Saturday, 7th September 2024

ಕಾಡುವ ಕಾರ್ಗಿಲ್ ಸಂಘರ್ಷದ ಹಸಿಹಸಿ ನೆನಪು

ತನ್ನಿಮಿತ್ತ

ಬೈಂದೂರು ಚಂದ್ರಶೇಖರ ನಾವಡ

೧೯೯೯ ರಲ್ಲಿ ಕಾರ್ಗಿಲ್‌ನಿಂದ ಶತ್ರುಗಳನ್ನು ಹೊರಹಾಕುವ ಸೀಮಿತ ಪ್ರಮಾಣದಲ್ಲಿ ನಡೆದ ಕಾರ್ಯಾಚರಣೆ ಅಪರೇಶನ್ ವಿಜಯ್‌ಗೆ ಈ ತಿಂಗಳು ೨೫ ವರ್ಷ ಪೂರ್ತಿಯಾಗಲಿದೆ. ಅಪರೇಶನ್ ವಿಜಯ್ ಪೂರ್ಣಪ್ರಮಾಣದ ಯುದ್ಧವಲ್ಲವಾದರೂ ಅದರ ಪರಿಣಾಮ ತುಂಬಾ ವ್ಯಾಪಕವಾಗಿತ್ತು. ಅದು ಕೇವಲ ಕಾರ್ಗಿಲ್ ಸೆಕ್ಟರಿಗೆ ಮಾತ್ರ ಸೀಮಿತವಾದ ಸಂಘರ್ಷವಾಗಿರಲಿಲ್ಲ. ಎರಡು ಪರಮಾಣು ಸಂಪನ್ನ ರಾಷ್ಟ್ರಗಳ ನಡುವಿನ ಸಂಘರ್ಷವಾದದ್ದರಿಂದ ವಿಶ್ವಸಮುದಾಯವೂ ಕೂಡಾ ಚಿಂತಿತವಾಗಿತ್ತು. ಸಂಪೂರ್ಣ ನಿಯಂತ್ರಣರೇಖೆ ಪ್ರಕ್ಷುಬ್ಧವಾಗಿತ್ತು.

ಭಾರತೀಯ ಸೇನೆ ನಿಯಂತ್ರಣ ರೇಖೆಯಲ್ಲಿ ಸನ್ನದ್ಧ ಸ್ಥಿತಿಯಲ್ಲಿತ್ತು. ಸರಕಾರ ಸೇನೆಗೆ ಗಡಿ ದಾಟದೇ ಶತ್ರುಗಳನ್ನು ಹೊರದಬ್ಬುವ ಆದೇಶ ನೀಡಿತ್ತು. ಆದರೂ ಸಂಘರ್ಷ ಯಾವುದೇ ಕ್ಷಣದಲ್ಲೂ ಪೂರ್ಣಪ್ರಮಾಣದ ಯುದ್ಧದಲ್ಲಿ ಪರಿವರ್ತನೆಯಾಗುವ ಸಾಧ್ಯತೆಯೂ ಇತ್ತು. ಸ್ಥಿತಿ ಸ್ಫೋಟಕ ಎನ್ನುವಂತಿತ್ತು. ಜಮ್ಮು ಡಿವಿಜನ್ನಿನ ಪಲ್ಲನವಾಲಾ ಸೆಕ್ಟರಿನ ನಿಯಂತ್ರಣ ರೇಖೆಯಲ್ಲಿ ನಿಯೋಜನೆಗೊಂಡ ಮಹಾರ್ ರೆಜಿಮೆಂಟಿನ ೧೯ನೇ ಬಟಾಲಿಯನ್‌ನಲ್ಲಿ ಸೇವೆಯಲ್ಲಿದ್ದ ನನಗೆ ಆ ದಿನಗಳ ನೆನಪು ಇನ್ನೂ ಮನದಲ್ಲಿ ಹಚ್ಚ ಹಸುರಾಗಿಯೇ ಇದೆ. ಕಾಶ್ಮೀರ ಕಣಿವೆಯಂತಲ್ಲದೇ ಬಯಲು ಪ್ರದೇಶವಾಗಿದ್ದ ಪಲ್ಲನವಾಲದ ಜನರು ಕೃಷಿಯಲ್ಲೂ ಮತ್ತು ಸೇನೆಯಲ್ಲೂ ತೊಡಗಿಸಿಕೊಂಡಿದ್ದರು. ಸುಖ-ಶಾಂತಿಯುತ ಹಾಗೂ ಸಮೃದ್ಧ ಬದುಕನ್ನು ಕಟ್ಟಿಕೊಂಡಿದ್ದರು. ಜನರಿಂದ ಸದಾ ಗಿಜಿಗುಡುತ್ತಿದ್ದ ಪಲ್ಲನವಾಲಾ ಟೌನ್ ಉಭಯ ದೇಶಗಳ ನಡುವಿನ ಸಂಘರ್ಷದ ಬಿಸಿ ಹೆಚ್ಚುತ್ತಿದ್ದಂತೆ ನಿರ್ಜನವಾಗಿತ್ತು. ನಿಯಂತ್ರಣ ರೇಖೆಯಿಂದ ಕೆಲವೇ ಕಿ.ಮೀ. ಸಮೀಪದ ನಗರದ
ಅಂಗಡಿ-ಮುಂಗಟ್ಟು, ಜನವಸತಿ ಪ್ರದೇಶದ ಮೇಲೆ ಮೇ ತಿಂಗಳ ಎರಡು-ಮೂರನೇ ವಾರದಲ್ಲಿ ಪಾಕಿಸ್ತಾನದ ಶೆಲ್ ದಾಳಿ ಹೆಚ್ಚುತ್ತಿದ್ದಂತೆ ಸುರಕ್ಷಿತ ಸ್ಥಾನಗಳಿಗೆ ಜನರು ಗುಳೇ ಹೋಗಬೇಕಾಯಿತು. ಅಖ್ನೂರ್‌ನಿಂದ ಪಲ್ಲ ವಾಲಾ ತಲುಪಬೇಕಾದರೆ ಮಧ್ಯದಲ್ಲಿ ಸಿಗುವ ಜೋಡಿಯಾ ಟೌನ್ ಜನರೂ ಸಹಾ ತಮ್ಮ ತಮ್ಮ
ಮನೆಗಳನ್ನು ಖಾಲಿ ಮಾಡಬೇಕಾಯಿತು.

ರೈತಾಪಿ ವರ್ಗದ ಪಡಿಪಾಟಲು
ನಿಯಂತ್ರಣ ರೇಖೆಯಿಂದ ೨-೩ ಕಿ.ಮೀ. ಹಿಂದೆಯೇ ಸೈನಿಕ ಚೆಕ್‌ಪೋಸ್ಟ್ ಇರುತ್ತಿದ್ದವು. ಅಲ್ಲಿಂದ ಮುಂದಕ್ಕೆ ತಮ್ಮ ಹೊಲಗದ್ದೆಗಳಲ್ಲಿ ಕೆಲಸ ಮಾಡುವ ರೈತಾಪಿ
ವರ್ಗಕ್ಕೆ ಹಗಲಲ್ಲಿ ಸೇನೆಯ ವತಿಯಿಂದ ವಿತರಿಸಲಾದ ಪಾಸ್ ತೋರಿಸಿ ಹೋಗಲು ಅನುಮತಿ ಇತ್ತು. ೧೯೭೧ರ ಯುದ್ಧದಲ್ಲಿ ನಿಯಂತ್ರಣ ರೇಖೆಯಿಂದ ೩೦ ಕೀಮೀ ದೂರದವರೆಗೂ ನುಗ್ಗಿದ್ದ ಪಾಕಿಸ್ತಾನೀಯರ ಅಟ್ಟಹಾಸವನ್ನು ಕಂಡು ಕೇಳಿದ್ದ ವೃದ್ಧರ ಬಾಯಿಯಿಂದ ಭಯವಾಹಕ ನೆನಪಿನ ಸುರುಳಿಯನ್ನು ಕೇಳುತ್ತಿದ್ದ ಯುವಕರು ಇನ್ನಷ್ಟು ಗಾಭರಿಗೊಳ್ಳುತ್ತಿದ್ದರು. ಸುಮಾರು ಮೂರೂವರೆ ದಶಕಗಳಿಂದ ಶಾಂತ ಗಡಿಯನ್ನು ಕಂಡು ಬೆಳೆದು ದೊಡ್ಡವರಾಗಿದ್ದ ಯುವ ಪೀಳಿಗೆ ಯುದ್ಧದ ಕಾರ್ಮೋಡ ಕಂಡು ಕಂಗಾಲಾಗಿದ್ದರು. ಹಳ್ಳಿಗೆ ಹಳ್ಳಿಯೇ ಖಾಲಿಯಾಗಿದ್ದವು. ಜಾನುವಾರುಗಳು ಅನಾಥವಾಗಿದ್ದವು.

ಪಾಕಿಸ್ತಾನದ ಕಡೆಯಿಂದ ನಡೆಯುವ ಮೋರ್ಟಾರ್ ಫೈಯರ್‌ಗೆ ಹೊಲಗದ್ದೆಗಳಲ್ಲಿ ಕೆಲಸ ಮಾಡುವ ವೃದ್ಧರು, ಮಹಿಳೆಯರು, ಮಕ್ಕಳು, ಜಾನುವಾರುಗಳು
ಬಲಿಯಾಗುತ್ತಿದ್ದ ಹೃದಯ ವಿದ್ರಾವಕ ಘಟನೆಗಳು ನಿತ್ಯ ಎಂಬಂತೆ ಘಟಿಸುತ್ತಿದ್ದವು. ಸುಂದರ ಆಶಿಯಾನವನ್ನು ಕಟ್ಟಿಕೊಂಡು ನೆಮ್ಮದಿಯಿಂದ ಜೀವನ ಕಳೆಯುತ್ತಿದ್ದವರಿಗೆ ಒಮ್ಮೆಗೇ ಯುದ್ಧದ ಕಾರ್ಮೋಡ ಕವಿದಾಗ ಸಹಜವಾಗಿಯೇ ಜೀವನ ನರಕಸದೃಶವಾಗಿತ್ತು.

ದೂರದ ಕಾರ್ಗಿಲ್‌ನಲ್ಲಿ ನಡೆಯುತ್ತಿದ್ದ ಸೈನಿಕ ಸಂಘರ್ಷ ಗಡಿಯುದ್ದಕ್ಕೂ ವಾತಾವರಣ ಉದ್ವಿಗ್ನವಾಗಿಸಿತ್ತು. ಸಂಪೂರ್ಣ ನಿಯಂತ್ರಣ ರೇಖೆ ಎರಡೂ ಕಡೆಯಿಂದ
ನಡೆಯುತ್ತಿದ್ದ ಫೈಯರಿಂಗ್‌ನಿಂದ ಸಕ್ರಿಯವಾಗಿತ್ತು. ಜೀರೋ ಲೈನ್‌ನಲ್ಲಿ ನಿಯೋಜನೆಗೊಂಡಿದ್ದ ಯೋಧರು ಪೋಸ್ಟ್‌ಗಳಲ್ಲಿ ಎರಡೆರಡು ಗಂಟೆಗಳಿಗೊಮ್ಮೆ ಪಾಳಿ ಬದಲಿ ಮಾಡಿಕೊಳ್ಳುತ್ತಾ ಶತ್ರುಗಳ ಕಡೆಯಲ್ಲಿ ನಡೆಯುತ್ತಿದ್ದ ಚಟುವಟಿಕೆಗಳ ಮೇಲೆ ಕಣ್ಣಿಟ್ಟಿರುತ್ತಿದ್ದರು. ಸಣ್ಣ ರೈಫಲ್‌ಗಳ ಫೈಯರ್ ನಿರಂತರ ಎಂಬಂತೆ ನಡೆಯುತ್ತಿತ್ತು. ಚಂದ್ರನ ಬೆಳಕಿಲ್ಲದ ದಿನಗಳಲ್ಲಿ ರಾತ್ರಿಯ ಕಾರಿರುಳಿನಲ್ಲಿ ಪ್ಯಾರಾ ಫೈಯರ್ ಮಾಡಲಾಗುತ್ತಿತ್ತು. ಆಗಸದ ಎತ್ತರದಲ್ಲಿ ಒಂದೆರಡು ನಿಮಿಷಗಳ ಕಾಲ ಹೊತ್ತಿ ಉರಿಯುತ್ತಿದ್ದ ಪ್ಯಾರಾ ಫೈಯರ್‌ನಿಂದ ಸುತ್ತಲ ದೃಶ್ಯ ಸ್ಪಷ್ಟವಾಗಿ ಕಾಣುತ್ತಿತ್ತು.

ದೂರದವರೆಗೆ ದೃಷ್ಟಿ ಹಾಯಿಸಿ ವೈರಿಗಳು ಇಲ್ಲವೆಂದು ಖಚಿತವಾದಾಗ ನಿರಾಳವೆನಿಸುತ್ತಿತ್ತು. ಜೀರೋ ಲೈನ್‌ನಲ್ಲಿ ತೈನಾತಾದ ಸೈನಿಕರಿಗೆ ಮದ್ದುಗುಂಡುಗಳು ಮತ್ತು ಆಹಾರ ತಲುಪಿಸಲು ಆಳೆತ್ತರದ ಕುಣಿ ತೋಡಿ ದಾರಿ ಮಾಡಲಾಗಿತ್ತು.

ಬದಲಾದ ಸೈನಿಕರ ದಿನಚರಿ
ಕಾರ್ಗಿಲ್‌ನಲ್ಲಿ ಸಂಘರ್ಷದ ಕಾವೇರಿದಂತೆ ಯೋಧರ ದಿನನಿತ್ಯದ ಚಟುವಟಿಕೆಗಳ ಮೇಲೆ ಅದು ತನ್ನ ಪ್ರಭಾವ ಬೀರಿತು. ಪಾಕಿಸ್ತಾನೀಯರಿಗೆ ನಾವು ಹಾಗೂ ನಮಗೆ ಅವರು ಅಸ್ಪಷ್ಟವಾಗಿಯಾದರೂ ಸರಿ ಕಾಣುವಷ್ಟು ಸನಿಹದಲ್ಲಿದ್ದರಿಂದ ಉಭಯತ್ರರು ಪರಸ್ಪರರ ಚಲನವಲನ ವೀಕ್ಷಿಸಬಹುದಾಗಿತ್ತು. ಶಾಂತಿ ಕಾಲದಲ್ಲಿ ಪರಸ್ಪರರು ದೂರದಲ್ಲೇ ಶಿಷ್ಟಾಚಾರಗಳಿಂದ ವಂದನೆ ಪ್ರತಿವಂದನೆ ಮಾಡಿಕೊಳ್ಳುವ ಸ್ನೇಹಮಯ ವಾತಾವರಣ ಅಲ್ಲಿತ್ತು. ಆಗಾಗ ಅಲ್ಲಲ್ಲಿ ಭಾರತ-ಪಾಕ್ ಲೋಕಲ್ ಕಮಾಂಡರ್‌ಗಳ ಕೋರಿಕೆಯ ಮೇರೆಗೆ ನಡೆಯುತ್ತಿದ್ದ -ಗ್ ಮೀಟಿಂಗ್ ಗಳಲ್ಲಿ ಒಂದೆಡೆ ಸೇರುವ, ಪರಸ್ಪರರು ಮಾತನಾಡುವ ಅವಕಾಶ ದೊರೆಯುತ್ತಿದ್ದವು. ಆದರೆ ಕಾರ್ಗಿಲ್ ಕದನದ ಕಾವೇರುತ್ತಿದ್ದಂತೆ ಉಭಯ ಸೈನಿಕರು ಪರಸ್ಪರರ ರಕ್ತಪಿಪಾಸುಗಳಾದಂತೆ ಅಲ್ಲಿನ ಪರಿದೃಶ್ಯ ಸಂಪೂರ್ಣ
ಬದಲಾಯಿತು.

ದಿನದಲ್ಲೂ ನಡೆಯುತ್ತಿದ್ದ ಫೈಯರಿಂಗ್‌ನಿಂದಾಗಿ ನಮ್ಮ ಚಲನೆಗಳಿಗೆ ಬ್ರೇಕ್ ಬಿದ್ದವು. ಬೆಳಿಗ್ಗೆಯೇ ಪೂರ್ಣ ದಿನಕ್ಕಾಗುವಷ್ಟು ಕಿಚಡಿ ಅಥವಾ ಪೂರಿ ಪಲ್ಯ ನೀಡಲಾಗುತ್ತಿತ್ತು. ಇನ್ನು ರಾತ್ರಿ ಬಂಕರ್‌ಗಳಲ್ಲಿ ಬೂಟು ತೊಟ್ಟು, ಮಗ್ಗುಲಲ್ಲಿ ಹೆಲ್ಮೆಟ್, ಮ್ಯಾಗಜಿನ್ ಲೋಡ್ ಮಾಡಿರುವ ಬಂದೂಕು ಇಟ್ಟುಕೊಂಡೇ ಮಲಗಬೇಕಾದ ಸ್ಥಿತಿ ಇತ್ತು. ರಾತ್ರಿಯಿಡೀ ಆಗಾಗ್ಗೆ ನಡೆಯುತ್ತಿದ್ದ ಲೈಟ್ ಮೆಶೀನ್ ಗನ್ ಫೈಯರಿಂಗ್ ಯೋಧರಿಗೆ ಶತ್ರು ತನ್ನ ಪೋಸ್ಟ್‌ನಲ್ಲೇ ಇರುವ
ಹಾಗೂ ತಮ್ಮೆಡೆಗೆ ಬರುತ್ತಿಲ್ಲದರ ಖಾತರಿ ನೀಡುವಂತಿರುತ್ತಿತ್ತು. ವೈರಿಗಳ ಪೋಸ್ಟ್ ಕಡೆಯಿಂದ ಫೈಯರಿಂಗ್ ನಿಂತರೆ ಅವರೆಲ್ಲಿ ತಮ್ಮೆಡೆಗೆ ಬರುತ್ತಿರುವರೋ ಎನ್ನುವ ಸಂಶಯ ಕಾಡುವ ಸ್ಥಿತಿ ಇತ್ತು.

ಸೆಕ್ಟರ್‌ನ ಎಲ್ಲೋ ನಡೆಯುವ ರೈಡ್‌ಗಳ ಪ್ರತೀಕಾರ ಇನ್ನೆಲ್ಲೋ ತೆಗೆದುಕೊಳ್ಳುವ ಅಪನಂಬಿಕೆಯ ವಾತಾವರಣದಿಂದಾಗಿ ಯೋಧರ ಮಾನಸಿಕ ಶಾಂತಿ
ಕಾಣೆಯಾಗಿತ್ತು. ಯಾವ ಸಮಯದಲ್ಲಿ ಏನಾಗುವುದೋ ಎನ್ನುವ ಚಿಂತೆ ಕಾಡುತ್ತಿತ್ತು.

ನಾಗರಿಕರ ಬವಣೆ

ಅಪರೇಶನ್ ವಿಜಯದ ಕರಾಳ ಅನುಭವ ಆ ಸಮಯದಲ್ಲಿ ಲೈನ್ ಆಫ್ ಕಂಟ್ರೋಲ್‌ನಲ್ಲಿ ತೈನಾತಾದ ಸಕ್ರಿಯ ಫೀಲ್ಡ್ ಬಟಾಲಿಯನ್‌ಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಎಲ್ಲರ ಬಳಿಯೂ ಇರಬಹುದು. ಈಗಿನಂತೆ ಆಗಿನ್ನೂ ಮೊಬೈಲ್ ಕ್ರಾಂತಿ ಆಗಿಲ್ಲವಾದದ್ದರಿಂದ ಸಂಪರ್ಕ ಕೊರತೆಯಿಂದಾಗಿ ಸೈನಿಕರ ಜತೆಯಲ್ಲಿ ಅವರ ಕುಟುಂಬಸ್ಥರೂ ಮಾನಸಿಕವಾಗಿ ಬಳಲಬೇಕಾಯಿತು. ಸೋಲಿನ ಹತಾಶೆಯ ಪರಿಣಾಮವಾಗಿ ಪಾಕಿಸ್ತಾನದ ಕಡೆಯಿಂದ ಪರಮಾಣು ಅಸ್ತ್ರ ಪ್ರಯೋಗವಾದರೆ
ಎನ್ನುವ ಭಯ ನಾಗರಿಕರನ್ನು ಕಾಡಿತ್ತು. ಸುಖ ಸಮೃದ್ಧಿಯಿಂದ ಜನರಿಂದ ತುಂಬಿ ಮೆರೆಯುತ್ತಿದ್ದ, ಕಿಲ ಕಿಲ ನಗುತ್ತಿದ್ದ ಪಲ್ಲನವಾಲಾ ದಂತಹ ಗಡಿಯಂಚಿನ ಪಟ್ಟಣಗಳು ಬಿಕೋ ಎನ್ನುತ್ತಿತ್ತು. ತಮ್ಮ ಜನ್ಮ ಭೂಮಿಯನ್ನು ತೊರೆದು ನಿರಾಶ್ರಿತರಂತೆ ಬದುಕಬೇಕಾದ ಸಾಮಾನ್ಯ ಜನರ ಮಾನಸಿಕ ಸ್ಥಿತಿ ಹೇಗಿರಬಹುದು? ಊಹಿಸಿಕೊಳ್ಳುವುದು ಸಹ ಕಠಿಣ.

ಮಾನವ ಇತಿಹಾಸದಲ್ಲಿ ನಡೆದ ಅಸಂಖ್ಯ ಯುದ್ಧಗಳ ಭೀಕರ ಪರಿಣಾಮವನ್ನು ಕೇವಲ ಇತಿಹಾಸದ ಪುಸ್ತಕಗಳಲ್ಲಿ ಓದಿ ತಿಳಿದ ಜನರಿಗೆ ಗಡಿಯಲ್ಲಿ ಪಹರೆಗೆ ನಿಂತ ಯೋಧರ, ನೆಲೆಸಿದ ನಾಗರಿಕರ ಬವಣೆ ಕಟ್ಟು ಕಥೆಯಾಗಿ ಕಾಣಬಹುದು. ಗಡಿ ಘರ್ಷಣೆಯಿಂದ ಸಾವಿರಾರು ಮೈಲು ದೂರದಲ್ಲಿ ಹಾಯಾಗಿ ತಿಂದುಡು ಸುಖವಾಗಿ ನಿದ್ದೆ ಸವಿಯುವವರು ಪಾಕಿಸ್ತಾನಕ್ಕೆ ತಕ್ಕ ಬುದ್ಧಿ ಕಲಿಸಿ ಎಂದು ಘೋಷಣೆ ಕೂಗಬಲ್ಲರು. ಸೇನೆಯನ್ನು ತರತರವಾಗಿ ನಿಂದಿಸಬಲ್ಲರು. ಗಡಿಯಲ್ಲಿ ಕರ್ತವ್ಯ ನಿರತ ಯೋಧರ, ಹಲವಾರು ತಲೆಮಾರುಗಳಿಂದ ಅಲ್ಲಿ ನೆಲೆಸಿರುವ ನಾಗರಿಕರ ಕಠಿಣ ಬದುಕಿನ ಬವಣೆಯ ಯತಾರ್ಥತೆಯ ಅನುಭವ ಅವರಿಗಾಗುವುದು ಸಾಧ್ಯವೇ?

(ಲೇಖಕರು: ಮಾಜಿ ಸೈನಿಕರು ಹಾಗೂ ಹವ್ಯಾಸಿ
ಬರಹಗಾರರು)

Leave a Reply

Your email address will not be published. Required fields are marked *

error: Content is protected !!