Friday, 18th October 2024

ಚುನಾವಣಾ ಅಸ್ತ್ರವಾದ ಮೀಸಲು ಹೆಚ್ಚಳ ಕೂಗು

ವರ್ತಮಾನ

maapala@gmail.com

ಇನ್ನೇನು ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ೨ಎ ಮೀಸಲು ಸಿಕ್ಕಿಯೇ ಬಿಟ್ಟಿತು ಎನ್ನುವಷ್ಟರಲ್ಲಿ ಮತ್ತೆ ವಿಘ್ನ ಎದುರಾಗಿದೆ. ‘ಡಿ.೨೯ರೊಳಗೆ ನಮಗೆ ೨ಎ ಮೀಸಲು ಘೋಷಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಾಯಿ ಮೇಲೆ ಆಣೆ ಮಾಡಿ ಭರವಸೆ ಕೊಟ್ಟಿದ್ದಾರೆ. ಹೀಗಾಗಿ ನಮಗೆ ಅದು ಸಿಕ್ಕಿಯೇ ಬಿಡುತ್ತದೆ’ ಎಂದು ಪಂಚಮಸಾಲಿ ಸಮುದಾಯದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೊಂಡಿzರೆ.

ಆದರೂ ಅಷ್ಟರಲ್ಲಿ ೨ಎ ಮೀಸಲು ಸಿಗುವುದು ಕಷ್ಟಸಾಧ್ಯ. ಅದರ ಬದಲು ಬೇರೇನಾದರೂ ರಾಜೀ ಸೂತ್ರವನ್ನು ಸರಕಾರ ಪ್ರಕಟಿಸುವ ಸಾಧ್ಯತೆ ಇದೆ. ಪಂಚಮಸಾಲಿ ಸಮುದಾಯಕ್ಕೆ ಮೀಸಲು ಸಿಗಲಿ, ಬಿಡಲಿ. ಆದರೆ, ಮೀಸಲು ಬೇಡಿಕೆ ಎನ್ನುವುದು ರಾಜಕೀಯ ಅಸ್ತ್ರವಾಗಿ ಪರಿವರ್ತನೆಗೊಂಡಿದ್ದು, ಚುನಾವಣೆ ವೇಳೆ ರಾಜಕೀಯ ಪಕ್ಷಗಳನ್ನು ಬೆದರಿಸಿ ತಮ್ಮ ಬೇಡಿಕೆ
ಈಡೇರಿಸಿಕೊಳ್ಳಲು ಸಮುದಾಯದ ನಾಯಕರಿಗೆ ಇದೊಂದು ಪ್ರಮುಖ ಸಾಧನವಾಗಿರುವುದಂತೂ ಸತ್ಯ.

ಒಂದೊಮ್ಮೆ ಸರಕಾರ ಪಂಚಮಸಾಲಿ ಸಮುದಾಯದ ಬೇಡಿಕೆಯಂತೆ ೨ಎ ಮೀಸಲು ಕಲ್ಪಿಸಿತು ಎಂದಾದರೆ ಮೀಸಲಿಗಾಗಿ ಪಟ್ಟು ಹಿಡಿದಿರುವ ಇತರೆ ಸಮುದಾಯಗಳು ಸರಕಾರದ ಮೇಲೆ ತಿರುಗಿ ಬೀಳುವುದಂತೂ ಸತ್ಯ. ಪ್ರಸ್ತುತ ಮೀಸಲಿಗಾಗಿ ಬೇಡಿಕೆ ಇಟ್ಟು ಹೋರಾಟ ನಡೆಸುತ್ತಿರುವ ಸಮುದಾಯಗಳಿಗೇನೂ ಕೊರತೆ ಇಲ್ಲ. ಕುರುಬ, ಒಕ್ಕಲಿಗ, ಉಪ್ಪಾರ, ಗಂಗಾ ಮತಸ್ಥ, ಬೇಡ ಜಂಗಮ, ಗಾಣಿಗ ಲಿಂಗಾಯತ, ಬಣಜಿಗ ಲಿಂಗಾಯತ, ಸವಿತಾ ಸಮಾಜ, ವಿಶ್ವಕರ್ಮ ಸಮಾಜ… ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ಒಬ್ಬರಿಗೆ ಮೀಸಲು ನೀಡಿ ಇನ್ನೊಬ್ಬರನ್ನು ಕಡೆಗಣಿಸಿದರೆ ಆಗ ಅವರು ಸರಕಾರದ ವಿರುದ್ಧ ತಿರುಗಿ ಬೀಳುವುದು ಸಹಜ. ಇದು ಆಡಳಿತ ಪಕ್ಷಕ್ಕೆ ಚುನಾವಣೆಯಲ್ಲಿ ಪ್ರತೀಕೂಲ ಪರಿಣಾಮ ಬೀರುವ ಸಾಧ್ಯತೆಯೂ ಇದೆ. ಹೀಗಾಗಿ ಪಂಚಮಸಾಲಿ ಸಮು ದಾಯಕ್ಕೆ ಮೀಸಲು ನೀಡುವುದು ಸರಕಾರದ ಪಾಲಿಗೆ ಕೆಂಡವನ್ನು ಬಗಲಲ್ಲಿ ಕಟ್ಟಿಕೊಂಡಂತೆ ಆಗಲಿದೆ. ೨ಎ ಮೀಸಲಿಗಾಗಿ ಪಂಚಮಸಾಲಿ ಸಮುದಾಯದ ಹೋರಾಟ ಇಂದು, ನಿನ್ನೆಯದ್ದಲ್ಲ.

1994ರ ಆಗಸ್ಟ್‌ನ ೨ಎ ಮೀಸಲಿಗಾಗಿ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ ಹೋರಾಟ ಆರಂಭಿಸಿತ್ತು. ಇದರ ಪರಿಣಾಮ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ 2009 ರಲ್ಲಿ ಪ್ರತ್ಯೇಕ ಉಪಸಮಿತಿ ರಚಿಸಿ ಪಂಚಮಸಾಲಿ ಸಮುದಾಯವನ್ನು ಜಾತಿ ಪಟ್ಟಿಯಲ್ಲಿ ಸೇರಿಸಿ ಗೆಜೆಟ್ ನೋಟಿಫಿಕೇಷನ್ ಮಾಡುವ ಮೂಲಕ ಸಾಮಾನ್ಯವರ್ಗದಿಂದ ಪ್ರವರ್ಗ ೩ ಬಿ ವರ್ಗಕ್ಕೆ ಸೇರಿಸಲಾಗಿತ್ತು. ಆಗಲೇ ೨ಎ ಪ್ರವರ್ಗಕ್ಕೆ ಸೇರಿಸಬೇಕು ಎನ್ನುವ ಹೋರಾಟ ಶುರುವಾಗಿದ್ದು.

ಮತ್ತೆ ಮುಖ್ಯಮಂತ್ರಿಯಾದ ಯಡಿಯೂರಪ್ಪ ಅವರು 2021ರಲ್ಲಿ ಈ ಸಮುದಾಯಕ್ಕೆ ೨ಎ ಮೀಸಲಿಗಾಗಿ ಸಮೀಕ್ಷೆ
ಮಾಡಲು ಶಾಶ್ವತ ಹಿಂದುಳಿದ ವರ್ಗಗಳ ಆಯೋಗಕ್ಕೆ ಹೇಳಿದರು. ಇದೀಗ ಆಯೋಗ ಮಧ್ಯಂತರ ವರದಿ ಸಲ್ಲಿಸಿದೆ.
ಆದರೆ, ಪಂಚಮಸಾಲಿ ಸಮುದಾಯಕ್ಕೆ ಮೀಸಲು ಕಲ್ಪಿಸುವ ಹೋರಾಟ ತೀವ್ರಗೊಳ್ಳಲು ಕಾರಣ ಪಂಚಮಸಾಲಿ ಹರಿಹರ
ಪೀಠದ ವಚನಾನಂದ ಸ್ವಾಮೀಜಿ ಹಾಗೂ ಕೂಡಲಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಧ್ಯೆ ಉದ್ಭವಿಸಿದ ಸ್ಪರ್ಧೆ. ಪಂಚಮಸಾಲಿ ಸಮುದಾಯಕ್ಕೆ ಏಕೈಕ ಗುರುಪೀಠ ಇರಬೇಕು ಎಂಬುದು ಬಸವಜಯ ಮೃತ್ಯುಂಜಯ ಸ್ವಾಮೀಜಿಯವರ ಅಭಿಪ್ರಾಯ.

ಇದಕ್ಕೆ ಹರಿಹರ ಪೀಠದ ವಚನಾನಂದ ಸ್ವಾಮೀಜಿ ಅಡ್ಡಿಯಾಗಿದ್ದರು. ಈ ಪೀಠದ ಶಾಖೆಗಳನ್ನು ಸ್ಥಾಪಿಸಲು ಶುರು ಮಾಡಿದರು. ಹೀಗಾಗಿ ಪಂಚಮಸಾಲಿ ಸಮುದಾಯದ ಬಹುಭಾಗವನ್ನು ತಮ್ಮ ಉಳಿಸಿಕೊಳ್ಳಲು ಬಸವಜಯ ಮೃತ್ಯುಂಜಯ ಸ್ವಾಮೀಜಿ ಮೀಸಲು ಹೋರಾಟ ತೀವ್ರಗೊಳಿಸಿದರು. ಇವರಿಗೆ ಬೆಂಬಲವಾಗಿ ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ್, ಕಾಂಗ್ರೆಸ್ ನ ವಿಜಯಾನಂದ ಕಾಶೆಪ್ಪನವರ್ ಮತ್ತಿತರರು ನಿಂತರು.

ಮತ್ತೊಂದೆಡೆ ವಚನಾನಂದ ಸ್ವಾಮೀಜಿ ಪರವಾಗಿ ಸಚಿವ ಮುರುಗೇಶ್ ನಿರಾಣಿ ಮತ್ತಿತರರು ಜತೆಗೂಡಿದರು. ಪಂಚಮಸಾಲಿ ಮೀಸಲು ಹೋರಾಟ ತಾರಕ್ಕೇರಲು ಇಬ್ಬರು ಸ್ವಾಮೀಜಿಗಳು ಮತ್ತು ಅವರ ಬೆಂಬಲಿಗರ ನಡುವಿನ ಪೈಪೋಟಿಯೇ ಕಾರಣ ವಾಯಿತು. ಆದರೆ, ಇದರಿಂದ ಪಂಚಮಸಾಲಿ ಸಮುದಾಯ ಎರಡು ಗುಂಪುಗಳಾಗಿ ವಿಭಜನೆಯಾಯಿತು. ಒಂದು ಗುಂಪು ಸರಕಾರದ ವಿರುದ್ಧ ಮುಗಿಬಿದ್ದರೆ, ಇನ್ನೊಂದು ಗುಂಪು ‘ಕಾಂಪ್ರಮೈಸ್’ ಹೋರಾಟ ಮಾಡುತ್ತಿದೆ.

ಪಂಚಮಸಾಲಿ ಸಮುದಾಯಕ್ಕೆ ೨ಎ ಮೀಸಲು ಕಲ್ಪಿಸುವುದು ಅಷ್ಟೊಂದು ಸುಲಭವಲ್ಲ ಎಂಬುದು ಎರಡೂ ಬಣಗಳಿಗೆ ಗೊತ್ತಿದೆ. ಅಷ್ಟೇ ಅಲ್ಲ, ಅವರನ್ನು ೨ಎ ಪ್ರವರ್ಗಕ್ಕೆ ಸೇರಿಸಲು ಕಷ್ಟ. ಹಾಗಾಗಿ ಪ್ರತ್ಯೇಕ ಪ್ರವರ್ಗ ಸೃಷ್ಟಿಸುವುದು ಸೂಕ್ತ ಎಂಬ ಅಭಿಪ್ರಾಯವನ್ನು ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಸಲ್ಲಿಸಿರುವ ಮಧ್ಯಂತರ ವರದಿಯಲ್ಲಿ ತಿಳಿಸಲಾಗಿದೆ. ಬಹು ಸಂಖ್ಯಾತರಾಗಿರುವ ಪಂಚಮಸಾಲಿಗಳನ್ನು ೨ಎ ಪ್ರವರ್ಗಕ್ಕೆ ಸೇರಿಸಿದರೆ ಆ ಪ್ರವರ್ಗದಲ್ಲಿರುವ ಇತರೆ ಜಾತಿಗಳಿಗೆ ಮೀಸಲು ಸಿಗುವುದು ಕಷ್ಟ. ಈ ಕಾರಣಕ್ಕೆ ಪ್ರತ್ಯೇಕ ಪ್ರವರ್ಗ ರೂಪಿಸಿದರೆ ಅದಕ್ಕೆ ಎಲ್ಲಿಂದ ಮೀಸಲು ಕಲ್ಪಿಸುವುದು ಯಾವ ಪ್ರವರ್ಗದ ಮೀಸಲು ಕಡಿಮೆ ಮಾಡುವುದು ಎಂಬುದೇ ದೊಡ್ಡ ಚಿಂತೆ.

ಏಕೆಂದರೆ ಮೀಸಲು ಪ್ರಮಾಣ ಶೇ. ೫೦ಮೀರಬಾರದು ಎಂಬುದು ಸುಪ್ರೀಂ ಕೋರ್ಟ್ ಆದೇಶ ಮತ್ತು ಕೇಂದ್ರ ಸರಕಾರದ ನಿಲುವು ಕೂಡ. ಈಗಾಗಲೇ ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲನ್ನು ಹೆಚ್ಚಿಸಿರುವುದರಿಂದ ಒಟ್ಟಾರೆ ಮೀಸಲು ಪ್ರಮಾಣ ಶೇ. ೫೬ಕ್ಕೆ ತಲುಪಿದೆ. ಹೀಗಾಗಿ ಸರಕಾರ ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲು ಹೆಚ್ಚಿಸಿದರೂ ಅದಕ್ಕೆ ಕೇಂದ್ರ ಸರಕಾರ ಸಂಸತ್ತಿನಲ್ಲಿ ಸಂವಿಧಾನದ ೯ನೇ ಶೆಡ್ಯೂಲ್ ಗೆ ತಿದ್ದುಪಡಿ ತರಬೇಕು.

ಹೀಗಿರುವಾಗ ಮೀಸಲು ಹೆಚ್ಚಳ ಎಂಬುದು ಸರಕಾರದ ಪಾಲಿಗೆ ಕಬ್ಬಿಣದ ಕಡಲೆಯಾಗಿದೆ. ೨ಎ ಪಂಚಮಸಾಲಿ ಹೋರಾಟಕ್ಕೆ ಸರಕಾರ ಸ್ಪಂದಿಸುತ್ತಿದ್ದಂತೆ ಇದೀಗ ಒಕ್ಕಲಿಗ ಸಮುದಾಯದವರು ಎದ್ದು ಕುಳಿತಿದ್ದಾರೆ. ತಮಗೂ ಮೀಸಲು ಬೇಕು ಎಂದು ಪಟ್ಟು ಹಿಡಿದಿದ್ದಾರೆ. ಒಕ್ಕಲಿಗ ಸಮುದಾಯ ರಾಜಕೀಯವಾಗಿ ಪ್ರಬಲವಾಗಿರುವುದರಿಂದ ಮತ್ತು ಯಾವುದೇ ಪಕ್ಷದ ಸರಕಾರ ಅಧಿಕಾರಕ್ಕೆ ಬಂದರೂ ಸಮುದಾಯದ ಕೆಲವರು ಪ್ರಮುಖ ಸಚಿವ ಸ್ಥಾನಗಳಲ್ಲಿರುವುದರಿಂದ ಅವರ ಹೋರಾಟಕ್ಕೂ ಹೆಚ್ಚು ಶಕ್ತಿ ಬರುತ್ತದೆ.

ಈಗಾಗಲೇ ಸಚಿವರಾದ ಆರ್.ಅಶೋಕ್, ಡಾ.ಸಿ.ಎನ್.ಅಶ್ವತ್ಥನಾರಾಯಣ, ಡಾ.ಕೆ.ಸುಧಾಕರ್, ಕೆ.ಗೋಪಾಲಯ್ಯ ಸೇರಿದಂತೆ ಸಚಿವರ ನಿಯೋಗ ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಮೀಸಲು ಕುರಿತು ಮನವಿ ಸಲ್ಲಿಸಿದೆ. ಒತ್ತಡ ಹೆಚ್ಚಾದರೆ ಸಹಜವಾಗಿಯೇ ಸರಕಾರ ಇಕ್ಕಟ್ಟಿಗೆ ಸಿಲುಕುತ್ತದೆ. ಮತ್ತೊಂದೆಡೆ ಆರ್ಥಿಕವಾಗಿ ಹಿಂದುಳಿದವರಿಗೆ ಶೇ. ೧೦ರಷ್ಟು
ಮೀಸಲು ಕಲ್ಪಿಸುವ ಕೇಂದ್ರ ಸರಕಾರದ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್ ಹಸಿರು ನಿಶಾನೆ ತೋರಿಸಿ ಒಟ್ಟಾರೆ ಮೀಸಲು
ಪ್ರಮಾಣವನ್ನು ಶೇ. ೬೦ಕ್ಕೆ ಹೆಚ್ಚಿಸಲು ಅನುಮತಿ ನೀಡಿರುವುದರಿಂದ ಆ ಮೀಸಲಿಗೂ ಸರಕಾರದ ಮೇಲೆ ಒತ್ತಡ ಹೆಚ್ಚಾಗುತ್ತಿದೆ.

ಪಂಚಮಸಾಲಿ ಸಮುದಾಯಕ್ಕೆ ೨ಎ ಮೀಸಲು ಕಲ್ಪಿಸಲು ಸರಕಾರ ಸರ್ವ ರೀತಿಯ ಪ್ರಯತ್ನ ನಡೆಸುತ್ತಿದೆ. ಅದೇನಾದರೂ ಕಾರ್ಯರೂಪಕ್ಕೆ ಬಂದರೆ ತಮಗೂ ಮೀಸಲು ಕಲ್ಪಿಸಬೇಕು ಎಂಬ ಬೇಡಿಕೆ ಮುಂದಿಟ್ಟಿರುವ ನಾನಾ ಸಮುದಾಯಗಳು ತನ್ನ ಹೋರಾಟ ತೀವ್ರಗೊಳಿಸಲು ಸಿದ್ಧವಾಗಿ ಕುಳಿತಿವೆ. ಈಗಾಗಲೇ ತಮ್ಮನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಕುರುಬ, ಉಪ್ಪಾರ, ಗಂಗಾಮತಸ್ಥ ಸಮುದಾಯದವರು ಸರಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ.

ಮತ್ತೊಂದೆಡೆ ಗಾಣಿಗ ಲಿಂಗಾಯತರು ೨ಎ ಮೀಸಲಿಗೆ ಪಟ್ಟು ಹಿಡಿದಿzರೆ. ಗಾಣಿಗ ಸಮುದಾಯ ೨ಎ ವ್ಯಾಪ್ತಿಯಲ್ಲಿದ್ದರೂ ಅದೇ ವೃತ್ತಿ ನಡೆಸುತ್ತಿರುವ ಗಾಣಿಗ ಲಿಂಗಾಯತರು ತಮ್ಮ ವೃತ್ತಿಯ ಜತೆಗೆ ಲಿಂಗಾಯತ ಎಂಬ ಪದ ಸೇರಿಸಿಕೊಂಡ ಕಾರಣದಿಂದಾಗಿ ೨ಎ ಮೀಸಲಿನಿಂದ ಹೊರಗುಳಿದಿzರೆ. ಹೀಗಾಗಿ ಅವರೂ ಕೂಡ ೨ಎ ಮೀಸಲಿಗಾಗಿ ಸರಕಾರದ ಮೇಲೆ ತೀವ್ರ ಒತ್ತಡ ತರಲು ಬೀದಿ ಹೋರಾಟ ನಡೆಸುವುದು ನಿಶ್ಚಿತ. ಇದರ ಜತೆಗೆ ಸವಿತಾ ಸಮಾಜ, ವಿಶ್ವಕರ್ಮ ಸಮಾಜ, ಮಡಿವಾಳ ಸಮಾಜ ಕೂಡ ಮೀಸಲಿಗಾಗಿ ಒತ್ತಾಯ ಮಾಡುತ್ತಿದೆಯಾದರೂ ಪ್ರಬಲ ನಾಯಕತ್ವದ ಕೊರತೆಯಿಂದ ಪಂಚಮಸಾಲಿಯವರಂತೆ ಸರಕಾರವನ್ನು ಬೆದರಿಸುವ ಮಟ್ಟಕ್ಕೆ ಹೋರಾಟ ನಡೆಸಲು ಸಾಧ್ಯವಾಗುತ್ತಿಲ್ಲ.

ಇದು ಆ ಸಮುದಾಯಗಳಿಗಿರುವ ಸಮಸ್ಯೆಯಾದರೂ ಚುನಾವಣೆ ವೇಳೆ ತಿರುಗಿ ಬಿದ್ದರೆ ಕೆಲವು ನಿರ್ಣಾಯಕ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಗೆಲುವಿಗೆ ಕಷ್ಟವಾಗಬಹುದು. ಈ ಎಲ್ಲ ಕಾರಣಗಳಿಂದಾಗಿಯೇ ಚುನಾವಣೆ ಸಮೀಪಿಸುತ್ತಿದ್ದಂತೆ ಪ್ರಮುಖ ಸಮುದಾಯಗಳಿಗೆ ‘ಮೀಸಲು ಹೆಚ್ಚಳ’ ಎನ್ನುವುದು ಸರಕಾರದ ವಿರುದ್ಧ ಬಳಸಲು ಪ್ರಮುಖ ಅಸ್ತ್ರವಾಗಿದೆ. ಇವರ ಬೇಡಿಕೆ ಗಳಿಗೆ ಸ್ಪಂದಿಸದಿದ್ದರೆ ಜನ ತಿರುಗಿ ಬೀಳಬಹುದು. ಮತ್ತೊಂದೆಡೆ ಪ್ರತಿಪಕ್ಷಗಳು ಈ ಸಮುದಾಯಗಳನ್ನು ಬೆಂಬಲಿಸಿ ಸರಕಾರದ ವಿರುದ್ಧ ಅವರನ್ನು ಎತ್ತಿಕಟ್ಟಬಹುದು.

ಇದರ ಪರಿಣಾಮ ಚುನಾವಣೆ ವೇಳೆ ಈ ಸಮುದಾಯಗಳು ಪ್ರತಿಪಕ್ಷಗಳ ಪರ ನಿಂತರೆ ಆಡಳಿತ ಪಕ್ಷಕ್ಕೆ ಹಿನ್ನಡೆ ಉಂಟಾಗಬ ಹುದು ಎಂಬುದು ಆಡಳಿತ ಪಕ್ಷದ ಆತಂಕ. ಲಾಸ್ಟ್ ಸಿಪ್: ಚುನಾವಣೆ ಬಂದಾಗ ಎಲ್ಲವೂ ಬೇಕು ಎಂಬುದು ನೆನಪಾಗುತ್ತದೆ ಎಂದರೆ ಅದನ್ನು ಬ್ಲ್ಯಾಕ್ ಮೇಲ್ ಎಂದು ಕರೆಯಬಹುದಲ್ಲವೇ?