Sunday, 21st April 2024

ಕಲ್ಪನೆ-ಬದುಕಿನ ನಡುವೆ ಸಮಾನಾಂತರ ಸಂಧಿ ಸಾಧ್ಯವೇ?!

ಮನುಷ್ಯರು ಸಹಜವಾಗೇ ಸಂತೋಷವಾಗಿರಬೇಕು ಎಂಬುದನ್ನು ನಮ್ಮ ಸಮಾಜ ಹಾಗೂ ಸಂಸ್ಕಾರವೂ ಒತ್ತಾಯಿಸುತ್ತವೆ. ಆದರೆ ನಮ್ಮ ಸುತ್ತಲಿನ ಘಟನಾವಳಿಗಳು ಇದನ್ನು ಸುಳ್ಳೆಂದೇ ಸಾಬೀತುಪಡಿಸುತ್ತವೆ. ಐವರಲ್ಲಿ ಒಬ್ಬ ವ್ಯಕ್ತಿ ಖಿನ್ನತೆಯಿಂದ ಬಳಲುತ್ತಿದ್ದರೆ, ಪ್ರಪಂಚದ ಶೇ.೩೦ರಷ್ಟು ವ್ಯಕ್ತಿಗಳು ಬದುಕಿನ ಯಾವುದೋ ಒಂದು ಹಂತದಲ್ಲಿ ಮಾನಸಿಕ ಕ್ಷೋಭೆಯಿಂದ ಒದ್ದಾಡುತ್ತಿದ್ದಾರೆ.

ಬಹುತೇಕ ಕಾಲ್ಪನಿಕ ಕಥೆಗಳು ಸುಖಾಂತ್ಯದಲ್ಲೇ ಮುಕ್ತಾಯಗೊಳ್ಳುತ್ತವೆ ನೆನಪಿದೆಯೇ? ಕಾಲ್ಪನಿಕ ಕಥೆಗಳಷ್ಟೇ ಅಲ್ಲ, ನಮ್ಮ ಸಿನಿಮಾಗಳಲ್ಲೂ ಅಷ್ಟೇ, ಕೆಟ್ಟದ್ದನ್ನು ಒಳ್ಳೆಯದು ಗೆದ್ದಂತೆ, ಪ್ರೀತಿ ಎಲ್ಲವನ್ನು ಎಲ್ಲರನ್ನೂ ಒಳಗೊಳ್ಳುವಂತೆ,  ಹೀರೋ ವಿಲನ್‌ನನ್ನು ಹಿಡಿದುಹಾಕುವಂತೆ ಹೀಗೆ  ಟೆಲಿವಿಷನ್ ಸೀರಿಯಲ್‌ಗಳಿರಬಹುದು ಕಥೆ-ಕಾದಂಬರಿಗಳು ಇರ ಬಹುದು ಎಲ್ಲದರಲ್ಲೂ ‘ಹ್ಯಾಪಿ ಎಂಡಿಂಗ್’. ನಮ್ಮೆಲ್ಲರಿಗೂ ಹ್ಯಾಪಿ ಎಂಡಿಂಗ್ ಬಹಳ ಇಷ್ಟ, ಏಕೆಂದರೆ ಸಮಾಜ ನಮಗೆ ಹೇಳಿಕೊಟ್ಟಿರುವುದೇ ಹಾಗೆ, ಬದುಕೆಂದರೆ ಅದೊಂದು ಖುಷಿಯ ಅಧ್ಯಾಯವಾಗಿ ಇರಬೇಕೆಂದು. ಆದರೆ ಇದು ವಾಸ್ತವ ಎಂದು ನಿಮಗನಿಸುತ್ತದೆಯೇ? ಸಮಾಜ ನಮ್ಮನ್ನು ನಾಲ್ಕು ಬಹುಮುಖ್ಯ ಕಾಲ್ಪನಿಕ ಪ್ರಪಂಚದೊಳಗೆ ಬಂಧಿಸಿಬಿಟ್ಟಿದೆ.

೧. ಸಂತೋಷವೆಂಬುದು ಎಲ್ಲಾ ಮನುಷ್ಯರಿಗೂ ಇರುವ ಸಹಜ ಸ್ಥಿತಿ:
ಮನುಷ್ಯರು ಸಹಜವಾಗೇ ಸಂತೋಷವಾಗಿರಬೇಕು ಎಂಬುದನ್ನು ನಮ್ಮ ಸಮಾಜ ಹಾಗೂ ಸಂಸ್ಕಾರವೂ ಒತ್ತಾಯಿಸುತ್ತವೆ. ಆದರೆ ಪ್ರತಿದಿನ ನಮ್ಮ ಸುತ್ತಲೂ ನಡೆಯುತ್ತಿರುವ ಘಟನಾವಳಿಗಳು ಇದನ್ನು ಸುಳ್ಳೆಂದೇ ಸಾಬೀತುಪಡಿಸುತ್ತವೆ. ಹತ್ತು ಜನರ ಪೈಕಿ ಒಬ್ಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ಐವರಲ್ಲಿ ಒಬ್ಬ ವ್ಯಕ್ತಿ ಖಿನ್ನತೆಯಿಂದ ಬಳಲುತ್ತಿದ್ದರೆ, ಪ್ರಪಂಚದಲ್ಲಿರುವ ಶೇ.೩೦ರಷ್ಟು ವ್ಯಕ್ತಿಗಳು ತಮ್ಮ ಬದುಕಿನ ಯಾವುದೋ ಒಂದು ಹಂತದಲ್ಲಿ ಮಾನಸಿಕ ಕ್ಷೋಭೆಯಿಂದ ಒದ್ದಾಡುತ್ತಿದ್ದಾರೆ. ಮತ್ತೊಂದಿಷ್ಟು ಜನ ಒಂಟಿತನ, ವಿಚ್ಛೇದನ, ಲೈಂಗಿಕ ತೊಂದರೆ, ಒತ್ತಡ, ಮಧ್ಯ ವಯಸ್ಸಿನ ಬಿಕ್ಕಟ್ಟು, ಸಂಬಂಧಗಳಲ್ಲಿನ ಅಸಹ
ಕಾರ, ಕೌಟುಂಬಿಕ ಹಿಂಸೆ, ಬೆದರಿಸುವಿಕೆ, ಪೂರ್ವಗ್ರಹಗಳು, ಕಡಿಮೆ ಆತ್ಮಗೌರವ, ಕೋಪ, ಹತಾಶೆ, ಉದ್ದೇಶವಿಲ್ಲದ ಬದುಕು ಮುಂತಾದ ಸಮಸ್ಯೆಗಳಿಂದಾಗಿ ಮತ್ತು ‘ಬದುಕಿಗೆ ಅರ್ಥ ತುಂಬುವುದು ಹೇಗೆ?’ ಎಂಬ
ಬಗೆಹರಿಯದ ಪ್ರಶ್ನೆಗೆ ಉತ್ತರ ತಿಳಿಯದೆ ಸಂಕಟ ಪಡುತ್ತಿದ್ದಾರೆ. ಆದರೆ ನಾವು ಮಾತ್ರ ‘ಎಲ್ಲರೂ ಖುಷಿಯಾಗಿದ್ದಾರೆ, ನಾವು ಮಾತ್ರ ಹಿಂಸೆ ಪಡುತ್ತಿದ್ದೇವೆ’ ಎಂದು ದುಃಖಿತರಾಗಿದ್ದೇವೆ. ಈ ದುಃಖವೇ ನಮ್ಮನ್ನು ಮತ್ತಷ್ಟು ಅಸಂತೋಷಿತರನ್ನಾಗಿಸುತ್ತಿದೆ.

೨. ನಾವು ಸಂತೋಷವಾಗಿಲ್ಲವೆಂದರೆ ನಮ್ಮಲ್ಲೇನೋ ದೋಷವಿದೆ, ತೊಂದರೆ ಇದೆ ಎಂಬ ಭಾವ:
ಮಾನಸಿಕ ಅಸ್ವಸ್ಥತೆ ಎಂದರೆ ಅದೊಂದು ಅಪಸಾಮಾನ್ಯತೆ ಎಂಬ ನಂಬುಗೆ ನಮ್ಮಲ್ಲಿ ಅನೇಕರಿಗಿದೆ. ಮಾನಸಿಕ ಅಸ್ವಸ್ಥತೆಯನ್ನು ದುರ್ಬಲತೆ ಅಥವಾ ರೋಗ, ಮನಸ್ಸಿನ ದೋಷ ಎಂಬುದಾಗಿ ಪರಿಗಣಿಸುತ್ತೇವೆ. ಬದುಕಲ್ಲೊಮ್ಮೆ ನಾವು ಅನುಭವಿಸುವ, ಸಂವೇದಿಸುವ ನೋವಿನ ಆಲೋಚನೆಗಳನ್ನು ನಾವು ವಿರೋಧಿಸುತ್ತೇವೆ. ಅವು ನಮ್ಮ ದುರ್ಬಲತೆಯ ಸಂಕೇತವೆಂದೇ ಭಾವಿಸಿ ನಮ್ಮನ್ನು ನಾವು ಹಳಿದುಕೊಳ್ಳುತ್ತೇವೆ. ಇದನ್ನು ಮೆಡಿಕಲ್ ಟರ್ಮಿನಾಲಜಿಗಳು ಕೂಡ ಲೇಬಲ್ ಮಾಡಿಬಿಡುತ್ತವೆ. ಉದಾಹರಣೆಗೆ ನಿಮಗೆ ಖಿನ್ನತೆ ಇದೆ, ನೀವು ಒತ್ತಡಕ್ಕೆ ಒಳಗಾಗಿದ್ದೀರಿ, ಹೀಗೆ ನಮ್ಮನ್ನು ಮತ್ತೊಂದಿಷ್ಟು ಕುಗ್ಗಿಸಿಬಿಡುತ್ತವೆ. ನೋವು ಕೂಡ ಸಹಜಭಾವ. ಕೆಲವೊಮ್ಮೆ ವ್ಯತ್ಯಾಸಗಳು ಉಂಟಾದಾಗ ಮಾನಸಿಕವಾಗಿ ಬಳಲುವುದು ಸಹಜ. ಹಾಗಂದ ಮಾತ್ರಕ್ಕೆ ನಮ್ಮಲ್ಲೇನೋ ತೊಂದರೆ ಇದೆ, ದೋಷವಿದೆ, ನಾವು ದುರ್ಬಲರು ಎಂದಲ್ಲ. ಮನಸ್ಸು ಅದರ ಕೆಲಸವನ್ನಷ್ಟೇ ಮಾಡುತ್ತಿದೆ. ಮನಸ್ಸಿನೊಳಗೆ ಹುಟ್ಟಿದ ಆ ಒಂದು ಯೋಚನೆ ಗೊಂದಲಕ್ಕೊಳಗಾಗಿದೆ. ಇದು ಸಹಜ. ಅದನ್ನು ಅಪ್ಪಿ ಕೊಂಡು-ಒಪ್ಪಿಕೊಂಡು ಬದುಕಿನ ಬದಲಾವಣೆಗಳಿಗೂ, ಮನಸ್ಸಿನ ಬದಲಾವಣೆಗಳಿಗೂ ಹೊಂದಿಕೊಳ್ಳುತ್ತಾ ಬದುಕತೊಡಗಿದರೆ ಅಲ್ಲೊಂದು ರೂಪಾಂತರ ಸಾಧ್ಯ.

೩. ಉತ್ತಮ ಬದುಕನ್ನು ರೂಪಿಸಿಕೊಳ್ಳಬೇಕಾದರೆ ಋಣಾತ್ಮಕ ಸಂವೇದನೆಗಳಿಂದ ಕಳಚಿಕೊಂಡು ಬಿಡಬೇಕು:
ಉತ್ತಮ ಅಭಿಪ್ರಾಯವುಳ್ಳ ಸಾಮಾಜಿಕ ಸ್ತರದಲ್ಲಿ ನಾವೆಲ್ಲ ಬದುಕುತ್ತಿದ್ದೇವೆ. ಆದರೆ ನೆನಪಿರಲಿ, ನಾವು ಬದುಕುತ್ತಿರುವ ಈ ಸಮಾಜಕ್ಕೆ ಒಂದುಗೀಳಿದೆ. ಅದೇನೆಂದರೆ, ಸದಾ ಸಂತೋಷವನ್ನು ಹುಡುಕುವುದು ಹಾಗೂ ಮನಸ್ಸಿನಲ್ಲಿರುವ ನಕಾರಾತ್ಮಕ ಸಂವೇದನೆಗಳನ್ನು ತೊಡೆದುಹಾಕಿ ಸಕಾರಾತ್ಮಕ ಸಂವೇದನೆಗಳನ್ನು ಮೂಡಿಸಿಕೊಳ್ಳುವುದು. ಮೇಲ್ನೋಟಕ್ಕೆ ಇದು ಅದ್ಭುತ ಸಿದ್ಧಾಂತವೆನಿಸುತ್ತದೆ. ಆದರೆ ನಕಾರಾತ್ಮಕ ಸಂವೇದನೆ ಗಳನ್ನು ಯಾರಾದರೂ ಯಾಕೆ ಬಯಸುತ್ತಾರೆ ಅಲ್ಲವೇ? ಬದುಕಲ್ಲಿ ನಾವು ಹೆಚ್ಚು ಮೌಲ್ಯಯುತವೆಂದು ಗುರುತಿಸುವ ಸಂಗತಿಗಳೆಲ್ಲವೂ ಹಿತ ಹಾಗೂ ಅಹಿತಕರ ಸಂವೇದನೆಗಳನ್ನು ನಮ್ಮ ಬಳಿ ತಂದೊಡ್ಡುತ್ತವೆ. ಉದಾ ಹರಣೆಗೆ ನಮ್ಮ ಕೌಟುಂಬಿಕ ಬದುಕನ್ನೇ ತೆಗೆದುಕೊಳ್ಳಿ. ನಾವು ಪ್ರೀತಿ ಮತ್ತು ಖುಷಿಗಳನ್ನು ಅನುಭವಿಸಿದರೂ, ಕೆಲವೊಮ್ಮೆ ಹತಾಶೆ-ನಿರಾಶೆಗಳು ಅಷ್ಟೇ ಸಹಜ. ಬದುಕಲ್ಲಿ ಪರ್ಫೆಕ್ಟ್ ಎನಿಸಿಕೊಳ್ಳುವ ಯಾವ ಅಂಶಗಳು, ವ್ಯಕ್ತಿಗಳು ಇಲ್ಲ. ಹಾಗೆಯೇ ಬದುಕಲ್ಲಿ ಪರ್ಫೆಕ್ಟ್ ಎನಿಸಿಕೊಳ್ಳುವ ಸಂಗತಿಗಳು, ಕೆಲಸಗಳು, ಪ್ರಾಜೆಕ್ಟ್‌ಗಳು ಇಲ್ಲ. ಎಷ್ಟೇ ಅರ್ಥಪೂರ್ಣವೆನಿಸಿ ಮಾಡುವ ಕೆಲಸಗಳು ಖುಷಿಯನ್ನು ಸ್ಪೂರ್ತಿಯನ್ನು ಮೂಡಿಸುವುದರ ಜತೆಗೆ ಒತ್ತಡ, ಭಯ, ಆತಂಕಗಳನ್ನು ಮೂಡಿಸುತ್ತವೆ. ಅಹಿತಕರವೂ ನಕಾರಾತ್ಮಕವೂ ಆದ ಭಾವನೆಗಳೇ ಇಲ್ಲ ಅಥವಾ ಅವು ಬೇಡವೇ ಬೇಡ ಎಂದು ಬದುಕಲು ಸಾಧ್ಯವಿಲ್ಲ. ಅವುಗಳ ಜತೆಗೇ ನಮ್ಮ ಬದುಕು, ಅದನ್ನು ರೂಢಿಸಿಕೊಳ್ಳಬೇಕಷ್ಟೇ.

೪. ನೀವೇನು ಯೋಚಿಸುತ್ತಿದ್ದೀರಿ ಎಂಬುದನ್ನು ಯಾವಾಗಲೂ ನಿಯಂತ್ರಿಸಲು ಸಾಧ್ಯವಾಗಿಸುವುದು:
ವಾಸ್ತವವಾಗಿ ನಮಗೆ ಬೇಕಾದ ಹಾಗೆ ನಮ್ಮ ಆಲೋಚನೆಗಳನ್ನು ಸಂವೇದನೆಗಳನ್ನು ನಮ್ಮಿಂದ ನಿಯಂತ್ರಿಸುವುದು ಸ್ವಲ್ಪ ಕಷ್ಟ. ಏಕೆಂದರೆ ಅವುಗಳ ಬಗ್ಗೆ ನಮಗಿರುವ ಅತ್ಯಲ್ಪ ನಿಯಂತ್ರಣ ಸಾಮರ್ಥ್ಯ. ಅದರರ್ಥ ನಮಗೆ ನಿಯಂತ್ರಣವೇ ಇಲ್ಲವೆಂದಲ್ಲ. ತಜ್ಞರು ನಂಬುವ ಹಾಗೆ ಭಾರಿ ನಿಯಂತ್ರಣವಿಲ್ಲ. ಆದಾಗ್ಯೂ ಆಲೋಚನೆಗಳ ಮೇಲೆ ಅಷ್ಟಾಗಿ ನಿಯಂತ್ರಣ ವಿಲ್ಲದಿದ್ದರೂ ಅವುಗಳಿಂದ ನಮ್ಮ ವರ್ತನೆಯ, ಚಟುವಟಿಕೆಯ ಮೇಲೆ ಆಗುವ ಪರಿಣಾಮವನ್ನು ಸರಿದೂಗಿಸುವ ಭಾರಿ ನಿಯಂತ್ರಣ ಶಕ್ತಿ ನಮ್ಮಲ್ಲಿ ಇರುತ್ತದೆ ಹಾಗೂ ಆ ನಿಯಂತ್ರಣವು ನಮ್ಮ ಬದುಕಿಗೆ ಎಷ್ಟು ಶ್ರೀಮಂತವಾಗಿ ಅರ್ಥ ತುಂಬುತ್ತೇವೆ ಎಂಬ ಆಧಾರದಲ್ಲೂ ಅನ್ವಯವಾಗುತ್ತದೆ. ಗಮನಿಸಿ, ಅದೆಷ್ಟೋ ಬಾರಿ ನಾವು ಪಾಸಿಟಿವ್ ಆಗಿ ಆಲೋಚಿಸಲು ಪ್ರಯತ್ನಿಸುತ್ತಿರುತ್ತೇವೆ, ಆದರೂ ನೆಗೆಟಿವ್ ಆಲೋಚನೆಗಳು ಹಿಂದೆ ಹಿಂದೆಯೇ ನಮ್ಮ ಮನಸ್ಸನ್ನು ಮುತ್ತುತ್ತಿರುತ್ತವೆ. ನಮ್ಮ ಮಿದುಳು ಮತ್ತು ಮನಸ್ಸು ನೂರಾರು ವರ್ಷಗಳಿಂದ ವಿಕಾಸವಾಗುತ್ತಾ ಬಂದಿರುವ ಅಪರೂಪದ ಸಂಗತಿಗಳು. ಹಾಗಾಗಿ ಮನಸ್ಸಿಗೊಂದು  ಫ್ರೇಮ್ ವರ್ಕ್ ಅದಾಗಲೇ ಇದ್ದುಬಿಟ್ಟಿದೆ. ಪಾಸಿಟಿವ್ ಅಥವಾ ನೆಗೆಟಿವ್ ಆಲೋಚನೆಗಳು ಬಿರುಗಾಳಿಯಂತೆ ಕೆಲವೊಮ್ಮೆ ಜೋರಾಗಿ ಬಡಿದಪ್ಪಳಿಸಿದರೆ, ಕೆಲವೊಮ್ಮೆ ಶಾಂತ, ಸೌಮ್ಯ ತಂಗಾಳಿಯಂತೆ ಪ್ರಫುಲ್ಲತೆಯನ್ನೂ ತಂದೊಡ್ಡುತ್ತವೆ. ಮಜಾ ಏನು ಗೊತ್ತಾ? ನಾವು ಅತಿ ಒತ್ತಡ, ಬೇಗುದಿಗೆ ಒಳಗಾಗಿದ್ದರೆ ನೆಗೆಟಿವಿಟಿಗಳ ಪ್ರಭಾವ ಗಾಢವಾಗಿರುತ್ತದೆ. ಆಗ ಆಲೋಚನೆಗಳನ್ನು ನಿಯಂತ್ರಿಸುವುದು ಕಷ್ಟ ಸಾಧ್ಯ. ಅದೇ ಮನಸ್ಸು ಉಲ್ಲಸಿತವಾಗಿದ್ದರೆ ಇದೇ ನೆಗೆಟಿವಿಟಿ ಗಳನ್ನು ನಿಭಾಯಿಸಿಬಿಡಬಹುದು ಸುಲಭವಾಗಿ. ಮೇಲಿನ ನಾಲ್ಕು ಕಲ್ಪನೆಗಳು ಸಂತೋಷದ ಭ್ರಮೆಯೆಂಬ ಬಲೆ ಯೊಳಗೆ ನಮ್ಮನ್ನು ಸುಲಭವಾಗಿ ಸಿಲುಕಿಸಿಬಿಡುವ ನೀಲಿ ನಕ್ಷೆಗಳೇ ಆಗಿವೆ, ಎಚ್ಚರವಿರಲಿ!

ಎಲ್ಲವನ್ನು ನಿಯಂತಿಸುತ್ತೇವೆ ಎಂಬ ಭ್ರಮೆ ನಮ್ಮ ಮಿದುಳಿಗಿರುವ ಅಗಾಧವಾದ ಶಕ್ತಿ ನಮ್ಮೆಲ್ಲರಿಗೂ ತಿಳಿದಿದೆ. ಅದು ಯೋಜಿಸಬಲ್ಲದು, ಯೋಚಿಸಬಲ್ಲದು, ಆವಿಷ್ಕರಿಸಬಲ್ಲದು, ಸಮಸ್ಯೆ ಬಗೆಹರಿಸಬಲ್ಲದು, ಹೊಸ
ದನ್ನು ಊಹಿಸಬಲ್ಲದು. ಹೀಗೆ ಮಿದುಳಿನ ಕ್ರಿಯೆ. ಅನಂತ ಭೌತಿಕ ಜಗತ್ತಿನ ಒಳಗೆ ಆಗುವ ಕ್ರಿಯೆಗಳನ್ನು ನಾವು ನಿಯಂತ್ರಿಸಬಹುದು. ಕಳ್ಳ ಬರದಂತೆ ಕಾಂಪೌಂಡ್ ಹಾಕಿಸಿಕೊಳ್ಳಬಹುದು, ಸಿಸಿಟಿವಿ ಅಳವಡಿಸಿ ಕೊಳ್ಳಬಹುದು. ಆದರೆ ಮನಸ್ಸಿನೊಳಗಿನ ಜಗತ್ತಿಗೆ ಕ್ಯಾಮರಾ ಅಳವಡಿಸಿಕೊಳ್ಳುವುದು ಹೇಗೆ? ನಮ್ಮ ಆಲೋಚನೆ, ನೆನಪು, ಭಾವನೆ, ಆಸೆ-ಆಕಾಂಕ್ಷೆಗಳನ್ನು ನಿಯಂತ್ರಿಸುವುದಾದರೂ ಹೇಗೆ? ಭೌತಿಕ ಪ್ರಪಂಚದಲ್ಲಿ
ಏನನ್ನಾದರೂ ನಿಯಂತ್ರಿಸುವುದು ಸುಲಭ, ಆದರೆ ಮನದೊಳಗಿನ ಪ್ರಪಂಚವನ್ನು ನಿಯಂತ್ರಿಸುವುದಾದರೂ ಹೇಗೆ? ಈಗ ಒಂದು ಪುಟ್ಟ ಪ್ರಯೋಗ ಮಾಡೋಣ: ಈ ಟಿಪ್ಪಣಿ ಓದುತ್ತಿರುವಂತೆ ಐಸ್ ಕ್ರೀಮ್ ಬಗ್ಗೆ ಏನನ್ನೂ ಯೋಚಿಸ ಬೇಡಿ. ಐಸ್ ಕ್ರೀಮ್ನ ಬಣ್ಣ, ಅದರ ರುಚಿ ಆಹಾ, ಅದು ಕರಗಿಹೋಗುವ ರೀತಿ ಯಾವುದರ ಬಗ್ಗೆಯೂ ಯೋಚಿಸ ಬೇಡಿ. ಇದು ಸಾಧ್ಯವೇ? ನಿಮಗೆ ಐಸ್ ಕ್ರೀಮ್ ಬಗ್ಗೆ ಯೋಚಿಸದಿರಲು ಆಗುತ್ತದೆಯೇ? ಬಹುಶಃ ನಿಮಗೆ ಅರ್ಥವಾಯಿತು ಎಂದುಕೊಳ್ಳುವೆ. ಆಲೋಚನೆ, ಸಂವೇದನೆ, ನೆನಪು ಇವುಗಳನ್ನು ನಿಯಂತ್ರಿಸುವುದು ಸುಲಭವಲ್ಲ. ಹಾಗಂತ ಸಾಧ್ಯವಿಲ್ಲವೆಂದಲ್ಲ. ಬದುಕಿನ ಆಲೋಚನೆಗಳಿಗೆ ಸಂವೇದನೆಗಳಿಗೆ ಮುಖಾಮುಖಿಯಾಗೋಣ. ಅದಕ್ಕಿಂತ ಅನುಭಾವದ ಆನಂದ ಬೇರೆನಿದೆ!

Leave a Reply

Your email address will not be published. Required fields are marked *

error: Content is protected !!