Friday, 29th November 2024

ಅನ್ನದ ಬದಲು ಚಿನ್ನದ ಬೆಲೆ ಇಳಿಕೆ !

ಅಭಿಮತ

ಮಂಜುನಾಥ ಭಂಡಾರಿ

ನರೇಂದ್ರ ಮೋದಿಯವರು ಪ್ರಧಾನಿಯಾದಾಗಿನಿಂದಲೂ ಅಚ್ಚೇ ದಿನಗಳ ಕನಸುಗಳನ್ನು ಜನರಲ್ಲಿ ಬಿತ್ತುತ್ತಲೇ ಇದ್ದಾರೆ. ಈ ಬಾರಿ ಇನ್ನೂ ಒಂದು ಹೆಜ್ಜೆ
ಮುಂದೆ ಹೋಗಿ, ‘ವಿಕಸಿತ ಭಾರತ’ ಎಂಬ ಹಗಲುಗನಸನ್ನು ಬಿತ್ತಿ ತೀವ್ರ ನಿರಾಶಾದಾಯಕ ಬಜೆಟ್ ನೀಡಿದ್ದಾರೆ. ಕರ್ನಾಟಕದಿಂದಲೇ ಆಯ್ಕೆಯಾದ ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ನಾಡಿನ ಪ್ರಗತಿಯ ಕುರಿತು ಎಳ್ಳಷ್ಟೂ ಆಲೋಚನೆ ಮಾಡಿದಂತಿಲ್ಲ. ವಿಕಸಿತ ಭಾರತವಿರಲಿ, ಈ ಬಜೆಟ್ ದೇಶದ ಮುಂದಿನ ಒಂದು ವರ್ಷದ ಬೇಡಿಕೆಗಳನ್ನು ಕೂಡ ಈಡೇರಿಸಲು ಅಶಕ್ಯವಾಗಿದೆ.

ಈ ಬಜೆಟ್‌ನಿಂದ ಕರ್ನಾಟಕವನ್ನು ಹೊರಗಿಟ್ಟಿರುವುದು ಎಲ್ಲಕ್ಕಿಂತ ಹೆಚ್ಚು ಬೇಸರ ತರಿಸಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ದಾಖಲೆಯ ಬಹುಮತ ಗಳಿಸಿದ ಕಾಂಗ್ರೆಸ್, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಜನಪರ ಆಡಳಿತ
ನೀಡುತ್ತಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯ ಸರಕಾರವೊಂದೇ ಎಲ್ಲವನ್ನೂ ನಿಭಾಯಿಸಲು ಸಾಧ್ಯವಾಗುವುದಿಲ್ಲ. ಏಕೆಂದರೆ ತೆರಿಗೆ ಹಂಚಿಕೆ, ಅನುದಾನ ಮೊದಲಾದವುಗಳಲ್ಲಿ ಕೇಂದ್ರ ಸರಕಾರ ಸರಿಯಾದ ಬೆಂಬಲ, ಮಾರ್ಗದರ್ಶನ ನೀಡಿದರೆ ಮಾತ್ರ ಅಭಿವೃದ್ಧಿಯ ರಥವನ್ನು ಸರಾಗವಾಗಿ ಮುನ್ನಡೆಸಲು ಸಾಧ್ಯ.

https://youtube.com/live/YUhHYTtCbjM?feature=share

ಅಭಿವೃದ್ಧಿಯ ವಿಚಾರದಲ್ಲೂ ರಾಜಕೀಯ ದ್ವೇಷ ಸಾಧಿಸಿದ ಬಿಜೆಪಿ, ಅನುದಾನ ತಾರತಮ್ಯ, ಬರ ಪರಿಹಾರದಲ್ಲಿ ವಿಳಂಬ ಹಾಗೂ ವಂಚನೆ, ತೆರಿಗೆ ಹಂಚಿಕೆಯಲ್ಲಿ ಮೋಸ, ಅನ್ನಭಾಗ್ಯಕ್ಕೆ ಅಕ್ಕಿ ಸಿಗದಂತೆ ಮಾಡಿದ್ದು, ಹೀಗೆ ಅನೇಕ ಬಗೆಯಲ್ಲಿ ಜನರ ಹಿತವನ್ನು ಕಡೆಗಣಿಸಿ ರಾಜಕೀಯ ಮೇಲಾಟ ಮಾಡಿದೆ. ಈ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಹಿಂದಿನಂತೆ ಬಹುಮತ ಬಾರದೇ ಇರಲು ಇದು ಕೂಡ ಕಾರಣ ಎಂಬುದನ್ನು ಅಲ್ಲಗಳೆಯು ವಂತಿಲ್ಲ. ಈಗ ಬೇರೆ ಪಕ್ಷಗಳನ್ನು ನಂಬಿಕೊಂಡು ಹೊಸದಾಗಿ ಸರಕಾರ ರಚಿಸಿದ ಮೇಲಾದರೂ ಪ್ರಧಾನಿ ನರೇಂದ್ರ ಮೋದಿ ತಮ್ಮ ಮನಸ್ಥಿತಿ ಬದಲಿಸಿ ಕೊಂಡು ಎಲ್ಲ ರಾಜ್ಯಗಳನ್ನು ಸಮಾನವಾಗಿ ಕೊಂಡೊಯ್ಯುತ್ತಾರೆ ಎಂದೇ ಅನೇಕರು ಭಾವಿಸಿದ್ದು, ಅದು ಈ ಬಜೆಟ್ ಮೂಲಕ ಹುಸಿಯಾಗಿದೆ.

ಇದು ದೇಶದ ಅಭಿವೃದ್ಧಿಯ ಬಜೆಟ್ ಅಲ್ಲ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಹೆದರಿ ಕೇಂದ್ರ ಸರಕಾರ ಈ ಬಜೆಟ್ ನೀಡಿದೆ. ಅಧಿಕಾರ ಕಳೆದುಕೊಳ್ಳುವ ಭಯದಿಂದ ಇಂತಹ ಬಜೆಟ್ ರೂಪಿಸಿದ್ದಾರೆ ಎನ್ನುವುದು ಇಲ್ಲಿ ಸ್ಪಷ್ಟ. ಇದರ ಪರಿಣಾಮ ಕನ್ನಡಿಗರಿಗೆ ಮತ್ತೊಮ್ಮೆ ಭಾರಿ ಅನ್ಯಾಯವಾಗಿದೆ. ಕಳೆದ ಬಾರಿ ೨೫ ಸ್ಥಾನಗಳನ್ನು ಕೊಟ್ಟಿದ್ದ ಕರ್ನಾಟಕದ ಜನತೆ, ಈ ಬಾರಿ ಕೇವಲ ೧೭ ಸ್ಥಾನಗಳನ್ನು ಕೊಟ್ಟಿzರೆ. ಜೆಡಿಎಸ್‌ನ ಸ್ಥಾನಗಳು ಸೇರಿದಂತೆ ಅದು ಒಟ್ಟು ೧೯. ಆದರೂ ಕನ್ನಡಿಗರಿಗೆ ಅನುಕೂಲವಾಗುವ ಯಾವುದೇ ರೀತಿಯ ಅಂಶ ಇದರಲ್ಲಿಲ್ಲ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಇದು ‘ನಿತೀಶ್-ನಾಯ್ಡು ಬಜೆಟ್’.

https://youtube.com/live/qavXJViJfXE?feature=share

ದಕ್ಷಿಣ ಭಾರತಕ್ಕೆ ಈ ಬಜೆಟ, ತಾರತಮ್ಯದ ಹೊಸ ಧೋರಣೆಯನ್ನು ನೀಡಿದೆ. ಸಮಗ್ರ ದೃಷ್ಟಿಕೋನದಿಂದ ಎಲ್ಲ ರಾಜ್ಯಗಳನ್ನು ನೋಡಿಲ್ಲ. ತಮಿಳು ನಾಡು, ಕರ್ನಾಟಕ, ಕೇರಳ-ಹೀಗೆ ಬಿಜೆಪಿ ಆಡಳಿತವಿಲ್ಲದ ರಾಜ್ಯಗಳನ್ನು ಕಡೆಗಣಿಸಲಾಗಿದೆ. ಪೂರ್ವ ಭಾಗದ ರಾಜ್ಯಗಳಿಗಾಗಿ ‘ಪೂರ್ವೋದಯ’
ಯೋಜನೆ ನೀಡಿ, ಅದರಲ್ಲಿ ದಕ್ಷಿಣದ ಆಂಧ್ರಪ್ರದೇಶವನ್ನು ಸೇರಿಸಲಾಗಿದೆ. ಇದೇ ರೀತಿ ‘ದಕ್ಷಿಣೋದಯ’ ಎಂಬ ಯೋಜನೆಯನ್ನು ತಂದು ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳಿಗೆ ಹೊಸ ಯೋಜನೆ ನೀಡಬಹುದಿತ್ತು.

ಈ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಹೈದಾರಾಬಾದ್-ಬೆಂಗಳೂರು ಕೈಗಾರಿಕಾ ಕಾರಿಡಾರ್ ಸಿಕ್ಕಿರುವುದೇನೋ ನಿಜ. ಆದರೆ ಈ ಸರಕಾರದ ಹಿಂದಿನ ಅಭಿವೃದ್ಧಿ ಹೆಜ್ಜೆಗಳನ್ನು ನೋಡಿದರೆ ಇದು ಕೂಡ ಜಾರಿಯಾಗುವುದು ಅನುಮಾನ. ಭದ್ರಾ ಮೇಲ್ದಂಡೆ ಯೋಜನೆಗೆ ೫,೩೦೦ ಕೋಟಿ ರು. ಅನುದಾನ ನೀಡುವುದಾಗಿ ಹಿಂದಿನ ಬಜೆಟ್‌ನ ಹೇಳಿದ್ದರೂ, ಒಂದು ರುಪಾಯಿ ಕೂಡ ಈವರೆಗೆ ಸಿಕ್ಕಿಲ್ಲ. ಇದರ ಜತೆಗೆ ಇನ್ನಷ್ಟು ಯೋಜನೆಗಳಿಗೂ ಕೇಂದ್ರದಿಂದ ಅನುದಾನ ಬಂದಿಲ್ಲ.

ಹೀಗೆಯೇ ಈ ಕಾರಿಡಾರ್ ಯೋಜನೆ ಕೇವಲ ಘೋಷಣೆಯಾಗಿಯೇ ಉಳಿಯಲಿದೆ ಎಂಬುದರಲ್ಲಿ ಅನುಮಾನ ಬೇಡ. ಬಿಪಿಎಲ್ ವರ್ಗದ ಜನರು, ಕೆಳ ಮಧ್ಯಮ ವರ್ಗದ ಜನರು, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಜನರಿಗೆ ವಿಶೇಷ ಯೋಜನೆಗಳು ಸಿಕ್ಕಿಲ್ಲ. ಕೃಷಿ ವಿಚಾರದಲ್ಲಿ ಕೇಂದ್ರ ಸರಕಾರ
ಹಿಂದಿನಿಂದಲೂ ಪ್ರಗತಿಗೆ ವಿರುದ್ಧವಾಗಿ ನಡೆಯುತ್ತಿದೆ. ಕನಿಷ್ಠ ಬೆಂಬಲ ಬೆಲೆ ಕಾಯಿದೆಯನ್ನು ರೂಪಿಸುವಂತೆ ರೈತರು ಬಹಳ ವರ್ಷಗಳಿಂದ ಒತ್ತಾಯಿಸುತ್ತಿದ್ದಾರೆ. ಈ ಬಗ್ಗೆ ಬಜೆಟ್‌ನಲ್ಲಿ ಯಾವುದೇ ಪ್ರಸ್ತಾಪವಿಲ್ಲ.

ನಿರುದ್ಯೋಗಿಗಳ ಸಮಸ್ಯೆಯ ಕಡೆಗೆ ಗಮನಹರಿಸಬೇಕಿರುವುದು ಸರಕಾರದ ಪ್ರಮುಖ ಹೊಣೆಗಾರಿಕೆ. ಕಾಂಗ್ರೆಸ್ ಸರಕಾರ ನಿರುದ್ಯೋಗಿಗಳಿಗಾಗಿ ಯುವ ನಿಧಿ ಜಾರಿ ಮಾಡುವುದರ ಜತೆಗೆ ಉದ್ಯೋಗಾವಕಾಶ ಸೃಷ್ಟಿಸುತ್ತಿದೆ. ಇಂತಹ ಬಲವಾದ ವಿಶೇಷ ಯೋಜನೆಯನ್ನು ತರಲು ಕೇಂದ್ರ ಸರಕಾರಕ್ಕೆ
ಇನ್ನೂ ಸಾಧ್ಯವಾಗಿಲ್ಲ ಎಂಬುದು ಬೇಸರ ತಂದಿದೆ. ಮಹಾದಾಯಿ, ಎತ್ತಿನಹೊಳೆ, ಮೇಕೆದಾಟು, ಕೃಷ್ಣಾ ಮೇಲ್ದಂಡೆ ಹೀಗೆ ಅನೇಕ ನೀರಾವರಿ ಯೋಜನೆ ಗಳ ಬಗ್ಗೆ ಪ್ರಸ್ತಾಪ ಮಾಡುವಷ್ಟು ಕಿಂಚಿತ್ತು ಕಾಳಜಿಯನ್ನೂ ಕೇಂದ್ರ ಸರಕಾರ ತೋರಿಲ್ಲ. ಕೋಲ್ಕತ್ತಾ, ಚೆನ್ನೈ, ಮುಂಬೈಗಿಂತಲೂ ಬೆಂಗಳೂರು ಐಟಿ ಹಬ್ ಆಗಿ ಬೆಳೆದಿದೆ. ಈ ಸಿಲಿಕಾನ್ ವ್ಯಾಲಿಯಿಂದ ಕೇಂದ್ರ ಸರಕಾರ ಅತಿ ಹೆಚ್ಚು ತೆರಿಗೆ ಪಡೆಯುತ್ತಿದೆ.

ಹೆಚ್ಚು ತೆರಿಗೆ ನೀಡುವ ದೊಡ್ಡ ರಾಜಧಾನಿಯೂ ಬೆಂಗಳೂರೇ. ಆದರೂ ರಾಜಕೀಯ ದೃಷ್ಟಿಯಿಂದ ಈ ಮಹಾನಗರವನ್ನು ಬಜೆಟ್‌ನಲ್ಲಿ ಕಡೆಗಣಿಸ ಲಾಗಿದೆ. ಬೆಂಗಳೂರಿಗೆ ಪೆರಿಫೆರಲ್ ರಿಂಗ್ ರಸ್ತೆ, ಹೊರ ವರ್ತುಲ ರೈಲು ಸೇರಿ ಇನ್ಯಾವುದೇ ರೀತಿಯ ಅಭಿವೃದ್ಧಿ ಯೋಜನೆಗಳನ್ನು ಪರಿಗಣನೆಗೂ ತೆಗೆದು ಕೊಂಡಿಲ್ಲ. ರಾಜಧಾನಿಯ ಅಭಿವೃದ್ಧಿಗೆ ೧೧,೪೮೫ ಕೋಟಿ ರು. ನೀಡುವಂತೆ ರಾಜ್ಯ ಸರಕಾರ ಮನವಿ ಮಾಡಿತ್ತು. ಯಥಾಪ್ರಕಾರ ಈ ಮನವಿಗೆ ಯಾವುದೇ ಸ್ಪಂದನೆ ಸಿಕ್ಕಿಲ್ಲ.

ಅನ್ನದ ಬದಲು ಚಿನ್ನದ ಬೆಲೆ ಇಳಿಕೆ!
ಬೆಲೆ ಏರಿಕೆಗೂ ಎನ್‌ಡಿಎಗೂ ಅವಿನಾಭಾವ ಸಂಬಂಧವಿದೆ. ಜನಸಾಮಾನ್ಯರು ಪ್ರತಿ ದಿನ ಬಳಸುವ ವಸ್ತುಗಳ ದರವನ್ನು ಕಡಿಮೆ ಮಾಡುವ ಭರವಸೆ ಯನ್ನು ಈ ಬಜೆಟ್ ನೀಡಿಲ್ಲ. ಅನ್ನದ ಬದಲು ಚಿನ್ನದ ಬೆಲೆ ಕಡಿಮೆ ಮಾಡಿದ್ದಾರೆ. ದಿನಬಳಕೆಯ ವಸ್ತುಗಳಾದ ಬೇಳೆಕಾಳು, ಎಣ್ಣೆ ಮೊದಲಾದವುಗಳ ಬೆಲೆ ಗಗನಕ್ಕೆ ಮುಟ್ಟಿದೆ. ಜನರಿಗೆ ಸಿಲಿಂಡರ್ ನೀಡಿದ್ದೇ ನಾವು ಎಂದು ಹೇಳಿಕೊಳ್ಳುವವರು ಅಡುಗೆ ಅನಿಲದ ದರವನ್ನು ಇಳಿಸಿ ಜನರಿಗೆ ನೆರವಾಗುವ ಬಗ್ಗೆ ಚಿಂತನೆ ನಡೆಸಿಲ್ಲ. ಇವುಗಳ ಬಗ್ಗೆ ಗಮನಹರಿಸದೆ ಚಿನ್ನದ ಬೆಲೆ ಕಡಿಮೆ ಮಾಡಿರುವುದರಿಂದ ಅಂತಹ ಪ್ರಯೋಜನ ವಾಗಿಲ್ಲ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಈ ರಾಜ್ಯದಿಂದ ಐವರು ಕೇಂದ್ರ ಸರಕಾರದಲ್ಲಿ ಸಚಿವರಾಗಿದ್ದಾರೆ. ಈ ಒಬ್ಬೊಬ್ಬ ಸಚಿವರು ಒಂದೊಂದು ವಿಶೇಷ ಯೋಜನೆಗಳಿಗಾಗಿ ಅಥವಾ ಅನುದಾನಕ್ಕೆ ಮನವಿ ಮಾಡಿ ರಾಜ್ಯಕ್ಕೆ ಕೊಡುಗೆ ತರಬಹುದಿತ್ತು. ಅಂತಹ ಯಾವುದೇ ಪ್ರಯತ್ನ ನಡೆದಿಲ್ಲ. ಅಂತೂ ತಾರತಮ್ಯ ಎಂಬ ಧೋರಣೆ ಮತ್ತೊಮ್ಮೆ ಈ ಬಜೆಟ್‌ನಲ್ಲಿ ಪ್ರತಿಧ್ವನಿಸಿದೆ.

(ಲೇಖಕರು: ಶಾಸಕರು ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ)