ಕಲಿತಳು. ಹೆರೋಫಿ ಲಸ್ ಸಮಕಾಲಿನ ಪ್ರಖ್ಯಾತ ವೈದ್ಯನಾಗಿದ್ದ ಹಾಗೂ ಅಂಗರಚನ ವಿಜ್ಞಾನದ ಅಧ್ವರ್ಯುಗಳಲ್ಲಿ ಒಬ್ಬನಾಗಿದ್ದ. ಅಗ್ನೋದಿಕೆ ಅಲೆಗ್ಸಾಂಡ್ರಿಯ ದಲ್ಲಿ ತನ್ನ ವೈದ್ಯಕೀಯ ಶಿಕ್ಷಣವನ್ನು ಪೂರ್ಣಗೊಳಿಸಿದಳು. ನಂತರ ಅಥೆನ್ಸಿಗೆ ಹಿಂದಿರುಗಿದಳು. ಒಂದು ದಿನ ಅಥೆ ನಗರದ ಒಂದು ರಸ್ತೆಯಲ್ಲಿ ನಡೆದು ಕೊಂಡು ಬರುತ್ತಿದ್ದಳು. ಆಗ ಆಕೆಗೆ ಒಂದು ಮನೆಯಿಂದ ಹೆಣ್ಣೊಬ್ಬಳು ಚಿಟ್ಟನೆ ಚೀರುವುದು ಕೇಳಿಸಿತು. ಕೂಡಲೇ ಆ ಮನೆಯತ್ತ ಧಾವಿಸಿದಳು. ಅಲ್ಲಿ ಓರ್ವ ಮಹಿಳೆಯು ಹೆರಿಗೆಯು ಸರಾಗವಾಗಿ ಆಗದೆ ವಿಪರೀತ ನೋವನ್ನು ತಿನ್ನುತ್ತಿದ್ದಳು.

ಆಕೆಗೆ ತಾನು ಸಹಾಯ ಮಾಡುವುದಾಗಿ ಆಗ್ನೋದಿಕೆ ಮುನ್ನುಗ್ಗಿದಾಗ, ಪುರುಷ ವೇಷದಲ್ಲಿ ಆಕೆಯನ್ನು ಅಲ್ಲಿದ್ದ ಮಹಿಳೆಯರು ತಡೆದರು. ಕೂಡಲೇ ಆಕೆ ತನ್ನ ಉಡುಪನ್ನು ಸಡಿಲಿಸಿ, ‘ತಾನು ಗಂಡಲ್ಲ ಹೆಣ್ಣು’ ಎನ್ನುವುದನ್ನು ತೋರಿದಳು. ಮನೆಮಂದಿಯ ಒಪ್ಪಿಗೆಯು ದೊರೆಯುತ್ತಿರುವಂತೆಯೇ ಆಗ್ನೋದಿಕೆ ಹೆರಿಗೆಯನ್ನು ಸರಾಗವಾಗಿ ಮಾಡಿಮುಗಿಸಿದಳು. ಈ ಸುದ್ದಿಯು ಮಹಿಳಾಮಂಡಾಲದಲ್ಲಿ ಗುಟ್ಟಾಗಿ ಹರಡಿತು. ಒಮ್ಮೆಲೆ ಆಗ್ನೋದಿಕೆಯ ಜನಪ್ರಿಯತೆಯು ತುತ್ತ ತುದಿಗೇರಿತು. ಎಲ್ಲರೂ ಆಕೆಯ ಬಳಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಮುಂದಾಗುತ್ತಿದ್ದರು.

ಪುರುಷ ವೈದ್ಯರಿಗೆ ಕೆಲಸವಿಲ್ಲದಂತಹ ಸ್ಥಿತಿಯು ಉಂಟಾಯಿತು. ಇದು ಅವರಿಗೆ ಸಹನೀಯವೆನಿಸಲಿಲ್ಲ. ಹಾಗಾಗಿ ಅವರೆಲ್ಲ ಒಂದೆಡೆ ಸೇರಿ ಚರ್ಚಿಸಿ ಒಂದು ವಾಮ ತೀರ್ಮಾನಕ್ಕೆ ಬಂದರು. ಈ ಹೊಸ ವೈದ್ಯನು ಅಥೆ ನಗರದ ಗಣ್ಯಾತಿಗಣ್ಯ ಮಹಿಳೆಯರ ಜೊತೆ ಅಸಭ್ಯವಾಗಿ ನಡೆದುಕೊಳ್ಳುತ್ತಾನೆಂದು ಅವರನ್ನು ಬುಟ್ಟಿಯೊಳಗೆ ಹಾಕಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆಂದು ದೂರಿದರು. ಈ ವೈದ್ಯರ ಒತ್ತಡವು ತೀವ್ರವಾದಾಗ, ನಗರ ನ್ಯಾಯಾಧೀಶರು ಆಕೆಯನ್ನು ವಿಚಾರಣೆಗೆ ಕರೆದರು.

ಅಗ್ನೋದಿಕೆ ನ್ಯಾಯಾಲಯದಲ್ಲಿ ವಿಚಾರಣೆಯನ್ನು ಎದುರಿಸಿದಳು. ಆಗ್ನೋದಿಕೆ ಹೆಚ್ಚು ಮಾತನಾಡಲಿಲ್ಲ. ಎಲ್ಲ  ನ್ಯಾಯಾಧೀಶರ ಮುಂದೆ ತನ್ನ ಉಡುಪನ್ನು ಕಳಚಿದಳು. ತಾನು ಗಂಡಲ್ಲ, ಹೆಣ್ಣು ಎನ್ನುವುದನ್ನು ಬಹಿರಂಗವಾಗಿ ತೋರಿಸಿದಳು. ತಾನು ಹೆಣ್ಣಾಗಿ ಮಹಿಳೆಯರನ್ನು ಬುಟ್ಟಿಗೆ ಹೇಗೆ ತಾನೆ ಹಾಕಿಕೊಳ್ಳಲು ಸಾಧ್ಯ ಎಂದು ಪ್ರಶ್ನಿಸಿದಳು. ಪುರುಷ ವೈದ್ಯರ ದೂರಿನಲ್ಲಿ ಯಾವುದೇ ಹುರುಳಿಲ್ಲ ಎಂದು ವಾದಿಸಿದಳು. ಅಲ್ಲಿ ನೆರೆದಿದ್ದ ವೈದ್ಯ ರೆಲ್ಲರಿಗೆ ಆಶ್ಚರ್ಯದ ಜೊತೆಯಲ್ಲಿ ವಿಪರೀತ ಕೋಪ ಬಂದಿತು. ಗ್ರೀಸ್ ಸಾಮ್ರಾಜ್ಯದ ನಿಯಮಕ್ಕೆ ವಿರುದ್ಧವಾಗಿ ಆಕೆ ವೈದ್ಯಕೀಯ ಶಿಕ್ಷಣವನ್ನು ಪಡೆದಿದ್ದಳು. ಅಷ್ಟು ಸಾಲದು ಎಂಬಂತೆ ಅಕ್ರಮವಾಗಿ ವೈದ್ಯಕೀಯ ವೃತ್ತಿಯಲ್ಲಿ ತೊಡಗಿದ್ದಳು.

ಇದು ಅಪರಾಧ. ಆಕೆಗೆ ದೊಡ್ಡ ಶಿಕ್ಷೆಯಾಗಬೇಕು ಎಂದು ಹುಯ್ಯಲಿಟ್ಟರು. ಆಗ ಅಥೆನ್ಸಿನ ಮಹಿಳೆಯರು ಒಮ್ಮೆಲೆ ಮುಗಿ ಬಿದ್ದರು. ಆಗ್ನೋದಿಕೆಯ ಪರವಾಗಿ ನಿಂತರು. ‘ಆಗ್ನೋದಿಕೆಯು ನಿಜಕ್ಕೂ ಮಹಿಳೆಯರ ನೋವು-ಸಮಸ್ಯೆಗಳನ್ನು ಅರ್ಥ ಮಾಡಿಕೊಂಡ ಮೊದಲ ವೈದ್ಯೆ. ನಮಗೇನು ಬೇಕೋ
ಅದನ್ನು ಆಗ್ನೋದಿಕೆ ನೀಡಿದ್ದಾಳೆ. ಆಕೆಯ ಚಿಕಿತ್ಸೆಯಿಂದ ನಾವೆಲ್ಲರೂ ಸಂತುಷ್ಟರಾಗಿದ್ದೇವೆ. ಆಕೆಗೆ ನೀವು ಯಾವುದೇ ರೀತಿಯಾದ ಶಿಕ್ಷೆಯನ್ನು ನೀಡುವಂತಿಲ್ಲ. ಬದಲಿಗೆ ನೀವು ಆಕೆಗೆ ಅಧಿಕೃತವಾಗಿ ವೈದ್ಯಕೀಯ ವೃತ್ತಿಯನ್ನು ನಡೆಸಲು ಪರವಾನಗಿಯನ್ನು ಕೊಡಬೇಕು’ ಎಂದು ಎಲ್ಲಿಲ್ಲದ
ಒತ್ತಡವನ್ನು ಹಾಕಿದರು.

ಅಥೆ ನಗರದ ಎಲ್ಲ ಪ್ರಮುಖ ವ್ಯಕ್ತಗಳ ಮಡದಿಯರು ಒಮ್ಮೆಲೆ ಒತ್ತಡವನ್ನು ಹಾಕಿದಾಗ ಬಡಪಾಯಿ ಗಂಡಸರಿಗೆ ಬೇರೆ ದಾರಿ ಕಾಣಲಿಲ್ಲ. ಹಾಗಾಗಿ
ಮೊದಲ ಬಾರಿಗೆ ಅಥೆ ನಗರದಲ್ಲಿ ಓರ್ವ ಮಹಿಳಾ ವೈದ್ಯೆಗೆ ತನ್ನ ವೃತ್ತಿಯಲ್ಲಿ ತೊಡಗಲು ಅಧಿಕೃತ ಪರವಾನಗಿಯು ದೊರೆಯುತ್ತದೆ. ಇದರೊಡನೆ ಗ್ರೀಸ್
ದೇಶದಲ್ಲಿ ಹೊಸ ಮನ್ವಂತರವು ಆರಂಭವಾಯಿತು.