ತಿಳಿರುತೋರಣ
ಶ್ರೀವತ್ಸ ಜೋಶಿ
srivathsajoshi@yahoo.com
ಪ್ರಪಂಚದ ಜನಸಂಖ್ಯೆ ಹತ್ತಿರಹತ್ತಿರ 800 ಕೋಟಿಯಷ್ಟು. ಅಷ್ಟೊಂದು ಸಂಖ್ಯೆಯಲ್ಲಿರುವ ಪ್ರಪಂಚಪ್ರಜೆಗಳನ್ನೆಲ್ಲ ನಮ್ಮ ಪರಿಚಯ ವ್ಯಾಪ್ತಿಯೊಳಗೆ ತರಲಿಕ್ಕೆ ಮೇಲೆ ವಿವರಿಸಿದಂತೆ ಎಷ್ಟು ಹಂತಗಳು ಅಥವಾ ಕೊಂಡಿಗಳು ಬೇಕಾದೀತು ಎಂದು ಬಹುಶಃ ನೀವೀಗ ಯೋಚಿಸತೊಡಗಿರಬಹುದು. ಹೆಚ್ಚೆಂದರೆ ಆರು ಕೊಂಡಿಗಳು ಸಾಕು ಎಂದರೆ ಅದನ್ನು ನಂಬಲಾಗದಷ್ಟು ಆಶ್ಚರ್ಯ ನಿಮಗಾಗಬಹುದು
ಅಸ್ಮಾಕಂ ಬದರೀಚಕ್ರಂ ಯುಷ್ಮಾಕಂ ಬದರೀತರುಃ|
ಬಾದರಾಯಣ ಸಂಬಂಧಾದ್ಯೂಯಂ ಯೂಯಂ
ವಯಂ ವಯಮ್||’
ಅಂತೊಂದು ತಮಾಷೆಯ ಶ್ಲೋಕವಿದೆ. ಅದಕ್ಕೊಂದು ಕಥೆಯೂ ಇದೆ: ಒಬ್ಬ ಜಿಪುಣಾ ಗ್ರೇಸರ ವ್ಯಕ್ತಿಯು ಒಮ್ಮೆ ಎತ್ತಿನ ಬಂಡಿಯಲ್ಲಿ ಪ್ರಯಾಣಿಸುತ್ತಿದ್ದನು. ಊಟದ ಸಮಯ ವಾಯಿತೆಂದು ಹಳ್ಳಿಯೊಂದನ್ನು ಪ್ರವೇಶಿಸಿದನು. ಆ ಊರಿನಲ್ಲಿ ಅವನಿಗೆ ಪರಿಚಿತ ರಾರೂ ಇರಲಿಲ್ಲ. ಆದರೂ, ನೋಡುವಾ ಯಾರಾದರೂ ಊಟ ಬಡಿಸಿಯಾರು ಎಂದುಕೊಂಡು ಒಂದು ಮನೆಯನ್ನು ಹೊಕ್ಕನು. ಮನೆಯ ಒಳಗೆ ಕಾಲಿಟ್ಟ ಕೂಡಲೇ ಆ ಮನೆಯ ಸದಸ್ಯರೊಂದಿಗೆ ತುಂಬ ಸಲಿಗೆಯಿಂದ ಮಾತನಾಡಲು ತೊಡಗಿದನು. ಆ ಮನೆಯ ಯಜಮಾನನೂ ಇವನೊಂದಿಗೆ ಪರಿಚಿತನಂತೆಯೇ ವ್ಯವಹರಿಸುವುದು ಅನಿವಾರ್ಯವಾಯಿತು.
ಮನೆಯ ಒಡತಿ ಅತಿಥಿಯನ್ನು ಊಟಕ್ಕೆ ಎಬ್ಬಿಸಿದಳು. ಅಪರಿಚಿತ ವ್ಯಕ್ತಿಯ ಉದ್ದೇಶಿತ ಕೆಲಸ ಯಶಸ್ವಿಯಾಗಿ ನಡೆಯಿತು! ಕೊನೆಗೆ ಮನೆಯಿಂದ ಅವನು ಹೊರಡುವಾಗ ಮನೆಯ ಯಜಮಾನ ಸ್ವಲ್ಪ ಅಳುಕಿನಿಂದಲೇ ಕೇಳಿದನು. ‘ಕ್ಷಮಿಸಬೇಕು. ತಾವು ಯಾರೆಂದು ನೆನಪಾಗುತ್ತಿಲ್ಲ. ನಿಮ್ಮ ವರ್ತನೆಯಿಂದ ನೀವು ನನ್ನ ನೆಂಟರಿರಬಹುದು ಎನಿಸುತ್ತಿದೆಯಾದರೂ, ಅದು ಹೇಗೆ ಎಂದು ಗೊತ್ತಾಗುತ್ತಿಲ್ಲ. ದಯವಿಟ್ಟು ನೀವು ನಮಗೆ ಹೇಗೆ ನೆಂಟರಾಗುತ್ತೀರೆಂದು ಹೇಳುವಿರಾ?’ ಜಿಪುಣಾಗ್ರೇಸರ ಆ ಪ್ರಶ್ನೆಯನ್ನು ನಿರೀಕ್ಷಿಸಿಯೇ ಇದ್ದನು; ಆದ್ದರಿಂದಲೇ ಉತ್ತರವನ್ನೂ ಸಿದ್ಧವಾಗಿಟ್ಟುಕೊಂಡಿದ್ದನು.
ಆ ಮನೆಯ ಮುಂದೆ ಒಂದು ಬದರೀ ವೃಕ್ಷ (ಬೋರೆ ಮರ) ಇತ್ತು. ಆ ಮರವನ್ನು ತೋರಿಸಿ ಆತನು ಯಜಮಾನನಿಗೆ ಶ್ಲೋಕರೂಪದ ಉತ್ತರ ಕೊಟ್ಟನು. ‘ನೋಡಿ, ನಾನು ಪ್ರಯಾಣಕ್ಕೆ ಉಪಯೋಗಿಸುವ ಬಂಡಿಯ ಚಕ್ರವು ಬೋರೆ ಮರದಿಂದ ಮಾಡಿದ್ದು. ನಿಮ್ಮ ಮನೆಯ ಮುಂದೆಯೂ ಒಂದು ಬೋರೆ ಮರ ಉಂಟು! ಹೀಗಾಗಿ ಬೋರೆ ಮರವೇ ನಮಗಿಬ್ಬರಿಗೂ ಸಾಮಾನ್ಯ ಅಂಶ. ಬದರೀವೃಕ್ಷದಿಂದಾಗಿ ನಮಗೂ ನಿಮಗೂ ಬಾದಾರಯಣ ಸಂಬಂಧ. ನೀವು-ನಾವು, ನಾವು-ನೀವು.’ ಇಷ್ಟನ್ನು ಹೇಳಿ ಆ ಅಪರಿಚಿತನು ನಗುತ್ತ ಎತ್ತಿನ ಬಂಡಿ ಯನ್ನೇರಿ ಹೊರಟನು. ಮನೆಯ ಯಜಮಾನ ಅವನನ್ನು ಬೆರಗಿನಿಂದ ನೋಡುತ್ತಲೇ ನಿಂತನು.
ಏನೂ ಸಂಬಂಧವಿಲ್ಲದಿದ್ದರೂ ಹೇಗ್ಹೇಗೋ ಸಂಬಂಧವಿದೆಯೆಂದು ಸ್ಥಾಪಿಸುವ ಸರ್ಕಸ್ಸಿಗೆ ಬಾದರಾಯಣ ಸಂಬಂಧ ಎನ್ನುತ್ತೇವೆ. ‘ಗೋಕುಲಾಷ್ಟಮಿಗೂ ಇಮಾಂ ಸಾಬಿಗೂ ಏನು ಸಂಬಂಧ?’ ಎಂದು ಕೇಳಿದರೆ, ಗೋಕುಲಾಷ್ಟಮಿಯಂದು ಮಕ್ಕಳಿಗೆ ಕೃಷ್ಣನ ವೇಷ ತೊಡಿಸುವ ಸ್ಪರ್ಧೆಗಳಲ್ಲಿ ಮುಸ್ಲಿಂ ತಾಯಿಯಂದಿರೂ ತಮ್ಮತಮ್ಮ ಮುದ್ದಿನ ಕೂಸಿಗೆ (ಕೂಸುಗಳಿಗೆ ಎಂದರೆ ಹೆಚ್ಚು ಸರಿ) ಕೃಷ್ಣನ ವೇಷ ತೊಡಿಸುತ್ತಾರಲ್ಲ, ಅದೇ ಸಂಬಂಧ!
‘ಒಂದೇ ಯಮನ ಸಂಬಂಧ’ ಎನ್ನುವುದೂ ಹೀಗೆಯೇ, ಸ್ವಲ್ಪ ಫಿಲಾಸಫಿಕಲ್ ಟಚ್‌ನೊಂದಿಗೆ. ಸತ್ತ ಮೇಲೆ ಕರೆದೊಯ್ಯುವ ಯಮ ಎಲ್ಲರಿಗೂ ಒಬ್ಬನೇ ತಾನೆ? ನಿಜವಾಗಿಯೂ ಸಂಬಂಧ ಇದೆಯೆಂದು ಅರಿವಾದಾಗ ಏನೋ ಒಂದು ಪುಳಕ. ‘ಸಂಬಂಜ ಅನ್ನೋದು ದೊಡ್ಡದು ಕನಾ…’ ಎಂಬ ಸಂಭ್ರಮ. ಸಂಬಂಧಕ್ಕಿಂತ ಹೆಚ್ಚು ಸಾಧ್ಯತೆ ಇರುವುದು ಪರಿಚಯದ್ದು. ಉದಾಹರಣೆಗೆ- ರಾಮಣ್ಣನಿಗೂ ರೆಹಮಾನನಿಗೂ ಯಾವ ಸಂಬಂಧವೂ ಇರಲಾರದು. ಆದರೆ ಅವರಿಬ್ಬರೂ ಪರಸ್ಪರ ಪರಿಚಿತರಾಗಿರಬಹುದು. ಚಡ್ಡಿದೋಸ್ತಿಗಳಾಗಿದ್ದ ಕಾಲದಿಂದಲೂ ಅವರಿಬ್ಬರೂ ಆತ್ಮೀಯ ಸ್ನೇಹಿತರೂ ಆಗಿರಬಹುದು.
ರಾಮಣ್ಣನಿಗೆ ಪರಿಚಯವಿರುವವರೆಲ್ಲರೂ ರಾಮಣ್ಣನ ಮೂಲಕ ರೆಹಮಾನನಿಗೆ ಪರಿಚಿತರಾಗುತ್ತಾರೆ. ಆ ಪರಿಚಯ-ಸರಪಳಿಯಲ್ಲಿ ರಾಮಣ್ಣನೇ ಕೊಂಡಿ. ಅಂತೆಯೇ ರೆಹಮಾನನಿಗೆ ಪರಿಚಯವಿರುವರೆಲ್ಲರೂ ಆತನ ಮೂಲಕ ರಾಮಣ್ಣನಿಗೆ ಪರಿಚಯವಾಗಬಹುದು. ಆ
ಪರಿಚಯ-ಸರಪಳಿಯಲ್ಲಿ ರೆಹಮಾನನೇ ಕೊಂಡಿ. ಇದನ್ನು ರಾಮಣ್ಣ-ರೆಹಮಾನರಿಂದ ಮುಂದುವರಿಸಿ ಪರಿಚಯ ಸರಪಳಿಯನ್ನು ಹೆಣೆಯುತ್ತ ಹೋದರೆ ಈ ಪ್ರಪಂಚದಲ್ಲಿ ಪ್ರತಿ ಯೊಬ್ಬರೂ ಪರಸ್ಪರ ಪರಿಚಿತರೇ ಎಂದು ಸಾಧಿಸಲಿಕ್ಕೂ ಆಗುತ್ತದೆ!
ಅದ್ಹೇಗ್ರೀ ಪ್ರಪಂಚದಲ್ಲಿರೋರೆಲ್ಲ ಪರಿಚಿತರಾಗ್ತಾರೆ? ನಮಗೆ ನಮ್ಮ ಅಪಾರ್ಟ್‌ಮೆಂಟ್ ಕಾಂಪ್ಲೆಕ್ಸ್‌ನಲ್ಲೇ ಅಥವಾ ನಮ್ಮ ಬೀದಿ
ಯಲ್ಲಿರುವ ಮನೆಗಳಲ್ಲೇ ಬಹಳಷ್ಟು ಮಂದಿಯ ಪರಿಚಯವಿರುವುದಿಲ್ಲ!’ ಎನ್ನಬಹುದು ಗಿಜಿಗುಟ್ಟುವ ನಗರಗಳಲ್ಲಿ ಗೂಡು ಕಟ್ಟಿಕೊಂಡಿ ರುವವರು. ಅದಕ್ಕಿಂತ ಹಳ್ಳಿಗರು ವಾಸಿ. ಸಣ್ಣಸಣ್ಣ ಹಳ್ಳಿಗಳಲ್ಲಿ ಸಾಮಾನ್ಯವಾಗಿ ಎಲ್ಲರಿಗೆ ಎಲ್ಲರ ಪರಿಚಯವಿರುತ್ತದೆ. ಅವರಿಗೆ ಹಳ್ಳಿಯೇ ಒಂದು ಪುಟ್ಟ ಪ್ರಪಂಚವಾಗಿದ್ದು ಬಾಹ್ಯ ಜಗತ್ತಿನ ಸಂಪರ್ಕ ಸಮಾಚಾರಗಳು ಕಡಿಮೆಯಿದ್ದರೂ ಹಳ್ಳಿಯ ವ್ಯಾಪ್ತಿ ಯೊಳಗೆ ಪರಸ್ಪರ ಪರಿಚಯ ಆತ್ಮೀಯತೆ ಅಧಿಕವಿರುತ್ತದೆ.
ಆ ಹಳ್ಳಿಯಿಂದ ಒಬ್ಬನೇ ಒಬ್ಬ ಹೊರರಾಜ್ಯಕ್ಕೋ ಹೊರದೇಶಕ್ಕೋ ಹೋದರೂ ಸಾಕು ಅವನಿಂದಾಗಿ ಆ ಹಳ್ಳಿಗರು ಪ್ರಪಂಚದಲ್ಲಿ
ಮತ್ತೊಂದಿಷ್ಟು ಜನರಿಗೆ ಪರಿಚಿತರಾಗುವ ಸಾಧ್ಯತೆ ಉಂಟಾಗುತ್ತದೆ. ಅದು ಯಾವಾಗಲೂ ಹಾಗೆಯೇ ಅಲ್ಲವೇ? ನಮಗೆ ಮುಖತಃ ಪರಿಚಯವಿರುವವರೊಡನೆ ನಮ್ಮದು ಮೊದಲ ಹಂತದ ಪರಿಚಯ. ನಮಗೆ ಮುಖತಃ ಪರಿಚಯವಿರುವವರಿಗೆ ನಾವಷ್ಟೇ ಅಲ್ಲದೆ ಬೇರೆ ಹಲವರೂ ಪರಿಚಿತರಿರುತ್ತಾರಲ್ಲ? ಅವರ ನ್ನೆಲ್ಲ ನಾವು ಎರಡನೆಯ ಹಂತದ ಪರಿಚಿತರು ಎಂದುಕೊಳ್ಳಬಹುದು.
ಕೆಲವೊಮ್ಮೆ ಅಂತಹವರು ಯಾರಾದರೂ ಯಾವುದೋ ಸಂದರ್ಭದಲ್ಲಿ ನಮಗೆ ಮುಖತಃ ಪರಿಚಯವಾಗಿ ‘ಓಹ್! ಇಟ್ಸ್ ಎ ಸ್ಮಾಲ್ ವರ್ಲ್ಡ್!’ ಎಂಬ ಉದ್ಗಾರ ಹೊರಡುವುದುಂಟು. ಹೀಗೆಯೇ ಪರಿಚಯದ ಹಂತಗಳನ್ನು ಹೆಚ್ಚಿಸುತ್ತ ಹೋದಂತೆಲ್ಲ ಹೆಚ್ಚುಹೆಚ್ಚು ಜನ ನಮ್ಮ ಪರಿಚಯ ವ್ಯಾಪ್ತಿಯೊಳಗೆ ಸೇರಿಕೊಳ್ಳುತ್ತಾರೆ. ಅದರಲ್ಲೂ ‘ಅವನಂತೂ ಒಳ್ಳೊಳ್ಳೇ ಕಾಂಟಾಕ್ಟ್ಸ್ ಇಟ್ಕೊಂಡಿದ್ದಾನೆ. ಎಲ್ಲ ಕಡೆಯೂ ಅವನಿಗೆ ಗುರ್ತಿನವರಿದ್ದಾರೆ…’ಯಂಥವರು ಸಿಕ್ಕಿದರೆ ಜಾಲವು ಕ್ಷಿಪ್ರವಾಗಿ ಬೆಳೆಯಬಹುದು.
ಒಂದು ನಿರ್ದಿಷ್ಟ ಘಟ್ಟದಲ್ಲಿ ಅದು ವಿಶ್ವವ್ಯಾಪಿಯೇ ಆಗಿಬಿಡಬಹುದು. ಈಗ ಪ್ರಪಂಚದ ಜನಸಂಖ್ಯೆ ಹತ್ತಿರಹತ್ತಿರ ೮೦೦ ಕೋಟಿಯಷ್ಟು. ೮ರ ಪಕ್ಕ ಒಂಬತ್ತು ಸೊನ್ನೆಗಳು. ಅಷ್ಟೊಂದು ಸಂಖ್ಯೆಯಲ್ಲಿರುವ ಪ್ರಪಂಚಪ್ರಜೆಗಳನ್ನೆಲ್ಲ ನಮ್ಮ ಪರಿಚಯವ್ಯಾಪ್ತಿಯೊಳಗೆ ತರಲಿಕ್ಕೆ ಮೇಲೆ ವಿವರಿಸಿದಂತೆ ಎಷ್ಟು ಹಂತಗಳು ಅಥವಾ ಕೊಂಡಿಗಳು ಬೇಕಾದೀತು ಎಂದು ಬಹುಶಃ ನೀವೀಗ ಯೋಚಿಸತೊಡಗಿರಬಹುದು. ಹೆಚ್ಚೆಂದರೆ ಆರು ಕೊಂಡಿಗಳು ಸಾಕು ಎಂದರೆ ಅದನ್ನು ನಂಬಲಾಗದಷ್ಟು ಆಶ್ಚರ್ಯವೂ ನಿಮಗಾಗಬಹುದು.
ಹೌದು, ಆರೇ ಆರು ಕೊಂಡಿಗಳಲ್ಲಿ ಪ್ರಪಂಚದ ಯಾವುದೇ ಇಬ್ಬರು ವ್ಯಕ್ತಿಗಳು ಪರಸ್ಪರ ಪರಿಚಿತರಾಗಿರುತ್ತಾರೆ ಎನ್ನುವ ಸಿದ್ಧಾಂತ ಅಥವಾ ಥಿಯರಿಯೊಂದಿದೆ. ಅದಕ್ಕೆ ‘ಸಿಕ್ಸ್ ಡಿಗ್ರೀಸ್ ಆಫ್ ಸೆಪರೇಷನ್’ ಎಂದು ಹೆಸರು. ಈ ಲೇಖನದ ಮಟ್ಟಿಗೆ ಅದಕ್ಕೊಂದು ಕನ್ನಡ ನಾಮಕರಣ ಮಾಡೋಣ ‘ಷಟ್ಪದ ಸಾಮೀಪ್ಯ’ ಎಂದು. ಕೋವಿಡಾಯನದಲ್ಲಿ ‘ಷಟ್ಪದ ದೂರ’ ನಮಗೆಲ್ಲ ಗೊತ್ತಾಗಿದೆ, ಸಾಧ್ಯವಾದಷ್ಟೂ ಮಟ್ಟಿಗೆ ಅದನ್ನು ನಾವೆಲ್ಲ ಪಾಲಿಸಿದ್ದೇವೆ ಕೂಡ. ಈಗ ಷಟ್ಪದ ಸಾಮೀಪ್ಯ ಏನೆಂದು ತಿಳಿದುಕೊಳ್ಳೋಣ.
ಈ ಸಿದ್ಧಾಂತವನ್ನು ಮೊತ್ತಮೊದಲಿಗೆ ಪ್ರತಿಪಾದಿಸಿದವನು ಹಂಗೇರಿ ದೇಶದ ಒಬ್ಬ ಬರಹಗಾರ ಫ್ರಿಗ್ಗಿಸ್ ಕೆರಿಂತಿ ಎಂಬುವವನು. 1929ರಲ್ಲಿ ಅವನು ಬರೆದ ‘ಚೈನ್ಸ್’ ಎಂಬ ಕಥೆಯಲ್ಲಿ, ಆರೇ ಆರು ಕೊಂಡಿಗಳ ಮಾನವ ಸರಪಳಿಯಿಂದ ಪ್ರಪಂಚದ ಯಾವಿಬ್ಬರು ವ್ಯಕ್ತಿಗಳನ್ನಾದರೂ ಜೋಡಿಸಬಹುದು ಎಂದಿದ್ದ ನಂತೆ. ಆಗ ಅದನ್ನು ಕಥೆಯೆಂದಷ್ಟೇ ನಂಬಲಾಗಿತ್ತು. 1950ರಲ್ಲಿ ಅಮೆರಿಕದ ಪ್ರಖ್ಯಾತ ಎಂಐಟಿ ವಿದ್ಯಾಸಂಸ್ಥೆಯ ಇಥಿಯೆಲ್ ಪೂಲ್ ಎಂಬ ವಿದ್ಯಾರ್ಥಿ ಮತ್ತು ಐಬಿಎಂ ಕಂಪನಿಯ ಉದ್ಯೋಗಿ ಮೆನ್‌ಫ್ರೆಡ್ ಕೊಚೆನ್ ಎಂಬುವವರು ಸೇರಿ ಈ ಸಿದ್ಧಾಂತವನ್ನು ಗಣಿತಸೂತ್ರದ ರೂಪದಲ್ಲಿ ಪ್ರಸ್ತುತಪಡಿಸುವುದಕ್ಕೆ ಮುಂದಾದರು.
ಗಣಗಳು ಮತ್ತು ಗಣಾಂಶಗಳು ಪದ್ಧತಿಯನ್ನು ಪಯೋಗಿಸಿ ಒಂದು ಸಮೀಕರಣವನ್ನು ರಚಿಸಿದರು. ಆದರೂ 20 ವರ್ಷಗಳ ಸತತ ಪ್ರಯತ್ನದ ನಂತರವೂ ಆ ಪ್ರಮೇಯವನ್ನು ಸಾಧಿಸಿ ತೋರಿಸುವುದು ಅವರಿಂದ ಸಾಧ್ಯವಾಗಲಿಲ್ಲ. 1967ರಲ್ಲಿ ಅಮೆರಿಕದ ಖ್ಯಾತ ಸಮಾಜಶಾಸ್ತ್ರಜ್ಞ ಸ್ಟಾನ್ಲಿ ಮಿಲ್‌ಗ್ರಾಂ ಎಂಬುವವನು ಈ ಸಿದ್ಧಾಂತದಲ್ಲಿ ಆಸಕ್ತನಾಗಿ ಇದನ್ನು ಪರೀಕ್ಷಿಸುವ ಒಂದು ಪ್ರಯೋಗವನ್ನು ರೂಪಿಸಿದನು. ಪ್ರಯೋಗ ಇಷ್ಟೇ- ಅಮೆರಿಕದ ಈಶಾನ್ಯ ಭಾಗದಲ್ಲಿರುವ ಮೆಸ್ಸಾಚ್ಯುಸೆಟ್ಸ್ ಸಂಸ್ಥಾನದ ಒಬ್ಬ ವ್ಯಕ್ತಿಯನ್ನು ಯಾದೃಚ್ಛಿಕ ವಾಗಿ ಸ್ಟಾನ್ಲಿ ಆಯ್ದುಕೊಂಡನು.
ಆ ವ್ಯಕ್ತಿಯ ಹೆಸರು, ವಯಸ್ಸು, ಮತ್ತು ವೃತ್ತಿ ಇವಿಷ್ಟೇ ವಿವರಗಳನ್ನು ಸಂಗ್ರಹಿಸಿದನು. ಹಾಗೆಯೇ ಅಮೆರಿಕದ ಮಧ್ಯಭಾಗದ ಸಂಸ್ಥಾನ ಗಳಾದ ಕ್ಯಾನ್ಸಸ್ ಮತ್ತು ನೆಬ್ರಾಸ್ಕಾಗಳ ಕೆಲವು ಜನಸಾಮಾನ್ಯರನ್ನು ಯಾದೃಚ್ಛಿಕವಾಗಿ ಆಯ್ದು ಅವರಿಗೆ ಈ ಮೆಸ್ಸಾಚ್ಯುಸೆಟ್ಸ್
ವ್ಯಕ್ತಿಯ ವಿವರಗಳನ್ನು ಮತ್ತು ಒಂದು ಪಾರ್ಸೆಲ್ ಅನ್ನು ಕೊಟ್ಟು ‘ನಿಮಗೆ ಪರಿಚಯವಿರುವವರ ಮೂಲಕ ನೀವಿದನ್ನು ಮೆಸ್ಸಾಚ್ಯುಸೆಟ್ಸ್ ವ್ಯಕ್ತಿಗೆ ಕಳುಹಿಸಬೇಕು’ ಎಂದು ಕೇಳಿಕೊಂಡನು.
ಸಾಕಷ್ಟು ಅಂಚೆಚೀಟಿಗಳನ್ನೂ ಜೊತೆಯಲ್ಲಿಟ್ಟಿರಬಹುದೆನ್ನಿ. ಇಲ್ಲವಾದರೆ ಅವನ ಹುಚ್ಚು ಪ್ರಯೋಗಕ್ಕೆ ಜನ ಯಾಕೆ ದುಡ್ಡು ಖರ್ಚು ಮಾಡಬೇಕು! ತಮ್ಮತಮ್ಮ ಪರಿಚಿತರ ಪೈಕಿ ಯಾರಿಗೆ ಆ ಮೆಸ್ಸಾಚ್ಯುಸೆಟ್ಸ್ ವ್ಯಕ್ತಿ ಗೊತ್ತಿರಬಹುದು ಅಥವಾ ಆತನ ಪರಿಚಯವಿರುವ ಬೇರಾರಾದರೂ ಗೊತ್ತಿರಬಹುದು ಎಂದು ಊಹಿಸಿ ಪ್ರಯೋಗಾರ್ಥಿಗಳು ಪಾರ್ಸೆಲ್ ರವಾನೆಗೆ ಚಾಲನೆ ಕೊಡಬೇಕು. ಪಾರ್ಸೆಲ್ ಸ್ವೀಕರಿಸಿದ ವ್ಯಕ್ತಿ ಅದನ್ನು ಮುಂದುವರಿಸಬೇಕು.
ಕೊನೆಗೆ ಅದು ಮೆಸ್ಸಾಚ್ಯುಸೆಟ್ಸ್ ವ್ಯಕ್ತಿಯನ್ನು ತಲುಪಬೇಕು. ಒಂದೊಂದು ಪಾರ್ಸೆಲ್ಲೂ ಮೆಸ್ಸಾಚ್ಯುಸೆಟ್ಸ್ ವ್ಯಕ್ತಿಯನ್ನು ತಲುಪುವುದಕ್ಕೆ ನೂರಾರು ಮಧ್ಯವರ್ತಿಗಳು ಬೇಕಾಗಬಹುದು ಎಂದುಕೊಂಡಿದ್ದ ಸ್ಟಾನ್ಲಿ, ಪಾರ್ಸೆಲ್ ರವಾನೆಯ ಅಂಕಿಅಂಶಗಳನ್ನು ಕ್ರೋಡೀಕರಿಸಿದಾಗ ಒಂದು ಅದ್ಭುತ ಫಲಿತಾಂಶ ಹೊರಗೆ ಬಿತ್ತು. ಮೆಸ್ಸಾಚ್ಯುಸೆಟ್ಸ್ ವ್ಯಕ್ತಿಯನ್ನು ತಲುಪಿದ ಪಾರ್ಸೆಲ್‌ಗಳೆಲ್ಲ ಐದರಿಂದ ಏಳರವರೆಗಷ್ಟೇ ಮಧ್ಯವರ್ತಿ ಹಂತಗಳನ್ನು ದಾಟಿ ಬಂದಿದ್ದುವು. ಅಂದರೆ ಮೆಸ್ಸಾಚ್ಯುಸೆಟ್ಸ್ ವ್ಯಕ್ತಿಯು ಅವರೆಲ್ಲರಿಗೂ ಸರಾಸರಿ ಆರು ಕೊಂಡಿಗಳಿಂದ ಪರಿಚಿತನಾದನು ಅಂತಾಯ್ತು!
ಇದರಿಂದ ಷಟ್ಪದ ಸಾಮೀಪ್ಯ ಸಿದ್ಧಾಂತದಲ್ಲಿ ಏನೋ ತಿರುಳಿರುವುದು ನಿಜ ಎಂದು ಸ್ಪಷ್ಟವಾಯಿತು. ಸ್ಟಾನ್ಲಿಯ ಪ್ರಯೋಗ- ಫಲಿತಾಂಶ ವಿವರಗಳು ‘ಸೈಕಾಲಜಿ ಟುಡೇ’ ಮ್ಯಾಗಜಿನ್‌ನಲ್ಲಿ ಪ್ರಕಟವಾದುವು. ಸಿಕ್ಸ್ ಡಿಗ್ರೀಸ್ ಆಫ್ ಸೆಪರೇಷನ್ ಪದ ಪುಂಜವು ಮಾಧ್ಯಮಗಳಲ್ಲೂ ಹೆಚ್ಚುಹೆಚ್ಚಾಗಿ ಉಲ್ಲೇಖಿಸಲ್ಪಟ್ಟಿತು. 1990ರಲ್ಲಿ ಇದೇ ಹೆಸರಿನ ಒಂದು ನಾಟಕ, ಆಮೇಲೊಂದು ಸಿನಿಮಾ ಸಹ ಬಂತು. ಇದೇ ಸಿದ್ಧಾಂತ ವನ್ನಾಧರಿಸಿ, ಹಾಲಿವುಡ್ ಚಿತ್ರಗಳಲ್ಲಿ ನಟಿಸಿರುವ ಯಾವುದೇ ಇಬ್ಬರು ನಟ- ನಟಿಯರನ್ನು ಅತಿ ಕಡಿಮೆ ಲಿಂಕ್‌ಗಳನ್ನುಪಯೋಗಿಸಿ ಕನೆಕ್ಟ್ ಮಾಡುವ ಆಟವೂ ಅತಿ ಜನಪ್ರಿಯವಾಯಿತು.
ಆದರೆ ಸ್ಟಾನ್ಲಿಯ ಪ್ರಯೋಗದಲ್ಲಿ ಮೆಸ್ಸಾಚ್ಯುಸೆಟ್ಸ್ ವ್ಯಕ್ತಿಯನ್ನು ತಲುಪದೇ ಇದ್ದ ಪಾರ್ಸೆಲ್‌ಗಳ ಸಂಖ್ಯೆಯೂ ಗಣನೀಯವಾಗಿಯೇ ಇತ್ತೆಂಬುದನ್ನು ಮರೆಯಬಾರದು. ಅಷ್ಟೇ ಅಲ್ಲದೆ ಕ್ಯಾನ್ಸಸ್ ಮತ್ತು ನೆಬ್ರಾಸ್ಕಾದ ಒಟ್ಟು 1000 ಮಂದಿಯನ್ನಷ್ಟೇ ಸ್ಟಾನ್ಲಿ ತನ್ನ ಪ್ರಯೋಗಕ್ಕೆ ಆಯ್ದುಕೊಂಡಿದ್ದನು, ಬರೀ ಸಾವಿರ ಸಂಖ್ಯೆಯ ಸ್ಯಾಂಪಲ್ ಸೈಜ್ ತುಂಬ ಸಣ್ಣದಾಯಿತು, ಆದ್ದರಿಂದ ಅದರ ಫಲಿತಾಂಶ ವನ್ನು ಸಾರ್ವತ್ರೀಕರಣ ಮಾಡಲಾಗದು ಎಂಬ ಟೀಕೆ ಸಹ ಕೇಳಿಬಂತು.
ಮುಂದೆ 2001ರಲ್ಲಿ ಕೊಲಂಬಿಯಾ ವಿಶ್ವವಿದ್ಯಾಲಯದ ಡಂಕನ್ ವಾಟ್ಸ್ ಎಂಬ ಪ್ರೊಫೆಸರನೂ ಷಟ್ಪದ ಸಾಮೀಪ್ಯ ಸಿದ್ಧಾಂತದಲ್ಲಿ ಆಸಕ್ತನಾಗಿ ಸ್ಟಾನ್ಲಿ ಕೈಗೊಂಡಿದ್ದ ಪ್ರಯೋಗವನ್ನೇ ಹೊಸ ರೂಪದಲ್ಲಿ ಅಂತರಜಾಲದಲ್ಲಿ ಮಿಂಚಂಚೆಗಳ ಮೂಲಕ ಮಾಡಿಸಿದನು. ೧೫೭ ದೇಶಗಳಿಂದಾಯ್ದ ಸುಮಾರು ೪೮೦೦೦ದಷ್ಟು ಪ್ರಯೋಗಾರ್ಥಿಗಳಿಗೆ 19 ವಿವಿಧ ‘ಗುರಿ’ ವ್ಯಕ್ತಿಗಳನ್ನು ಅವರ ಹೆಸರು ಊರು ಮತ್ತು ವೃತ್ತಿ ಇಷ್ಟು ಮಾತ್ರ ವಿವರಗಳನ್ನಾಧರಿಸಿ ಇಮೇಲ್ ಮೂಲಕ ತಲುಪುವ ಸಾಹಸವನ್ನು ವಹಿಸಿದನು.
ಎಷ್ಟು ಜನ ಪ್ರಾಮಾಣಿಕವಾಗಿ ಭಾಗವಹಿಸಿದರೋ ಎಷ್ಟು ಜನ ಇಮೇಲ್ ಡಿಲೀಟ್ ಮಾಡಿ ಸುಮ್ಮನಾದರೋ ಗೊತ್ತಿಲ್ಲ. ಈಗ ನಾವು ಸೋಶಿಯಲ್ ಮೀಡಿಯಾದಲ್ಲಿ ‘ವೈರಲ್ ಆಗೋದು’ ಅಂತೇವಲ್ಲ, ಇದೂ ಹೆಚ್ಚೂಕಡಿಮೆ ಹಾಗೆಯೇ. ಸ್ವ-ಇಚ್ಛೆಯಿಂದ ಅಲ್ಲ, ಕಂಟ್ರೋಲ್ಡ್ ರೀತಿಯ ಪ್ರಸರಣ ಎನ್ನುವುದಷ್ಟೇ ವ್ಯತ್ಯಾಸ. ಅಂತೂ ಡಂಕನ್‌ನ ಹೊಸ ಪ್ರಯೋಗದ ಅಂಕಿಅಂಶಗಳನ್ನು ಕ್ರೋಡೀಕರಿಸಿದಾಗಲೂ ಆಶ್ಚರ್ಯದಲ್ಲಿ ಪರಮಾಶ್ಚರ್ಯವೆಂಬಂತೆ ಫಲಿತಾಂಶವೊಂದು ಮೂಡಿತು: ಸರಾಸರಿಯಾಗಿ ಪ್ರತಿಯೊಂದು ಇಮೇಲ್ ಚೈನ್ ಸಹ ಆರು ಕೊಂಡಿಗಳನ್ನಷ್ಟೇ ಹೊಂದಿತ್ತು!
ಪ್ರಯೋಗಗಳ ಬಣ್ಣನೆಯಿಂದ ನಿಮಗಿನ್ನೂ ಈ ವಿಷಯ ಸರಿಯಾಗಿ ಅರ್ಥವಾಗಿಲ್ಲವಾದರೆ ಷಟ್ಪದ ಸಾಮೀಪ್ಯಕ್ಕೆ ಈಗ ಒಂದು ಪ್ರಾಕ್ಟಿಕಲ್ ಉದಾಹರಣೆಯನ್ನು ನೋಡೋಣ. ಹೊನ್ನಾವರದಲ್ಲಿರುವ ಪರಮೇಶ್ವರ ಹೆಗಡೆ ಎಂಬ ಕೃಷಿಕರಿಗೆ ಜರ್ಮನಿಯ ಹ್ಯಾನೊವರ್‌ನಲ್ಲಿ ಒಂದು ಬೇಕರಿ ಇಟ್ಟುಕೊಂಡಿರುವ ಆರ್ನೆಸ್ಟ್ ಆಗಸ್ಟಸ್ ಎಂಬ ವ್ಯಕ್ತಿ ಹೇಗೆ ಪರಿಚಯ ಆಗಬಹುದು? ಪರಮೇಶ್ವರ ಹೆಗಡೆಯವರ ಮಗ ಗಣಪತಿ ಹೆಗಡೆಯ ಎಂಜಿನಿಯರಿಂಗ್ ಕ್ಲಾಸ್‌ಮೇಟ್ ಆಗಿದ್ದ ವಿಜಯ್ ಮಲ್ಹೋತ್ರಾ ಈಗ ಕ್ಯಾಲಿಫೋರ್ನಿಯಾದಲ್ಲಿ ಸ್ನಾತಕೋತ್ತರ ಪದವಿ ಓದುತ್ತಿದ್ದು ವಿಜಯ್‌ನ ಈಗಿನ ರೂಮ್‌ಮೇಟ್ ಇಂಡೋನೇಷ್ಯಾ ಮೂಲದ ವಿಲಿಯಮ್‌ನಿಗೆ ಹೈಸ್ಕೂಲಲ್ಲಿ ಗಿಟಾರ್ ಕಲಿಸಿಕೊಡುತ್ತಿದ್ದ ಜೊನಾಥನ್‌ನ ಗರ್ಲ್‌ಫ್ರೆಂಡ್ ಕ್ರಿಸ್ಟೀನಾ ಬೇರಾರೂ ಅಲ್ಲ, ಜರ್ಮನಿಯ ಬೇಕರಿಯವನ ಪಕ್ಕದ್ಮನೆ ಹುಡುಗಿ!
ಇದೇನೂ ಷೆರ್ಲಾಕ್ ಹೋಮ್ಸ್ ಮತ್ತು ವಾಟ್ಸನ್ ಭೇದಿಸಿದ ರಹಸ್ಯ ಅಲ್ಲ. ನಿಮ್ಮ ವಿಧೇಯ ಯುವರ್ಸ್ ಟ್ರೂಲಿ ‘ಶ್ರೀ-ವಾಟ್ಸನ್’ ಈ ಲೇಖನಕ್ಕಾಗಿಯಷ್ಟೇ ಹೆಣೆದ ಒಂದು ಕಾಲ್ಪನಿಕ ಪರಿಚಯ ಸರಪಳಿ! ಈಗೀಗ ಷಟ್ಪದ ಸಾಮೀಪ್ಯ ಸಿದ್ಧಾಂತಕ್ಕೆ ಮತ್ತಷ್ಟು ಪುಷ್ಟೀಕರಣ
ಸಿಗುತ್ತಿದ್ದು ಅದು ಜನಸಾಮಾನ್ಯರ ಸಂಭಾಷಣೆಯಲ್ಲೂ ಕಾಣಿಸಿಕೊಳ್ಳತೊಡಗಿದೆ. ಹಾಗೆಯೇ ಕಂಪ್ಯೂಟರ್ ನೆಟ್‌ವರ್ಕಿಂಗ್, ವಿದ್ಯುತ್ ವಿತರಣಾ ಜಾಲಗಳ ವಿನ್ಯಾಸ, ಬಹುರಾಷ್ಟ್ರೀಯ ಕಂಪನಿಗಳಲ್ಲಿ ಆಂತರಿಕ ಸಂಪರ್ಕ, ಮಾರ್ಕೆಟಿಂಗ್ ಯೋಜನೆಗಳ ತಯಾರಿ
(ಆಮ್‌ವೇಯಂತಹ ಕಂಪನಿಗಳು, ಸ್ಟೀಲ್‌ಪಾತ್ರೆ/ ಟೀಕ್‌ವುಡ್ ಅಂತೆಲ್ಲ ಟೋಪಿಯಿಡುವ ಸ್ಕೀಮುಗಳು ಸಹ) ಇತ್ಯಾದಿಯಷ್ಟೇ ಅಲ್ಲದೆ ಸಾಂಕ್ರಾಮಿಕ ರೋಗಗಳ ಹರಡುವಿಕೆ, ಪ್ರಾಣಿಗಳ ನರಮಂಡಲದಲ್ಲಿ ಸಂದೇಶ ರವಾನೆ ಮುಂತಾದ ನಾನಾ ಕ್ಷೇತ್ರಗಳಲ್ಲಿನ ಅಧ್ಯಯನಕ್ಕೆ ಷಟ್ಪದ ಸಾಮೀಪ್ಯ ಸಿದ್ಧಾಂತವು ಹೊಸ ರೂಪ ಕೊಟ್ಟಿದೆ. ಕೋವಿಡ್-೧೯ ವಿಚಾರವೂ ಇಲ್ಲಿ ಪ್ರಸ್ತುತವೇ.
ಅದೊಂದು ಪ್ಯಾಂಡೆಮಿಕ್ ಅನಿಸಿಕೊಂಡಿತಲ್ಲವೇ? ಪ್ಯಾಂಡೆಮಿಕ್ ಪದದ ಮೂಲ ಗ್ರೀಕ್‌ನ ‘ಪ್ಯಾನ್’ ಮತ್ತು ‘ಡೆಮಸ್’ ಪದಗಳು. ಅವುಗಳ ಅರ್ಥ ಅನುಕ್ರಮವಾಗಿ ‘ಎಲ್ಲ ಜನರು’ ಎಂದು. ಚೈನಾ ದೇಶದ ಯಾವುದೋ ಲ್ಯಾಬೊರೇಟರಿಯಲ್ಲಿ ಹುಟ್ಟಿತೆನ್ನಲಾದ ಕೋವಿಡ್-೧೯ ಇಡೀ ಜಗತ್ತಿಗೆ, ಅಂದರೆ ‘ಎಲ್ಲ ಜನರಿಗೆ’ ಹೇಗೆ ವ್ಯಾಪಿಸಿತು, ತನ್ಮೂಲಕ ‘ಪ್ಯಾಂಡೆಮಿಕ್’ ಆಯ್ತು ಎಂಬುದನ್ನು ನಾವೆಲ್ಲ ಕಣ್ಣಾರೆ ಕಂಡಿದ್ದೇವೆ. ಆರೇ ಆರು ಕೊಂಡಿಗಳಿಂದ ಅದು ಎಲ್ಲೆಡೆ ಹರಡಿತು!
ಷಟ್ಪದ ಸಿದ್ಧಾಂತಕ್ಕಾಗಲೀ, ಪ್ಯಾಂಡೆಮಿಕ್‌ಗಾಗಲೀ ಸಂಬಂಧವಿಲ್ಲದ್ದಾದರೂ ಸನಾತನ ಭಾರತೀಯ ಸಂಸ್ಕೃತಿಯ ‘ವಸುಧೈವ
ಕುಟುಂಬಕಮ್’ ಸೂಕ್ತಿಯನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು. ಇದರ ಮೂಲವಿರುವುದು ಮಹೋಪನಿಷತ್‌ನಲ್ಲಿ. ಮಹಾಭಾ ರತ
ದಲ್ಲಿ ಉಲ್ಲೇಖಗೊಂಡ ಮಹೋಪನಿಷತ್ ತುಂಬ ಪ್ರಾಚೀನ ವಾದದ್ದು. ಸೂಕ್ತಿಯ ಪೂರ್ಣರೂಪ ಹೀಗಿದೆ: ‘ಅಯಂ ಬಂಧು
ರಯಂ ನೇತಿ| ಗಣನಾ ಲಘುಚೇತಸಾಮ್| ಉದಾರಚರಿತಾನಾಂತು| ವಸುಧೈವ ಕುಟುಂಬಕಮ್||’ ಈ ಶ್ಲೋಕದ ಅರ್ಥವೇನೆಂದರೆ- ಇವನು ನನ್ನವನು, ನನಗೆ ಪರಿಚಯವಿರುವವನು, ಅವನು ನನ್ನವನಲ್ಲ ಬೇರೆಯವನು, ಅಪರಿಚಿತನು.
ಹೀಗೆಂದು ಸಂಕುಚಿತ ಮನಸ್ಸಿನವರು ಅಂದುಕೊಳ್ಳುವರು. ಉದಾರ ಮನೋಭಾವ ಮತ್ತು ನಡತೆಯುಳ್ಳವರಿಗೆ ಇಡೀ ಜಗತ್ತೇ ತನ್ನ ಮನೆ/ ಕುಟುಂಬದಂತೆ ಭಾಸವಾಗುತ್ತದೆ. ಎಂತಹ ಉದಾತ್ತ ಚಿಂತನೆ! ಸ್ಮಾಲ್ ವರ್ಲ್ಡ್, ಸಿಕ್ಸ್ ಡಿಗ್ರೀಸ್ ಆಫ್ ಸೆಪರೇಷನ್ ಅಂತೆಲ್ಲ ಪಾಶ್ಚಾತ್ಯರಿಗೆ ಮನದಟ್ಟಾದದ್ದು ೨೦ನೆಯ ಶತಮಾನದಲ್ಲಿ. ನಮ್ಮ ಶುದ್ಧ ಭಾರತೀಯ ಸಂಸ್ಕೃತಿ ಸಂಸ್ಕಾರಗಳಲ್ಲಿ ರೂಪುಗೊಂಡವರಿಗೆ ಆ ಚಿಂತನೆ ಸಹಸ್ರಾರು ವರ್ಷಗಳ ಹಿಂದಿನಿಂದಲೇ ಇದೆ. ಅಥರ್ವವೇ ದದಲ್ಲಿ ಬರುವ ‘ಮಾತಾ ಭೂಮಿಃ ಪುತ್ರೋಧಿಹಂ ಪೃಥಿವ್ಯಾಃ…’
ಸೂಕ್ತದ ಆಶಯವೂ ಅದೇ. ಭೂದೇವಿಯೇ ನಮಗೆಲ್ಲರಿಗೂ ತಾಯಿ. ನಾವೆಲ್ಲ ಅವಳ ಮಕ್ಕಳು. ಪೃಥ್ವಿಯ ಪುತ್ರ-ಪುತ್ರಿಯರೆಲ್ಲ ಇದನ್ನು ಅರ್ಥೈಸಿಕೊಂಡರೆ ಎಲ್ಲರೂ ಒಡಹುಟ್ಟಿದವರೇ. ಅಂದಮೇಲೆ ಈ ಪ್ರಪಂಚದ ಪ್ರತಿಯೊಬ್ಬರೂ ಪರಸ್ಪರ ಪರಿಚಿತರೇ