Thursday, 22nd February 2024

ಕೃಷಿಸಂತನ ಮುಡಿಗೆ ಭಾರತ ರತ್ನದ ಮುಕುಟ

ಗುಣಗಾನ

ನರಸಿಂಹಮೂರ್ತಿ ರಾಜೂರ

ಭಾರತಕ್ಕೆ ೧೯೪೭ರ ಮಧ್ಯರಾತ್ರಿಯಲ್ಲಿ ಸ್ವಾತಂತ್ರ್ಯ ಸಿಕ್ಕಾಗ, ‘ಈ ಸ್ವಾತಂತ್ರ್ಯವು ನಮ್ಮ ಹಸಿವನ್ನು ನೀಗಿಸುತ್ತದೆ, ಹರಕಲು ಬಟ್ಟೆಗಳಿಗೆ ವಿದಾಯ ಹೇಳುತ್ತದೆ, ಹಲವಾರು ರೋಗಗಳಿಗೆ ಮದ್ದಾಗುತ್ತದೆ, ಗುಲಾಮಿ ಸಂಸ್ಕೃತಿಯ ಸದ್ದಡಗಿ ಸಮಾನತೆಯ ಸಾಮ್ರಾಜ್ಯ ಸೃಷ್ಟಿಯಾಗುತ್ತದೆ’ ಎಂದು ಹಲವರು ಕನಸು ಕಂಡಿದ್ದರು. ಆದರೆ ವಾಸ್ತವ ಬೇರೆಯೇ ಆಗಿತ್ತು. ಅಂದಿನ ಭಾರತದಲ್ಲಿ ಶೇ.೬೫ ರಷ್ಟು ಮಂದಿ ಬಡತನದ ಬೇಗೆಗೆ ಸಿಲುಕಿದ್ದರು. ‘ಜೋರಾಗಿ ಅತ್ತು
ಬಿಡೋಣ, ಈ ಬಡತನವನ್ನು ಜಗತ್ತಿಗೇ ಗೊತ್ತುಮಾಡಿಬಿಡೋಣ’ ಅಂದುಕೊಂಡರೂ ಕಣ್ಣೀರೂ ಬತ್ತಿಹೋಗಿತ್ತು.

ಈ ಪರಿಸ್ಥಿತಿ ಮುಂದುವರಿದು ೧೯೬೬ ಮತ್ತು ೧೯೬೭ರಲ್ಲಿ ದೇಶಾದ್ಯಂತ ಆವರಿಸಿದ ಬರವು ಭಾರತೀಯರನ್ನು ಇನ್ನಿಲ್ಲದ ಸಂಕಷ್ಟಕ್ಕೆ ದೂಡಿತ್ತು. ಕಾರಣ ಅಂದು ನಮ್ಮ ದೇಶದಲ್ಲಿ ಆಹಾರ ಧಾನ್ಯಗಳು ಉತ್ಪಾದನೆಯಾಗುತ್ತಿದ್ದುದು ೫೧ ಮಿಲಿಯನ್ ಟನ್ ಮಾತ್ರ; ಇದು ಅಂದಿನ ಕಾಲುಭಾಗದ ಜನರಿಗೆ ಮಾತ್ರ ಸಾಕಾಗುತ್ತಿತ್ತು. ಮಿಕ್ಕ ಮುಕ್ಕಾಲು ಪಾಲು ಜನರ ಹಸಿವು ನೀಗಿಸಲು ಅನ್ಯದೇಶದಿಂದ ಆಹಾರ ಧಾನ್ಯಗಳನ್ನು ಆಮದು ಮಾಡಿಕೊಳ್ಳಬೇಕಿತ್ತು. ಈ ಸಂದರ್ಭದಲ್ಲಿ ಆಪದ್ಬಾಂಧವರಾಗಿ ಒದಗಿದ ಎಂ.ಎಸ್. ಸ್ವಾಮಿನಾಥನ್ ಅವರು ಎಲ್ಲಾ ಸಮಸ್ಯೆಗಳಿಗೆ ಪರಿಹಾರೋಪಾಯವಾಗಿ ಕಂಡರು.

ಕಾರಣ, ಆಹಾರದ ಅಭದ್ರತೆಯನ್ನು ಮಾಯವಾಗಿಸುವ ಮಂತ್ರ ದಂಡ ಇವರ ಕೈಯಲ್ಲಿತ್ತು. ೧೯೬೮ರಲ್ಲಿ ಇವರ ನೇತೃತ್ವದಲ್ಲಿ ಆರಂಭವಾದ ‘ಹಸಿರು ಕ್ರಾಂತಿ’ಯು ದಿನಗಳೆದಂತೆ ಉತ್ತಮ ಫಲಶ್ರುತಿಯನ್ನೇ ನೀಡಿತು ಎನ್ನಬೇಕು; ೨೦೨೨ರ ಹೊತ್ತಿಗೆ ದೇಶದಲ್ಲಿ ೩೧೪ ಮಿಲಿಯನ್ ಟನ್ ಆಹಾರದ ಉತ್ಪಾದನೆಯಾಗಿ ಜಗದ ಜನರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತಾಗಿದ್ದೇ ಇದಕ್ಕೆ ಸಾಕ್ಷಿ. ಇಂಥ ಸಾಧಕರಾದ ಸ್ವಾಮಿನಾಥನ್ ಕಳೆದ ವರ್ಷದ ಸೆಪ್ಟೆಂಬರ್ ೨೮ರಂದು ತಮ್ಮ ೯೮ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದು ತುಂಬಾ ನೋವಿನ ಸಂತಿ.

ಆದರೆ ಅವರು ಹಾಕಿದ ಹೆಜ್ಜೆಗಳು, ಬಿಟ್ಟುಹೋದ ವಿಚಾರಗಳು, ಹೇಳಿದ ಪಾಠಗಳು ಭಾರತೀಯರಿಗೆ ದಾರಿದೀಪವಾಗುವುದರಲ್ಲಿ ಯಾವುದೇ ಸಂಶಯ ವಿಲ್ಲ. ಈ ಎಲ್ಲ ಅಂಶಗಳನ್ನು ಪರಿಗಣಿಸಿ ಕೇಂದ್ರ ಸರಕಾರವು ಇತ್ತೀಚೆಗೆ ಶ್ರೀಯುತರಿಗೆ ಮರಣೋತ್ತರವಾಗಿ ‘ಭಾರತ ರತ್ನ’ ಪುರಸ್ಕಾರವನ್ನು ಘೋಷಿಸಿದೆ; ಇದರಿಂದಾಗಿ ಈ ಪುರಸ್ಕಾರದ ಗೌರವ ಮತ್ತಷ್ಟು ಹೆಚ್ಚಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ.

ಈ ಮಹಾನ್ ಸಾಧಕರು ಸಮುದಾಯದ ಅವಶ್ಯಕತೆಗಳನ್ನು ಗುರುತಿಸುತ್ತಾ, ‘ಜನತೆಯ ರಕ್ಷಣೆ ಆಹಾರ ಧಾನ್ಯಗಳಿಂದ ಆಗಬೇಕೇ ವಿನಾ, ಬಂದೂಕಿ ನಿಂದಲ್ಲ’ ಎಂದು ಹೇಳಿರುವುದು ನೋಡಿದರೆ ಇವರು ಎಷ್ಟೊಂದು ವಾಸ್ತವ ವಾದಿಗಳಾಗಿದ್ದರು ಎಂಬುದನ್ನು ಊಹಿಸಬಹುದು. ‘ಶಾಸಕಾಂಗ
ರೂಪಿಸುವ ನೀತಿಗಳು ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ಗಮನದಲ್ಲಿಟ್ಟುಕೊಂಡಿರಬೇಕು, ಹಾಗಾ ದಾಗ ಮಾತ್ರವೇ ರಾಷ್ಟ್ರದ ಅಭಿವೃದ್ಧಿ ಸಾಧ್ಯ’ ಎಂಬ ಮಾತನ್ನು ಭಾಷಣಗಳಲ್ಲಿ ಕೇಳಿದ್ದೇವೆ.

ಅಂತೆಯೇ ಸ್ವಾಮಿನಾಥನ್‌ರವರು ವಿಜ್ಞಾನವನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಣೆ ಮಾಡಿರುವುದು ಅವರಲ್ಲಿನ ಸಾಮಾ ಜಿಕ ಬದ್ಧತೆಗೆ ಹಿಡಿದ ಕೈಗನ್ನಡಿ. ಕೃಷಿ ವಿಜ್ಞಾನ ಮತ್ತು ತಂತ್ರಜ್ಞಾನದ ಅಭಿವೃದ್ಧಿಗಾಗಿ ಪ್ರಯೋಗಾಲಯಗಳು, ಕೃಷಿ ಸಂಸ್ಥೆಗಳು, ವಿಶ್ವ ವಿದ್ಯಾಲಯಗಳಿಗೆ ಚುರುಕು ತುಂಬಿದ ಮತ್ತು ಕೃಷಿ ವಿಜ್ಞಾನಿಗಳನ್ನು, ಸರಕಾರಗಳನ್ನು ಮತ್ತು ಸಂಬಂಧಿತ ಸ್ವಾಯತ್ತ ಸಂಸ್ಥೆಗಳನ್ನು ನಿದ್ರೆ ಯಿಂದೆಬ್ಬಿಸಿದ ಕೀರ್ತಿ ಸ್ವಾಮಿನಾಥನ್ ಅವರಿಗೆ ಸಲ್ಲಬೇಕು.

‘ಹಸಿವನ್ನು ನೀಗಿಸಿದ ಸಂತ’, ‘ಹಸಿರು ಕ್ರಾಂತಿಯ ಪಿತಾಮಹ’ ಹೀಗೆ ಹಲವಾರು ಬಿರುದುಗಳನ್ನು ಪಡೆದ ಈ ಧೀಮಂತ ವ್ಯಕ್ತಿಯೂ ಟೀಕೆಗಳಿಂದ ಹೊರತಾಗಿರಲಿಲ್ಲ. ‘ರಸಗೊಬ್ಬರಗಳ ಅಸಮರ್ಪಕ ಬಳಕೆಯಿಂದಾಗಿ ಮಣ್ಣು ತನ್ನ ಫಲವತ್ತತೆಯನ್ನು ಕಳೆದುಕೊಂಡಿದೆ’, ‘ಭಾರತೀಯ ಕೃಷಿಯು ಪ್ರಾದೇಶಿಕ ಮತ್ತು ಏಕದಳ ಕೇಂದ್ರಿತವಾಗಿ ಬದಲಾಗಿದೆ’, ‘ಅತಿಯಾದ ನೀರಿನ ಬಳಕೆಯಿಂದಾಗಿ ಮಣ್ಣು ಹೆಚ್ಚು ಲವಣಯುಕ್ತವಾಗಿದೆ’, ‘ಲಿಂಗಾನು ಪಾತದ ಓರೆಗಳಿಗೆ ಕೃಷಿ ಯಾಂತ್ರೀಕರಣವೇ ಕಾರಣ’ ಎಂದೆಲ್ಲ ಹಲವರು ಹೇಳುತ್ತಿದ್ದುದುಂಟು. ಇದಕ್ಕೆ ಪ್ರತಿಯಾಗಿ ಸ್ವಾಮಿನಾಥನ್, ‘ಪರಿಸರ ಅಥವಾ ಸಾಮಾಜಿಕ ಹಾನಿಯುಂಟುಮಾಡದೆ ಕಡಿಮೆ ಸಂಪನ್ಮೂಲಗಳನ್ನು ಬೆಳೆಸಿ ಹೆಚ್ಚು ಉತ್ಪಾದಿಸುವ ಶೂನ್ಯಬಂಡವಾಳದ ನೈಸರ್ಗಿಕ ಕೃಷಿ ಮಾಡಿ.

ಇದು ನಿತ್ಯ ಹರಿದ್ವರ್ಣ ಕ್ರಾಂತಿಗೆ ಮುನ್ನುಡಿಯಾಗುತ್ತದೆ, ಭೂಮಿ ಮರುಭೂಮಿಯಾಗುವುದು ತಪ್ಪುತ್ತದೆ’ ಎನ್ನುತ್ತಿದ್ದರು. ಹೆಚ್ಚಿನ ಇಳುವರಿಯ ತಳಿ ಬೀಜಗಳ ಬಳಕೆ, ಆಹಾರೋತ್ಪಾದನೆ ಸುಧಾರಿಸಲು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಅನುಸರಣೆಯ ಬಗ್ಗೆ ಕೃಷಿಕರಿಗೆ ತರಬೇತಿ ನೀಡಿದಲ್ಲಿ, ಪರಿಸರದ ಸುಸ್ಥಿರತೆ ಕಾಪಾಡು ವಿಕೆ, ಹವಾಮಾನ ಬದಲಾವಣೆ, ನಾಟಿ ಅವಧಿ, ಕೃಷಿ ಉತ್ಪನ್ನದ ಬೆಲೆಗಳು, ಬ್ಯಾಂಕಿಂಗ್ ಮೊದಲಾದ ವಿಷಯಗಳ ಕುರಿತಾಗಿ ಕೃಷಿಕರಿಗೆ ಸಮರ್ಪಕ ಮಾಹಿತಿ ಒದಗಿಸಿದಲ್ಲಿ ತಮ್ಮ ಕಲ್ಪನೆಯ ನಿತ್ಯ ಹರಿದ್ವರ್ಣ ಕ್ರಾಂತಿಯಿಂದ ಸದೃಢ ಭಾರತದ ನಿರ್ಮಾಣವಾಗುವುದನ್ನು ಯಾರಿಂದಲೂ ತಪ್ಪಿಸಲಾಗದು ಎಂಬುದು ಅವರ ನಂಬಿಕೆಯಾಗಿತ್ತು.

‘ಹಸಿವು’ ನಮ್ಮ ವ್ಯವಸ್ಥೆಯಲ್ಲಿ ಈಗಲೂ ವಿವಿಧ ಸ್ವರೂಪದಲ್ಲಿ ತಾಂಡವವಾಡುತ್ತಿದೆ. ಅಂದರೆ, ಕೊಳ್ಳುವ ಶಕ್ತಿಯ ಕೊರತೆಯಿಂದಾಗಿ ಉಂಟಾಗುವ ದೀರ್ಘಕಾಲೀನ ಹಸಿವು, ಆಹಾರದಲ್ಲಿ ಜೀವಸತ್ವಗಳು, ಕಬ್ಬಿಣ, ಅಯೋಡಿನ್, ಸತುವು ಮೊದಲಾದ ಸೂಕ್ಷ್ಮ ಪೋಷಕಾಂಶಗಳ ಕೊರತೆಯಿಂದಾಗಿ ಉಂಟಾಗುವ ಗುಪ್ತಹಸಿವು, ಬರ, ಪ್ರವಾಹ, ಚಂಡಮಾರುತ, ಹವಾಮಾನ ಬದಲಾವಣೆಗಳಿಂದ ಉಂಟಾಗುವ ತಾತ್ಕಾಲಿಕ ಹಸಿವುಗಳು ಅಭಿವೃದ್ಧಿಯ ತಡೆಗೋಡೆ ಗಳಾಗಿ ಭಾರತದ ಓಟವನ್ನು ನಿಧಾನಗೊಳಿಸಿವೆ. ಇವೆಲ್ಲದಕ್ಕೆ ಪರಿಹಾರವಾಗಿ ಭಾರತಕ್ಕೆ ಪ್ರಸ್ತುತ ‘ನಿತ್ಯಹರಿದ್ವರ್ಣ ಕ್ರಾಂತಿ’ಯ ಅಗತ್ಯವಿದೆ
ಎಂದೆನಿಸದಿರದು.

ಆಹಾರ ಭದ್ರತೆಯನ್ನು ಸಾಧಿಸಲು ಸ್ಥಿರ ಆಹಾರ ಮತ್ತು ಕೃಷಿನೀತಿ ಗಳು, ಸುಧಾರಿತ ತಾಂತ್ರಿಕ ಪ್ರಾವೀಣ್ಯದ ಜತೆಗೆ, ಅವುಗಳ ಪರಿಣಾಮಕಾರಿ ಅನುಷ್ಠಾನ ಕ್ಕಾಗಿ ಉತ್ತಮ ಆಡಳಿತವೂ ಇರಬೇಕು ಎಂಬುದು ನಮ್ಮ ಜನರಿಗೆ ಮನವರಿಕೆಯಾಗಬೇಕಿದೆ. ಅಂದರೆ, ಸಾಮಾಜಿಕ-ಆರ್ಥಿಕ-ಸಾಂಸ್ಕೃತಿಕ-ಕೃಷಿ ಸಂಬಂಧಿತ ಗುರಿಗಳನ್ನು ಸಾಧಿಸಲು ನಮ್ಮ ದೇಶದ ಪ್ರತಿಯೊಂದು ಜಿಲ್ಲಾ ಪಂಚಾಯತ್‌ಗಳು, ರಾಜ್ಯ ಸರಕಾರಗಳು ತಮ್ಮದೇ ಆದ ಯೋಜನೆ ಗಳನ್ನು ಅಭಿವೃದ್ಧಿ ಪಡಿಸಬೇಕು ಹಾಗೂ ಸಾಂಪ್ರದಾಯಿಕ ಕೃಷಿ ವ್ಯವಸ್ಥೆಯ ಪುನಾರಚನೆಗೆ ರೈತರಿಗೆ ತರಬೇತಿ ನೀಡಬೇಕು. ಅಲ್ಲದೆ ದೇಶದ ಪ್ರತಿಯೊಬ್ಬ
ಕೃಷಿಕರೂ ಮಣ್ಣಿನ ಆರೋಗ್ಯ ಮತ್ತು ಫಲವತ್ತತೆಯ ಸುಧಾರಣೆಗೆ ಗಮನಹರಿಸಬೇಕು.

ಅಧಿಕ ಇಳುವರಿ ನೀಡುವ ಬೀಜಗಳನ್ನು ಬಳಸು ವುದರೊಂದಿಗೆ, ಈಗಿರುವ ಅಂತರ್ಜಲವನ್ನು ಹಾಳುಮಾಡುವ ಬದಲು ಮಳೆಕೊಯ್ಲು ವ್ಯವಸ್ಥೆ ಅಳವಡಿಸಿಕೊಂಡು ಸುಸ್ಥಿರ ಕೃಷಿಗೆ ಪ್ರಾಧಾನ್ಯ ನೀಡಬೇಕು. ಅಂದಾಗ ಮಾತ್ರ ಕೈಗೆಟುಕುವ ದರದಲ್ಲಿ ಧಾನ್ಯಗಳ ಉತ್ಪಾದನೆ ಮತ್ತು ವಿತರಣೆ ಸಾಧ್ಯ ವಾಗುತ್ತದೆ. ಹೀಗೆ, ಒಟ್ಟಾರೆ ಬಲಿಷ್ಠ-ಸಂಪದ್ಭರಿತ ಭಾರತಕ್ಕಾಗಿ, ಸಮೃದ್ಧ ಸಮಾಜಕ್ಕಾಗಿ ತವಕಿಸುತ್ತಿದ್ದ ಎಂ.ಎಸ್.ಸ್ವಾಮಿನಾಥನ್ ಅವರು, ತಮ್ಮ ವಿಚಾರಗಳು ಮತ್ತು ಸಾಮಾಜಿಕ ಬದ್ಧತೆಗಳಿಂದ ಭಾರತದ ಕೃಷಿಕರಲ್ಲಿ ಕನಸುಗಳನ್ನು ಬಿತ್ತಿ ಬೆಳೆಯುವಲ್ಲಿ ಯಶಸ್ವಿಯಾಗಿದ್ದರು.

ಸೂಕ್ತ ತಂತ್ರಜ್ಞಾನ ಮತ್ತು ಸಾರ್ವಜನಿಕ ನೀತಿಗಳ ಸಹಯೋಗದ ಮೂಲಕ ಹಸಿರು ಕ್ರಾಂತಿ ಯಲ್ಲಿನ ಕೆಲವು ತಪ್ಪುಗಳನ್ನು ಸರಿಪಡಿಸಿಕೊಂಡು ನಿತ್ಯ ಹರಿದ್ವರ್ಣ ಕ್ರಾಂತಿಯ ಕಹಳೆಯೂದಿ, ಭಾರತವನ್ನು ಸಮರ್ಥನೀಯ ರೀತಿ ಯಲ್ಲಿ ಪೋಷಿಸಲು ಅವರು ಮುನ್ನುಡಿ ಬರೆದು ಹೋಗಿದ್ದಾರೆ. ನಾವೆಲ್ಲರೂ ಎಚ್ಚರಗೊಳ್ಳುವುದೊಂದೇ ಬಾಕಿ. ಎಂದಿಗೂ ತೀರದ ಸಾಲ ಮತ್ತು ಆತ್ಮಹತ್ಯೆಯ ಚಕ್ರದಿಂದ ಮುಕ್ತರಾಗಿ ರೈತರು ಗೌರವಯುತ ಜೀವನ ಸಾಗಿಸುವಂತಾ ಗಲು ಅವರ ಹೆಗಲಿಗೆ ಹೆಗಲಾಗೋಣ. ಕೃಷಿಕರ ಹೆಜ್ಜೆಗಳ ಜತೆ ಹೆಜ್ಜೆಹಾಕೋಣ.

(ಲೇಖಕರು ಕ್ಷೇತ್ರ ಸಂಪನ್ಮೂಲ ವ್ಯಕ್ತಿ)

Leave a Reply

Your email address will not be published. Required fields are marked *

error: Content is protected !!