Saturday, 7th September 2024

ಕಲ್ಲೋಲ ನಾಟಕವನ್ನು ನಿಷೇಧಿಸಿದ್ದು ಯಾರು ಮತ್ತು ಏಕೆ ?

ಶಶಾಂಕಣ

shashidhara.halady@gmail.com

ಉತ್ಪಲ್ ದತ್ ಹೆಸರನ್ನು ನೀವು ಕೇಳಿರಬೇಕು; ಬಂಗಾಳಿ ರಂಗಭೂಮಿಯ ಪ್ರಸಿದ್ಧ ನಟ, ಸಾಹಿತಿ, ಚಲನಚಿತ್ರ ನಟ, ನಿರ್ದೇಶಕರಾಗಿ ಹೆಸರು ಮಾಡಿದ ಉತ್ಪಲ್ ದತ್, 1970ರಷ್ಟು ಮುಂಚೆಯೇ ರಾಷ್ಟ್ರ ಮಟ್ಟದ ಉತ್ತಮ ನಟ ಪ್ರಶಸ್ತಿಗೆ ಭಾಜನರಾಗಿದ್ದರು. 1993ರಲ್ಲಿ ನಿಧನರಾಗುವ ಮುಂಚೆ, ಅವರನ್ನು ಇನ್ನಷ್ಟು ಪ್ರಶಸ್ತಿಗಳು ಅರಸಿಕೊಂಡು ಬಂದವು. ಸಂಗೀತ ನಾಟಕ ಅಕಾಡೆಮಿ ಫೆಲೋಶಿಪ್‌ಗೂ ಭಾಜನರಾಗಿದ್ದರು.

ಮಾರ್ಕ್ಸಿಸ್ಟ್ ಚಿಂತನೆಗಳಿಂದ ಪ್ರಭಾವಿತರಾಗಿದ್ದ, ಖ್ಯಾತ ನಟ ಉತ್ಪಲ್ ದತ್‌ರು 1965ರಲ್ಲಿ ಬಂಧನಕ್ಕೆ ಒಳಗಾದ ಕಥೆ ಮಾತ್ರ ಬಹಳ ವಿಚಿತ್ರ, ವಿಕ್ಷಿಪ್ತ ಮತ್ತು ನಮ್ಮ ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದಂತಹ ಒಂದು ಪ್ರಸಿದ್ಧ ವಿದ್ಯಮಾನ. ಆದದ್ದಿಷ್ಟೆ; 1965ರಲ್ಲಿ ‘ಕಲ್ಲೋಲ್’ (ಕಲ್ಲೋಲ) ಎಂಬ ಬಂಗಾಲಿ ನಾಟಕವನ್ನು ಉತ್ಪಲ್ ದತ್ತರು ಬರೆದು, ಕೊಲ್ಕೋತ್ತಾದ ಮಿನರ್ವಾ ಥಿಯೇಟರ್‌ನಲ್ಲಿ ಪ್ರದರ್ಶಿಸಿದರು.

ಬ್ರಿಟಿಷರ ವಿರುದ್ಧ ಭಾರತೀಯರು ನಡೆಸಿದ ಸಶಸ್ತ್ರ ಹೋರಾಟದ ಅಭೂತಪೂರ್ವ ಘಟನೆಯ ವಿವರಗಳನ್ನು ಒಳಗೊಂಡ ಆ ನಾಟಕವು, ರೋಚಕ ವಾಗಿತ್ತು, ಕೊಲ್ಕೊತ್ತಾದ ಸಾವಿರಾರು ಜನರನ್ನು ನಾಟಕ ಮಂದಿರಕ್ಕೆ ಕರೆತಂದಿತು. ಆದರೇನು ಮಾಡುವುದು? ಆ ನಾಟಕವು ಕಂಡು, ಅಂದಿನ ಪಶ್ಚಿಮ ಬಂಗಾಳದ ಆಡಳಿತ ಅರಕಾರ ಬಹಳ ಕೋಪಗೊಂಡಿತು! ನೆನಪಿಡಿ, ಇದು 1965ರಲ್ಲಿ, ಅಂದರೆ, ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತು ೧೮ ವರ್ಷಗಳ ನಂತರ! ಆಡಳಿತ ಹಿಡಿದವರು ಕೋಪಗೊಂಡರೆ, ಕಲಾವಿದರಿಗೆ ಉಳಿಗಾಲವುಂಟೆ!

ತಕ್ಷಣ ‘ಕಲ್ಲೋಲ’ ನಾಟಕವನ್ನು ನಿಷೇಽಸಲಾಯಿತು; ಅದನ್ನು ಬರೆದು, ನಿರ್ದೇಶಿಸಿದ ಉತ್ಪಲ್ ದತ್ ಅವರನ್ನು ಬಂಧನಕ್ಕೆ ಒಳಪಡಿಸಲಾಯಿತು! ಹಲವು ತಿಂಗಳುಗಳ ಕಾಲ ಸೆರೆಮನೆಯಲ್ಲಿದ್ದು, ಉತ್ಪಲ್ ದತ್ ಅವರು ಹೊರಬಂದು ಹಲವು ನಾಟಕಗಳನ್ನು ಮಾಡಿದರು, ಸಿನೆಮಾಗಳನ್ನು ಮಾಡಿದರು, ಪ್ರಶಸ್ತಿಗಳನ್ನು ಪಡೆದರು. ಅದು ಬೇರೆ ಮಾತು. ‘ಕಲ್ಲೋಲ’ ನಾಟಕವನ್ನು ಪಶ್ಚಿಮ ಬಂಗಾಲ ಸರಕಾರವು ನಿಷೇಧಕ್ಕೆ ಒಳಪಡಿಸಿದ್ದಾದರೂ ಏಕೆ? ಅಂದು ಅಧಿಕಾರದಲ್ಲಿ ದ್ದುದು ಯಾರು ಗೊತ್ತಾ? ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್, ದೆಹಲಿಯಲ್ಲೂ ಕಾಂಗ್ರೆಸ್! ಇಂದು ಸಾಕಷ್ಟು ಪ್ರಚಲಿತ ದಲ್ಲಿರುವ ‘ಡಬಲ್ ಎಂಜಿನ್’ ಸರಕಾರ!

ಅಂದು ಅಲ್ಲಿ ಮುಖ್ಯಮಂತ್ರಿಯಾಗಿದ್ದವರು ಪ್ರಫುಲ್ಲ ಚಂದ್ರ ಸೇನ್. ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ ಎಂದೇ ಪ್ರಸಿದ್ಧಿ ಪಡೆದಿರುವ
ಕಾಂಗ್ರೆಸ್ ಸರಕಾರವು ‘ಕಲ್ಲೋಲ’ ನಾಟಕವನ್ನು ನಿಷೇಧಿಸಲು ಮತ್ತು ಆ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲು, ಮುಖ್ಯ ಎನಿಸುವ ಯಾವ ಕಾರಣವಿತ್ತು? ಉತ್ತರ ಸರಳ; 1946ರಲ್ಲಿ ಬ್ರಿಟಿಷರ ವಿರುದ್ಧ ನೌಕಾ ಸೈನಿಕರು ನಡೆಸಿದ ಹೋರಾಟ, ಬಂಡಾಯ ಮತ್ತು ಅದಕ್ಕೆ ಸ್ಪಂದಿಸಿ, ಒಂದು ದಿನದ ಮುಷ್ಕರದಲ್ಲಿ ಭಾಗವಹಿಸಿದ ಮುಂಬಯಿಯ ನಾಗರಿಕರು, ಇವೇ ಮೊದಲಾದ ವಿಚಾರಗಳನ್ನು ‘ಕಲ್ಲೋಲ’ ನಾಟಕ ಹೊಂದಿತ್ತು. ಇಂದು ನಮಗೆ ಅಚ್ಚರಿ ಎನಿಸಬಹುದು, ಬ್ರಿಟಿಷರ ವಿರುದ್ಧ ನಮ್ಮ ದೇಶದವರು ನಡೆಸಿದ ಹೋರಾಟದ ಈ ಕಥನವನ್ನು 1965ರಲ್ಲಿ ಕಾಂಗ್ರೆಸ್ ಸರಕಾರ ‘ಬ್ಯಾನ್’ ಮಾಡಿತು! ಏಕೆ? ಅಂಥದ್ದೇನಿತ್ತು ಅದರಲ್ಲಿ? ಈಚಿನ ಕೆಲವು ವರ್ಷಗಳಲ್ಲಿ ‘ರಾಯಲ್ ಇಂಡಿಯನ್ ನೇವಿ ಮ್ಯುಟಿನಿ’ ಅಥವಾ ನೌಕಾ ಸೇನೆಯ ದಂಗೆಯ ಕುರಿತು ಅಲ್ಲಲ್ಲಿ ಚರ್ಚೆಯಾಗುತ್ತಿದೆ; ಅದಕ್ಕೂ ಮುಂಚೆ ಈ ಕುರಿತು ಮಾತನಾಡುವುದು, ಚರ್ಚಿಸುವುದು ಅಷ್ಟೊಂದು ಸುಲಭ ವಿರಲಿಲ್ಲ; ಏಕೆಂದರೆ, ಅಂತರ್ಜಾಲದಲ್ಲಿ ಮಾಹಿತಿ ದೊರೆಯುವ ಮುಂಚೆ, ಈ ದಂಗೆಯ ಕುರಿತಾದ ವಿವರಗಳು ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ವಿಪುರಲವಾಗಿ ಲಭ್ಯವಿರಲಿಲ್ಲ.

ಬ್ರಿಟಿಷರಂತಹ ಬ್ರಿಟಿಷರನ್ನೇ ನಡುಗಿಸಿದ ಈ ಒಂದು ಪ್ರಮುಖ, ಮುಖ್ಯ, ದೊಡ್ಡ ದಂಗೆಯ ಕುರಿತು ನಮ್ಮ ಪಠ್ಯ ಪುಸ್ತಕಗಳಲ್ಲಿ ವ್ಯಾಪಕವಾಗಿ ಅಳವಡಿಸಿರಲಿಲ್ಲ, ನಮ್ಮ ವಿದ್ಯಾರ್ಥಿಗಳಿಗೆ ಇಂತಹ ಪ್ರಮುಖ ವಿದ್ಯಮಾನವನ್ನು ನಾವು ಬೋಧಿಸಲಿಲ್ಲ. ಇನ್ನೂ ಕಟುವಾಗಿ ಹೇಳಬೇಕೆಂದರೆ, ಬ್ರಿಟಿಷರ ವಿರುದ್ಧ ಸುಮಾರು 20000 ಸೈನಿಕರು ಮತ್ತು ಲಕ್ಷಕ್ಕೂ ಅಧಿಕ ನಾಗರಿಕರು ಹೋರಾಡಿದ ಆ ವಿದ್ಯಮಾನವನ್ನು ವಿದ್ಯಾರ್ಥಿಗಳಿಗೆ ತಿಳಿಸುವಲ್ಲಿ ನಾವು ತೀವ್ರವಾಗಿ ವಿಫಲವಾದೆವು. ಇಂತಹ ವಿಫಲತೆಯು, ಅಜ್ಞಾನದಿಂದಲೋ, ಉದ್ದೇಶಪೂರ್ವಕವೋ ಓದುಗರೇ ನಿರ್ಧರಿಸಬೇಕು; ಬಂಗಾಳದಲ್ಲಿ ‘ಕಲ್ಲೋಲ’ ನಾಟಕವನ್ನು ನಿಷೇಧಿಸಿದ್ದನ್ನು ಕಂಡರೆ, ಈ ಅಭೂತಪೂರ್ವ ಹೋರಾಟದ ವಿವರಗಳನ್ನು ಬೇಕೆಂದೇ ಪಠ್ಯಪುಸ್ತಕಗಳಲ್ಲಿ
ಅಳವಡಿಸಲಾಗಿಲ್ಲ ಎಂದು ತರ್ಕಿಸಬಹುದು.

1946ರ ಈ ಹೋರಾಟದ ನಂತರವಷ್ಟೇ, ಬ್ರಿಟಿಷರು ಭಾರತವನ್ನು ತೊರೆಯಲು ಗಂಭೀರವಾಗಿ ಯೋಚಿಸಿದರು ಎಂದು ಹಲವು ಇತಿಹಾಸಕಾರರು ಅಭಿಪ್ರಾಯಪಟ್ಟಿದ್ದಾರೆ. ನಾವು ಜಲಿಯನ್ ವಾಲಾ ಬಾಗ್ ದುರಂತವನ್ನು ನೆನಪಿಸಿಕೊಂಡು ಬಹುವಾಗಿ ಮರುಗುತ್ತೇವೆ; ೧೩ ಎಪ್ರಿಲ್ 1919
ರಂದು, ಉತ್ತರ ಭಾರತದವರು ಬೈಶಾಕಿ ಹಬ್ಬವನ್ನು ಆಚರಿಸುತ್ತಿದ್ದ ದಿನದಂದು, ದಕ್ಷಿಣ ಭಾರತದವರು ವಿಷು, ಸೌರಮಾನ ಯುಗಾದಿಯನ್ನು ಆಚರಿಸುತ್ತಿದ್ದ ದಿನದಂದು, ಶಸ ರಹಿತ ಜನರ ಮೇಲೆ ಬ್ರಿಟಿಷ್ ಅಧಿಕಾರಿ ಡಯರ್ ಗುಂಡು ಹಾರಿಸಿ, ಸುಮಾರು 400 ಕ್ಕೂ ಅಧಿಕ ಜನರನ್ನು ಸಾಯಿಸಿದ್ದ.

ಜಲಿಯನ್ ವಾಲಾ ಭಾಗ್ ದುರಂತವನ್ನು ನೆನಪಿಸಬಲ್ಲ, ಮುಂಬಯಿ ಗೊಲಿಬಾರ್‌ನ್ನು ಅದೇಕೋ ಅದೇ ತೀವ್ರತೆಯಿಂದ ನಾವು ನೆನಪಿಸಿಕೊಳ್ಳುತ್ತಿಲ್ಲ. ಅದಕ್ಕೂ ಏನಾದರೂ ನಿರ್ದಿಷ್ಟ ಕಾರಣಗಳು ಇರಲೇಬೇಕು; ಮುಂಬಯಿಯ ಬೀದಿಗಳಲ್ಲಿ ಸುಮಾರು 400 ಜನರನ್ನು ಬ್ರಿಟಿಷ್ ಸೈನಿಕರು ಕೊಂದು ಹಾಕಿದ್ದು 1946ರ ಫೆಬ್ರವರಿಯಲ್ಲಿ; 1946ರ ಫೆಬ್ರವರಿ ೧೮ ಮತ್ತು ಫೆಬ್ರವರಿ ೨೫ರ ನಡುವೆ, ಅಖಂಡ ಭಾರತದಲ್ಲಿ 500ಕ್ಕೂ ಅಧಿಕ ಜನರು,
ಬ್ರಿಟಿಷರ ವಿರುದ್ಧ ಹೋರಾಡುತ್ತಾ ಪ್ರಾಣ ಕಳೆದುಕೊಂಡರು.

ಇವರಲ್ಲಿ ಹೆಚ್ಚಿನವರು ಮುಂಬಯಿಯ ನಾಗರಿಕರು! ಇಂತಹದೊಂದು ಹತ್ಯಾಕಾಂಡದ ವಿವರಗಳು ಅದೇಕೋ ಭಾರತೀಯರನ್ನು ಕಾಡಲೇ ಇಲ್ಲ; ಆಗ ನಡೆದ ವಿವರಗಳು ಹೆಚ್ಚು ಪ್ರಚುರಗೊಳ್ಳಲೂ ಇಲ್ಲ; ಏಕೆಂದರೆ, ಆಗ ಪ್ರೆಸ್ ಮೇಲೆ ಸೆನ್ಸಾರ್ ಇತ್ತು! ‘ರಾಯಲ್ ಇಂಡಿಯನ್ ನೇವಿ ಮ್ಯುಟಿನಿ’ – ಇದು ನಮ್ಮ ದೇಶದಲ್ಲಿ ನಡೆದ ಕೊನೆಯ ಸ್ವಾತಂತ್ರ್ಯ ಹೋರಾಟ ಎಂದೂ ಹೆಸರಾಗಿದೆ. ಈ ಹೋರಾಟದಲ್ಲಿ ಭಾಗವಹಿಸಿದವರು ನಮ್ಮ ನೌಕಾದಳದ ಸೈನಿಕರು. ಇದು ಆರಂಭಗೊಂಡದ್ದು ಮುಂಬಯಿಯ ‘ಐಎನ್‌ಎಸ್ ತಲ್ವಾರ್’ ಎಂಬ ನೌಕಾಸೇನೆಯ ಘಟಕದಲ್ಲಿ. ಒಂದೆರಡು ದಿನಗಳಲ್ಲಿ, ಈ ಹೋರಾಟವು ಕರಾಚಿ, ಬಹರೇನ್, ಅಂಡಮಾನ್ ಮೊದಲಾದ ದೂರ ಪ್ರದೇಶದ ನೌಕೆಗಳಿಗೂ ಹಬ್ಬಿತು.

ಬ್ರಿಟಿಷರ ಹೆಮ್ಮೆಯ ಬಂದರಾಗಿದ್ದ ಮುಂಬಯಿ ಬಂದರು, ಅಕ್ಷರಶಃ ನಾಲ್ಕಾರು ದಿನ ಭಾರತೀಯ ನೌಕಾದಳದ ವಶದಲ್ಲಿತ್ತು ಮತ್ತು ನೌಕಾದಳವು ಬ್ರಿಟಿಷರ ವಿರುದ್ಧ ಬಂಡೆದ್ದು, ಸ್ವಾತಂತ್ರ್ಯವನ್ನು ಘೋಷಿಸಿಕೊಂಡಿತ್ತು. ‘ಸ್ವಾತಂತ್ರ್ಯವನ್ನು ಘೋಷಿಸಿಕೊಂಡಿತ್ತು’ ಎಂಬ ಪದಗಳನ್ನು ಜಾಗರೂಕತೆ ಯಿಂದ, ಸ್ಪಷ್ಟತೆಯಿಂದ ಇಲ್ಲಿ ಬರೆದಿದ್ದೇನೆ. ಅದಕ್ಕೆ ಸ್ಪಷ್ಟ ಆಧಾರಗಳಿವೆ. ಬ್ರಿಟಿಷ್ ಅಧಿಕಾರಿಗಳ ದಬ್ಬಾಳಿಕೆ, ಕ್ರೌರ್ಯ, ತಾರತಮ್ಯ, ಹೀನ ಭಾಷೆ, ತುಳಿತ ಎಲ್ಲವನ್ನೂ ಧಿಕ್ಕರಿಸಿ, ಬಂಡೆದ್ದ ನೌಕಾ ಸೈನಿಕರು, ತಮ್ಮ ಹಡಗುಗಳ ಮೇಲೆ ಹಾರುತ್ತಿದ್ದ ‘ಯೂನಿಯನ್ ಜಾಕ್’ನ್ನು ಇಳಿಸಿ, ನಮ್ಮ ದೇಶದ
ಬಾವುಟಗಳನ್ನು ಹಾರಿಸಿದರು!

ಕಾಂಗ್ರೆಸ್, ಮುಸ್ಲಿಂ ಲೀಗ್ ಮತ್ತು ಕಮ್ಯುನಿಷ್ಟ್ ಪಕ್ಷಗಳ ಬಾವುಟಗಳನ್ನು ಒಟ್ಟಿಗೇ ಹಾರಿಸಿದ್ದರು. ೧೮.೨.1946ರಂದು ನಡೆದ ಈ ವಿದ್ಯಮಾನವು ಅಭೂತ ಪೂರ್ವವಾದುದು. ಜತೆಗೆ, ನೌಕಾದಳವನ್ನು ‘ಇಂಡಿಯನ್ ನ್ಯಾಷನಲ್ ನೇವಿ’ ಎಂದು ಮರುನಾಮಕರಣ ಮಾಡಿದ್ದರು! ಈ ಹೆಸರು ಸುಭಾಷ್ ಚಂದ್ರರು ಕಟ್ಟಿದ್ದ ‘ಇಂಡಿಯನ್ ನ್ಯಾಷ ನಲ್ ಆರ್ಮಿ’ಗೆ (ಐಎನ್‌ಎ) ಸಂವಾದಿಯಾಗಿದೆ; ಮತ್ತು ನೌಕಾದಳದ ಆ ಹೋರಾಟಕ್ಕೆ ಸುಭಾಷರ ಹೋರಾಟವೂ ಬಹು ದೊಡ್ಡ ಸೂರ್ತಿ ಎನಿಸಿತ್ತು. ಅದಾಗಲೇ ಐಎನ್‌ಎ ಹೋರಾಟವು ತಣ್ಣಗಾಗಿದ್ದು, ಅಲ್ಲಿ ಬಂಧನಕ್ಕೆ ಒಳಗಾದ ಸೈನಿಕರನ್ನು ಕೆಂಪುಕೋಟೆಯಲ್ಲಿ ವಿಚಾರಣೆ ನಡೆಸಲಾಗಿತ್ತು; ಆ ವಿವರಗಳನ್ನು ತಿಳಿದ ನೌಕಾದಳದ ಸೈನಿಕರು, ತೀವ್ರವಾಗಿ ನೊಂದಿದ್ದರು.

1946ರ ಫೆಬ್ರವರಿ ೧೮ ರಿಂದ ೨೫ರ ತನಕ ನಡೆದ ಈ ಬಲವಾದ ಬಂಡಾಯದಲ್ಲಿ ೭೮ ಹಡಗು ಮತ್ತು ದಡದಲ್ಲಿದ್ದ ನೌಕಾಸೇನೆಯ ಸಂಸ್ಥೆಗಳಲ್ಲಿದ್ದ 20000ಕ್ಕೂ ಅಧಿಕ ನೌಕಾ ಸೈನಿಕರು ಮತ್ತು ಅಽಕಾರಿಗಳು ಪಾಲ್ಗೊಂಡಿದ್ದರು. ಸರಕಾರಿ ಕೃಪಾಪೋಷಿತ ಇಂಗ್ಲಿಷ್ ಪತ್ರಿಕೆಗಳು ಇವರ ಹೋರಾಟ ವನ್ನು ‘ಆಹಾರಕ್ಕಾಗಿ ಮತ್ತು ಸಮಾನ ಸ್ಥಾನಮಾನಗಳಿಗಾಗಿ ನಡೆದ ಹೋರಾಟ’ ಎಂದು ಬರೆದಿದ್ದವು; ಆದರೆ, ಬೇರೆ ಪತ್ರಿಕೆಗಳು ವಿವರಗಳನ್ನು ಪತ್ತೆ ಮಾಡಿದಾಗ, ಇದು ಬ್ರಿಟಿಷರ ವಿರುದ್ಧ ಹೋರಾಟ ಎಂದು ನೌಕಾದಳದ ಸೈನಿಕರು ಸ್ಪಷ್ಟವಾಗಿ ಹೇಳಿದ್ದರು.

೧೯.೨.1946ರಂದು, ಹೋರಾಟಕ್ಕಾಗಿ ಒಂದು ಸಮಿತಿ ಯನ್ನು ಮಾಡಿಕೊಂಡಿದ್ದರು; ನೇವಲ್ ಸೆಂಟ್ರಲ್ ಸ್ಟ್ರೈಕ್ ಕಮಿಟಿ (ಎನ್‌ಸಿಎಸ್‌ಸಿ) ಎಂಬ ಹೆಸರಿನ ಈ ಸಮಿತಿಯ ಅಧ್ಯಕ್ಷ, ಎಂ.ಎಸ್.ಖಾನ್. ಮದನ್ ಸಿಂಗ್ ಎಂಬಾತ ಪಡೆಯ ಕೆಲವು ಘಟಕಗಳು ಬೆಂಬಲ ಘೋಷಿಸಿದ್ದವು; ಪದಾತಿ
ದಳವು ಬೆಂಬಲ ಘೋಷಿಸಿದ್ದರೆ, ಇನ್ನೇನು ಬ್ರಿಟಿಷರನ್ನು ಒದ್ದು ಓಡಿಸಿದಂತೆಯೇ, ಭಾರತಕ್ಕೆ ಸ್ವಾತಂತ್ರ್ಯ ದೊರೆತಂತೆಯೇ ಎಂದು ನೌಕಾದಳದ ಸೈನಿಕರು ತಿಳಿದಿದ್ದರು. ಅದಕ್ಕೆಂದೇ, ತಮಗೆ ಮಾರ್ಗದರ್ಶನ ನೀಡಲು ರಾಜಕೀಯ ಪಕ್ಷಗಳಿಗೆ ಪದೇಪದೇ ಮನವಿ ಮಾಡಿದರು. ಆದರೆ, ಅವರ
ಹೋರಾಟಕ್ಕೆ ಅಂದಿನ ರಾಜಕೀಯ ಪಕ್ಷಗಳು ತಣ್ಣೀರೆರಚಿದವು; ಗಾಂಧೀಜಿಯವರು ಈ ಹೋರಾಟವನ್ನು ಖಂಡತುಂಡವಾಗಿ ವಿರೋಧಿಸಿದರು; ಮಹಮ್ಮದ್ ಆಲಿ ಜಿನ್ನಾನು ಎಲ್ಲಾ ಮುಸ್ಲಿಂ ನೌಕಾ ಸೈನಿಕರು ಶರಣಾಗಬೇಕೆಂದು ಹೇಳಿದ; ಪಟೇಲರು ಈ ಹೋರಾಟವನ್ನು ತಕ್ಷಣ ನಿಲ್ಲಿಸಿ ಎಂದು ತಾಕೀತು ಮಾಡಿದ್ದರ ಜತೆ, ಹೋರಾಟ ಸಮಿತಿಯ ಅಧ್ಯಕ್ಷನಾಗಿದ್ದ ಎಂ.ಎಸ್.ಖಾನ್ ನನ್ನು ಮಾತುಕತೆಗೆ ಕರೆದರು! 20000 ನೌಕಾಸೈನಿಕರು
ಬ್ರಿಟಿಷರ ವಿರುದ್ಧ ನಡೆಯುತ್ತಿದ್ದ ಈ ಹೋರಾಟಕ್ಕೆ, ಕಾಂಗ್ರೆಸ್ ನ ಪಟೇಲರು ಮಧ್ಯವರ್ತಿಯಾಗಿ ಮಾತನಾಡಿ, ಹೋರಾಟವನ್ನು ನಿಲ್ಲಿಸುವಂತೆ ಹೇಳಿದ್ದು, ಒಂದು ಚೋದ್ಯ!

ಜತೆಗೆ, ಆ ನಂತರ ಯಾರಿಗೂ ಶಿಕ್ಷೆ ನೀಡುವುದಿಲ್ಲ ಎಂದೂ ಭರವಸೆ ನೀಡಿದರು! ಬೇರೆ ದಾರಿ ಕಾಣದೆ ನೌಕಾ ಸೈನಿಕರು ತಮ್ಮ ಹೋರಾಟ
ಕೈಬಿಟ್ಟರು. ಆದರೆ, ಸಾವಿರಾರು ಜನರನ್ನು ಬಂಧಿಸಿ, 476 ನೌಕಾ ಸೈನಿಕರನ್ನು ಮನೆಗೆ ಕಳಿಸಲಾಯಿತು. ದೇಶಕ್ಕೆ ಸ್ವಾತಂತ್ರ್ಯ ದೊರೆತ ನಂತರವೂ ಅವರನ್ನು ಕೆಲಸಕ್ಕೆ ವಾಪಸು ಕರೆಸಿಕೊಳ್ಳಲಿಲ್ಲ. ಪಟೇಲರ ವಾಗ್ದಾನ ಹುಸಿಯಾಯಿತು. 1946ರಲ್ಲಿ ನಡೆದ ನೌಕಾದಳದ ಈ ಹೋರಾಟವನ್ನು ಪುಟ್ಟ ಲೇಖನದಲ್ಲಿ ವಿವರಿಸಲು ಕಷ್ಟ. ಆ ನಾಲ್ಕಾರು ದಿನಗಳಲ್ಲಿ, ನೌಕೆಗಳು ಮತ್ತು ಬ್ರಿಟಿಷ್ ಸೈನಿಕರ ನಡುವೆ ಹಲವು ಬಾರಿ
ಗುಂಡಿನ ಚಕಮಕಿ ನಡೆದು, ಹತ್ತಾರು ನೌಕಾ ಸಿಬ್ಬಂದಿ ಗುಂಡಿಗೆ ಬಲಿಯಾದರು; ಕೆಲವು ಬ್ರಿಟಿಷ್ ಸೈನಿಕರೂ ಸತ್ತರು. ಇವರ ಹೋರಾಟಕ್ಕೆ ಕಮ್ಯುನಿಸ್ಟ್ ಪಕ್ಷದ ಬೆಂಬಲ ಮುಂದುವರಿಯಿತು.

ಕಮ್ಯುನಿಸ್ಟ್ ಪಕ್ಷದ ಕರೆಯ ಮೇಲೆ ಮುಂಬಯಿಯ ಜನರು ಹರತಾಳ ಆಚರಿಸಿದರು; ಹರತಾಳವನ್ನು ನಿಯಂತ್ರಿಸಲು ಬಂದಿದ್ದ ಬ್ರಿಟಿಷ್ ಸೇನಾ ವಾಹನವು, ಜನರ ಮೇಲೆ ಹರಿದಾಡಿತು; ರೊಚ್ಚಿಗೆದ್ದ ಜನರು ೧೧ ಸೇನಾ ವಾಹನಗಳನ್ನು ಸುಟ್ಟರು. ಪ್ರತಿಯಾಗಿ, ಬ್ರಿಟಿಷ್ ಸೈನಿಕರು, ಪೊಲೀಸರು
ಮುಂಬಯಿಯ ಹಲವು ಭಾಗಗಳಲ್ಲಿ ಶಸರಹಿತ ನಾಗರಿಕರ ಮೇಲೆ ಮನಬಂದಂತೆ ಗುಂಡು ಹಾರಿಸಿ, 200ಕ್ಕೂ ಅಧಿಕ ಜನರನ್ನು ಸಾಯಿಸಿದರು. ಕರಾಚಿಯಲ್ಲೂ ಜನರ ಮೇಲೆ ಗುಂಡು ಹಾರಿಸಲಾಗಿತ್ತು; ಅಧಿಕೃತ ಅಂಕಿ ಅಂಶಗಳಂತೆ 228 ಜನ ಸತ್ತಿದ್ದರು; ನಿಜವಾಗಿ ಇನ್ನಷ್ಟು ಜನ ಸತ್ತಿದ್ದರು; ಆದರೆ, ಕಾಂಗ್ರೆಸ್ ಸಹ ಇವರ ಹೋರಾಟಕ್ಕೆ ವಿರೋಧವಾಗಿದ್ದುದರಿಂದ, ಅಂದು ನಿಜವಾಗಿಯೂ ಗುಂಡಿಗೆ ಬಲಿಯಾದವರ ಸಂಖ್ಯೆ ಎಷ್ಟು ಎಂಬ ಅಂಕಿಅಂಶದ ಸ್ಪಷ್ಟತೆ ದೊರೆಯಲೇ ಇಲ್ಲ.

ನೌಕಾ ಸೈನಿಕರ 1946ರ ಹೋರಾಟಕ್ಕೆ ಗಾಂಧೀಜಿ, ಪಟೇಲ್ ಮೊದಲಾದವರು ತುಂಬು ಹೃದಯದ ಬೆಂಬಲ ನೀಡಿದ್ದರೆ, ಬಹುಷಃ ದೇಶ ವಿಭಜನೆ ಆಗುತ್ತಿರಲಿಲ್ಲ, 1946ರಲ್ಲೇ ನಾವು ಸ್ವಾತಂತ್ರ್ಯವನ್ನು ಗಳಿಸುತ್ತಿದ್ದೆವು. ಆದರೆ, ಅದಕ್ಕೆ ವ್ಯತಿರಿಕ್ತವಾಗಿ ಘಟನೆಗಳು ನಡೆದವು, ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ ನೌಕಾ ಸೈನಿಕರೇ, ಶಿಕ್ಷೆಯನ್ನು ಅನುಭವಿಸಿದ ದಾರುಣ ವಿದ್ಯಮಾನಕ್ಕೆ ಸ್ವತಂತ್ರ ಭಾರತ ಸಾಕ್ಷಿಯಾಯಿತು! ಇದಕ್ಕೇ
ಇರಬೇಕು, ಪಶ್ಚಿಮ ಬಂಗಾಳದಲ್ಲಿ 1965ರಲ್ಲಿ ‘ಕಲ್ಲೋಲ’ ನಾಟಕವನ್ನು ಕಾಂಗ್ರೆಸ್ ಸರಕಾರ ನಿಷೇಧಿಸಿತು, ಮತ್ತು ನೌಕಾದಂಗೆಯ ವಿವರಗಳು ಜನಸಾಮಾನ್ಯರಿಗೆ ತಲುಪದೇ ಇರುವಂತೆ ಪ್ರಯತ್ನ ನಡೆಸಿತು!

error: Content is protected !!