Friday, 20th September 2024

ಕನ್ನಡ ವಿಮರ್ಶಕರು ಕಣ್ಣೆತ್ತಿ ನೋಡಲು ಅವರು ಇನ್ನೆಷ್ಟು ಬರೆಯಬೇಕು?

ಬೇಟೆ
ಜಯವೀರ ವಿಕ್ರಮ್ ಸಂಪತ್ ಗೌಡ

ಮೊನ್ನೆ ‘ವಿಶ್ವವಾಣಿ’ ಕಚೇರಿಗೆ ಹೋದಾಗ, ಸಂಪಾದಕರ ಟೇಬಲ್ಲಿನ ಮೇಲೆ ಸುಧಾಮೂರ್ತಿಯವರು ಬರೆದ ಸುಮಾರು ಹತ್ತಾರು ಪುಸ್ತಕಗಳಿದ್ದವು. ಆಗ ತಾನೇ ಅವರು ಸಪ್ನಾ ಪುಸ್ತಕ ಮಳಿಗೆಗಳಿಂದ ಸುಮಾರು ಐವತ್ತು-ಅರವತ್ತು ಪುಸ್ತಕಗಳನ್ನು ಕೊಂಡು ತಂದಿದ್ದರು. ಸಂಪಾದಕರ ಜತೆ ಅವರ ಸ್ನೇಹಿತರಾದ ನಂಜನಗೂಡು ಮೋಹನ್ ಸಹ ಇದ್ದರು.

ಇಬ್ಬರೂ ಪುಸ್ತಕ, ಪತ್ರಕರ್ತರು, ಪತ್ರಿಕೆಗಳ ಬಗ್ಗೆ ಮಾತಾಡುತ್ತಿದ್ದರು. ಇಬ್ಬರು ಪತ್ರಕರ್ತರು ಸೇರಿದರೆ ಇನ್ನೇನು ಮಾತಾಡುತ್ತಾರೆ? ಸಂಪಾದಕರು ಮತ್ತು ಮೋಹನ್ ಮಾತಾಡುತ್ತಿದ್ದರೆ, ನಾನು ಜಟ್ಟಗ. ಸುಮ್ಮನೆ ಕೇಳುತ್ತಿರುತ್ತೇನೆ. ಇಬ್ಬರೂ ಪರಮ ವಾಚಾಳಿಗಳು. ಮೂರ್ನಾಲ್ಕು ತಾಸು ಮಾತಾಡುತ್ತಿರುತ್ತಾರೆ. ನನಗೆ ಒಂದೆರಡು ಪುಸ್ತಕಗಳನ್ನು ಓದಿದ ಸುಖ! ಅದರಲ್ಲೂ ಮೇಲಿಂದ ಮೇಲೆ ಚಕ್ಕುಲಿ, ಕೋಡಬೆಳೆ, ಬಿಸಿಬಿಸಿ ಕಾಫಿ ಬರುತ್ತಿದ್ದರೆ, ಹತ್ತಾರು ವರ್ಷಗಳ ಮೌನದಿಂದ ಎದ್ದು ಬಂದವರಂತೆ ಮಾತಾಡುತ್ತಿರುತ್ತಾರೆ.

ಕೇಳಲು ಬಹಳ ರೋಚಕವಾಗಿರುತ್ತದೆ. ಅಂದು ಮೋಹನ್ ಅವರ ಜತೆ ಬಂದಿದ್ದ ಸಜ್ಜನರೊಬ್ಬರು, ‘ಸಾರ್,  ಸುಧಾಮೂರ್ತಿ ಯವರೇ ಇಷ್ಟೆಲ್ಲಾ ಬರೆಯುತ್ತಾರಾ? ಅವರಿಗೆ ಬರೆಯಲು ಸಮಯ ವಿರುತ್ತದಾ? ಇಷ್ಟೆಲ್ಲಾ ಪುಸ್ತಕಗಳನ್ನು ಅವರೇ ಬರೆದಿರು ವುದಾ?’ ಎಂದು ಕೇಳಿದ. ಸಂಪಾದಕರು ಏಕಾಏಕಿ ಗರಂ ಆದರು. ’ ಏನು ನಿಮ್ಮ ಅಭಿಪ್ರಾಯ? ಈ ಪುಸ್ತಕಗಳನ್ನೆಲ್ಲಾ ಅವರು ಬೇರೆಯರಿಂದ ಬರೆಯಿಸಿ, ತಮ್ಮ ಹೆಸರಿನಲ್ಲಿ ಪ್ರಿಂಟ್ ಹಾಕಿಸಿಕೊಳ್ಳುತ್ತಾರೆ ಎಂಬ ಅಭಿಪ್ರಾಯವಾ? ಏನು ಮಾತಾಡುತ್ತೀರಾ? ಏನ್ರೀ, ನಿಮಗೆ ಅವರ ಬಗ್ಗೆೆ ಏನು ಗೊತ್ತು? ಯಾರ ಬಗ್ಗೆೆಯೂ ಲಘುವಾಗಿ ಮಾತಾಡಬೇಡಿ. ಅದರಲ್ಲೂ ಸುಧಾಮೂರ್ತಿ
ಯವರ ಬಗ್ಗೆೆ ಹಾಗೆಲ್ಲ ಮಾತಾಡಬೇಡಿ’ ಎಂದುಬಿಟ್ಟರು.

ತಕ್ಷಣ ಸಂಪಾದಕರು ತಮ್ಮ ಕಪಾಟನ್ನು ಜಾಲಾಡಿ, ತಮ್ಮ ಸಂಗ್ರಹದಲ್ಲಿರುವ ಒಂದು ಫೈಲನ್ನು ಆ ಸಜ್ಜನರ ಮುಂದಿಟ್ಟರು. ಅದು ಸುಧಾಮೂರ್ತಿಯವರ ಹಸ್ತಾಕ್ಷರಗಳ ಕಟ್ಟು ! ಆ ಮಹಾಶಯರು, ‘ಸಾರ್, ಕ್ಷಮಿಸಿ.. ಏನೋ ತಪ್ಪು ನುಡಿದುಬಿಟ್ಟೆೆ. ನನಗೆ ಅವರ ಬಗ್ಗೆೆ ಗೌರವವಿದೆ. ಆದರೆ ಅವರ ಸಾಹಿತ್ಯ ಕೃಷಿ ಬಗ್ಗೆ ಅನುಮಾನವಿತ್ತು. ಅದನ್ನು ನೀವು ಪರಿಹರಿಸಿ ನನ್ನ ಕಣ್ಣು ತೆರೆಯಿಸಿದಿರಿ. ನನಗೆ ಸುಧಾಮೂರ್ತಿ ಅವರ ಬಗ್ಗೆ ಇನ್ನಷ್ಟು ಗೌರವ ಜಾಸ್ತಿಯಾಗುವಂತೆ ಮಾಡಿದಿರಿ, ಥ್ಯಾಂಕ್ಸ್‌’ ಎಂದರು.

ಈ ಮಹಾಶಯರಂತೆ ಇನ್ನೂ ಅನೇಕರಿಗೆ ಸುಧಾಮೂರ್ತಿಯವರ ಬಗ್ಗೆೆ ಈ ರೀತಿಯ ಸಂಶಯ ಇರುವುದು ನನ್ನ ಗಮನಕ್ಕೂ ಬಂದಿದೆ. ಇದಕ್ಕೆ ಮೂಲ ಕಾರಣ ಸುಧಾಮೂರ್ತಿಯವರು ಶ್ರೀಮಂತರು ಎಂಬ ಕಾರಣಕ್ಕೆ.  ಶ್ರೀಮಂತರಾದವರು ಸುಲಭಕ್ಕೆ Ghost Writer (ಬಾಡಿಗೆ ಲೇಖಕರು)ಗಳನ್ನು ಇಟ್ಟುಕೊಂಡು ಬರೆಯಿಸಬಹುದು ಎಂದು ಅನೇಕರು ಅವರಷ್ಟಕ್ಕೇ  ಭಾವಿಸಿ ಬಿಡುತ್ತಾರೆ. ‘ಲಕ್ಷ್ಮಿ ಇರುವಲ್ಲಿ ಸರಸ್ವತಿ ಇರುವುದಿಲ್ಲ’ ಎಂಬ ಸ್ಥಾಪಿತ ನಿಯಮ ಅವರ ತಲೆಯಲ್ಲಿ ಚಕ್ಕಳಂಬಟ್ಟೆೆ ಹೊಡೆದು ಕುಳಿತಿರುತ್ತದೆ. ಈ ನಿಯಮವನ್ನು ಸುಧಾಮೂರ್ತಿಯವರಿಗೂ ಅನ್ವಯಿಸಿ ಒಂದು ನಿರ್ಧಾರಕ್ಕೆ ಬಂದುಬಿಡುತ್ತಾರೆ – ಸುಧಾ ಮೂರ್ತಿ ಯವರು ಬಾಡಿಗೆ ಲೇಖಕರನ್ನು ಇಟ್ಟುಕೊಂಡು ಬರೆಯಿಸುತ್ತಾರೆಂದು. ಒಂದು ವೇಳೆ ಈ ಸಂಗತಿ ಸುಧಾಮೂರ್ತಿ ಯವರ ಕಿವಿಗೆ ಬಿದ್ದರೆ ಎಷ್ಟು ಹಿಂಸೆಯಾಗಬಹುದು ? ಈ ಮಗು ನಿನ್ನದೇನಾ, ನೀನಾ ಹೆತ್ತಿದ್ದಾ ಅಥವಾ ಬಾಡಿಗೆ ತಾಯಿ ಹೆತ್ತಿದ್ದಾ ಎಂದು ಹೆತ್ತ ತಾಯಿಗೆ ಕೇಳಿದರೆ ಏನನಿಸಬೇಡ? ಸುಧಾಮೂರ್ತಿಯವರು ಶ್ರೀಮಂತರು. ಅವರು ನಾರಾಯಣಮೂರ್ತಿ ಯವರನ್ನು ಮದುವೆ ಆಗುವ ತನಕ ಶ್ರೀಮಂತರಾಗಿರಲಿಲ್ಲ. ಮದುವೆಯಾಗುವಾಗಲೂ ನಾರಾಯಣ ಮೂರ್ತಿಯವರು ಹಣವಂತರಾಗಿರಲಿಲ್ಲ.

ಇಡೀ ದೇಶವೇ ಹೆಮ್ಮೆ ಪಡುವ ಇನ್ಫೋಸಿಸ್ ಸಂಸ್ಥೆ ಸ್ಥಾಪಿಸಿ, ಆ ಮೂಲಕ ಅವರು ಹೇಗೆ ಧನಿಕರಾದರು ಎಂಬುದು ಸಮಸ್ತ
ಲೋಕಕ್ಕೆೆ ಗೊತ್ತಿರುವ ಸಂಗತಿ. ಅವರೇನು ವಾಮಮಾರ್ಗದಿಂದ ಹಣ ಗಳಿಸಿದವರಲ್ಲ. ಆ ಹಣವನ್ನೆಲ್ಲಾ ಅವರು  ಮಡಗಿ ಕೊಂಡು ಅವರು ಹಾಯಾಗಿ ಆರಾಮಾಗಿರಬಹುದಿತ್ತು. ಆದರೆ ಅವರು ಮಹಾದಾನಿಗಳೂ ಹೌದು. ಸಮಾಜಮುಖಿ ಕೆಲಸಗಳಿಗೆ ಅವರು ಸಾವಿರಾರು ಕೋಟಿ ಹಣವನ್ನು ದಾನ ನೀಡಿದ್ದಾರೆ. ಅವರು ಎಷ್ಟು ದಾನ ನೀಡಿದ್ದಾರೆಂಬುದು ಅವರಿಗೂ ಗೊತ್ತಿರ ಲಿಕ್ಕಿಲ್ಲ. ಅವರು ದಾನ ನೀಡಿದ ಕೆಲವು ಸಂಗತಿಗಳು ಮಾತ್ರ ಜನರಿಗೆ ಗೊತ್ತಿರಬಹುದು. ಆದರೆ ಯಾರಿಗೂ ಹೇಳದೇ, ಬಲಗೈ ಕೊಟ್ಟಿದ್ದು ಎಡಗೈಗೆ ಗೊತ್ತಾಗದಂತೆ ಅವೆಷ್ಟೋ ಕೋಟಿ ಹಣವನ್ನು ಅವರು ನೀಡಿದ್ದಾರೆ, ಯಾವುದೇ ಪ್ರಚಾರದ ಪ್ರತಿಫಲಾ ಪೇಕ್ಷೆ ಇಲ್ಲದೇ ತಾನು ನೀಡಿದ್ದನ್ನು ಯಾರಿಗೂ ಹೇಳಬಾರದೆಂದು ಕೈಯೆತ್ತಿ ಕೊಟ್ಟಿದ್ದಾರೆ.

ಇವನ್ನೆಲ್ಲ ಅವರು ಮಾಡಬೇಕೆಂಬ ನಿಯಮವೇನಿಲ್ಲ. ತಾವು ನ್ಯಾಯಯುತವಾಗಿ ದುಡಿದ ಹಣವನ್ನು ದಾನ ಮಾಡಬೇಕಿಲ್ಲ. ಅದನ್ನೆಲ್ಲಾ ಅವರೇ ಅನುಭವಿಸಬಹುದಿತ್ತು. ಹತ್ತಾರು ಫಾರೀನ್ ಕಾರು, ಎಕರೆಗಟ್ಟಲೆ ವಿಸ್ತೀರ್ಣದ ಮನೆ, ಕೆಜಿಗಟ್ಟಲೆ ಬಂಗಾರ, ಬ್ರಾಂಡೆಡ್ ಬಟ್ಟೆ, ಪೋಷಾಕು, ಫಾರೀನ್ ಶಾಪಿಂಗ್ .. ಈ ಮೂಲಕ ವಿಲಾಸಿ ಜೀವನ ನಡೆಸಬಹುದಿತ್ತು. ಹಾಗೆ ಮಾಡಿದ್ದರೆ ಅವರನ್ನು ಯಾರೂ ಕೇಳುತ್ತಿರಲಿಲ್ಲ. ಅವರಂತಿರುವ ಬಹುಪಾಲು ಧನಿಕರು ಮಾಡುತ್ತಿರುವುದು ಅದನ್ನೇ ಅಲ್ಲವೇ? ಆದರೆ
ಸುಧಾಮೂರ್ತಿಯವರು ಇಂದಿಗೂ ಈ ಎಲ್ಲಾ ಶೋಕಿಬಾಜಿಗಳಿಂದ ದೂರ. ಇಂದಿಗೂ ಅವರು ಆಡಂಬರದ ಜೀವನ ನಡೆಸು ತ್ತಿಲ್ಲ. ಅವರ ಪೋಷಾಕು ನೋಡಿದರೆ ಅಪ್ಪಟ ಕನ್ನಡತಿ. ಅವರಲ್ಲಿ ಶ್ರೀಮಂತಿಕೆಯ ಯಾವ ಲಕ್ಷಣವೂ ಇಲ್ಲ, ಹೃದಯ
ಶ್ರೀಮಂತಿಕೆ ಹೊರತಾಗಿ. ಇದು ಬಹುತೇಕರಿಗೆ ಗೊತ್ತಿರುವ ವಿಷಯ. ಅವರು ಹಿಂದೊಂದು – ಮುಂದೊಂದು ರೀತಿಯ ಜೀವನ
ನಡೆಸಿದವರಲ್ಲ. ಅವರದು ಬೂಟಾಟಿಕೆಯಿಲ್ಲದ ಬದುಕು.

ಅವರು ಮನೆಯಲ್ಲಿ ಹೇಗೋ, ಸಾರ್ವಜನಿಕವಾಗಿಯೂ ಹಾಗೇ. ಅವರಿ ಇಂದಿಗೂ ಒಂದೇ ಒಂದು ತಪ್ಪು ನಡೆ, ಕಳಂಕವಿಲ್ಲದ ಜೀವನ ಕಟ್ಟಿಕೊಂಡು ಬಂದವರು. ಇಂದಿಗೂ ಮೌಲ್ಯಗಳನ್ನು ಗೌರವಿಸುತ್ತಾ, ಸಜ್ಜನಿಕೆಯ ಪರಿಧಿಯೊಳಗೆ, ಯಾವ ವಿವಾದವನ್ನೂ ಎಳೆದುಕೊಳ್ಳದೇ, ಪ್ರಚಾರಕ್ಕೆ ಹಪಹಪಿಸದೇ ತಾವಾಯಿತು, ತಮ್ಮ ಕೆಲಸವಾಯಿತು ಎಂದು ಇರುವವರು.
ಸುಧಾಮೂರ್ತಿಯವರು ಒಬ್ಬ ಲೇಖಕಿಯಾಗಿದ್ದರೆ ಈ ಗುಣವೇ ಕಾರಣ. ಲೇಖಕಿಯಾಗಿ ಅವರ ಬೇರುಗಳಿರುವುದು ಅವರ ಶ್ರೀಮಂತಿಕೆಯಲ್ಲಿ ಅಲ್ಲ, ಅವರ ಮಾನವೀಯತೆಯಲ್ಲಿ, ಅವರ ಹೃದಯ ಶ್ರೀಮಂತಿಕೆಯಲ್ಲಿ, ಅವರಿಗಿರುವ ಕಾಳಜಿ ಮತ್ತು ಬದ್ಧತೆಯಲ್ಲಿ. ಅವರಿಗೆ ಬರೆಯಲು ಸಾಧ್ಯವಾಗಿರುವುದು ಈ ಮೂಲದ್ರವ್ಯಗಳಿಂದ. ಅವರ ಶ್ರೀಮಂತಿಕೆಯ ಸೆಲೆಯಷ್ಟೇ ಅವರ ಬರಹಗಳ ಸೆಲೆಯೂ ಅಷ್ಟೇ ಧಾರಾಳವಾಗಿದೆ. ಅವರೊಬ್ಬ ಸೃಜನಶೀಲ ಲೇಖಕಿ, ಸಾಹಿತಿ. ಪ್ರಬಂಧ, ಅಂಕಣ, ಕತೆ, ಕಾದಂಬರಿ, ಪುರಾಣ, ಪ್ರವಾಸ, ಅನುಭವ ಕಥನ… ಹೀಗೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕನ್ನಡದಲ್ಲಿ ಅವರು
ಬಿಡುವಿಲ್ಲದ, ಸದಾ ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ಲೇಖಕಿ. ಅವರದು ಓದು, ಅಧ್ಯಯನ, ಪ್ರವಾಸ, ಸಂಶೋಧನೆ, ಸಂವಾದದಲ್ಲಿ ತೊಡಗಿರುವ ಕ್ರಿಯಾಶೀಲ ಮನಸ್ಸು. ಒಬ್ಬ ಲೇಖಕಿಗಿರುವ ಎಲ್ಲಾ ಗುಣ – ಸಿದ್ಧತೆಗಳನ್ನು ಮೈಗೂಡಿಸಿಕೊಂಡು ಪಕ್ವವಾಗುವ ಮನೋಧರ್ಮದವರು. ಸುಧಾಮೂರ್ತಿಯವರು ಇಂದು ನೂರಕ್ಕೂ ಹೆಚ್ಚಿನ ಪುಸ್ತಕಗಳ ಲೇಖಕಿ. ಕನ್ನಡದಲ್ಲಿ ಬಹಳಷ್ಟು ಬರೆದವರ ಸಾಲಿಗೆ ಇವರೂ ಸೇರುತ್ತಾರೆ. ಹಾಗಂತ ತಮ್ಮ ಕತೆ, ಸ್ವಗತ, ಹಳವಂಡಗಳನ್ನು ಬರೆದುಕೊಂಡವರಲ್ಲ. ಇಂದು ಕನ್ನಡದ ಓದುಗಸ್ನೇಹಿ ಲೇಖಕಿಯರಲ್ಲಿ ಅವರು ಮುಂಚೂಣಿಯಲ್ಲಿರುವವರು. ಅವರ ಕೃತಿಗಳಿಗೆ ಓದುಗರು ಕಾಯುತ್ತಾರೆ. ಅವರ ಕೃತಿಗಳು ಮಾರಾಟದಲ್ಲೂ ಮುಂದು. ಅವರು ಅತ್ಯಂತ ಬೇಡಿಕೆಯಲ್ಲಿರುವ, ಜನಪ್ರಿಯ ಬರಹಗಾರ್ತಿ. ಕನ್ನಡದ ಯಾವ ಲೇಖಕಿಯರಿಗೂ ಇಲ್ಲದ fan following ಅವರಿಗಿದೆ. ಅದು ಅವರಿಗೆ ಗೊತ್ತಿರಲಿಕ್ಕಿಲ್ಲ.

ಸುಧಾಮೂರ್ತಿಯವರ ಬರಹದ ಕ್ಯಾನ್ವಾಸ್ ಬಹಳ ವಿಸ್ತಾರವಾದುದು. ಅದಕ್ಕೆ ಅವರ ಬದುಕು, ಅನುಕೂಲ, ಜನಸಂಪರ್ಕ, ಜನಸಂಬಂಧ, ಅನುಭವ ಕಾರಣವಿದ್ದಿರಬಹುದು. ಇದು ಒಬ್ಬ ಬರಹಗಾರನಿಗೆ ಸಿಗಬಹುದಾದ ಹೆಚ್ಚುವರಿ ಅನುಕೂಲಗಳು. ಇವನ್ನು ಅವರು ತಮ್ಮ ಸೃಜನಶೀಲ ಬರವಣಿಗೆಗೆ ಸಾಮಗ್ರಿಯಾಗಿ ಬಳಸಿಕೊಂಡಿರುವುದನ್ನು ಅವರ ಕೃತಿಗಳಲ್ಲಿ ನೋಡಬ ಹುದು. ಹೀಗಾಗಿ ಅವರ ಕೃತಿಗಳಿಗೆ ಬಹುವಿಸ್ತಾರದ, ಬಹುವಿಶಾಲದ ನೋಟವಿದೆ. ಇಂಥ ಜೀವನಾನುಭವಗಳನ್ನು ಸಾಹಿತ್ಯ ವಾಗಿಸುವ ಅವರ ಕಾಳಜಿಯನ್ನು ಮೆಚ್ಚಲೇಬೇಕು. ಶ್ರೀಮಂತರಾದವರಿಗೆ ಈ ಸಂಗತಿಗಳು ಮುಖ್ಯವೆನಿಸುವುದಿಲ್ಲ. ಆದರೆ
ಹೃದಯ ಶ್ರೀಮಂತರಾದವರಿಗೆ, ಅಕ್ಷರ ಸಾಂಗತ್ಯ ಬಯಸುವವರಿಗೆ ಅದನ್ನು ಸಾಹಿತ್ಯವಾಗಿಸದಿದ್ದರೆ ಸಮಾಧಾನವಾಗುವುದಿಲ್ಲ. ಸುಧಾಮೂರ್ತಿಯವರು ಇಂಥ ಅಕ್ಷರಮೋಹಕ್ಕೆ ಬಿದ್ದವರು.

ಸುಧಾಮೂರ್ತಿಯವರು ಇಂದು ಏನೇ ಬರೆಯಲಿ ಅದು ಭಾರತದ ಎಲ್ಲಾ ಭಾಷೆಗಳಿಗೂ ಅನುವಾದವಾಗುತ್ತವೆ. ಎಲ್ಲಾ
ಭಾಷೆಗಳಲ್ಲೂ ಅವರಿಗೆ ಅಪಾರ ಸಂಖ್ಯೆೆಯ ಓದುಗರಿದ್ದಾರೆ. ಹಿಂದಿ, ಮರಾಠಿ, ಗುಜರಾತಿ, ತೆಲುಗು, ತಮಿಳು, ಓರಿಯ ಭಾಷೆಗಳಲ್ಲಂತೂ ಅವರು ಜನಪ್ರಿಯ ಲೇಖಕಿ. ಈ ಭಾಷೆಗಳ ಓದುಗರಿಗೆ ಅವರು ಎಲ್ಲಿಂದಲೋ ಬಂದವರಲ್ಲ. ತಮ್ಮದೇ
ಭಾಷೆಯ ಹೆಣ್ಣುಮಗಳಂತೆ ಅವರನ್ನು ಪ್ರೀತಿಸುವ ಓದುಗ ಸಮೂಹವಿದೆ. ಇಂದು ಅವರು ದೇಶದ ಯಾವುದೇ ರಾಜ್ಯ,
ಪ್ರದೇಶಕ್ಕೆ ಹೋದರೂ ಓದುಗರೊಂದಿಗೆ connect ಆಗುವ ಸಾಹಿತ್ಯಸಂಗವನ್ನು ಸಂಪಾದಿಸಿಕೊಂಡಿಕೊಂಡಿದ್ದಾರೆ.
ಪ್ರಾಯಶಃ ಕನ್ನಡದ ಯಾವ ಲೇಖಕಿಯೂ ಈ ಎತ್ತರವನ್ನು ಏರಿಲ್ಲ. ಕನ್ನಡದ ಬೇರೆ ಯಾವ ಲೇಖಕಿಯ ಕೃತಿಗಳೂ ಇಷ್ಟೊಂದು ಭಾಷೆಗಳಿಗೆ ಅನುವಾದಗೊಂಡು ಸರ್ವಮಾನ್ಯತೆ ಪಡೆದಿಲ್ಲ. ಒಬ್ಬ ಬರಹಗಾರ್ತಿಯಾಗಿ ಅಂಥ ಔನ್ನತ್ಯವನ್ನು ಸುಧಾಮೂರ್ತಿ ಯವರು ಸಾಧಿಸಿರುವುದು ಕನ್ನಡಿಗರ ಸಮಾಧಾನ, ಹೆಮ್ಮೆ.

ಸಾಹಿತ್ಯದಲ್ಲಿ ಲಿಂಗಭೇದ ಮಾಡದಿದ್ದರೆ, ಸುಧಾಮೂರ್ತಿಯವರ ಕನ್ನಡ ಕೃತಿಗಳೇ ಬೇರೆ ಭಾಷೆಗಳಿಗೆ ಅತಿ ಹೆಚ್ಚು ಅನುವಾದ ಗೊಂಡಿರುವುದು ಎಂಬುದು ಗಮನಾರ್ಹ. ಸುಧಾಮೂರ್ತಿಯವರ ಇನ್ನೊಂದು ಹೆಚ್ಚುಗಾರಿಯೆಂದರೆ, ಅವರು ಕನ್ನಡದಂತೆ ಇಂಗ್ಲಿಷಿನಲ್ಲೂ ಅಷ್ಟೇ ಚೆಂದವಾಗಿ ಬರೆಯಬಲ್ಲರು. ಅವರು ಒಂಥರಾ ರೈಟ್ ಹ್ಯಾಂಡ್ ಬ್ಯಾಟ್ಸಮನ್ ಮತ್ತು ಲೆಫ್ಟ್ ಹ್ಯಾಂಡ್ ಬೌಲರ್ ಇದ್ದಂತೆ. ಕನ್ನಡ ಮತ್ತು ಇಂಗ್ಲೀಷಿನಲ್ಲಿ ಸರಾಗವಾಗಿ ಬರೆಯಬಲ್ಲರು. ಈ ಎರಡೂ ಭಾಷೆಗಳನ್ನು ಸುಧಾಮೂರ್ತಿ ಯವರಂತೆ ಪರಿಣಾಮಕಾರಿಯಾಗಿ ದುಡಿಸಿಕೊಂಡ ಮತ್ತೊಬ್ಬ ಕನ್ನಡದ ಲೇಖಕಿಯಿಲ್ಲ. ಈ ಕಾರಣದಿಂದ ಸುಧಾಮೂರ್ತಿ ಯವರ ಸಾಹಿತ್ಯ ಕ್ಷಿತಿಜ ಹಿರಿದಾದುದು. ಅವರು ಕನ್ನಡ ಸಾಹಿತ್ಯ ಕಣ, ದ್ರವ್ಯಗಳನ್ನು ಅಂತಾರಾಷ್ಟ್ರೀಯ ಅಂತರಿಕ್ಷದಲ್ಲಿ ಹಾರಿಬಿಡಬಲ್ಲರು. ಈ ಕಾರಣದಿಂದಲೂ ಅವರು ವಿಶೇಷವಾಗಿ ಗಮನ ಸೆಳೆಯುತ್ತಾರೆ.

ಇಂದು ದೇಶದ ಯಾವುದೇ ಭಾಷೆಯ ಸಾಹಿತ್ಯ ಸಮ್ಮೇಳನಗಳಲ್ಲಿ, ಸಾಹಿತ್ಯಗೋಷ್ಠಿಗಳಲ್ಲಿ, ಸಂವಾದದಲ್ಲಿ ಅವರಿಗೆ ಅಗ್ರ ತಾಂಬೂಲ. ಜೈಪುರ ಲಿಟ್ ಫೆಸ್ಟಿವಲ್ ಗಳಲ್ಲಿ ವಿಶೇಷ ಗೌರವ. ಇದು ಕೇವಲ ಸುಧಾಮೂರ್ತಿ ಎಂಬ ಒಬ್ಬ ಮಹಿಳೆಯ ಸಾಧನೆಯಲ್ಲ. ಇಂಥ ಸಾಹಿತ್ಯಸಂಸ್ಕಾರ , ಪರಿಸರವನ್ನು ಸಂಪನ್ನಗೊಳಿಸಿದ ಕನ್ನಡದ ಹಿರಿಮೆ – ಗರಿಮೆಯೂ ಹೌದು. ಕನ್ನಡದ ಒಬ್ಬ ಲೇಖಕಿ ಅಂತಾರಾಷ್ಟ್ರೀಯ ಮಟ್ಟ ತಲುಪಿದ ನೆಮ್ಮದಿಯ ವಿಚಾರವೂ ಹೌದು.

ಆದರೆ ದುರ್ದೈವದ ಸಂಗತಿಯೆಂದರೆ, ಕನ್ನಡಿಗರಿಗೆ ಸುಧಾಮೂರ್ತಿಯವರ ಸಾಹಿತ್ಯ ಕೃತಿಗಳ ಮಹತ್ವವೇ ಗೊತ್ತಾಗಿಲ್ಲ. ಕನ್ನಡದ ವಿಮರ್ಶಕರು ಸುಧಾಮೂರ್ತಿಯವರನ್ನು ಈ ಕಾಲಘಟ್ಟದ ಮಹತ್ವದ ಸಾಹಿತಿ ಎಂದು ಪರಿಗಣಿಸಿಯೇ ಇಲ್ಲ. (ಈ ವಿಮರ್ಶಕ ರನ್ನು ಬಹಳ ಗಂಭೀರವಾಗಿ ಪರಿಗಣಿಸಬೇಕಿಲ್ಲ ಎಂಬುದು ಬೇರೆ ವಿಚಾರ. ಡಾ.ಎಸ್.ಎಲ್. ಭೈರಪ್ಪನವರು ಮೂವತ್ತು ಕಾದಂಬರಿ ಬರೆದರೂ ಅವರ ಕೃತಿಗಳನ್ನು ವಿಮರ್ಶೆ ಮಾಡದೇ, ಅವರನ್ನು ಉದ್ದೇಶಪೂರ್ವಕವಾಗಿ ನಿರಾಕರಿಸುತ್ತಾ,
ನಿರ್ಲಕ್ಷಿಸುತ್ತಾ ಬಂದಿದ್ದನ್ನು ನೋಡಿಲ್ಲವೇ ? ಅಂದರೆ ಅಲ್ಲಿಯವರೆಗೆ ಕನ್ನಡ ವಿಮರ್ಶಕರು ಡಾ.ಭೈರಪ್ಪನವರನ್ನು ಗಂಭೀರ ವಾಗಿ ಪರಿಗಣಿಸಿರಲಿಲ್ಲ.) ಕನ್ನಡದ ಯಾವ ಘನಂಧಾರಿ ವಿಮರ್ಶಕನೂ, ಸುಧಾಮೂರ್ತಿಯವರ ಕೃತಿಗಳನ್ನು ಸಾಹಿತ್ಯ ವಿಮರ್ಶೆಯ ಮೂಸೆಯಲ್ಲಿ ಅಧ್ಯಯನಕ್ಕೆ ಮುಂದಾಗಿಲ್ಲ. ಅವರಿಗೆ ಅದೊಂದು ವಿಮರ್ಶನಕ್ಕೆ ಯೋಗ್ಯವಾದುದು ಎಂದು ಅನಿಸಿಲ್ಲ. ಇದರಿಂದ ಸುಧಾಮೂರ್ತಿಯವರಿಗೆ ಯಾವ ಹಾನಿಯೂ ಇಲ್ಲ, ಅದು ಕನ್ನಡ ಸಾಹಿತ್ಯಕ್ಕೆ ಆದ ನಷ್ಟ, ಅಪಚಾರ. ವಿಮರ್ಶಕರ ಕಸುಬಿಗೆ, ಸಾಹಿತ್ಯಧರ್ಮಕ್ಕೆ ಆದ ಹಾನಿ. ಕನ್ನಡದ ವಿಮರ್ಶಕರ ವಲಯದಲ್ಲಿ ಇಂದಿಗೂ ಸುಧಾಮೂರ್ತಿ
ಯವರು ಕಾರ್ಪೊರೇಟ್ ಲೇಖಕಿ. ಒಂದು ಸಾಹಿತ್ಯ ಕೃತಿಯನ್ನು ಅಥವಾ ಸಾಹಿತಿಯನ್ನು ಈ ರೀತಿ ನೋಡುವುದೇ ಡೇಂಜರಸ್. ಕನ್ನಡದ ವಿಮರ್ಶಕರು ಇನ್ನೂ ಯಾವ ಕಾಲದಲ್ಲಿ ಇದ್ದಾರೋ? ಗೊತ್ತಿಲ್ಲ.

ಒಂದು ಕೃತಿ ಅಥವಾ ಕೃತಿಕಾರ ಓದುಗರ ಮಧ್ಯೆ ಗುರುತಿಸಿಕೊಂಡು ಸರ್ವಮಾನ್ಯನಾದರೆ ಅದಕ್ಕಿಂತ ದೊಡ್ಡ ವಿಮರ್ಶನ ಮೀಮಾಂಸೆ ಮತ್ತೊಂದಿಲ್ಲ. ಸುಧಾಮೂರ್ತಿಯವರು ಅಷ್ಟರಮಟ್ಟಿಗೆ ಓದುಗರ ಪ್ರೀತಿ ಗಳಿಸಿ ಮತ್ತಷ್ಟು ಶ್ರೀಮಂತರಾಗಿದ್ದಾರೆ. ಓದುಗರಿಗೆ ಅನುಭವ ಶ್ರೀಮಂತಿಕೆ ನೀಡಿದ್ದಾರೆ. ಒಬ್ಬ ಬರಹಗಾರ್ತಿಯಿಂದ ಅದಕ್ಕಿಂತ ದೊಡ್ಡ ಸಾಹಿತ್ಯ ಸೇವೆ ಮತ್ಯಾವುದಿದೆ?
ಧನ್ಯತೆಗೆ ಅಷ್ಟು ಸಾಕು.