Saturday, 7th September 2024

ಉತ್ತರದ ಕೈಕಚ್ಚೀತೆ ಕರಸೇವಕನ ಬಂಧನ ?

ವರ್ತಮಾನ

maapala@gmail.com

ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗ ರಾಜ್ಯ ಕಾಂಗ್ರೆಸ್ ಸರಕಾರದಲ್ಲಿ ನಡೆಯುತ್ತಿರುವ ಕೆಲವು ವಿದ್ಯಮಾನಗಳು ಮತ್ತೆ ಮೇಲೇಳಲು ಪ್ರಯತ್ನಿಸುತ್ತಿರುವ ರಾಜ್ಯ ಬಿಜೆಪಿಗೆ ಮಾತ್ರವಲ್ಲ, ಕೇಂದ್ರದಲ್ಲಿ ಅಧಿಕಾರ ಮುಂದುವರಿಸಲು ಪ್ರಯತ್ನಿಸುತ್ತಿರುವ ಕೇಂದ್ರ ಸರಕಾರಕ್ಕೂ ಬೂಸ್ಟರ್ ಡೋಸ್ ನೀಡಿದಂತಾಗಿದೆ.

ಗೊತ್ತಿದ್ದೋ, ಗೊತ್ತಿಲ್ಲದೆಯೋ, ಉದ್ದೇಶ ಪೂರ್ವಕವೋ ಇಲ್ಲ ಕಾಕತಾಳೀಯವೋ… ಮೇಲಿನ ಹಂತ ಅಥವಾ ಕೆಳ ಹಂತದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಕೆಲವೊಮ್ಮೆ ಕೈಸುಡುತ್ತವೆ. ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುವಂತೆ ಮಾಡುತ್ತದೆ. ತನ್ನ ವಿರುದ್ಧ ಹೋರಾಟಕ್ಕಿಳಿದವರಿಗೆ ಪ್ರಯೋಗಿಸಲು ತನ್ನ ಕೈಯಾರೆ ಅಸಗಳನ್ನು ಕೊಟ್ಟು ಬಿಡುತ್ತವೆ. ಒಮ್ಮೆ ಆ ರೀತಿಯ ಯಡವಟ್ಟಾದರೆ ಅದನ್ನು ಸರಿಪಡಿಸಿಕೊಳ್ಳುವುದು ಬಹಳ ಕಷ್ಟ. ಎಷ್ಟೇ ಸಮರ್ಥನೆ ಮಾಡಿ ಕೊಂಡರೂ ಅಷ್ಟರೊಳಗೆ ವಿವಾದ ತಾರಕಕ್ಕೇರಿ ಸಮಸ್ಯೆ ಸೃಷ್ಟಿಯಾಗಿರುತ್ತದೆ. ಅಧಿಕಾರದಲ್ಲಿರುವ ಸಂದರ್ಭದಲ್ಲಿ ಅಂತಹ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಂಡರೆ ಅದರಿಂದ ಅಧಿಕಾರಕ್ಕೇನೂ ಸಂಚಕಾರ ಬಾರದೇ ಇದ್ದರೂ ಜನರ ಮುಂದೆ ಅಪರಾಧಿ ಸ್ಥಾನದಲ್ಲಿ ನಿಲ್ಲಬೇಕಾಗುತ್ತದೆ.

ಅದರಲ್ಲೂ ಭಾವನಾತ್ಮಕ ವಿಚಾರಗಳಾದರೆ ವಿವಾದ ಸೃಷ್ಟಿಯಾದ ಮೇಲೆ ಅದರಿಂದ ಹೊರಬರುವುದು ಕಷ್ಟದ ಕೆಲಸ. ಆಡಳಿತಾತ್ಮಕವಾಗಿ ಎಷ್ಟೇ ಉತ್ತಮ
ನಿರ್ಧಾರ ಕೈಗೊಂಡರೂ ಭಾವನೆಗಳನ್ನು ಕೆರಳಿಸುವಂತಹ ತೀರ್ಮಾನಗಳು ಸಾಕಷ್ಟು ಅಪಾಯಗಳನ್ನು ತಂದೊಡ್ಡುತ್ತವೆ. ಪ್ರಸ್ತುತ ರಾಜ್ಯದಲ್ಲಿ ಆಗಿರುವುದು ಇಂತಹದ್ದೇ ಬೆಳವಣಿಗೆ. ಅತ್ತ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಗೆ ಸಜ್ಜಾಗಿ ರಾಮಲಲಾ ವಿಗ್ರಹದ ಪ್ರಾಣಪ್ರತಿಷ್ಠಾಪನೆಗೆ ದಿನಗಣನೆ ಆರಂಭ
ವಾಗಿರುವಾಗ ಹುಬ್ಬಳ್ಳಿಯಲ್ಲಿ ೧೯೯೨ರಲ್ಲಿ ನಡೆದ ರಾಮಜನ್ಮಭೂಮಿ ಹೋರಾಟದ ವೇಳೆ ಅಂಗಡಿಯೊಂದಕ್ಕೆ ಬಂಕಿ ಹಚ್ಚಿದ ಪ್ರಕರಣಕ್ಕೆ ೩೧ ವರ್ಷಗಳ
ಬಳಿಕ ಮರುಜೀವ ನೀಡಿ ಆರೋಪಿಯನ್ನು ಬಂಧಿಸಿದ ಪ್ರಕರಣವೇ ಸಾಕ್ಷಿ. ಹಳೆಯ ಪ್ರಕರಗಳನ್ನು ಇತ್ಯರ್ಥಗೊಳಿಸುವ ಭರದಲ್ಲಿ ರಾಮಜನ್ಮಭೂಮಿ ಹೋರಾಟ ದಲ್ಲಿ ಪಾಲ್ಗೊಂಡು ‘ಕರಸೇವಕ’ ಎಂಬ ಹಣೆಪಟ್ಟಿ ಹೊತ್ತಿರುವ ಆರೋಪಿ ಶ್ರೀಕಾಂತ ಪೂಜಾರಿ ಎಂಬಾತನನ್ನು ಹುಬ್ಬಳ್ಳಿ ಶಹರ ಠಾಣೆ ಪೊಲೀಸರು ಬಂಧಿಸುವ ಮೂಲಕ ರಾಜ್ಯ ಕಾಂಗ್ರೆಸ್ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರು. ಈ ವಿವಾದ ತೀವ್ರಗೊಳ್ಳುತ್ತಿದ್ದಂತೆ ೨೦೧೭ರಲ್ಲಿ ಬಾಬಾ ಬುಡನ್ ಗಿರಿಯ ದತ್ತಪೀಠದ ಬಳಿ ಇದ್ದ ಗೋರಿಗಳನ್ನು ನಾಶ ಮಾಡುವ ಪ್ರಯತ್ನ ಮಾಡಿದ ಪ್ರಕರಣದ ವಿಚಾರಣೆ ಮುಂದುವರಿಸಲು ಸರಕಾರ ಅನುಮತಿ ನೀಡಿದ ಹಿನ್ನೆಲೆ ಯಲ್ಲಿ ನ್ಯಾಯಾಲಯ ಆರೋಪಿಗಳಿಗೆ ಸಮನ್ಸ್ ಜಾರಿ ಮಾಡಿರುವುದು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ.

ಇದು ಕಾನೂನಿನ ಪ್ರಕಾರ ನಡೆಯುವ ಸಹಜ ಪ್ರಕ್ರಿಯೆಯಾದರೂ ಆ ಪ್ರಕ್ರಿಯೆ ನಡೆಯುತ್ತಿರುವ ಸಮಯ ಇದೀಗ ರಾಜ್ಯ ಕಾಂಗ್ರೆಸ್ ಸರಕಾರಕ್ಕೆ ಮತ್ತೊಮ್ಮೆ ಹಿಂದೂ ವಿರೋಧಿ ಪಟ್ಟ ಕಟ್ಟುತ್ತಿದೆ. ಹುಬ್ಬಳ್ಳಿ ಪ್ರಕರಣದಲ್ಲಿ ಬಂಧಿತ ಶ್ರೀಕಾತ್ ಪೂಜಾರಿ ಕ್ರಿಮಿನಲ್ ಎಂದು ಹೇಳುವ ಮೂಲಕ ಕಾಂಗ್ರೆಸ್ ಸರಕಾರ ವಿವಾದವನ್ನು ತಣ್ಣಗಾಗಿಸಿ ತನ್ನನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಯಾದರೂ ಅದು ಅಷ್ಟೊಂದು ಪರಿಣಾಮಕಾರಿಯಾಗುತ್ತಿಲ್ಲ. ಏಕೆಂದರೆ, ಶ್ರೀಕಾಂತ್ ಪೂಜಾರಿ ವಿರುದ್ಧ
ಇದ್ದ ೧೬ ಪ್ರಕರಣಗಳಲ್ಲಿ ಬಹುತೇಕವು ಇತ್ಯರ್ಥ ಗೊಂಡಿವೆ. ಬಾಕಿ ಉಳಿದಿದ್ದು ಪ್ರಸ್ತುತ ಬಂಧನಕ್ಕೊಳಗಾಗಿರುವ ರಾಮಜನ್ಮಭೂಮಿ ಹೋರಾಟದ ವೇಳೆ
ಅಂಗಡಿಗೆ ಬೆಂಕಿ ಹಚ್ಚಿದ ಪ್ರಕರಣ ಮಾತ್ರ.

ಅದರಲ್ಲೂ ಆರೋಪಿ ಹುಬ್ಬಳ್ಳಿ ನಗರದಲ್ಲೇ ಆಟೋ ಓಡಿಸಿಕೊಂಡು ಪೊಲೀಸರ ಮುಂದೆಯೇ ಓಡಾಡುತ್ತಿರುವಾಗ ನೋಟಿಸ್ ಕೂಡ ನೀಡದೆ ಏಕಾಏಕಿ ಬಂಧಿಸಿ ಜೈಲಿಗೆ ಹಾಕಿರುವುದು. ೩೧ ವರ್ಷ ಹಳೆಯ ಪ್ರಕರಣದಲ್ಲಿ ಪೊಲೀಸರ ಈ ರೀತಿಯ ವರ್ತನೆಗೆ ಸರಕಾರದ ಕುಮ್ಮಕ್ಕು ಇದ್ದೇ ಇರುತ್ತದೆ ಎಂಬ ಭಾವನೆ ಬರುತ್ತದೆ. ಏಕೆಂದರೆ, ಇದೇ ಕಾಂಗ್ರೆಸ್ ಹಿಂದೆ ರಾಮಜನ್ಮಭೂಮಿ ಹೋರಾಟಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಶ್ರೀರಾಮನನನ್ನು ಕಾಲ್ಪನಿಕ ಎಂದು ಹೇಳಿ ನ್ಯಾಯಾಲಯಕ್ಕೆ
ಪ್ರಮಾಣಪತ್ರ ಸಲ್ಲಿಸಿತ್ತು. ೧೯೯೦ರ ದಶಕದಲ್ಲಿ ರಾಮಜನ್ಮಭೂಮಿ ಹೋರಾಟ ನಡೆಸಿದ ಕರಸೇವಕರನ್ನು ಬಂಧಿಸಿತ್ತು. ರಾಮಜನ್ಮಭೂಮಿ-ಬಾಬರಿ ಮಸೀದಿ ವಿಚಾರದ ಕಾನೂನು ಹೋರಾಟದಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕರು ಬಾಬರಿ ಮಸೀದಿ ಪರ ನ್ಯಾಯಾಲಯದಲ್ಲಿ ವಕಾಲತ್ತು ವಹಿಸಿದ್ದರು.

ಹೀಗಾಗಿ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿರುವಾಗಲೇ ರಾಮಜನ್ಮಭೂಮಿ ಹೋರಾಟದಲ್ಲಿ ಪಾಲ್ಗೊಂಡಿದ್ದವರನ್ನು ಬಂಧಿಸಿರುವುದು, ಅದರಲ್ಲೂ ಅಯೋಧ್ಯೆಯ ರಾಮಮಂದಿರ ಉದ್ಘಾಟನೆಗೆ ಸಜ್ಜಾಗಿರುವಾಗ ಈ ಘಟನೆ ನಡೆದಿದೆ. ಇದರ ಬೆನ್ನಲ್ಲೇ ದತ್ತಪೀಠ ಬಳಿ ಗೋರಿ ದ್ವಂಸಗೊಳಿಸಲು ಯತ್ನಿಸಿದ ಪ್ರಕರಣವೂ ಮುನ್ನೆಲೆಗೆ ಬಂದಿದೆ. ಈ ಪ್ರಕರಣದ ವಿಚಾರಣೆ ಮುಂದುವರಿಸಲು ೨೦೨೦ರಲ್ಲಿ ಬಿಜೆಪಿ ಸರಕಾರ ಇದ್ದಾಗ ಪೊಲೀಸರು ಪ್ರಸ್ತಾವನೆ ಸಲ್ಲಿಸಿದ್ದರು.
ಆದರೆ, ಸರಕಾರ ಅನುಮತಿ ನೀಡಿರಲಿಲ್ಲ. ಆದರೆ, ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ೨೦೨೩ರ ಸೆಪ್ಟೆಂಬರ್‌ನಲ್ಲಿ ವಿಚಾರಣೆ ಮುಂದುವರಿಸಲು ಅನುಮತಿ ನೀಡಿತ್ತು. ಆ ಸಂದರ್ಭದಲ್ಲೇ ಅದು ಬಹಿರಂಗಗೊಂಡಿದ್ದರೆ ಹೆಚ್ಚು ಸಮಸ್ಯೆಯಾಗುತ್ತಿರಲಿಲ್ಲ. ಆದರೆ, ಕರಸೇವಕನ ಬಂಧನ ವಿವಾದ ತೀವ್ರಗೊಂಡಿರು ವಾಗ ನ್ಯಾಯಾಲಯ ಸಮನ್ಸ್ ಜಾರಿ ಮಾಡಿ ಪ್ರಕರಣ ಬೆಳಕಿಗೆ ಬಂದಿರುವುದರಿಂದ ಸಹಜವಾಗಿಯೇ ಕಾಂಗ್ರೆಸ್ ಹಿಂದೂ ವಿರೋಧಿ ಎಂಬ ಹಣೆಪಟ್ಟಿ ಕಟ್ಟಿಕೊಳ್ಳು ವಂತಾಗಿದೆ.

ಇದರಿಂದ ಹೆಚ್ಚು ಲಾಭವಾಗಿರುವುದು ಬಿಜೆಪಿಗೆ. ಅದು ರಾಜ್ಯದಲ್ಲಿ ಮಾತ್ರವಲ್ಲ, ರಾಷ್ಟ್ರಮಟ್ಟದಲ್ಲೂ ಕೂಡ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋತು ಅಧಿಕಾರ ಕಳೆದುಕೊಂಡಿದ್ದ ರಾಜ್ಯ ಬಿಜೆಪಿ ನಂತರದಲ್ಲಿ ಆಂತರಿಕ ಭಿನ್ನಮತ, ನಾಯಕತ್ವದ ಕೊರತೆಯಿಂದ ಬಳಲುತ್ತಿತ್ತು. ಇದರ ಜತೆಗೆ ಕಾರ್ಯಕರ್ತ ರೂ ನಿರುತ್ಸಾಹದಿಂದ ಇದ್ದರು. ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದರೂ ತಳ ಮಟ್ಟದ ಕಾರ್ಯಕರ್ತರು ಸಕ್ರಿಯವಾಗಿ ಸಿದ್ಧತೆಯಲ್ಲಿ ತೊಡಗಿಕೊಂಡಿರಲಿಲ್ಲ. ಆದರೆ, ಇತ್ತೀಚೆಗೆ ನಾಯಕತ್ವ ಸಮಸ್ಯೆ ಬಗೆಹರಿದಿದೆ. ಬಿ.ವೈ. ವಿಜಯೇಂದ್ರ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ರಾಜ್ಯದಲ್ಲಿ ಪಕ್ಷವನ್ನು ಬಲಪಡಿ ಸುವ ಅದರಲ್ಲೂ ಮುಖ್ಯವಾಗಿ ನಿರುತ್ಸಾಹದಿಂದ ಕುಳಿತಿದ್ದ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ನೀಡಿ ಅವರನ್ನು ಸಕ್ರಿಯಗೊಳಿಸು ವುದು ವಿಜಯೇಂದ್ರ ಅವರ ಮುಂದಿದ್ದ ದೊಡ್ಡ ಸವಾಲಾಗಿತ್ತು. ಹೊಸ ರಾಜ್ಯಾಧ್ಯಕ್ಷರ ನೇಮಕದ ಬಳಿಕ ಪಕ್ಷದಲ್ಲಿ ಸ್ವಲ್ಪ ಮಟ್ಟಿನ ಚಟುವಟಿಕೆ ಆರಂಭವಾಗಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಸಂಘಟನೆ ಚುರುಕುಗೊಂಡಿರಲಿಲ್ಲ.

ಈ ಮಧ್ಯೆ ಪದಾಧಿಕಾರಿಗಳ ನೇಮಕವೂ ನಡೆದು ರಾಜ್ಯ ಮಟ್ಟದಲ್ಲಿ ಪಕ್ಷ ಒಂದು ಹಂತಕ್ಕೆ ಬಂದು ತಲುಪಿತ್ತು. ಎಲ್ಲರೂ ಸೇರಿ ಪಕ್ಷ ಸಂಘಟನೆಯನ್ನು ಚುರುಕು ಗೊಳಿಸಲು ಹೆಜ್ಜೆ ಇಡುತ್ತಿದ್ದಾಗಲೇ ಹುಬ್ಬಳ್ಳಿಯ ಕರಸೇವಕನ ಬಂಧನ ಪ್ರಕರಣ ಒಂದೊಳ್ಳೆಯ ಅವಕಾಶವನ್ನು ಮಾಡಿಕೊಟ್ಟಿತು. ಈ ಅವಕಾಶವನ್ನು ಬಿಜೆಪಿ ಎಷ್ಟರ ಮಟ್ಟಿಗೆ ಸದು ಪಯೋಗಪಡಿಸಿಕೊಂಡಿತು ಎಂದರೆ ರಾಜ್ಯಾದ್ಯಂತ ಪ್ರತಿಭಟನೆಗಳನ್ನು ನಡೆಸುವ ಮೂಲಕ ಕಾರ್ಯಕರ್ತರಲ್ಲಿ ಉತ್ಸಾಹ ತರುವಲ್ಲಿ ಯಶಸ್ವಿಯಾಯಿತು.

ಸದ್ಯ ಇದೇ ವೇಗವನ್ನು ಮುಂದುವರಿಸಿಕೊಂಡು ಪಕ್ಷ ಸಂಘಟನೆ ಜತೆಗೆ ರಾಜ್ಯ ಸರಕಾರದ ವಿರುದ್ಧ ಹೋರಾಟ ನಡೆಸುತ್ತ ಲೋಕಸಭೆ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲು ಇದನ್ನು ವೇದಿಕೆಯಾಗಿ ಬಿಜೆಪಿ ಬಳಸಿಕೊಳ್ಳುತ್ತಿದೆ. ಹಾಗೆಂದು ರಾಜ್ಯದಲ್ಲಿ ಬಿಜೆಪಿಗೆ ಇದರಿಂದ ಹೆಚ್ಚು ಅನುಕೂಲವಾಗುತ್ತದೆ, ಸರಕಾರ ಅಪಾಯಕ್ಕೆ ಸಿಲುಕುತ್ತದೆ ಎಂದೇನೂ ಭಾವಿಸಲು ಸಾಧ್ಯವಿಲ್ಲ. ಏಕೆಂದರೆ ಏಳು ತಿಂಗಳ ಹಿಂದೆ ಅಧಿಕಾರಕ್ಕೆ ಬಂದಿರುವ ರಾಜ್ಯ ಕಾಂಗ್ರೆಸ್ ಸರಕಾರದ ಅಧಿಕಾರಾವಧಿ ಇನ್ನೂ ನಾಲ್ಕು ವರ್ಷ ಐದು ತಿಂಗಳು ಇದೆ. ಮೇಲಾಗಿ ಇಂತಹ ಭಾವನಾತ್ಮಕ ವಿಚಾರಗಳಿಂದಲೇ ಜನರ ಒಲವು ಗಳಿಸಲು ಸಾಧ್ಯವಿಲ್ಲ ಎಂಬುದು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಾಬೀತಗಿದೆ.

ಹಿಜಾಬ್ ವಿವಾದ, ಮಸೀದಿಗಳಲ್ಲಿ ಲೌಡ್ ಸ್ಪೀಕರ್ ಬಳಕೆ, ಹಲಾಲ್ ಮಾಂಸದ ವಿರುದ್ಧ ಹೋರಾಟ, ದೇವಾಲಯಗಳ ಬಳಿ ಮುಸ್ಲಿಮರಿಗೆ ವ್ಯಾಪಾರಕ್ಕೆ
ಅವಕಾಶ ನಿರಾಕರಣೆಯಂತಹ ಹಲವು ಭಾವನಾತ್ಮಕ ವಿಚಾರಗಳನ್ನು ಕೈಗೆತ್ತಿಕೊಂಡಿದ್ದರೂ ಬಿಜೆಪಿ ಮತ್ತೆ ಗೆಲ್ಲಲು ಸಾಧ್ಯವಾಗಲಿಲ್ಲ. ಕಾರ್ಯಕರ್ತರಲ್ಲಿ
ಹುರುಪು ಮೂಡಿಸಲು ಇದರಿಂದ ಸಾಧ್ಯವಾಗುತ್ತದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿರಲಿ, ಇಲ್ಲದೇ ಇರಲಿ, ಇತ್ತೀಚಿನ ವರ್ಷಗಳಲ್ಲಿ ಲೋಕಸಭೆ ಚುನಾ
ವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗಳಿಸುತ್ತಿರುವುದು ಸಾಮಾನ್ಯ ಎನ್ನುವಂತಾಗಿದ್ದರಿಂದ ಮತ್ತು ೨೦೧೪ರ ಬಳಿಕ ನರೇಂದ್ರ ಮೋದಿ ಸರಕಾರವನ್ನು ರಾಜ್ಯದ
ಜನ ಬೆಂಬಲಿಸುತ್ತಿರುವುದರಿಂದ ಈ ಬಾರಿಯೂ ಅದು ಮುಂದುವರಿಯಬಹುದೇ ಹೊರ\ತು ಹೆಚ್ಚಿನ ಲಾಭವೇನೂ ಆಗದು.

ಇಲ್ಲಿ ನಿಜವಾಗಿಯೂ ಲಾಭವಾಗುವುದು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಗೆ. ಬಿಜೆಪಿ ನೇತೃತ್ವದ ಎನ್‌ಡಿಎ ವಿರುದ್ಧ ಕಾಂಗ್ರೆಸ್ ನೇತೃತ್ವದಲ್ಲಿ ಇಂಡಿಯನ್ ನ್ಯಾಷನಲ್ ಡೆವಲಪ್‌ಮೆಂಚಲ್ ಇನ್ ಕ್ಲೂಸಿವ್ ಅಲಯನ್ಸ್ (ಐಎನ್‌ಡಿಐಎ) ಸ್ಥಾಪಿಸಿ ಹೋರಾಟಕ್ಕಿಳಿದಿರುವ ಮಿತ್ರ ಪಕ್ಷಗಳು ೨೦೨೪ರ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುವ ಕನಸು ಕಾಣತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಅದು ಸಾಧ್ಯವಿಲ್ಲ ವಾದರೂ ರಾಷ್ಟ್ರ ಮಟ್ಟದಲ್ಲಿ ಎನ್‌ಡಿಎಗೆ ಪ್ರಬಲ ಪೈಪೋಟಿ ನೀಡುವ ನಿರೀಕ್ಷೆ ಯನ್ನು ಆರಂಭದಲ್ಲಿ ಸೃಷ್ಟಿಸಿತ್ತು. ಆದರೆ, ಅಷ್ಟರಲ್ಲಿ ಐಎನ್‌ಡಿಐಎ ಪಾಲು ದಾರ ಪಕ್ಷದ ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ಕುರಿತು ನೀಡಿದ ಹೇಳಿಕೆ ಒಕ್ಕೂಟಕ್ಕೆ ದೊಡ್ಡ ಪೆಟ್ಟನ್ನೇ ನೀಡಿತು.

ಹಿಂದೂ ಧರ್ಮ, ಭಾವನಾತ್ಮಕ ವಿಚಾರ ಬಂದಾಗ ಅದು ಹೆಚ್ಚು ಪರಿಣಾಮ ಬೀರುವುದು ಉತ್ತರ ಭಾರತದಲ್ಲಿ. ದೇಶದಲ್ಲಿ ಅಧಿಕಾರಕ್ಕೆ ಬರಬೇಕಾದರೂ ಆ ಭಾಗದಲ್ಲಿ ಹೆಚ್ಚು ಸ್ಥಾನ ಗಳಿಸ ಬೇಕು. ಉತ್ತರ ಭಾರತದ ರಾಜ್ಯಗಳಲ್ಲಿ ತನ್ನ ನೆಲೆ ಕಳೆದುಕೊಳ್ಳುತ್ತಿರುವ ಕಾಂಗ್ರೆಸ್‌ಗೆ ಮೈತ್ರಿಕೂಟದ ಸದಸ್ಯ ಪಕ್ಷ ಡಿಎಂಕೆ ಸನಾತನ ಧರ್ಮ ಕುರಿತಂತೆ ಕೈಗೊಂಡ ನಿಲುವು ಆ ಭಾಗದಲ್ಲಿ ಮುಟ್ಟಿ ನೋಡಿಕೊಳ್ಳುವಂತೆ ಮಾಡಿತ್ತು. ಮಧ್ಯಪ್ರೇದೇಶ ಮತ್ತು ಛತ್ತೀಸ್‌ಗಡದಲ್ಲಿ ಬಿಜೆಪಿಯನ್ನು ಸೋಲಿಸಿ ಅಧಿಕಾರಕ್ಕೆ ಬಂದೇ ಬಿಟ್ಟೆವು ಎನ್ನುವ ಸ್ಥಿತಿಯಲ್ಲಿದ್ದ ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಬೇಕಾಯಿತು.

ರಾಜಸ್ಥಾನದಲ್ಲಿ ಇದ್ದ ಅಽಕಾರವನ್ನೂ ಕಳೆದುಕೊಳ್ಳಬೇಕಾಯಿತು. ಒಂದೊಮ್ಮೆ ಸನಾತನ ಧರ್ಮ ಕುರಿತಂತೆ ವಿವಾದ ಸೃಷ್ಟಿಯಾಗದಿದ್ದರೆ ಕಾಂಗ್ರೆಸ್ ಆ
ಭಾಗದಲ್ಲಿ ತನ್ನ ಬಲವನ್ನು ಸ್ವಲ್ಪ ಮಟ್ಟಿಗೆ ಹೆಚ್ಚಿಸಿ ಕೊಳ್ಳುತ್ತಿತ್ತು. ಆದರೆ, ಅದಕ್ಕೆ ಅವಕಾಶ ಸಿಗಲಿಲ್ಲ. ಹೀಗಾಗಿಯೇ ರಾಹುಲ್ ಗಾಂಧಿ ಅವರು ಉತ್ತರ ಭಾರತ ದಲ್ಲಿ ಪಕ್ಷ ಬಲವರ್ದನೆಗೆ ಎರಡನೇ ಹಂತದಲ್ಲಿ ‘ಭಾರತ್ ಜೋಡೋ ನ್ಯಾಯ ಯಾತ್ರೆ’ ಹಮ್ಮಿಕೊಂಡಿದ್ದಾರೆ. ಹಿಂದುತ್ವದ ಆಧಾರದ ಮೇಲೆ ಮತ ಬ್ಯಾಂಕ್ ಸೃಷ್ಟಿ ಯಾಗುವ ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್, ಬಿಹಾರ, ಛತ್ತೀಸ್‌ಗಡ ಮತ್ತಿತರೆ ರಾಜ್ಯಗಳನ್ನು ಪ್ರಧಾನ ವಾಗಿಟ್ಟುಕೊಂಡು ಸಂಘಟನೆಗೆ ಮುಂದಾಗಿದ್ದಾರೆ.

ಇಂತಹ ಸಂದರ್ಭದಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ೩೧ ವರ್ಷದ ಬಳಿಕ ಕರ ಸೇವಕರ ಬಂಧನ, ಏಳೆಟು ವರ್ಷದ ನಂತರ ದತ್ತಪೀಠ ವಿವಾದ ಸೃಷ್ಟಿಯಾಗಿರುವುದು ರಾಹುಲ್ ಗಾಂಧಿ ಅವರ ಯಾತ್ರೆ ಮೇಲೆ ಪ್ರತೀಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ. ಕರಸೇವಕರ ಬಂಧನ ವಿವಾದವನ್ನು ಈಗಾಗಲೇ ರಾಷ್ಟ್ರ ಮಟ್ಟದಲ್ಲಿ ಕೈಗೆತ್ತಿಕೊಂಡಿರುವ ಬಿಜೆಪಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಉತ್ತರ ಭಾರತ ರಾಜ್ಯಗಳಲ್ಲೂ ಇದೇ ಪರಿಸ್ಥಿತಿ ನಿರ್ಮಾಣವಾಗ ಬಹುದು ಎಂಬುದನ್ನು ಬಿಂಬಿಸಲು ಪ್ರಯತ್ನಿಸುವುದು ಖಚಿತ. ಹೀಗಾಗಿ ಕರ್ನಾಟಕದ ಎರಡು ವಿವಾದಗಳು ರಾಜ್ಯಕ್ಕಿಂತ ಉತ್ತರ ಭಾರತದಲ್ಲೇ ಕಾಂಗ್ರೆಸ್‌ಗೆ ಹೆಚ್ಚು ಅಪಾಯಕಾರಿಯಾಗುವುದರಲ್ಲಿ ಸಂಶಯವಿಲ್ಲ.

ಲಾಸ್ಟ್ ಸಿಪ್: ಎದುರಿಸಲು ಶಕ್ತಿಯಿಲ್ಲದ ವಿರೋಧಿಗಳ ಕೈಗೆ ಕೋಲು ಕೊಟ್ಟು ಪೆಟ್ಟು ತಿನ್ನುವುದದನ್ನು ಕಾಂಗ್ರೆಸ್ಸನ್ನು ನೋಡಿ ಕಲಿಯಬೇಕು.

Leave a Reply

Your email address will not be published. Required fields are marked *

error: Content is protected !!