Friday, 18th October 2024

ರಾಜೇಂದ್ರ ಭಟ್‌ ಅಂಕಣ: ಲೆಗೆಸಿ ಲೀಡ್ ಮಾಡೋದನ್ನು ಯಾರಾದ್ರೂ ಇವರಿಂದ ಕಲಿಯಬೇಕು!

Lionel Messi

ಸ್ಫೂರ್ತಿಪಥ ಅಂಕಣ: ಪ್ರತಿಭೆಯ ಪರ್ವತಗಳು ಬ್ಯಾಟನ್ ವರ್ಗಾವಣೆ ಮಾಡದೆ ನಿರ್ಗಮಿಸುವುದಿಲ್ಲ!

Rajendra Bhat K
  • ರಾಜೇಂದ್ರ ಭಟ್ ಕೆ.

Kylian Mbappe: 2022ರ ಫಿಫಾ ವಿಶ್ವಕಪ್ (FIFA World Cup) ಟೂರ್ನಿ ಮುಗಿದಾಗ ಫುಟ್ಬಾಲ್ ದೈತ್ಯ ಆಟಗಾರ ಲಿಯೋನೆಲ್ ಮೆಸ್ಸಿ (Lionel Messi) ನಿವೃತ್ತಿ ಆಗೋದು ಖಚಿತವಾಗಿತ್ತು. ಫುಟ್ಬಾಲನ ಅದುವರೆಗಿನ ಎಲ್ಲ ದಾಖಲೆಗಳನ್ನು ಮುರಿದು ಮುನ್ನುಗ್ಗಿದ್ದವನು ಅರ್ಜೆಂಟೀನಾ ಕ್ಯಾಪ್ಟನ್ ಮೆಸ್ಸಿ! ಆತನು ನಿರ್ಗಮಿಸುವಾಗ ಒಂದು ಶೂನ್ಯ ಕ್ರಿಯೇಟ್ ಆಗಬಹುದು ಎಂದು ಫುಟ್ಬಾಲ್ ಜಗತ್ತು ಗಾಢವಾಗಿ ನಂಬಿಕೊಂಡಿತ್ತು. ಆದರೆ ಫೈನಲ್ ಪಂದ್ಯ ಮುಗಿದು ಟ್ರೋಫಿ ವಿತರಣೆ ಆದ ನಂತರ ಮೆಸ್ಸಿ ಏನು ಮಾಡಿದನು ಎಂದರೆ ಮುಖ ಬಾಡಿಸಿ ಮೂಲೆಯಲ್ಲಿ ನಿಂತಿದ್ದ ಫ್ರೆಂಚ್ ಆಟಗಾರ ಎಂಬಪ್ಪೆ (Kylian Mbappe) ಯ ಬಳಿಗೆ ಬಂದು ಅವನ ಹೆಗಲ ಮೇಲೆ ಕೈಯಿಟ್ಟು ಅವನಿಗೆ ಧೈರ್ಯ ತುಂಬಿದ್ದ! ಅವನ ಕಣ್ಣೀರು ಒರೆಸಿದ್ದ! ಆ ಕ್ಷಣಕ್ಕೆ ಇಡೀ ಜಗತ್ತಿಗೆ ಒಂದು ಸಂದೇಶ ಹೋಗಿತ್ತು ಏನೆಂದರೆ ಮೆಸ್ಸಿಯ ಲೆಗೆಸಿ (ಪರಂಪರೆ)ಯನ್ನು ಎಂಬಪ್ಪೆ ಮುಂದಕ್ಕೆ ತೆಗೆದುಕೊಂಡು ಹೋಗುತ್ತಾನೆ ಎಂದು!

ಹಿಂದೆ ಕೂಡ ಹಾಗೇ ಆಗಿತ್ತು. ಪೀಲೆಯ ನಂತರ ಮರಡೋನಾ, ಆತನ ನಂತರ ರೆನಾಲ್ಡೋ, ಆತನ ನಂತರ ಮೆಸ್ಸಿ….ಹೀಗೆಯೇ ಮುಂದುವರೆದು ಕೊಂಡು ಬಂದಿತ್ತು ಲೆಗೆಸಿಯ ವರ್ಗಾವಣೆ.

ಲೆಗೆಸಿ ಲೀಡ್ ಮಾಡುವುದು ಅಂದರೆ ಹೀಗೇ

ಜಗತ್ತಿನ ದೈತ್ಯ ಪ್ರತಿಭೆಗಳು ನಿವೃತ್ತಿಯಾಗುವ ಸಮಯ ಬಂದಾಗ ತನ್ನ ಪರಂಪರೆಯನ್ನು ಮುಂದಕ್ಕೆ ತೆಗೆದುಕೊಂಡು ಹೋಗುವ ಇನ್ನೊಬ್ಬ ಸಮರ್ಥ ಆಟಗಾರನ ಕೈಗೆ ಬ್ಯಾಟನ್ ಕೊಟ್ಟು ಖುಷಿಯಿಂದ ನಿರ್ಗಮಿಸುತ್ತಾರೆ ಎಂಬುವುದು! ಪ್ರತಿಭೆಗಳನ್ನು ಹೋಲಿಕೆ ಮಾಡಬಾರದು ಎಂದು ನಾನು ನಂಬಿದ್ದೇನೆ. ಆದರೆ ಈ ಬ್ಯಾಟನ್ ವರ್ಗಾವಣೆಯ ಕೆಲಸ ಶತಮಾನಗಳಿಂದ ನಡೆದುಕೊಂಡು ಬಂದಿದೆ. ಇನ್ನೂ ಅದು ಮುಂದುವರೆಯುತ್ತದೆ. ತನ್ನ ಲೆಗೆಸಿಯನ್ನು ಸಮರ್ಥವಾಗಿ ನಿಭಾಯಿಸುವ ಹೆಗಲು ದೊರೆಯುವತನಕ ಈ ಶೋಧವು ನಿಲ್ಲುವುದಿಲ್ಲ. ಇಲ್ಲಿ ಮಾತ್ಸರ್ಯ ಅಥವಾ ಹೊಟ್ಟೆಕಿಚ್ಚು ಬರುವುದೇ ಇಲ್ಲ. ಲೆಗೆಸಿ ಲೀಡ್ ಮಾಡುವವರು ಎಷ್ಟೋ ಬಾರಿ ಅವರ ಸ್ವಂತ ಮಕ್ಕಳು ಆಗಿರಬಹುದು ಅಥವಾ ಬೇರೆ ಯಾರಾದ್ರೂ ಆಗಬಹುದು. ಆದರೆ ಈ ಒಂದು ವಿದ್ಯಮಾನ ಇಂದಿಗೂ ಅದ್ಭುತವಾಗಿಯೇ ನಡೆಯುತ್ತಿದೆ.

ಲೆಗೆಸಿ ವರ್ಗಾವಣೆಯ ಕೆಲವು ಅದ್ಭುತ ನಿದರ್ಶನಗಳು

೧) ಸಚಿನ್ ತೆಂಡೂಲ್ಕರ್ ತನ್ನ ಸಾಧನೆಯ ಶಿಖರದಲ್ಲಿ ಇರುವಾಗಲೇ ಒಂದು ಖಾಸಗಿ ಕಾರ್ಯಕ್ರಮದಲ್ಲಿ ‘ನಿಮ್ಮ ಮುಂದಿನ ದಾಖಲೆಗಳನ್ನು ಯಾರು ಮುರಿಯಬಹುದು?’ ಎಂದು ಕೇಳಿದಾಗ ವಿರಾಟ್ ಕೊಹ್ಲಿ ಹೆಸರು ಹೇಳಿದ್ದ. ಅಚ್ಚರಿಯ ಸಂಗತಿ ಎಂದರೆ ವಿರಾಟ್ ಕೊಹ್ಲಿಯು ಸಚಿನನ್ನು ತನ್ನ ಸ್ಫೂರ್ತಿಯಾಗಿ ತೆಗೆದುಕೊಂಡಿದ್ದಾನೆ ಮತ್ತು ಸಚಿನ್ ತೆಂಡೂಲ್ಕರ್ ಅವರ ಅರ್ಧಾಂಶ ದಾಖಲೆಗಳನ್ನು ಮುರಿದು ಮುಂದುವರೆಯುತ್ತಿದ್ದಾನೆ. ಕೊಲ್ಕತ್ತಾ ಏಕದಿನದ ಪಂದ್ಯದಲ್ಲಿ ಸಚಿನ್ ಶತಕಗಳ ದಾಖಲೆಯನ್ನು ವಿರಾಟ್ ಮುರಿದಾಗ ಆತ ಸ್ಟಾಂಡಿನಲ್ಲಿ ಇದ್ದ ಸಚಿನಗೆ ತಲೆಬಾಗಿ ನಮಿಸಿದ್ದನ್ನು ಮತ್ತು ಸಚಿನ್ ಕಣ್ಣಲ್ಲಿ ಆಗ ಅದ್ಭುತ ಗ್ಲೋ ಕಂಡದ್ದನ್ನು ನೀವು ಗಮನಿಸಿರಬಹುದು.

೨) ಲತಾ ಮಂಗೇಶ್ಕರ್ ಬದುಕಿದ್ದಾಗಲೇ ತನ್ನ ಉತ್ತರಾಧಿಕಾರಿ ಶ್ರೇಯಾ ಘೋಷಾಲ್ ಎಂದು ಘೋಷಣೆ ಮಾಡಿ ಆಗಿತ್ತು! ಈಗ ಶ್ರೇಯಾ ಬೆಳೆಯುತ್ತಿರುವ ರೀತಿಯನ್ನು ನೋಡಿದಾಗ ಅದು ನಿಜ ಅನ್ನಿಸುತ್ತಾ ಇದೆ! ಶ್ರೇಯಾ ಕೂಡ ಲತಾ ಅವರನ್ನು ಅನುಕರಣೆ ಮಾಡದೆ ತನ್ನದೇ ಶೈಲಿಯಲ್ಲಿ ಹಾಡುತ್ತಿದ್ದಾರೆ. ಲತಾ ಹಾಡಿದ ನೂರಾರು ಹಳೆಯ ಹಾಡುಗಳು ಈಗ ಶ್ರೇಯಾ ಘೋಷಾಲ್ ಕಂಠದಲ್ಲಿ ಪುನರ್ಜನ್ಮ ಪಡೆಯುತ್ತಿವೆ ಅನ್ನುವಾಗ ನಿಜಕ್ಕೂ ರೋಮಾಂಚನ ಆಗ್ತಾ ಇದೆ.

ಹಾಗೆಯೇ ಸೈಗಲ್, ತಲಾತ್ ಮೊಹಮ್ಮದ್, ಮಹೇಂದ್ರ ಸಿಂಗ್ ಮೊಹಮ್ಮದ್ ರಫಿ, ಕಿಶೋರ್ ಕುಮಾರ್, ಕುಮಾರ್ ಸಾನು, ಸೋನು ನಿಗಮ್, ಅರ್ಜಿತ್ ಸಿಂಗ್ ಅವರ ಮೂಲಕ ಬ್ಯಾಟನ್ ವರ್ಗಾವಣೆ ಆಗ್ತಾ ಮುಂದುವರೆದಿರುವುದನ್ನು ನಾವು ಗಮನಿಸಬಹುದು.

೩) ಜೆಮ್ಶೆಡಜಿ ಟಾಟಾ ಅವರು ಆರಂಭಮಾಡಿದ ಲೆಗೆಸಿಯನ್ನು ಅವರ ನಂತರ ಜೆ ಆರ್ ಡಿ ಟಾಟಾ ಅವರು ಅದ್ಭುತವಾಗಿಯೇ ಮುನ್ನಡೆಸಿದರು. ಮುಂದೆ ಬಂದ ರತನ್ ಟಾಟಾ ಅದನ್ನು ಭಾರೀ ಎತ್ತರಕ್ಕೆ ತೆಗೆದುಕೊಂಡು ಹೋದರು.

೪) ರಾಷ್ಟ್ರಕವಿ ಕುವೆಂಪು ಅವರ ಲೆಗೆಸಿಯನ್ನು ಮುಂದೆ ಅವರ ಮಗ ಪೂರ್ಣಚಂದ್ರ ತೇಜಸ್ವಿ ಅವರು ತಮ್ಮದೇ ರೀತಿಯಲ್ಲಿ ಮುಂದಕ್ಕೆ ತೆಗೆದುಕೊಂಡು ಹೋದರು. ಅವರು ಎಲ್ಲಿಯೂ ಅಪ್ಪನ ಪ್ರತಿಭೆಯ ನೆರಳು ಆಗಲಿಲ್ಲ ಅಥವಾ ಅನುಕರಣೆ ಮಾಡಲಿಲ್ಲ.

೫) ಕನ್ನಡ ಸಿನೆಮಾರಂಗದಲ್ಲಿ ವರನಟ ರಾಜಕುಮಾರ್ ಅವರು ಉಂಟುಮಾಡಿದ ಲೆಗೆಸಿಯನ್ನು ಮುಂದೆ ಅವರ ಮಕ್ಕಳು ಮುಂದಕ್ಕೆ ತೆಗೆದುಕೊಂಡು ಹೋದರು. ಅವರ್ಯಾರೂ ತಾವು ಅಪ್ಪನ ಉತ್ತರಾಧಿಕಾರಿ ಎಂದು ಹೇಳಿಕೊಳ್ಳಲಿಲ್ಲ ಅಥವಾ ಅಪ್ಪನ ಅನುಕರಣೆ ಮಾಡಲಿಲ್ಲ. ಅವರ ಮೂವರು ಮಕ್ಕಳೂ ತಮ್ಮ ವಿಭಿನ್ನ ದಾರಿ ಹಿಡಿದರು.

೬) ಇಂಗ್ಲೀಷ್ ಸಾಹಿತ್ಯದಲ್ಲಿ ಆರ್ ಕೆ ನಾರಾಯಣ್ ಅವರು ಆರಂಭ ಮಾಡಿದ ಲೆಗೆಸಿಯನ್ನು ಅಷ್ಟೇ ಉತ್ತಮವಾಗಿ ಚೇತನ್ ಭಗತ್ ಮುಂದೆ ತೆಗೆದುಕೊಂಡು ಹೋಗುತ್ತಿದ್ದಾರೆ. ಅವರಿಬ್ಬರ ಬರವಣಿಗೆಯ ಶೈಲಿಗಳು ಬೇರೆ. ಆರಿಸಿಕೊಳ್ಳುವ ಕಥಾವಸ್ತು ಬೇರೆ. ಆದರೆ ಒಬ್ಬ ಭಾರತೀಯ ಆಂಗ್ಲ ಲೇಖಕರು ಆರಂಭ ಮಾಡಿದ ಪರಂಪರೆಯನ್ನು ಅಷ್ಟೇ ಚೆನ್ನಾಗಿ ಇನ್ನೊಬ್ಬ ಲೇಖಕರು ತೆಗೆದುಕೊಂಡು ಹೋಗುತ್ತಿರುವುದು ಅದ್ಭುತವೇ ಹೌದು!

೭) ಭಾರತ ಬೆಳೆದುಬಂದಿರುವುದು ಗುರು ಶಿಷ್ಯ ಪರಂಪರೆಯಿಂದ. ಗುರು ರಾಮಕೃಷ್ಣ ಪರಮಹಂಸರು ಆರಂಭಿಸಿದ ಆಧ್ಯಾತ್ಮದ ಕೆಲಸಗಳನ್ನು ವಿವೇಕಾನಂದರ ಬಲಿಷ್ಠ ಹೆಗಲ ಮೇಲೆ ಇಟ್ಟು ನಿರ್ಗಮಿಸಿದರು. ವಿವೇಕಾನಂದರು ಅದೇ ಬೆಳಕನ್ನು ಜಗತ್ತಿನ ಮೂಲೆ ಮೂಲೆಗೂ ತೆಗೆದುಕೊಂಡು ಹೋದರು. ಆಧ್ಯಾತ್ಮಿಕ ಸಾಧನೆಯಲ್ಲಿ ತಮ್ಮ ಗುರುವನ್ನು ಮೀರಿಸಿದರು. ಭಾರತದ ಋಷಿ ಪರಂಪರೆಯನ್ನು ಅಧ್ಯಯನ ಮಾಡಿದಾಗ ನಮಗೆ ಇಂತಹ ಉದಾಹರಣೆಗಳು ತುಂಬಾ ದೊರೆಯುತ್ತವೆ.

ಭರತವಾಕ್ಯ

ಯಾವುದೇ ಸಾಧನಾಕ್ಷೇತ್ರದ ದೈತ್ಯ ಸಾಧಕರಿಗೆ ತಮ್ಮ ಅಸ್ಮಿತೆಯು ತಮ್ಮ ಜೊತೆಗೆ ಮುಗಿದು ಹೋಗಬಾರದು ಎಂಬ ಕಾಳಜಿ ಇದ್ದ ಹಾಗೆ ಅನ್ನಿಸುತ್ತದೆ. ಚೆಸ್ ಗ್ರಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ಅವರು ಚೆನ್ನೈಯಲ್ಲಿ ಚೆಸ್ ಆಕಾಡೆಮಿ ತೆರೆದು, ತರಬೇತಿ ನೀಡಿ ಹತ್ತಾರು ಯಂಗ್ ಗ್ರಾಂಡ್ ಮಾಸ್ಟರಗಳನ್ನು ಯಾಕೆ ಪ್ರೊಡ್ಯೂಸ್ ಮಾಡಿದರು ಎಂದು ನಮಗೆ ಅರ್ಥವಾದರೆ ಈ ಲೆಗೆಸಿ ಲೀಡ್ ಮಾಡುವುದು ಅರ್ಥ ಆಗುತ್ತದೆ. ಹಾಗೆಯೇ ಅಮಿತಾಭ್ ಬಚ್ಚನ್ 83ರ ಹರೆಯದಲ್ಲಿ ಇನ್ನೂ ಯಾಕೆ ನಿವೃತ್ತಿ ಪಡೆದಿಲ್ಲ ಎಂದು ಕೂಡ ನಮಗೆ ಅರ್ಥವಾಗುತ್ತದೆ!

ಇದನ್ನೂ ಓದಿ: ರಾಜೇಂದ್ರ ಭಟ್‌ ಅಂಕಣ: ಕೃತಕ ಬುದ್ಧಿಮತ್ತೆ (AI) – ನೈತಿಕತೆ, ಅನೈತಿಕತೆಗಳ ನಡುವೆ