Saturday, 27th July 2024

ಕೊನೆಗೆ ಗೆದ್ದಿದ್ದು ದೇಶದ ಮತದಾರ !

ಅಶ್ವತ್ಥಕಟ್ಟೆ

ranjith.hoskere@gmail.com

ಬಿಜೆಪಿಯಿಂದ ಮತಗಳು ಕೈಬಿಟ್ಟುಹೋಗಿಲ್ಲ ಎಂಬುದು ಲೋಕಸಭಾ ಚುನಾವಣಾ ಫಲಿತಾಂಶದಿಂದ ಸ್ಪಷ್ಟ. ಆದರೆ ಚದುರಿಹೋಗಿದ್ದ ಮತಗಳನ್ನು ಒಗ್ಗೂಡಿಸುವಲ್ಲಿ ‘ಇಂಡಿಯ’ ಒಕ್ಕೂಟ ಯಶಸ್ವಿಯಾಗಿದೆ. ಜತೆಗೆ ಪ್ರಾದೇಶಿಕ ಪಕ್ಷಗಳು ಕಸಿದಿರುವ ಮತಗಳೂ ಬಿಜೆಪಿಯ ಇಂದಿನ ಫಲಿತಾಂಶಕ್ಕೆ ಕಾರಣವಾಗಿವೆ.

ಸುದೀರ್ಘ ಅವಧಿಯವರೆಗೆ ನಡೆದ ಲೋಕ ಸಭಾ ಚುನಾವಣೆಯ ಫಲಿತಾಂಶ ಪ್ರಕಟ ವಾಗಿ, ಹೊಸ ಸರಕಾರದ ರಚನೆಯೂ ಆಗಿದೆ. ‘ಮತ್ತೊಮ್ಮೆ ನಮೋ’ ಎಂಬ ಘೋಷಣೆಯೊಂದಿಗೆ ಚುನಾವಣಾ ಅಖಾಡಕ್ಕೆ ಧುಮುಕಿದ್ದ ಬಿಜೆಪಿಗೆ ಸ್ಪಷ್ಟ ಬಹುಮತ ಬರಲಿಲ್ಲ ಎನ್ನುವ ಬೇಸರವಿದ್ದರೂ, ಸರಕಾರವನ್ನು
ರಚಿಸಿರುವ ಖುಷಿಯಿದೆ. ಇತ್ತ ಚುನಾವಣೆಯಲ್ಲಿ ಸೋತರೂ, ದಶಕದ ಬಳಿಕ ಕಡೇಪಕ್ಷ ಪ್ರತಿಪಕ್ಷ ಸ್ಥಾನವಾದರೂ ಸಿಕ್ಕಿದೆ ಎನ್ನುವ ‘ಉತ್ಸಾಹ’ದಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ.

ಈ ಮೂಲಕ, ಈ ಬಾರಿಯ ಫಲಿತಾಂಶದಿಂದಾಗಿ ‘ಖುಷಿಯಿಲ್ಲ, ಸಮಾಧಾನವಿದೆ’ ಎನ್ನುವ ಪರಿಸ್ಥಿತಿ ರಾಷ್ಟ್ರ ರಾಜಕಾರಣದಲ್ಲಿ ನಿರ್ಮಾಣವಾಗಿದೆ.
ಈ ಬಾರಿ ‘೨೭೨’ ಮ್ಯಾಜಿಕ್ ನಂಬರ್ ಅನ್ನು ಬಿಜೆಪಿ ದಾಟದಿದ್ದರೂ, ಎನ್‌ಡಿಎ ಒಕ್ಕೂಟವು ೨೯೩ ಸ್ಥಾನಗಳನ್ನು ಗೆಲ್ಲುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಎನ್‌ಡಿಎ ಸರಕಾರ ಅಧಿಕಾರದ ಗದ್ದುಗೆ ಏರಿದೆ. ಆದರೆ ಬಿಜೆಪಿ ಈ ಹಿಂದಿನಂತೆ ಸ್ಪಷ್ಟ ಬಹುಮತದೊಂದಿಗೆ ಸರಕಾರ
ರಚಿಸಿಲ್ಲ ಎನ್ನುವುದೇ ಕಾಂಗ್ರೆಸ್ ಸೇರಿದಂತೆ ‘ಇಂಡಿಯ’ ಮೈತ್ರಿಕೂಟದ ಪಕ್ಷಗಳಿಗೆ ಸಿಕ್ಕಿರುವ ಸಮಾಧಾನ.

ಸತತ ೧೦ ವರ್ಷಗಳ ಕಾಲ ಅಧಿಕಾರ ನಡೆಸಿದ ಬಿಜೆಪಿಗಿದ್ದ ಆಡಳಿತ ವಿರೋಧಿ ಅಲೆಯನ್ನು ಬಳಸಿಕೊಂಡು ಭಾರತದ ‘ಗದ್ದುಗೆ’ ಏರಬೇಕೆಂದು ಕೊಂಡಿದ್ದ ‘ಇಂಡಿಯ’ ಮೈತ್ರಿಕೂಟಕ್ಕೆ ಬಹುಮತ ಬಾರದಿದ್ದರೂ ಅದು ೨೦೦ರ ಗಡಿ ದಾಟಿರುವುದು ಮತ್ತು ಕಾಂಗ್ರೆಸ್‌ಗೆ ೧೦೦ ಸ್ಥಾನ ದಕ್ಕಿರುವುದು ಮಾತ್ರವೇ ಈ ಒಕ್ಕೂಟದ ಪಾಲಿನ ಬಹುದೊಡ್ಡ ಸಮಾಧಾನಕರ ಸಂಗತಿ. ಲೋಕಸಭಾ ಚುನಾವಣೆ ಘೋಷಣೆಯಾದ ದಿನದಿಂದಲೂ ‘ಬಿಜೆಪಿ ಅಽಕಾರಕ್ಕೆ ಬರುವುದು ನಿಶ್ಚಿತ’ ಎಂಬ ವಾತಾವರಣವಿದ್ದರೂ, ಅದು ಎಷ್ಟು ಸೀಟುಗಳನ್ನು ಪಡೆಯಲಿದೆ? ಹಿಂದಿನ ದಾಖಲೆಗಳನ್ನು ಸರಿಗಟ್ಟಬಹುದೇ?
ಎಂಬ ಕುತೂಹಲ ಅನೇಕರಲ್ಲಿತ್ತು.

ದಕ್ಷಿಣ ಭಾರತದ ಚುನಾವಣೆ ಬಳಿಕ, ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರು ‘ಅಲ್ಪಸಂಖ್ಯಾತ’ರ ವಿರುದ್ಧದ ಮಾತುಗಳ ಮೂಲಕ ‘ಟಾರ್ಗೆಟ್’ ಮಾಡಿದ್ದು ನೋಡಿದರೆ, ಹಿಂದೂ ಮತಗಳು ಕ್ರೋಡೀಕರಣಗೊಳ್ಳುವುದು ನಿಶ್ಚಿತವೆಂದೇ ಹೇಳಲಾಗಿತ್ತು. ಇನ್ನು, ೭ ಹಂತದ ಮತದಾನದ ಬಳಿಕ ಬಂದ ಬಹುತೇಕ ಸಮೀಕ್ಷಾ ವರದಿಗಳಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಎನ್ನುವುದು ನಿಶ್ಚಿತವಾಗಿತ್ತು. ಅದರಲ್ಲಿಯೂ ಒಂದೆರಡು ಸಮೀಕ್ಷೆಗಳಲ್ಲಿ ಬಿಜೆಪಿ ೪೦೦ರ ಗುರಿಯನ್ನು ತಲುಪಲಿದೆ ಎಂಬ ಸ್ಪಷ್ಟ ಉಲ್ಲೇಖವಿತ್ತು.

ಹಾಗೆ ನೋಡಿದರೆ, ಲೋಕಸಭಾ ಚುನಾವಣೆಯ ಸಮೀಕ್ಷೆ ಹೊರಬರುತ್ತಿದ್ದಂತೆ ಬಹುತೇಕ ಬಿಜೆಪಿಗರು ‘ಚಿಂತ್ಯಾಕೆ ಮಾಡುತ್ತಿದ್ದೀ ಚಿನ್ಮಯನಿದ್ದಾನೆ’ ಎನ್ನುವ ರೀತಿಯಲ್ಲಿ ‘ಮತ್ತೊಮ್ಮೆ ಮೋದಿ ಖಚಿತ’ ಎಂಬ ಗ್ರಹಿಕೆಯಲ್ಲಿದ್ದರು. ಹೀಗೆ ಸಮೀಕ್ಷಾ ವರದಿಯ ಗುಂಗಿನಲ್ಲಿದ್ದ ಬಹುತೇಕರಿಗೆ, ಫಲಿತಾಂಶದ ದಿನದ ಮೊದಲ ಗಂಟೆಯಲ್ಲಿಯೇ ನಿರೀಕ್ಷಿತ ಫಲಿತಾಂಶ ಬರುವುದಿಲ್ಲ ಎನ್ನುವುದು ಖಚಿತವಾಗಿತ್ತು. ಅಲ್ಲಿಯವರೆಗೆ, ಸ್ಪಷ್ಟ ಬಹುಮತದೊಂದಿಗೆ  ಅಧಿಕಾರದ ಗದ್ದುಗೆ ಏರುವ ಉತ್ಸಾಹದಲ್ಲಿದ್ದ ಬಿಜೆಪಿ ವರಿಷ್ಠರು, ಕೆಲವೇ ಗಂಟೆಯ ಅಂತರದಲ್ಲಿ ಮೈತ್ರಿ ಪಕ್ಷದ ನಾಯಕರ ಫೋನ್ ನಂಬರ್ ಹುಡು ಕಲು ಆರಂಭಿಸಿದ್ದರು. ಈ ರೀತಿಯ ಫಲಿತಾಂಶವನ್ನು ಬಿಜೆಪಿಯ ಬಹುತೇಕ ಕಾರ್ಯಕರ್ತರು, ನಾಯಕರು ನಿರೀಕ್ಷೆ ಮಾಡಿರಲಿಲ್ಲ.

ಆದರೆ ಯಾವುದೇ ಒಂದು ಸರಕಾರ, ದಶಕದ ಕಾಲ ಆಡಳಿತ ನಡೆಸಿ ಮತ್ತೊಂದು ಅವಧಿಗೆ ‘೪೦೦ರ ಟಾರ್ಗೆಟ್’ ಇಟ್ಟುಕೊಂಡು ಹೋಗುವುದು ಸುಲಭ ವಲ್ಲ. ಹಾಗೆ ನೋಡಿದರೆ, ಪ್ರಧಾನಿ ನರೇಂದ್ರ ಮೋದಿ ಅವರು ಈ ಬಾರಿ ‘೪೦೦ ಸ್ಥಾನ ಗೆಲ್ಲುವುದು ಖಚಿತ’ ಎನ್ನುವ ಘೋಷಣೆ ಮಾಡಿದ್ದೇ ಒಂದು ಹವಾ ಸೃಷ್ಟಿಸುವುದಕ್ಕೆ. ೩೦೦ ಸ್ಥಾನ ದಾಟುವುದು ಕಷ್ಟ ಎನ್ನುವುದು ಸ್ವತಃ ಮೋದಿಯ ವರಿಗೂ ತಿಳಿದಿತ್ತು.

ಆದರೆ ಫಲಿತಾಂಶದ ಬಳಿಕ ಕಾಂಗ್ರೆಸ್ ಹಾಗೂ ಬಿಜೆಪಿ ಪಾಳಯಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಎರಡೂ ಪಕ್ಷಗಳು ವಿಚಿತ್ರ ಪರಿಸ್ಥಿತಿಯಲ್ಲಿವೆ. ಕಳೆದ ಎರಡು ಲೋಕಸಭಾ ಚುನಾವಣೆಯಲ್ಲಿ ೫೦ರ ಗಡಿ ದಾಟುವುದಕ್ಕೂ ತಿಣುಕಾಡಿದ್ದ ಕಾಂಗ್ರೆಸ್ಸಿಗರು ಈ ಬಾರಿ ತಮ್ಮ ‘ಬಲ’ವನ್ನು ಶತಕದ ಆಚೀಚೆ ತಂದಿದ್ದರಿಂದ, ಸರಕಾರದ ರಚನೆ ಮಾಡದಿದ್ದರೂ ಬಿಜೆಪಿಗಿಂತ ಹೆಚ್ಚು ಖುಷಿಯಾಗಿದ್ದಾರೆ. ಇತ್ತ ಎನ್ ಡಿಎ ಮೈತ್ರಿಕೂಟದ ಪಕ್ಷಗಳ ಸಹಯೋಗ ದೊಂದಿಗೆ ಬಿಜೆಪಿಯು ಮೂರನೇ ಬಾರಿಗೆ ಅಧಿಕಾರದ ಗದ್ದುಗೆ ಏರುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದರೂ, ‘ಸ್ವಂತಬಲ’ದಲ್ಲಿ ಅಧಿಕಾರಕ್ಕೆ ಬರಲಿಲ್ಲವೆಂದು ಬಿಜೆಪಿಗರು ಬೇಸರಿಸಿಕೊಂಡಿದ್ದಾರೆ.

೪೦೦ ಸ್ಥಾನದ ಗುರಿ ಮುಟ್ಟುವಲ್ಲಿ ವಿಫಲವಾಗಿದ್ದಕ್ಕೆ ಎನ್‌ಡಿಎ ನಾಯಕರು ಬೇಸರದಲ್ಲಿದ್ದಾರೆ. ಒಟ್ಟಾರೆ ಹೇಳುವುದಾದರೆ, ‘ಒಂದೆಡೆ ೧೦೦ಕ್ಕೆ ೧೦೦ ಅಂಕ ಪಡೆಯುವ ವಿದ್ಯಾರ್ಥಿ ೮೦ ಅಂಕ ಪಡೆದಿದ್ದಕ್ಕೆ ಬೇಸರದಲ್ಲಿದ್ದರೆ, ಮತ್ತೊಂದೆಡೆ ಫೇಲಾಗುವ ವಿದ್ಯಾರ್ಥಿ ೩೫ ಅಂಕ ಪಡೆದು ಪಾಸಾಗಿರುವ ಖುಷಿಯಲ್ಲಿದ್ದಾನೆ’- ಇದು ಇಂದಿನ ಫಲಿತಾಂಶವನ್ನು ಬಹುತೇಕರು ವಿಶ್ಲೇಷಿಸುವ ಪರಿ ಎಂದರೆ ತಪ್ಪಾಗುವುದಿಲ್ಲ. ಈ ಫಲಿತಾಂಶವನ್ನು ಗಮನಿಸಿದರೆ, ಬಿಜೆಪಿಯಿಂದ ಮತಗಳು ಕೈಬಿಟ್ಟುಹೋಗಿಲ್ಲ ಎಂಬುದು ಸ್ಪಷ್ಟವಾಗುತ್ತದೆ.

ಆದರೆ ಚದುರಿಹೋಗಿದ್ದ ಮತಗಳನ್ನು ಒಗ್ಗೂಡಿಸುವಲ್ಲಿ ‘ಇಂಡಿಯ’ ಒಕ್ಕೂಟ ಯಶಸ್ವಿಯಾಗಿದೆ. ಈ ಬಾರಿ ದೇಶದಲ್ಲಿ ಚಲಾವಣೆಯಾದ ಸುಮಾರು ೬೧ ಕೋಟಿ ಮತಗಳ ಪೈಕಿ ಶೇ.೩೬.೫೬ರಷ್ಟು ಮತಗಳು ಬಿಜೆಪಿಯ ಪಾಲಾಗಿದ್ದರೆ, ಕಾಂಗ್ರೆಸ್ ಶೇ.೨೧ರಷ್ಟು ಮತಗಳನ್ನು ಪಡೆದಿದೆ. ಇನ್ನುಳಿದಂತೆ ಸುಮಾರು ೬೩,೭೨,೨೨೦ ‘ನೋಟಾ’ ಮತಗಳು ಚಲಾವಣೆಯಾಗಿವೆ. ಆದರೆ ಬಿಜೆಪಿಯು ಸುಮಾರು ೩೬ ಸ್ಥಾನಗಳನ್ನು ಇಷ್ಟೇ ಪ್ರಮಾಣದ ಮತಗಳ ಅಂತರದಿಂದ
ಸೋತಿದೆ. ಇದರೊಂದಿಗೆ ಸ್ಥಳೀಯ/ಪ್ರಾದೇಶಿಕ ಪಕ್ಷಗಳು ಕಸಿದಿರುವ ಮತಗಳೂ ಬಿಜೆಪಿಯ ಇಂದಿನ ಫಲಿತಾಂಶಕ್ಕೆ ಕಾರಣವಾಗಿವೆ.

ಇನ್ನು ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಬಹುದೊಡ್ಡ ಹಿನ್ನಡೆ ಅಥವಾ ಸೋಲಾಗಿರುವುದು ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಮಾತ್ರ. ಈ ಮೂರು ರಾಜ್ಯಗಳಲ್ಲಿ ೨೦ರಿಂದ ೩೦ ಕ್ಷೇತ್ರಗಳಲ್ಲಿ ಸೋತಿದ್ದು ಬಿಜೆಪಿಯ ಇಂದಿನ ಪರಿಸ್ಥಿತಿಗೆ ಕಾರಣವಾಗಿದೆ. ಪಶ್ಚಿಮ ಬಂಗಾಳ ದಲ್ಲಿ ನಿರೀಕ್ಷಿಸಿದಷ್ಟು ಮತಗಳು ದಕ್ಕಿಲ್ಲ ಎನ್ನುವುದನ್ನು ಬಿಟ್ಟರೆ, ಇನ್ನುಳಿದ ಎಲ್ಲ ರಾಜ್ಯಗಳಲ್ಲಿ ನಿರೀಕ್ಷಿತ ಫಲಿತಾಂಶವನ್ನೇ ಬಿಜೆಪಿ ಪಡೆದು ಕೊಂಡಿದೆ.

ಆದರೆ, ಈ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ನೊಂದಿಗೆ ಬಹುದೊಡ್ಡ ಪ್ರಮಾಣದಲ್ಲಿ ಲಾಭ ಪಡೆದುಕೊಂಡಿದ್ದು ಪ್ರಾದೇಶಿಕ ಪಕ್ಷಗಳು ಎಂದರೆ ತಪ್ಪಾಗುವುದಿಲ್ಲ. ಇಡೀ ದೇಶದಲ್ಲಿ ರಾಷ್ಟ್ರೀಯ ಪಕ್ಷಗಳ ಪಾರುಪತ್ಯವೇ ಮುಂದುವರಿಯಲಿದೆ ಎನ್ನುವ ಪರಿಸ್ಥಿತಿಯಿದ್ದಾಗ, ಈ ಬಾರಿ ಪ್ರಾದೇಶಿಕ ಪಕ್ಷಗಳು ತಮ್ಮ ಪ್ರಾಬಲ್ಯವನ್ನು ಮತ್ತೆ ಹೆಚ್ಚಿಸಿಕೊಂಡಿವೆ. ಹಾಗೆ ನೋಡಿದರೆ, ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸರಕಾರ ಅಧಿಕಾರಕ್ಕೆ ಬಂದಿದ್ದರೂ, ಇದು ಪೂರ್ಣಪ್ರಮಾಣದ ಬಿಜೆಪಿ ಸರಕಾರವಲ್ಲ ಎನ್ನುವುದು ಸ್ಪಷ್ಟ. ತೆಲುಗುದೇಶಂ ಹಾಗೂ ಜೆಡಿಯು ಪಕ್ಷಗಳು ‘ಮೋದಿ ೩.೦’ ದರ್ಬಾರಿನ ‘ಕಿಂಗ್‌ಮೇಕರ್’ಗಳು ಎಂದರೆ ತಪ್ಪಾಗುವುದಿಲ್ಲ.

ಹಾಗೆ ನೋಡಿದರೆ, ಸತತ ಒಂದು ದಶಕದಷ್ಟು ಕಾಲ ಏಕವ್ಯಕ್ತಿಯು ಆಡಳಿತ ನಡೆಸಿದ ಬಳಿಕವೂ, ಆಡಳಿತವಿರೋಧಿ ಅಲೆ ಕಾಣಿಸಿಕೊಳ್ಳದೆ ಮತ್ತೊಮ್ಮೆ ‘ಮೋದಿ- ಮೇನಿಯಾ’ವನ್ನು ಅಪೇಕ್ಷಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ಅತಿಶಯದ ಸಂಗತಿ. ಅದರಲ್ಲಿಯೂ ‘ವಿವಿಧತೆಯಲ್ಲಿ ಏಕತೆ’ಯನ್ನು ಕಾಣುವ ಭಾರತದಂಥ ದೇಶದಲ್ಲಿ ೧೦ ವರ್ಷ ಆಡಳಿತ ನಡೆಸಿ, ಮುಂದಿನ ಐದು ವರ್ಷಕ್ಕೆ ಅಧಿಕಾರ ಕೇಳುವಾಗ ಈ ರೀತಿಯ ಫಲಿತಾಂಶ ನಿರೀಕ್ಷಿತ. ಆದರೆ ಬಿಜೆಪಿಗೆ ಹಾಗೂ ಅದರ ಬೆಂಬಲಿಗರಿಗೆ ಮೋದಿ ಹೆಸರಿನ ಮೇಲಿದ್ದ ಅತಿಯಾದ ಆತ್ಮವಿಶ್ವಾಸವೇ ಈ ‘ಭ್ರಮನಿರಸನ’ಕ್ಕೆ ಕಾರಣವಾಗಿದೆ. ಆಡಳಿತ ಪಕ್ಷದಷ್ಟೇ ಶಕ್ತಿಶಾಲಿಯಾಗಿ ಪ್ರತಿಪಕ್ಷವಿದ್ದರೆ ಮಾತ್ರವೇ ಪ್ರಜಾಪ್ರಭುತ್ವ ವ್ಯವಸ್ಥೆಗೊಂದು ಶೋಭೆ. ಒಂದು ವೇಳೆ, ಏಕಪಕ್ಷದ ಅಥವಾ ಏಕವ್ಯಕ್ತಿಯ ಆಡಳಿತ ಶುರುವಾದರೆ, ಅದನ್ನು ಪ್ರಜಾ ಪ್ರಭುತ್ವ ಎನ್ನುವ ಬದಲು ಸರ್ವಾಧಿಕಾರಿ ಆಡಳಿತ ಎನ್ನಬೇಕಾಗುತ್ತದೆ.

ಪಕ್ಷ-ಪಕ್ಷಗಳ ನಡುವಿನ ವಾಕ್ಸಮರ, ಟೀಕೆ-ಟಿಪ್ಪಣಿ, ಘೋಷಣೆ, ಭರವಸೆ, ಆಡಳಿತವಿರೋಧಿ ಅಲೆ ಸೇರಿದಂತೆ ಹತ್ತು ಹಲವು ಮಜಲುಗಳ ಬಳಿಕ ದೇಶದ ಜನರು ಮೂರನೇ ಬಾರಿಗೆ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎಗೆ ಸರಕಾರ ನಡೆಸಲು ಅವಕಾಶ ನೀಡಿದ್ದು, ಮೋದಿಯವರೂ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಕಳೆದೊಂದು ದಶಕದ ಕಾಲ ಅವರು ನಡೆಸಿದ ಆಡಳಿತಕ್ಕೂ, ಮುಂದಿನ ಐದು ವರ್ಷ ನಡೆಸಲಿರುವ ಆಡಳಿತಕ್ಕೂ ಭಾರಿ ಅಂತರವಿದೆ. ಎನ್‌ಡಿಎ ಅಂಗಪಕ್ಷಗಳ ‘ಕಪಿಮುಷ್ಟಿ’ಯಲ್ಲಿ ಸರಕಾರ ನಡೆಯುವುದರಿಂದ, ಮೋದಿಯವರು ತಮ್ಮ ಹಿಂದಿನ ಎರಡು ಅವಧಿಯಲ್ಲಿ ತೆಗೆದುಕೊಂಡಂಥ ಕೆಲ ನಿಷ್ಠುರ ನಿರ್ಣಯಗಳನ್ನು ಕೈಗೊಳ್ಳುವುದು ಕಷ್ಟಸಾಧ್ಯ ಎನ್ನುವುದು ಬಹುತೇಕರ ಅಭಿಮತವಾಗಿದೆ. ಹೀಗಾಗಿ ಮೋದಿ ಸರಕಾರದ ಹಳೆಯ ‘ಖದರ್’ ಮುಂದುವರಿಯುವುದೇ ಅಥವಾ ಹೊಂದಾಣಿಕೆಯ ಸರಕಾರದಲ್ಲಿ ನಿರೀಕ್ಷಿತ ಪ್ರಮಾಣದ ‘ಕಠಿಣ’ ನಿರ್ಣಯ ತೆಗೆದುಕೊಳ್ಳದೆ ಮೋದಿ ದಿನದೂಡುವರೇ ಎನ್ನುವುದಕ್ಕೆ ಕಾಲವೇ ಉತ್ತರಿಸಬೇಕಿದೆ.

Leave a Reply

Your email address will not be published. Required fields are marked *

error: Content is protected !!