Friday, 13th December 2024

ಕಮಲದ್ದು ಆಪರೇಷನ್ ಅಲ್ಲ, ಕೇವಲ ಇಂಜಕ್ಷನ್ !

ಅಶ್ವತ್ಥಕಟ್ಟೆ

ranjith.hoskere@gmail.com

ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರಿದ ಬಳಿಕವೂ ಆರಂಭದ ದಿನದಿಂದಲೂ ‘ಅನಿಶ್ಚಿತ ಸರಕಾರ’ ಎನ್ನುವ ಮಾತಿನಿಂದಲೇ ಕಾಂಗ್ರೆಸ್ ಸರಕಾರ ಸುದ್ದಿಯಲ್ಲಿದೆ. ಆದರೆ ಈ ರೀತಿಯ ಸುದ್ದಿಯಲ್ಲಿರುವುದರಲ್ಲಿ ಪ್ರತಿಪಕ್ಷ ಬಿಜೆಪಿ, ಜೆಡಿಎಸ್‌ಗಿಂತ ಹೆಚ್ಚಿನ ಕೊಡುಗೆಯನ್ನು ಸ್ವಪಕ್ಷೀಯ ಕಾಂಗ್ರೆಸ್ ನಾಯಕರೇ ನೀಡುತ್ತಿರುವುದು ದುರಂತ ಎನ್ನುವುದು ಇಂದಿನ ರಾಜಕೀಯದ ಟಾಕ್ಕಿಂಗ್ ಪಾಯಿಂಟ್!

ವಿಧಾನಸಭಾ ಚುನಾವಣೆಯಲ್ಲಿ ಮೂರು ದಶಕದ ಬಳಿಕ ೧೩೦ಕ್ಕೂ ಹೆಚ್ಚು ಸೀಟುಗಳೊಂದಿಗೆ ಅಧಿಕಾರಕ್ಕೇರಿಸಿದ್ದರು ಜನತೆ. ಇಷ್ಟು ಭರ್ಜರಿ ಬಹುಮತದೊಂದಿಗೆ ಗದ್ದುಗೆ ಏರುತ್ತೇವೆ ಎನ್ನುವ ಕಲ್ಪನೆಯನ್ನೂ ಮಾಡದ ಕಾಂಗ್ರೆಸ್‌ಗೆ ಆ ಪ್ರಮಾಣದಲ್ಲಿ ಸೀಟು ಸಿಗುತ್ತಿದ್ದಂತೆ ಬಹುತೇಕರು ಅಂದು
ಕೊಂಡಿದ್ದು ‘ಮುಂದಿನ ಐದು ವರ್ಷ ಕರ್ನಾಟಕದಲ್ಲಿ ಸುಸ್ಥಿರ ಸರಕಾರ’ ನಿಶ್ಚಿತ ಎನ್ನುವುದಾಗಿತ್ತು. ಈ ರೀತಿಯ ಆಲೋಚನೆಗೆ ಕಾರಣ, ಕಾಂಗ್ರೆಸ್ ಸಿಕ್ಕಿದ್ದ ಸಂಖ್ಯಾಬಲವಾಗಿತ್ತು. ಆದರೆ ಹೀಗಿದ್ದೂ ‘ಆಪರೇಷನ್ ಕಮಲ’ದ ಮಾತು ಪದೇಪದೆ ಕೇಳಿಬರುತ್ತಿರುವುದು, ರಾಜ್ಯದಲ್ಲಿರುವ ಬಿಜೆಪಿಯ ಶಕ್ತಿ ಎನ್ನುವುದಕ್ಕಿಂತ ಹೆಚ್ಚಾಗಿ ರಾಜ್ಯ ಕಾಂಗ್ರೆಸ್‌ನ ‘ಸ್ವಯಂ’ಕೃತ ಅಪರಾಧ ಎಂದರೆ ತಪ್ಪಿಲ್ಲ.

ಕಾಂಗ್ರೆಸ್‌ನ ಸಮಸ್ಯೆಯ ಬಗ್ಗೆ ವಿಶ್ಲೇಷಿಸುವ ಮೊದಲು, ಈ ಪರಿ ಬಹುಮತದ ಅರಿವಿದ್ದಾಗಲೂ ಬಿಜೆಪಿ ನಾಯಕರು ಆಪರೇಷನ್ ಕಮಲಕ್ಕೆ ಕೈ ಹಾಕುವ ದುಃಸ್ಸಾಹಸಕ್ಕೆ ಮುಂದಾಗುವರೇ ಎನ್ನುವುದು ಈಗಿರುವ ಬಹುದೊಡ್ಡ ಪ್ರಶ್ನೆ. ಏಕೆಂದರೆ ಕಾಸ್‌ಗಿರುವುದು ೧೩೫ ಸ್ಥಾನ. ಬಿಜೆಪಿಗೆ ೬೬, ಜೆಡಿಎಸ್ ೧೯ ಹಾಗೂ ನಾಲ್ಕು ಪಕ್ಷೇತರರಿದ್ದಾರೆ. ಬಿಜೆಪಿ-ಜೆಡಿಎಸ್ ಮೈತ್ರಿಯಾದರೂ ೯೦ರ ಆಸುಪಾಸಿಗೆ ಬಂದು ನಿಲ್ಲುವುದಿಲ್ಲ. ಪಕ್ಷೇತರರಿಗೆ ಗಾಳ ಹಾಕುವುದೂ ಸೇರಿದಂತೆ ಏನೇ ಕಸರತ್ತು ಮಾಡಿದರೂ ಮ್ಯಾಜಿಕ್ ನಂಬರ್ ತಲುಪಲು ಕನಿಷ್ಠ ೨೫ ಸ್ಥಾನಗಳ ಕೊರತೆ ಬೀಳುತ್ತದೆ.

೨೦೧೯ರ ಸಮಯದಲ್ಲಿ ೧೦೪ ಸ್ಥಾನವಿದ್ದರೂ ಅಧಿಕಾರದ ಗದ್ದುಗೆ ಹಿಡಿಯಲು ೧೭ ಶಾಸಕರನ್ನು ಆಪರೇಷನ್ ಕಮಲದ ಬಲಗೆ ಬೀಳಿಸಬೇಕಾ ಯಿತು. ಈಗ ಜೆಡಿಎಸ್‌ನೊಂದಿಗೆ ಸೇರಿದರೂ ೯೦ ಸ್ಥಾನ ತಲುಪದಿರುವ ಕಾರಣ, ಕಾಂಗ್ರೆಸ್ ಸರಕಾರ ಉರುಳಿಸಲು ಸರಾಸರಿಗೆ ೪೫ರಿಂದ ೫೦ ಶಾಸಕರನ್ನು ರಾಜೀನಾಮೆ ಕೊಡಿಸಬೇಕು ಎನ್ನುವ ಲೆಕ್ಕಾಚಾರವಿದೆ. ಅಂದರೆ ಕಾಂಗ್ರೆಸ್‌ನಿಂದ ಈಗ ಗೆದ್ದಿರುವ ಶೇ.೩೫ರಿಂದ ೪೦ರಷ್ಟು ಶಾಸಕರನ್ನು ಸೆಳೆದು, ಅವರೆಲ್ಲ ಚುನಾವಣೆಗೆ ಖರ್ಚು ಮಾಡಿರುವ ಸಂಪನ್ಮೂಲದೊಂದಿಗೆ ಇಂತಿಷ್ಟು ನೀಡಿ ಜತೆಗೆ ಸಚಿವ ಸ್ಥಾನದ ಭರವಸೆ ನೀಡಿ ಸೆಳೆಯಬೇಕು. ಬಳಿಕ ಅವರನ್ನು ಗೆಲ್ಲಿಸಿಕೊಂಡು ಬರಬೇಕು. ಇದು ಅಸಾಧ್ಯ ಎನ್ನುವುದು ಸ್ವತಃ ಬಿಜೆಪಿ ವರಿಷ್ಠರಿಗೂ ಸ್ಪಷ್ಟ.

ಮಹಾರಾಷ್ಟ್ರ ಮಾದರಿಯಲ್ಲಿ ಸರಕಾರ ಪತನವಾಗಲಿದೆ ಎನ್ನುವ ಮಾತನ್ನು ಮಾಜಿ ಸಚಿವ, ಕಳೆದ ಬಾರಿಯ ಆಪರೇಷನ್ ಕಮಲದ ಮುಂಚೂಣಿಯಲ್ಲಿದ್ದ ರಮೇಶ್ ಜಾರಕಿಹೊಳಿ ಬೆಳಗಾವಿಯಲ್ಲಿ ಹೇಳಿದ್ದಾರೆ. ಗಮನಿಸಬೇಕಾದುದೇನೆಂದರೆ ಮಹಾರಾಷ್ಟ್ರದಲ್ಲಿ ಎನ್‌ಸಿಪಿ, ಶಿವಸೇನೆ ಯಲ್ಲಿನ ಬಂಡಾಯ ಬಳಸಿಕೊಂಡು ಅವರನ್ನು ಸೇರಿಸಿಕೊಂಡು ಬಿಜೆಪಿ ಸರಕಾರ ರಚಿಸಿದೆ. ಆದರೆ ಕರ್ನಾಟಕದ ಪರಿಸ್ಥಿತಿ ಭಿನ್ನವಾಗಿದ್ದು, ಇಲ್ಲಿ ಕಾಂಗ್ರೆಸ್ ಪಕ್ಷವೊಂದರಿಂದಲೇ ೧೩೫ ಶಾಸಕರು ಆಯ್ಕೆಯಾಗಿದ್ದಾರೆ. ವಿಲೀನವಾಗಬೇಕು ಎಂದರೆ ಕನಿಷ್ಠ ೮೦ರಿಂದ ೮೫ ಶಾಸಕರು ಬಿಜೆಪಿಗೆ ಬರಲು ಮುಂದಾಗಬೇಕು. ಇದು ಅಸಾಧ್ಯ ಎನ್ನುವುದು ಸ್ಪಷ್ಟ. ಆದರೂ ಪದೇಪದೆ ಆಪರೇಷನ್ ಕಮಲದ ಮಾತುಗಳು ತೇಲಿಬರುತ್ತಿರುವುದಕ್ಕೆ ಕಾರಣ, ಕರ್ನಾಟಕದಲ್ಲಿ ಸರಕಾರ ರಚಿಸಬೇಕು ಎನ್ನುವುದಕ್ಕಿಂತ ಮುಖ್ಯವಾಗಿ ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆ ಎನ್ನುವುದು ಸ್ಪಷ್ಟ.

ಸದ್ಯದ ಪರಿಸ್ಥಿತಿಯಲ್ಲಿ ‘ರಿಸ್ಕ್’ ತೆಗೆದುಕೊಂಡು ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರವನ್ನು ಕೆಡವಿ, ರಾಜ್ಯ ನಾಯಕರಿಗೆ ಅಽಕಾರ ನೀಡುವ ಮನಃಸ್ಥಿತಿಯಲ್ಲಿ ಬಿಜೆಪಿ ವರಿಷ್ಠರಿಲ್ಲ. ಹೀಗಾಗಿ ಪದೇಪದೆ ಕಾಂಗ್ರೆಸ್‌ನಿಂದ ಬಿಜೆಪಿಗೆ ಶಾಸಕರು ಬರುತ್ತಾರೆ ಎನ್ನುತ್ತಿರುವುದು, ಕರ್ನಾಟಕ ಕಾಂಗ್ರೆ
ಸ್‌ನಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದನ್ನು ತೋರಿಸುವುದಕ್ಕೆ ಮಾತ್ರ.

ಮುಂದಿನ ಏಪ್ರಿಲ್-ಮೇನಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಭಾರತದಿಂದ ಹೆಚ್ಚು ಸೀಟು ಪಡೆಯುವ ವಿಶ್ವಾಸದಲ್ಲಿರುವ ಏಕೈಕ ರಾಜ್ಯವೆಂದರೆ ಕರ್ನಾಟಕ. ೨೦೧೯ರಲ್ಲಿ ೨೫ ಸಂಸದರನ್ನು ಕರ್ನಾಟಕದಿಂದ ಬಿಜೆಪಿ ಗೆಲ್ಲಿಸಿಕೊಂಡು ಹೋಗಿತ್ತು. ಆದರೆ ಈ ಬಾರಿ ರಾಜ್ಯ
ಬಿಜೆಪಿಯಲ್ಲಿನ ಪಕ್ಷ ಸಂಘಟನೆಯ ವೈ-ಲ್ಯದಿಂದ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ತಂತ್ರಗಾರಿಕೆಯಿಂದ ೧೫ರಿಂದ ೧೮ ಸ್ಥಾನಕ್ಕೆ ಬಂದು ನಿಲ್ಲುವ ಆತಂಕ ಬಿಜೆಪಿ ನಾಯಕರಲ್ಲಿದೆ. ಆದ್ದರಿಂದ ಇದೀಗ ಈ ಸಂಖ್ಯೆಯನ್ನು ೨೦ ಗಡಿ ದಾಟಿಸುವ ಉದ್ದೇಶದಿಂದ ತಂತ್ರಗಾರಿಕೆಯನ್ನು ಬಿಜೆಪಿ ವರಿಷ್ಠರು ಸಿದ್ಧಪಡಿಸುತ್ತಿದ್ದಾರೆ.

ಕಾಂಗ್ರೆಸ್ ಸರಕಾರದ ವಿರುದ್ಧ ಅಸದ ಹುಡುಕಾಟದಲ್ಲಿದ್ದ ಬಿಜೆಪಿ ವರಿಷ್ಠರಿಗೆ ಕೈಪಾಳಯದಲ್ಲಿನ ಆಂತರಿಕ ಸಂಘರ್ಷವೇ ಬ್ರಹ್ಮಾಸ್ತ್ರವಾಗಿ ಸಿಕ್ಕಿದೆ. ಇದನ್ನೇ ಮುಂದಿಟ್ಟುಕೊಂಡು ಆಪರೇಷನ್ ಕಮಲ, ಮುಖ್ಯಮಂತ್ರಿ ಬದಲಾವಣೆ, ಗುಂಪುಗಾರಿಕೆಯ ವಿಷಯಗಳನ್ನೇ ಮುಂದಿಟ್ಟುಕೊಂಡು ಕರ್ನಾಟಕ ದಲ್ಲಿ ೧೩೫ ಸ್ಥಾನದೊಂದಿಗೆ ಸ್ಪಷ್ಟ ಬಂದಿದ್ದರೂ ‘ಅನಿಶ್ಚಿತ ಸರಕಾರ’ ಎನ್ನುವ ಹಣೆಪಟ್ಟಿ ಕಟ್ಟುವ ಮೂಲಕ, ಪಕ್ಷಗಳನ್ನು ಕಾಂಗ್ರೆಸ್‌ನಿಂದ ಸೆಳೆಯುವ
ಪ್ರಯತ್ನವಾಗಿ ತಂತ್ರಗಾರಿಕೆಯನ್ನು ರೂಪಿಸಲಾಗುತ್ತಿದೆ.

ಬಿಜೆಪಿಯ ಈ ತಂತ್ರಗಾರಿಕೆಯ ಅರಿವು ಕಾಂಗ್ರೆಸಿಗ ರಲ್ಲಿಲ್ಲ ಎಂದಲ್ಲ. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ವೈಫಲ್ಯಗಳನ್ನು ಮುಂದಿಟ್ಟು ಕೊಂಡೇ ಭರ್ಜರಿ ಅಭಿಯಾನ ನಡೆಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮುಂದಿನ ಲೋಕಸಭೆಯಲ್ಲಿಯೂ ಇದೇ ವೈಫಲ್ಯ ಹಾಗೂ ಗ್ಯಾರಂಟಿಗಳನ್ನು ಮುಂದಿಟ್ಟುಕೊಂಡು ಜನರ ಬಳಿ ಹೋಗುವ ಲೆಕ್ಕಾಚಾರದಲ್ಲಿದ್ದಾರೆ. ಗ್ಯಾರಂಟಿ ಯೋಜನೆ ಗಳನ್ನೇ ಮುಂದಿಟ್ಟುಕೊಂಡು ಹೋದರೆ ಬಿಜೆಪಿಗೆ ಹಿನ್ನಡೆ ಯಾಗುವುದು ಕಮಲ ನಾಯಕರಿಗೂ ಸ್ಪಷ್ಟವಾಗಿದ್ದರಿಂದ ಸ್ಪಷ್ಟ ಬಹುಮತ ದೊಂದಿಗೆ ಅಧಿಕಾರಕ್ಕೆ ಬಂದರೂ ಅನಿಶ್ಚಿತತೆಯಿಂದ ಕೂಡಿದೆ ಎನ್ನುವುದನ್ನು ತೋರಿಸುವ ಮೂಲಕ ಕಾಂಗ್ರೆಸ್‌ಗೆ ಹಿನ್ನಡೆ ಮಾಡುವುದಾಗಿದೆ.
ಈ ತಂತ್ರಕ್ಕೆ ಪೂರಕವಾಗಿ ಕಾಂಗ್ರೆಸ್‌ನ ಕೆಲ ನಾಯಕರೂ, ಬಿಜೆಪಿಯ ತಾಳಕ್ಕೆ ಸರಿಯಾಗಿಯೇ ಕುಣಿಯುತ್ತಿದ್ದಾರೆ.

ಅಧಿಕಾರಕ್ಕೆ ಬಂದ ಕ್ಷಣದಿಂದಲೂ ಒಂದಿಲ್ಲೊಂದು ವಿಷಯವನ್ನು ಮುಂದಿಟ್ಟುಕೊಂಡು ಸ್ವಪಕ್ಷದ ವಿರುದ್ಧವೇ ಧ್ವನಿ ಎತ್ತುತ್ತಿದ್ದಾರೆ. ಅದರಲ್ಲಿಯೂ ಪಕ್ಷದ ಹಿರಿಯ ಶಾಸಕರಾಗಿರುವ ಬವಸರಾಜ ರಾಯರೆಡ್ಡಿ, ಶಾಮನೂರು ಶಿವಶಂಕರಪ್ಪ, ಬಿ.ಕೆ. ಹರಿಪ್ರಸಾದ್‌ರಂಥವರೇ ವ್ಯತಿರಿಕ್ತವಾಗಿ ಮಾತನಾಡು ತ್ತಿರುವುದು ಕಾಂಗ್ರೆಸ್‌ಗೆ ನುಂಗಲಾರದ ತುತ್ತಾಗಿದೆ. ಅದರಲ್ಲಿಯೂ ಶಾಮನೂರು ಶಿವಶಂಕರಪ್ಪ ಅವರ ‘ಲಿಂಗಾಯತರಿಗೆ ಅನ್ಯಾಯ’ ಹೇಳಿಕೆ,
ರಾಯರೆಡ್ಡಿ ಅವರ ಭ್ರಷ್ಟಾಚಾರದ ಆರೋಪ ಹಾಗೂ ಬಿ.ಕೆ. ಹರಿಪ್ರಸಾದ್ ಅವರ ಒಬಿಸಿಗೆ ಸ್ಥಾನಮಾನದ ಹೇಳಿಕೆಗಳು ಬಿಜೆಪಿಯಿಂದ ಪ್ರಬಲವಾಗಿ ಬಳಕೆಯಾಗುವುದು ನಿಶ್ಚಿತ. ಇವುಗಳೊಂದಿಗೆ ಪದೇಪದೆ ಮುಖ್ಯಮಂತ್ರಿ ಬದಲಾವಣೆ, ಸಚಿವ ಸಂಪುಟ ಪುನಾರಚನೆ, ಗುಂಪುಗಾರಿಕೆಯ ಮಾತುಗಳು ಬಹುದೊಡ್ಡ ಸಮಸ್ಯೆ ತಂದೊಡ್ಡುತ್ತಿದೆ. ಈ ವಿಷಯದಲ್ಲಿ ಈಗಾಗಲೇ ಎರಡು ಬಾರಿ ಪಕ್ಷದ ಹೈಕಮಾಂಡ್ ಮಧ್ಯಪ್ರವೇಶಿಸಿದರೂ,
ಯಾವುದೇ ಪ್ರಯೋಜನವಾಗುತ್ತಿಲ್ಲ. ಅದರಲ್ಲಿಯೂ ಕೆಪಿಸಿಸಿ ಕಾರ್ಯಾಧ್ಯಕ್ಷ, ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ವಿದೇಶಿ ಪ್ರವಾಸ, ಪರಮೇಶ್ವರ್ ನಿವಾಸದಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ‘ಡಿನ್ನರ್ ಮೀಟಿಂಗ್’ ಪಕ್ಷಕ್ಕೆ ನುಂಗಲಾರದ ತುತ್ತಾಗಿದೆ ಎನ್ನುವುದರಲ್ಲಿ ಎರಡನೇ
ಮಾತಿಲ್ಲ.

ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಹೈಕಮಾಂಡ್‌ಗೆ ಇತ್ತ ಸಿದ್ದರಾಮಯ್ಯ ಅವರನ್ನೂ ಹಿಡಿದುಕೊಳ್ಳಲಾಗದೇ, ಅತ್ತ ಡಿಕೆಶಿಯನ್ನೂ ಬಿಡಲಾಗದ ಪರಿಸ್ಥಿತಿಗೆ ಬಂದಿದೆ. ಆ ಕಾರಣಕ್ಕಾಗಿಯೇ ಸಿದ್ದರಾಮಯ್ಯ ಅವರ ಬಣದ ನಾಯಕರು ‘ಮುಂದಿನ ಐದು ವರ್ಷವೂ ಸಿದ್ದರಾಮಯ್ಯ ಮುಖ್ಯಮಂತ್ರಿ’ ಎನ್ನುವ ಹೇಳಿಕೆಗಳನ್ನು ನೀಡುತ್ತ ಹೋದರೆ, ಇತ್ತ ಡಿಕೆಶಿ ಕಡೆಯವರು ‘ಎರಡೂವರೆ ವರ್ಷಕ್ಕೆ ಸಿಎಂ ಬದಲಾಗುತ್ತಾರೆ’ ಎನ್ನುವ ಮಾತನ್ನು ಹೇಳುತ್ತಿದ್ದಾರೆ. ಈ ಎರಡು ಹೇಳಿಕೆಗಳ ನಡುವೆ ಸ್ವತಃ ಪಕ್ಷದ ನಾಯಕರು, ಸಚಿವರುಗಳೇ ‘ಆಪರೇಷನ್ ಕಮಲ’ದ ಆತಂಕವನ್ನು ಹೊರಹಾಕುತ್ತಿದ್ದಾರೆ. ಈ ಮೂಲಕ ಕಾಂಗ್ರೆಸ್ ಪೂರ್ಣ ಪ್ರಮಾಣದಲ್ಲಿ ಅಧಿಕಾರವನ್ನು ಅನುಭವಿಸಲಿದೆ ಎನ್ನುವ ವಿಶ್ವಾಸದ ಮಾತುಗಳನ್ನು ಆಡುತ್ತಿಲ್ಲ. ಇದು ಬಿಜೆಪಿಗೆ ಬಹುದೊಡ್ಡ ವರದಾನವಾಗುತ್ತಿದೆ.

ಹಾಗೇ ನೋಡಿದರೆ, ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರಿದ ಕಾಂಗ್ರೆಸ್‌ನಲ್ಲಿ ೬೦ಕ್ಕೂ ಹೆಚ್ಚು ಶಾಸಕರು ಎರಡು ಅಥವಾ ಅದಕ್ಕಿಂತ ಹೆಚ್ಚು ಬಾರಿ ಆಯ್ಕೆಯಾದವರು. ಆದ್ದರಿಂದ ಸಹಜವಾಗಿಯೇ ಸಚಿವ ಸ್ಥಾನದ ಆಕಾಂಕ್ಷಿಗಳ ಸಂಖ್ಯೆ ದೊಡ್ಡಮಟ್ಟದಲ್ಲಿಯೇ ಇತ್ತು. ಇದರೊಂದಿಗೆ ಮುಖ್ಯಮಂತ್ರಿ ಸ್ಥಾನಕ್ಕಾಗಿ ಸಿದ್ದು, ಡಿಕೆಶಿ ನಡುವೆ ನಡೆದ ಕಾಂಪಿಟೇಷನ್ ಸಹ ಇತ್ತು. ಈ ಕಾರಣಕ್ಕಾಗಿಯೇ ಇಬ್ಬರನ್ನು ದೆಹಲಿಗೆ ಕರೆಸಿಕೊಂಡು ಮುಖ್ಯಮಂತ್ರಿ ಹುದ್ದೆ ಹಾಗೂ ಸಚಿವ ಸ್ಥಾನದ ಆಯ್ಕೆಯ ಬಗ್ಗೆ ಒಟ್ಟಿಗೆ ಕೂರಿಸಲು ಪಕ್ಷದ ವರಿಷ್ಠರು ಚರ್ಚಿಸಿ ಅಂತಿಮ ತೀರ್ಮಾನವನ್ನು ನೀಡಿದ್ದರು. ಎಲ್ಲಿಯೂ ಅಧಿಕಾರ ಹಂಚಿಕೆಯ ಸೂತ್ರದ ಗುಟ್ಟನ್ನು ಬಿಡುಕೊಟ್ಟಿಲ್ಲವಾದರೂ, ಅಧಿಕಾರ ಸೂತ್ರವಂತೂ ಸಿದ್ಧವಾಗಿರುವುದು ಸ್ಪಷ್ಟ. ಆ ಸೂತ್ರವೇನು ಎನ್ನುವುದು ಇಬ್ಬರಿಗೂ ಸ್ಪಷ್ಟವಾಗಿ ತಿಳಿದಿದೆ. ಆದ್ದರಿಂದ ಅಧಿಕಾರ ಹಂಚಿಕೆಯ ವಿಷಯದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಚರ್ಚೆಯಾಗುತ್ತಿದ್ದರೂ, ಇಬ್ಬರೂ ಮಾತನಾಡದೇ ‘ಮೌನ’ವಾಗಿರುವುದು ಕುತೂಹಲ ಹೆಚ್ಚಿಸಿದೆ.

ಕಾಂಗ್ರೆಸ್‌ನವರ ಸ್ವಯಂಕೃತ ಅಪರಾಧವನ್ನೇ ಬ್ರಹ್ಮಾಸ್ತ್ರದ ರೀತಿ ಬಳಸಿಕೊಂಡು ಬಿಜೆಪಿ ವರಿಷ್ಠರು ಲೋಕಸಭಾ ಚುನಾವಣೆ ಮುಗಿಯುವ ತನಕ ಈ ಅಸಮಾಧಾನ, ಆಪರೇಷನ್ ಕಮಲದ ವಿಷಯವನ್ನು ಜೀವಂತವಾಗಿಡುವ ಪ್ರಯತ್ನವನ್ನು ಮಾಡುವುದು ಸ್ಪಷ್ಟ. ಬಳಿಕ ಆಪರೇಷನ್ ಮಾಡಬೇಕೋ ಅಥವಾ ತಮ್ಮದೇ ಪಕ್ಷದ ಸಂಘಟನೆಗೆ ಆಪರೇಷನ್ ಮಾಡಿಕೊಂಡು ೨೦೨೮ರ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಬೇಕೋ ಎನ್ನುವುದು ತೀರ್ಮಾನಿಸುತ್ತಾರೆ. ಆದರೆ ಈ ಎಲ್ಲಕ್ಕಿಂತ ಮೊದಲು ಬಿಜೆಪಿ ನಾಯಕರು ಕಾಂಗ್ರೆಸ್‌ನಲ್ಲಿರುವ ಭಿನ್ನತೆಯನ್ನೇ ಬಳಸಿಕೊಂಡು ಸರಕಾರಕ್ಕೆ ಗ್ಯಾರಂಟಿಯಿಲ್ಲ ಎನ್ನುವ ಭಾವನೆ ಯನ್ನು ಜನರಲ್ಲಿ ಮೂಡಿಸಿ, ಅದನ್ನೇ ತಮ್ಮ ಲೋಕಸಭಾ ಚುನಾವಣೆಗೆ ಬಳಸಿಕೊಳ್ಳುವುದು ಖಚಿತ. ಇದನ್ನು ಆರಂಭಿಕ ಹಂತದಲ್ಲಿಯೇ ಕಾಂಗ್ರೆಸಿಗರು ಅರ್ಥೈಸಿಕೊಂಡರೆ ಆಗುತ್ತಿರುವ ಡ್ಯಾಮೇಜ್ ಕಂಟ್ರೋಲ್ ಆಗಲಿದೆ.

ಇಲ್ಲವಾದರೆ ಕಾಂಗ್ರೆಸ್ ಹೈಕಮಾಂಡ್‌ಗೆ ಸೇಫ್ ರಾಜ್ಯ ಎನಿಸಿರುವ ಕರ್ನಾಟಕದಿಂದಲೂ ನಿರೀಕ್ಷಿತ ಪ್ರಮಾಣದ ಸೀಟು ಪಡೆಯುವುದು ಕಷ್ಟವಾದೀತು ಎನ್ನುವುದು ಸ್ಪಷ್ಟ.