Sunday, 10th November 2024

ಆರೋಗ್ಯ, ಅಧಿಕಾರದ ತಾಕಲಾಟ

ನಾಡಿಮಿಡಿತ
ವಸಂತ ನಾಡಿಗೇರ್

ಜಪಾನ್ ಪ್ರಧಾನಿ ಶಿಂಜೊ ಅಬೆ ಅವರು ಈಚೆಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಅವರ ಉತ್ತರಾಧಿಕಾರಿಯ ಹುಡುಕಾಟ ನಡೆದಿದೆ. ಇಂಥದೊಂದು ಸುದ್ದಿ ನನ್ನ ಗಮನ ಸೆಳೆಯಿತು. ಆದರೆ ಜಪಾನ್ ಪ್ರಧಾನಿ ರಾಜೀನಾಮೆ ಕೊಟ್ಟರೆ ಅದ್ಯಾಕೆ ಅಷ್ಟು ದೊಡ್ಡ ವಿಷಯವಾಗಬೇಕು. ಒಂದು ಲೆಕ್ಕಕ್ಕೆ ಅಮೆರಿಕದ ಅಧ್ಯಕ್ಷರು ರಾಜೀನಾಮೆ ನೀಡಿದ್ದರೆ ಹೌದು. ಅನ್ನಬಹುದಿತ್ತು ಎಂಬುದು ಸಾಮಾನ್ಯ ಅಭಿಪ್ರಾಯ.

ಹೌದು. ಜಪಾನ್ ಪ್ರಧಾನಿ ಮಾತ್ರ ಆಗಿದ್ದರೆ ಅದೇನೂ ಅಂಥ ಮಹತ್ವದ ಸುದ್ದಿ ಆಗುತ್ತಿರಲಿಲ್ಲ. ಶಿಂಜೊ ಅಬೆ ಅವರ ಹೆಸರನ್ನು ಸಹ ಬಹಳಷ್ಟು ಜನರು ಕೇಳಿರಲಿಕ್ಕೂ ಇಲ್ಲ. ಆದರೆ ಸುದ್ದಿ ಇರುವುದು ಅವರು ಯಾಕೆ ರಾಜೀನಾಮೆ ನೀಡಿದರು ಎಂಬುದರಲ್ಲಿ. ರಾಜೀನಾಮೆಗೆ ನೀಡಿರುವ ಕಾರಣ ಹೀಗಿದೆ. ‘ನನಗೆ ಆರೋಗ್ಯ ಸರಿಯಿಲ್ಲ. ಮೊದಲಿನಿಂದಲೂ ಕರುಳು ಸಂಬಂಧಿ ಸಮಸ್ಯೆಇದೆ. ಆದರೀಗ ಇದು ಉಲ್ಬಣಿಸಿದೆ.

ಅನಾರೋಗ್ಯ ಬಾಧಿಸುತ್ತಿರುವಾಗ ಅಧಿಕಾರದಲ್ಲಿ ಮುಂದುವರಿದರೆ ನಾನು ನನ್ನ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಲು ಸಾಧ್ಯವಾಗದು. ಇದರಿಂದ ನಮ್ಮ ದೇಶದ ಜನರಿಗೆ ಅನ್ಯಾಯವಾಗುತ್ತದೆ. ಇದು ನನಗೆ ಇಷ್ಟವಿಲ್ಲದಿರುವ ಕಾರಣ ರಾಜೀನಾಮೆ ನೀಡುತ್ತಿದ್ದೇನೆ. ಅಲ್ಲದೆ ಇನ್ನು ಎರಡು ವರ್ಷ ಅಧಿಕಾರಾವಧಿ ಇದ್ದರೂ ಮುಂಚಿತವಾಗಿ ರಾಜೀನಾಮೆ ನೀಡುವ ಮೂಲಕ ನನ್ನ ಕರ್ತವ್ಯವನ್ನು ಸಂಪೂರ್ಣವಾಗಿ ನಿಭಾಯಿಸಲು ಸಾಧ್ಯವಾಗಲಿಲ್ಲ ಎಂಬ ವಿಷಾದವಿದೆ.’

ಇದು ತಮ್ಮ ರಾಜೀನಾಮೆಯ ವಿಷಯವನ್ನು ಪ್ರಕಟಿಸಿದ ಸಂದರ್ಭದಲ್ಲಿ ಹೇಳಿದ ವಿಷಯ. ಹಾಗೆ ನೋಡಿದರೆ ಶಿಂಜೊ ಅಬೆಗೆ ಹೇಳಿಕೊಳ್ಳುವಂಥ ವಯಸ್ಸಾಗಿಲ್ಲ. ಈಗಿನ್ನೂ 65 ವರ್ಷ. ಹೋಗಲಿ. ಜನಪ್ರಿಯತೆ ಮುಕ್ಕಾಗಿದೆಯೇ. ಅದೂ ಇಲ್ಲ.
ವಾಸ್ತವವಾಗಿ ಜಪಾನ್ ದೇಶದ ಇತಿಹಾಸದಲ್ಲಿ ಅತಿ ದೀರ್ಘಕಾಲ ಅಧಿಕಾರದಲ್ಲಿದ್ದ ಪ್ರಧಾನಿ ಎಂಬ ಹೆಗ್ಗಳಿಕೆ ಅವರದು. ನಾಲ್ಕು ಅವಧಿಯಲ್ಲಿ ಸುಮಾರು ಎಂಟು ವರ್ಷ ಪ್ರಧಾನಿಯಾಗಿದ್ದವರು. ಜಪಾನಿನದು ಬಹಳ ವಿಚಿತ್ರವಾದ ಸಂಸದೀಯ ವ್ಯವಸ್ಥೆ. ಅಲ್ಲಿ ಕೆಳಮನೆಗಿಂತ (ಅಂದರೆ ನಮ್ಮ ಲೋಕಸಭೆಯಂತೆ) ಮೇಲ್ಮನೆ ಹೆಚ್ಚು ಪವರ್‌ಫುಲ್. ದೊರೆಗೂ ಮರ್ಯಾದೆ ಜಾಸ್ತಿ.

ಪ್ರಧಾನಿಗೆ ಅತಿಯಾದ ಅಧಿಕಾರ ಅಥವಾ ಸೌಲಭ್ಯಗಳಿಲ್ಲ ಎನ್ನುತ್ತಾರೆ. ಮೇಲ್ಮನೆಯ ನಿಯಂತ್ರಣದಿಂದಾಗಿ ಆಗಾಗ ಸಮಸ್ಯೆ ಎದುರಾಗುತ್ತದೆ. ಅದೇ ರೀತಿ ಆಗಾಗ ನಡೆಯುವ ಜನಮತನ ಗಣನೆಯಲ್ಲಿ ಜನಪ್ರಿಯತೆ ಕುಸಿದರೂ ಉಳಿಯುವುದು ಕಷ್ಟ. ಹೀಗಾಗಿ ಆ ದೇಶದಲ್ಲಿ ಪ್ರಧಾನಿಗಳು ಬಹಳ ಕಾಲ ಬಾಳಿಕೆ ಬರುವುದಿಲ್ಲ, ಒಂದು, ಎರಡು ವರ್ಷ, ಅನೇಕರದು ದಿನಗಳ ಲೆಕ್ಕ. ಹೀಗಾಗಿ ಸರಕಾರಗಳು ಆಗಾಗ ಪತನವಾಗುತ್ತವೆ. ಮತ್ತೆ ಹೊಸದು ಬರುತ್ತವೆ. ಇಂತಿರುವಾಗ ಇದನ್ನೆಲ್ಲ ನಿಭಾಯಿಸಿ ನಾಲ್ಕು ಅವಧಿಗೆ ಪ್ರಧಾನಿ ಸ್ಥಾಾನದಲ್ಲಿರುವುದು ಕಡಿಮೆ ಸಾಧನೆಯೇನೂ ಅಲ್ಲ. ಅಷ್ಟು ಮಾತ್ರವಲ್ಲದೆ ಸರಕಾರದಲ್ಲಿ, ಪಕ್ಷದಲ್ಲಿ ಒಳ್ಳೆ ಹಿಡಿತ ಇಟ್ಟುಕೊಂಡು ಆಡಳಿತ ನಡೆಸಿದವರು.

ಈಗಂತೂ ಅವರಿಗೆ ಪಕ್ಷದಲ್ಲಾಗಲೀ, ಪ್ರತಿಪಕ್ಷದಲ್ಲಾಗಲೀ ಎದುರಾಳಿಗಳೇ ಇರಲಿಲ್ಲ. ಈ ಎಲ್ಲ ಕಾರಣಗಳಿಂದಾಗಿ ಮನಸ್ಸು ಮಾಡಿದ್ದರೆ ಅಧಿಕಾರದಲ್ಲಿ ಅಬೆ ಅನಾಯಾಸವಾಗಿ ಮುಂದುವರಿಯಬಹುದಿತ್ತು. ಹಾಗೆ ಮಾಡಿದ್ದರೆ ವೈದ್ಯಕೀಯ ಸೌಲಭ್ಯವೂ ಸೇರಿದಂತೆ ಸಕಲ ಸೌಕರ್ಯಗಳೂ ಲಭಿಸುತ್ತಿದ್ದವು. ತಮ್ಮ ಕಾಯಿಲೆಗೆ ಅಧಿಕಾರದಲ್ಲಿದ್ದುಕೊಂಡೇ ಒಳ್ಳೆಯ ಚಿಕಿತ್ಸೆ ಪಡೆಯಬಹುದಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ಈ ಪ್ರಕರಣವನ್ನು ನಮ್ಮ ದೇಶ, ನಮ್ಮ ರಾಜ್ಯದ ಪರಿಸ್ಥಿತಿಗೆ ಹೋಲಿಸಿ ನೋಡಿದರೆ ವ್ಯತ್ಯಾಸ ಗೊತ್ತಾಗುತ್ತದೆ. ನಮ್ಮಲ್ಲಿ ಲೈಫ್ ಬಿಗಿನ್‌ಸ್‌ ಅಟ್ ಸಿಕ್‌ಸ್‌‌ಟಿ ಅಂತಾರಲ್ಲ. ಆ ಕಥೆ. ಅರವತ್ತಕ್ಕೆ ಅರಳು ಮರಳು ಎನ್ನುತ್ತಾರೆ. ಆದರೆ ನಮ್ಮ ಬಹುತೇಕ ರಾಜಕಾರಣಿಗಳಿಗೆ ಆಗ ಅಂದರೆ ಅರವತ್ತು ಅರಳುವ ಸಮಯ. ಜ್ಯೋತಿ ಬಸು, ಅಚ್ಯುತಾನಂದನ್ ಮೊದಲಾದವರು 80 ದಾಟಿದ ಬಳಿಕವೂ ಬಿಡುಬೀಸಾಗಿ ಬ್ಯಾಟಿಂಗ್ ಮಾಡಿದ್ದಾರೆ. ಆಡ್ವಾಣಿ ಅವರೂ ಅಷ್ಟೆ. ನಮ್ಮ ದೇವೇಗೌಡರೂ ಹಾಗೆಯೇ. 70 ದಾಟಿದವರ ಸಂಖ್ಯೆಗೆ ಕೊರತೆಯೇ ಇಲ್ಲ. ಪಿ.ವಿ ನರಸಿಂಹರಾಯರು ಹೆಚ್ಚೂ ಕಡಿಮೆ ರಾಜಕೀಯ ಸನ್ಯಾಸ ತೆಗೆದುಕೊಂಡಿದ್ದವರು ಅನಿವಾರ್ಯ ಪರಿಸ್ಥಿತಿಯಲ್ಲಿ ಪ್ರಧಾನಿಯಾಗಿಬಿಟ್ಟರು.

ಅದುವರೆಗೆ ಸುಸ್ತಾದವರಂತಿದ್ದ ಅವರು ಒಂದೊಮ್ಮೆ ಪಿಎಂ ಆದ ಬಳಿಕ ಒಣಗಿದ ಮರ ಚಿಗುರಿದಂತೆ ಆಗಿದ್ದರು. ಎನ್‌ಡಿ ತಿವಾರಿ ಎಂಬ ಹಿರಿಯ ರಾಜಕಾರಣಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಆಗಿದ್ದರು. 90  ದಾಟಿದ ಮೇಲೂ ರಾಜ್ಯಪಾಲರಾಗಿದ್ದರು. ಹಾಗೆಯೇ ಶಂಕರ ದಯಾಳ ಶರ್ಮಾ ಅವರು ಸಾಕಷ್ಟು ವಯಸ್ಸಾಗಿ ಅನಾರೋಗ್ಯ ಕಾಡುತ್ತಿದ್ದರೂ ರಾಷ್ಟ್ರಪತಿಯಾಗಿದ್ದರು.
ಸರಿಯಾಗಿ ನಡೆಯಲು ಆಗುತ್ತಿರಲಿಲ್ಲ. ಒಮ್ಮೆ ಸಮಾರಂಭವೊಂದರಲ್ಲಿ ಬಿದ್ದಿದ್ದೂ ಉಂಟು. ಧರ್ಮಸಿಂಗ್ ಅವರೂ ಅಷ್ಟೇ. ಅನಿರೀಕ್ಷಿತವಾಗಿ ಅವಕಾಶ ಸಿಕ್ಕಿದ್ದೇ ಚಾನ್ಸು. ಅನಾರೋಗ್ಯವನ್ನೂ ಲೆಕ್ಕಿಸದೆ ಮುಖ್ಯಮಂತ್ರಿ ಆಗಿಯೇ ಬಿಟ್ಟರು. ಅವರದೂ ಅದೇ
ಕಥೆ.

ನಿಂತರೆ ಕೂರಲು, ಕೂತರೆ ನಿಲ್ಲಲು ಕಷ್ಟ. ಅದೇ ರೀತಿ ಸ್ಪೀಕರ್, ಮಂತ್ರಿ ಮತ್ತಿತರ ಹುದ್ದೆಗಳಲ್ಲಿ ವಯೋವೃದ್ಧರು ಇದ್ದ, ಇರುವ ಉದಾಹರಣೆಗಳು ಹೇರಳವಾಗಿವೆ. ಆರೋಗ್ಯವಾಗಿದ್ದು ಕರ್ತವ್ಯವನ್ನು ಸರಿಯಾಗಿ ನಿಭಾಯಿಸಿದರಾದರೂ ಸರಿ. ಆದರೆ
ಬಹುತೇಕರಿಗೆ ಗಂಭೀರವಾದ ಆರೋಗ್ಯ ಸಮಸ್ಯೆೆ ಕಾಡುತ್ತಿರುತ್ತದೆ. ಆದರೂ ಕುರ್ಚಿ ಬಿಡಲೊಲ್ಲರು. ಸಭೆ, ಸಮಾರಂಭಗಳಲ್ಲಿ ಬಿದ್ದರೂ ಸಾವರಿಸಿಕೊಂಡು ಎದ್ದು ನಿಲ್ಲುವ ಜಾಯಮಾನದವರು.

ಇದಕ್ಕೆೆ ಮುಖ್ಯವಾಗಿ ಎರಡು ಕಾರಣಗಳಿರುತ್ತವೆ. ಒಂದು ಅಧಿಕಾರದ ಆಸೆ ಮತ್ತು ಹಪಹಪಿ. ಮತ್ತೊೊಂದು – ಆರೋಗ್ಯ ಸಮಸ್ಯೆೆ ಕಾಡಿದರೆ ಸರಕಾರಿ ಖರ್ಚಿನಲ್ಲಿ ಚಿಕಿತ್ಸೆೆ, ಆರೈಕೆ ಸಿಗುತ್ತದಲ್ಲ. ವಿಐಪಿ ಟ್ರೀಟ್‌ಮೆಂಟ್ ಬೇರೆ -ಅಕ್ಷರಶಃ ! ಅದೂ ಅಲ್ಲದೆ ಅಂಥ ಅನಾರೋಗ್ಯದ ಸಮಸ್ಯೆೆ ಇಲ್ಲದಿದ್ದರೂ ಸದಾ ವೈದ್ಯರ ನಿಗಾದಲ್ಲಿರ ಬಹುದು. ಆಗಾಗ ತಪಾಸಣೆ ಮಾಡಿಸಿಕೊಳ್ಳಬಹುದು.
ಈ ಸಂಪ್ರದಾಯ ನಮ್ಮ ದೇಶದ ರಾಜಕಾರಣದಲ್ಲಿ ಹಾಸುಹೊಕ್ಕಾಗಿದೆ. ಅಂಥದೊಂದು ಪರಂಪರೆಯೇ ಬೆಳೆದು ಬಂದಿದೆ.

ನೌಕರರಿಗಾದರೆ ಅಬ್ಬಬ್ಬಾ ಎಂದರೆ  60ಕ್ಕೆೆ ನಿವೃತ್ತಿ. ಕೆಲವರು 55ಕ್ಕೇ ವಾಲಂಟರಿ ರಿಟೈರ್ ಮೆಂಟ್ ತೆಗೆದುಕೊಳ್ಳುತ್ತಾರೆ. ಆಮೇಲೆ ಉಳಿದ ಜೀವನವನ್ನು ರಾಮ ಕೃಷ್ಣ ಅಂತ ಹಾಯಾಗಿ ಕಳೆಯುತ್ತಾರೆ. ಆದರೆ ರಾಜಕಾರಣಿಗಳು ಹಾಗಲ್ಲ. ಅವರಿಗೆ ಅಧಿಕಾರ ಇರಲೇಬೇಕು. ಇಲ್ಲದಿದ್ದರೆ ನೀರಿನಿಂದ ಹೊರಬಂದ ಮೀನಿನಂತೆ ಚಡಪಡಿಸುತ್ತಾರೆ. ಹಿರಿಯ ರಾಜಕಾರಣಿಗಳನೇಕರು ‘ಇದೊಂದು ಬಾರಿ ನನನಗೆ ಓಟು ಹಾಕಿ ಗೆಲ್ಲಿಸಿ, ಇದೇ ನನ್ನ ಕಡೆಯ ನಾವಣೆ’ ಎಂದು ದಮ್ಮಯ್ಯ ಹಾಕುತ್ತಾರೆ. ಆದರೆ
ಮುಂದಿನ ಚುನಾವಣೆಗೆ ಮತ್ತೆೆ ಹಾಜರ್. ‘ಕ್ಷೇತ್ರದ ಮತದಾರರರ ಒತ್ತಾಯಕ್ಕೆೆ ಕಟ್ಟುಬಿದ್ದು ನನ್ನ ನಿರ್ಧಾರ
ಬದಲಿಸಿದ್ದೇನೆ. ಆದರೆ ಖಂಡಿತವಾಗಿಯೂ ಇದೇ ಕೊನೆಯ ಚುನಾವಣೆ’ ಅಂತ ಮತ್ತೆೆ ಹಳೇ ರೆಕಾರ್ಡನ್ನೇ ಹಾಕುತ್ತಾರೆ.

ಇದು ಸುಳ್ಳು ಎಂದು ಅವರಿಗೂ ಗೊತ್ತು. ಮತದಾರರಿಗೂ ಗೊತ್ತು. ಅದಕ್ಕೇ ಹೇಳಿದೆನಲ್ಲ. ನಮ್ಮ ರಾಜಕಾರಣದ ಪರಂಪರೆಯೇ ಅಂಥದ್ದು. ಈಚೆಗೆ ಕಾಂಗ್ರೆೆಸ್ ಪಕ್ಷದಲ್ಲಿ ಶುರುವಾಗಿರುವ ಅಧಿಕಾರ ಗುದ್ದಾಟಕ್ಕೆೆ ಈ ಹಿರಿಯರ ನಾಟೌಟ್ ಆಟವೂ
ಮುಖ್ಯ ಕಾರಣ. ಕಮಲ್‌ನಾಥ್ ಅವರು ಲೋಕಸಭೆಯ ಅತಿ ಹಿರಿಯ ಸದಸ್ಯರಾಗಿದ್ದವರು. 9 ಬಾರಿ ಸಂಸದರಾಗಿದ್ದಾರೆ. ಮತ್ತೆೆ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಲು ಅವರಿಗೆ ಯಾವ ಮುಜುಗರವೂ ಇಲ್ಲ. ಬದಲಾಗಿ ಬಲು ಸಡಗರ, ಇನ್ನಿಲ್ಲದ ಹುರುಪು. ರಾಜಸ್ಥಾನದ ಅಶೋಕ್ ಗೆಹಲೋಟ್ ಅವರದೂ ಅದೇ ಕಥೆ. ಹೀಗಾದರೆ ನಾವು ಅಧಿಕಾರ ಸುಖ ಕಾಣೋದು ಯಾವಾಗ ಸ್ವಾಮಿ ಎಂದು ಕಿರಿಯರು ಕೇಳುವುದರಲ್ಲಿ ತಪ್ಪೇನಿದೆ. ಆದರೆ ನೀ ಕೊಡೆ ನಾ ಬಿಡೆ ಎಂಬಂತಿದೆ ಈ ಅಧಿಕಾರದಾಟ.

ಅಷ್ಟೇಕೆ. ಕಳೆದ ವರ್ಷ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರಕಾರ ಪ್ರತಿಷ್ಠಾಪನೆಯಾಯಿತಲ್ಲ. ಆಗ ವಲಸೆ ಹಕ್ಕಿಗಳಿಗೆ ಅವಕಾಶ ಕೊಡಬೇಕಾಗಿತ್ತು. ಜತೆಗೆ ಹೊಸ ಆಕಾಂಕ್ಷಿಗಳೂ ಇದ್ದರು. ಆದರೆ ಹಿರಿಯರು ಕೂಡ ಟವೆಲ್ ಹಾಸಿಯೇ ಬಿಟ್ಟರು. ಸಿಎಂ ಆದವರು, ಡಿಸಿಎಂ ಆದವರು, ಸ್ಪೀಕರ್ ಸ್ಥಾನ ಅಲಂಕರಿಸಿದವರು ಎಲ್ಲರೂ ಮಾಮೂಲು ಮಂತ್ರಿಗಳಾಗಲು ಹಿಂದೆ ಮುಂದೆ ನೋಡಲಿಲ್ಲ. ಕಾರಣ? ಏನಕೇನ ಪ್ರಕಾರೇಣ ಅಧಿಕಾರದಲ್ಲಿರಬೇಕು ಅಷ್ಟೆೆ.

ರಾಜಕಾರಣಿಗಳಿಗೇನೊ ಅಧಿಕಾರದ ಆಸೆ, ಲಾಲಸೆ, ಹಪಹಪಿ ಇರಬಹುದು. ಕಾಲು ಕುಂಟುತ್ತಿದ್ದರೂ, ಗೋಣು ಸೊಟ್ಟಗಾಗಿದ್ದರೂ, ಕೈ ಅದುರುತ್ತಿದ್ದರೂ, ನಿಲ್ಲಲು ಕೂಡಲು ಆಗದಿದ್ದರೂ ಅಧಿಕಾರದ ಕುರ್ಚಿ ಬೇಕೇಬೇಕು. ಆದರೆ ನಮಗೆ, ಅಂದರೆ ಜನರಿಗೇನಾಗಿದೆ?’ ವಯಸ್ಸಾಯಿತು. ಮನೆಗೆ ಹೋಗಿ ಹಾಯಾಗಿರಿ’ ಎಂದು ಹೇಳಬಹುದಲ್ಲ. ಅವರು ಕೇಳದಿದ್ದರೂ ಮತದಾನದ ಸಂದರ್ಭದಲ್ಲಿ ಅಂಥದೊಂದು ಸ್ಪಷ್ಟ ಸಂದೇಶ ನೀಡಬಹುದಲ್ಲ.

ಊಹೂಂ. ಈ ವಿಚಾರದಲ್ಲಿ ನಾವು ಯಥಾ ರಾಜಾ ತಥಾ ಪ್ರಜಾ. ಹೋಗಲಿ ಶಾಸನ ಸಭೆಗಳಲ್ಲಾದರೂ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬಹುದಲ್ಲ. ಇಲ್ಲವೇ ಇಲ್ಲ. ಸೋತವರೂ ಮಂತ್ರಿ ಮಹೋದಯರಾಗಬಹುದು. ಉಭಯ ಸದನಗಳ
ಸದಸ್ಯರಲ್ಲದವರೂ ಸಚಿವರೇಕೆ, ಪ್ರಧಾನಿಯೇ ಆಗಬಹುದು. ಎಷ್ಟು ಬಾರಿ ಬೇಕಾದರೂ ಚುನಾವಣೆಗೆ ನಿಲ್ಲಬಹುದು, ಗೆಲ್ಲಬಹುದು. ಇಂದು ಮುಖ್ಯಮಂತ್ರಿ ಆದರವರು ನಾಳೆ ಆರ್ಡಿನರಿ ಮಿನಿಸ್ಟರ್ ಆಗಬಹುದು.

ಸ್ಪೀಕರ್ ಆದವರು ಮತ್ತೆೆ ಮಂತ್ರಿಯಾಗಬಹುದು. ಇದಕ್ಕೆೆ ಕಾನೂನಿನ ತೊಡಕೂ ಇಲ್ಲ. ನೈತಿಕ ಅಳುಕೂ ಇಲ್ಲ. ಅಮೆರಿಕದಲ್ಲಿ ನೋಡಿ. ಅಧ್ಯಕ್ಷರ ಅಧಿಕಾರಾವಧಿ ನಾಲ್ಕು ವರ್ಷ. ಮತ್ತೊೊಂದು ನಾಲ್ಕು ವರ್ಷ ಮರು ಆಯ್ಕೆ ಆಗಬಹುದು. ಎರಡು ಅವಧಿ ಮುಗಿದರೆ ಮುಗಿಯಿತು. ಮತ್ತೆೆ ಆ ಹುದ್ದೆೆಯ ಕನಸು ಕಾಣುವಂತಿಲ್ಲ. ಅವರು ಜನಸಾಮಾನ್ಯರಂತೆ ಇದ್ದುಬಿಡುತ್ತಾರೆ. ಹೋಗಲಿ. ಚೀನ ಅಥವಾ ರಷ್ಯಾ ಆದರೆ ಒಂದು ಥರ. ಅವರದು ಸರ್ವಾಧಿಕಾರದ ಲೆಕ್ಕ.

ಆದರೆ ಪ್ರಜಾಪ್ರಭುತ್ವದಲ್ಲಿರುವ ನಮಗೇನಾಗಿದೆ? ಇಷ್ಟು ವಯಸ್ಸಾದವರು ಇನ್ನು ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂಬ ಕಾನೂನು ಮಾಡಬಹುದಲ್ಲ? ಅಥವಾ ಎರಡಕ್ಕೋ ಮೂರಕ್ಕೊ ಮುಕ್ತಾಯ ಎಂಬ ನೀತಿಯನ್ನಾದರೂ ಜಾರಿಗೆ ತರಬಹುದಲ್ಲ. ಆದರೆ ನೀತಿಯೂ ಇಲ್ಲ, ನಿಯಮವೂ ಇಲ್ಲ. ನಿಯಮದ ಮಾತು ಒತ್ತಟ್ಟಿಗಿರಲಿ. ಒಂದೊಂದು ಬಾರಿ ಚುನಾಯಿತರಾದಂತೆಯೂ ಎಲ್ಲಕ್ಕೂ ಸೀನಿಯಾರಿಟಿ ಸಿಗುತ್ತೆೆ. ಇದು ಎಲ್ಲರಿಗೂ ಗೊತ್ತಿರುವ ಸತ್ಯ. ಆದರೆ ಯಾರಿಗೂ ಬೇಡದ ವಿಷಯ. ಬೆಕ್ಕಿಗೆ ಗಂಟೆ
ಕಟ್ಟುವವರಾರು ಎಂಬ ಜಿಜ್ಞಾಸೆ.

ಆದರೆ ಇದಕ್ಕೆೆ ಏನಾದರೂ ಉಪಾಯ ಮಾಡದೇ ವಿಧಿ ಇಲ್ಲ. ಇದನ್ನೆೆಲ್ಲ ನೋಡಿದರೆ ಯಾಕೆ ಶಿಂಜೊ ಅಬೆ ಅವರ ರಾಜೀನಾಮೆ ಮಹತ್ವದ್ದು ಎಂಬುದು ಗೊತ್ತಾಗುತ್ತದೆ. ಅಲ್ಲದೆ ಅವರು ನಮ್ಮ ಕಣ್ಣಲ್ಲಿ ಖಂಡಿತ ವಾಗಿಯೂ ದೊಡ್ಡವರಾಗಿ ಕಾಣುತ್ತಾರೆ. ನಮ್ಮಲ್ಲೂ ಸ್ವಸ್ಥ ರಾಜಕಾರಣದ ‘ಅಬೆ’ಯಾಡುವುದು ಯಾವ ಕಾಲಕ್ಕೆೆ ? ಆ ಕಾಲ ಬೇಗ ಬರಲಿ.