Sunday, 23rd June 2024

ಪ್ರೇರಣೆ, ನಮ್ಮ ಪ್ರತಿಕ್ರಿಯೆಯ ಹಿಂದಿನ ಚಾಲಕ ಶಕ್ತಿ !

ಶ್ವೇತ ಪತ್ರ

shwethabc@gmail.com

ನಮ್ಮೆಲ್ಲರ ಮನಸ್ಸಿಗೆ ಇಂಬು ನೀಡಬಲ್ಲ ‘ಎನರ್ಜಿ ಬೂಸ್ಟರೇ’ ಪ್ರೇರಣೆ. ಇದು ಗುರಿಗಳತ್ತ ನಮ್ಮ ಗಮನವನ್ನು ಕೇಂದ್ರೀಕರಿಸುವ ಸಾಮರ್ಥ್ಯವನ್ನು ಹೊಂದಿದೆ. ನಮ್ಮನ್ನು ಕಾರ್ಯೋನ್ಮುಖಗೊಳಿಸುತ್ತ, ಆರೋಗ್ಯಕರ ವರ್ತನೆಯನ್ನು ರೂಢಿಸಿಕೊಳ್ಳುವುದನ್ನು ಸಾಧ್ಯವಾಗಿಸುತ್ತಾ ನಮ್ಮ ಖುಷಿ ಹಾಗೂ ಯೋಗಕ್ಷೇಮಗಳಿಗೆ ಮುಖ್ಯ ಕಾರಣವಾಗುತ್ತದೆ.

ಇಡೀ ದೇಹವೇ ಸೋತುಹೋಗಿದೆ, ಮೈ-ಮನಸುಗಳಲ್ಲಿ ಚೈತನ್ಯವೇ ಇಲ್ಲದಂತಾಗಿದೆ, ಹಾಸಿಗೆ ಹಿಡಿದು ಮಲಗಿಬಿಟ್ಟಿದ್ದೇವೆ ಎಂದುಕೊಳ್ಳೋಣ. ಮನೆಯಲ್ಲಿ ಯಾರೂ ಇಲ್ಲ. ನೀರಡಿಕೆಯಾಗಿದೆ, ನೀರು ಬೇಕೇ ಬೇಕು. ಈ ಕ್ಷಣಕ್ಕೆ ನೀರು ಸಿಗದೇ ಹೋದರೆ ಸತ್ತೇ ಹೋಗುತ್ತೇವೆ ಎಂಬ ಅನಿಸಿಕೆ. ಇಂಥ ಸಂದರ್ಭದಲ್ಲಿ ದೇಹ ತನ್ನೆಲ್ಲಾ ಅಶಕ್ತತೆಗಳನ್ನು ಮೀರಿ, ನೀರಿರುವ ಜಾಗಕ್ಕೆ ತೆರಳಿ, ನೀರು ಕುಡಿದು ಸಂತುಷ್ಟಗೊಳ್ಳುತ್ತದೆ. ಹೀಗೆ ನಾವು ಮಾಡುವ ಪ್ರತಿ ಕಾರ್ಯ/ಕ್ರಿಯೆಯ ಹಿಂದೆ ಅಡಗಿರುವ ಜೀವದಾಯಿನಿ ಶಕ್ತಿಯೇ ಪ್ರೇರಣೆ.

ವಿದ್ಯಾರ್ಥಿಗಳಿಗೆ ಪ್ರೇರಣೆ (ಮೋಟಿವೇಷನ್) ಪಾಠ ಮಾಡುತ್ತ ನಾನು ಹೇಳುವ ಉದಾಹರಣೆ ಯೊಂದನ್ನು ಇಲ್ಲಿಯೂ ಹೇಳಲು ಇಚ್ಛಿಸುವೆ. ದೇಹದ ಶಕ್ತಿಗಾಗಿ ನಾವು ಹಾರ್ಲಿಕ್ಸ್, ಬೂಸ್ಟ್, ಕಾಂಪ್ಲಾನ್ ಕುಡಿಯುತ್ತೇವಲ್ಲ, ಹಾಗೆ ನಮ್ಮೊಳಗಿನ ಮಾನಸಿಕ ಶಕ್ತಿಗೆ ನಾವು ಕುಡಿಯಬಹುದಾದ ಎನರ್ಜಿ ಡ್ರಿಂಕೇ ಈ ಪ್ರೇರಣೆ. ನಮ್ಮೆಲ್ಲರ ಪ್ರತಿ ಕ್ರಿಯೆಯ, ಕೆಲಸದ ಹಿಂದಿನ ಚಾಲಕಶಕ್ತಿ, ನಮ್ಮೆಲ್ಲರ ವರ್ತನೆಯನ್ನು ಮಾರ್ಗದರ್ಶಿಸುತ್ತಾ, ಶಕ್ತಿ ತುಂಬುತ್ತಾ ಅದು ನಿರಂತರವಾಗಿರುವಂತೆ ನೋಡಿಕೊಳ್ಳುವುದೇ ಪ್ರೇರಣೆ.

ಪ್ರೇರಣೆಯ ಬಗ್ಗೆ ನಾನೇನೂ ಹೊಸದಾಗಿ ಹೇಳಲು ಹೊರಡುವುದಿಲ್ಲ ಬಿಡಿ; ಈಗಾಗಲೇ ಮೋಟಿವೇಷನ್ ಗುರುಗಳು, ಸೆಲ್ಪ್-ಹೆಲ್ಪ್ ಬುಕ್ಕುಗಳು ಮೋಟಿವೇಷನ್ ಕುರಿತಾಗಿ ಎಲ್ಲವನ್ನೂ ಉಸುರಿಯಾಗಿದೆ. ಬೆಳಗ್ಗೆ ಬೆಳಗ್ಗೆಯೇ ಮೊಬೈಲ್‌ನಲ್ಲಿ ಇಣುಕುವ ಮೋಟಿವೇಷನ್ ಸಂದೇಶಗಳಿಂದ ಹಿಡಿದು ರಾತ್ರಿ ಮಲಗುವವರೆಗೂ ಪ್ರೇರಣೆ (ಮೋಟಿವೇಷನ್) ಬದುಕಿನ ಒಂದಿಲ್ಲೊಂದು ಸಂದರ್ಭಗಳಲ್ಲಿ ಇಣುಕುತ್ತಲೇ ಇರುತ್ತದೆ. ಅರ್ಧ ಪೌಂಡ್ ತೂಕ ಇಳಿಸಲು ಅಥವಾ ಕೆಲಸದಲ್ಲೊಂದು ಪ್ರಮೋಷನ್ ಗಿಟ್ಟಿಸಲು ನಮ್ಮೆಲ್ಲರಿಗೂ ಬೇಕೇ ಬೇಕು ಪ್ರೇರಣೆ. ನಾವು ನಮ್ಮ ಗುರಿಗಳಿಗೆ ಹತ್ತಿರವಾಗಲು ಸಾಧ್ಯವಾಗಿಸುವ ಕಾರಕಶಕ್ತಿಯೇ ಪ್ರೇರಣೆ.

ಇದೇ ಪ್ರೇರಣೆ ತನ್ನ ಆತ್ಮದೊಳಗೆ ಮನುಷ್ಯನ ವರ್ತನೆಯನ್ನು ಕಾರ್ಯಗತಗೊಳಿಸಬಲ್ಲ ಜೈವಿಕ, ಭಾವನಾತ್ಮಕ, ಸಾಮಾಜಿಕ ಹಾಗೂ
ಸಂಜ್ಞಾನಾತ್ಮಕ ಶಕ್ತಿಗಳನ್ನು ಒಳಗೊಂಡಿದೆ. ಈ ಪ್ರೇರಣೆಯು ಸಾಮಾನ್ಯವಾಗಿ ಎರಡು ವಿಧಗಳಲ್ಲಿ ನಮ್ಮನ್ನು ಪ್ರಭಾವಿಸುತ್ತಲೇ ಇರುತ್ತದೆ. ಮೊದಲನೆಯದು ಹಣ, ಅಂತಸ್ತು, ಬಹುಮಾನಗಳು, ಸಾಮಾಜಿಕವಾಗಿ ಗುರುತಿಸಿಕೊಳ್ಳುವಿಕೆ, ಹೊಗಳಿಕೆ ಹೀಗೆ ನಮ್ಮನ್ನು ಬಾಹ್ಯವಾಗಿ
ಇಲ್ಲವೇ ಮನಸ್ಸಿಗೆ ಮುದ ನೀಡುವ, ಖುಷಿ ತುಂಬುವ, ನೆಮ್ಮದಿ ಮೂಡಿಸುವ ಆಂತರಿಕ ಸಾಧ್ಯತೆ. ಇತ್ತೀಚಿನ ಸಂಶೋಧನಾ ವರದಿಯೊಂದು ಕೌಟುಂಬಿಕ ಪ್ರೇರಣೆಯೂ ನಮ್ಮನ್ನು ಚಲನೆಯಲ್ಲಿ ಇಡುವ ಮತ್ತೊಂದು ಅಂಶ ಎಂಬುದನ್ನು ಪ್ರಸ್ತುತಪಡಿಸಿದೆ.

ಉದಾಹರಣೆಗೆ ಹೇಳುವುದಾದರೆ, ಕೆಲಸಕ್ಕೆ ಹೋಗಲು ನಮಗೆ ಇಷ್ಟವಿಲ್ಲದಿದ್ದರೂ ಕುಟುಂಬ ವನ್ನು ಸಲಹುವುದಕ್ಕಾಗಿ ಹೋಗಲೇಬೇಕಾದ ಅನಿವಾರ್ಯತೆಯು ನಮ್ಮೊಳಗೊಂದು ಪ್ರೇರಣೆಯ ಶಕ್ತಿಯನ್ನು ತುಂಬುತ್ತದೆ. ನಮ್ಮೆಲ್ಲರ ಮನಸ್ಸಿಗೆ ಇಂಬು ನೀಡಬಲ್ಲ ‘ಎನರ್ಜಿ ಬೂಸ್ಟರೇ’ ಈ ಪ್ರೇರಣೆ. ಇದು ಗುರಿಗಳತ್ತ ನಮ್ಮ ಗಮನ ವನ್ನು ಕೇಂದ್ರೀಕರಿಸುವ ಸಾಮರ್ಥ್ಯವನ್ನು ಹೊಂದಿದೆ. ನಮ್ಮನ್ನು ಕಾರ್ಯೋನ್ಮುಖಗೊಳಿಸುತ್ತ, ಆರೋಗ್ಯಕರ ವರ್ತನೆಯನ್ನು ರೂಢಿಸಿಕೊಳ್ಳುವುದನ್ನು ಸಾಧ್ಯವಾಗಿಸುತ್ತಾ ನಮ್ಮ ಖುಷಿ ಹಾಗೂ ಯೋಗಕ್ಷೇಮಗಳಿಗೆ ಮುಖ್ಯ ಕಾರಣ
ವಾಗುತ್ತದೆ.

ಇಲ್ಲಿ ನಮಗೆ ೨೦ ಕಿ.ಮೀ. ಮ್ಯಾರಥಾನ್ ಓಡಬೇಕು ಎಂಬ ಇಚ್ಛೆಯಾಗುತ್ತದೆ, ಇಲ್ಲವೇ ೨೦ ಕಿಲೋ ತೂಕ ಕಡಿಮೆಗೊಳಿಸಿಕೊಳ್ಳಬೇಕು ಎಂಬ ಆಸೆಯಾಗುತ್ತದೆ. ಇದು ಬರಿ ಆಸೆಯೋ ಆಶಯವೋ ಆದರಷ್ಟೇ ಸಾಲದು. ಎಲ್ಲಾ ಸವಾಲು, ಸಮಸ್ಯೆಗಳ ನಡುವೆಯೂ ಈ ಕಾರ್ಯಗಳನ್ನು ಮಾಡಿ ಮುಗಿಸಿಕೊಳ್ಳಬೇಕೆನ್ನುವ ಸಹಿಷ್ಣುತೆಯನ್ನು ರೂಢಿಸಿಕೊಳ್ಳಬೇಕು. ಈ ಸಹನೆಗೆ ನಾವು ಅನ್ವಯಿಸಬಹುದಾದ ಮೂರು ಮುಖ್ಯ ಅಂಶಗಳೆಂದರೆ ಸಕ್ರಿಯತೆ, ನಿರಂತರತೆ ಹಾಗೂ ತೀವ್ರತೆ. ಸಕ್ರಿಯತೆ ಎಂದರೆ ಯಾವುದಾದರೂ ವರ್ತನೆಯನ್ನು ಚಾಲುಗೊಳಿಸಲು ನಾವು ತೆಗೆದುಕೊಳ್ಳುವ
ನಿರ್ಧಾರ. ನಿರಂತರತೆ ಎಂದರೆ ಎಲ್ಲಾ ಸವಾಲುಗಳ ನಡುವೆಯೂ ಗುರಿ ತಲುಪಲು ನಮ್ಮ ಪ್ರಯತ್ನ. ತೀವ್ರತೆ ಎಂದರೆ ಗುರಿ ತಲುಪಲು ನಮಗೆ ಬೇಕಾದ ಚೈತನ್ಯ.

ನಮ್ಮೆಲ್ಲರಿಗೂ ಪ್ರತಿದಿನದ ಬೆಳಗು ನಮ್ಮ ನಮ್ಮ ಬ್ಯಾಂಕಿನ ಅಕೌಂಟುಗಳಿಗೆ ೧ ಲಕ್ಷ ರು. ಕ್ರೆಡಿಟ್ ಆಗುತ್ತಿದೆ ಎಂದು ಕಲ್ಪಿಸಿಕೊಳ್ಳೋಣ. ಆದರೆ ಈ ಬ್ಯಾಂಕಿಗೊಂದು ನಿಯಮವಿದೆ, ತಾನು ಕ್ರೆಡಿಟ್ ಮಾಡಿದ ಒಂದು ಲಕ್ಷ ರುಪಾಯಿ ಮೊತ್ತವನ್ನು ಗ್ರಾಹಕರಾದ ನಾವು ಅಂದು ಸಂಜೆಯೊಳಗೆ ಉಪಯೋಗಿಸಿಬಿಡಬೇಕು, ಇಲ್ಲವೆಂದರೆ ನಾವು ಉಪಯೋಗಿಸದೆ ಉಳಿಸಿದ ಹಣವನ್ನು ಹಿಂಪಡೆದುಬಿಡುತ್ತಾರೆ. ಹೀಗಿದ್ದಾಗ ನಾವೆಲ್ಲ ದುಡ್ಡನ್ನು ಡ್ರಾ ಮಾಡದೆ ಹಾಗೆ ಉಳಿಸುತ್ತೇವೆಯೇ? ಖಂಡಿತವಾಗಿಯೂ ಇಲ್ಲ! ಡ್ರಾ ಮಾಡಿ ಉಪಯೋಗಿಸುತ್ತೇವೆ.

ಅರೇ! ನಮ್ಮ ಬದುಕಲ್ಲೂ ಇಂಥದೊಂದು ಬ್ಯಾಂಕಿದೆ, ಅದರ ಹೆಸರೇ ಸಮಯ. ಪ್ರತಿದಿನದ ಬೆಳಗು ನಮ್ಮ ಜೋಳಿಗೆಗೆ ಸಮಯವೆಂಬ ಹಣ ಜಮೆಯಾಗುತ್ತದೆ. ಅದನ್ನು ಸರಿಯಾಗಿ ಉಪಯೋಗಿಸದೆ ಹೋದರೆ ನಷ್ಟವಾಗಿಬಿಡಬಹುದು ನಮಗೆ. ಏಕೆಂದರೆ ನಮ್ಮ ನಾಳೆಗಳಿಗಾಗಿ ಇಂದಿನ
ಸಮಯವನ್ನು ಡ್ರಾ ಮಾಡಿ ಇಟ್ಟುಕೊಂಡು ಉಪಯೋಗಿಸಲು ಸಾಧ್ಯವಿಲ್ಲ. ಸಮಯ ನಿರ್ವಹಣೆಯು ಬದುಕಿಗೊಂದು ಪ್ರೇರಣೆ. ಅದನ್ನು ನಾವಲ್ಲದೆ ಬೇರಾರೂ ಡಿಸೈಡ್ ಮಾಡಲು ಸಾಧ್ಯವಿಲ್ಲವಲ್ಲವೇ? ಕಪ್ಪೆಗಳ ಕಥೆಯೊಂದಿದೆ. ಒಮ್ಮೆ ಕಪ್ಪೆಗಳ ಗುಂಪು ಕಾಡಿನ ದಾರಿ ಸವೆಸುತ್ತಿದ್ದವು. ಇದಕ್ಕಿದ್ದ ಹಾಗೆ ಗುಂಪಿನಲ್ಲಿದ್ದ ಎರಡು ಕಪ್ಪೆಗಳು ಕಾಲು ಜಾರಿ ಅಲ್ಲೇ ಇದ್ದ ಹೊಂಡದಲ್ಲಿ ಬಿದ್ದುಹೋದವು. ಹೊಂಡವು ಆಳವಾಗಿದ್ದು ಎರಡು ಕಪ್ಪೆಗಳು ಮೇಲೆ ಬರುವುದು ಅಸಾಧ್ಯವೆಂದು ಮಿಕ್ಕ ಕಪ್ಪೆಗಳು ತೀರ್ಮಾನಿಸಿದವು.

ಹೊಂಡದಲ್ಲಿ ಬಿದ್ದ ಕಪ್ಪೆಗಳು ಮೇಲೆ ಬರಲು ಪ್ರಯತ್ನಿಸತೊಡಗಿದವು. ಇದನ್ನು ಕಂಡ ಇತರೆ ಕಪ್ಪೆಗಳು, ‘ಸುಮ್ಮನೇ ನೆಗೆದು ನೆಗೆದು ನೋಯುವುದಕ್ಕಿಂತ ಸಾಯುವುದೇ ಮೇಲು, ನೀವಂತೂ ಮೇಲೆ ಬರಲು ಸಾಧ್ಯವಿಲ್ಲ’ ಎಂದು ಕೂಗಿ ಹೇಳಿದವು. ಇಷ್ಟಾಗಿಯೂ, ಹೊಂಡದಲ್ಲಿ ಬಿದ್ದ ಕಪ್ಪೆಗಳು ಸತತ ಪ್ರಯತ್ನದಿಂದಾಗಿ ಮೇಲೆ ಬಂದವು. ಆಶ್ಚರ್ಯಚಕಿತ ಇತರ ಕಪ್ಪೆಗಳು, ‘ನಾವು ಹೇಳಿದ್ದು ನಿಮಗೆ ಕೇಳಿಸಲಿಲ್ಲವೇ?’ ಎಂದವು. ಹೊಂಡದಲ್ಲಿ ಬಿದ್ದು-ಎದ್ದ ಕಪ್ಪೆಗಳು ಆಗ, ‘ನಾವು ಕಿವುಡರು, ನಮಗೆ ಕಿವಿ ಕೇಳಿಸುವುದಿಲ್ಲ. ಆದರೆ ಮೇಲೆ ಬರುವಂತೆ ನೀವೆಲ್ಲ ಪ್ರೋತ್ಸಾಹಿಸಿದ್ದು ಮಾತ್ರ ನಮಗೆ ಕಾಣಿಸಿತು’ ಎಂದವು!

ಹೀಗೆ, ನಮ್ಮನ್ನು ಪ್ರಭಾವಿಸುವ, ಪ್ರೋತ್ಸಾಹಿಸುವ ಅನೇಕ ಕಥೆಗಳು, ವ್ಯಕ್ತಿಗಳು, ವ್ಯಕ್ತಿತ್ವಗಳು, ಸಂದರ್ಭಗಳು ನಮ್ಮ ಸುತ್ತ ಸಾಕಷ್ಟಿವೆ. ನಾವು ಕಣ್ತೆರೆದು ನೋಡಬೇಕಷ್ಟೆ. ನೀವು ನಾಲ್ಕು ವರ್ಷದ ಮಗುವಿನ ಜತೆ ಟೆನಿಸ್ ಆಡುವುದನ್ನು ಹಾಗೇ ಕಲ್ಪಿಸಿಕೊಳ್ಳಿ; ಸ್ವಲ್ಪ ಸಮಯದಲ್ಲೇ ನಿಮಗೆ ಬೋರ್ ಹೊಡೆದುಬಿಡುತ್ತದೆ, ಆಟ ಸುಲಭವಾಗಿ ಬಿಡುತ್ತದೆ. ಅದೇ ಟೆನಿಸ್ ಆಟವನ್ನು ನೀವು ರೋಜರ್ ಫೆಡರರ್ ಜತೆಯಲ್ಲೋ, ಸೆರೆನಾ ವಿಲಿಯಮ್ಸ್ ಜತೆ ಯಲ್ಲೋ ಆಡ ಹೊರಟರೆ, ಸುಲಭವಾಗಿ ಪ್ರೇರಣೆ ಕಳೆದು ಕೊಂಡುಬಿಡುತ್ತೀರಿ, ಆಟ ವಿಪರೀತ ಕಷ್ಟವೆನಿಸತೊಡಗುತ್ತದೆ. ಅದೇ ಟೆನಿಸ್ ಆಟವನ್ನು ನಿಮ್ಮ ವಯಸ್ಸಿನವರ ಜತೆಯೇ ಆಡುತ್ತಿರುವಿರೆಂದರೆ, ಕೆಲವೊಮ್ಮೆ ನೀವು ಗೆಲ್ಲಬಹುದು ಅಥವಾ ಸೋಲಬಹುದು. ಆದರೆ ಆಟ ಗೆಲ್ಲುವ ಸಾಧ್ಯತೆಗಳಂತೂ ಹೆಚ್ಚಿರುತ್ತದೆ. ಆದರೆ ಇದು ಯಾವಾಗ ಸಾಧ್ಯ? ಅದು ನೀವು ಪ್ರಯತ್ನಿಸಿದಾಗ ಮಾತ್ರ.

ಹೀಗೆ ಪ್ರಯತ್ನಿಸಿದಾಗ ನಿಮ್ಮ ಗಮನ ಕೇಂದ್ರೀಕೃತವಾಗುತ್ತದೆ, ನಿಮ್ಮ ಅಡಚಣೆಗಳೆಲ್ಲ ಅಳಿಸಿಹೋಗುತ್ತವೆ. ಏನೇ ಸವಾಲು ಬಂದರೂ ಅದನ್ನು ಮನಸ್ಸು ಮ್ಯಾನೇಜ್ ಮಾಡಬಲ್ಲದಾಗಿg ತ್ತದೆ. ಜಯ ಗ್ಯಾರಂಟಿಯಾಗಿ ನಮಗೆ ಒಲಿಯುವುದಾ? ಹೇಳಲಾಗದಿದ್ದರೂ ಸಾಧ್ಯತೆಯಂತೂ ಇದೆ, ಹೌದಲ್ಲವೇ?! ಇದೇ -ರ್ಮುಲಾವನ್ನು ಬದುಕಿಗೆ ಅನ್ವಯಿಸಿಕೊಳ್ಳಬೇಕಿದೆ. ನಾವೆಲ್ಲ ಸವಾಲುಗಳನ್ನು ಪ್ರೀತಿಸುವವರೇ, ಆದರೆ ಅದು ನಮ್ಮ ಅಳತೆಗೆ ಸೂಕ್ತವಾಗಿದ್ದರೆ ಮಾತ್ರ. ನಮ್ಮ ಸಾಮರ್ಥ್ಯಕ್ಕಿಂತ ಸವಾಲು ಕಡಿಮೆಯಾಗಿದ್ದರೆ ಅದು ಬೋರಿಂಗ್, ಜಾಸ್ತಿಯಾಗಿದ್ದರೆ ಅದು ಡಿಸ್ಕರೇಜಿಂಗ್. ನಮ್ಮ ದಿಗಂತವನ್ನು ದಾಟದ ಸವಾಲುಗಳಷ್ಟೇ ನಮಗೆ ಸದಾ ಸೂರ್ತಿದಾಯಕ, ಪ್ರೇರಣಾತ್ಮಕ. ಏಕೆಂದರೆ ಮಿದುಳು ಸದಾ ಸೋಲು-ಗೆಲುವಿನ ಲೆಕ್ಕಾಚಾರಗಳನ್ನು ಹಾಕುತ್ತಲೇ ಇರುತ್ತದೆ.

ಈ ಲೆಕ್ಕಾಚಾರವನ್ನೇ The Goldilock rule ಎನ್ನಲಾಗುತ್ತದೆ. ಈ The Goldilock rule ಅನ್ನು ಬದುಕಿಗೆ ಅನ್ವಯಿಸಿಕೊಳ್ಳುವುದೇ ದೀರ್ಘ
ಕಾಲಿಕವಾಗಿ ಪ್ರೇರಣೆಯನ್ನು ನಮ್ಮದಾಗಿಸಿಕೊಳ್ಳಬಹುದಾದ ಒಂದು ಮುಖ್ಯವಾದ ಪ್ರೇರಣೆ. ನಮ್ಮ ಮನಸ್ಸಿನ ಶಕ್ತಿ ಅದನ್ನು ನಾವು ಎಷ್ಟು ಗಟ್ಟಿಗೊಳಿಸುತ್ತೇವೆಯೋ, ಅದು ಅಷ್ಟು ಆಳವಾಗುತ್ತಾ ಹೋಗುತ್ತದೆ. ಹಾಗಾಗಿ ನಮ್ಮ ಪ್ರತಿ ಆಲೋಚನೆಗಳನ್ನು ಆದೇಶವಾಗಿ ತೆಗೆದುಕೊಳ್ಳದೆ
ಸೂಚನೆಯಾಗಿ ತೆಗೆದುಕೊಳ್ಳಬೇಕಾಗುತ್ತದೆ. ಈಗ ಈ ಅಂಕಣ ಬರೆಯಬೇಕಾದರೆ ‘ಅಯ್ಯೋ, ಯಾಕೋ ಸುಸ್ತಾಯಿತು’ ಎಂಬ ಆಲೋಚನೆ ನನ್ನನ್ನು ಕಾಡುತ್ತದೆ, ‘ಆಮೇಲೆ ಬರೆದರಾಯಿತು ಬಿಡು’ ಎಂಬ ಆಲೋಚನೆಯೂ ಸುಲಭವಾಗಿ ನನ್ನನ್ನು ಪ್ರೇರೇಪಿಸಬಲ್ಲ ಅಂಶ ವಾಗಿರುತ್ತದೆ. ಆದರೆ ಈ ಆಲೋಚನೆಯನ್ನು ನಾನು ಆದೇಶವಾಗಿ ಪರಿಗಣಿಸದೆ ಸೂಚನೆಯಾಗಿ ಪರಿಗಣಿಸಿ ಒಂದು ವಿರಾಮ ತೆಗೆದುಕೊಂಡು ಆದಷ್ಟು ಬೇಗ ಈ ಕೆಲಸವನ್ನು ಮಾಡಿ ಮುಗಿಸಿಬಿಟ್ಟರೆ, ಬೇರೆ ಕೆಲಸಗಳನ್ನು ಮಾಡಲು ಸುಲಭವಾಗುತ್ತದೆ ಎಂಬ ಪ್ರೇರಣೆಯನ್ನು ಈ ಕ್ಷಣಕ್ಕೆ ನಾನು ನನ್ನದಾಗಿಸಿಕೊಳ್ಳಬೇಕು.

ನೆನಪಿರಲಿ, ಯಾವುದೇ ಕೆಲಸ ಮಾಡುವಾಗ ಮಧ್ಯದಲ್ಲಿ ಅಸಮಾಧಾನ-ಅಸೌಖ್ಯ ಉಂಟಾಗಬಹುದು. ಅಷ್ಟು ಮಾತ್ರಕ್ಕೆ ಆ ಕೆಲಸವನ್ನು ನಾವು ಬಿಟ್ಟುಬಿಡಬೇಕೆಂದಿಲ್ಲ. ಈ ಎಲ್ಲಾ ಅಸಮಾಧಾನ, ಅಸೌಖ್ಯಗಳು ತಾತ್ಕಾಲಿಕ. ಬದುಕು ಹಿಂದೆಂದಿಗಿಂತಲೂ ಈಗ ಸುಲಭವಾಗಿದೆ. ನಮ್ಮ
ಆಹಾರವನ್ನು ನಾವೇ ಅರಸುತ್ತಿಲ್ಲ, ನಮ್ಮ ಮನೆಯನ್ನು ನಾವೇ ಕಟ್ಟಿ ಬದುಕುತ್ತಿಲ್ಲ. ಹಾಗಾಗಿ ಐಪೋನ್‌ನ ಚಾರ್ಜರ್ ಕಳೆದುಹೋದರೆ ಕಿರುಚಿ, ಕೂಗಾಡಬೇಕಿಲ್ಲ. ಬದುಕೆಂದರೆ ಬ್ಯಾಲೆನ್ಸ್ ಬಿಟ್ಟುಕೊಡುವುದು ಅಲ್ಲ, ಅಡಚಣೆಗಳನ್ನು ಮೀರುವುದು. ಈ ಮೀರುವಿಕೆಗೆ ಬೇಕಿರುವುದೇ ಸೆಲ್
ಮೋಟಿವೇಷನ್. ನಮ್ಮನ್ನು ನಾವು ಪ್ರೇರೇಪಿಸಿಕೊಳ್ಳುವುದೇ, ಪ್ರಭಾವಿಸಿಕೊಳ್ಳುವುದೇ ಇದಕ್ಕೆ ಉತ್ತರ!

Leave a Reply

Your email address will not be published. Required fields are marked *

error: Content is protected !!