Friday, 21st June 2024

ರಾಜಕಾರಣದಲ್ಲಿ ಸದಾ ಅಯೋಗ್ಯರು, ಅಪಾತ್ರರು ಸಲ್ಲುತ್ತಾರೆ, ಏಕೆ ?

ನೂರೆಂಟು ವಿಶ್ವ

ಆರಿಸಿ ಬಂದವರೆಲ್ಲ ಯೋಗ್ಯರಾಗಿದ್ದಿದ್ದರೆ, ಒಂದಲ್ಲ ಎರಡು ಸಲ ಉತ್ತರಪ್ರದೇಶದ ಮಿರ್ಜಾಪುರ ಲೋಕಸಭಾ ಕ್ಷೇತ್ರದಿಂದ ಗೆದ್ದ ‘ಡಕಾಯಿತರ ರಾಣಿ’ -ಲನ್ ದೇವಿಯೂ ಯೋಗ್ಯಳೆನಿಸಿಕೊಳ್ಳುತ್ತಿದ್ದಳು. ಅಲ್ಲೊಂದೇ ಅಲ್ಲ, ದೇಶದ ಹಲವು ಲೋಕಸಭಾ ಕ್ಷೇತ್ರಗಳಿಂದ ಕೊಲೆಗಡುಕರು, ದರೋಡೆಕೋರರು, ಭ್ರಷ್ಟಾಚಾರಿಗಳು, ಭಯೋತ್ಪಾದಕರು ಒಂದಕ್ಕಿಂತ ಹೆಚ್ಚು ಸಲ ಆರಿಸಿ ಬಂದಿದ್ದಾರೆ, ಬರುತ್ತಿದ್ದಾರೆ.

ಎಲ್ಲ ರಾಜಕೀಯ ಪಕ್ಷಗಳ ನಾಯಕರು ಟಿಕೆಟ್ ಹಂಚಿಕೆಯಲ್ಲಿ ಮಂಡೆಬಿಸಿ ಮಾಡಿಕೊಂಡು ಕುಳಿತಿದ್ದಾರೆ. ಪ್ರತಿ ಕ್ಷೇತ್ರದ ಟಿಕೆಟ್ ಹಂಚುವಾಗಲೂ ಅಳೆದು, ತೂಗಿ, ಸುರಿದು, ಮುರಿದು ನೋಡುತ್ತಿದ್ದಾರೆ. ಒಂದು ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಹುಡುಕುವುದು ಬಹಳ ಸುಲಭ ಅಥವಾ ಬಹಳ ಕಷ್ಟ. ಒಬ್ಬರಿಗೆ ಟಿಕೆಟ್ ನೀಡುವಾಗ ನಾಯಕರು ಹತ್ತಾರು ಅಂಶಗಳನ್ನು, ನೂರಾರು ಸಂಗತಿಗಳನ್ನು ಪರಿಗಣಿಸುವುದು ಇದ್ದಿದ್ದೇ. ಒಬ್ಬರೇ ನಿರ್ಧಾರ ಮಾಡುವ ಸಂದರ್ಭದಲ್ಲೂ, ಅಭ್ಯರ್ಥಿಗಳ ಆಯ್ಕೆ ಸುಲಭವಲ್ಲ. ಹೀಗಿರುವಾಗ ಹತ್ತಾರು ನಾಯಕರನ್ನೊಳಗೊಂಡ ಸಮಿತಿ ನಿರ್ಧಾರ ತೆಗೆದುಕೊಳ್ಳುವಾಗ ಚರ್ಚೆ, ವಿಚಾರ ವಿನಿಮಯ, ಗೊಂದಲ, ಹಗ್ಗ-
ಜಗ್ಗಾಟ, ಲೆಕ್ಕಾಚಾರ, ಪೈಪೋಟಿಗಳು ಆಗಲೇಬೇಕು.

ಅದರಲ್ಲೂ ಗೆಲ್ಲುವ ಅವಕಾಶಗಳು ಹೆಚ್ಚಿರುವ ಪಕ್ಷಗಳಲ್ಲಿ ಗೊಂದಲಗಳ ಪ್ರಮಾಣ ಮತ್ತು ತೀವ್ರತೆಯೂ ಹೆಚ್ಚೇ. ಅಭ್ಯರ್ಥಿಗಳ ಆಯ್ಕೆ ಸಮರ್ಪಕ ಹೌದೋ, ಅಲ್ಲವೋ ಎಂಬುದು ನಿರ್ಧಾರವಾಗುವುದು ಫಲಿತಾಂಶ ಬಂದ ನಂತರವೇ. ಅಲ್ಲಿಯ ತನಕ ಚರ್ಚೆ ಮಾತ್ರ ಮುಂದುವರಿದಿರುತ್ತದೆ. ಆದರೆ ಯಾರಿಗೂ ಅರ್ಥವಾಗದ ಸಂಗತಿಯೊಂದಿದೆ. ಅದು ಮಾನದಂಡದ ಪ್ರಶ್ನೆ. ಯಾವುದೇ ಪಕ್ಷ ಒಂದು ನಿರ್ದಿಷ್ಟ ಮಾನದಂಡವನ್ನು ಎಲ್ಲ ಅಭ್ಯರ್ಥಿಗಳ ಆಯ್ಕೆಯಲ್ಲೂ
ಅನುಸರಿಸಬೇಕು. ಆದರೆ ಎಲ್ಲ ಪಕ್ಷಗಳೂ ಈ ನಿಯಮವನ್ನು ಉಲ್ಲಂಘಿಸುವ ಮೂಲಕವೇ ಆಚರಿಸುತ್ತವೆ ಎಂಬುದು ಗೊತ್ತಿರುವ ವಿಚಾರವೇ. ಬಿಜೆಪಿ ಪಾಲಿಗೆ ಅಭ್ಯರ್ಥಿ ಮುಖ್ಯವಲ್ಲ.

ಮೋದಿ ಹೆಸರಲ್ಲಿ ಯಾರೇ ಮತ ಕೇಳಿದರೂ ಅವರು ಗೆಲ್ಲುತ್ತಾರೆ ಎಂಬ ಪ್ರತೀತಿಯಿದೆ. ಆದರೂ ಆ ಪಕ್ಷ ಅಭ್ಯರ್ಥಿಗಳ ಆಯ್ಕೆಗೆ ಇನ್ನಿಲ್ಲದ ಕಸರತ್ತನ್ನು ಮಾಡುತ್ತಿದೆ. ಹಲವೆಡೆ ಬಂಡಾಯದ ಬಿಸಿಯನ್ನು ಎದುರಿಸುತ್ತಿದೆ. ‘ಮೋದಿ ಫ್ಯಾಕ್ಟರ್’ ಒಂದೇ ಮುಖ್ಯವಾಗಿದ್ದರೆ, ಪಕ್ಷ ಇಷ್ಟೆಲ್ಲ ಪ್ರಹಸನ ಮಾಡಬೇಕಾದ ಅಗತ್ಯವೇ ಇರುತ್ತಿರಲಿಲ್ಲ. ಲೋಕಸಭೆ ಚುನಾವಣೆಗೆ ಆರು ತಿಂಗಳ ಮುಂಚೆಯೇ ಅಭ್ಯರ್ಥಿ ಆಯ್ಕೆಗೆ ಬಿಜೆಪಿ ತೊಡಗಬೇಕಾದ ಅಗತ್ಯವೂ ಇರುತ್ತಿರಲಿಲ್ಲ. ಕೊನೆ
ಕ್ಷಣದಲ್ಲಿ ಮನಸ್ಸಿಗೆ ಬಂದವರಿಗೆ ಟಿಕೆಟ್ ನೀಡಬಹುದಿತ್ತು. ಅದೂ ಆಗುತ್ತಿಲ್ಲ. ಟಿಕೆಟ್ ನೀಡಿದವರೆಲ್ಲ ಯೋಗ್ಯರು ಎಂದು ಭಾವಿಸಬೇಕಿಲ್ಲ. ಇಲ್ಲಿ ‘ಯೋಗ್ಯರು’ ಎಂಬ ಪ್ರಶ್ನೆಯೇ ಚರ್ಚಾಸ್ಪದ. ಅಷ್ಟಕ್ಕೂ ಯೋಗ್ಯರು ಯಾರು ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದು ಕಷ್ಟವೇ.

ಕಾರಣ, ಆರಿಸಿ ಬಂದವರೆಲ್ಲ ಯೋಗ್ಯರಾಗಿದ್ದರೆ, ಒಂದಲ್ಲ ಎರಡು ಸಲ ಉತ್ತರಪ್ರದೇಶದ ಮಿರ್ಜಾಪುರ ಲೋಕಸಭಾ ಕ್ಷೇತ್ರದಿಂದ ಗೆದ್ದ ‘ಡಕಾಯಿತರ ರಾಣಿ’ಪೂಲನ್ ದೇವಿಯೂ ಯೋಗ್ಯಳೆಂದೇ ಅನಿಸಿಕೊಳ್ಳುತ್ತಿದ್ದಳು. ಅಲ್ಲೊಂದೇ ಅಲ್ಲ, ದೇಶದ ಹಲವು ಲೋಕಸಭಾ ಕ್ಷೇತ್ರಗಳಿಂದ ಕೊಲೆಗಡುಕರು,
ದರೋಡೆಕೋರರು, ಭ್ರಷ್ಟಾಚಾರಿಗಳು, ಅತ್ಯಾಚಾರಿಗಳು, ಮೋಸಗಾರರು, ಭಯೋತ್ಪಾದಕರು, ಡೆಡ್ಲಿ ಕ್ರಿಮಿನಲ್ಲುಗಳು ಒಂದಕ್ಕಿಂತ ಹೆಚ್ಚು ಸಲ ಆರಿಸಿ ಬಂದಿದ್ದಾರೆ, ಬರುತ್ತಿದ್ದಾರೆ.

ಹೀಗಾಗಿ ಎಲ್ಲ ರಾಜಕೀಯ ಪಕ್ಷಗಳು ಆರಿಸುವ ಮತ್ತು ಮತದಾರರು ಗೆಲ್ಲಿಸುವ ಅಭ್ಯರ್ಥಿಗಳು ಯೋಗ್ಯರೇ ಆಗಿರುತ್ತಾರೆ ಎಂದರ್ಥವಲ್ಲ. ಹೀಗಾಗಿ ನಮ್ಮನ್ನು ಆಳುವವರು ಅರ್ಹರು, ಯೋಗ್ಯರೇ ಆಗಿರುತ್ತಾರೆ ಎಂದು ಭಾವಿಸುವುದು ಶುದ್ಧ ತಪ್ಪು. ರಾಜಕೀಯ ಪಕ್ಷಗಳು, ನಾಯಕರು ಶುದ್ಧವಾಗುವ ತನಕ, ಈ ವ್ಯವಸ್ಥೆಯನ್ನು ಸುಧಾರಿಸಲು ಸಾಧ್ಯವೇ ಇಲ್ಲ. ಗಂಗೆಯ ಉಗಮ ಸ್ಥಾನವಾದ ಗಂಗೋತ್ರಿಯಲ್ಲಿ ನೀರು ಗಲೀಜಾದರೆ, ಅದು ಕೊನೆಯಲ್ಲಿ ಸಮುದ್ರ ಸೇರುವ ತನಕವೂ ಮಲಿನವಾಗಿಯೇ ಇರುತ್ತದೆ. ಬೇಕಾದರೆ ನೋಡಿ, ಜಗತ್ತಿನ ಬಹುರಾಷ್ಟ್ರೀಯ ಕಂಪನಿಗಳು ಅಥವಾ ಎಲ್ಲ ಖಾಸಗಿ ಕಂಪನಿಗಳು ತಮ್ಮ ಸಿಬ್ಬಂದಿಯನ್ನು
ಅತ್ಯಂತ ಎಚ್ಚರಿಕೆಯಿಂದ ಆಯ್ಕೆ ಮಾಡುತ್ತವೆ. ಹಲವು ಸುತ್ತಿನ ಆಯ್ಕೆ ಪ್ರಕ್ರಿಯೆಗಳನ್ನು ಏರ್ಪಡಿಸುತ್ತವೆ. ನಂತರ ಸಂದರ್ಶನ. ಈ ಎಲ್ಲ ಹಂತಗಳಲ್ಲಿ ತೇರ್ಗಡೆ ಯಾದವರನ್ನು ಕಂಪನಿಯ ವಿವಿಧ ಹುದ್ದೆಗಳಿಗೆ ಆಯ್ಕೆ ಮಾಡುತ್ತವೆ. ಈ ಎಲ್ಲ ಆಯ್ಕೆಗಳಲ್ಲಿ ಮೆರಿಟ್, ಶ್ರೇಷ್ಠತೆ, ಅರ್ಹತೆ, ಯೋಗ್ಯತೆಗಳಷ್ಟೇ ಮಾನದಂಡ ವಾಗಿರುತ್ತವೆ.

ಅದರಲ್ಲೂ ದೊಡ್ಡ ದೊಡ್ಡ ಕಂಪನಿಗಳು ಎಲ್ಲರಿಗಿಂತ ಮುಂಚೆಯೇ ಖುದ್ದು ಕ್ಯಾಂಪಸ್ಸಿಗೆ ಹೋಗಿ ಯೋಗ್ಯರಾದವರನ್ನು ಹಿಡಿದು ತಮ್ಮ ಸಂಸ್ಥೆಗೆ ಸೇರಿಸಿಕೊಂಡು
ಬಿಡುತ್ತವೆ. ಖಾಸಗಿ ಕಂಪನಿಗಳು ಸೆಕ್ಯೂರಿಟಿ, ವಾಚ್‌ಮನ್, ಅಟೆಂಡರ್ ಹುದ್ದೆಗೆ ನೇಮಕ ಮಾಡಿಕೊಳ್ಳುವಾಗಲೂ ಅರ್ಹತೆ ಎಂಬ ಮಾಪಕವನ್ನು ಬಳಸುತ್ತವೆ.
ಅಂದರೆ ತಮ್ಮ ಸಂಸ್ಥೆಯಲ್ಲಿ ಇರುವವರೆಲ್ಲ ಸಮರ್ಥರು, ಯೋಗ್ಯರೇ ಆಗಿರಲಿ ಎಂದು ಅವು ಬಯಸುತ್ತವೆ. ದೇಶದ ಎಲ್ಲ ಪ್ರಾದೇಶಿಕ ಎಂಜಿನಿಯರಿಂಗ್ ಕಾಲೇಜಿನಲ್ಲಿ ಓದಿದ, ಮೊದಲ ಹತ್ತು ಸ್ಥಾನ ಪಡೆದವರನ್ನೇ ತಮ್ಮ ಸಂಸ್ಥೆಗೆ ಆಯ್ಕೆ ಮಾಡಿಕೊಳ್ಳಬೇಕು ಎಂದು ರಿಲಯನ್ಸ್ ಮಾಲೀಕ ಧೀರೂ ಭಾಯಿ ಅಂಬಾನಿ ತಾಕೀತು ಮಾಡಿದ್ದರು. ಬುದ್ಧಿವಂತರಿಲ್ಲದೇ ಸಂಸ್ಥೆಯನ್ನು ಕಟ್ಟಲು ಸಾಧ್ಯವಿಲ್ಲ ಎಂದು ಅವರು ನಂಬಿದ್ದರು.

ಜಗತ್ತಿನ ಎಲ್ಲ ಬಹುರಾಷ್ಟ್ರೀಯ ಕಂಪನಿಗಳು ಅನುಸರಿಸುತ್ತಿರುವುದು ಇದೇ ನಿಯಮವನ್ನು. ಇನ್ನು ಕೇಂದ್ರದ ಲೋಕಸೇವಾ ಆಯೋಗ ನಡೆಸುವ ಆಯ್ಕೆ
ಯಲ್ಲೂ (ಮೀಸಲಾತಿ ಬಿಟ್ಟರೆ) ಮೆರಿಟ್ ಒಂದೇ ಮಾನದಂಡ. ಅಂದರೆ ಐಎಎಸ್, ಐಪಿಎಸ್, ಐಆರ್‌ಎಎಸ್, ಐಎಫ್ ಎಸ್ ಮುಂತಾದ ಅಧಿಕಾರಿಗಳೆಲ್ಲ ಈ ದೇಶದ ಮೇಧಾವಿಗಳು. ಹತ್ತಾರು ಲಕ್ಷ ಜನರ ಪೈಕಿ ಕೆಲವೇ ಕೆಲವು ನೂರು ಮಂದಿಯನ್ನು ಆರಿಸುವುದು ಸಣ್ಣ ಕೆಲಸವಲ್ಲ. ಅಂದರೆ ಅಯೋಗ್ಯರು
ಸಿಸ್ಟಮ್ ಒಳಗೆ ಬರಲು ಸಾಧ್ಯವೇ ಇಲ್ಲ. ಆದರೆ ಇಡೀ ದೇಶವನ್ನು ನಿಯಂತ್ರಿಸುವ, ರಾಜಕೀಯ ವ್ಯವಸ್ಥೆ ಮಾತ್ರ ಗಬ್ಬೆದ್ದು ಹೋಗುವಷ್ಟು ಹದಗೆಟ್ಟಿದೆ. ಇದಕ್ಕೆ
ಕಾರಣ ಶ್ರೇಷ್ಠತೆ, ಅರ್ಹತೆ ಮತ್ತು ಯೋಗ್ಯತೆಯನ್ನು ಗಾಳಿಗೆ ತೂರಿರುವುದು. ಅವುಗಳ ಬಗ್ಗೆ ಸ್ವಲ್ಪವೂ ಗೌರವ ಇಲ್ಲದಿರುವುದು.

ಯಾವತ್ತೂ ಅಯೋಗ್ಯರು ಯೋಗ್ಯರನ್ನು ಆರಿಸಲು ಸಾಧ್ಯವೇ ಇಲ್ಲ. ಅವರು ಯೋಗ್ಯರನ್ನು ಮೆಟ್ಟಲು, ತುಳಿಯಲು ನಿರಂತರವಾಗಿ ಪ್ರಯತ್ನಿಸುತ್ತಲೇ ಇರುತ್ತಾರೆ. ಅವರಿಗೆ ಅಸಲಿಗೆ ಯೋಗ್ಯರನ್ನು ಕಂಡರೇ ಆಗುವುದಿಲ್ಲ. ಅದರಲ್ಲೂ ಅಯೋಗ್ಯರಾದವರಿಗೆ ಅಧಿಕಾರ ಸಿಕ್ಕರೆ, ತಮ್ಮ ಸುತ್ತ ದಡ್ಡರು, ಅವಿವೇಕಿಗಳು, ಅಯೋಗ್ಯ ರನ್ನೇ ಇಟ್ಟುಕೊಂಡಿರುತ್ತಾರೆ, ಯಾವತ್ತೂ ಅಯೋಗ್ಯರು ತಮ್ಮ ಸಂತಾನವನ್ನೇ ಬೆಳೆಸುತ್ತಾ ಹೋಗುತ್ತಾರೆ. ಇಡೀ ವ್ಯವಸ್ಥೆಯಲ್ಲಿ ಯೋಗ್ಯರು ಬರದಂತೆ ತಡೆಗೋಡೆ ಹಾಕಿ, ಬೇಲಿ ಕಟ್ಟಿಕೊಳ್ಳುತ್ತಾರೆ. ಅವರು ಬುದ್ಧಿವಂತರನ್ನು ದ್ವೇಷಿಸುತ್ತಾರೆ. ಯಾವ ಕಾರಣಕ್ಕೂ ಶಾಣ್ಯಾ ವ್ಯಕ್ತಿ ಬೆಳೆಯದಂತೆ ನಿಗಾವಹಿಸುತ್ತಾರೆ. ಯಾರಾದರೂ ಸ್ವಲ್ಪ ಬೆಳೆದರೆ, ತಮಗಿಂತ ಬುದ್ಧಿವಂತ ಎಂಬುದು ಗೊತ್ತಾದರೆ, ಅವರನ್ನು ಮುಲಾಜಿಲ್ಲದೇ ಕತ್ತರಿಸಿ ಹಾಕುತ್ತಾರೆ. ಹೀಗಾಗಿ ರಾಜಕಾರಣದಲ್ಲಿ ಅಲ್ಪ-ಸ್ವಲ್ಪ ಬುದ್ಧಿವಂತರೂ ‘ಮಡಗಿದಂತೆ ಇರು’ವುದನ್ನು ರೂಢಿಸಿಕೊಂಡು ಬಿಡುತ್ತಾರೆ.

ಹೀಗಾಗಿ ಎಲ್ಲ ರಾಜಕೀಯ ಪಕ್ಷಗಳು ಚುನಾವಣೆಗಳಲ್ಲಿ ಅಭ್ಯರ್ಥಿಗಳನ್ನು ಅತ್ಯಂತ ಎಚ್ಚರಿಕೆಯಿಂದ ಆಯ್ಕೆ ಮಾಡುವುದನ್ನು ಗಮನಿಸಬಹುದು. ಟಿಕೆಟ್ ಕೊಡುವ
ಸ್ಥಾನದಲ್ಲಿ ಕುಳಿತವರು, ತಮಗಿಂತ ಬುದ್ಧಿವಂತರನ್ನು ಅಪ್ಪಿತಪ್ಪಿಯೂ ಆಯ್ಕೆ ಮಾಡುವುದಿಲ್ಲ. ಯಾವ ಕಾರಣಕ್ಕೂ ತಾವು ಟಿಕೆಟ್ ನೀಡುವ ವ್ಯಕ್ತಿ ತಮಗೆ potential threat ಆಗಬಾರದು, ಎಂದೂ ತಮ್ಮನ್ನು overtake ಮಾಡಬಾರದು, ಬುದ್ಧಿಮಟ್ಟದಲ್ಲಿ ತಮಗಿಂತ ಕಮ್ಮಿಯೇ ಆಗಿರಬೇಕು… ಈ ಎಲ್ಲ ಸಂಗತಿ ಗಳನ್ನು ಪಕ್ಕಾ ಮಾಡಿಕೊಂಡು ಟಿಕೆಟ್ ನೀಡುತ್ತಾರೆ. ಇಂಥವರಿಗೆ ಟಿಕೆಟ್ ನೀಡಬಹುದು ಎಂದು ಶಿಫಾರಸು ಮಾಡುವವರು ಸಹ ತಮಗಿಂತ ಬುದ್ಧಿವಂತ ರಲ್ಲ ಎಂಬುದನ್ನು ಖಾತ್ರಿ ಪಡಿಸಿಕೊಂಡಿರುತ್ತಾರೆ.

ನಾವು ಟಿಕೆಟ್ ಕೊಟ್ಟ ವ್ಯಕ್ತಿ ನಾಳೆ ಆರಿಸಿ ಬಂದು ತಮ್ಮ ತಲೆ ಮೇಲೆ ಕುಳಿತುಕೊಳ್ಳಲಾರ, ತಮಗಿಂತ ಮುಂದೆ ಹೋಗಲಾರ ಎಂಬುದನ್ನು ಮನವರಿಕೆ ಮಾಡಿ ಕೊಂಡೇ ಮುಂದುವರಿಯುತ್ತಾರೆ. ಮನಸ್ಸಿನೊಳಗೆ ಸಣ್ಣ ಸಂದೇಹ ಸುಳಿದರೂ ಅಂಥವರಿಗೆ ಟಿಕೆಟ್ ತಪ್ಪಿಸದೇ ಬಿಡುವುದಿಲ್ಲ. ಬುದ್ಧಿವಂತರಾದವರು ವಿಜ್ಞಾನ- ತಂತ್ರಜ್ಞಾನ, ವೈದ್ಯಕೀಯ ಕ್ಷೇತ್ರಗಳಲ್ಲಿರಲಿ, ರಾಜಕಾರಣಕ್ಕೆ ಬೇಡವೇ ಬೇಡ ಎಂದು ಎಲ್ಲ ಪಕ್ಷಗಳ ನಾಯಕರೂ ಬಯಸುತ್ತಾರೆ. ಅಷ್ಟಕ್ಕೂ ರಾಜಕೀಯ ನಾಯಕರಿಗೆ ಬುದ್ಧಿವಂತರ ನೆರಳು ಬಿದ್ದರೆ ಆಗಿಬರುವುದಿಲ್ಲ.

ಹೀಗಾಗಿ ಹಾರ್ವರ್ಡ್, ಸ್ಟ್ಯಾನ್ ಫೋರ್ಡ್, ಲಂಡನ್ ಸ್ಕೂಲ್ ಆಫ್ ಇಕನಾಮಿಕ್ಸ್, ಐಐಎಂ, ಐಐಟಿಗಳಲ್ಲಿ ಓದಿದ brilliant minds ರಾಜಕೀಯಕ್ಕೆ ಬರುವು ದಿಲ್ಲ. ಯಾಕೆಂದರೆ ಅವರನ್ನು ರಾಜಕೀಯಕ್ಕೆ ಸೇರಿಸಿಕೊಳ್ಳುವುದಿಲ್ಲ, ಅಷ್ಟೇ. ನಾಯಕರಿಗೆ ಬುದ್ಧಿವಂತರ ನೆರಳು, ಬೆವರು ಅಂದ್ರೆ ಅಸಹ್ಯ. ಬುದ್ಧಿವಂತರ ಮಾತುಗಳು ನಾಯಕರಿಗೆ ಅರ್ಥವಾಗುವುದಿಲ್ಲ. ಅರ್ಥ ಮಾಡಿಕೊಳ್ಳುವ ಕಷ್ಟವೇಕೆ ಎಂದು ಅವರನ್ನು ಸದಾ ದೂರವೇ ಇಟ್ಟುಬಿಡುತ್ತಾರೆ. ಹೀಗಾಗಿ ರಾಜಕಾರಣಕ್ಕೆ ಸದಾ ದಡ್ಡರು, ಅಯೋಗ್ಯರು, ಕಳಂಕಿತರು, ಅಪಾತ್ರರು ಮಾತ್ರ ಸಲ್ಲುತ್ತಾರೆ. ಇಂಥವರು ಯಾವತ್ತೂ ನಾಯಕರುಗಳಿಗೆ ಅಡಿಯಾಳಾಗಿರುತ್ತಾರೆ. ನಾಯಕರು ಹೇಳುವ ಎಲ್ಲ ಹಲ್ಕಾ ಕೆಲಸಗಳನ್ನು ಮಾಡಲು ತುದಿಗಾಲ ಮೇಲೆ ನಿಂತಿರುತ್ತಾರೆ.

ಇಂಥವರು ಮಾತ್ರ ತಮಗೆ ವಿಧೇಯರಾಗಿ, ನಿಷ್ಠರಾಗಿ ಇರುವವರು ಎಂದು ನಾಯಕರೂ ಭಾವಿಸಿರುತ್ತಾರೆ. ಕೊಳಚೆಯಲ್ಲಿ ಕೊಳಕು ಮಾತ್ರ ಬೆಳೆಯಬಲ್ಲುದು. ಹೀಗಾಗಿ ಇಂಥ ಕೊಳಕು ವ್ಯವಸ್ಥೆ ಹೆಚ್ಚು ಹೆಚ್ಚು ಕೊಳಕರನ್ನು ಬೆಳೆಸುತ್ತಲೇ ಹೋಗುತ್ತದೆ. ಈ ಮಧ್ಯೆ ಯಾವನಾದರೂ ಒಬ್ಬ ಯೋಗ್ಯ ತನ್ನ ಸಾಧನೆ ಮೆರೆದು, ಸ್ವಲ್ಪ ತಲೆ ಎತ್ತಿದರೆ ಸಾಕು, ಅವನಿಗೆ ಟಿಕೆಟ್ ತಪ್ಪಿಸಿ ಕತ್ತರಿಸಿ ಬಿಡುತ್ತಾರೆ. ಅದಕ್ಷತೆ (incompetence) ಎಂಬುದು ಎಲ್ಲೆಡೆ ಶಾಪವಾದರೆ, ರಾಜಕೀಯದಲ್ಲಿ ಅದು ವರದಾನ. ಕೆಲವರು ಅಯೋಗ್ಯರು, ಅದಕ್ಷರು ಎಂಬ ಕಾರಣಕ್ಕೇ ಟಿಕೆಟ್ ಗಿಟ್ಟಿಸಿಕೊಳ್ಳುತ್ತಾರೆ, ಮಂತ್ರಿ ಸ್ಥಾನ ಸೇರಿದಂತೆ ಇನ್ನಿತರ ಹುದ್ದೆಗಳನ್ನು ಹೊಡೆದುಕೊಳ್ಳುತ್ತಾರೆ. ಅರ್ಹರು ಬರದಂತೆ ನೋಡಿಕೊಳ್ಳಬೇಕೆಂದರೆ, ಅಯೋಗ್ಯರನ್ನು ಅಂಥ ಸ್ಥಾನಗಳಲ್ಲಿ ಕುಳ್ಳಿರಿಸಬೇಕು. ಈ ಲೆಕ್ಕಾಚಾರ ನಾಯಕರ ತಲೆಯಲ್ಲಿ ಸದಾ ಸುಳಿಯುತ್ತಲೇ ಇರುತ್ತದೆ. ನಾಯಕನನ್ನು ಒಬ್ಬ mediocre ಸುರಕ್ಷಿತವಾಗಿ ಇಡುವಷ್ಟು ಒಬ್ಬ ಬುದ್ಧಿವಂತ ಇಡಲಾರ. ಕಾರಣ ಆತ (ಅರ್ಹನಾದವನು) ಅಸಲಿಗೆ ಅಂಥವರನ್ನೆಲ್ಲ ಸಹಿಸಿಕೊಳ್ಳುವುದಿಲ್ಲ.

ಹೀಗಾಗಿ ಮರ್ಯಾದಸ್ಥರು, ಬುದ್ಧಿವಂತರು ಇಂಥ ವಾತಾವರಣ ತಮಗೆ ತಕ್ಕುದಾದುದಲ್ಲ ಎಂದು ಮೊದಲೇ ನಿರ್ಧರಿಸಿ ದೂರ ಉಳಿದುಬಿಡುತ್ತಾರೆ. ತಾನೇಕೆ ಪ್ರಯತ್ನಿಸಬಾರದು ಎಂದು ಅಪ್ಪಿತಪ್ಪಿ ಬಂದವರನ್ನು ಹೇಗೆ ಮಟ್ಟ ಹಾಕಬೇಕು ಎಂಬ ಕಲೆ ಇಲ್ಲಿದ್ದವರಿಗೆ ಪಾಂಗಿತವಾಗಿರುತ್ತದೆ. ಹೀಗಾಗಿ ಯೋಗ್ಯನಿಗಿಂತ ಅಯೋಗ್ಯನೇ ಟಿಕೆಟ್ ಗಿಟ್ಟಿಸಿಕೊಳ್ಳುತ್ತಾನೆ, ಆರಿಸಿ ಬರುತ್ತಾನೆ. ಮುಂದೆ ಮಹತ್ವದ ಹುದ್ದೆಗೇರುತ್ತಾನೆ. ಇನ್ನು ನಾಯಕನಾದವನೂ ಬುದ್ಧಿವಂತನೇ ಎನ್ನಿ, ಆತ ತನ್ನ ಸುತ್ತ ಬುದ್ಧಿವಂತರನ್ನೇ ಇಟ್ಟುಕೊಳ್ಳಬಹುದಿತ್ತಲ್ಲ.. ಆದರೆ ಆತನಿಗೂ ತನ್ನ ಸ್ಥಾನದ ಅಭದ್ರತೆ, ಬೇರೆಯವರ ಮೇಲೆ ಗುಮಾನಿ. ಹೀಗಾಗಿ ಆತನೂ ಬುದ್ಧಿವಂತರ ಬದಲಿಗೆ ಅಯೋಗ್ಯರನ್ನೇ ಸುತ್ತುಗಟ್ಟಿಕೊಂಡಿರುತ್ತಾನೆ.

ಜಯಲಲಿತಾ ಜೈಲಿಗೆ ಹೋಗುವ ಸಂದರ್ಭದಲ್ಲಿ, ತನ್ನ ಸಂಪುಟದಲ್ಲಿದ್ದ ಹಿರಿಯ ಮತ್ತು ಸಮರ್ಥ ಸಹೋದ್ಯೋಗಿಯನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕುಳ್ಳಿರಿಸುವ ಬದಲು, ಹುಟ್ಟಾ ಅಯೋಗ್ಯನನ್ನೇ ಕುಳ್ಳಿರಿಸಿದಳು. ಲಾಲೂ ಪ್ರಸಾದ್ ಯಾದವ್‌ಗೆ ಬೇರೆಯವರ ಮೇಲೆ ನಂಬಿಕೆಯಿರಲಿಲ್ಲ. ಹೀಗಾಗಿ ಓದು-ಬರಹ ಗೊತ್ತಿಲ್ಲದಿ ದ್ದರೇನಂತೆ, ತನ್ನ ಹೆಂಡತಿ ಯನ್ನೇ ಮುಖ್ಯಮಂತ್ರಿಯಾಗಿ ಮಾಡಿದ. ತಾನು ಪ್ರಧಾನಿಯಾಗುವುದು ಸಾಧ್ಯವೇ ಇಲ್ಲ ಎಂಬುದು ಮನವರಿಕೆ ಆದ ಬಳಿಕ, ಸೋನಿಯಾ ಗಾಂಧಿ ಮುಂದೆ ಉತ್ತಮ ಆಯ್ಕೆಗಳಿದ್ದವು. ಅವರು ಆಡಳಿತದಲ್ಲಿ ಅನುಭವಿಯಾದ ಪ್ರಣಬ್ ಮುಖರ್ಜಿಯವರನ್ನು ಪ್ರಧಾನಿ ಹುದ್ದೆಯಲ್ಲಿ ಕುಳ್ಳಿರಿಸ ಬಹುದಾಗಿತ್ತು. ಆದರೆ ಅವರು ಆಯ್ಕೆ ಮಾಡಿಕೊಂಡಿದ್ದು ಅತ್ಯಂತ ದುರ್ಬಲ, ಪೇತಲ ಮತ್ತು ಆ ಸ್ಥಾನಕ್ಕೆ ಯೋಗ್ಯರಲ್ಲದ ಡಾ.ಮನಮೋಹನ್ ಸಿಂಗ್ ಅವರನ್ನು. ತಾವು ಹಾಕಿದ ಗೆರೆಯನ್ನು ದಾಟದಷ್ಟು ಅವರು (ಡಾ.ಸಿಂಗ್) ಧಮ್ ಚೂಕ್ ಎಂಬುದನ್ನು ಅರಿತೇ ಆ ಹುದ್ದೆಯಲ್ಲಿ ಕುಳ್ಳಿರಿಸಿದರು.

ಹೀಗಾಗಿ ಅದಕ್ಷರು, ಅಸಮರ್ಥರು, ದುರ್ಬಲರು, ನಾಲಾಯಕುಗಳು ಬೇರೆಲ್ಲೂ ಸಲ್ಲಲಿಕ್ಕಿಲ್ಲ, ರಾಜಕೀಯದಲ್ಲಿ ಅವರಿಗೆ ಒಂದು ಸ್ಥಾನವಂತೂ ಗ್ಯಾರಂಟಿ, ಭದ್ರ. ಇವೆಲ್ಲ ರಾಜಕೀಯದಲ್ಲಿ ಪರಮ ಸದ್ಗುಣ (virtues)ಗಳೇ. ಕೆಲವೇ ಕೆಲವು ಬುದ್ಧಿವಂತರು ಹಾಗೂ ಚಾಲಾಕಿಗಳು, ಅಯೋಗ್ಯರನ್ನು ಇಟ್ಟುಕೊಂಡು, ಅಪಾತ್ರ ರನ್ನು ಕಟ್ಟಿಕೊಂಡು ಆಳುವ ವ್ಯವಸ್ಥೆಯೇ ಪ್ರಜಾಪ್ರಭುತ್ವ ಎಂಬುದನ್ನು ಅರ್ಥ ಮಾಡಿಕೊಳ್ಳದಿದ್ದರೆ ವ್ಯವಸ್ಥೆಯನ್ನು ಮತ್ತು ಎಲ್ಲಾ ರಾಜಕೀಯ ಪಕ್ಷಗಳನ್ನು ದೂರುತ್ತಲೇ ಇರುತ್ತೇವೆ. ಇದು ಅರ್ಥವಾದರೆ, ಯಾವ ಪಕ್ಷ ಎಂಥವರಿಗೆಲ್ಲ ಟಿಕೆಟ್ ಕೊಟ್ಟಿದೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಸುಲಭವಾಗುತ್ತದೆ. ಯೋಗ್ಯರಾದವರಿಗೆ ಟಿಕೆಟ್ ಏಕೆ ಸಿಗುವುದಿಲ್ಲ ಎಂಬುದೂ ಆಗ ಗೊತ್ತಾಗುತ್ತದೆ.

ಹೀಗಾಗಿ ಟಿಕೆಟ್ ಗಿಟ್ಟಿಸುವಾಗ ಬುದ್ಧಿವಂತರಾದವರು ಹತ್ತಾರು ಪುಟಗಳ ತಮ್ಮ ಬಯೋಡಾಟಾ ಮತ್ತು ಪ್ರವರಗಳನ್ನು ಸಿದ್ಧಪಡಿಸಿಕೊಳ್ಳುತ್ತಾರೆ. ಅದೇ ತಮ್ಮ ನೆಗೆಟಿವ್ ಪಾಯಿಂಟ್ ಎಂಬುದು ಅವರಿಗೆ ಗೊತ್ತಾಗುವುದಿಲ್ಲ. ಸಕಲ ವಿಧಗಳಲ್ಲೂ ತಾವೇ ಯೋಗ್ಯರು, ಅರ್ಹರು ಎಂದು ಪ್ರತಿ ಪಾದಿಸುತ್ತಾ ಬಡಬಡಿಸುತ್ತಿರು ತ್ತಾರೆ. ಆದರೆ ಪಕ್ಷ ಯಾವನೋ ಅಯೋಗ್ಯ ದಡ್ದಮುಂಡೇದಕ್ಕೆ ಟಿಕೆಟ್ ಘೋಷಿಸುತ್ತದೆ. ಟಿಕೆಟ್ ಗಿಟ್ಟಿಸಿದವನ ಬಳಿ ಹೇಳಿಕೊಳ್ಳುವಂಥ ಬಯೋಡಾಟಾ ಕೂಡ ಇರುವುದಿಲ್ಲ. ಆದರೂ ಆತನೇ ಸದರಿ ರಾಜಕೀಯಕ್ಕೆ ಸಲ್ಲುತ್ತಾನೆ ಮತ್ತು ನಂತರ ಆರಿಸಿಯೂ ಬರುತ್ತಾನೆ.

ರಾಜಕಾರಣವೆಂದರೆ ಎಲ್ಲರನ್ನೂ ಒಳಗೊಂಡ ಮೂತ್ರಾಲಯವಿದ್ದಂತೆ. ಅಲ್ಲಿ ಪಾವಿತ್ರ್ಯವನ್ನು ಹುಡುಕಲು ಹೋಗಬಾರದು. ಕಾರಣ ಮೂತ್ರಾಲಯಕ್ಕೆ ಬರುವವರು
ಸುರಿಯಲು ಪವಿತ್ರ ಗಂಗಾಜಲವನ್ನು ಹಿಡಿದು ಅಥವಾ ಅದನ್ನು ಕುಡಿದು ಬರುವುದಿಲ್ಲ. ದುರ್ದೈವವೆಂದರೆ, ಪಾಪ.. ಮತದಾರರಿಗೆ ಇದು ಅರ್ಥವಾಗುವ ಹೊತ್ತಿಗೆ
ಚುನಾವಣೆಯೇ ಮುಗಿದಿರುತ್ತದೆ!

Leave a Reply

Your email address will not be published. Required fields are marked *

error: Content is protected !!