Saturday, 23rd November 2024

ಶಿಶ್ನ ಮರುಜೋಡಣೆಗೆ ಜಿಗಣೆಯ ಜೊಲ್ಲು !

ಹಿಂದಿರುಗಿ ನೋಡಿದಾಗ

ಪ್ರಾಚೀನ ಗ್ರೀಕರು ನಮ್ಮ ದೇಹದಲ್ಲಿ ನಾಲ್ಕು ರೀತಿಯ ರಸಗಳಿವೆ ಎಂದು ಭಾವಿಸಿದ್ದರು. ರಕ್ತ, ಕಫ, ಕಪ್ಪುಪಿತ್ತ ಮತ್ತು ಹಳದಿ ಪಿತ್ತ. ಇವುಗಳ ನಡುವೆ ಸಮತೋಲನೆ ಇದ್ದರೆ ಮಾತ್ರ ನಾವು ಆರೋಗ್ಯವಾಗಿರಲು ಸಾಧ್ಯ. ಇಲ್ಲದಿದ್ದರೆ ಅಸಮತೋಲನೆಯ ಸ್ವರೂಪವನ್ನು ಆಧರಿಸಿ, ಅನಾರೋಗ್ಯಗಳು
ಬರುತ್ತವೆ ಎಂದು ತಿಳಿದಿದ್ದರು. ಈ ನಾಲ್ಕು ರಸಗಳಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಇರುವುದು ರಕ್ತ.

ಹಾಗಾಗಿ ಬಹಳಷ್ಟು ಆರೋಗ್ಯ ಏರುಪೇರಿಗೆ ರಕ್ತವೇ ಕಾರಣವೆಂದರು. ಹೆಚ್ಚುವರಿ ರಕ್ತವನ್ನು ಹೊರಹರಿಸುವುದರ ಮೂಲಕ, ಅಸಮತೋಲನವನ್ನು ಸರಿದೂಗಿಸ ಬಹುದೆಂದು ಅವರು ನಂಬಿದ್ದರು. ಹೆಚ್ಚುವರಿ ರಕ್ತವನ್ನು ಹೊರಹರಿಸಲು ಅವರು ಮೂರು ವಿಧಾನಗಳನ್ನು ಬಳಸುತ್ತಿದ್ದರು. ಮೊದಲನೆಯ ರಕ್ತವಿಮೋಚನೆ. ಮುಂದೋಳಿನಲ್ಲಿರುವ ಸಿರೆಯನ್ನು ಛೇದಿಸಿ, ನಿರ್ದಿಷ್ಟ ಪ್ರಮಾಣದ ರಕ್ತವನ್ನು ಹೊರಹರಿಸುವ ವಿಧಾನ. ಎರಡನೆಯದು ಸೀಳು ಕೊಯ್ತ ಮತ್ತು ರಕ್ತಚೂಷಣ. ಕೈ/ಕಾಲು/ಹೊಟ್ಟೆಯ ಮೇಲೆ ಮೇಲ್ ಸ್ತರದಲ್ಲಿ ಲಂಬವಾಗಿ ಕೊಯ್ಯುತ್ತಿದ್ದರು. ಇದರ ಮೇಲೆ ಲೋಹದ ನಿರ್ವಾತ ಬಟ್ಟಲನ್ನು ಬೋರಲು ಹಾಕುತ್ತಿದ್ದರು.

ಸೀಮಿತ ಪ್ರಮಾಣದ ರಕ್ತವು ಬಟ್ಟಲಲ್ಲಿ ಸಂಗ್ರಹವಾಗುತ್ತಿತ್ತು. ಮೂರನೆಯದು ಜಿಗಣೆಗಳನ್ನು ಬಳಸಿ, ಹೆಚ್ಚುವರಿ ರಕ್ತವನ್ನು ಹೊರಹರಿಸುತ್ತಿದ್ದರು. ಈ ಮೂರನೆಯ ವಿಧಾನದ ಇತಿ-ಮಿತಿಗಳತ್ತ ಒಮ್ಮೆ ಪಕ್ಷಿನೋಟವನ್ನು ಹರಿಸೋಣ. ಜೀವಜಗತ್ತಿನಲ್ಲಿ ವಲಯವಂತ ಅಥವ ಅನೆಲಿಡ ಎಂಬ ವಿಭಾಗವಿದೆ. ಉಂಗುರಮಯವಾದ ದೇಹವನ್ನೊಳಗೊಂಡ ಜಲಚರ ಜೀವಿಗಳು. ಇವುಗಳಲ್ಲಿ ಜಿಗಣೆಗಳು ಮುಖ್ಯವಾದವು. ಇವು ನೂರಕ್ಕೆ ನೂರರಷ್ಟು ಇತರ ಜೀವಿಗಳ ರಕ್ತವನ್ನು ಹೀರಿ ಬದುಕುವ ಸಂಪೂರ್ಣ ಪರಾವಲಂಬಿಗಳು. ಇವುಗಳಲ್ಲಿ ಹಿರುಡೋ ಮೆಡಿಸಿನಾಲಿಸ್ ಎಂಬ ಜಿಗಣೆಯು ಯೂರೋಪಿನಲ್ಲಿ ವಾಸಿಸುತ್ತದೆ.

ಹಿರುಡೋ ಓರಿಯೆಂಟಾಲಿಸ್, ಹಿರುಡೋ ಟಾಕ್ಟಿನ, ಹಿರುಡೋ ವರ್ಬಾನ ಇತ್ಯಾದಿಗಳು ಭಾರತವನ್ನು ಒಳಗೊಂಡತೆ ಇತರ ಪೌರ್ವಾತ್ಯ ದೇಶಗಳಲ್ಲಿ ದೊರೆಯುತ್ತವೆ. ಇವುಗಳನ್ನು ವೈದ್ಯಕೀಯ ಜಿಗಣೆಗಳು ಅಥವ ಮೆಡಿಸಿನಲ್ ಲೀಚಸ್ ಎಂದು ಕರೆಯುವುದುಂಟು. ವೈದ್ಯಕೀಯ ಜಿಗಣೆಯು ಸುಮಾರು ೨೦ ಸೆಂ.ಮೀ. ಉದ್ದವಿರುತ್ತದೆ. ಬಣ್ಣ ಹಸಿರು, ಕಂದು ಅಥವ ಹಸಿರು ಮಿಶ್ರಿತ ಕಂದು. ಬೆನ್ನುಭಾಗವು ದಟ್ಟವರ್ಣವನ್ನು ಹೊಂದಿದ್ದು ಹೊಟ್ಟೆಯ ಭಾಗವು ಪೇಲವ ವಾಗಿರುತ್ತದೆ. ಇವುಗಳಲ್ಲಿ ಎರಡು ಹೀರುತಟ್ಟೆಗಳು (ಸಕರ್ಸ್) ಇರುತ್ತವೆ. ದೇಹದ ಮುಂಭಾಗದಲ್ಲಿ ಒಂದು ಹಾಗೂ ಹಿಂಭಾಗದಲ್ಲಿ ಒಂದು.

ಹಿಂಭಾಗದಲ್ಲಿರುವ ಹೀರುತಟ್ಟೆಯು ನಿರ್ವಾತವನ್ನು ಸೃಜಿಸಿ, ಜಿಗಣೆಯು ಲಾಗ ಹಾಕುತ್ತ ಮುಂದೆ ಮುಂದೆ ನಡೆಯಲು ನೆರವಾಗುತ್ತದೆ. ಮುಂಭಾಗದಲ್ಲಿರುವ ಹೀರುತಟ್ಟೆಯು ವಾಸ್ತವದಲ್ಲಿ ನೆತ್ತರುಣಿ. ರಕ್ತವನ್ನು ಕುಡಿಯಲು ನೆರವಾಗುವ ಹೀರುಬಾಯಿಯನ್ನು ಒಳಗೊಂಡ ಭಾಗ. ಇದರ ಬಾಯಿಯಲ್ಲಿ ಮೂರು ದವಡೆಗಳಿವೆ. ಒಂದೊಂದು ದವಡೆಯಲ್ಲಿ ನೂರು ನೂರು ಬ್ಲೇಡಿಗಿಂತಲೂ ಹರಿತವಾದ ಹಲ್ಲುಗಳು. ಇವು ಪ್ರಾಣಿಗಳ ಚರ್ಮವನ್ನು ಕಚ್ಚಿ ಹಿಡಿದಾಗ, ಹಲ್ಲುಗಳ ಗುರುತು ಇಂಗ್ಲಿಷ್ ಅಕ್ಷಯ ವೈಯನ್ನು ಹೋಲುತ್ತದೆ. ಕಚ್ಚಿದ ಕೂಡಲೇ ಹೊರಬರುವ ಜೊಲ್ಲಿನಲ್ಲಿ ಪ್ರಧಾನವಾಗಿ ಎರಡು ರಾಸಾಯನಿಕಗಳು ಸಕ್ರಿಯವಾಗುತ್ತವೆ.

ಮೊದಲನೆಯದು ನೋವನ್ನು ನಿವಾರಿಸಿದರೆ, ಎರಡನೆಯದು ರಕ್ತವು ಹೆಪ್ಪುಗಟ್ಟದಂತೆ ತಡೆಯುತ್ತದೆ. ಜಿಗಣೆಯು ಸರಾಸರಿ ೧೫ ಎಂ.ಎಲ್ ರಕ್ತವನ್ನು ಹೀರುತ್ತದೆ. ಒಂದು ಸಲ ಹೊಟ್ಟೆ ತುಂಬ ರಕ್ತವನ್ನು ಕುಡಿದರೆ, ಸರಿಸುಮಾರು ಒಂದು ವರ್ಷದವರೆಗೆ ಅದಕ್ಕೆ ಹಸಿವಾಗುವುದಿಲ್ಲ ಹಾಗಾಗಿ ಮತ್ತೆ ಆಹಾರವನ್ನು ಸೇವಿಸಲು
ಹೋಗುವುದಿಲ್ಲ. ನಮ್ಮ ಪೂರ್ವಜರು ರಕ್ತವಿಮೋಚನೆಗಾಗಿ ಜಿಗಣೆಗಳನ್ನು ಎಂದು ಬಳಸಲು ಆರಂಭಿಸಿದರೆನ್ನುವುದು ನಮಗೆ ಖಚಿತ ವಾಗಿ ತಿಳಿದುಬಂದಿಲ್ಲ. ಈಜಿಪ್ಷಿಯನ್ ಸಂಸ್ಕೃತಿಯ ೧೮ ವಂಶಸ್ಥ -ರೋವಿನ ಕಾಲಕ್ಕೆ ಸಂಬಂಧಿಸಿದ ವರ್ಣಚಿತ್ರಗಳಲ್ಲಿ ಜಿಗಣೆ ಚಿಕಿತ್ಸೆಯ ಬಗ್ಗೆ ಮಾಹಿತಿಯು ದೊರೆಯುತ್ತದೆ.

ಇದು ಸುಮಾರು ಕ್ರಿ.ಪೂ.೧೫೦೦ ಕಾಲದ್ದು. ಕ್ರಿ.ಪೂ.ಎರಡನೆಯ ಶತಮಾನದಲ್ಲಿ ಗ್ರೀಕ್ ದೇಶದ ಕೋಲೋ-ನ್‌ನಲ್ಲಿದ್ದ ನಿಕ್ಯಾಂಡರ್ ಎಂಬ ಗ್ರೀಕ್ ಕವಿ, ವೈದ್ಯ ಮತ್ತು ವೈಯ್ಯಾಕರಣಿಯಿದ್ದ. ಇವನು ಜಲೂಕಚಿಕಿತ್ಸೆಯ ಬಗ್ಗೆ ತನ್ನ ಕವನಗಳಲ್ಲಿ ಪ್ರಸ್ತಾಪಿಸಿದ್ದಾನೆ. ಆಯುರ್ವೇದವು ಜಲೂಕಾವಚರಣ ಎನ್ನುವ ಜಿಗಣೆ
ಚಿಕಿತ್ಸೆಯನ್ನು ಪ್ರಸ್ತಾಪಿಸುತ್ತದೆ. ನಮ್ಮ ಶರೀರದಲ್ಲಿರುವ ರಕ್ತವನ್ನು ರಕ್ತಮೋಕ್ಷಣದ ಮೂಲಕ ಶುದ್ಧೀಕರಿಸಬೇಕಾಗುತ್ತದೆ ಎನ್ನುವುದು ಆಯುರ್ವೇದದ ನಿಲುವು. ಈ ಜಿಗಣೆ ಚಿಕಿತ್ಸೆಯಲ್ಲಿ ವಿಷರಹಿತವಾದ (ನಿರ್ವಿಷ ಜಲೂಕ) ಆರು ನಮೂನೆಯ ಜಿಗಣೆಗಳನ್ನು ಬಳಸಬಹುದು ಎನ್ನುತ್ತದೆ.

ಗ್ರೀಕ್ ವೈದ್ಯರು ಕೀಲುವಾತಕಿ, ರುಮಟಾಯ್ಡ್ ಆರ್ಥ್ರೈಟಿಸ್, ಎಲ್ಲ ರೀತಿಯ ಜ್ವರ ಮತ್ತು ಕಿವುಡುತನವನ್ನು ನಿವಾರಿಸಲು ಜಿಗಣೆ ಚಿಕಿತ್ಸೆಯನ್ನು ನೀಡಲಾರಂಭಿಸಿ ದರು. ರೋಮನ್ ವೈದ್ಯ ಗ್ಯಾಲನ್ (೧೩೦-೨೦೧) ಹಿಪ್ಪೋಕ್ರೇಟ್ಸ್ ಮಂಡಿಸಿದ ರಸವಾದ ಸಿದ್ಧಾಂತವನ್ನು ಬಲವಾಗಿ ಪ್ರತಿಪಾದಿಸುತ್ತಿದ್ದ. ಹಾಗಾಗಿ ಅವನು ಸಣ್ಣ ಜ್ವರದಿಂದ ಹಿಡಿದು ಮನೋರೋಗದವರೆಗೆ, ಎಲ್ಲ ರೀತಿಯ ರೋಗನಿವಾರಣೆಗೆ ಜಿಗಣೆಚಿಕಿತ್ಸೆಯನ್ನು ಸೂಚಿಸುತ್ತಿದ್ದ. ಲಾವೋಡೀಸಿನ ಥೆಮಿಸನ್, ಓರ್ವ ಸಿರಿಯನ್ ವೈದ್ಯ, ಜಿಗಣೆಚಿಕಿತ್ಸೆಯು ಏರುಪೇರಾದ ರಸಗಳನ್ನು ಸಮತೋಲನಕ್ಕೆ ತರುವುದರ ಜೊತೆಯಲ್ಲಿ ದೇಹದಲ್ಲಿ ಮನೆಮಾಡಿರುವ ದುಷ್ಟಶಕ್ತಿಗಳನ್ನೂ ಹೊರಹಾಕುತ್ತದೆ ಎಂದ. ಇಸ್ಲಾಮ್ ದೇಶಗಳಲ್ಲೂ ಜಿಗಣೆ ಚಿಕಿತ್ಸೆಯು ಸ್ಥಾನವನ್ನು ಪಡೆಯಿತು.

ಅವಿಸೆನ್ನ (೯೮೦-೧೦೩೭) ತನ್ನ ಕ್ಯಾನನ್ ಆಫ್ ಮೆಡಿಸಿನ್ ಗ್ರಂಥದಲ್ಲಿ ಸೀಳುಕೊಯ್ತ ಮತ್ತು ಚೂಷಣದ ಮೂಲಕ ಹೊರಹಾಕಲಾಗದ ರಕ್ತವನ್ನು ಜಿಗಣೆಗಳ ಮೂಲಕ ಸರಳವಾಗಿ ಹೊರಹಾಕಬಹುದೆಂದು ದಾಖಲಿಸಿದ. ಜಿಗಣೆ ಚಿಕಿತ್ಸೆಯನ್ನು ವಿಶೇಷವಾಗಿ ಚರ್ಮರೋಗಗಳನ್ನು ಗುಣಪಡಿಸಲು ಬಳಸಬಹುದೆಂದ. ಅಬ್ದ್ ಎಲ್ ಲತೀಫ್ ಅಲ್ ಬಗ್ದಾದಿ (೧೧೬೨-೧೨೩೧) ಶಸಚಿಕಿತ್ಸೆಗಳನ್ನು ನಡೆಸಿದ ನಂತರ, ಗಾಯವು ಪೂರ್ಣಪ್ರಮಾಣದಲ್ಲಿ ಗುಣವಾಗಲು ಜಿಗಣೆಗಳನ್ನು ಬಳಸಬಹುದೆಂದು ಹೇಳಿದ. ನಂತರ ಇಬ್ನ್ ಮಸೀಹಿ (೧೨೩೩-೧೨೮೬) ತನ್ನ ಉಮ್ದ ಫಿ ಜರಾಹತ್ ಪುಸ್ತಕದಲ್ಲಿ ಜಿಗಣೆಗಳ ವರ್ಗೀಕರಣವನ್ನು ಸೂಚಿಸಿದ.
ಜಿಗಣೆಗಳ ಬಣ್ಣ ಮತ್ತು ಬಾಹ್ಯಾ ಲಕ್ಷಣಗಳನ್ನು ಆಧರಿಸಿ, ವಿಷ ಸಹಿತ ಮತ್ತು ವಿಷ ರಹಿತ ಜಿಗಣೆಗಳನ್ನು ಗುರುತಿಸುವ ಬಗ್ಗೆ ಮಾಹಿತಿಯನ್ನು ನೀಡಿದ.

ಮಧ್ಯಯುಗದ ಯೂರೋಪಿನಲ್ಲಿ ವೈದ್ಯರು ನರಮಂಡಲದ ರೋಗಗಳು, ಜನನಾಂಗದ ರೋಗಗಳು, ಜಠರ ಮತ್ತು ಕರುಳು ರೋಗಗಳು, ಕಣ್ಣಿನ ರೋಗಗಳು –
ಹೀಗೆ ಕಂಡ ಕಂಡ ರೋಗಗಳಿಗೆಲ್ಲ ಜಿಗಣೆ ಚಿಕಿತ್ಸೆಯನ್ನು ನೀಡಲಾರಂಭಿಸಿದರು. ಜಿಗಣೆ ಚಿಕಿತ್ಸೆಯು ಹೆಚ್ಚು ಜನಪ್ರಿಯವಾಗಲು ಕಾರಣಗಳು ಇವೆ. ರಕ್ತವಿಮೋಚನ
ಅಥವ ಸೀಳುಕೊಯ್ತ-ರಕ್ತಚೂಷಣಗಳು ಸಾಕಷ್ಟು ನೋವನ್ನು ಕೊಡುತ್ತವೆ. ಜಿಗಣೆ ಚಿಕಿತ್ಸೆಯಲ್ಲಿ ನೋವೇ ಇರುವುದಿಲ್ಲ. ಏಕೆಂದರೆ ಜಿಗಣೆಯ ಜೊಲ್ಲಿನಲ್ಲಿರುವ
ನೋವು ನಿವಾರಕವಿರುತ್ತದೆ. ಮೊಳೆರೋಗ, ಯೋನಿ ಉರಿಯೂತ ಮುಂದಾದ ಅಂಗಗಳ ರೋಗಗಳನ್ನು ಗುಣಪಡಿಸಲು, ಆ ಅಂಗಗಳಿಗೆ ಜಿಗಣೆಗಳನ್ನು ಕಚ್ಚಿಸುವುದು ಸುಲುಭ. ಮುಖ್ಯವಾದ ಜಿಗಣೆ ಚಿಕಿತ್ಸೆಯಲ್ಲಿ ವಿಪರೀತ ರಕ್ತಸ್ರಾವವಿರುವುದಿಲ್ಲ ಹಾಗಾಗಿ ಜೀವಕ್ಕೆ ಯಾವುದೇ ಅಪಾಯವು ಇರಲಿಲ್ಲ. ಹಾಗಾಗಿ ಯೂರೋಪಿನಾದ್ಯಂತ ಜಿಗಣೆಗಳ ಬೇಡಿಗೆ ತೀವ್ರವಾಯಿತು. ವೈದ್ಯರಿಗೆ ಜಿಗಣೆಗಳನ್ನು ಒದಗಿಸುವ ಉದ್ಯಮವು ತೀವ್ರಸ್ವರೂಪದಲ್ಲಿ ಬೆಳೆಯಿತು. ಪ್ಯಾರಿಸ್ ದೇಶದ -ಂಸ್ವ ಬ್ರೌಸಿಯ (೧೭೭೨-೧೮೩೮) ಜಿಗಣೆ ಚಿಕಿತ್ಸೆಯನ್ನು ಜನಪ್ರಿಯಗೊಳಿಸಿದ.

ಫ್ರಾನ್ಸ್ ದೇಶವೊಂದರಲ್ಲಿಯೇ ವೈದ್ಯರು ವರ್ಷಕ್ಕೆ ಸರಿಸುಮಾರು ೩೫ ದಶಲಕ್ಷ ಜಿಗಣೆಗಳನ್ನು ಚಿಕಿತ್ಸೆಯಲ್ಲಿ ಬಳಸಲಾರಂಭಿಸಿದರು. ಇದರೊಡನೆ ಪ್ರಕೃತಿಯಲ್ಲಿ ಜಿಗಣೆಗಳ ಸಂಖ್ಯೆ ತೀವ್ರವಾಗಿ ಇಳಿದು, ಪ್ರಾಕೃತಿಕ ಅಸಮತೋಲನವು ಕಂಡುಬಂದಿತು. ಯೂರೋಪಿಯನ್ ಮತ್ತು ಅಮೆರಿಕನ್ ಉದ್ಯಮಿಗಳನ್ನು ಜಿಗಣೆಗಳ ಫಾರಂ ಸ್ಥಾಪಿಸಿದರು ಹಾಗೂ ಜಿಗಣೆಗಳ ಶೀಘ್ರ ಸಂತಾನವರ್ಧನಾ ಮಾರ್ಗಗಳನ್ನು ಸೂಚಿಸಿದವರಿಗೆ ವಿಶೇಷ ಬಹುಮಾನಗಳನ್ನು ಘೋಷಿಸಿದರು.

೧೯ನೆಯ ಶತಮಾನದ ಹೊತ್ತಿಗೆ ಆಧುನಿಕ ವೈದ್ಯಕೀಯ ವಿಜ್ಞಾನದಲ್ಲಿ ಮಹತ್ತರ ಸಂಶೋಧನೆಗಳು ನಡೆದಿದ್ದವು. ಅದೃಶ್ಯ ಲೋಕಚ ಅಗೋಚರ ಜೀವಿಗಳಾದ
ಬ್ಯಾಕ್ಟೀರಿಯಗಳು, ಶಿಲೀಂಧ್ರಗಳ ಅನ್ವೇಷಣೆಯಾಗಿತ್ತು. ಪ್ರತಿಜೈವಿಕ ಔಷಧಗಳು, ಅರಿವಳಿಕೆ, ಕ್ರಿಮಿಶುದ್ಧತೆಯ ಪರಿಕಲ್ಪನೆಗಳು ಮುನ್ನೆಲೆಗೆ ಬಂದ ಕಾರಣ, ಹಿಪ್ಪೋಕ್ರೇಟ್ಸ್ ಮಂಡಿಸಿದ ರಸ ಸಿದ್ಧಾಂತ ಹಾಗೂ ಅವಗಳನ್ನು ಸರಿಪಡಿಸುವ ಜಿಗಣೆ ಚಿಕಿತ್ಸೆಗಳು ಹಿಂದೆ ಬಿದ್ದವು. ಬಹುಪಾಲು ನಿಂತೇ ಹೋದವು ಎನ್ನಬೇಕು. ಅಪಸ್ಮಾರ (ಎಪಿಲೆಪ್ಸಿ) ಚಿಕಿತ್ಸೆಯಲ್ಲಿ ಮಾತ್ರ ಜಿಗಣೆಗಳ ಬಳಕೆ ಮುಂದುವರೆದವು. ಅಪಸ್ಮಾರ ಏಕೆ ಬರುತ್ತದೆ ಎನ್ನುವ ಪರಿಕಲ್ಪನೆಯು ಇಲ್ಲದ ದಿನಗಳಲ್ಲಿ
ತಲೆಯಲ್ಲಿ, ಮಿದುಳಿನಲ್ಲಿ ರಕ್ತವು ವಿಪರೀತವಾಗಿ ಸಂಚಯವಾದಾಗ ಅಪಸ್ಮಾರ ಬರುತ್ತದೆ ಎಂದು ನಂಬಿದ್ದರು.

ರೋಗಿಗಳ ತಲೆಗೆ ಜಿಗಣೆಗಳನ್ನು ಕಚ್ಚಿಸಿ, ಹೆಚ್ಚುವರಿ ರಕ್ತವನ್ನು ಹೀರುತ್ತಿದ್ದರು. ಇದರ ಜೊತೆಗೆ ಬರೆ ಚಿಕಿತ್ಸೆ ಹಾಗೂ ವಿಶೇಷ ಅಭ್ಯಂಗನಗಳನ್ನು ಮುಂದುವರೆಸಿ ದರು. ಆದರೆ ಉಳಿದ ರೋಗಗಳ ಚಿಕಿತ್ಸೆಯನ್ನು ಜಿಗಣೆಗಳ ಬಳಕೆ ಪೂರ್ಣ ನಿಂತುಹೋಯಿತು. ಜಾನ್ ಬೆರ್ರಿ ಹೇಕ್ರಾ- (೧೮೫೭-೧೯೨೨) ಎಂಬ ಬ್ರಿಟಿಷ್
ವೈದ್ಯನು ಜಿಗಣೆಯ ಜೊಲ್ಲಿನಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ಪ್ರತಿರೋಧಿಸುವ ಒಂದು ರಾಸಾಯನಿಕವಿರುವುದನ್ನು ಗಮನಿಸಿದ. ಅದಕ್ಕೆ ಹಿರುಡಿನ್ ಎಂದು ನಾಮಕರಣವನ್ನು ಮಾಡಿದ. ಈ ಸಂಶೋಧನೆಯೊಡನೆ ವೈದ್ಯಕೀಯ ಲೋಕದಲ್ಲಿ ಜಿಗಣೆಗಳು ಮತ್ತೊಮ್ಮೆ ಸ್ಥಾನವನ್ನು ಗಳಿಸಿದವು.

ಹಿರುಡಿನ್ ಬಗ್ಗೆ ಮತ್ತಷ್ಟು ಸಂಶೋಧನೆಗಳು ನಡೆದವು. ಹಿರುಡಿನ್ ರಕ್ತ ಹೆಪ್ಪುಗಟ್ಟುವ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರವಹಿಸುವ ಥ್ರಾಂಬಿನ್‌ನನ್ನು ನಾಶ ಗೊಳಿಸುತ್ತದೆ ಎನ್ನುವ ವಿಚಾರವು ತಿಳಿದುಬಂದಿತು. ಹಿರುಡಿನ್ ರಾಸಾಯನಿಕವನ್ನು ಪ್ರತ್ಯೇಕಿಸಿ, ಶುದ್ಧೀಕರಿಸಿದರು. ಹೃದಯಾಘಾತವಾದ ಹೃದಯದ ಮಕುಟಧಮನಿಯನ್ನು ಅಡಚಿರುವ ರಕ್ತಗರಣೆಯನ್ನು ಕರಗಿಸಲು ಹಿರುಡಿನ್‌ನನ್ನು ಬಳಸಬಹುದು ಎನ್ನುವ ವಿಚಾರವು ವಿಜ್ಞಾನಿಗಳಲ್ಲಿ ರೋಮಾಂಚನವನ್ನು ಉಂಟು ಮಾಡಿತು. ರಕ್ತಹೆಪ್ಪುಗಟ್ಟುವುದನ್ನು ನಿಗ್ರಹಿಸುವ ಹೆಪಾರಿನ್ ಎನ್ನುವ ಔಷಧವು ಮಾರುಕಟ್ಟೆಯಲ್ಲಿತ್ತು. ಆದರೂ ಹಿರುಡಿನ್ ಅದಕ್ಕಿಂತಲೂ ಶ್ರೇಷ್ಠವೆಂದು ಎನ್ನುವುದು ಸಾಬೀತಾಯಿತು.

ಅನಾರೋಗ್ಯವು ಉಂಟಾದ ಮೇಲೆ ಹೆಪಾರಿನ್‌ನನ್ನು ಬಳಸಬೇಕಾಗಿತ್ತು. ಮುಂಚಿತವಾಗಿ, ಮುನ್‌ರಕ್ಷಣಾ ಔಷಧವನ್ನಾಗಿ ಬಳಸುವುದು ಕಷ್ಟವಿತ್ತು. ಡಿವಿಟಿ, ಪಲ್ಮನರಿ ಎಂಬೋಲಿಸಂ, ವೀನಸ್ ಥ್ರಾಂಬೋಸಿಸ್ ಮುಂತಾದ ಅನಾರೋಗ್ಯಗಳಲ್ಲಿ ರಕ್ತವು ಹೆಪ್ಪುಗಟ್ಟಿ ಅನಾಹುತವನ್ನು ಮಾಡುವ ಸಾಧ್ಯತೆಯು ಹೆಚ್ಚಿರುತ್ತದೆ. ಅಂತಹ ಸಾಧ್ಯತೆಯನ್ನು ಹಿರುಡಿನ್ ನೀಡುವುದರ ಮೂಲಕ ನಿಗ್ರಹಿಸುವುದು ಸುಲುಭವಾಗಿದೆ. ಮೈಕ್ರೋಸರ್ಜರಿ ಈಗ ಅಸ್ತಿತ್ವದಲ್ಲಿದೆ. ಉದಾಹರಣೆಗೆ
ಒಬ್ಬರ ಶಿಶ್ನವು ಯಾವುದೇ ಕಾರಣದಿಂದ ತುಂಡರಿಸಿಹೋಗಿದ್ದರೆ/ಛೇದಿಸಿದ್ದರೆ, ಅವರಿಗೆ ಮತ್ತೊಂದು ಶಿಶ್ನವನ್ನು ಬದಲಿ ಜೋಡಿಸಲು ಸಾಧ್ಯವಿದೆ. ಹಾಗೆ
ಮರುಜೋಡಿಸಬೇಕಾದರೆ, ಎರಡೂ ಭಾಗಗಳಲ್ಲಿರುವ ಸೂಕ್ಷ್ಮಾತಿಸೂಕ್ಷ್ಮ ಧಮನಿಗಳನ್ನು ಹಾಗೂ ಸಿರೆಗಳನ್ನು ಹುಡುಕಿ ಅವನ್ನು ಹೊಲಿಯಬೇಕಾಗುತ್ತದೆ. ಇದನ್ನು ಅತ್ಯಂತ ಸೂಕ್ಷ್ಮ ಉಪಕರಣಗಳನ್ನು ಬಳಸಿ, ಸೂಕ್ಷ್ಮದರ್ಶಕದಡಿಯಲ್ಲಿ ಶಸ್ತ್ರ ಚಿಕಿತ್ಸೆಯನ್ನು ಮಾಡಬೇಕಾಗುತ್ತದೆ. ಹೀಗೆ ಜೋಡಿಸಿದ ಮೇಲೆ ಧಮನಿಗಳಲ್ಲಿ ಹಾಗೂ ಸಿರೆಗಳನ್ನು ರಕ್ತ ಹೆಪ್ಪುಗಟ್ಟುತ್ತದೆ. ರಕ್ತಹೆಪ್ಪುಗಟ್ಟಿ ರಕ್ತಸಂಚಾರವು ನಿಂತರೆ ಬದಲಿ ಜೋಡಿಸಿದ ಅಂಗವು ಸಾಯುತ್ತದೆ. ಇದನ್ನು ತಪ್ಪಿಸಲು ಜಿಗಣೆಗಳನ್ನು ಬಳಸುವುದುಂಟು. ಜಿಗಣೆಯನ್ನು ಬದಲಿ ಜೋಡಿಸಿದ ತುಂಡಿಗೆ ಕಚ್ಚಿಸಿದರೆ, ಅದು ರಕ್ತವನ್ನು ಹೀರುತ್ತದೆ. ಆಗ ರಕ್ತವು ಧಮನಿ ಮತ್ತು ಸಿರೆಗಳ ಮೂಲಕ ಮುಕ್ತವಾಗಿ ಹರಿಯಲಾರಂಭಿಸುತ್ತದೆ.

ಹೀಗೆ ಸುಮಾರು ೭-೮ ದಿನಗಳವರೆಗೆ ಜಿಗಣೆಗಳನ್ನು ಕಚ್ಚಿಸಿದರೆ, ಬದಲಿಜೋಡಣೆಯ ಶಸಚಿಕಿತ್ಸೆಯು ಯಶಸ್ವಿಯಾಗುತ್ತದೆ. ಹಾಗಾಗಿ ಸುರೂಪಿಕ ಶಸ್ತ್ರಚಿಕಿತ್ಸೆ ಅಥವ ಪ್ಲಾಸ್ಟಿಕ್ ಸರ್ಜರಿಯಲ್ಲಿ ಜಿಗಣೆಗಳನ್ನು ಹೆಚ್ಚು ಬಳಸುವುದುಂಟು. ಬೆರಳು ತುಂಡಾದಾಗ, ಮೂಗು ತುಂಡಾದಾಗ, ಕಿವಿ ಕತ್ತರಿಸಿಹೋದಾಗ, ನೆತ್ತಿಯ ಚರ್ಮ+ಸ್ನಾಯುವನ್ನು ಬದಲಿ ಜೋಡಿಸುವಾಗ ಇಲ್ಲವೇ ಇಡೀ ಮುಖವನ್ನೇ ಬದಲಿ ಜೋಡಿಸಿದಾಗ ಅಥವ ಇನ್ಯಾವುದೇ ರೀತಿಯ ಸುರೂಪಿಕಾ ಶಸ್ತ್ರಚಿಕಿತ್ಸೆಗಳಲ್ಲಿ ಜಿಗಣೆಗಳಿಗೆ ಒಂದು ಸ್ಥಾನವಿದೆ. ಜಿಗಣೆಯ ಜೊಲ್ಲಿನಿಂದ ತಯಾರಾದ ಹಿರುಡಿನ್, ಕ್ಯಾಲಿನ್, ಡಿಸ್ಟಬಿಲೇಸ್, ಹಯಾಲ್ಯುರೋಡಿನೇಸ್, ಡೆಲ್ಲಿನ್ಸ್, ಎಗ್ಲಿನ್ಸ್, ಅನೆಸ್ಥೆಟಿಕ್ ಕಾಂಪೌಂಡ್ಸ್, ಕಾರ್ಬಾಕ್ಸಿ ಪೆಪ್ಟಿಡೇಸ್ ಇನ್ ಹಿಬಿಟಾರ್-೨, ಆಂಟಿ-ಎಲಾಸ್ಟೇಸ್, ಹಿಸ್ಟಮಿನ್ ಲೈಕ್ ಸಬ್ ಸ್ಟನ್ಸ್ ಮುಂತಾದ ರಾಸಾಯನಿಕಗಳನ್ನು ಮೈಕ್ರೋಸರ್ಜರಿ ಹಾಗೂ ಪ್ಲಾಸ್ಟಿಕ್ ಸರ್ಜರಿಗಳನ್ನು ಯಶಸ್ವಿಗೊಳಿಸಲು ಪ್ರಧಾನವಾಗಿ ಕಾರಣವಾಗಿವೆ.