Sunday, 8th September 2024

ಕಳೆದು ಹೋಗದಿರೋಣ ಅಂರ್ತಜಾಲದ ಮಾಯಾಜಾಲದಲ್ಲಿ

ಶ್ವೇತಪತ್ರ

shwethabc@gmail.com

ನನಗೆ ಸಿಹಿ ಅಂದ್ರೆ ಇಷ್ಟ, ಸಾಮಾಜಿಕ ಜಾಲತಾಣಗಳು, ಟಿವಿ ಅಂದ್ರೆ ಇಷ್ಟ ಹೌದಲ್ವಾ…! ಹೀಗೆ ನಮಗೆಲ್ಲ ಇಷ್ಟದ ಪ್ರೀತಿಸುವ ವಿಚಾರಗಳು ಇರುತ್ತವೆ. ನಾವೆಲ್ಲ ಅವುಗಳ ಜತೆ ಕನೆಕ್ಟ್ ಆಗಲು ಬಯಸುತ್ತೇವೆ. ಆದರೆ ನಾವು ಪ್ರೀತಿಸುವ ಇಷ್ಟಪಡುವ ಟಿವಿ, ಫೇಸ್ಬುಕ್, ಟ್ವಿಟರ್ ಸಿಹಿ ತಿಂಡಿಗಳು ನಮ್ಮನ್ನು ಪ್ರೀತಿಸಲಾರವು. ಆದರು ಸಿಹಿ ಅಂದರೆ ನಮಗೆ ಇಷ್ಟ ಊಟವಾದ ಮೇಲೆ ಪ್ರತಿನಿತ್ಯ ಸಿಹಿಯಂತೂ ಬೇಕೇ ಬೇಕು.

ರಾತ್ರಿ ಎರಡಾಗಲಿ, ಮೂರಾಗಲಿ ಟಿವಿ ರಿಮೋಟ್ ಹಿಡಿದು ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ಹೀಗೆ ಒಂದಾದ ಮೇಲೆ ಒಂದರಂತೆ ಚಾನಲ್‌ಗಳನ್ನು ಬದಲಾಯಿಸುತ್ತಾ ಹೋಗಬೇಕು ನಮ್ಮಲ್ಲಿ ಅನೇಕರು ಒಂದಿಲೊಮ್ಮೆ ಅಭ್ಯಾಸ ಬಲದಿಂದಲೋ ಯೋಚಿಸದೆಯೋ ಮೇಲಿನ ಕೆಲಸಗಳಿಗೆ ಒಗ್ಗಿಕೊಂಡು ಬಿಟ್ಟಿರುತ್ತೇವೆ. ಅಂತರ್ಜಾಲ ಹಾಗೂ ಸಾಮಾಜಿಕ ಜಾಲ ತಾಣಗಳ ಅತಿಯಾದ ಅವಲಂಬನೆಯು ಮನಸ್ಸಿನ ಆರೋಗ್ಯಕ್ಕೆ ಕೆಡುಕು. ನನಗೂ ಕೋವಿಡ್ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಅಭ್ಯಾಸವಾಗಿ ಕಡೆಗದು ಚಟವಾಗಿ ಬಿಟ್ಟಿತ್ತು.

ಮನೆಯಲ್ಲಿ ಮನಸಲ್ಲಿ ಮಾತಿಗಿಂತ ಮೌನವೇ ಹೆಚ್ಚು ಸದ್ದು ಮಾಡುವುದಕ್ಕೆ ಶುರುವಿಟ್ಟುಕೊಂಡು ಬಿಟ್ಟಿತು. ಪರಸ್ಪರ ಸಂಬಂಧಗಳಲ್ಲೂ ಮೌನ, ಆಗಲೇ ನನಗೆ ಈ ಸಾಮಾಜಿಕ ಜಾಲತಾಣಗಳ ಚಟ ಹೊರೆಯಾದಂತನಿಸಿತು. ಅನಿಸಿದ್ದೇ ತಡ ನಿರ್ಧರಿಸಿದೆ ಸಂಬಂಧಗಳು ನನ್ನ ಮೊದಲ ಆದ್ಯತೆ ಯಾಗಬೇಕು ಮಿಕ್ಕವೆಲ್ಲ ನಂತರದಲ್ಲಿ ಎಂದು. ನಾವೇ ಅಂತರ್ಜಾಲದ ದಾಸರಾಗಿ ಬಿಟ್ಟರೆ ಮನೆಯಲ್ಲಿರುವ ಚಿಕ್ಕ ಮಕ್ಕಳು ಅದೇ ವರ್ತನೆಯನ್ನು ರೂಡಿಸಿಕೊಳ್ಳುತ್ತಾರೆ.

ಚಿಕ್ಕದಾಗಿ ಶುರುವಾಗುವ ಸಮಸ್ಯೆ ಮುಂದೆ ಬೃಹದಾಕಾರವಾಗಿ ಬೆಳೆದು ನಮ್ಮನ್ನೇ ನುಂಗಿಬಿಡುತ್ತದೆ. ಈ ಪ್ರಮುಖ ನಿರ್ಧಾರ ವಾದ ಮೇಲೆ ಸಾಕಷ್ಟು ಸಮಯ -ನ್ -ಟ್ ಮೋಡ್‌ಗೆ ಹಾಕಿಬಿಟ್ಟು ಮಗಳೊಂದಿಗೆ ಕಳೆಯತೊಡಗಿದೆ. ಈ ನಿರ್ಧಾರ ಕ್ಕೂ ಬಹಳ ಮುಖ್ಯ ಕಾರಣ ಒಂದಿತ್ತು. ಒಮ್ಮೆ ಮಗಳು ಅಮ್ಮ ನಿನ್ನ ಸೂಪರ್ ಪವರ್ ಏನು ಅಂತ ಕೇಳಿದ್ಲು ಇನ್ನೇನು ಉತ್ತರಿಸ ಬೇಕು ಅಷ್ಟರಲ್ಲಿ ಫೋನ್ ರಿಂಗಣಿಸಿತ್ತು ಗಮನವೆಲ್ಲ ಫೋನ್‌ನಲ್ಲಿ ಮುಳುಗಿ ಹೋಗಿತ್ತು.

ಮಗಳು ಸಪ್ಪೆ ಮುಖ ಮಾಡಿ ನಾನು ಏನು ಕೇಳಿದ್ರು ಸರಿಗೆ ಉತ್ತರ ಕೊಡಲ್ಲ ನೀನು ಪಪ್ಪ ಯಾವಾಗಲೂ ಫೋನ್
ನೋಡ್ತಾ ಇರ್ತೀರಾ ಅಟ್ ಲೀ ನನ್ನ ಜತೆ ಮಾತನಾಡಲು ಒಂದು ನಾಯಿ ಮರಿಯನ್ನಾದರೂ ತಂದು ಕೊಡಿ ಎಂದು
ಕೇಳಿದ್ದಳು. ಮಗಳ ಆ ಮಾತು ನನ್ನನ್ನು ಬಹಳ ಕಾಡಿತ್ತು. ಇರುವ ಒಬ್ಬಳೇ ಮಗಳಿಗೆ ಸಮಯ ಕೊಡದಷ್ಟು ಅಂತರ್ಜಾಲಕ್ಕೆ ನಾವು ಅಂಟಿಕೊಂಡು ಬಿಟ್ಟರೆ ಸಂಬಂಧಗಳು ಅರಳುವುದಿಲ್ಲ ಕಮರಿ ಬಿಡುತ್ತವೆ ಎನಿಸಿತು. ಮಗಳು ಕೇಳಿದ ಪ್ರಶ್ನೆ ಆಗ ನೆನಪಾಯಿತು ನಿನ್ನ ಸೂಪರ್ ಪವರ್ ಏನು ಅಮ್ಮ ಎಂದು.

ಆ ಕ್ಷಣಕ್ಕೆ ನನಗೆ ಹೊಳೆದ ಉತ್ತರವೇ ಮನಸ್ಸು ಅದು ನನ್ನ ಮಹಾಶಕ್ತಿ ನನ್ನೊಬ್ಬಳದೇ ಅಲ್ಲ ನಮ್ಮೆಲ್ಲರದ್ದು. ಅಲ್ಲಿಂದ
ಮನಸ್ಸು ಮಾಡಿದೆ, ನಿಧಾನವಾಗಿ ಬದಲಾಯಿಸತೊಡಗಿದೆ ಮೊದಲಿಗೆ ಫೋನ್‌ಗೆ ಅಂತರ್ಜಾಲಕ್ಕೆ ಅಂಟಿಕೊಳ್ಳುವ ಚಟ
ಸುಲಭಕ್ಕೆ ಬಿಡಲಾಗಲಿಲ್ಲ ಇದೆಲ್ಲ ತಂತ್ರಜ್ಞಾನದಿಂದ ಉಂಟಾಗಿರುವ ಸಮಸ್ಯೆಗಳು ಏನು ಮಾಡುವುದಕ್ಕೆ ಆಗುವುದಿಲ್ಲ.
ಹೀಗೆ ಮನಸ್ಸು ನನ್ನನ್ನು ಮತ್ತೆ ಮತ್ತೆ ಅದರತ್ತಲೆ ಮನವೊಲಿಸುತ್ತಿತ್ತು. ಆದರೂ ನಾನು ಸೋಲದೇ ಕೆಲಸ ಮುಗಿಸಿ ಮನೆಗೆ ಹೋದ ಮೇಲೆ ಆದಷ್ಟು ಫೋನ್ ಟಿವಿಗಳಿಂದ ದೂರವಿರಲು ಪ್ರಯತ್ನಿಸಿದೆ ಸಾಧ್ಯವಾಯಿತು.

ಮಗಳ ಜತೆ ಆಟ, ಅವಳ ದಿನಚರಿ ಕೇಳುವುದು, ಅವಳ ಜತೆಗಿನ ವಾಕು-ಟಾಕು ಎಲ್ಲವೂ ಸಾಧ್ಯವಾಯಿತು. ಓದದೇ ಹಾಗೆ ಪೇರಿಸಿಟ್ಟ ದಿನಪತ್ರಿಕೆಗಳ ರಾಶಿ, ಮಯೂರದ ಕಂತುಗಳು ಕಣ್ಣ ಮುಂದೆ ಹರವಿ ಕೊಂಡವು. ಸಾಮಾಜಿಕ ಜಾಲತಾಣ ಗಳಿಗೆ ಅಂಟಿಕೊಳ್ಳುವ ಪ್ರಕ್ರಿಯೆ ಕಡಿಮೆಗೊಳಿಸುತ್ತಾ ಬಂದಂತೆ ನನಗೆ ಅನಿಸಿದ್ದು, ಬದುಕಲ್ಲಿ ಬರಿಯೇ ಸರಿಯಾದ ಕೆಲಸ ಗಳನ್ನಷ್ಟೇ ಮಾಡುವುದಲ್ಲ ನಮ್ಮನ್ನು ದಾರಿ ತಪ್ಪಿಸುವ ನೆಗೆಟಿವ್ ಕೆಲಸಗಳಿಗೂ ತಡೆಯೊಡ್ಡಬೇಕು.

ಅದಕ್ಕೆಲ್ಲ ನಾವು ಮುಖ್ಯವಾಗಿ ಅರಿಯಬೇಕಾದದ್ದು ಪ್ರಪಂಚದಲ್ಲಿ ಮನಸ್ಸಿನ ಶಕ್ತಿಯೇ ಮಹಾಶಕ್ತಿ. ಈ ಹೊತ್ತು ಎಲ್ಲದಕ್ಕೂ ತಂತ್ರeನದ ಅವಶ್ಯಕತೆ ಇದೆ ಒಪ್ಪಿ ಕೊಳ್ಳೋಣ. (ಈ ಸಲ ಕಡಲೆಕಾಯಿ ಪರಿಷೆಯಲ್ಲಿ ನಾನು ಮೊದಲ ಸಲ ದುಡ್ಡು ಕೊಟ್ಟು ಕಡಲೆಕಾಯಿ ಕೊಂಡುಕೊಳ್ಳಲಿಲ್ಲ ಆಶ್ಚರ್ಯವಾಯಿತೆ!, ಬರೀ ಫೋನ್ ಪೇ, ಜೀಪೇಯಷ್ಟೇ) ಆದರೂ ನಮ್ಮನ್ನು ದಿಕ್ಕು ತಪ್ಪಿಸುವ ಓದಲು, ಬರೆಯಲು, ತೊಡಕ್ಕಾಗಿಸುವ ಊಟ, ತಿಂಡಿ, ನಿದ್ರೆ ಪರಸ್ಪರ ಸಂಬಂಧಗಳಲ್ಲಿ ಬಿರುಕು ಮೂಡಿಸುವ ಸಾಮಾಜಿಕ ಜಾಲತಾಣಗಳ ಅಡಿಕ್ಷನ್ ಬಗ್ಗೆ ನಮಗೆ ಅತಿ ಸೂಕ್ಷ್ಮ ಎಚ್ಚರವಿರಬೇಕು.

ಗ್ರೀಕ್ ಪುರಾಣದಲ್ಲಿ ವ್ಯಕ್ತಿಯೊಬ್ಬನ ಕಥೆಯೊಂದಿದೆ. ಟ್ಯಾಂಟಲಸ್ ಆ ವ್ಯಕ್ತಿಯ ಹೆಸರು. ಆತನಿಗೆ ಎಲ್ಲದರಲ್ಲೂ ವಿಕರ್ಷಣೆ, ಚಂಚಲತೆ ಅವನ ಈ ವರ್ತನೆಯಿಂದ ಬೇಸತ್ತ ಆತನ ತಂದೆ ಜೀನಸ್ ಅವನನ್ನು ಶಪಿಸಿ ಗಡಿಪಾರು ಮಾಡಿರುತ್ತಾನೆ. ಟ್ಯಾಂಟಲಸ್ ಮರದಿಂದ ಹಣ್ಣು ಕಿತ್ತು ತಿನ್ನಬೇಕು ತಂದೆಯ ಶಾಪ ಮುಂದಾಗಿ ಆ ಹಣ್ಣಿನ ಮರದ ಕೊಂಬೆ ಅವನ ಕೈಗೆ ಸಿಗದಷ್ಟು ಎತ್ತರಕ್ಕೆ ಹೋಗಿಬಿಡುತ್ತದೆ. ಬಾಯಾರಿಕೆಯಾಗಿ ನೀರು ಕುಡಿಯಬೇಕು ಕೈಗೆ ಸಿಗದಷ್ಟು ಆಳಕ್ಕೆ ನೀರು ಮುಳುಗಿಬಿಡುತ್ತದೆ. ಅವನು ಏನನ್ನೇ ಪಡೆಯಲು ಹೊರಟರು ಅದು ಅವನಿಂದ ದೂರ ಉಳಿದುಬಿಡುತ್ತದೆ.

ಆತನ ತಂದೆ ನೀಡಿದ ಶಾಪವೇ ಅದಾಗಿರುತ್ತದೆ. ಹಂಬಲಿಸುವ ಆಸೆಗಳನ್ನು ಅವನು ಎಂದೂ ಪಡೆಯಲಾರದಾಗಿರುತ್ತದೆ. ಗ್ರೀನ್ ಪುರಾಣದ ಟ್ಯಾಂಟಲಸ್ ನ ಮೇಲಿನ ಕಥೆಯ ಉಪಮೆ ಮನುಷ್ಯನ ಮನಸ್ಥಿತಿಯನ್ನು ಬಿಂಬಿಸುವಲ್ಲಿ ಯಶಸ್ವಿ ಯಾಗುತ್ತದೆ. ನಾವೆಲ್ಲರೂ ಟ್ಯಾಂಟಲಸ್ ನಂತೆ ಒಂದಾದ ಮೇಲೊಂದರಂತೆ ಯಾವುದೋ ಹುಡುಕಾಟದಲ್ಲಿ ಇರುತ್ತೇವೆ. ಈ ಹುಡುಕಾಟಕ್ಕೆ ಗೊತ್ತಿಲ್ಲ ಗುರಿ ಇಲ್ಲ.

ನಾವೆಲ್ಲರೂ ಸ್ಮಾರ್ಟ್ ಫೋನ್‌ಗಳ ದಾಸರು. ಕುಟುಂಬದವರ ಫೋನ್ ನಂಬರ್‌ಗಳನ್ನು ನೆನಪಿಟ್ಟುಕೊಳ್ಳುವುದರಿಂದ
ಹಿಡಿದು ಎಲ್ಲಿಗಾದರೂ ಹೊರಟಾಗ ಬೇಕಾಗುವ ಗೂಗಲ್ ಮ್ಯಾಪ್‌ನವರೆಗೂ ಸ್ಮಾರ್ಟ್ ಫೋನ್ ಜೊತೆ ನಿಲ್ಲದ ಪಯಣ.
ಒಂದು ವಿಷಯ ನೆನಪಿರಲಿ, ಎಷ್ಟೋ ಕಾರಣಗಳಿಗೆ ಇಂದು ನಮಗೆ ಫೋನ್ ಅವಶ್ಯಕತೆ, ಅನಿವಾರ್ಯತೆಯಿದೆ. ಆದರೆ
ಅದು ಸದಾ ಅಂಟಿಕೊಂಡುಬಿಡುವ ಚಟವಾಗಿ ಬಿಡಬಾರದು. ಒಂದು ಮಾತಿದೆ ನಾವು ಯಾವ ಕೆಲಸವನ್ನು ಮಾಡಲು ಹೆಚ್ಚು ಹಿಂಜರಿಯುತ್ತೇವೆಯೋ, ಅದೇ ಕೆಲಸವನ್ನು ಮಾಡುವ ಅನಿವಾರ್ಯತೆ ಉಂಟಾಗಿಬಿಡುತ್ತದೆ ಎಂದು, ಇದು ಅಂತರ್ಜಾಲ, ಸ್ಮಾರ್ಟ್ ಫೋನ್ ಸಾಮಾಜಿಕ ಜಾಲತಾಣಗಳಿಗೂ ಅನ್ವಯ.

ಹಿಂದೊಮ್ಮೆ ನಮ್ಮ ಬಳಕೆ ಬೇಸಿಕ್ ಹ್ಯಾಂಡ್‌ಸೆಟ್‌ಗಳಷ್ಟೇ ಸೀಮಿತವಾಗಿತ್ತು ಇಂದು ಸ್ಮಾರ್ಟ್ ಫೋನ್, ತಂತ್ರಜ್ಞಾನ
ಗಳಿಲ್ಲದೆ ಬದುಕು ನಡೆಯುವುದೇ ಕಷ್ಟವಾಗಿದೆ. ಅವುಗಳ ಮೇಲಿನ ನಮ್ಮ ಅವಲಂಬನೆ ಹೆಚ್ಚಾಗಿದೆ. ಮನೋವಿಜ್ಞಾನಿ
ಯಾಗಿ ನಾನು ಗಮನಿಸಿರುವುದು ಮತ್ತು ಸಂಶೋಧನೆಗಳು ಸಾಬೀತುಪಡಿಸಿರುವ ಕಳವಳಕಾರಿ ಅಂಶವೆಂದರೆ ‘ಅವಲಂಬನೆಗಿಂತ ಸ್ಮಾರ್ಟ್ ಫೋನ್ ಹಾಗೂ ಅಂತರ್ಜಾಲದ ಅಡಿಕ್ಷನ್ ಹೆಚ್ಚಾಗಿದೆ’.

ಹತ್ತು ವರ್ಷಗಳ ಹಿಂದೆ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಪೋಷಕರ ಜೊತೆ ಮಾತನಾಡುವಾಗ ಅವರಿಂದ ಕೇಳಿ ಬರುತ್ತಿದ್ದ ಒಂದೇ ಒಂದು ದೂರೆಂದರೆ ಓದಲ್ಲ ಮೇಡಮ್ ಮನೆಯಲ್ಲಿ ಎಲ್ಲಾ ಕೆಲಸ ನಾವೇ ಮಾಡ್ತೀವಿ, ಕಷ್ಟಪಟ್ಟು ಫೀಸ್ ಕಟ್ಟುತ್ತೀವಿ ಆದರೂ ಓದಲ್ಲ ಬರೆಯಲ್ಲ ಅಂತ. ಇತ್ತಿಚೆಗೆ ಷೋಷಕರ-ಶಿಕ್ಷಕರ ಮೀಟಿಂಗಿನಲ್ಲಿ ಷೋಷಕರಿಂದ ಕೇಳಿ ಬಂದ ದೂರೆಂದರೆ ಓದೋದು ಬರೆಯೋದು ಹಾಳಾಗಲಿ ಮೇಡಂ ಮಾತೇ ಆಡಲ್ಲ ಮೂರು ಹೊತ್ತು ಫೋನು.

ಮನೆಗೆ ಯಾರೇ ಬಂದರು ಮಾತಾಡಿಸಲ್ಲ, ಯಾವಾಗಲು ರೀಲ್ಸ ನೋಡ್ತಾಳೆ, ಗಂಟೆ ರಾತ್ರಿ ಹನ್ನೆರೆಡಾದರು ಹೊದಿಕೆ ಹೊದ್ದುಕೊಂಡು ಯಾರ ಜತೆನೋ ಚಾಟ್ ಮಾಡ್ತಾಳೆ. ಒಬ್ಬ ಮಗ ಇದಾನೆ ಮೇಡಂ ಓದು ಬರಹ ಏನೂ ಇಲ್ಲ ದುಡಿಯಕೂ ಹೋಗಲ್ಲ ಬರೀ ಪಬ್ ಜಿ ಆಡ್ತಾ ಮನೇಲೆ ಕೂರ್ತಿತ್ತಾನೆ ನಮಗೂ ಹೇಳಿ ಹೇಳಿ ಸಾಕಾಗಿ ಹೋಗಿದೆ.

ಕೇವಲ ಹತ್ತೇ ಹತ್ತು ವರ್ಷಗಳಲ್ಲಿ ವಿದ್ಯಾರ್ಥಿಗಳ ಮನಸ್ಥಿತಿಯಲ್ಲಿ ಮಾತ್ರ ದೊಡ್ಡದೊಂದು ಬದಲಾವಣೆ. ಅಂತರ್ಜಾಲದ
ಚಟ ಭೂತದಂತೆ ಬೃಹದಾಕಾರವಾಗಿ ಬೆಳೆದಿದೆ. ಮೊನ್ನೆ ಕೌನ್ಸಿಲಿಂಗ್ ಕೇಸ್ ಒಂದು ಬಂದಿತ್ತು. ಇನ್ಸ್ಟಾಗ್ರಾಮ್ ಕಥೆಗೋಸ್ಕರ ಚಿಕ್ಕಪ್ರಾಯದ ಹುಡುಗ ಹುಡುಗಿಯರು ನಮ್ಮ ಕಾಲೇಜಿನ ಎದುರಿನ ಪಾರ್ಕಿನಲ್ಲಿ ತಾಳಿ ಕಟ್ಟಿಕೊಂಡು ಅದನ್ನು ವಿಡಿಯೊ ಮಾಡಿಕೊಂಡಿದ್ದರು. ಸೆಕ್ಯೂರಿಟಿ ಹಿಡಿದು ನನ್ನ ಬಳಿ ಕರೆ ತಂದಿದ್ದ. ಈ ಹೊಸ ಬಗೆಯ ಸಮಸ್ಯೆಗಳಿಗೆ ಸಮುದಾಯವಾಗಿ, ಶಿಕ್ಷಕರಾಗಿ, ಪೋಷಕರಾಗಿ ಹೊಸ ಚಿಕಿತ್ಸೆಗಳನ್ನು ರೂಪಿಸಬೇಕಿದೆ.

ನಮಗೆ ಸಾಮಾಜಿಕ ಆಂಟಿಬಾಡೀಸ್ (ಅನ್ನು ಅಂತರ್ಜಾಲದ ಚಟದ ವಿರುದ್ಧ ಹೋರಾಡುವಂತೆ ಮಾಡುವ ಸಾಮಾಜಿಕ ವೈದ್ಯರ ಸೋಷಿಯಲ್ ಡಾಕ್ಟರ್ಸ್‌ನ) ಅವಶ್ಯಕತೆ ಇದೆ. ಡ್ರಗ್ಸ್ ನಿಷೇಧದಂತೆ ಮುಂದೊಂದು ದಿನ ಸ್ಮಾರ್ಟ್ ಫೋನ್ ಅತಿಯಾದ ಬಳಕೆಯ ನಿಯಂತ್ರಣಕ್ಕೆ ಕಾನೂನು ಬರಲೂಬಹುದು. ಆನ್‌ಲೈನ್ ಜಗತ್ತಿನೊಳಗೆ ಅವಿತು ಹೋಗಿರುವ ನಾವು ವಾಸ್ತವದ ಜಗತ್ತಿನ ಜತೆ ಹೆಚ್ಚು ಕನೆಕ್ಟ್ ಆಗಬೇಕು.

ಲೈಕು ಡಿಸ್ಲೈಕುಗಳ ಆಚೆಗೂ ಪ್ರಪಂಚವಿದೆ ಅದು ನಮ್ಮನ್ನು ಗಟ್ಟಿಗೊಳಿಸುವ ಹೆಚ್ಚಿನ ನೈತಿಕ ಶಕ್ತಿಯನ್ನು ಹೊಂದಿದೆ ಅಂತಹ
ಅನುಭವಗಳನ್ನು ನಮ್ಮದಾಗಿಸಿಕೊಳ್ಳಬೇಕು. ನಾವೆಲ್ಲ ನಮ್ಮ ಫೋನಿನ ಒಳಗೆ ಬಂಽಯಾಗಿಬಿಟ್ಟಿದ್ದೇವೆ ಅದಕ್ಕೆ ನಮ್ಮ ಫೋನುಗಳನ್ನು ಸೆಲ್ ಫೋನ್ ಎನ್ನುವುದು. ಈ ಅಂತರ್ಜಾಲದ ಅಡಿಕ್ಷನ್‌ನ ಚಟ ನಮ್ಮ ಬುದ್ಧಿ ಶಕ್ತಿಗೆ ಸ್ಲೋ ಪಾಯಿಸನ್ ಇದ್ದ ಹಾಗೆ ಹೊರಬರಲು ನಮ್ಮ ಮನಸ್ಸಿನ ಹೊರತು ಬೇರೆ ಯಾವುದೋ ಮ್ಯಾಜಿಕಲ್ ಮಾತ್ರೆಯಿಲ್ಲ.

೧) ನಿಮ್ಮ ಸ್ಕ್ರೀನ್ ಟೈಮನ್ನು ನಿಗದಿಗೊಳಿಸಿ – ಅಂದರೆ ದಿನಕ್ಕೆ ಇಷ್ಟು ಹೊತ್ತು ಮಾತ್ರ ನಾನು ಮೊಬೈಲ್ ನೋಡುವುದು. ಇದು ನಿಮ್ಮ ದಿನ ಬೆಳಗ್ಗಿನ ಧ್ಯೇಯವಾಗಲಿ. ಈ ತೆರನಾದ ನಿರ್ಬಂಧನೆಗಳನ್ನು ಫೋನ್ ಬಳಕೆಗೆ ಸೀಮಿತಗೊಳಿಸಿ ಕೊಳ್ಳದಿದ್ದರೆ ಧೂಮಪಾನ, ಮದ್ಯಪಾನ, ರಮ್ಮಿ ಆಟಗಳ ಚಟದಂತೆ ಇದು ಬದುಕಿಗೆ ಮಾರಕವಾಗಿ ಬಿಡಬಹುದು ಇರಲಿ ಎಚ್ಚರ.

೨) ಬೇಡದ ಆಪ್‌ಗಳನ್ನು ಫೋನಿಂದ ತೆಗೆದು ಹಾಕಿ. ಅವಶ್ಯಕತೆ ಇಲ್ಲದ ಹೊತ್ತಲ್ಲಿ ಆದಷ್ಟು ಮೊಬೈಲ್ ಡೇಟಾವನ್ನು ಆಫ್ ಮಾಡಿ ಇಡಲು ಪ್ರಯತ್ನಿಸಿ. ನಿಮ್ಮನ್ನು ವಿಕರ್ಷಣೆಗೆ ಒಳಪಡಿಸುವ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್ , ಯೂಟ್ಯೂಬ್, ಇನ್ಸ್ಟಾಗ್ರಾಮ್ ಇವುಗಳ ಬಳಕೆ ಮಿತಿಯಲ್ಲಿರಲಿ. ಅಡಿಕ್ಷನ್ ನಿಂದ ಅಷ್ಟು ಸುಲಭಕ್ಕೆ ಪಾರಾಗಲು ಸಾಧ್ಯವಿಲ್ಲ ಮನಸ್ಸು ಮತ್ತು ಭಾವನೆಗಳು ಪದೇ ಪದೇ ಅದರತ್ತಲೆ ಸೆಳೆಯುತ್ತಿರುತ್ತವೆ ಆಗೆಲ್ಲ ರಚನಾತ್ಮಕವಾದ ಕೆಲಸಗಳಲ್ಲಿ ನಮ್ಮನ್ನು ತೊಗಡಗಿಸಿ ಕೊಳ್ಳೋಣ ಸಾಹಿತ್ಯದ ಓದು, ಗಾರ್ಡನಿಂಗ್, ಅಡುಗೆ, ಪೇಂಟಿಂಗ್, ಸೈಕ್ಲಿಂಗ್, ಯೋಗ, ಧ್ಯಾನ, ಚಾರಣ, ಫೋಟೋಗ್ರಫಿ ಹೀಗೆ ಸೆಲ್ ಫೋನ್ ಆಚೆಯ ಜಗತ್ತು ಮತ್ತು ಸುಂದರವಾಗಿದೆ ಅಪ್ಪಿಕೊಳ್ಳೋಣ.

೩) ನಿಮಗೆ ನೀವೇ ಪ್ರಾಮಿಸ್ ಮಾಡಿಕೊಳ್ಳಿ ಆನ್‌ಲೈನ್ ಜಗತ್ತಿಗೆ ಹೆಚ್ಚು ಅಂಟಿಕೊಳ್ಳುವುದಿಲ್ಲವೆಂದು. ನೀವು ಈ ಚಟದಿಂದ ಹೊರಬಂದು ನೋಡಿ ನಿಮಗೆ ಆಶ್ಚರ್ಯವಾಗುತ್ತದೆ ಅಸಂಬದ್ಧ ಪ್ರಪಂಚದ ಆಚೆ ಬಂದ ಅನುಭವ ನಿಮ್ಮದಾಗುತ್ತದೆ. ಉಸಿರಾಟ ನಿಧಾನಗೊಳ್ಳುತ್ತದೆ. ಜಾಲತಾಣಗಳು ನಮ್ಮನ್ನು ಚಂಚಲಗೊಳಿಸುತ್ತಿವೆ ಎಂಬುದು ಸುಳ್ಳು. ನೀವು ಅವುಗಳಿಂದ ಚಂಚಲತೆಗೆ ಒಳಗಾಗುತ್ತೀದ್ದೀರಿ ಮತ್ತೊಮ್ಮೆ ನೆನಪಿಸುತ್ತಿದ್ದೇನೆ ಅಂತರ್ಜಾಲದ ಅಡಿಕ್ಷನಿಗೆ ಯಾವುದೇ ಮಾತ್ರೆ ಇಲ್ಲ,, ಮೆಡಿಸನ್ ಇಲ್ಲ ಆಂಟಿಬಯೋಟಿಕ್ಸ್ ಇಲ್ಲ ಮನಸ್ಸೇ ಮಹಾ ಶಕ್ತಿ ಅಷ್ಟೇ!

error: Content is protected !!