ವಿಶ್ಲೇಷಣೆ
ಪ್ರೊ.ಆರ್.ಜಿ.ಹೆಗಡೆ
ಪ್ರಧಾನಿ ಮೋದಿ ತಮ್ಮ ಈ ಅವಧಿಗಾಗಿ ಆದ್ಯತೆಯ ಕ್ಷೇತ್ರಗಳನ್ನು ಗುರುತಿಸಿರುವುದಾಗಿ ಹೇಳಿದ್ದಾರೆ. ಪ್ರಧಾನಿಯವರಲ್ಲಿ ಒಂದು ವಿನಂತಿ. ದಯವಿಟ್ಟು ಶಿಕ್ಷಣ ಕ್ಷೇತ್ರಕ್ಕೆ ಪ್ರಥಮ ಆದ್ಯತೆ ಕೊಡಿ! ಹೀಗೆ ವಿನಂತಿಸಲು ಕಾರಣಗಳಿವೆ. ಮೊದಲನೆಯದು, ಶಿಕ್ಷಣ ಇಂದು ಇಡೀ ದೇಶವನ್ನು ಆತಂಕಕ್ಕೀಡು ಮಾಡಿರುವ ಗಂಭೀರ ವಿಷಯ. ಆ ಕುರಿತು ರಾಷ್ಟ್ರೀಯ ನಿರ್ಧಾರದ ಅಗತ್ಯವಿದೆ.
ಎರಡನೆಯ ಕಾರಣ ನಮ್ಮದು ಅತ್ಯಧಿಕ ಜನಸಂಖ್ಯೆಯ ರಾಷ್ಟ್ರ. ಕೋಟಿ ಕೋಟಿ ಸಂಖ್ಯೆಯಲ್ಲಿರುವ ನಮ್ಮ ಮಕ್ಕಳಿಗೆ, ಯುವ ಜನತೆಗೆ ಸರಿಯಾದ ಶಿಕ್ಷಣ ಸಿಗದಿದ್ದರೆ ‘ಡೆಮಗ್ರಾಫಿಕ್ ಡಿವಿಡೆಂಡ್’ ನೀಡುವ ಬದಲು ಶಾಪವಾಗಿ ಹೋಗುತ್ತದೆ. ಅರೆಬೆಂದ ಶಿಕ್ಷಣ ಪಡೆದ ಯುವಕ ಯುವತಿಯರು ನಿರುದ್ಯೋಗಿ ಗಳಾಗಿ ಮುಂದೆ ಬಂದು ನಿಲ್ಲುತ್ತಾರೆ. ಅವರಿಗೆ ಸ್ವಂತ ಬಲದ ಮೇಲೆ ನೌಕರಿ ಪಡೆಯುವುದು ಅಥವಾ ಉದ್ಯೋಗ ಸೃಷ್ಟಿಸುವುದು ಸಾಧ್ಯವಾಗುವುದಿಲ್ಲ. ಏಕೆಂದರೆ ಅವರ ಶಿಕ್ಷಣ ಸಮಾಜಕ್ಕೆ ಅಪ್ರಸ್ತುತ. ಅವರು ‘ಕಲಿತಿದ್ದಕ್ಕೆ’ ಅಲ್ಲಿ ಸ್ಥಾನವಿರುವುದಿಲ್ಲ.
ಮತ್ತೆ ಅವರಿಗೆ ಕೃಷಿಗೆ, ಅಥವಾ ಉಳಿದ ಸಾಂಪ್ರದಾಯಿಕ ಕೌಟುಂಬಿಕ ಉದ್ಯೋಗಗಳಿಗೆ ಮರಳಿ ಹೋಗಲೂ ಆಗುವುದಿಲ್ಲ. ಏಕೆಂದರೆ ‘ಶಿಕ್ಷಣ’ ಸಾಮಾ ಜಿಕ, ಸಾಂಸ್ಕೃತಿಕ ಹಿನ್ನೆಲೆಯ ಉದ್ಯೋಗಗಳಿಂದ ಅವರನ್ನು ಹೊರ ತಂದುಬಿಟ್ಟಿದೆ. ಹೀಗಾಗಿ ಅವರು ಜೀವನೋಪಾಯಕ್ಕಾಗಿ ಸರಕಾರಗಳನ್ನೇ ಅವಲಂಬಿಸಿ ಕುಳಿತುಕೊಳ್ಳಬೇಕಾಗುತ್ತದೆ. ಐಐಟಿ, ಐಐಎಮ್‌ನಂತಹ ಸಂಸ್ಥೆಗಳಲ್ಲಿ ಕಲಿತವರನ್ನು ಬಿಟ್ಟು ಉಳಿದೆಡೆ ಶಿಕ್ಷಣ ಮುಗಿಸಿದ ಹಲವರ, ಮುಖ್ಯವಾಗಿ ಪದವಿ ಶಿಕ್ಷಣ ಮುಗಿಸಿದವರ ಪರಿಸ್ಥಿತಿ ಇಂದು ಹೀಗೆಯೇ ಇದೆ.
ಜೀವನ ನಿರ್ವಹಣೆಗೆ ಕಷ್ಟ ಎದುರಿಸಬೇಕಾಗಿದೆ. ಏಕೆಂದರೆ ಅವರು unemployed ಅಷ್ಟೇ ಅಲ್ಲ, unemployable ಕೂಡ ಎಂಬ ಭಾವನೆ ಉದ್ಯೋಗ ನೀಡುವ ವಲಯಕ್ಕೆ ಇದೆ. ಇಂಥವರಿಗೆ ಬದುಕು ಕಲ್ಪಿಸುವ ಒತ್ತಡಕ್ಕೆ ಬರುವ ಸರಕಾರಗಳು ‘ಸಬ್ಸಿಡಿ, ಫ್ರೀಬೀ’ ಮತ್ತು ರಿಸರ್ವೇಶನ್ ನಂತಹ ದಾರಿಗಳನ್ನು ಹುಡುಕಬೇಕಾಗುತ್ತದೆ. ಏಕೆಂದರೆ ಅವರ ಮುಂದೆ ಚುನಾವಣೆಯ ಅನಿವಾರ್ಯತೆ ಇರುತ್ತದೆ. ಮಿತಿಯೇ ಇಲ್ಲದ ಬೇಡಿಕೆಗಳನ್ನು ಪೂರೈಸಲು ಹೊರಡುವ ಸರಕಾರಗಳು ಕೊಟ್ಟು ಕೊಟ್ಟು ದಿವಾಳಿಯಾಗುತ್ತವೆ ಅಥವಾ ಅವುಗಳ ಬಳಿ ಅಭಿವೃದ್ಧಿ ಕಾರ್ಯಗಳಿಗೆ ಖರ್ಚುಮಾಡಲು ಹಣ ವಿರುವುದಿಲ್ಲ.
ಈಗ ಆಗಿರುವ ಹಾಗೆ. ಕೆಟ್ಟ ಗುಣಮಟ್ಟದ ಶಿಕ್ಷಣ ಪಡೆದ ಯುವಜನತೆ ದೇಶಕ್ಕೂ ಅಪಾಯಕಾರಿ. ಒಮ್ಮೆ ಅವರು ಶಿಕ್ಷಕರಾಗಿ ಬಿಟ್ಟರೆ ಅವರ ಬಳಿ ಕಲಿಯ ಬೇಕಾದ ದುರ್ವಿಧಿ ಹೊಂದಿದ ಮಕ್ಕಳ ಪರಿಸ್ಥಿತಿ ದುಸ್ತರವಾಗುತ್ತದೆ. ಶಿಕ್ಷಣ ದೇಶದಲ್ಲಿ ಅತಿ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಯ ಕ್ಷೇತ್ರಗಳಲ್ಲಿ ಒಂದು ಕೂಡ. ತದ್ವಿರುದ್ಧವಾಗಿ, ಒಳ್ಳೆಯ ಶಿಕ್ಷಣ ಪಡೆದ ಯುವಜನತೆ ತಮ್ಮ ದಾರಿಯನ್ನು ತಾವೇ ಕಂಡುಕೊಳ್ಳುತ್ತಾರೆ. ಬೇರೆಯವರಿಗೂ ದಾರಿ ದೀಪ ವಾಗುತ್ತಾರೆ. ದೇಶಕ್ಕೆ ವರದಾನವಾಗುತ್ತಾರೆ.
ಇನ್ನೂ ಒಂದು ವಿಷಯ. ಒಂದು ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ಜವಾಬ್ದಾರಿ ಶಿಕ್ಷಣದ ಮೇಲೆ ಇರುತ್ತದೆ. ಪೀಳಿಗೆ ಯಿಂದ ಪೀಳಿಗೆಗೆ ಸಂಸ್ಕೃತಿಯ ವರ್ಗಾ ವಣೆಯ ಮಾಧ್ಯಮ ಶಿಕ್ಷಣ. ಇಂತಹ ಮಾಧ್ಯಮ ವಿಫಲವಾದರೆ, ಚರಿತ್ರೆ ಹೇಳುವ ಹಾಗೆ, ದೇಶ ಸಾಮಾಜಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ ದುರ್ಭಲವಾಗುತ್ತದೆ. ಬ್ರಿಟಿಷರು ನಮ್ಮನ್ನು ಆಳಿದ ಕಾರಣ ಅದು. ಹೀಗೆ ದೇಶದ ಆರ್ಥಿಕ, ಸಾಮಾಜಿಕ, ನೈತಿಕ ಅಭಿವೃದ್ಧಿಯ ಅಡಿಗಲ್ಲು ಶಿಕ್ಷಣ. ಎಂತಹ ಶಿಕ್ಷಣವೆಂದರೆ ‘ದೇಸಿ’ ಸಾಂಸ್ಕೃತಿಕ ಬೇರು ಹೊಂದಿದ ಮತ್ತು ಜನರಿಗೆ ಜೀವನೋಪಾಯವನ್ನು ಕಲಿಸಬಲ್ಲ ಸಾಮರ್ಥ್ಯ ಹೊಂದಿದ್ದು.
ಇಂತಹ ಗುರಿಗಳನ್ನು ಹೊಂದಿದ ಶಿಕ್ಷಣವನ್ನು ನರ್ಸರಿಯಿಂದ ಹಿಡಿದು ಡಾಕ್ಟರೇಟ್ ತನಕ ಮರು ರೂಪಿಸುವ ತುರ್ತು ಇಂದು ನಮ್ಮ ಮುಂದೆ ಇದೆ.
ಏಕೆಂದರೆ ಶಿಕ್ಷಣ ಕ್ಷೇತ್ರ ದುರವಸ್ಥೆಯಲ್ಲಿದೆ. ಸತ್ಯಾನಾಶದ ಅಂಚಿನಲ್ಲಿದೆ. ಗಮನಿಸಿ! ಆಘಾತಕಾರಿ ಸತ್ಯಗಳಿವೆ. ಮಾಧ್ಯಮಿಕ ಶಾಲೆಗಳ ಬಹುತೇಕ ಶಿಕ್ಷಕರ ಅಭಿಪ್ರಾಯದಲ್ಲಿ (ಶಹರಗಳ ಕೆಲವು ಶಾಲೆಗಳನ್ನು ಬಿಟ್ಟು) ಪ್ರಾಥಮಿಕ ಶಿಕ್ಷಣ ಮುಗಿಸಿದವರಲ್ಲಿ ಬಹಳ ವಿದ್ಯಾರ್ಥಿಗಳಿಗೆ ಅಕ್ಷರ ಜ್ಞಾನವೇ ಇರುವುದಿಲ್ಲ. ಕನಿಷ್ಟ ಗಣಿತ ಬರುವುದಿಲ್ಲ. ಅಂತಹ ವಿದ್ಯಾರ್ಥಿಗಳು ಮಾಧ್ಯಮಿಕ ಶಾಲೆಗಳಿಗೆ ಬರುತ್ತಾರೆ. ಅವರಿಗೆ ಪಾಠ ತಲೆಗೆ ಹೋಗುವುದಿಲ್ಲ.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಂತೂ ಘೋರ ಕಂಟಕ. ಪಾಸು ಮಾಡುವುದು ಕಷ್ಟ. ಹಾಗೆಂದು ಅವರಿಗೆ ‘ಸಹಾಯ’ ಮಾಡಲು ಸರಕಾರಗಳು ಎಲ್ಲ ರೀತಿಯ ಪ್ರಯತ್ನದಲ್ಲಿ ತೊಡಗಿವೆ. ಸಿಲಬಸ್‌ಗಳು ಚಿಕ್ಕವಾಗುತ್ತ, ಹಗುರವಾಗುತ್ತಲೇ ಹೋಗಿವೆ. ಹೇಗಾದರೂ ಪಾಸಾಗಲು (ಪಾಸು ಮಾಡಲು?) ಎರಡು ಮೂರು ಸಪ್ಲಿಮೆಂಟರಿ ಪರೀಕ್ಷೆ ಗಳನ್ನು ಒದಗಿಸಲಾಗಿದೆ. ಮೌಲ್ಯಮಾಪನಗಳು ‘ಅಪಮೌಲ್ಯ’ ಗೊಂಡಿವೆ. ಆದರೂ ಎಸ್‌ಎಸ್‌ಎಲ್‌ಸಿ ಫಲಿತಾಂಶ ಕುಸಿಯುತ್ತದೆ.
ಕೊನೆಯ ಮಾರ್ಗವಾಗಿ ಈ ವರ್ಷ ಕರ್ನಾಟಕದಲ್ಲಿ ಲಕ್ಷಗಟ್ಟಲೆ ವಿದ್ಯಾರ್ಥಿಗಳನ್ನು ‘ಕೃಪಾಂಕ’ (ಪುಕ್ಕಟೆ ಮಾರ್ಕ್ಸ್) ಕೊಟ್ಟು ಪಾಸ್ ಮಾಡಲಾಯಿತು. ಇಷ್ಟು ‘ಸಹಾಯ’ ಮಾಡಿದರೂ ಲಕ್ಷಗಟ್ಟಲೆ ವಿದ್ಯಾರ್ಥಿಗಳು ಫೇಲಾಗಿ ಹಿಂದುಳಿಯುತ್ತಾರೆ. ಪಾಸಾದವರ ಗುಣಮಟ್ಟ ಕೂಡ ಪ್ರಶ್ನಾರ್ಥಕವಾದುದು.
ಮುಂದಿನದು, ಬಹುತೇಕ ಪಿಯು ಶಿಕ್ಷಕರ ಅಭಿಪ್ರಾಯದಲ್ಲಿ (ಸಹಜ ಇದು) ಎಸ್‌ಎಸ್‌ಎಲ್‌ಸಿ ಪಾಸಾಗಿ ಪ್ಲಸ್ ೨ ಹಂತಕ್ಕೆ ಬರುವ ಬಹಳ ವಿದ್ಯಾರ್ಥಿ
ಗಳಿಗೆ ವಾಸ್ತವಿಕವಾಗಿ ಅಲ್ಲಿಗೆ ಬರುವ ಅರ್ಹತೆ ಕಡಿಮೆ.
ಪಿಯು ಮುಗಿಸಿದರೆ, ಮುಗಿಸಿದ ನಂತರ ಹಲವು ರೀತಿಯ ಸಮಸ್ಯೆಗಳಿವೆ. ಗುಣಮಟ್ಟ ಇಲ್ಲದ ವಿದ್ಯಾರ್ಥಿಗಳು ದೊಡ್ಡ ಸಂಖ್ಯೆಯಲ್ಲಿ ಈಗ ಉನ್ನತ
ಶಿಕ್ಷಣಕ್ಕೆ ಬರುತ್ತಾರೆ. ಇದು ಒಂದು ಭಾಗ. ಇನ್ನೂ ಹಲವು ಸಮಸ್ಯೆಗಳಿವೆ. ಇಲ್ಲಿಂದ ವಿವಿಧ ಕೆರಿಯರ್ ಆಯ್ಕೆಗಳು ಆರಂಭವಾಗುತ್ತವೆ. ವಿಜ್ಞಾನದ
ವಿದ್ಯಾರ್ಥಿಗಳಿಗೆ ಪ್ರಧಾನ ಆಯ್ಕೆಗಳು ಇಂಜಿನಿಯ ರಿಂಗ್ ಮತ್ತು ಮೆಡಿಕಲ್ ಮಾತ್ರ. ಮಾಹಿತಿ ತಂತ್ರಜ್ಞಾನ ಕ್ಷೇತ್ರವನ್ನು ದೇಶದಲ್ಲಿ ಅಗಾಧವಾಗಿ
ಬೆಳೆಸಿದವರಿಗೆ ಕೃತಜ್ಞತೆ ಹೇಳಬೇಕು. ಏಕೆಂದರೆ ಅದು ಹಲವು ವರ್ಷಗಳ ಕಾಲ ದೇಶದಲ್ಲಿ ಕೋಟ್ಯಂತರ, ಒಳ್ಳೆಯ ಸಂಬಳದ ನೌಕರಿಗಳನ್ನು ಸೃಷ್ಟಿಸಿತು.
ವಿದೇಶಗಳ ಬಾಗಿಲುಗಳನ್ನು ತೆರೆಯಿತು.
ಹಾಗಾಗಿ ಇಂಜಿನಿಯರಿಂಗ್‌ಗೆ ಬೇಡಿಕೆ ಬಂತು. ಆದರೆ ಈಗ ಕೋರ್ಸ್ ಆಕರ್ಷಕವಾಗಿ ಉಳಿದಿಲ್ಲ. ಏಕೆಂದರೆ ಜಾಗತಿಕವಾಗಿ ಐಟಿ ಕ್ಷೇತ್ರ ‘ಕೃತಕ ಬುದ್ಧಿಮತ್ತೆ’
ತಂದಿಟ್ಟಿರುವ ಸವಾಲು ಎದುರಿಸುತ್ತಿದೆ. ಈಗ ಇಂಜಿನಿಯರಿಂಗ್ ಡಿಮಾಂಡ್ ಉಳಿದಿರುವುದು ಕೇವಲ ಐಐಟಿ ಅಥವಾ ಟಾಪ್ ಕ್ಲಾಸ್ ಕಾಲೇಜುಗಳಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಮಾತ್ರ. ಉಳಿದಂತೆ ಲಭ್ಯವಿರುವ ಸಾವಿರಾರು ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕಲಿತ ಲಕ್ಷಾಂತರ ವಿದ್ಯಾರ್ಥಿಗಳ ಗುಣಮಟ್ಟ ವನ್ನು ಜಾಬ್ ಮಾರ್ಕೆಟ್ ಅಷ್ಟಾಗಿ ಒಪ್ಪುತ್ತಿಲ್ಲ.
ಅಷ್ಟೊಂದು ನೌಕರಿಗಳೂ ಈಗ ಎಂಜಿನಿಯರಿಂಗ್‌ನಲ್ಲಿ ಹುಟ್ಟಿಕೊಳ್ಳುತ್ತಿಲ್ಲ. ಹೀಗಾಗಿ ಪದವಿ ಮೌಲ್ಯ ಕಳೆದುಕೊಳ್ಳುತ್ತಿದೆ. ಮೆಡಿಕಲ್ ಶಿಕ್ಷಣ ದುಬಾರಿ. ಸ್ನಾತಕೋತ್ತರ ಮೆಡಿಕಲ್ ಶಿಕ್ಷಣವಂತೂ ಗಗನ ಕುಸುಮ. ಬೇರೆ, ಬೇರೆ ರೀತಿಯ ಪ್ಯಾರಾ ಮೆಡಿಕಲ್ ಕೋರ್ಸಗಳು, ಕೃಷಿ ಮತ್ತು ಸಂಬಂಧಿತ ಕೋರ್ಸ್ ಗಳು ಇತ್ಯಾದಿಗಳಲ್ಲಿ ದುಡಿಮೆಯ ಅವಕಾಶ ಕಡಿಮೆ ಎಂಬ ಭಾವನೆ ಸಮಾಜಕ್ಕಿದೆ. ಕಾನೂನು ಶಿಕ್ಷಣ ತುಂಬಿಹೋದಂತಿದೆ. ಪದವಿ ಶಿಕ್ಷಣ ಗೊತ್ತುಗುರಿಗಳೇ ಇಲ್ಲದೆ ಅಪಮೌಲ್ಯಗೊಂಡಿದೆ.
ಬಿಎಸ್‌ಸಿ ಮಾಡಿದ ವಿದ್ಯಾರ್ಥಿಗಳಿಗೆ ಒಳ್ಳೆಯ ದಾರಿಗಳು ಕಾಣುತ್ತಿಲ್ಲ. ಕಾಮರ್ಸ್ ವಿದ್ಯಾರ್ಥಿಗಳಿಗೂ ಹಾಗೆಯೇ, ಸಿಎ ಪಾಸು ಮಾಡುವುದು ಕಷ್ಟ. ಎಂಬಿಎ ಪದವಿ ನೀಡುವ ಸಂಸ್ಥೆಗಳು ಗಲ್ಲಿಗಲ್ಲಿಗಳಲ್ಲಿ ಹುಟ್ಟಿಕೊಂಡಿವೆ. ಅದಕ್ಕೆ ಬೆಲೆ ಕಡಿಮೆ. ಆರ್ಟ್ಸ್ ಪದವಿ ಆಯ್ದುಕೊಂಡವರ ಗೋಳು ಯಾರಿಗೂ
ಬೇಡ. ಸ್ಪರ್ಧಾತ್ಮಕ ಪರೀಕ್ಷೆಗಳ ಕಡೆ ಹೋಗೋಣ ವೆಂದರೆ ಅಂತಹ ಆಯ್ಕೆ ಪ್ರಕ್ರಿಯೆಗಳು ಹೆಚ್ಚಾಗಿ ಭಾರಿ ಭ್ರಷ್ಟಾಚಾರ ತುಂಬಿದವು. ಅಲ್ಲದೆ ಒಟ್ಟಾರೆ
ಯಾಗಿಯೇ ಸರಕಾರಿ ಉದ್ಯೋಗಗಳು ಕಡಿಮೆಯಾಗಿವೆ.
ಖಾಸಗೀಕರಣ, ದಿನಗೂಲಿ ವ್ಯವಸ್ಥೆ ಬಂದಿದೆ. ಪತ್ರಿಕೋದ್ಯಮ ಸಂಕಷ್ಟದಲ್ಲಿದೆ. ಮನ ರಂಜನಾ ಉದ್ಯಮದತ್ತ ಸಾಮಾನ್ಯರು ತಲೆಹಾಕುವಂತಿಲ್ಲ. ಟೀಚರ್ ಆಗೋಣವೆಂದರೆ ಹಲವು ಖಾಸಗಿ ಶಾಲೆಗಳು ಶೋಷಣೆಯ ಕೇಂದ್ರಗಳು. ಸರಕಾರಿ ಶಾಲೆಗಳಲ್ಲಿ ನೇಮಕಾತಿ ಕಡಿಮೆ. ಪೋಸ್ಟ್ ಗ್ರಾಜುವೇಟ್ ಶಿಕ್ಷಣ ಕೂಡ ಸಂಕಟದಲ್ಲಿದೆ. ಏಕೆಂದರೆ ಬಹುತೇಕ ಪಿಜಿ ಕೋರ್ಸ್‌ಗಳಿಗೆ ಸಾಮಾಜಿಕ/ ಮಾರುಕಟ್ಟೆ ಮೌಲ್ಯ ಇಲ್ಲ. ಅಲ್ಲದೆ ಕಾಲೇಜುಗಳು ಕೂಡ ಪಿಜಿ ಕೇಂದ್ರ ಗಳನ್ನು ಆರಂಭಿಸಿವೆ. ಹಾಗಾಗಿ ವಿಶ್ವವಿದ್ಯಾಲಯಗಳ ವಿಭಾಗಗಳು ಬಾಗಿಲು ಹಾಕಿಕೊಳ್ಳುತ್ತಿವೆ.
ಪಿಎಚ್‌ಡಿ ಮಾಡೋಣವೆಂದರೆ ಅಲ್ಲಿಯೂ ಸಮಸ್ಯೆಗಳಿವೆ. ಪಿಎಚ್‌ಡಿ ಮಾಡಲು ಬಯಸುವವರ ಸಂಖ್ಯೆಗೆ ಹೋಲಿಸಿದರೆ ಗುರುತಿಸಲ್ಪಟ್ಟ ರಿಸರ್ಚ್ ಗೈಡ್‌ಗಳ ಸಂಖ್ಯೆ ಕಡಿಮೆ. ಮೇಲಿಂದ ವಿಜ್ಞಾನದ ಕೆಲವು ವಿಷಯಗಳನ್ನು ಬಿಟ್ಟರೆ ಉಳಿದ ಪಿಎಚ್‌ಡಿಗಳಿಗೂ ಮಾರುಕಟ್ಟೆ/ ಸಾಮಾಜಿಕ ಮೌಲ್ಯವಿಲ್ಲ. ನಮ್ಮ ಹೆಚ್ಚಿನ ಪಿಎಚ್‌ಡಿಗಳಿಗೆ ಮತ್ತು ಜ್ಞಾನದ ಅಭಿವೃದ್ಧಿಗೆ ಸಂಬಂಧವೇ ಇಲ್ಲ. ದೊಡ್ಡ ಪ್ರಮಾಣದಲ್ಲಿ ಹಣವಿದ್ದವರು ಮಕ್ಕಳನ್ನು ‘ಗುಣಮಟ್ಟದ’ ಖಾಸಗಿ ಶಾಲೆಗಳಿಗೆ ಕಳಿಸುತ್ತಿದ್ದಾರೆ. ಅಥವಾ ವಿದೇಶಗಳಿಗೆ ಕಳಿಸುತ್ತಿದ್ದಾರೆ. ದಾರಿಗಳನ್ನು ಕಂಡುಕೊಳ್ಳುತ್ತಿದ್ದಾರೆ ಎನ್ನುವ ಮಾತಿದೆ. ಕೆಲಮಟ್ಟಿಗೆ
ಸತ್ಯ ಅದು. ಡೂನ್ ಸ್ಕೂಲ್‌ಗಳಂತವು ಇವೆ. ಅದರೆ ಅವೆಲ್ಲ ಅತಿ ಶ್ರೀಮಂತರಿಗೆ ಮಾತ್ರ. ದುಬಾರಿ ಶಾಲೆ ಗಳು ಅವು. (ಸುಲಿಗೆಯ ಕೇಂದ್ರಗಳು ಎಂಬ
ಆಪಾದನೆಯೂ ಇದೆ). ವಿಚಿತ್ರವೆಂದರೆ ಇಂತಹ ಶಾಲಾ ಕಾಲೇಜುಗಳೂ ನಮ್ಮಲ್ಲಿ ದೊಡ್ಡ ಸಂಖ್ಯೆಯಲ್ಲಿ ಇಲ್ಲ.
ದೇಶದಲ್ಲಿ ಹೆಚ್ಚಾಗಿರುವ ಶ್ರೀಮಂತರ ಸಂಖ್ಯೆಗೆ ಹೋಲಿಸಿದರೆ ಅಲ್ಲಿಯೂ ಸಾಕಷ್ಟು ಸೀಟುಗಳಿಲ್ಲ. ದುಡ್ಡು ಕೊಡಲು ಸಿದ್ಧವಿದ್ದರೂ ಸೀಟುಗಳು ಇಲ್ಲ.
ಉದಾಹರಣೆಗೆ ಐಐಟಿ, ಐಐಎಮ್ ದರ್ಜೆಯ ಸಂಸ್ಥೆಗಳು ಖಾಸಗಿಯಲ್ಲಿ ಹುಟ್ಟಿಕೊಂಡಿಲ್ಲ. ಅದು ಹೋಗಲಿ. ಶ್ರೇಷ್ಠ, ಅಂತಾರಾಷ್ಟ್ರೀಯ ದರ್ಜೆಯ
ಕಾಲೇಜುಗಳು ಕಡಿಮೆ. ಹಾಗಾಗಿ ಇರುವ ಕೆಲವು ಕಾಲೇಜುಗಳಿಗೆ ನೂರಕ್ಕೆ ನೂರು ಗುಣ ಬಂದರೂ ಬೇಕಾದ ಸೀಟು ಸಿಗುತ್ತದೆಂದು ಹೇಳಲಾಗುವುದಿಲ್ಲ.
ದೆಹಲಿಯ ಕಾಲೇಜೊಂದರಲ್ಲಿ ಹಾಗೆ ಆಯಿತು. ಮೆರಿಟ್ ಕಟ್ ಆಫ್ ನೂರಕ್ಕೇ ನಿಂತುಹೋಯಿತು. ತೊಂಭತ್ತೊಂಭತ್ತು ಬಂದ ವಿದ್ಯಾರ್ಥಿಗಳಿಗೆ ಸೀಟು
ಇಲ್ಲ. ಅಂದರೆ ದುಡ್ಡು ಕೊಡಲು ಸಿದ್ಧವಿದ್ದರೂ ಸೀಟ್ ಇಲ್ಲ.
ಶ್ರೀಮಂತರ ಪರಿಸ್ಥಿತಿಯೇ ಹೀಗಾದರೆ ಮಧ್ಯಮ ಮತ್ತು ಬಡ ವರ್ಗಗಳು ತಮ್ಮ ಮಕ್ಕಳಿಗೆ (ಮೆರಿಟ್ ಇದ್ದರೂ) ಸೀಟು ಪಡೆಯಲು ಅನುಭವಿಸುವ ಸಂಕಟ ಅವರಿಗೇ ಗೊತ್ತು. ಏಕೆಂದರೆ ಶ್ರೇಷ್ಠತೆಯ ಗುಣಮಟ್ಟದ ಸರಕಾರಿ ಕಾಲೇಜುಗಳು ಬಹಳ ಕಡಿಮೆ. ದುಃಖದ ವಿಷಯವೆಂದರೆ ಗುಣಮಟ್ಟ ತನಿಖಾ ಏಜೆನ್ಸಿ ಗಳಿಂದ ‘ಎ’ ಗ್ರೇಡ್ ಪಡೆದ ಕಾಲೇಜು ಗಳು ಕೂಡ ಉದ್ದೇಶಿತ ಗುರಿಗಳನ್ನು (ಉದ್ಯೋಗ ಮತ್ತು ಸಂಸ್ಕೃತಿ) ಸಾಽಸಲು ಯಶಸ್ವಿಯಾಗಿವೆ ಎಂದು ಹೇಳಲಾಗುವುದಿಲ್ಲ.
ಇಂತಹ ಸನ್ನಿವೇಶದಲ್ಲಿ ನಮ್ಮ ಮುಂದೆ ಸರಳವಾದ ಆದರೆ ಉತ್ತರ ಕಾಣದ ಪ್ರಶ್ನೆಗಳಿವೆ. ನಮ್ಮ ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ಲಸ್ ೨, ಎಲ್ಲ
ಪದವಿ, ಸ್ನಾತಕೋತ್ತರ ಹಂತಗಳಿಗೆ ಗುಣಮಟ್ಟ ತರುವುದು ಹೇಗೆ? ವಿದ್ಯಾರ್ಥಿಗಳೊಳಗೆ ಉದ್ಯೋಗ ಪಡೆಯಬಲ್ಲ, ಅಥವಾ ನೀಡಬಲ್ಲ ಶಕ್ತಿ ತುಂಬು ವುದು ಹೇಗೆ? ಹಾಗೆಯೇ ಅವರನ್ನು ತಮ್ಮ ‘ಸಂಸ್ಕೃತಿಗಳ’ ಮಾಧ್ಯಮಗಳಾಗುವಂತೆ ನಿರೂಪಿಸುವುದು ಹೇಗೆ? ಹಾಗೆಂದು ರಾಷ್ಟ್ರೀಯವಾಗಿ ಶಿಕ್ಷಣಕ್ಕೆ ಅಗತ್ಯ ಮೂಲಭೂತ ಸೌಲಭ್ಯ ಇಲ್ಲವೇ ಇಲ್ಲವೆಂದೇನೂ ಅಲ್ಲ. ಸರಕಾರಗಳು ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಹಾಗೂ ಉನ್ನತ ಶಿಕ್ಷಣ ಅಭಿಯಾನ ನಡೆಸಿವೆ.
ಮೂಲಭೂತ ಸೌಲಭ್ಯ ತೀರ ನಿಕೃಷ್ಟವಾಗಿಯೇನೂ ಇದ್ದಂತಿಲ್ಲ. ತಕ್ಕ ಮಟ್ಟಿಗಿನ ಸೌಲಭ್ಯ ಸೃಷ್ಟಿಯಾಗಿದೆ. ಶಿಕ್ಷಕರ ತೀವ್ರ ಕೊರತೆ ಇದೆ ಅಥವಾ ಎಲ್ಲ ಶಿಕ್ಷಕರು ನಿರುಪಯೋಗಿ ಎಂದು ಹೇಳುವ ಹಾಗೂ ಇಲ್ಲ. ಬಹುಶಃ ಕೊರತೆ ಇರುವುದು ನುರಿತ ಶಿಕ್ಷಕರದು. ಮತ್ತೆ ವಿದ್ಯಾರ್ಥಿಗಳು ಅಷ್ಟೊಂದು ದಡ್ಡರು ಎಂದು ಭಾವಿಸುವುದೂ ತಪ್ಪು.
ಹಾಗಿದ್ದರೆ ಸಮಸ್ಯೆಯಾದರೂ ಏನು? ಎಲ್ಲಿ? ಬಹುಶಃ ಇಡೀ ಸಮಸ್ಯೆ ಇರುವುದು ವ್ಯವಸ್ಥೆಯ ನಿರ್ವಹಣೆಯದು ಮತ್ತು ಜವಾಬ್ದಾರಿಯ ಗುರುತಿಸುವಿಕೆ ಯದು. ಎಲ್ಲ ಕಡೆ ಸ್ಪಷ್ಟ ರೂಪದ ಕಾನೂನು ಗಳು ಮತ್ತು ಆಡಳಿತ ಸ್ಟ್ರಕ್ಚರ್‌ಗಳ ನಿರ್ಮಾಣದ ಅವಶ್ಯಕತೆಯೂ ಇದೆ. ಹಾಗೆಯೇ ಮಹತ್ವದ್ದು
ಆಧುನಿಕ ಮೈಂಡ್‌ಸೆಟ್‌ನ ಟೀಚರ್‌ಗಳ ಸೃಷ್ಟಿ, ನಿರಂತರ ಮರುಕಲಿಕೆ ಮತ್ತು ವಿದ್ಯಾರ್ಥಿಗಳ ಆಸಕ್ತಿ ಸೆಳೆಯಬಲ್ಲ, ಅವರನ್ನು ಹುರಿದುಂಬಿಸಬಲ್ಲ,
ಅವರಲ್ಲಿ ಶಿಕ್ಷಣದ ಕುರಿತ ಭರವಸೆ ತುಂಬಬಲ್ಲ ಕಲಿಕಾ ವಿಧಾನ. ಬಹುಶಃ ಸಮಸ್ಯೆ ಇರುವುದು ಸಿಲಬಸ್ ಮತ್ತು ಕ್ಲಾಸ್‌ರೂಂನೊಳಗೆ ಕಲಿಸುವಿಕೆಯ ವಿಧಾನ ಗಳಲ್ಲಿ. ಈ ಮಾತುಗಳು ಕೂಡ ಗ್ರಹಿಕೆಗಳು. ಬಹುಶಃ ಇನ್ನೂ ಆಳಕ್ಕೆ ಹೋಗಿ ಕೂಡ ನಾವು ಸಮಸ್ಯೆಗಳನ್ನು ಸ್ಪಷ್ಟವಾಗಿ ಗುರುತಿಸಬೇಕಿದೆ.
ಅಂದರೆ ಸಮಗ್ರವಾಗಿ ಶಿಕ್ಷಣದ ಸ್ಥಿತಿಗತಿ ಅರಿಯಲು ಪರಿಹಾರ ಕಂಡು ಹಿಡಿಯಲು ಸತ್ಯಶೋಧನಾ ಸಮಿತಿಯೊಂದನ್ನು ರಚಿಸಬೇಕಿದೆ. ಸಹಜವಾಗಿ ಹೆಚ್ಚಿನ ಬಜೆಟರಿ ಬೆಂಬಲದ ಅವಶ್ಯಕತೆ ಇದೆ. ಕೇಂದ್ರ ಸರಕಾರವೇ ಈ ಕುರಿತು ಹೆಜ್ಜೆಗಳನ್ನಿಡಬೇಕು. ಏಕೆಂದರೆ ಇದು ರಾಷ್ಟ್ರೀಯ ವಿಷಯ.
(ಲೇಖಕರು: ಮಾಜಿ ಪ್ರಾಂಶುಪಾಲರು
ಮತ್ತು ಅಧ್ಯಾಪಕರು)