ಬೇಟೆ
ಜಯವೀರ ವಿಕ್ರಂ ಸಂಪತ್ ಗೌಡ
ಯಡಿಯೂರಪ್ಪನವರ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆ ಬಂದಾಗ ಹಲವು ಹೆಸರುಗಳು ಈಗಾಗಲೇ ಓಡಾಡುತ್ತಿವೆ. ಕೆಲವರಂತೂ ತಾವೇ ಮುಖ್ಯಮಂತ್ರಿ ಎಂಬಂತೆ ಪೋಸು ಕೊಡುತ್ತಿದ್ದಾರೆ. ರಾಜಕಾರಣದಲ್ಲಿ ಹೀಗೆ ಆಸೆ ಪಡುವುದು ಸ್ವಾಭಾವಿಕ. ಆದರೆ ತಮಗೆ ಆ ಅರ್ಹತೆಯಿದೆಯಾ ಎಂಬ ಪ್ರಶ್ನೆ ಹಾಕಿಕೊಳ್ಳ ಬೇಕಾದವರೂ ಅವರೇ. ಯಡಿಯೂರಪ್ಪನವರನ್ನು ಬಿಟ್ಟರೆ, ಪಕ್ಷವನ್ನು ಅಽಕಾರಕ್ಕೆ ತರಬಲ್ಲ ವರ್ಚಸ್ಸು ಯಾರಿಗಿದೆ?
ದಿಲ್ಲಿಯಲ್ಲಿರುವ ಹೈಕಮಾಂಡಿಗೆ ಕರ್ನಾಟಕ ಯಾವತ್ತೂ ದೂರ. ಈ ಮಾತನ್ನು ಬಿಜೆಪಿ ಹೈಕಮಾಂಡ್ ಮತ್ತೊಮ್ಮೆ ಸಾಬೀತು ಮಾಡಿದೆ. ಈ ಹೈಕಮಾಂಡಿಗೆ ಯಾರು ಸಲಹೆಗಾರರೋ, ಯಾರು ಹೇಳಿದ್ದು ಕೇಳಿ ಇವರು ನಿರ್ಧಾರ ತೆಗೆದುಕೊಳ್ಳುತ್ತಾರೋ, ಆ ದೀನದಯಾಳ ಉಪಾಧ್ಯಾಯನೇ ಬಲ್ಲ! ಕರ್ನಾಟಕದಲ್ಲಿ ಕಳೆದ ಒಂದು ವರ್ಷದಿಂದ, ನಾಯಕತ್ವ ಬದಲಾವಣೆಯ ಮಾತು ಕೇಳಿ ಬರುತ್ತಿದೆ.
ಮೋದಿ ಮತ್ತು ಶಾ ಅವರನ್ನು ರಾಜಕಾರಣದ ಚಾಣಾಕ್ಷ, ಮಾಣಿಕ್ಯ ಎಂದೆ ಬಣ್ಣಿಸುವವರನ್ನು ಕೇಳಿದ್ದೇನೆ. ಆದರೆ ಕರ್ನಾಟಕದಲ್ಲಿ ನಡೆಯುತ್ತಿರುವ ಬಿಜೆಪಿ ವಿದ್ಯಮಾನಗಳನ್ನು ಬಲ್ಲವರಿಗೆ, ಮೋದಿ ಮತ್ತು ಶಾ ಏನು ಕಣ್ಣು ಮುಚ್ಚಿ ಕುಳಿತಿದ್ದಾರಾ ಎಂದು ಅನಿಸದೇ ಇರದು. ನಿಮಗೆ ಬೇಡ ಅಂದರೆ, ಯಡಿಯೂರಪ್ಪನವರನ್ನು ಬದಲಿಸಿ ಬಿಡಿ. ಬದಲಿಸುವುದಿಲ್ಲ ಅಂದ್ರೆ, ಅದನ್ನಾದರೂ ಹೇಳಿಬಿಡಿ. ಇವೆಲ್ಲ ಬಿಟ್ಟು ಹಾವೂ ಸಾಯದ, ಕೋಲೂ ಮುರಿಯದ ರೀತಿಯಲ್ಲಿ ಪರಿಸ್ಥಿತಿಯನ್ನು ಬಿಡುವುದರಿಂದ ಯಾರಿಗೂ ಒಳ್ಳೆಯದಲ್ಲ.
ಅದಕ್ಕಿಂತ ಮುಖ್ಯವಾಗಿ ರಾಜ್ಯದ ಜನರಿಗೂ ಒಳ್ಳೆಯದಲ್ಲ. ಕರೋನಾ ಸಂಕಷ್ಟದಲ್ಲಿ ಇಡೀ ರಾಜ್ಯದ ಜನತೆ ನಲುಗುತ್ತಿದ್ದರೂ, ನಾಯಕತ್ವ ಬದಲಾವಣೆಯೇ ಮುಖ್ಯ ಎಂದು ತೋರಿಸಿದ ಬಿಜೆಪಿ ನಾಯಕರಿಗೆ ಬುದ್ಧಿ ಬಂದಂತಿಲ್ಲ. ಅದೇನೇ ಇರಲಿ, ಪಕ್ಷದ ಕರ್ನಾಟಕ ವಿದ್ಯಮಾನಗಳನ್ನು ದಿಲ್ಲಿ ವರಿಷ್ಠರಂತೂ ಸರಿಯಾಗಿ ನಿಭಾಯಿಸುತ್ತಿಲ್ಲ. ಏನೇ ಆದರೂ ಕೊನೆಯಲ್ಲಿ, ಮೋದಿ ಇzರೆ ಎಂಬ ಉಡಾಫೆಯ ಧೋರಣೆಯೇ ಇವಕ್ಕೆ ಕಾರಣ. ಯಡಿಯೂರಪ್ಪ ಮುಖ್ಯಮಂತ್ರಿ ಆಗಿ ಮುಂದು ವರಿಯುತ್ತಾರಾ ಅಥವಾ ಇಲ್ಲವಾ ಎಂಬುದು ಒಂದು ವರ್ಷ ಚರ್ಚೆಯ ವಸ್ತುವಾಗಬಾರದು. ಇಂಥ ಬೆಳವಣಿಗೆ ಯಾವ ಪಕ್ಷಕ್ಕೂ ಒಳ್ಳೆಯದಲ್ಲ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬಂದ ಐದು ತಿಂಗಳಿನಿಂದ, ನಾಯಕತ್ವ ಬದಲಾವಣೆ ಪ್ರಶ್ನೆ ಪ್ರಸ್ತಾಪವಾಗುತ್ತಾ, ಮುನ್ನಲೆಯ ನಿಂತಿದೆ.
ಯಡಿಯೂರಪ್ಪನವರು ಈ ಎರಡು ವರ್ಷಗಳ ಅವಧಿಯಲ್ಲಿ ಹೆಚ್ಚೆಂದರೆ ನಾಲ್ಕು ತಿಂಗಳು ಸಮಾಧಾನದಿಂದ ನಿದ್ದೆ ಮಾಡಿರಬಹುದು. ಉಳಿದ ದಿನ, ನಾಳೆ ನಾನು ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿ ಇರುತ್ತೇನಾ ಎಂಬ ಅನಿಶ್ಚಿತತೆಯಲ್ಲಿಯೇ ದಿನ ದೂಡುತ್ತಾ ಬಂದರು. ಹೀಗಾಗಿ ಅವರಿಗೆ ನಿಜವಾದ ಯಡಿಯೂರಪ್ಪನಾಗಿ ಕೆಲಸ ಮಾಡಲು ಸಾಧ್ಯವಾಗಲೇ ಇಲ್ಲ. ದಿನದಿಂದ ದಿನಕ್ಕೆ ಪಕ್ಷದ ಹೈಕಮಾಂಡ್ ಅವರನ್ನು ದುರ್ಬಲನನ್ನಾಗಿ ಮಾಡಿದ್ದು ಸುಳ್ಳಲ್ಲ.
ಅಷ್ಟೆ ಬಲಿಷ್ಠವಾಗಿರುವ ಹೈಕಮಾಂಡ್, ಯಡಿಯೂರಪ್ಪನವರು ಬೇಡ ಎಂದು ನಿರ್ಧರಿಸಿದ್ದರೆ, ಒಂದು ವರ್ಷದ ಹಿಂದೆಯೇ ಬದಲಿಸಿಬಿಡಬೇಕಾಗಿತ್ತು. ಇಷ್ಟೊತ್ತಿಗೆ ಜನ ಅವರನ್ನು ಮರೆತಿರುತ್ತಿದ್ದರು. ಅದರ ಬದಲು, ಹೈಕಮಾಂಡ್ ಸರಕಾರ ಮತ್ತು ಪಕ್ಷ ದುರ್ಬಲವಾಗಲು ಅವಕಾಶ ನೀಡಿತು. ಇದರಿಂದ ಯಾರಿಗೆ ಪ್ರಯೋಜನ ಆಯಿತೋ ಗೊತ್ತಿಲ್ಲ. ಜನ ಈ ಸರಕಾರದ ಬಗ್ಗೆ ಕೆಟ್ಟದಾಗಿ ಮಾತಾಡಲು ಆಸ್ಪದ ನೀಡಿದಂತೆ ಆಯಿತು. ನಾಯಕತ್ವ ಬದಲಾವಣೆಯಂಥ ಪ್ರಶ್ನೆಯನ್ನು ಒಂದು, ಒಂದೂವರೆ ವರ್ಷಗಳ ಕಾಲ ಸಾರ್ವಜನಿಕವಾಗಿ ಚರ್ಚೆಯ ವಸ್ತುವಾಗಿ ಮಾಡುವುದು ಯಾವ ಪಕ್ಷಕ್ಕೂ ಒಳ್ಳೆಯದಲ್ಲ.
ಆದರೆ ಬಿಜೆಪಿ ಹೈಕಮಾಂಡ್ ಈ ವಿಷಯದಲ್ಲಿ ತಿಳಿದೂ ತಿಳಿದು ತಪ್ಪು ಮಾಡುತ್ತಿದೆ. ಕಳೆದ ಒಂದು ವರ್ಷದಿಂದ ಯಡಿಯೂರಪ್ಪನವರ ವಿರುದ್ಧ ಸ್ವಪಕ್ಷೀಯರೇ ಕೆಟ್ಟದಾಗಿ ಆರೋಪ, ಟೀಕೆಗಳನ್ನು ಮಾಡುತ್ತಾ ಬಂದರೂ, ಅವರಿಗೆ ಯಾರೂ ಕಿವಿ ಹಿಂಡಲಿಲ್ಲ. ಬಾಯಿ ಮುಚ್ಚಿಕೊಂಡಿರಿ ಎಂದು ದಿಲ್ಲಿ ನಾಯಕರು ಹೇಳಲಿಲ್ಲ. ರಾಜ್ಯ ಅಧ್ಯಕ್ಷರಂತೂ ಬಾಯಿಯನ್ನೇ ಬಿಡಲಿಲ್ಲ. ಅಷ್ಟಕ್ಕೂ ರಾಜ್ಯ ಅಧ್ಯಕ್ಷರು ಅವರಿಗೊಂದು ನೊಟೀಸನ್ನೂ ಕೊಡಲಿಲ್ಲ. ಬಸನಗೌಡ ಪಾಟೀಲ್ ಯತ್ನಾಳ್ ಅವರು ಯಡಿಯೂರಪ್ಪ ಅವರ ಬಗ್ಗೆ ಆಡಿದ ಮಾತುಗಳು ಒಂದಾ, ಎರಡಾ? ದಿಲ್ಲಿ ನಾಯಕರ ಆಶೀರ್ವಾದ ಇರುವುದರಿಂದಲೇ ಅವರು ಆ ರೀತಿ ಮಾತಾಡುತ್ತಿದ್ದಾರೆ ಎಂಬ ಅಭಿಪ್ರಾಯ ಮೂಡಿದರೂ, ಅವರ ಬಾಯಿಗೆ ಬೀಗ ಹಾಕಲು ಯಾರಿಂದ ಲೂ ಸಾಧ್ಯವಾಗಲಿಲ್ಲ.
ಇದು ದಿಲ್ಲಿ ನಾಯಕರಿಂದ ಯಡಿಯೂರಪ್ಪನವರನ್ನು ದುರ್ಬಲಗೊಳಿಸುವ ತಂತ್ರವಾಗಿದ್ದರೆ, ಅದು ’ಹುಚ್ ಪ್ಯಾಲಿ’ ನಿರ್ಧಾರ ಎನ್ನದೇ ವಿಧಿಯಿಲ್ಲ. ಯಾಕೆಂದರೆ, ಯಾರು ಏನೇ ಹೇಳಲಿ, ಕರ್ನಾಟಕ ಬಿಜೆಪಿಯಲ್ಲಿ ಯಡಿಯೂರಪ್ಪನವರನ್ನು ಮೀರಿಸುವ ಮತ್ತೊಬ್ಬ ನಾಯಕನಿಲ್ಲ. ಬೇರೆ ಯಾರೂ ಅವರ ಸನಿಹಕ್ಕೂ ಬರುವು ದಿಲ್ಲ. ಅವರನ್ನು ಬಿಟ್ಟರೆ ಯಾರು ಎಂಬ ಪ್ರಶ್ನೆಗೆ ಇಲ್ಲಿಯವರೆಗೆ ಉತ್ತರವೂ ಸಿಕ್ಕಿಲ್ಲ. ಯಡಿಯೂರಪ್ಪನವರ ನಂತರ ಯಾರು ಎಂದು ಈಗಾಗಲೇ ಹತ್ತಾರು ಹೆಸರುಗಳು ಓಡಾಡುತ್ತಿವೆ. ಈ ಯಾವ ಹೆಸರುಗಳೂ, ಯಡಿಯೂರಪ್ಪನವರ ಉತ್ತರಾಧಿಕಾರಿಯಾಗಲು ಅರ್ಹವಾದ ಹೆಸರುಗಳಲ್ಲ. ಒಂದಕ್ಕಿಂತ ಹೆಚ್ಚು ಹೆಸರು ಪ್ರಸ್ತಾಪವಾಗುತ್ತಿರುವುದು ಅವರನ್ ಬಿಟ್, ಇವರನ್ ಬಿಟ್ ಅವರಾರು, ಇವರಾರು ಎಂದು ಕೇಳುವಂತಾಗಿದೆ.
ಕೊನೆಗೆ ಬಿಜೆಪಿಯಲ್ಲಿ ಅದೆಂಥ ಪರಿಸ್ಥಿತಿ ಬಂತೆಂದರೆ, ಅರವಿಂದ ಬೆಲ್ಲದ ಅವರ ಹೆಸರೂ ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಸ್ತಾಪವಾಗುವ ಸ್ಥಿತಿ ನಿರ್ಮಾಣವಾಯಿತು.
ಕರ್ನಾಟಕ ಬಿಜೆಪಿಯಲ್ಲಿ ಯಡಿಯೂರಪ್ಪ ಅವರ ಸ್ಥಾನಮಾನವೇನು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಅದು ಎಲ್ಲರಿಗೂ ಗೊತ್ತಿರುವಂಥದ್ದೇ. ಅವರು ಬಿಜೆಪಿ ಬಿಟ್ಟು, ತಮ್ಮದೇ ಸ್ವಂತ ಕೆಜೆಪಿ ಕಟ್ಟಿದರೂ, ಅವರ ವರ್ಚಸ್ಸು ಸ್ವಲ್ಪವೂ ಕಡಿಮೆ ಆಗಲಿಲ್ಲ. ಅವರು ಜೈಲಿಗೆ ಹೋಗಿ ಬಂದರೂ, ಅವರ ವರ್ಚಸ್ಸು ಮುಕ್ಕಾಗ ಲಿಲ್ಲ. ಅವರು ಮತ್ತೊಮ್ಮೆ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದು ಸಣ್ಣ ಸಾಧನೆಯಲ್ಲ. ಹಾಗೆಯೇ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಇಪ್ಪತ್ತೈದು ಸ್ಥಾನ ಗಳಿಸುವಲ್ಲಿ ಅವರ ಕೊಡುಗೆಯನ್ನು ಉಪೇಕ್ಷಿಸುವಂತಿಲ್ಲ. ಯಡಿಯೂರಪ್ಪನವರ ಕಾರ್ಯವಿಧಾನದ ಬಗ್ಗೆ ಏನೇ ತಕರಾರುಗಳಿರಲಿ, ಅದನ್ನು ಪಕ್ಷದ ನಾಯಕರು ಕಿವಿಮಾತು ಹೇಳಬಹುದಿತ್ತು. ಅದು ಬಿಟ್ಟು, ಅವರ ವಿರುದ್ಧ ಪಕ್ಷದ ಶಾಸಕರನ್ನು ಎತ್ತಿಕಟ್ಟಿ ಚೆಂದ ನೋಡಿದ್ದು ಮತ್ತು ನೋಡುತ್ತಿರುವುದು ಪಕ್ಷಕ್ಕೆ ಶುಭ ಸೂಚನೆಯಲ್ಲ.
ಇದರಿಂದ ಯಾರಿಗೆ ಲಾಭವಾಯಿತು ?
ಒಂದು ವೇಳೆ ಪಕ್ಷಕ್ಕೆ ಯಡಿಯೂರಪ್ಪ ಅಧಿಕಾರದಲ್ಲಿ ಮುಂದುವರಿಯುವುದು ಇಷ್ಟವಿಲ್ಲ ಅಂತಾದರೆ, ಅವರನ್ನು ಇಳಿಸಲು ಮುಹೂರ್ತ ಫಿಕ್ಸ್ ಮಾಡಲು ತೊಂದರೆ ಏಕೆ? ಯಡಿಯೂರಪ್ಪನವರ ಬಾಯಿಯಿಂದಲೇ, ಅನಾರೋಗ್ಯ ಅಥವಾ ವೃದ್ಧಾಪ್ಯದ ಕಾರಣ ಕೊಟ್ಟು, ಪದಚ್ಯುತಗೊಳಿಸುವುದು ಕಷ್ಟವೇನಲ್ಲ. ಅದರಲ್ಲೂ ಅವರಿಗೆ ಮತ್ತು ಅವರ ಮಕ್ಕಳಿಗೆ ಸೂಕ್ತ ಸ್ಥಾನಮಾನದ ಭರವಸೆ ನೀಡಿದರೆ, ಅದ್ಯಾವ ಕಷ್ಟದ ಕೆಲಸ? ಅದಕ್ಕೆ ಹೈಕಮಾಂಡ್ ನಾಯಕರು ಇಷ್ಟೆ ಮೀನ – ಮೇಷ ಎಣಿಸ ಬೇಕು? ಈ ಕೆಲಸವನ್ನು ಅವರು ಒಂದು ವರ್ಷದ ಹಿಂದೆಯೇ ಮಾಡಬಹುದಿತ್ತು.
ಜನ ಇಷ್ಟೊತ್ತಿಗೆ ಯಡಿಯೂರಪ್ಪನವರನ್ನು ಅಧಿಕಾರದಿಂದ ಕೆಳಗಿಳಿಸಿದ್ದನ್ನು ಮರೆತಿರುತ್ತಿದರು. ಆದರೆ ನಾಯಕತ್ವವನ್ನು ದಿನದಿಂದ ದಿನಕ್ಕೆ ದುರ್ಬಲವಾಗಲು ಅನುವು ಮಾಡಿಕೊಟ್ಟಿದ್ದು ಮಾತ್ರ ಅರ್ಥವಾಗದ ಸಂಗತಿಯೇ. ಕರ್ನಾಟಕ ದೇಶದಲ್ಲಿಯೇ ಕರೋನಾ ಸಂಕಷ್ಟದಲ್ಲಿ ಸಿಲುಕಿ ದಾಗಲೂ, ಬಿಜೆಪಿ ಕೆಲ ಶಾಸಕರು, ಮಂತ್ರಿಗಳು, ನಾಯಕರು ನಾಯಕತ್ವ ಬದಲಾವಣೆಗೆ ಆಗ್ರಹಿಸಿ, ದಿಲ್ಲಿ ಯಾತ್ರೆಗೆ ಹೋಗುವುದನ್ನು ಮುಂದುವರಿಸಿದರು. ಇದಕ್ಕೆ ಹೈಕಮಾಂಡ್ ನಾಯಕರ ಕುಮ್ಮಕ್ಕು ಇತ್ತೆಂಬುದರಲ್ಲಿ ಸಂದೇಹವಿಲ್ಲ.
ಭಿನ್ನಮತೀಯ ಚಟುವಟಿಕೆ ನಡೆಯುತ್ತಿದ್ದರೂ, ದಿಲ್ಲಿಗೆ ಬರಬೇಡಿ ಎಂದು ಹೈಕಮಾಂಡ್ ನಾಯಕರು ಹೇಳಲಿಲ್ಲ. ಕೆಲವರಂತೂ ಇನ್ನು ಒಂದು ವಾರದಲ್ಲಿ ಮುಖ್ಯಮಂತ್ರಿ ಬದಲಾಗುತ್ತಾರೆ, ಪರೀಕ್ಷೆ ಬರೆದಿದ್ದೇವೆ, ಫಲಿತಾಂಶಕ್ಕಾಗಿ ಕಾಯುತ್ತಿದ್ದೇವೆ, ಮುಂದಿನ ವಾರದ ಹೊತ್ತಿಗೆ ನನ್ನ ಭವಿಷ್ಯ ನಿಜವಾಗುತ್ತದೆ ಎಂದೆ ಹೇಳಿಕೆ ಕೊಟ್ಟರು. ಆದರೆ ಏನೂ ಆಗಲಿಲ್ಲ. ಹಾಗೆ ಹೇಳಿದವರ ವಿರುದ್ಧ ಯಾವ ಕ್ರಮವನ್ನೂ ಕೈಗೊಳ್ಳಲಿಲ್ಲ. ಇವನ್ನೆ ಗಮನಿಸಿದರೆ, ಮಗುವನ್ನು ಚಿವುಟುವವರು ಮತ್ತು ಸಂತೈಸುವವರು ಯಾರು ಎಂಬುದು ಗೊತ್ತಾಗುತ್ತದೆ.
ಯಡಿಯೂರಪ್ಪನವರ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆ ಬಂದಾಗ ಹಲವು ಹೆಸರುಗಳು ಈಗಾಗಲೇ ಓಡಾಡುತ್ತಿವೆ. ಕೆಲವರಂತೂ ತಾವೇ ಮುಖ್ಯಮಂತ್ರಿ ಎಂಬಂತೆ ಪೋಸು ಕೊಡುತ್ತಿದ್ದಾರೆ. ರಾಜಕಾರಣದಲ್ಲಿ ಹೀಗೆ ಆಸೆ ಪಡುವುದು ಸ್ವಾಭಾವಿಕ. ಆದರೆ ತಮಗೆ ಆ ಅರ್ಹತೆಯಿದೆಯಾ ಎಂಬ ಪ್ರಶ್ನೆ ಹಾಕಿಕೊಳ್ಳ ಬೇಕಾದವರೂ ಅವರೇ. ಯಡಿಯೂರಪ್ಪನವರನ್ನು ಬಿಟ್ಟರೆ, ಪಕ್ಷವನ್ನು ಅಧಿಕಾರಕ್ಕೆ ತರಬಲ್ಲ ವರ್ಚಸ್ಸು ಯಾರಿಗಿದೆ? ಹೆಚ್ಚೆಂದರೆ ಅವರು ತಮ್ಮ ತಮ್ಮ
ಕ್ಷೇತ್ರಗಳಲ್ಲಿ ಗೆಲ್ಲಬಹುದು. ಪಕ್ಕದ ಕ್ಷೇತ್ರದಲ್ಲಿ ಪಕ್ಷವನ್ನು ಗೆಲ್ಲಿಸಿಕೊಂಡು ಬರುವ ತಾಕತ್ತೂ ಇಲ್ಲ.
ಅಂಥವರೆಲ್ಲ ಮುಖ್ಯಮಂತ್ರಿ ಆಗಲು ಜಿಗಿಯಲಾರಂಭಿಸಿದ್ದಾರೆ. ತಮ್ಮನ್ನೂ ಮುಖ್ಯಮಂತ್ರಿ ಮಾಡಿ ಎಂದು ದಿಲ್ಲಿಗೆ ಹೋಗುತ್ತಿದ್ದಾರೆ. ಇವರ ನೇತೃತ್ವದಲ್ಲಿ ಪಕ್ಷ ಬರುವ ಚುನಾವಣೆಯಲ್ಲಿ ಜನರ ಮುಂದೆ ಹೋದರೆ ಏನಾದೀತು? ಒಂದಂತೂ ಸತ್ಯ. ಯಡಿಯೂರಪ್ಪನವರನ್ನು ಪಕ್ಷ ಇನ್ನಷ್ಟು ಗೌರವಯುತವಾಗಿ ನಡೆಸಿ ಕೊಳ್ಳುವುದು ಸಾಧ್ಯವಿತ್ತು. ಈಗಲೂ ಸಾಧ್ಯವಿದೆ. ಅವರ ಅನುಪಸ್ಥಿತಿಯಲ್ಲಿ ಚುನಾವಣೆಗೆ ಹೋಗುವುದು ಸುರಕ್ಷಿತವಲ್ಲ. ಈಗಾಗಲೇ ಬಿಜೆಪಿ ಮಾಡಿದ ಯಡವಟ್ಟುಗಳ ಪ್ರಯೋಜನ ಪಡೆಯಲು ಕಾಂಗ್ರೆಸ್ ತುದಿಗಾಲ ಮೇಲೆ ನಿಂತಿದೆ. ಈ ಸಂದರ್ಭದಲ್ಲಿ ಯಡಿಯೂರಪ್ಪನವರನ್ನು ಅವಮಾನಿಸಿದರೆ, ನೋಯಿಸಿ ದರೆ, ಅದರ ಪರಿಣಾಮವನ್ನು ಮುಂದಿನ ಚುನಾವಣೆಯಲ್ಲಿ ಅನುಭವಿಸಬೇಕಾದೀತು.
ಲಿಂಗಾಯತ ಪ್ರಬಲ ಕೋಮಿನ ಅವಕೃಪೆಗೆ ತುತ್ತಾಗುವ ಅಪಾಯ ತಪ್ಪಿದ್ದಲ್ಲ. ಈ ಸಂದರ್ಭದಲ್ಲಿ ಬಿಜೆಪಿ ಹೈಕಮಾಂಡ್ ಮೇಲೆ ಗುರುತರವಾದ ಜವಾಬ್ದಾರಿಯಿದೆ. ಯಾವುದೇ ನಿರ್ಧಾರ ತೆಗೆದುಕೊಳ್ಳಲಿ, ಅದು ಯಡಿಯೂರಪ್ಪನವರಂಥ ಽಮಂತ ನಾಯಕನನ್ನು ನೋಯಿಸುವಂತಿರಬಾರದು. ಕರ್ನಾಟಕದಲ್ಲಿ ಬಿಜೆಪಿಯನ್ನು ಬೇರು ಮಟ್ಟದಿಂದ ಕಟ್ಟಿದವರೇ ಅವರು. ’ಯಡಿಯೂರಪ್ಪನವರೇ, ನೀವು ಬೇಡ’ ಎನ್ನುವಾಗಲೂ ಒಂದು ಸಜ್ಜನಿಕೆ ಇರಲಿ. ಅವರಿಗೆ ಅವಮಾನ ಆಗದಂತಿರಲಿ.